ಅಂಕಣಗಳು

ಮೀಸಲಾತಿ ನಿಜಕ್ಕೂ ಶೋಷಿತ ವರ್ಗಕ್ಕೆ ಸಿಗಬೇಕಲ್ಲವೇ?

ಮೀಸಲಾತಿ ನಿಜಕ್ಕೂ ಶೋಷಿತ ವರ್ಗಕ್ಕೆ ಸಿಗಬೇಕಲ್ಲವೇ?
Published On :

ಕಚೇರಿಯಲ್ಲಿ ಸುಗಮವಾಗಿ ಕ್ರಮಬದ್ಧವಾಗಿ ಕಾರ್ಯಚಟುವಟಿಕೆಗಳು ನಡೆಯಬೇಕಾದರೆ ಅಲ್ಲಿ ಮೇಲಧಿಕಾರಿ, ವ್ಯವಸ್ಥಾಪಕ, ಮೇಲ್ವಿಚಾರಕ, ಗುಮಾಸ್ತ, ಜವಾನ ಎಲ್ಲರ ಉಪಸ್ಥಿತಿ ಅವಶ್ಯಕ, ಆ ರಚನೆ ಅನಿವಾರ್ಯ. ಅಂತೆಯೇ ಸಮಾಜದಲ್ಲಿ ಸಂಯೋಜಿತ ಸಂಘಟನೆಯಾಗಬೇಕಾದರೆ ಅಲ್ಲಿ ಶ್ರೇಣೀಕರಣ ಅತ್ಯಗತ್ಯ.

ಕಳೆದ ವಾರ ಅಲ್ಪ ಸಂಖ್ಯಾತ ಹಿಂದುಳಿದ ವರ್ಗಗಳ ಕಲ್ಯಾಣ ಸಮಿತಿ ಏರ್ಪಡಿಸಿದ್ದ ಸಮಾರಂಭವೊಂದಕ್ಕೆ ಹೋಗಿದ್ದೆ. ಅಲ್ಲಿದ್ದವರೆಲ್ಲ ಮೌಢ್ಯವನ್ನು ವಿರೋಧಿಸಿ ವಿಜ್ಞಾನವನ್ನು ಶ್ಲಾಘಿಸಿ ಸಮತೋಲಿತ ಸಮಾಜ ಕಟ್ಟ ಹೊರಟವರು. ನಮ್ಮೆಲ್ಲರ ಉದ್ದೇಶ ಒಂದೇ, ಹಿಂದುಳಿದ ಜಾತಿಗೆ ಸಮಾಜದಲ್ಲಿ ಉತ್ತಮ ಸ್ಥಾನಮಾನ ಒದಗಿಸುವುದು. ಈ ಉದ್ದೇಶ ಹಿಡಿದು ಬಂಡೆದ್ದದ್ದು- ಮೇಲ್ಜಾತಿಯ ದೌರ್ಜನ್ಯಗಳ ಮೇಲೆ, ಹರಿಹಾಯ್ದದ್ದು- ಪುರಾಣಗಳಲ್ಲಿ ಹೇಳಿದ ಮನುವಿನ ಜಾತಿ ಪದ್ದತಿಯ ಮೇಲೆ. ಉದ್ದೇಶದ ಸಾಕಾರಕ್ಕೆ ನಮ್ಮ ಆಯ್ಕೆ 'ಮೀಸಲಾತಿ'. ಕಾರ್ಯಕ್ರಮ ಮುಗಿಸಿ ಮನೆಗೆ ಹೊರಟ ನನ್ನಲ್ಲಿ ಕಾಡುತ್ತಿದ್ದ ಪ್ರಶ್ನೆ, ನಾಗರಿಕ ಸಮಾಜದಲ್ಲಿ ಜಾತಿಪದ್ದತಿ ಬಂದದ್ದು ಹೇಗೆ? ಪುರಾಣ-ಪುರೋಹಿತರ ಮೌಢ್ಯತೆಯನ್ನು ಧಿಕ್ಕರಿಸಿ, ವೈಜ್ಞಾನಿಕತೆಯನ್ನು ಆರಾಧಿಸುವ ಬುದ್ಧಿ ಜೀವಿಗಳಾದ ನಾವು ಮನುವಿನ ಜಾತಿ ವ್ಯವಸ್ಥೆಯ ಬಗ್ಗೆಯೇ ಮಾತನಾಡುತ್ತಾ ನಮ್ಮ ವೈಚಾರಿಕತೆಯನ್ನು, ತಾರ್ಕಿಕತೆಯನ್ನು ಸಂಕುಚಿತಗೊಳಿಸಿ ಮನುಸ್ಮೃತಿಯಲ್ಲಿಯೇ ಕೇಂದ್ರೀಕೃತಗೊಳ್ಳುವುದೇಕೆ?  4.6 ಬಿಲಿಯನ್ ವರ್ಷಗಳ ಹಿಂದೆ ಭೂಮಿ ಉಗಮವಾಗಿದೆ. ಭೂಮಿ ಉಗಮವಾಗಿ 1 ಬಿಲಿಯನ್ ವರ್ಷಗಳ ನಂತರ ಮೊದಲ ಜೀವಿ ಜನ್ಮ ತಾಳಿತು. ಆ ಜೀವಿಗಳ ವಿಕಸನದ ಕೂಸು ಮಾನವ. ಮಾನವನ ಸಹಸ್ರಾರು ವರ್ಷಗಳ ವಿಕಸನದಿಂದ ರೂಪಗೊಂಡಿದ್ದು ನಾಗರಿಕತೆ-ನಾಗರಿಕ ಸಮಾಜ. ಹೀಗೆ ವಿಕಾಸವಾದ ನಾಗರಿಕ ಸಮಾಜಕ್ಕೂ, ಜಾತಿ ಪದ್ಧತಿಗೂ ಎತ್ತಿಂದೆತ್ತಣ ಸಂಬಂಧ? ಕಚೇರಿಯಲ್ಲಿ ಸುಗಮವಾಗಿ ಕ್ರಮಬದ್ಧವಾಗಿ ಕಾರ್ಯಚಟುವಟಿಕೆಗಳು ನಡೆಯಬೇಕಾದರೆ ಅಲ್ಲಿ ಮೇಲಧಿಕಾರಿ, ವ್ಯವಸ್ಥಾಪಕ, ಮೇಲ್ವಿಚಾರಕ, ಗುಮಾಸ್ತ, ಜವಾನ ಎಲ್ಲರ ಉಪಸ್ಥಿತಿ ಅವಶ್ಯಕ, ಆ ರಚನೆ ಅನಿವಾರ್ಯ. ಅಂತೆಯೇ ಸಮಾಜದಲ್ಲಿ ಸಂಯೋಜಿತ ಸಂಘಟನೆಯಾಗಬೇಕಾದರೆ ಅಲ್ಲಿ ಶ್ರೇಣೀಕರಣ ಅತ್ಯಗತ್ಯ. ಶ್ರಮ ವಿಭಜನೆಯಿಂದ ಪ್ರಗತಿ ಸಾಧ್ಯ. ಈ ರೀತಿಯ ವಿಶಾಲ ಭಾವದಿಂದ, ದೂರದೃಷ್ಟಿ ಕನಸಿನಿಂದ ಮಾಡಿದ ವರ್ಗೀಕರಣ ಜಾತಿವ್ಯವಸ್ಥೆ. ಶಾಸ್ತ್ರ ಪುರಾಣಗಳನ್ನು ವಿಮರ್ಶೆ ಮಾಡುವ ವಿಮರ್ಶಕರು ಅದರಲ್ಲಿ ತಮಗೆ, ತಮ್ಮ ನಿಲುವಿಗೆ ಬೇಕಾದ ವಿಚಾರಗಳಿಗಷ್ಟೇ ಪ್ರಾಮುಖ್ಯತೆ ನೀಡಿ ಇತರೆ ಮಹತ್ವದ ವಿಚಾರಗಳನ್ನು ನಿರ್ಲಕ್ಷಿಸುವುದು ಶೋಚನೀಯ, ಖಂಡನೀಯ.
ಶಾಸ್ತ್ರಗಳ ತತ್ವ ಚಿಂತನೆಯ ಪ್ರಕಾರ ಜಗತ್ತಿನಲ್ಲಿ ನಡೆಯುವ ಕಾರ್ಯಚಟುವಟಿಕೆಗಳೆಲ್ಲ ನಿರ್ಧರಿತವಾಗುವುದು ಮೂರು ಮೂಲ ಗುಣಗಳಾದ - ಸತ್ವ, ರಜಸ್ಸು, ತಮಸ್ಸು ಗಳಿಂದ. ಸತ್ವ ಗುಣವು ಪ್ರಕಾಶಕ, ಆನಂದರೂಪ, ಜ್ಞಾನ, ಶಾಂತಿ, ಪಾವಿತ್ರ್ಯ ಸಂಬಂಧಿತ ಶುದ್ಧಗುಣ. ರಜಸ್ಸು ಚಂಚಲ, ಕ್ರಿಯಾಶೀಲ, ದುಃಖರೂಪಕ ಭಾವೋದ್ರೇಕ ಗುಣ. ತಮಸ್ಸು ಭಾರ, ತಡೆ ಸ್ವಭಾವ, ಜಡ, ಮಂದ, ಅಜ್ಞಾನ ಗುಣವಾಗಿದೆ. ಪ್ರಕೃತಿಯ ಸ್ವರೂಪವೇ ಈ ಮೂರು ಗುಣಗಳು. ಈ ಮೂರು ಗುಣಗಳು ಒಟ್ಟಿಗಿದ್ದು ಒಂದನ್ನೊಂದು ಆಶ್ರಯಿಸಿವೆ. ಈ ಗುಣಗಳ ವಿವಿಧ ಅನುಪಾತಗಳ ಮಿಶ್ರಣದ ಫಲದಿಂದ ವ್ಯಕ್ತಿಯ ಜ್ಞಾನ, ಶಕ್ತಿ, ಮನೋಭಾವ, ಆಕಾಂಕ್ಷೆ, ಆಸಕ್ತಿ, ಒಲವು, ನಿರೀಕ್ಷೆ, ಪ್ರವೃತ್ತಿ, ಸಾಮರ್ಥ್ಯ, ಅರ್ಹತೆ, ಮಿತಿಗಳ ನಿರ್ಧಾರವಾಗುತ್ತದೆ. ಅವುಗಳ ಮೂಲಕ ಆತನ ಕ್ರಿಯಾ-ಕರ್ಮಾದಿಗಳಿಗೆ ಕಾರಣೀಭೂತವಾಗುತ್ತವೆ. ಅಂತಹ ಗುಣಗಳ ಆಧಾರದ ಮೇಲೆಯೇ ನಿಸ್ವಾರ್ಥ ಮನು, ಸಮಾಜದ ಅಭ್ಯುಧಯಕ್ಕೆ ಪ್ರಕೃತಿಯ ಗುಣಗಳನ್ನಾಧರಿಸಿ, ವ್ಯಕ್ತಿಯ ಅರ್ಹತೆಯನ್ನಾಧರಿಸಿ ನಾಲ್ಕು ವರ್ಣಗಳನ್ನು ಮಾಡಿದ. ಯಾರು ಜ್ಞಾನಿಯೂ, ಬುದ್ಧಿವಂತನೂ, ಪ್ರತಿಭಾವಂತನೂ, ಶಿಕ್ಷಕನೂ ಆಗಿರುವನೋ ಆತ ಬ್ರಾಹ್ಮಣ. ಯಾರು ಆಡಳಿತ ನಿಪುಣನೂ, ಧೈರ್ಯವಂತನೂ, ರಾಜನೂ, ಯೋಧನೂ, ಸಮಾಜದ ಹಿತರಕ್ಷಣೆ ಕಾಯಬಲ್ಲನೋ ಆತ ಕ್ಷತ್ರಿಯ. ಯಾರು ವೃತ್ತಿಪರನೂ, ಕೃಷಿಕನೂ, ವ್ಯಾಪಾರಿಯೋ ಆತ ವೈಶ್ಯ. ಯಾರು ಸೇವಾ ಭಾವವುಳ್ಳವನೂ, ಕುಶಲಕರ್ಮಿಯೂ, ಸೇವಾಕರ್ತನೂ, ಕಲೆಗಾರನೂ, ಕಾರ್ಮಿಕನೋ ಆತ ಶೂದ್ರ. ಹೀಗೆ ಶ್ರಮವನ್ನು ವಿವಿಧ ಸ್ಥರಗಳಾಗಿ ವಿಭಜಿಸಿ ಹರ್ಷಚಿತ್ತ ಸಮಾಜದ ಕಾರಣೀಭೂತನಾದವನು - ಮನು. ಅಂತಹ ಸಮಾಜದಲ್ಲಿ ಆನಂದದಿಂದ ಜೀವಿಸಿದವರು ಕೂಡಿಬಾಳಿದವರು ನಿಸ್ವಾರ್ಥಿಗಳು, ವಸುದೈವ ಕುಟುಂಬಕಂ ಮೂಲಮಂತ್ರದಲ್ಲಿ ನಂಬಿಕೆಯಿಟ್ಟವರು, ಸಂಯಮಿಗಳು, ತಾವೂ ಬದುಕಿ ಬೇರೆಯವರನ್ನು ಬದುಕಲು ಬಿಟ್ಟವರು. ಅಂದಿನ ಬ್ರಾಹ್ಮಣನನ್ನು ಇತರೆ ವರ್ಗದ ಜನ ಆರಾಧಿಸುತ್ತಿದ್ದರು, ಗೌರವಿಸುತ್ತಿದ್ದರು. ಆ ಭಕ್ತಿ ನಿಷ್ಠೆ ಬ್ರಾಹ್ಮಣನ ಜ್ಞಾನಕ್ಕೆ ವ್ಯಕ್ತಿತ್ವಕ್ಕೆ ನೀಡುತ್ತಿದ್ದ ಗೌರವವೇ ಹೊರತು ವ್ಯಕ್ತಿಗಲ್ಲ.
ಆದರೆ ಕಾಲಾನಂತರದಲ್ಲಿ ಈ ವ್ಯವಸ್ಥೆಗೆ ಮಸಿಬಳಿದವರು ಸ್ವಾರ್ಥಿಗಳು, ತನ್ನ ಹಿತಚಿಂತನೆ ಕಾಯ್ದುಕೊಂಡವರು, ಲೋಭಿಗಳು, ತನ್ನ ಅಧಿಕಾರ ತನ್ನಲ್ಲಿಯೇ ತನ್ನವರಲ್ಲಿಯೇ ಉಳಿಯಬೇಕೆಂಬ ನಿಲುವು ತಾಳಿದವರು. ಇವರ ಸ್ವಾರ್ಥದ ಪರಿಣಾಮ ಬ್ರಾಹ್ಮಣನ ಮಗ ಬ್ರಾಹ್ಮಣನಾದದ್ದು, ಕೆಳಸ್ಥರದ ಜನರ ಮೇಲೆ ದಬ್ಬಾಳಿಕೆ, ಅಯೋಗ್ಯ ವ್ಯಕ್ತಿ ಯೋಗ್ಯ ಜಾತಿಯವನಾಗಿದ್ದು, ಅಸಮರ್ಥ ವ್ಯಕ್ತಿ ಪ್ರಭಾವಿ ಸ್ಥಾನಕ್ಕೇರಿದ್ದು. ಅದರ ಫಲ ಸಮಾಜದಲ್ಲಿ ಶೋಷಣೆ, ದೌರ್ಜನ್ಯ, ಭ್ರಷ್ಟತೆ. ಮನುವಿನ ಜಾತಿ ಪರಿಕಲ್ಪನೆಯೇ ತಪ್ಪೋ ಅಥವಾ ಲೋಭಿಗಳ ಸ್ವಾರ್ಥದಿಂದ ಜಾತಿ ವ್ಯವಸ್ಥೆ ಕಳಂಕಿತವಾಯಿತೋ ಇದನ್ನರಿಯದ ನಾವು ಜಾತಿವ್ಯವಸ್ಥೆಯೇ ಸರಿಯಲ್ಲ ಎಂಬುದು ತರವಲ್ಲ.
ಕಾಲದ ಕೈವಾಡಕ್ಕೆ ಬದಲಾದ ಜಾತಿವ್ಯವಸ್ಥೆಯಿಂದ ಕಷ್ಟಪಟ್ಟವರು ಹಲವರು. ಅವರ ಪರಿಶ್ರಮದ ಫಲ ಈ ಮೀಸಲಾತಿ. ಮೀಸಲಾತಿಯಿಂದ ಶೋಷಿತ ದಲಿತರನ್ನು ಮೇಲೆತ್ತಲು ಹೋರಾಟ. ಹೌದು, ಈ ಮೀಸಲಾತಿ ಅತ್ಯವಶ್ಯಕ. ಶೋಷಿತ ದಲಿತರನ್ನು ಸಮಾಜದಲ್ಲಿ ಎತ್ತಲು ಮಾಡಿದ ವ್ಯವಸ್ಥೆ ಮೀಸಲಾತಿ. ಹಾಗಾದ್ರೆ ಶೋಷಿತ ಅಂದ್ರೆ ಯಾರು ಸಮಾಜದಲ್ಲಿ ಮೇಲಿನ ವರ್ಗದವರಿಂದ ತುಳಿತಕ್ಕೊಳಗಾಗಿ ತನ್ನ ಸಾಮಾಜಿಕ ಸ್ಥಾನಮಾನ ಕಳೆದುಕೊಂಡವ, ಅಕ್ಷರಜ್ಞಾನದ ಸವಲತ್ತುಗಳಿಂದ ವಂಚಿತನಾದವ ಶೋಷಿತ. ಹಿಂದೆ ಜ್ಞಾನ, ವ್ಯಕ್ತಿತ್ವದ ಮದದಿಂದ ಮೆರೆಯುತ್ತಿದ್ದ ಬ್ರಾಹ್ಮಣ ದಲಿತ ವರ್ಗವನ್ನು ಶೋಷಿಸಿದ. ಇಂದು ಹಣ ಅಧಿಕಾರದ ಮದವಿರುವ ಶ್ರೀಮಂತ, ಬಡವನನ್ನು ಶೋಷಿಸುತ್ತಿದ್ದಾನೆ. ಇಂದು ಯಾರು ಸಿರಿವಂತನೋ ಆತನೇ ಬ್ರಾಹ್ಮಣ. ಆತನಿಗೆ ಸಕಲ ಗೌರವ ಮರ್ಯಾದೆ. ಯಾರು ಕಡುಬಡವನೋ ಆತನೇ ಶೂದ್ರ, ಶೋಷಿತ, ಇಂದಿನ ಸಮಾಜದಲ್ಲಿ ಕೆಳಸ್ತರದಲ್ಲಿರುವವನು.
ಆಚಾರ್ಯ ದ್ರೋಣರು ದಲಿತ ಏಕಲವ್ಯನಲ್ಲಿ ಅವನ ಹೆಬ್ಬೆರಳನ್ನು ಗುರುದಕ್ಷಿಣೆ ಪಡೆದರು. ಅದು ದ್ರೋಣರಿಗೆ ಏಕಲವ್ಯನ ಗುರು ಭಕ್ತಿ, ಜ್ಞಾನಕ್ಕೆ ನೀಡಿದ ಗೌರವ. ಇಂದು ಅಧಿಕಾರಿಗೆ ಜವಾನ, ಮಂತ್ರಿಗೆ ಸಚಿವ ನೀಡುವ ಗೌರವ ಅವರ ಹಣಕ್ಕೆ ಅಧಿಕಾರಕ್ಕೆ. ಯಾವುದೂ ಶಾಶ್ವತವಲ್ಲ. ಕಾಲ ಬದಲಾದಂತೆ ವ್ಯವಸ್ಥೆಗಳೂ ಬದಲಾಗುತ್ತವೆ. ವ್ಯವಸ್ಥೆಗಳು ಬದಲಾದಂತೆ ನಿಯಮಗಳೂ ಬದಲಾಗಬೇಕಾದದ್ದು ಅಗತ್ಯ. ಆಗ ಮಾತ್ರ ಸಮಾಜೋನ್ಮುಖ ಅಭಿವೃದ್ಧಿ ಸಾಧ್ಯ. ಅಂದಿನ ಶೋಷಿತ ದಲಿತ ವರ್ಗವನ್ನು ಮೇಲೆತ್ತಲು ಹೋರಾಡಿದ ಅಂಬೇಡ್ಕರ್ ಇಂದಿನ ಶೋಷಿತ ಬಡವರನ್ನು ಮೇಲೆತ್ತಲು ಮತ್ತೆ ಹುಟ್ಟಬೇಕಿದೆ. ಅವರ ಆದರ್ಶ ನಮಗೆ ಸ್ಪೂರ್ತಿಯಾಗಬೇಕಿದೆ. ಅಂಬೇಡ್ಕರ್ ಹೋರಾಡಿದ್ದು ಕೇವಲ ಹಿಂದುಳಿದ ಜಾತಿಗಾಗಿ ಅಲ್ಲ. ಅವರ ಆದರ್ಶ ದಲಿತರಿಗೆ ಮೀಸಲಲ್ಲ. ಅವರ ಆದರ್ಶಗಳು ತತ್ವಚಿಂತನೆಗಳು ಶೋಷಿತ ವರ್ಗಕ್ಕೆ ಎಂಬುದನ್ನು ನಾವು, ನಮ್ಮನ್ನಾಳುವ ನಿಯಮ ರೂಪಿಸುವ ಹೊಟ್ಟೆ ತುಂಬಿದ ಅಧಿಕಾರಶಾಹಿಗಳಿಗೆ ಮನವರಿಕೆಯಾಗಬೇಕಾದದ್ದು ಮುಖ್ಯ. ನಮ್ಮ ಸ್ವಾರ್ಥಕ್ಕೆ ಮಹಾನ್ ವ್ಯಕ್ತಿಯ ಆದರ್ಶಗಳನ್ನು ಸಂಕುಚಿತಗೊಳಿಸುವುದು ಬೇಡ. ಸ್ವಾರ್ಥ ಸಾಧನೆಗಾಗಿ ಸುಂದರ ಸಮಾಜದ ಪರಿಕಲ್ಪನೆಗೆ ನಾಂದಿಯಾಗಬೇಕಿದ್ದ ಶ್ರೇಣೀಕರಣದ ಜಾತಿವ್ಯವಸ್ಥೆಯನ್ನು ಸಂಕುಚಿತಗೊಳಿಸಿ ಮಸಿ ಬಳಿದ ಜನರಂತೆ, ಅಂಬೇಡ್ಕರ್‌ರ ಮೀಸಲಾತಿಯ ಸಿದ್ಧಾಂತವನ್ನು ಸಂಕುಚಿತಗೊಳಿಸಿ ಅವರ ಆದರ್ಶಗಳಿಗೆ ಚ್ಯುತಿ ತರುವುದು ಬೇಡ. ರೋಗಕ್ಕೆ ಔಷಧಿ ಬೇಕು, ಆದ್ರೆ ರೋಗ ವಾಸಿಯಾದಮೇಲೂ ಔಷಧಿ ತೆಗೆದುಕೊಳ್ಳುವುದು ಸೂಕ್ತವಲ್ಲ. ಆಗ ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡದ ಜನ ಶೋಷಿತರು, ಆದ್ರೆ ಈಗ ಯಾರು ಶೋಷಿತರೋ ಅವರಿಗೆ ಔಷಧಿ ನೀಡೋದು ಸೂಕ್ತ. ಹಾಗಂತ ಒಂದೇ ಔಷಧಿಯನ್ನು ಎಲ್ಲಾ ರೋಗಗಳಿಗೆ ನೀಡಿ ರೋಗ ಮುಕ್ತ ಪರಿಸರ ನಿರ್ಮಾಣ ಮಾಡಲು ಸಾಧ್ಯವಿಲ್ಲ. ಬದಲಾಗಿ ಮತ್ತೊಂದು ರೋಗವನ್ನು ಆಹ್ವಾನಿಸಿದಂತಾಗುತ್ತದೆ. ಆದ್ದರಿಂದ ಮೀಸಲಾತಿ ಬೇಕು.... ಆದರೆ ಯಾರಿಗೆ, ಎಲ್ಲಿ, ಯಾವುದಕ್ಕಾಗಿ ಎಂಬುದರ ವಿಚಾರ ಅಗತ್ಯ. ಇಲ್ಲದಿದ್ದರೆ ಆರ್ಥಿಕವಾಗಿ ದುರ್ಬಲರಾದ ಇಂದಿನ ಶೋಷಿತ ಬಡ ವರ್ಗ ನರಳುತ್ತಲೇ ಇರುತ್ತದೆ.


- ಸಿಂಧೂರ ಬಿ. ಆರ್.
sindhur.br@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.