ಅಂಕಣಗಳು

ಮಿಂಚಂಚೆಗೆ ಮನಸೋತು ಪತ್ರಗಳನ್ನು ಕಡೆಗಣಿಸಬೇಡಿ!

Published On :

ಜ.5ರ 'ಖುಷಿ' ಓದಿ ಬಹಳ ಖುಷಿಯಾಯ್ತು. ಕಾರಣ ಗಮನ ಸೆಳೆಯುವ ಉತ್ತಮ ಎನ್ನಬಹುದಾದ ಲೇಖನಗಳು. ಸಂಪಾದಕರು ಬರೆದಿರುವ "ಶೂಲದಿಂದಲೂ ಬಚಾವಾಗಬಹುದು" ಎಂಬ ಸಂಪಾದಕೀಯ. ಸಾಲ ತೀರಿ 50 ಸೂತ್ರಗಳ ಪೈಕಿ ಸುಲಭವಾಗಿ ಅಳವಡಿಸಿಕೊಳ್ಳಬಹುದಾದ ಕೆಲವು ಸೂತ್ರಗಳನ್ನಾದರೂ ಅಳವಡಿಸಿಕೊಂಡು ಮಿತವ್ಯಯಿಗಳಾದರೆ ಸಾಲ ಮಾಡುವ ಪ್ರಮೇಯ ಬರುವುದಿಲ್ಲ. ಒಂದು ವೇಳೆ ಸಾಲ ಮಾಡಿದರೂ, ಸುಲಭವಾಗಿ ಸಾಲ ತೀರಿಸಬಹುದು. ಈ ಲೇಖನ ಓದಿದಾಗ "ಸಾಲ ಕೇಳಿ ಸ್ನೇಹ ಕಳೆದುಕೊಳ್ಳಬೇಡಿ" ಎಂಬ ಹಿರಿಯರ ಮಾತು ನೆನಪಿಗೆ ಬಂತು. ಅದೇ ರೀತಿ ಕುಂ.ವೀರವರ ಪತ್ನಿ ಅನ್ನಪೂರ್ಣರವರ ತಮ್ಮ ಪತಿಯ ಜೊತೆಗಿನ ಜೀವನದ ಬಗ್ಗೆ ಬರೆದಿರುವ ಅಂತರಾಳದ ಮಾತುಗಳು ಓದುಗರ ಗಮನ ಸೆಳೆಯುತ್ತದೆ.
ಒಟ್ಟಿನಲ್ಲಿ ಖುಷಿಯನ್ನು ಓದಿ ತುಂಬಾ ಖುಷಿಯಾಯ್ತು.
- ಕೆ. ಪ್ರಾಣೇಶ್ ರಾವ್, 395, 42ನೇ ಕ್ರಾಸ್, ಜಯನಗರ, ಬೆಂಗಳೂರು.

ಡಿ. 31ರ 'ಬೈಟು ಕಾಫಿ' ಚೆನ್ನಾಗಿರಲಿಲ್ಲ. 2-3 ಪುಟಗಳೊಳಗಿರಬೇಕಾದ ಹಲವಾರು ಅಂಕಣಗಳನ್ನು ಬದಿಗೊತ್ತಿ ಈಗಿನ ಸಮಯದಲ್ಲಿ ಯಾರಿಗೂ ಬೇಡವಾದ ಕ್ಯಾಲೆಂಡರನ್ನು ಪ್ರಕಟಿಸಿರುವಿರಿ. ಅಂತೂ ಶುಭಾಶಯಗಳನ್ನು ಕೋರಿದ್ದಕ್ಕೆ ಧನ್ಯವಾದಗಳು.
- ಎ.ಕೆ. ಚಂದ್ರಶೇಖರ್ ಭಟ್, ಕೋರಮಂಗಲ ಗ್ರಾಮ ಭಾಗಮಂಡಲ-571247, ಕೊಡಗು.

ತಪ್ಪು ಮಾಡದವರೆಲ್ಲವ್ರೆ ತಪ್ಪು ಮಾಡದವರ್ಯಾರವ್ರೆ? ಇದೊಂದು ಚಿತ್ರ ಗೀತೆ ಸಾಲು. ಪತ್ರಿಕೆಗಳಲ್ಲಿ ಮಾತ್ರವಲ್ಲ-ನಿತ್ಯ ಎಲ್ಲರೂ ಒಂದಲ್ಲ, ಒಂದು ತಪ್ಪನ್ನು ಮಾಡಿಯೇ ಮಾಡುತ್ತಿರುತ್ತಾರೆ. ಪತ್ರಿಕೆಯಲ್ಲಿ ತಪ್ಪು ಮುದ್ರಣವಾಗಿ ಪತ್ರಿಕೆ ಹೊರಬಂದ ಮೇಲೆ ಯಾರೂ ಏನೂ ಮಾಡಲಾಗುವುದಿಲ್ಲ. ತಪ್ಪನ್ನು ತಮ್ಮ ಗಮನಕ್ಕೆ ತರಬಹುದು ಅಷ್ಟೇ. ಈ ತಪ್ಪುಗಳನ್ನು ಕಂಡು ಹಿಡಿದವರಿಗೆ ನೀವು ಬಹುಮಾನವನ್ನೂ ಕೊಡುವುದಿಲ್ಲ. ತಪ್ಪು ಕಂಡು ಹಿಡಿದುದಕ್ಕೆ ನೀವು ಶಹಬಾಸ್‌ಗಿರಿಯನ್ನೂ ಕೊಡುವುದಿಲ್ಲ. ಹೀಗಿರುವಾಗ ಕೆಲವು ಓದುಗರು ತರಾತುರಿಯಲ್ಲಿ ಏನೋ ಘನಂದಾರಿ ಕೆಲಸ ಮಾಡಿದ್ದೇವೆ ಎಂಬ ಭ್ರಮೆಯಲ್ಲಿ ಮಿಂಚಂಚೆ ಮೂಲಕ ತಕ್ಷಣ ನಿಮ್ಮ ಗಮನಕ್ಕೆ ತಂದು ಬಿಡುತ್ತಾರೆ. ತಾವು ಈ ಮಿಂಚಂಚೆ ಪ್ರಭೆಗೆ ಮರುಳಾಗಿ ಅದನ್ನು ಛಾಪಿಸಿ ಬಿಡುತ್ತೀರಿ. ಬೇರೆ ಓದುಗರು ಇದನ್ನು ಗಮನಿಸಿದ್ದು ಅಂಚೆಕಾರ್ಡ್ ಮೂಲಕ (ನನ್ನಂತಹವರು) ಕಳುಹಿಸುವುದು ನಿಮಗೆ ತಡವಾಗಿ ತಲುಪಿರುತ್ತದೆ. ಹೀಗಾಗಿ ನಮ್ಮ ಅಭಿಪ್ರಾಯ ಬರುವವರೆಗೂ ಕಾಯಿರಿ.
- ಸಿ. ದಿನಮಣಿರಾವ್, ನಂ.17, 13ನೇ ತಿರುವು, ನವಿಲುರಸ್ತೆ, ಕುವೆಂಪುನಗರ, ಮೈಸೂರು.

ಡಾ. ಸಿ.ಡಿ. ಪರಶುರಾಂರವರ 22.12.2013, ಭಾನುವಾರದ "ಸರ್ವಜ್ಞ ಮತ್ತು ವೇಮನನ ಸಾಹಿತ್ಯದಲ್ಲಿ ನೀತಿ" ಲೇಖನ ಉತ್ತಮವಾಗಿತ್ತು. ಮಾಧ್ಯಮಗಳು ಈ ರೀತಿಯ ಉತ್ತಮೋತ್ತಮ ವಿಷಯ ಮತ್ತು ವ್ಯ(ಶ)ಕ್ತಿಗಳ ವಿಚಾರಧಾರೆಯನ್ನು ಪ್ರಕಟಿಸುವುದು ಒಳ್ಳೆಯದು.
- ಚಿಕ್ಕಣ್ಣ. ಉಪನ್ಯಾಸಕ, ಕೊರಟಗೆರೆ

ದಿ. 7.01.2013ರಲ್ಲಿ ಪ್ರಕಟಗೊಂಡ ಶ್ರೀ ಸತ್ಯನಾರಾಯಣರ ವೈದ್ಯರ ಪತ್ರ ಸಂಪೂರ್ಣವಾಗಿ ಪೂರ್ವಗ್ರಹ ಪೀಡಿತದಿಂದ ಕೂಡಿದೆ. ಎಲ್ಲ ಕ್ಷೇತ್ರದಲ್ಲಿ ಒಳ್ಳೆಯವರು ಇರುವಂತೆ ಕೆಟ್ಟವರೂ ಇರುತ್ತಾರೆ. ಶ್ರೀ ಕೆ.ಎಸ್. ಸತ್ಯನಾರಾಯಣ ವೈದ್ಯರು, ಬರೀ ಬೆಂಗಳೂರಿನಲ್ಲಿರುವ ಸಿಟಿ ನ್ಯಾಯಾಲಯ ಮತ್ತು ಹೈಕೋರ್ಟ್‌ನಲ್ಲಿ ವಿವಿಧ ಹಂತದಲ್ಲಿರುವ ಮನೆಗಳ, ಅಂಗಡಿಗಳ ಮತ್ತು ವಾಣಿಜ್ಯ ಸಂಕೀರ್ಣಗಳ ವ್ಯಾಜ್ಯಗಳ ಬಗ್ಗೆ ಆಳವಾಗಿ ಅಭ್ಯಸಿಸಿ, ತದನಂತರ ಅವರ ಅನಿಸಿಕೆಗಳನ್ನು ಸರಿಯಾದ ಅಂಕಿ ಅಂಶಗಳ ಸಮೇತ, ಇದೇ ಪತ್ರಪ್ರಭ ವಿಭಾಗದಲ್ಲಿ ಪ್ರಕಟಿಸಲಿ.
- ಅಶ್ವತ್ಥ. ಎ., 76, ಸ್ಕಂದಕೃಪ,10ನೇ ಮೈನ್, ಜಯನಗರ 4ನೇ ಬ್ಲಾಕ್, ಬೆಂಗಳೂರು.

ದಿ. 05.01.2014 ಭಾನುವಾರದಂದು ಖುಷಿ ಸಾಪ್ತಾಹಿಕದಲ್ಲಿ ಪ್ರಕಟವಾದ  ನನ್ನದಲ್ಲದ್ದು ಎಂಬ ಅಂಕಣ ಹೆಣ್ಣಿನ ಜೀವನಕ್ಕೆ ಬಹಳ ಅರ್ಥಗರ್ಭಿತವಾಗಿತ್ತು. ಕಣ್ಣೀರು ತರಿಸಿತು. ಹೆಣ್ಣಿನ ಸ್ಥಾನ ಮತ್ತು ಅವಳ ಭಾವನೆಗಳನ್ನು ಓದುಗರ ಮುಂದೆ ತೆರೆದಿಟ್ಟಿದ್ದಕ್ಕಾಗಿ ಧನ್ಯವಾದಗಳು.
- ನಂದಿನಿ. ಎಸ್., ಅಂತಿಮ ಪತ್ರಿಕೋದ್ಯಮ, ಭಾರತೀನಗರ

ನಿರ್ದೇಶಕ ಫಣಿರಾಮಚಂದ್ರರವರ -'ಕೇಜ್ರಿ ಕ್ರೇಜಿಗೆ ಸ್ವಲ್ಪ ದಿನದ ಕಡಿವಾಣ ಅಗತ್ಯ' ಲೇಖನದಲ್ಲಿ (ಕ.ಪ್ರ. 3, ಜನವರಿ 2014) ವ್ಯಕ್ತವಾಗಿರುವ ಅಭಿಪ್ರಾಯಗಳು ವಾಸ್ತವಿಕತೆಗೆ ಹತ್ತಿರವಾಗಿವೆ. ಮೋದಿ ಮತ್ತು ಕೇಜ್ರಿವಾಲ್ ಇಬ್ಬರೂ ಭ್ರಷ್ಟಾಚಾರ ವಿರೋಧಿಗಳು. ಆದರೆ ಮೋದಿಗಿರುವ ರಾಜಕೀಯ ಆಡಳಿತ ಅನುಭವ ಸ್ಪಷ್ಟ ದೃಷ್ಟಿಕೋನ, ರಾಷ್ಟ್ರೀಯ ಪಕ್ಷವೊಂದರ ಬೆಂಬಲ ಕೇಜ್ರಿವಾಲರಿಗಿಲ್ಲ. ಹೀಗಾಗಿ 2014ರ ಮಹಾಚುನಾವಣೆಯಲ್ಲಿ ಮೋದಿಯವರನ್ನು ಬೆಂಬಲಿಸುವುದೇ ಸೂಕ್ತ.
- ಚಿರಪ್ರಭ, 3031, 20ನೇ ಕ್ರಾಸ್, ರಾಷ್ಟ್ರಪತಿ ರಸ್ತೆ,
ನಂಜನಗೂಡು, ಮೊ. 99160 21365

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.