ಅಂಕಣಗಳು

ಪ್ರವಾಸೋದ್ಯಮದ ಅಭಿವೃದ್ಧಿಗಾಗಿ ವಿಚಾರ ಮತ್ತು ಪ್ರಚಾರ

ಪ್ರವಾಸೋದ್ಯಮದ ಅಭಿವೃದ್ಧಿಗಾಗಿ ವಿಚಾರ ಮತ್ತು ಪ್ರಚಾರ
Published On :

ವಿಶ್ವದ ಮೂರನೇ ಅತಿ ದೊಡ್ಡ ಉದ್ಯಮ ಮತ್ತು ಆದಾಯದ ಮೂಲ 'ಪ್ರವಾಸೋದ್ಯಮ' ಎಂದು ಪರಿಣಿತರು ಹೇಳುತ್ತಾರೆ. ಈ ಒಂದು ಉದ್ಯಮದಿಂದ ನೂರಾರು ಉದ್ಯಮಗಳು ಬೆಳೆಯುತ್ತವೆ. ಹಾಗಾಗಿ ನಾನು ಹೈದ್ರಾಬಾದ್ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಕಾರ್ಯದರ್ಶಿಯಾಗಿ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸುವ ಸಲುವಾಗಿ ಭಾರತೀಯ ಪುರಾತತ್ವ ಇಲಾಖೆ, ವಾರ್ತಾ ಇಲಾಖೆ, ಉದ್ಯಮಿಗಳು, ಟ್ರಾವೆಲ್ ಏಜೆಂಟರು, ಪ್ರಾಧ್ಯಾಪಕರು ಮತ್ತು ಸ್ವಯಂ ಸೇವಾ ಸಂಸ್ಥೆಗಳಿಂದ ನೂರ ಐವತ್ತು ಪರಿಣತರನ್ನು ಆಹ್ವಾನಿಸಿ ಒಂದು ವಿಚಾರ ಸಂಕೀರ್ಣವನ್ನು ಏರ್ಪಡಿಸಿದೆ. ಪ್ರವಾಸೋದ್ಯಮ ಅಭಿವೃದ್ಧಿಯಿಂದ ಹೈದ್ರಾಬಾದ್ ಕರ್ನಾಟಕದ ಜನರಲ್ಲಿ ಆರ್ಥಿಕ ಸ್ವಾವಲಂಬನೆ ಹೆಚ್ಚಿಸಬಹುದು, ಸಾಮಾಜಿಕ ಐಕ್ಯತೆ, ಸಾಂಸ್ಕೃತಿಕ ಬೆಳವಣಿಗೆಯಾಗುತ್ತದೆ, ಇನ್ನು ಉದ್ಯೋಗಾವಕಾಶಗಳು ಸೃಷ್ಟಿಯಾಗಬಹುದು ಎಂಬುದು ಎಲ್ಲರ ಮನದಾಶಯವಾಗಿತ್ತು. ಈ ನಿಟ್ಟಿನಲ್ಲಿ ವಿನೂತನವಾಗಿ "ವಿಚಾರ, ಆಚಾರ ಮತ್ತು ಪ್ರಚಾರ" ಎನ್ನುವ ಧ್ಯೇಯೋದ್ದೇಶವನ್ನು ಹೊಂದಿ ಶ್ರಮಿಸಬೇಕು ಎಂದು ನಿಶ್ಚಯಿಸಲಾಯಿತು.
"ವಿಚಾರ" ಎಂಬ ಶೀರ್ಷಿಕೆಯಡಿಯಲ್ಲಿ ಹೈದ್ರಾಬಾದ್ ಕರ್ನಾಟಕ ಅಭಿವೃದ್ಧಿಗಾಗಿ ಪ್ರವಾಸೋದ್ಯಮದ ಕುರಿತು ಸಾಕಷ್ಟು ಮಾಹಿತಿಯನ್ನು ಸಂಗ್ರಹಿಸುವುದು, ಕಮ್ಮಟಗಳನ್ನು ಏರ್ಪಡಿಸುವುದು, ವಿಚಾರ ಸಂಕಿರಣಗಳನ್ನು ವ್ಯವಸ್ಥೆಗೊಳಿಸುವುದು, ಅನುಭವಿ ಪ್ರವಾಸೋದ್ಯಮ ಚಿಂತಕರನ್ನು ಸಂಪರ್ಕಿಸುವುದು ಎಂದು ನಿರ್ಧರಿಸಲಾಯಿತು. 'ಆಚಾರ' ಶೀರ್ಷಿಕೆಯ ಅಡಿಯಲ್ಲಿ ಕಾರ್ಯರೂಪಕ್ಕೆ ತರುವ ವ್ಯವಸ್ಥೆಗಳನ್ನು ಮಾಡುವ ಬಗ್ಗೆ ಯೋಜನೆಗಳನ್ನು ರೂಪಿಸಲಾಯಿತು. ಉದಾಹರಣೆಗೆ ಯೋಗ್ಯವಾದ ಸಂಬಳ, ವಾಹನ, ಕಚೇರಿ, ಸಿಬ್ಬಂದಿ ವರ್ಗ ಮುಂತಾದ ಅಚ್ಚುಕಟ್ಟಾದ ವ್ಯವಸ್ಥೆಗಳನ್ನು ರೂಪಿಸಿ, ಪ್ರವಾಸೋದ್ಯಮ ಅಭಿವೃದ್ಧಿಯ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿಕೊಳ್ಳುವಂಥ ಒಬ್ಬ ಅನುಭವಿ ಉಪನ್ಯಾಸಕರನ್ನು ನೇಮಿಸಿ, ಅವರ ಮಾರ್ಗದರ್ಶನದಲ್ಲಿ ಕಾರ್ಯಕಾರಿ ಮಂಡಳಿ ಕೆಲಸ ಮಾಡುವಂತೆ ಏರ್ಪಾಡು ಮಾಡುವುದು. "ಪ್ರಚಾರ" ಶೀರ್ಷಿಕೆಯಡಿಯಲ್ಲಿ ಹೈದ್ರಾಬಾದ್ ಕರ್ನಾಟಕ ಭಾಗದಲ್ಲಿ ಬರುವ ಅನೇಕ ಪ್ರವಾಸಿ ತಾಣಗಳ ಬಗ್ಗೆ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಚಾರ ಕೈಗೊಳ್ಳಬೇಕು, ಅವುಗಳ ಮಹತ್ವವನ್ನು ಪರಿಚಯಿಸಬೇಕು, ಐತಿಹಾಸಿಕ ಸಾಮಾಜಿಕ ದೃಷ್ಟಿಕೋನದಿಂದ ಮೂರು ಹಂತಗಳಲ್ಲಿ, ಒಂಬತ್ತು ವರ್ಷಗಳಲ್ಲಿ ಕೆಳಕಂಡ ವಿಷಯಗಳಿಗೆ ಒತ್ತುಕೊಡಬೇಕು ಎಂದು ನಿರ್ಧರಿಸಲಾಯಿತು.
* ಆಚಾರ, ವಿಚಾರದ ನಂತರ ಪ್ರಚಾರವನ್ನು ಹೈದ್ರಾಬಾದ್ ಕರ್ನಾಟಕ ಅಭಿವೃದ್ಧಿ ಕೇಂದ್ರದ ಮೂಲಕ ಅನುಷ್ಠಾನಕ್ಕೆ ತರುವುದು.
* ರಾಜ್ಯದ ಪ್ರವಾಸೋದ್ಯಮ ನಿರ್ದೇಶಕರು ಹಾಗೂ ಆಯುಕ್ತರು ಪ್ರತಿ ಜಿಲ್ಲೆಗೆ ಪ್ರೇಕ್ಷಣೀಯ ಸ್ಥಳಗಳ ಕಿರುಹೊತ್ತಿಗೆ ತಯಾರಿಸಿ ಕೇಂದ್ರದ ವತಿಯಿಂದ ವಿಶೇಷ ಪ್ರವಾಸಿ ಸರ್ಕಿಟ್ ಅನ್ನು ಪ್ರಚಾರಗೊಳಿಸಲು ಕಾರ್ಯಪ್ರವೃತ್ತರಾಗುವುದು.
* ಹೈದ್ರಾಬಾದ್ ಕರ್ನಾಟಕ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾದ ಬಸವರಾಜ ಪಾಟೀಲ ಸೇಡಂ ಅವರ ವತಿಯಿಂದ ತಯಾರಿಸಲಾದ ವಿಭಾಗದ ಜಿಲ್ಲಾವಾರು ಪ್ರವಾಸಿ ತಾಣಗಳ ಪುಸ್ತಕ ಹಾಗೂ ಸಿ.ಡಿ.ಗಳನ್ನು ಪ್ರವಾಸೋದ್ಯಮ ಇಲಾಖೆಗೆ ಬಳಸಲು ನೀಡುವುದು.
* ಶರಣಬಸವೇಶ್ವರ ಕಾಲೇಜ್ ಆಫ್ ಆರ್ಟ್ಸ್‌ನಲ್ಲಿ, ಪ್ರವಾಸೋದ್ಯಮ ಸ್ನಾತಕೋತ್ತರ ವಿಭಾಗದಿಂದ ಪ್ರವಾಸೀ ಗೈಡ್‌ಗಳಿಗೆ ತರಬೇತಿ ನೀಡಲು ಕ್ರಮ ಜರುಗಿಸುವುದು.
* ಡಾ.ನಂಜುಂಡಪ್ಪ ವರದಿಯಲ್ಲಿ ಹೇಳಿರುವಂತೆ ವಿಶೇಷ ಅಭಿವೃದ್ಧಿ ಯೋಜನೆಯ ಅಡಿಯಲ್ಲಿ ಪ್ರೇಕ್ಷಣೀಯ ಸ್ಥಳಗಳಿಗೆ ರಸ್ತೆ, ನೀರು, ವಿಶ್ರಾಂತಿ ಗೃಹ ಒದಗಿಸುವುದು.
*   ರಾಷ್ಟ್ರ ಮಟ್ಟದಲ್ಲಿ Incredible India ಮಾದರಿಯಲ್ಲಿ ಪ್ರಚಾರವಾದರೆ ಹತ್ತು ಪಟ್ಟು ಪ್ರವಾಸೋದ್ಯಮ ವೃದ್ಧಿಯಾಗುವ ಹಿನ್ನಲೆಯಲ್ಲಿ ಇಡೀ ರಾಷ್ಟ್ರದಲ್ಲಿ ಲಭ್ಯವಿಲ್ಲದ ಕೆಲವು ಸ್ಥಳಗಳನ್ನು ಗುರುತಿಸುವುದು.
* ಅಂತಾರಾಷ್ಟ್ರೀಯ ಪ್ರವಾಸಿಗಳ ಅನುಕೂಲತೆಗಾಗಿ ಹಂಪಿಯಿಂದ ಈಚೆಗೆ ಹೈದ್ರಾಬಾದ್ ಕರ್ನಾಟಕ ಪ್ರದೇಶದ ಇನ್ನುಳಿದ ಪ್ರವಾಸಿ ತಾಣಗಳನ್ನು ಆಕರ್ಷಿಸಲು, ಅತಿ ಹತ್ತಿರದ ವಿಮಾನ ನಿಲ್ದಾಣ ಹೈದ್ರಾಬಾದ್‌ಗೆ ಹೋಗುವ ದಾರಿಯ ಸುತ್ತಮುತ್ತ, ಏಳು ಅದ್ಭುತ ಪ್ರವಾಸಿ ತಾಣಗಳ ಬಗ್ಗೆ ಒಂದು ಕಿರುಹೊತ್ತಿಗೆಯನ್ನು ತಯಾರಿಸಿ ಪ್ರಚಾರ ನೀಡುವುದು.
* ಹೈದ್ರಾಬಾದಿನಿಂದ ರಾಯಚೂರು ಹಾಗೂ ಬಿಜಾಪುರದಿಂದ ಬೀದರ್ ಸರ್ಕಿಟ್‌ಗಳನ್ನು ಅಭಿವೃದ್ಧಿಗೊಳಿಸಲು ಕಿರುಹೊತ್ತಿಗೆಗಳನ್ನು ಹೈದ್ರಾಬಾದ್ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಹಾಗೂ ಗುಲಬರ್ಗಾ ವಿಶ್ವವಿದ್ಯಾಲಯದ ಸಹಭಾಗಿತ್ವದಲ್ಲಿ ತಯಾರಿಸುವುದು.
* ಹೈದ್ರಾಬಾದ್ ಕರ್ನಾಟಕ ಭಾಗದಲ್ಲಿ ವೈಶಿಷ್ಟ್ಯತೆಯಿಂದ ಕೂಡಿದ ತಾಣಗಳಾದ ಸನ್ನತಿಯಲ್ಲಿರುವ ಬುದ್ಧನ ಶಾಸನಗಳು, ಮಸ್ಕಿಯಲ್ಲಿರುವ ಅಶೋಕ ಶಾಸನಗಳು, ತಿಂಥಣಿ ಮೌನೇಶ್ವರದಲ್ಲಿರುವ ಹಿಂದು ಮುಸ್ಲಿಮರ ಭಾವ್ಯಕ್ಯತೆಯ ತಾಣ, ಬೀದರ್‌ನ ಮಹಮ್ಮದ್ ಗವಾನ ಮದರಸಾ, ಗುಲಬರ್ಗಾದ ಕೋಟೆಯಲ್ಲಿರುವ ಮಸೀದಿ, ಹೀಗೆ ನೂರಾರು ತಾಣಗಳನ್ನು ಗುರುತಿಸಿ, ಪ್ರವಾಸಿ ತಾಣಗಳ ಮಾಹಿತಿ, ಕರಪತ್ರ ಹಾಗೂ ನಕಾಶೆಗಳನ್ನು ತಯಾರಿಸುವುದು, ಜೊತೆಗೆ ಮಾಹಿತಿ ಕೇಂದ್ರಗಳನ್ನು ಸ್ಥಾಪಿಸಿ, ಸುರಕ್ಷತೆ ಮತ್ತು ಸಂರಕ್ಷಣೆ ಕೈಗೆತ್ತಿಕೊಳ್ಳುವುದು. ಪುರಾತತ್ವ ವಸ್ತುಗಳ ಸಂರಕ್ಷಣೆಯ ಜೊತೆಗೆ ಇನ್ನೂ ಹೆಚ್ಚು ಸಂಶೋಧನೆಗಳಿಗೆ ಒತ್ತು ಕೊಡುವುದು.
* ಪ್ರವಾಸಿ ತಾಣಗಳಿಗೆ ಸಾರಿಗೆ-ಸಂಪರ್ಕ ಒದಗಿಸಿಕೊಡುವ ವ್ಯವಸ್ಥೆಯಾಗಬೇಕು. ಪ್ರವಾಸಿ ತಾಣಗಳಲ್ಲಿ ಮೂಲಭೂತ ಸೌಕರ್ಯಗಳಾದ ವಿದ್ಯುತ್, ಕುಡಿಯುವ ನೀರು, ಶೌಚಾಲಯ, ಉಪಹಾರ ಕೇಂದ್ರಗಳು, ವಸತಿ ಗೃಹಗಳನ್ನು ಕಡಿಮೆ ದರದಲ್ಲಿ ಪ್ರವಾಸಿಗರಿಗೆ ಒದಗಿಸಿಕೊಡುವುದು. ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರಿಗೆ ತಿಳಿಸಿಕೊಡಲು ಗೈಡ್‌ಗಳಾಗಿ ಕೆಲಸ ಮಾಡಲು ಕನಿಷ್ಠ ಉದ್ಯೋಗ ಒದಗಿಸುವ ಅವಕಾಶ ಇರುತ್ತದೆ.
ಮೇಲೆ ಹೇಳಿದ ಯೋಜನೆಗಳ ಅನುಷ್ಠಾನಕ್ಕಾಗಿ ಹಣವನ್ನೂ ಮಂಜೂರು ಮಾಡಲಾಯಿತು. ಗುಲ್ಬರ್ಗಾ ಜಿಲ್ಲೆಯ ಅಪ್ಪನಕೆರೆ ಪ್ರದೇಶದಲ್ಲಿ ಉದ್ಯಾನ ಅಭಿವೃದ್ಧಿ ಕಾಮಗಾರಿಗಾಗಿ ರು. 60.99ಲಕ್ಷ, ಗುಲ್ಬರ್ಗಾ ಜಿಲ್ಲೆಯ ಛಾಯಾಭಗವತಿ ಪ್ರದೇಶದಲ್ಲಿ ಉದ್ಯಾನ ಅಭಿವೃದ್ಧಿ ಕಾಮಗಾರಿಗಾಗಿ ರು. 58.82 ಲಕ್ಷ, ಚಿಂಚೋಳಿಯ ಚಂದ್ರಂಪಳ್ಳಿ ಪ್ರದೇಶದಲ್ಲಿ ಉದ್ಯಾನ ಅಭಿವೃದ್ಧಿ ಕಾಮಗಾರಿಗಾಗಿ ರು. 71.32 ಲಕ್ಷ, ಯಾದಗಿರಿ ತಾಲೂಕಿನ ಸಣ್ಣ ಕೆರೆ ಬಳಿ ಉದ್ಯಾನ ಅಭಿವೃದ್ಧಿ ಕಾಮಗಾರಿಗಾಗಿ ರು. 202.47 ಲಕ್ಷ ಬಿಡುಗಡೆ ಮಾಡಲಾಯಿತು.
ಗಾಣಗಾಪುರದ ದತ್ತಾತ್ರೇಯ ದೇವಾಲಯಕ್ಕೆ ಭೇಟಿ ನೀಡುವ ಪ್ರವಾಸಿಗರ ಅನುಕೂಲಕ್ಕಾಗಿ ವಸತಿ, ಶೌಚಾಲಯ ಮತ್ತು ಕುಡಿಯುವ ನೀರಿನ ಸೌಲಭ್ಯಗಳನ್ನು ಒದಗಿಸಲು ಸೂಕ್ತ ನಿವೇಶನಗಳನ್ನು ಒದಗಿಸುವಂತೆ ಜಿಲ್ಲಾ ಆಡಳಿತವನ್ನು ಕೋರಲಾಯಿತು. ಜಿಲ್ಲಾಧಿಕಾರಿಗಳು ಸದರಿ ಸೌಲಭ್ಯಗಳನ್ನು ನಿರ್ಮಿಸಲು ಐದು ಎಕರೆ ಜಮೀನನ್ನು ಒದಗಿಸಿದರು. ಜಿಲ್ಲೆಯಲ್ಲಿ ಪ್ರವಾಸಿ ಸ್ಥಳಗಳನ್ನು ಸಂಪರ್ಕಿಸುವ ಕೂಡು ರಸ್ತೆಗಳಾದ ಕುಸ್ನೂರು ಗ್ರಾಮದಿಂದ ಸಿದ್ದಾರ್ಥ ಸಮುದಾಯ ಭವನಕ್ಕೆ ಹಾಗೂ ವಾಡಿಯಿಂದ ಗುಲಬರ್ಗಾವರೆಗೆ ಇರುವ ರಸ್ತೆಗಳನ್ನು ಅಭಿವೃದ್ಧಿ ಪಡಿಸಲು ರು. ಒಂದು ನೂರು ಲಕ್ಷ ಅನುದಾನವನ್ನು ಬಿಡುಗಡೆ ಮಾಡಲಾಯಿತು.
2009-10ನೇ ಸಾಲಿನಲ್ಲಿ ಪ್ರವಾಸಿ ಸೌಲಭ್ಯವನ್ನು ಎಸ್‌ಡಿಪಿ ಅಭಿವೃದ್ಧಿಪಡಿಸಲು ಅನುದಾನವನ್ನು ಬಿಡುಗಡೆ ಮಾಡಲು ಕ್ರಿಯಾ ಯೋಜನೆಯಲ್ಲಿ ಸೇರಿಸಿಕೊಳ್ಳಲಾಯಿತು. ಅದರಂತೆ ಗುಲಬರ್ಗಾ ಜಿಲ್ಲೆಯ ಹುಣಸಳಹೊಳೆ ಗ್ರಾಮದ ಯೋಗೀಶ್ವರ ಯಾಗ್ನ್ಯವಲ್ಕ ಖುಷಿಗಳ ಕ್ಷೇತ್ರದ ಬಳಿ ಅಂದಾಜು ರು. ನೂರ ಇಪ್ಪತ್ತು ಲಕ್ಷಗಳ ವೆಚ್ಚದಲ್ಲಿ ಯಾತ್ರಿ ನಿವಾಸ ನಿರ್ಮಾಣ ಮಾಡುವುದು, ಮರ್ತೂರಿನ ವಿಘ್ನಾನೇಶ್ವರ ಉದ್ಯಾನವನದ ಬಳಿ ಅಂದಾಜು ರು. ಒಂದು ನೂರು ಲಕ್ಷಗಳ ವೆಚ್ಚದಲ್ಲಿ ಪ್ರವಾಸಿ ಸೌಲಭ್ಯ, ಯಾದಗಿರಿ ತಾಲೂಕು ವಿಶ್ವಾರಾಧ್ಯ ಸಿದ್ದಿ ಸಂಸ್ಥಾನ ಅಬ್ಬೆ ಬಳಿ ಅಂದಾಜು ರು. ಐವತ್ತು ಲಕ್ಷ ವೆಚ್ಚದಲ್ಲಿ ಪ್ರವಾಸಿ ಸೌಲಭ್ಯ, ಆಳಂದ ತಾಲೂಕು ಸುಕ್ಷೇತ್ರ ನರೋಣ ಬಳಿ ಅಂದಾಜು ರು. ನಲವತ್ತು ಲಕ್ಷಗಳ ವೆಚ್ಚದಲ್ಲಿ ಡಾರ್ಮೆಟರಿ ಸೌಲಭ್ಯ ಕಲ್ಪಿಸುವುದೆಂದು ನಿರ್ಧರಿಸಲಾಯಿತು.
ರಾಯಚೂರು ಜಿಲ್ಲೆಯ ಕೆಲವು ಪ್ರವಾಸಿ ತಾಣಗಳಾದ ಬೋಳಮಾನದೊಡ್ಡಿಯ ಬಳಿ ರು. ಹದಿನೈದು ಲಕ್ಷಗಳ ವೆಚ್ಚದಲ್ಲಿ ಪ್ರವಾಸಿ ಸೌಲಭ್ಯ ಕಲ್ಪಿಸುವುದು, ಬುದನ್ನಿ ಶ್ರೀ ಕ್ಷೇತ್ರ ಮಾಧವ ತೀರ್ಥ ಬೃಂದಾವನದ ಬಳಿ ಯಾತ್ರಿ ನಿವಾಸ ಕಲ್ಪಿಸಲು ರು. ಇಪ್ಪತ್ತು ಲಕ್ಷಗಳನ್ನು ಬಿಡುಗಡೆ ಮಾಡಲಾಯಿತು.
ಬೀದರ್ ನಗರದ ಸಮೀಪದಲ್ಲಿರುವ ಪಾಪನಾಶ ದೇವಾಲಯದಲ್ಲಿ ಪ್ರವಾಸಿ ಸೌಲಭ್ಯ ನಿರ್ಮಿಸಲು ಹಾಗೂ ಬೀದರ್ ಸುತ್ತಮುತ್ತ ಪ್ರವಾಸೋದ್ಯಮ ಸೌಲಭ್ಯಗಳನ್ನು ಕಲ್ಪಿಪಿಸಲು ರು. ಒಂದು ನೂರು ಲಕ್ಷಗಳನ್ನು ಮತ್ತು ಬೀದರ್ ನಗರ, ಜಿಲ್ಲೆಯಲ್ಲಿನ ಪ್ರವಾಸಿ ತಾಣಗಳ ಮೂಲಭೂತ ಸೌಕರ್ಯ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ರು. ಒಂದುನೂರು ಲಕ್ಷಗಳನ್ನು ಬಿಡುಗಡೆ ಮಾಡಲಾಯಿತು. ಬೀದರ್ ಜಿಲ್ಲೆಯ ಕಾರಂಜ ಡ್ಯಾಂ ಪ್ರವಾಸಿ ಸೌಲಭ್ಯಗಳನ್ನು ಕಲ್ಪಿಸಲು ರು. ನೂರ ಐವತ್ತೇಳು ಲಕ್ಷಗಳನ್ನು ಮಂಜೂರು ಮಾಡಲಾಯಿತು. ಪಾರಂಪರಿಕ ಪ್ರವಾಸೋದ್ಯಮ, ವನ್ಯಜೀವಿ ಪ್ರವಾಸೋದ್ಯಮ, ಸಾಹಸ ಪ್ರವಾಸೋದ್ಯಮ, ಪುಣ್ಯ ಕ್ಷೇತ್ರಗಳ ಪ್ರವಾಸೋದ್ಯಮ ಇತ್ಯಾದಿ ವೈವಿಧ್ಯ ಪ್ರವಾಸೋದ್ಯಮ ಕ್ಷೇತ್ರಗಳನ್ನು ವಿಂಗಡಿಸಿಕೊಂಡು ಅವುಗಳ ಅಭಿವೃದ್ಧಿಗೆ ಕ್ರಮವಹಿಸಲಾಯಿತು.
ಮೇಲ್ಕಂಡ ಪ್ರವಾಸೋದ್ಯಮ ಚಟುವಟಿಕೆಗಳಲ್ಲದೇ ನೂತನವಾಗಿ ಈ ಕ್ಷೇತ್ರದ ಅಭಿವೃದ್ಧಿಗಾಗಿ ಕೆಲವು ಯೋಜನೆಗಳನ್ನು ತಯಾರಿಸಿ ಕೇಂದ್ರ ಸರ್ಕಾರದ ಧನ ಸಹಾಯಕ್ಕಾಗಿ ಸಲ್ಲಿಸಲಾಯಿತು. ಅವುಗಳೆಂದರೆ, ಬೀದರ್ ನಗರದ ಚೌಕಂಡಿ ಮತ್ತು ಅಷ್ಠೂರು ಗುಮ್ಮಟಗಳ ಅಭಿವೃದ್ಧಿ. ಬೀದರ್ ಕೋಟೆ ಪ್ರದೇಶ ಅಭಿವೃದ್ಧಿ. ಬೀದರನ ಅಮೀರ್ ಬರೀದ್ ಸಮಾಧಿಗಳ ಬಳಿ ಪ್ರವಾಸಿ ಸೌಲಭ್ಯ ಅಭಿವೃದ್ಧಿ. ಗುಲಬರ್ಗಾ ಜಿಲ್ಲೆಯ ಶಹಾಪುರದ ಬಳಿ ಇರುವ ಬುದ್ಧನ ಬೆಟ್ಟದ ಬಳಿ ಪ್ರವಾಸಿ ಅಭಿವೃದ್ಧಿ ಗುಲಬರ್ಗಾ ನಗರದ ಪ್ರವಾಸಿ ಕ್ಷೇತ್ರಗಳ ಬಳಿ ಪ್ರವಾಸಿ ಸೌಲಭ್ಯ ಅಭಿವೃದ್ಧಿ.
ಕೆಲಸ ಮಾಡುವ ಮನಸ್ಸಿದ್ದರೆ ಸಮಾನ ಮನಸ್ಕರನ್ನು ಸುಲಭವಾಗಿ ಆಕರ್ಷಿಸಿ ಉತ್ತಮವಾಗಿ ಕೆಲಸ ಮಾಡಬಹುದು. ನಮ್ಮ ಬಗ್ಗೆ ನಮಗೇ ವಿಶ್ವಾಸ, ನಂಬಿಕೆ ಇರಬೇಕು. ಆಗ ನಮ್ಮ ಸುಪ್ತ ಚೇತನ ಜಾಗೃತಗೊಂಡು ನಮ್ಮಿಂದ ಉತ್ಕೃಷ್ಠ ಕೆಲಸವನ್ನು ಮಾಡಿಸುತ್ತದೆ.
(ಮುಂದುವರೆಯುವುದು)


- ಶಾಲಿನಿ ರಜನೀಶ್, ಐಎಎಸ್
anisikeprabha@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.