ದೇವಯಾನಿ ಪ್ರಕರಣ, ಬೂಟಾಟಿಕೆಯ ಪ್ರಹಸನ

ಭಾರತೀಯ ವಿದೇಶ ಸೇವೆ (ಐಎಫ್ಎಸ್)ಯಲ್ಲಿದ್ದ ಅಧಿಕಾರಿ ದೇವಯಾನಿ ಖೊಬ್ರಾಗಡೆಯವರನ್ನು ಸ್ವದೇಶಕ್ಕೆ ಕರೆಸಿಕೊಳ್ಳುವಲ್ಲಿ ಅಂತೂ ಭಾರತವು ಯಶಸ್ವಿಯಾಗಿದೆ. ತಿಂಗಳುಗಳ ಕಾನೂನು- ರಾಜತಾಂತ್ರಿಕ ಸಮರಗಳ ನಂತರ ಖೊಬ್ರಾಗಡೆ ಭಾರತಕ್ಕೆ ಮರಳಿದ್ದಾರೆ.
ಸ್ವತಂತ್ರ್ಯ ಭಾರತದ ಇತಿಹಾಸದಲ್ಲೇ ಮೊದಲ ಬಾರಿಗೆ ಭಾರತದ ವಿದೇಶ ಸೇವೆ ವಿಭಾಗವು ಈ ಮಟ್ಟದಲ್ಲಿ ಆಕ್ರೋಶದಿಂದ ಎದ್ದುನಿಂತಿತ್ತು. ಅಮೆರಿಕದ ಕಾನೂನಿನಿಂದ ತನ್ನವರನ್ನು ರಕ್ಷಿಸಿಕೊಳ್ಳುವುದಕ್ಕೆ ತನ್ನೆಲ್ಲ ಲಾಬಿ ಬಲವನ್ನೂ ಬಳಸಿತು. ಈ ಐಎಫ್ಎಸ್ ಲಾಬಿಗೆ ತಕ್ಕನಾಗಿ ಸರ್ಕಾರವೂ ಕುಣಿಯಿತು. ಈ ಎಲ್ಲದರ ನಡುವೆ ಭಾರತೀಯಳೇ ಆಗಿರುವ ಖೊಬ್ರಗಡೆಯ ಮನೆಕೆಲಸದಾಕೆ ಸಂಗೀತಾ ರಿಚರ್ಡ್ಸ್ಳ ಗೋಳನ್ನು ಯಾರೂ ಗಮನಿಸಲೇ ಇಲ್ಲ.
ಅತ್ತ ಖೊಬ್ರಾಗಡೆ ಭಾರತಕ್ಕೆ ಪ್ರಯಾಣ ಆರಂಭಿಸುತ್ತಿದ್ದಂತೆ ಇಲ್ಲಿ ಆಕೆಯ ತಂದೆ ಸಂಭ್ರಮದಿಂದ ಹೇಳಿಕೆ ಕೊಟ್ಟರು. 'ನಾನು ವಿದೇಶ ವ್ಯವಹಾರ ಸಚಿವಾಲಯ, ಪ್ರಧಾನಿ ಕಾರ್ಯಾಲಯ ಹಾಗೂ ಮಾಧ್ಯಮಕ್ಕೆ ಕೃತಜ್ಞತೆ ಸಲ್ಲಿಸುವುದಕ್ಕೆ ಇಷ್ಟಪಡುತ್ತೇನೆ. ಇವತ್ತು ನಮಗೆ ನ್ಯಾಯ ಸಿಕ್ಕಿದೆ. ರಾಜತಾಂತ್ರಿಕ ವಿನಾಯಿತಿ ಮೇರೆಗೆ ಆಕೆ ಭಾರತಕ್ಕೆ ಮರಳುತ್ತಿದ್ದಾಳೆ. ಆಕೆ ಭವಿಷ್ಯದಲ್ಲಿ ಅಮೆರಿಕದಲ್ಲೇ ಮುಂದುವರಿಯುತ್ತಾಳೋ ಇಲ್ಲವೋ ಎಂಬ ಬಗ್ಗೆ ನಾನು ತಲೆಕೆಡಿಸಿಕೊಂಡಿಲ್ಲ.' ಇಡೀ ಪ್ರಕರಣದಲ್ಲಿ ಭಾರತದ ಬೂಟಾಟಿಕೆಯ ಸ್ಪಷ್ಟ ದರ್ಶನವಾಗಿದೆ. ಭಾರತದ ರಾಜತಾಂತ್ರಿಕರು ನಮ್ಮನ್ನು ನಂಬಿಸುವ ಪ್ರಕಾರ ಇಲ್ಲಿ ಖೊಬ್ರಗಡೆಯೇ ಸಂತ್ರಸ್ತೆ. ಅಮೆರಿಕ ಎಂಬೆಸಿ ಎದುರಿಗಿನ ರಕ್ಷಣಾ ಬ್ಯಾರಿಕೇಡ್ಗಳನ್ನು ತೆರವುಗೊಳಿಸಿದ್ದು, ಅವರ ರಾಜತಾಂತ್ರಿಕ ವಿನಾಯಿತಿಗಳನ್ನು ಕಡಿತಗೊಳಿಸಿದ್ದು, ಅಮೆರಿಕ ರಾಯಭಾರ ಕಚೇರಿಯ ಸ್ಪಾ ಮತ್ತು ಬಾರ್ಗಳನ್ನು ಮುಚ್ಚಿಸಿದ್ದು ನೋಡಿದರೆ, ನಮ್ಮ ರಾಯಭಾರಿಗಳು 'ದೇಶದ ಪ್ರತಿಷ್ಠೆ'ಯ ಹೆಸರಿನಲ್ಲಿ ತಮ್ಮವರನ್ನು ರಕ್ಷಿಸಿಕೊಳ್ಳುವುದಕ್ಕೆ ಯಾವ ಮಟ್ಟಕ್ಕಾದರೂ ಇಳಿಯುತ್ತಾರೆ ಎಂಬುದು ದೃಢವಾಗುತ್ತದೆ. ಮಾಧ್ಯಮದ ಒಂದು ವರ್ಗವೂ ಇವರ ಆಟಕ್ಕೆ ಮರುಳಾಯಿತು. ಪ್ರಕರಣದ ಸತ್ಯಾಸತ್ಯತೆ ಪರೀಕ್ಷಿಸದೇ ಅಮೆರಿಕ ವಿರೋಧಿ ಅಭಿಯಾನದಲ್ಲಿ ತನ್ನ ಧ್ವನಿಯನ್ನು ತಾರಕಕ್ಕೇರಿಸಿತು. ಈ ನಮೂನೆಯ ಪ್ರತಿಕ್ರಿಯೆ ಅಗತ್ಯವಿತ್ತೇ ಎಂಬ ಅಚ್ಚರಿ ಮತ್ತು ಮುಜುಗರ ಪ್ರಜ್ಞಾವಂತರನ್ನು ಕಾಡಿದ್ದು ಸುಳ್ಳಲ್ಲ. ಕೆಲ ರಾಜಕೀಯ ಪಕ್ಷಗಳು ಮತ್ತು ಮಾಧ್ಯಮದ ಅಭಿಪ್ರಾಯ ನಿರೂಪಕರು ಭಾರತವು ಅಮೆರಿಕ ವಿರುದ್ಧ ಕ್ರಮಕ್ಕೆ ಮುಂದಾಗಬೇಕು ಅಂತ ಕೂಗು ಹಾಕಿದವು. ಆಗ ಮಾತ್ರ ಐಎಫ್ಎಸ್ ಲಾಬಿ ಮೌನವಹಿಸಿತ್ತು. ಇವರೆಲ್ಲ ಒತ್ತಾಯಿಸುತ್ತಿದ್ದಾರೆಂದು ಹಾಗೆಲ್ಲ ಕ್ರಮಕ್ಕೆ ಮುಂದಾಗಿಬಿಡಬೇಡಿ ಎಂದು ಅದು ಸರ್ಕಾರಕ್ಕೆ ಕಿವಿಮಾತನ್ನೂ ಹೇಳಿತ್ತು. ಪತ್ರಕರ್ತರೊಬ್ಬರು ಹೇಳುವಂತೆ, 'ಎಷ್ಟೇ ಆದರೂ ಅಮೆರಿಕನ್ನರೊಂದಿಗೆ ಹರಟುವ, ಊಟ ಮಾಡುವ ಪರಿಸರವನ್ನು ಕಳೆದುಕೊಳ್ಳುವುದಕ್ಕೆ ಐಎಫ್ಎಸ್ ಸಿದ್ಧವಿಲ್ಲ.' ಮುಂಬಯಿ ದಾಳಿ ನಡೆದ ಸಂದರ್ಭದಲ್ಲಿ ಈ ಐಎಫ್ಎಸ್ ಆಕ್ರೋಶ ಅದೆಲ್ಲಿ ಅಡಗಿತ್ತು? ಮುಂಬಯಿ ದಾಳಿಯ ಮಾಸ್ಟರ್ಮೈಂಡ್ ಡೇವಿಡ್ ಹೆಡ್ಲಿಯನ್ನು ಭಾರತಕ್ಕೆ ಹಸ್ತಾಂತರಿಸುವುದಕ್ಕೆ ಅಮೆರಿಕ ನಿರಾಕರಿಸಿತಲ್ಲ, ಆಗೇಕೆ ಇವರೆಲ್ಲ ಸಿಟ್ಟು ಹೊರಹಾಕಲಿಲ್ಲ? ಭಾರತದ ಬಡ ಮೀನುಗಾರರನ್ನು ಇಟಲಿ ನಾವಿಕರು ಕೊಂದುಹಾಕಿದಾಗ ಎಲ್ಲಿತ್ತು ಈ ವಿದೇಶಿ ಸೇವಾ ನಿರತರ ಆಕ್ರೋಶ? ವಿದೇಶಗಳಲ್ಲಿ ಪೊಳ್ಳು ಆರೋಪಗಳ ಮೇಲೆ ಸಾಮಾನ್ಯ ಭಾರತೀಯರನ್ನು ಜೈಲಿಗೆ ತಳ್ಳಿದ ಯಾವ ಸಂದರ್ಭಗಳಲ್ಲೂ ಇವರು ತುಟಿಬಿಚ್ಚಿದ್ದಿಲ್ಲ. ಚೀನಾ ತುಕಡಿಗಳು ಭಾರತದ ಮಣ್ಣನ್ನು ಪ್ರವೇಶಿಸಿದ ಸಂದರ್ಭದಲ್ಲಿ ಈ ಐಎಫ್ಎಸ್ನವರೆಲ್ಲ ತಣ್ಣಗಿದ್ದರಲ್ಲ, ಏಕೆ? ಇಂಥ ಘಟನೆಗಳು ಆಗಿಯೇ ಇಲ್ಲ ಎಂಬಂತೆ ನಿರಾಳವಾಗಿತ್ತು ಐಎಫ್ಎಸ್.
ಅಮೆರಿಕ ಕಾನೂನಿನ ಪ್ರಕಾರ ದೇವಯಾನಿಯ ಮೇಲಿನ ಆರೋಪ ಗಂಭೀರ ಸ್ವರೂಪದ್ದು. ತನ್ನ ಕೆಲಸದಾಕೆಗೆ ಒಪ್ಪಿತ ಸಂಬಳವನ್ನು ಕೊಡದೇ ಆಕೆಯನ್ನು ಕೆಟ್ಟದಾಗಿ ನಡೆಸಿಕೊಂಡಿರುವುದು. ಶ್ರೀಮಂತರು ಮತ್ತು ಸಮಾಜದ ಪ್ರತಿಷ್ಠಿತರು ಸಾಮಾನ್ಯವಾಗಿ ತಮ್ಮ ಮನೆಯ ಕೆಲಸದವರನ್ನು ಹೇಗೆಲ್ಲ ನಡೆಸಿಕೊಳ್ಳುತ್ತಾರೆ ಎಂಬುದು ಗೊತ್ತೇ ಇದೆ. ಅದೇ ಅಮೆರಿಕದಲ್ಲಿ ಪುನರಾವರ್ತನೆ ಆಗುತ್ತಿದೆ ಎಂದಾದರೆ ಅದರಲ್ಲಿ ಆಶ್ಚರ್ಯಪಡುವಂಥದ್ದೇನೂ ಇಲ್ಲ. ಸಂಗೀತಾ ರಿಚರ್ಡ್ಸ್ರ ಯಾವ ಮಾತನ್ನೂ ಕೇಳಿಸಿಕೊಳ್ಳುವುದಕ್ಕೆ ಆಸಕ್ತಿ ತೋರದ ಭಾರತ, ದೇವಯಾನಿ ಖೊಬ್ರಾಗಡೆ ಬೆನ್ನಿಗೆ ನಿಂತಿತು. ಎಲ್ಲರಿಗೂ ಸಮಾನ ಹಕ್ಕುಗಳಿವೆ ಎಂದು ಪ್ರತಿಪಾದಿಸುವ ಅಮೆರಿಕ ಈ ಪ್ರಕರಣದಲ್ಲಿ ದೇವಯಾನಿ ವಿರುದ್ಧ ತನಿಖೆ ಕೈಗೊಳ್ಳುವ ಮೂಲಕ ಇದನ್ನೊಂದು ಉದಾಹರಣೆಯ ಪ್ರಸಂಗವಾಗಿಸುವಲ್ಲಿ ಹೆಜ್ಜೆ ಇಟ್ಟಿತು.
ದೇವಯಾನಿ ಪ್ರಕರಣ ಭಾರತದ ಉನ್ನತ ವರ್ಗದ ಬೂಟಾಟಿಕೆಯ ಪ್ರತಿಬಿಂಬವಲ್ಲದೇ ಇನ್ನೇನು? ತನ್ನ ಮನೆಗೆಲಸದವಳಿಗೇ ನ್ಯಾಯ ಒದಗಿಸದೆ ತಾನು ದಲಿತ ಮಹಿಳೆಯರ ಹಕ್ಕುಗಳನ್ನು ರಕ್ಷಿಸುತ್ತೇನೆ ಎಂಬ ದೇವಯಾನಿ ಮಾತು ಬೂಟಾಟಿಕೆ ಅಲ್ಲವೇ?
ಸ್ಟಾನ್ಫೊರ್ಡ್ ವಿವಿಯ ಹೂವರ್ ಇನ್ಸ್ಟಿಟ್ಯೂಟ್ನ ರೀಸರ್ಚ್ ಫೆಲ್ಲೊ ಜೆರೆಮಿ ಕಾರ್ಲ್ ಭಾರತದ ಈ ಅತಿಯಾದ ಪ್ರತಿಕ್ರಿಯೆಯನ್ನು ತಮ್ಮ ಲೇಖನದಲ್ಲಿ ಜಾಡಿಸುತ್ತಾರೆ. ಭಾರತದಲ್ಲಿ ಹಲ ವರ್ಷ ನೆಲೆಸಿದ್ದ ಅವರು, ಇಲ್ಲಿನ ರಾಜಕೀಯದ ಕುರಿತೂ ತಿಳಿದುಕೊಂಡವರು. ಅವರು ಬರೆಯುತ್ತಾರೆ- 'ಭಾರತದ ಪ್ರಚೋದನಾತ್ಮಕ ಪ್ರತಿಕ್ರಮಗಳು ಹಾಗೂ ಅಲ್ಲಿನ ಮಾಧ್ಯಮದ ನಿರೂಪಣೆ ಅವರ ನೈತಿಕ ಕುರುಡುತನವನ್ನು ತೋರಿಸುತ್ತದೆ. ಖೊಬ್ರಾಗಡೆಯ ಪಕ್ಷ ವಹಿಸಿ ತಮ್ಮ ಆಕ್ರೋಶವನ್ನು ಹೊರಚೆಲ್ಲಿರುವ ರಾಜಕೀಯ ವರ್ಗ, ಮಾಧ್ಯಮ ಯಾವುದೂ ನಿಜವಾಗಿ ಸಂತ್ರಸ್ತೆ ಎನ್ನಿಸಿಕೊಂಡಿರುವ ಮನೆಕೆಲಸದಾಕೆ ಸಂಗೀತಾ ರಿಚರ್ಡ್ಸ್ ಬಗ್ಗೆ ಯಾವ ಅನುಕಂಪವನ್ನೂ ತೋರಿಲ್ಲ. ಇದಕ್ಕೆ ವ್ಯತಿರಿಕ್ತವಾಗಿ ಭಾರತದಲ್ಲಿರುವ ಸಂಗೀತಾ ಕುಟುಂಬದವರನ್ನು ಹೆದರಿಸಲಾಗಿದೆ ಎಂದು ವರದಿಯಾಗಿದೆ. ಸಂಗೀತಾ ಸುರಕ್ಷತೆ ದೃಷ್ಠಿಯಿಂದ ಅವರನ್ನೆಲ್ಲ ಅಮೆರಿಕಕ್ಕೆ ಕರೆತರಲಾಯಿತು.
ಭಾರತದ ರಾಜಕಾರಣಿಗಳು ಜನಸಾಮಾನ್ಯರ ಪರ ಎಂದು ಬಾಯ್ಮಾತಿನ ಕಾಳಜಿ ತೋರುತ್ತಲೇ ಇರುತ್ತಾರೆ. ಆದರೆ ಅಲ್ಲಿನ ಕೆಲಸದ ವರ್ಗವನ್ನು ನಿಕೃಷ್ಟವಾಗಿ ನಡೆಸಿಕೊಳ್ಳುತ್ತಿರುವ ಉನ್ನತ ವರ್ಗದ ಬಗ್ಗೆ ಭಾರತೀಯ ಮಾಧ್ಯಮದಲ್ಲೇ ಆಗಾಗ ವರದಿಗಳು ಪ್ರಕಟವಾಗುತ್ತಲೇ ಇರುತ್ತವೆ. ಈ ಚೌಕಟ್ಟಿನಲ್ಲಿ ಇಟ್ಟು ನೋಡಿದಾಗ ಭಾರತದ ನ್ಯೂಯಾರ್ಕ್ ಕಾನ್ಸುಲೇಟ್ನಲ್ಲಿ ನಡೆದಿರುವ ಈ ಪ್ರಕರಣ ಅಪರೂಪದ್ದು ಎಂದೇನೂ ಹೇಳುವಂತಿಲ್ಲ.
ಅಮೆರಿಕದ ಮಾಧ್ಯಮ ಹಾಗೂ ಭಾರತದ ಕೆಲ ಪ್ರಜ್ಞಾವಂತ ಪತ್ರಕರ್ತರ ಅಭಿಪ್ರಾಯದಂತೆ ದೇವಯಾನಿ ಪ್ರಕರಣವು ಭಾರತದ ಆಮ್ ಆದ್ಮಿಗೆ ಎಚ್ಚರಿಕೆಯ ಘಂಟೆ. ಭಾರತದ ರಾಜತಾಂತ್ರಿಕರು, ಅಧಿಕಾರಶಾಹಿ ಹಾಗೂ ಉನ್ನತ ವರ್ಗವು ಬಡವರ ಪರ ಯಾವತ್ತೂ ಹೋರಾಡಿದ್ದಿಲ್ಲ. ಈ ವರ್ಗದ ಕೈಗೊಂಬೆ ಅಲ್ಲಿನ ರಾಜಕೀಯ ವ್ಯವಸ್ಥೆ. ಈ ಉನ್ನತ ವಲಯದವರ ಅಸ್ತಿತ್ವ ಕಂಪಿಸಿದಾಗ ಮಾತ್ರವೇ ಅವರು ದೇಶದ ಪ್ರತಿಷ್ಠೆಯ ಹೆಸರಲ್ಲಿ ಭಾರಿ ಬೊಬ್ಬೆ ಹಾಕುತ್ತಾರೆ.
ಪ್ರಕರಣದ ನಿಖರ ಸತ್ಯ ತನಿಖೆಯಿಂದಲೇ ಹೊರಬರಬೇಕಿರುವುದು ಹೌದಾದರೂ, ಕೊನೆಪಕ್ಷ ಭಾರತವು ದೇವಯಾನಿ ಪ್ರಕರಣದಲ್ಲಿ ತಾನೇ ಸ್ವತಂತ್ರ ತನಿಖೆಯೊಂದನ್ನು ನಡೆಸಲಿ. ಅಲ್ಲಿ ತಪ್ಪಿತಸ್ಥಳೆಂದು ಕಂಡುಬಂದರೆ ಆ ಅಧಿಕಾರಿಗೆ ಶಿಕ್ಷೆಯಾಗಲಿ. ಇದನ್ನೇನೂ ಅಮೆರಿಕವು ತನ್ನ ಸಾರ್ವಭೌಮತೆಗೆ ಮಾಡಿದ ಅವಮಾನ ಎಂದುಕೊಳ್ಳುವುದಿಲ್ಲ.
ಅಮೆರಿಕದಲ್ಲಿ ಅನಿಶ್ಚಿತ ಭವಿಷ್ಯ ಎದುರಿಸುತ್ತಿರುವ ಸಂಗೀತಾ ರಿಚರ್ಡ್ಸ್ಗೂ ನ್ಯಾಯ ಸಿಗಲಿ. ಎಲ್ಲರೂ ಸಮಾನರೆನ್ನುತ್ತದೆ ನಮ್ಮ ಸಂವಿಧಾನ. ನೈಜ ಪ್ರಜಾಪ್ರಭುತ್ವದಲ್ಲಿ ಅಸಹಾಯಕರು ಹಾಗೂ ಬಡವರು ಶ್ರೀಮಂತರಿಗಿಂತ ಹೆಚ್ಚು ಸಮಾನರಾಗಿರಬೇಕಾಗುತ್ತದೆ.'
-ಡಿ. ಪಿ. ಸತೀಶ್
ಸಿಎನ್ಎನ್-ಐಬಿಎನ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


