ಫೇಸ್ಬುಕ್ ನಲ್ಲಿ ಕಂಡಂತೆ: ಗಾಂಧಿಸೀಟಲ್ಲಿ ಕೇಶವಮೂರ್ತಿ

"ನಾನು ಪ್ರತಿ ಬಾರಿ ಸ್ವಪ್ನ ಬುಕ್ ಹೌಸ್ಗೆ ಹೋಗುತ್ತಿದ್ದಾಗ ಬುಕ್ ತೆಗೆದುಕೊಳ್ಳುವುದಕ್ಕಿಂತ ಮುಂಚೆ ಅಲ್ಲಿದ್ದ ಟಾಪ್ 10 ಬಾಕ್ಸ್ ಕಡೆ ನೋಡುತ್ತಿದ್ದೆ. ಅದನ್ನು ನೋಡದೆ ಬುಕ್ ತೆಗೆದುಕೊಂಡು ಬಂದರೆ ಏನೋ ಒಂಥರಾ ಕಸಿವಿಸಿ ನೋಡಿ. ಮೊನ್ನೆ ಹಾಗೆ ಸ್ವಪ್ನಕ್ಕೆ ಹೋಗಿದ್ದೆ ನಾನು ನೋಡುತ್ತಿದ್ದ ಟಾಪ್ 10 ಪಟ್ಟಿಯಲ್ಲಿ ನನ್ನದೇ ಗಾಂಧಿ ಸೀಟು ಪುಸ್ತಕ ಎರಡನೇ ಸ್ಥಾನದಲ್ಲಿ ಕಂಡಿತು. ಇದಕ್ಕಿಂತ ಮತ್ತೊಂದು ಸಂಭ್ರಮ ಬೇಕಾ?ಅಂದ ಹಾಗೆ ಅಂಕಿತ ಪ್ರಕಾಶನದಲ್ಲಿ ಎರಡು ವಾರ ಟಾಪ್ 10 ಪಟ್ಟಿಯಲ್ಲಿ 9, 6ನೇ ಸ್ಥಾನ"
ಹೀಗೆ ಗಾಂಧಿಸೀಟು ಪುಸ್ತಕದ ಲೇಖಕ ಆರ್. ಕೇಶವಮೂರ್ತಿ ತಮ್ಮ ಅನುಭವವನ್ನು, ಸಂಭ್ರಮವನ್ನು ಫೇಸ್ಬುಕ್ನಲ್ಲಿ ಹಂಚಿಕೊಂಡಿದ್ದಾರೆ. ತಮ್ಮ ಪುಸ್ತಕ ಟಾಪ್ ಟೆನ್ ಪಟ್ಟಿಯಲ್ಲಿ ಕಾಣಿಸಿಕೊಂಡಾಗ ಲೇಖಕನಿಗೆ ಉಂಟಾಗುವ ಖುಷಿ ಅಕ್ಷರಗಳಿಗೆ ನಿಲುಕದ್ದು. ಬುಕ್ ಸ್ಟಾಲ್ಗಳಲ್ಲಿ ಟಾಪ್ ಟೆನ್ ಬಾಕ್ಸ್ನಲ್ಲಿ ಇನ್ನಿತರ ಲೇಖಕರ ಪುಸ್ತಕಗಳು ರಾರಾಜಿಸುವಾಗ ಮುಂದೊಂದು ದಿನ ನನ್ನ ಪುಸ್ತಕವೂ ಈ ಟಾಪ್ಟೆನ್ ಬಾಕ್ಸ್ನಲ್ಲಿರಬೇಕು ಎನ್ನುವ ಅದಮ್ಯ ಆಸೆ ಪ್ರತಿಯೊಬ್ಬ ಬರಹಗಾರನಲ್ಲೂ ಇರುತ್ತದೆ. ಅಂದಹಾಗೆ ಕೇಶವಮೂರ್ತಿಯವರ ಆಸೆ ನೆರವೇರಿದೆ.
ಆಂಧ್ರದ ಗಡಿ ಪ್ರದೇಶಕ್ಕೆ ನಾಲ್ಕು ಫರ್ಲಾಂಗಿನಷ್ಟು ದೂರದಲ್ಲಿರುವ ಕೋಲಾರ ಜಿಲ್ಲೆಯ, ಮುಳಬಾಗಿಲು ತಾಲೂಕಿನ, ಪುಲಿಪಾಪೇನಹಳ್ಳಿ ಎಂಬ ಕುಗ್ರಾಮದಿಂದ ಬಂದ ಕೇಶವಮೂರ್ತಿ ಎಂಬ ಈ ಪತ್ರಕರ್ತ ಸದ್ದಿಲ್ಲದೇ ಸಿನಿಮಾ ಪತ್ರಕರ್ತರಾಗಿ ಬೆಳೆದವರು. ಎಳೆವೆಯಿಂದಲೇ ಸಿನಿಮಾದತ್ತ ಆಸಕ್ತಿ ಹೊಂದಿದ್ದ ಕೇಶವಮೂರ್ತಿ ಅವರ ಆಸೆಗಳಿಗೆ ಆಸರೆಯಾಗಿದ್ದು ಬೆಂಗಳೂರಿನ ಸಿನಿಮಾ ಪತ್ರಿಕೋದ್ಯಮ. ಹೊಟ್ಟೆಪಾಡಿಗಾಗಿ ತನ್ನೂರನ್ನು ಬಿಟ್ಟು ಬೆಂಗಳೂರಿನಲ್ಲಿ ಪತ್ರಿಕಾ ವರದಿಗಾರನಾಗಿ ಸೇರಿದ ಮೇಲೆಯೇ ಗಾಂಧಿನಗರ ಪರಿಚಯವಾಗಿದ್ದು. ಸಿನಿಮಾದವರ ನಂಟು ಬೆಳೆಯಿತು. 'ಇಂದು ಸಂಜೆ', ಈಟಿವಿ, ಉದಯವಾಣಿ ಅಂತ ಓಡಾಡಿಕೊಂಡಿದ್ದ ಅವರಿಗೆ ನೆರಳಾಗಿದ್ದು ಕನ್ನಡಪ್ರಭ. ಕನ್ನಡಪ್ರಭ ಸಾಪ್ತಾಹಿಕ ಪುರವಣಿಯಲ್ಲಿ ಪ್ರತೀ ವಾರ ಪ್ರಕಟವಾಗುತ್ತಿದ್ದ ಗಾಂಧಿಸೀಟು ಅಂಕಣಗಳ ಸಂಗ್ರಹವೇ 'ಗಾಂಧಿಸೀಟು' ಎಂಬ ಈ ಪುಸ್ತಕ. ತಾನು ನೋಡಿದ ಚಿತ್ರಗಳ ಬಗ್ಗೆ ವಿಮರ್ಶೆಯ ಚೌಕಟ್ಟುಗಳಿಲ್ಲದೆಯೇ ತನ್ನ ಗ್ರಹಿಕೆಯನ್ನು, ಅಭಿಪ್ರಾಯಗಳನ್ನು ದಾಖಲಿಸುತ್ತಾ ಗಾಂಧಿಸೀಟು ಅಂಕಣದ ಮೂಲಕ ಕೇಶವಮೂರ್ತಿ ಜಗತ್ತಿನ ಎಲ್ಲ ಭಾಷೆಗಳ ಸಿನಿಮಾಗಳನ್ನು ಓದುಗರಿಗೆ ಪರಿಚಯಿಸಿದ್ದಾರೆ. ಯಾವುದೇ ಭಾಷೆಯ ಸಿನಿಮಾ ಇರಲಿ, ಅದನ್ನು ಸರಳವಾದ ಭಾಷೆಯಲ್ಲಿ ಹೇಳುವ ಮೂಲಕ ಓದುಗರಿಗೆ ಗಾಂಧಿಸೀಟಿನಲ್ಲಿ ಕುಳಿತುಕೊಂಡೇ ಜಾಗತಿಕ ಸಿನಿಮಾವನ್ನು ತೋರಿಸಿದ ಕೀರ್ತಿ ಕೇಶವಮೂರ್ತಿಯವರಿಗೆ ಸಲ್ಲಬೇಕು.
ಪ್ರಸ್ತುತ ಕೃತಿಯ ಮುನ್ನುಡಿಯಲ್ಲಿ ಖ್ಯಾತ ಚಲನಚಿತ್ರ ನಿರ್ದೇಶಕ ಪಿ.ಶೇಷಾದ್ರಿಯವರು "ನಾನು ಇಲ್ಲಿಯ ಬರಹಗಳನ್ನು ಓದುವ ಚಿತ್ರಗಳೆಂದು ಕರೆಯುತ್ತೇನೆ" ಎಂದಿದ್ದಾರೆ. ಪುಸ್ತಕವನ್ನು ಓದುತ್ತಿದ್ದಂತೆ ಶೇಷಾದ್ರಿಯವರ ಮಾತು ಅಕ್ಷರಶಃ ನಿಜ ಎಂದೆನಿಸುತ್ತದೆ. ಏತನ್ಮಧ್ಯೆ, ಸದ್ದಿಲ್ಲದೆ ಸುದ್ದಿಯಾಗುತ್ತಿರುವ ಗಾಂಧಿಸೀಟು ಕೃತಿ ಇದೀಗ ಮರುಮುದ್ರಣಕ್ಕೆ ಸಜ್ಜಾಗುತ್ತಿರುವುದು ಖುಷಿಯ ವಿಚಾರ. ಈ ಸಂದರ್ಭದಲ್ಲಿ ಗಾಂಧಿಸೀಟು ಇನ್ನಷ್ಟು ಯಶಸ್ಸನ್ನು ಕಾಣಲಿ, ಕೇಶವಮೂರ್ತಿಯ ಲೇಖನಿಯಿಂದ ಇನ್ನಷ್ಟು ಕೃತಿಗಳು ಹೊರಬಂದು ಎಲ್ಲವೂ ಟಾಪ್ಟೆನ್ ಪಟ್ಟಿಯಲ್ಲಿ ರಾರಾಜಿಸಲಿ ಎಂಬುದೇ ಹಾರೈಕೆ.
ಈವಾರ ಫೇಸ್ಬುಕ್ ನಲ್ಲಿ ಕಂಡಂತೆ ಅಂಕಣದ ವಿಷಯಕ್ಕೆ ಆಯ್ದುಕೊಂಡ ಸ್ಟೇಟಸ್ ಕೇಶವಮೂರ್ತಿ ಅವರದ್ದು
ಅವರ ಪರಿಚಯ
ಕೇಶವಮೂರ್ತಿ
ಸಿನಿಮಾ ಪತ್ರಕರ್ತ
ಕನ್ನಡಪ್ರಭ
ಬೆಂಗಳೂರು
-ರಶ್ಮಿ ಕಾಸರಗೋಡು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


