ಬಂಡಾಯದ ಬಿಸಿಯ ಈಜಿಪ್ತ್ನಲ್ಲೀಗ ಸಿಸಿ ಎಂಬ ನಾಯಕನ ಕನವರಿಕೆ

ಕೈರೋದ ರಾಷ್ಟ್ರೀಯ ವಸ್ತು ಸಂಗ್ರಹಾಲಯವು ಕಲಾ ಕುಸುರಿಗಳ ಕಣಜವೇ ಆಗಿದೆ. ಅವುಗಳಲ್ಲಿ ಹೆಚ್ಚಿನವನ್ನು ಪುರಾತನ ಈಜಿಪ್ತ್ನ ಪಿರಿಮಿಡ್ಗಳ ಒಳಗಿನ ಗೋರಿಗಳಿಂದ ಸಂಗ್ರಹಿಸಿರುವಂಥದ್ದು. ಈಜಿಪ್ತ್ನ ಪ್ರಸಿದ್ಧ ತಹ್ರೀರ್ ಚೌಕವನ್ನು ದಿಟ್ಟಿಸುತ್ತ ನಿಂತಿದೆ ಈ ಮ್ಯೂಸಿಯಂ. ಹೀಗಾಗಿ ಇದು 2011-2013ರ ಅವಧಿಗೆ ನಡೆದ ಆಧುನಿಕ ದಿನಗಳ ಪವಾಡಕ್ಕೂ ಸಾಕ್ಷಿಯಾಗಿದೆ. ಜಾಗತಿಕ ಇತಿಹಾಸದ ಬಹುದೊಡ್ಡ ಪ್ರತಿಭಟನೆ ಎಂದು ಗುರುತಿಸಬಹುದಾದ ಬಂಡಾಯದಲ್ಲಿ ಈಜಿಪ್ತಿಯನ್ನರು ಜನಪ್ರಿಯತೆ ಕಳೆದುಕೊಂಡಿದ್ದ ಎರಡು ಅಧಿಕಾರ ವ್ಯವಸ್ಥೆಗಳನ್ನು ಈ ಅವಧಿಯಲ್ಲಿ ಬದಲಿಸಿದ್ದಾರೆ.
ಪ್ರತಿಭಟನೆ ಅವಧಿಯಲ್ಲಿ ಬಂಡಾಯಗಾರರ ಮೆಚ್ಚಿನ ಘೋಷ 'ಅನಾ- ಐ- ಶಾಬ್' ಎಂದಾಗಿತ್ತು. ಅಂದರೆ ನಾನೇ ಜನಶಕ್ತಿ ಎಂಬರ್ಥದಲ್ಲಿ. 1952ರಲ್ಲಿ ರಾಜಪ್ರಭುತ್ವ ವಿರೋಧಿ ಆಂದೋಲನವು ನಡೆದಾಗ ಈಜಿಪ್ತ್ನ ಪ್ರಖ್ಯಾತ ಹಾಡುಗಾರ ಉಮ್ ಕುಲ್ಥುಮ್ ಹಾಡಿದ್ದ ಸಾಲುಗಳವು. 'ಪ್ರತಿ ಸ್ತ್ರೀ-ಪುರುಷನೂ ತಮ್ಮ ಧ್ವನಿಗಳನ್ನು ಮುಕ್ತವಾಗಿ ಹೊರಚೆಲ್ಲುವಂತಾಗಲಿ. ದೃಢವಾಗಿ, ಉತ್ಕಂಟಿತರಾಗಿ, ಆಳವಾಗಿ ಹೇಳಬೇಕಾಗಿದೆ: ನಾನೇ ಜನ ಹಾಗೂ ಪವಾಡ.'
ವ್ಯಂಗ್ಯವೇನೆಂದರೆ ಪ್ರಜಾಪ್ರಭುತ್ವದ ದೀವಿಗೆ ಹಿಡಿದಿದ್ದವರಲ್ಲಿ ಹೆಚ್ಚಿನವರೀಗ ಸೇನೆಯ ಬಲಿಷ್ಠ ವ್ಯಕ್ತಿ ಫೀಲ್ಡ್ಮಾರ್ಷಲ್ ಅಬ್ದುಲ್ಫತಾಹ್ ಎಲ್-ಸಿಸಿಯೇ ಈಜಿಪ್ತನ್ನು ಆಳಲಿ ಎಂದು ಬಯಸುತ್ತಿದ್ದಾರೆ. ಆಧುನಿಕ ಈಜಿಪ್ತ್ನ ಇತಿಹಾಸದಲ್ಲಿ ಗಮಾಲ್ ಅಬ್ದುಲ್ ನಾಸೇರ್ ಹಾಗೂ ಅನ್ವರ್ ಸಾದತ್ ನಂತರದ ಅತಿ ಜನಪ್ರಿಯ ನಾಯಕನಾಗಿಯೂ ಸಿಸಿ ಹೊರಹೊಮ್ಮಿರುವುದು ವಿಚಿತ್ರವಾಗಿಯೇ ತೋರುತ್ತಿದೆ.
ಮೂರು ವರ್ಷಗಳ ಹಿಂದೆ ಪ್ರತಿಭಟನೆಯ ಕೇಂದ್ರಸ್ಥಳವಾಗಿ ಇಡೀ ಜಗತ್ತಿನ ಗಮನವನ್ನೇ ತನ್ನತ್ತ ಸೆಳೆದುಕೊಂಡ ತಹ್ರೀರ್ ಚೌಕವು ತೀರ ಕಣ್ಣಿಗೆ ರಾಚುವಂಥದ್ದೇನೂ ಅಲ್ಲ. ಬೀಜಿಂಗ್ನ ಇತಿಹಾಸ ಪ್ರಸಿದ್ಧ ತಿನಾಮನ್ ಚೌಕಕ್ಕಿರುವ ವಿಸ್ತಾರವಾಗಲೀ ಹೊಸದೆಹಲಿಯ ಇಂಡಿಯಾ ಗೇಟ್ಗಿರುವ ವಾಸ್ತುಶಿಲ್ಪದ ಚಮಕ್ ಆಗಲೀ ಇದಕ್ಕಿಲ್ಲ. ಕೈರೋದ ಸಂಚಾರ ಸಾಗರದ ನಡುವೆ ಪ್ರವಾಸಿಗರು ಇದನ್ನು ಗ್ರಹಿಸದೇ ಮುನ್ನಡೆಯುವ ಸಾಧ್ಯತೆಯೇ ಹೆಚ್ಚು. ಜನವರಿ 2011ರ ವೇಳೆಗೆ ಈ ಚೌಕವನ್ನು ಸೇರುವ ಎಲ್ಲ ರಸ್ತೆಗಳೂ ಆಡಳಿತ ವಿರೋಧಿ ಪ್ರತಿಭಟನಕಾರರನ್ನು ತುಂಬಿಕೊಂಡಿದ್ದವು. ಹೋಸ್ನಿ ಮುಬಾರಕ್ನ ಮೂವತ್ತು ವರ್ಷಗಳ ಸರ್ವಾಧಿಕಾರಿ ಆಡಳಿತದ ವಿರುದ್ಧ ಅವರೆಲ್ಲ ಸಿಡಿದೆದ್ದಿದ್ದರು. ಈಜಿಪ್ತ್ನಲ್ಲಿ ಹುಟ್ಟಿದ್ದ ಪ್ರಜಾಪ್ರಭುತ್ವದ ಭರವಸೆ ಜಗತ್ತಿಗೆಲ್ಲ ಸಂಭ್ರಮವನ್ನು ಚಿಮ್ಮಿಸಿತ್ತು. ಆದರೆ ಈಜಿಪ್ತ್ಗೆ ಒಲಿದ ಪ್ರಜಾಪ್ರಭುತ್ವವು ಅಧಿಕಾರ ನೀಡಿದ್ದು ಮುಸ್ಲಿಂ ಬ್ರದರ್ಹುಡ್ಗೆ. ಮೊಹಮದ್ ಮೋರ್ಸಿ ಈಜಿಪ್ತ್ನ ಮೊದಲ ಚುನಾಯಿತ ಅಧ್ಯಕ್ಷನಾದ ಬೆನ್ನಿಗೇ ತಹ್ರೀರ್ ಚೌಕವು ಮತ್ತೆ ಪ್ರತಿಭಟನೆಯ ಕೇಂದ್ರಸ್ಥಾನವಾಯಿತು. ಈ ಬಾರಿ ಅಲ್ಲಿನ ಸೇನೆ ಬಹಿರಂಗವಾಗಿಯೇ ಪ್ರತಿಭಟನಕಾರರಿಗೆ ಬೆಂಬಲ ನೀಡಿತು. ಜುಲೈ 2013ರಲ್ಲಿ ಮೋರ್ಸಿಯನ್ನು ಜೈಲಿಗೆ ಹಾಕುವಷ್ಟರಲ್ಲಿ ಸುಮಾರು ಸಾವಿರ ಮಂದಿ ಹಿಂಸಾತ್ಮಕ ಬದಲಾವಣೆಗೆ ಬಲಿಯಾಗಿದ್ದರು. ಮುಸ್ಲಿಂ ಬ್ರದರ್ಹುಡ್ ಅನ್ನು ಕಾಯ್ದೆಬಾಹಿರ ಎಂದು ಘೋಷಿಸಿರುವುದಲ್ಲದೇ ಇತಿಹಾಸದಲ್ಲೇ ಮೊದಲ ಬಾರಿಗೆ ಅದನ್ನು ಭಯೋತ್ಪಾದಕ ಸಂಘಟನೆ ಪಟ್ಟಿಗೆ ಸೇರಿಸಲಾಗಿದೆ.
ಇದೀಗ ಈಜಿಪ್ತ್ ಮತ್ತದೇ ಚೌಕಕ್ಕೆ ಬಂದು ನಿಂತಿದೆಯೇ ಎಂಬ ಪ್ರಶ್ನೆಗೆ ಸರಳ ಉತ್ತರವನ್ನು ಕೊಡಲಾಗುವುದಿಲ್ಲ. ಏಕೆಂದರೆ ಇಲ್ಲಿ ವಿರೋಧಾಭಾಸಗಳು ಹಲವು. ರಾಜಕೀಯ ಅಸ್ಥಿರತೆ, ಹಡಾಲೆದ್ದು ಹೋಗಿರುವ ಅರ್ಥವ್ಯವಸ್ಥೆ, ಮತ್ತೆ ಮುಸ್ಲಿಂ ಬ್ರದರ್ಹುಡ್ ಅಧಿಕಾರಕ್ಕೆ ಬಂದರೆ ಸಿರಿಯಾದಲ್ಲಾದಂಥ ಸಾಮಾಜಿಕ ಕ್ಷೋಭೆ ಉಂಟಾಗಬಹುದೆಂಬ ಹೆದರಿಕೆ ಇವೆಲ್ಲದರಿಂದಾಗಿ ದೇಶವನ್ನು ಮುನ್ನಡೆಸುವುದಕ್ಕೆ ಒಬ್ಬ ಬಲಿಷ್ಠ ವ್ಯಕ್ತಿಯೇ ಇರಲಿ ಎಂಬ ತೀರ್ಮಾನಕ್ಕೆ ಅಲ್ಲಿನ ಜನ ಬಂದಿದ್ದಾರೆ. ಈಗಿನ ರಕ್ಷಣಾ ಸಚಿವ ಹಾಗೂ ಸೇನೆ ಮುಖ್ಯಸ್ಥ ಸಿಸಿ ಮೋಲೆಯೇ ತಮ್ಮ ವಿಶ್ವಾಸದ ಇಡುಗಂಟು ಇರಿಸಿದ್ದಾರೆ. ಸಿಸಿಗೆ ಈ ಬಗೆಯ ವರ್ಚಸ್ಸು ಒಲಿಯುವುದಕ್ಕೆ ಮೋರ್ಸಿ ವಿರುದ್ಧ ಆತ ಇಟ್ಟ ದೃಢ ಹೆಜ್ಜೆಯೇ ಕಾರಣ. ಈಜಿಪ್ತನ್ನು ಈಗ ಹೆಚ್ಚು- ಕಡಿಮೆ ಸಿಸಿ ಮೇನಿಯಾ ಆವರಿಸಿಬಿಟ್ಟಿದೆ. ನಾನೊಂದು ಯುವತಿಯನ್ನು ಈಜಿಪ್ತ್ನಲ್ಲಿ ಭೇಟಿಯಾದೆ. ಆಕೆ ತನ್ನ ಫೇಸ್ಬುಕ್ ಪ್ರೊಫೈಲ್ ಚಿತ್ರದ ಜಾಗದಲ್ಲಿ ಮಿಲಿಟರಿ ಸಮವಸ್ತ್ರದಲ್ಲಿರುವ ಸಿಸಿ ಚಿತ್ರವನ್ನೇ ಹಾಕಿಕೊಂಡಿದ್ದಾಳೆ. ಸಿಸಿ ಚಿತ್ರವಿರುವ ಟಿ ಶರ್ಟ್ಗಳು ಬೀದಿಗಳಲ್ಲಿ ಬಹುವಾಗಿ ಬಿಕರಿಯಾಗುತ್ತಿವೆ.
ಸಿಸಿ ಪರವಾದ ಈ ಅಲೆ ಮಿಲಿಟರಿ ವ್ಯವಸ್ಥೆಯು ಕೃತಕವಾಗಿ ಹುಟ್ಟುಹಾಕಿರುವಂಥದ್ದೇ ಎಂದು ಈಜಿಪ್ತ್ನ ಕೆಲ ಗೆಳೆಯರನ್ನು ಕೇಳಿದೆ. ಅವರ್ಯಾರೂ ಮಿಲಿಟರಿ ಆಡಳಿತದ ಪ್ರೋತ್ಸಾಹಕರಲ್ಲ. ತಹ್ರೀರ್ ಚೌಕದಲ್ಲಿ ವ್ಯಕ್ತಗೊಂಡಿದ್ದ ಪ್ರಜಾಪ್ರಭುತ್ವದ ತತ್ವಕ್ಕೆ ಬದ್ಧರಾಗಿರುವ ಇವರು, ಜೈಲಿನಲ್ಲಿರುವ ಮುಸ್ಲಿಂ ಬ್ರದರ್ಹುಡ್ ಸದಸ್ಯರನ್ನು ಹಿಂಸೆಗೆ ಒಳಪಡಿಸುವುದು ತಪ್ಪು ಎಂದು ಖಾಸಗಿಯಾಗಿ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಆದರೆ ಅವರೆಲ್ಲ ಖಡಾಖಡಿಯಾಗಿ ಹೇಳುವ ಒಂದು ಮಾತೆಂದರೆ, 'ಸಿಸಿ ಪರವಾದ ಅಲೆ ಮಿಲಿಟರಿ ಪ್ರೇರಿತವಲ್ಲ' ಎಂದೇ. ಹಾಗೆ ನೋಡಿದರೆ ಮೋರ್ಸಿ ಜನಪ್ರಿಯ ಬೆಂಬಲದ ಚುನಾಯಿತ ಅಧ್ಯಕ್ಷನಾಗಿದ್ದ. ಆದರೆ ತನ್ನ ಪ್ರಜಾಪ್ರಭುತ್ವ ವಿರೋಧಿ, ವಿಶ್ವಾಸಾರ್ಹವಲ್ಲದ ಆಡಳಿತದಿಂದಾಗಿ ಅತಿಕ್ಷಿಪ್ರವಾಗಿ ತನ್ನನ್ನು ಬೆಂಬಲಿಸಿದ ಜನಸಮೂಹವನ್ನೇ ಎದುರುಹಾಕಿಕೊಂಡ.
ಮುಸ್ಲಿಮರೇ ಬಹುಸಂಖ್ಯಾತರಾಗಿರುವ ಈಜಿಪ್ತ್ನಲ್ಲಿ ಮುಸ್ಲಿಂ ಬ್ರದರ್ಹುಡ್ ಪಕ್ಷಕ್ಕೆ ಅದೇಕೆ ವಿರೋಧ ವ್ಯಕ್ತವಾಯಿತು ಎಂದು ನಾನು ಪ್ರೊ. ಮಹಮೂದ್ ಆಜಾದ್ ಅವರನ್ನು ಕೇಳಿದೆ. ಅಲ್- ಅಜರ್ ಎಂಬ ಸಾವಿರ ವರ್ಷಗಳ ಪರಂಪರೆಯ ಇಸ್ಲಾಮಿಕ್ ಅಧ್ಯಯನ ಸಂಸ್ಥೆಯ ಸಲಹೆಗಾರರು ಅವರು. ಅವರು ಹೇಳಿದರು- 'ಈಜಿಪ್ತ್ನ ಮುಸ್ಲಿಮರು ಮಧ್ಯಮ ಇಸ್ಲಾಂ ಅನ್ನು ಇಷ್ಟಪಡುತ್ತಾರೆ. ಕ್ರೈಸ್ತರೊಂದಿಗೆ ಶಾಂತಿಯುತ ಬಾಳ್ವೆ ಅವರ ಆದ್ಯತೆ. ಇಸ್ಲಾಂ ಪೂರ್ವದ ತಮ್ಮ ಪರಂಪರೆ ಬಗ್ಗೆಯೂ ಹೆಮ್ಮೆ ಇಟ್ಟುಕೊಂಡವರು ಅವರು. ಆದರೆ ತೀವ್ರವಾದ ಇಸ್ಲಾಂ ತತ್ವಗಳನ್ನು ಹೇರುವುದಕ್ಕೆ ಹೊರಟ ಮುಸ್ಲಿಂ ಬ್ರದರ್ಹುಡ್ ಇವನ್ನೆಲ್ಲ ಒಪ್ಪಿಕೊಳ್ಳುತ್ತಿರಲಿಲ್ಲ. 2011ರ ಕ್ರಾಂತಿಯ ಲಾಭವನ್ನು ಪಡೆದು ಅದುಹೇಗೋ ಅಧಿಕಾರಕ್ಕೆ ಬಂದಿತಾದರೂ ಮುಸ್ಲಿಮೇತರರನ್ನು ಕಾಫಿರರೆಂದು ಪರಿಗಣಿಸಿತು. ಇವರು ತಮ್ಮ ಹಿತಾಸಕ್ತಿಗೆ ಇಸ್ಲಾಂ ಧರ್ಮವನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ಗೊತ್ತಾಗಿದ್ದೇ 3 ಕೋಟಿಯಷ್ಟು ಬೃಹತ್ ಜನಸಮೂಹವು ಮೋರ್ಸಿ ವಿರುದ್ಧ ಪ್ರತಿಭಟನೆ ನಡೆಸಿ ಸರ್ಕಾರವನ್ನು ಕೆಡವಿತು.'
ಇಸ್ಲಾಂ ಬ್ರದರ್ಹುಡ್ ಅನ್ನು ಪದಚ್ಯುತಗೊಳಿಸುವಲ್ಲಿ ಈಜಿಪ್ತ್ನ ಮಹಿಳೆಯರ ಪಾತ್ರ ದೊಡ್ಡದು ಎಂಬುದು ಜಗತ್ತಿನ ಮುಸ್ಲಿಂ ಸಮುದಾಯಕ್ಕೆಲ್ಲ ಪ್ರೇರಕ ಪಾಠವಾಗಬಹುದು. 'ಈಜಿಪ್ತ್ನ ಮಹಿಳೆಯರು ಧಾರ್ಮಿಕ ಮನೋಭಾವದವರು. ಆದರೆ ಸಾರ್ವಜನಿಕ ಜೀವನದಲ್ಲಿ ಅವರ ಪ್ರಾಮುಖ್ಯವನ್ನು ಇಸ್ಲಾಂ ಹೆಸರಲ್ಲಿ ಮುಸ್ಲಿಂ ಬ್ರದರ್ಹುಡ್ ತಗ್ಗಿಸುತ್ತಿದೆ ಎಂದು ತಿಳಿಯುತ್ತಲೇ ಅವರು ಪ್ರತಿಭಟನೆಗೆ ಇಳಿದರು' ಎಂದು ಅಲ್- ಅಶ್ರಮ್ ಪತ್ರಿಕೆ ಸಹ ಸಂಪಾದಕರಾದ ಸುಜಿ ಎಲ್-ಗೆನೈಡಿ ವಿಶ್ಲೇಷಿಸುತ್ತಾರೆ. ಆಸಕ್ತಿಕರ ಸಂಗತಿ ಎಂದರೆ ಇದೀಗ ಈಜಿಪ್ತ್ನ ಮಹಿಳೆಯರು ಸಿಸಿಯ ಕಟ್ಟರ್ ಬೆಂಬಲಿಗರಾಗುತ್ತಿದ್ದಾರೆ!
ಮುಸ್ಲಿಮರು ಕ್ರೈಸ್ತರ ನಡುವೆ ಹಾಗೂ ಮುಸ್ಲಿಮರು-ಮುಸ್ಲಿಮರ ಮಧ್ಯೆ ವಿಭಜನೆ ಹುಟ್ಟುಹಾಕಿದ್ದ ಮುಸ್ಲಿಂ ಬ್ರದರ್ಹುಡ್ಗೆ ಪರ್ಯಾಯವಾಗಿ ಈಜಿಪ್ತ್ನಲ್ಲಿ ಸಿಸಿ ಏಕೀಕೃತ ಶಕ್ತಿಯಾಗುತ್ತಿದ್ದಾರೆ ಎಂಬುದೇ ಅವರಿಗೆ ವ್ಯಾಪಕ ಬೆಂಬಲ ಒದಗುತ್ತಿರುವುದಕ್ಕೆ ಕಾರಣ. ಏಪ್ರಿಲ್ನಲ್ಲಿ ನಡೆಯಲಿರುವ ಈಜಿಪ್ತ್ನ ಅಧ್ಯಕ್ಷೀಯ ಚುನಾವಣೆಯಲ್ಲಿ ಸಿಸಿ ಸ್ಪರ್ಧಿಸಿದರೆ ಅಭೂತಪೂರ್ವ ಜಯ ಗ್ಯಾರಂಟಿ. ಆದರೆ ಆರ್ಥಿಕ ಅಧಃಪತನದ ಹತಾಶೆಗೆ ಒಳಗಾಗಿರುವ ದೇಶವನ್ನು ಮುನ್ನಡೆಸುವುದೂ ಬಹುದೊಡ್ಡ ಸವಾಲು. ಅದರಲ್ಲೂ ಜನರನ್ನು ಹತ್ತಿಕ್ಕುವ ದುಸ್ಸಾಹಸದ ಬಗ್ಗೆ ಯೋಚಿಸುವಂತೆಯೇ ಇಲ್ಲ. ಈಜಿಪ್ತಿನ ಯುವ ಜನತೆ ಸ್ವಾತಂತ್ರ, ಗೌರವ ಹಾಗೂ ಹಕ್ಕುಗಳ ಉತ್ಕಟ ಅಭಿಲಾಷೆ ಹೊಂದಿದ್ದಾರೆ. ಇವನ್ನೆಲ್ಲ ನಿಭಾಯಿಸುವುದಕ್ಕೆ ಸಿಸಿ ಯಶಸ್ವಿಯಾದರೆ ಅದೊಂದು ಪವಾಡ. ಅವರು ವಿಫಲರಾದರೆ ತಹ್ರೀರ್ ಚೌಕದಲ್ಲಿ ಮತ್ತೆ ಗಲಾಟೆ ಶುರುವಾಗುತ್ತದೆ.
-ಸುಧೀಂದ್ರ ಕುಲಕರ್ಣಿ
mepratap@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


