ಬದಲಿ ವ್ಯವಸ್ಥೆ ನೋಡದೆಯೇ ಲ್ಯಾಪ್ಟಾಪ್ ಕೊಡುವುದೇಕೆ?

ತೀರಾ ಇತ್ತೀಚೆಗಷ್ಟೇ ಆರ್ಥಿಕ ಮಿತವ್ಯಯದ ಮಂತ್ರ ಜಪಿಸಿದ್ದ ರಾಜ್ಯ ಸರ್ಕಾರ ವೆಚ್ಚ ತಗ್ಗಿಸುವ ಸಲುವಾಗಿ ರೂಪಿಸಿದ್ದ ನಿಯಮಾವಳಿಗಳಲ್ಲಿ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳ ಪೈಕಿ ಶೇ 20 ರಷ್ಟನ್ನು ಮಾತ್ರ ಭರ್ತಿ ಮಾಡುವ ನಿರ್ಣಯವನ್ನೂ ಸೇರಿಸಿತ್ತು. ರಾಜ್ಯ ಸರ್ಕಾರದ ಬೇರೆ ಬೇರೆ ಇಲಾಖೆಗಳಲ್ಲಿ ಪ್ರಸ್ತುತ ಲಕ್ಷಕ್ಕೂ ಮಿಕ್ಕಿ ಖಾಲಿ ಹುದ್ದೆಗಳಿದ್ದರೂ ಅವುಗಳನ್ನು ಭರ್ತಿಮಾಡುವ ಆರ್ಥಿಕ ಚೈತನ್ಯ ಇಲ್ಲದೇ ಇರುವುದರಿಂದ ಆಡಳಿತದ ಸುಸೂತ್ರ ನಿರ್ವಹಣೆ ಹಾಗೂ ನಿರುದ್ಯೋಗಿಗಳ ಬದುಕಿಗೆ ಅಡ್ಡಿ ಉಂಟಾಗುತ್ತಲೇ ಇದೆ. ಆರ್ಥಿಕ ಪರಿಸ್ಥಿತಿ ಈ ಪರಿ ವಿಷಮವಾಗಿದ್ದು, ಉಚಿತ ಕೊಡುಗೆಯ ಯೋಜನೆಗಳ ವಿರುದ್ಧವಾಗಿ ಕೇಂದ್ರ ಯೋಜನಾ ಆಯೋಗ ರಾಜ್ಯಗಳಿಗೆ ಸಲಹೆ ನೀಡಿರುವುದರ ಹೊರತಾಗಿಯೂ ಉಚಿತ ಕೊಡುಗೆಗಳ ಯೋಜನೆಗಳನ್ನು ಜಾರಿಗೊಳಿಸುವಲ್ಲಿ ಮಾತ್ರ ರಾಜ್ಯ ಸರ್ಕಾರ ಹಿಂದೆ ಬಿದ್ದಿಲ್ಲ. ನೂತನ ಸರ್ಕಾರ ಅಸ್ತಿತ್ವಕ್ಕೆ ಬಂದ ಕೇವಲ ಒಂದು ವರ್ಷದ ಅವಧಿಯಲ್ಲಿ ಲೋಕಸಭಾ ಚುನಾವಣೆಯ ಮಹಾಸಮರ ಎದುರಿಸಬೇಕಾಗಿರುವುದರ ಪರಿಣಾಮವೋ ಎಂಬಂತೆ ಇಂತಹ ಹಲವಾರು ಯೋಜನೆಗಳು ಸಮರೋಪಾದಿಯಲ್ಲಿ ಘೋಷಣೆ ಹಾಗೂ ಅನುಷ್ಠಾನಗೊಳ್ಳುತ್ತಲಿವೆ.
ಇದೀಗ ಪಿಯುಸಿ ವಿದ್ಯಾರ್ಥಿಗಳಿಗೆ ಲ್ಯಾಪ್ಟಾಪ್ ನೀಡುವ ಬಹುಕೋಟಿ ವೆಚ್ಚದ ಯೋಜನೆಯೊಂದನ್ನು ಜಾರಿಗೊಳಿಸಲು ಸರ್ಕಾರ ಮುಂದಾಗಿದೆ. ಈ ಯೋಜನೆಗೆ ಸಂಬಂಧಿಸಿದಂತೆ ಅಗತ್ಯ ಪೂರ್ವಸಿದ್ಧತೆ, ಸಾಧಕ-ಬಾಧಕಗಳು, ಪೂರ್ವಾಪರ ಹಾಗೂ ಪ್ರಸ್ತುತತೆಯ ಯಾವುದೇ ಅಂಶಗಳನ್ನು ವಿವೇಚಿಸದೇ ಎಷ್ಟೊಂದು ತರಾತುರಿಯಲ್ಲಿ ಘೋಷಿಸಲಾಗಿದೆಯೆಂದರೆ ಖುದ್ದು ಶಿಕ್ಷಣ ಸಚಿವರ ಗಮನಕ್ಕೆ ಬಂದಿರಲಿಲ್ಲವಂತೆ! ಈಗ ಅಗತ್ಯ ಅನುದಾನ, ಹಂಚಿಕೆ ವಿಧಾನ, ಫಲಾನುಭವಿಗಳ ಆಯ್ಕೆ, ದುರ್ಬಳಕೆ ತಪ್ಪಿಸುವ ಮಾರ್ಗ ಇತ್ಯಾದಿ ಅಂಶಗಳ ಬಗ್ಗೆ ಸಚಿವರಾದಿಯಾಗಿ ಶಿಕ್ಷಣ ಇಲಾಖೆಯ ಅಧಿಕಾರಿಗಳು ಜಿಜ್ಞಾಸೆಯಲ್ಲಿ ಮುಳುಗಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಒಟ್ಟು ವಾರ್ಷಿಕ 15,000 ಕೋಟಿ ಅನುದಾನ ಪಡೆಯುತ್ತಿರುವ ಶಿಕ್ಷಣ ಇಲಾಖೆಯು ಹೆಚ್ಚುವರಿಯಾಗಿ ಇನ್ನು 500 ಕೋಟಿ ರುಪಾಯಿ ಅಗತ್ಯವಿದೆಯೆಂದು ಹೇಳುತ್ತಿದೆ. ಈ ನಡುವೆ 1000-2000 ಕೋಟಿ ವೆಚ್ಚದ ಈ ಯೋಜನೆ ಹೊರೆಯಲ್ಲವೇ? ನಾಗಾಲೋಟದಲ್ಲಿ ಸಾಗುತ್ತಿರುವ ಮಾಹಿತಿ ತಂತ್ರಜ್ಞಾನದ ಸದುಪಯೋಗ ಪಡೆದುಕೊಳ್ಳಲು ನಮ್ಮ ವಿದ್ಯಾರ್ಥಿ ಸಮೂಹಕ್ಕೆ ಅನುವಾಗಲು ಇಂತಹ ಯೋಜನೆಗಳ ಅಗತ್ಯವಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಅದನ್ನು ಜಾರಿಗೊಳಿಸುವಲ್ಲಿನ ನಮ್ಮ ಆಡಳಿತಗಾರರ ಅತಿಯಾದ ಧಾವಂತ ಪ್ರಶ್ನೆಗೆ ಎಡೆಮಾಡಿಕೊಡುತ್ತದೆ.
ಉಪನ್ಯಾಸಕರ ಕೊರತೆ, ಅಸಮರ್ಪಕ ಮೂಲಭೂತ ಸೌಕರ್ಯಗಳ ತೀವ್ರ ಸಮಸ್ಯೆಗಳಿಂದ ನಲುಗುತ್ತಿರುವ ಸರ್ಕಾರಿ ಕಾಲೇಜುಗಳ ಸ್ಥಿತಿ ಶೋಚನೀಯ. ಸರ್ಕಾರ ನಿವಾರಣೆಯ ಭರವಸೆ ನೀಡದಿರುವುದರಿಂದ ಅವುಗಳಿಗೆ ಅಗತ್ಯ ಸಂಪನ್ಮೂಲ ಹೊಂದಿಸಲು ಎಷ್ಟೋ ಕಾಲೇಜುಗಳು ದಾನಿಗಳ, ಉದ್ಯಮಿಗಳ ಸಹಾಯಕ್ಕೆ ದುಂಬಾಲು ಬೀಳುತ್ತಿವೆ. ಇವುಗಳ ಬಗ್ಗೆ ಜಾಣ ನಿರ್ಲಕ್ಷ್ಯ ತೋರುವ ಸರ್ಕಾರ ಪಿಯುಸಿ ವಿದ್ಯಾರ್ಥಿಗಳಿಗೆ ಉಚಿತವಾಗಿ ಲ್ಯಾಪ್ಟಾಪ್ ನೀಡಲು ಸಜ್ಜಾಗುತ್ತಿರುವುದು ಭ್ರಮನಿರಸನ ಉಂಟುಮಾಡುತ್ತಿದೆ. ಅಲ್ಲದೇ, ಪಿಯುಸಿ ಮಟ್ಟದ ವಿದ್ಯಾರ್ಥಿಗಳಿಗೆ ಲ್ಯಾಪ್ಟಾಪ್ನ ಬಳಕೆಯ ಅವಶ್ಯಕತೆಯೂ ಅಷ್ಟಾಗಿ ಇರುವುದಿಲ್ಲ. ಇನ್ನು ಪದವಿ, ಸ್ನಾತಕೋತ್ತರ ಪದವಿ ಓದುವ ವಿದ್ಯಾರ್ಥಿಗಳಿಗಾದರೆ ಅದರ ಅಗತ್ಯವಿದೆಯೆನ್ನಬಹುದು. ಆದಾಗ್ಯೂ ಲ್ಯಾಪ್ಟಾಪ್ ನೀಡಲೇಬೇಕೆಂದಿದ್ದರೆ ನಿರ್ದಿಷ್ಟ ಅಂಕಗಳಿಸಿ ಉತ್ತೀರ್ಣರಾಗುವ ಬಡ ವಿದ್ಯಾರ್ಥಿಗಳಿಗೆ ನೀಡಿದರೆ ಕಲಿಕೆಗೆ ಪ್ರೋತ್ಸಾಹ ಹಾಗೂ ಉತ್ತೇಜನ ದೊರೆಯುವುದಲ್ಲದೇ ಅಂತಹ ವಿದ್ಯಾರ್ಥಿಗಳು ತಮ್ಮ ಮುಂದಿನ ಉನ್ನತ ಶಿಕ್ಷಣದ ಅವಧಿಯಲ್ಲಿ ಅದರ ಸದುಪಯೋಗವನ್ನು ಪಡೆದುಕೊಳ್ಳುತ್ತಾರೆ. ಹೊರತಾಗಿ ಎಲ್ಲಾ ವಿದ್ಯಾರ್ಥಿಗಳಿಗೂ ಉಚಿತವಾಗಿ ಲ್ಯಾಪ್ಟಾಪ್ ಹಂಚಿದರೆ ಉಚಿತ ಸೈಕಲ್, ಅಕ್ಕಿಯನ್ನು ಮಾರಾಟ ಮಾಡಿಕೊಂಡಂತೆ ಇದೂ ದುರುಪಯೋಗವಾಗುವ ಸಾಧ್ಯತೆ ದಟ್ಟವಾಗಿದೆ.
ಸಾಮಾಜಿಕ ಜಾಲತಾಣ ಹಾಗೂ ಇಂಟರ್ನೆಟ್ ವ್ಯವಸ್ಥೆಯ ದುರುಪಯೋಗವನ್ನು ತಪ್ಪಿಸುವ ಸಲುವಾಗಿ ವೈಫೈ ವ್ಯವಸ್ಥೆ ಮಾಡಿದರೆ ಅದರ ಬಳಕೆ ಕಾಲೇಜಿಗೆ ಸೀಮಿತವಾಗುತ್ತದೆ. ಅಲ್ಲದೇ ಸಾಮಾಜಿಕ ಜಾಲತಾಣಗಳ ಬಳಕೆಯ ಗೀಳು ಅಂಟಿಸಿಕೊಂಡವರು ಬದಲಿ ಇಂಟರ್ನೆಟ್ ವ್ಯವಸ್ಥೆ ಮಾಡಿಕೊಳ್ಳದೆ ಇರಲಾರರು. ಅದರ ಬಗ್ಗೆ ನಿಗಾವಹಿಸುವುದು ಹೇಗೆ? ಅಲ್ಲದೇ ಅಂತರ್ಜಾಲ ತಾಣಗಳ ಬಳಕೆ ಮೇಲೆ ತಾಂತ್ರಿಕ ಮಿತಿ ಹೇರಿದರೆ ಸದುದ್ದೇಶಗಳಿಗೆ ಅದೊಂದು ಕೊರತೆಯಾಗಿ ಪರಿಣಮಿಸದೇ? ತಮಿಳುನಾಡು ಹಾಗೂ ಉತ್ತರ ಪ್ರದೇಶಗಳಲ್ಲಿ ಲ್ಯಾಪ್ಟಾಪನ್ನು ವಿತರಿಸಿದ ಮಾತ್ರಕ್ಕೆ ಯಶಸ್ವೀ ಯೋಜನೆ ಎಂದು ಪರಿಗಣಿಸಲಾಗಿದೆಯೇ ಹೊರತು ಅದರ ಬಳಕೆಯಿಂದಾದ ಪ್ರಯೋಜನಗಳು, ಶೈಕ್ಷಣಿಕ ಸ್ಥಿತಿಯಲ್ಲಿನ ಪ್ರಗತಿ ಇತ್ಯಾದಿ ಅಂಶಗಳು ಇನ್ನಷ್ಟೇ ಹೊರಬೀಳಬೇಕಲ್ಲವೇ? ಅಂದ ಮೇಲೆ ಅಲ್ಲಿನ ಯಥಾವತ್ತು ಯೋಜನೆಯನ್ನು ನಮ್ಮಲ್ಲೂ ಜಾರಿಗೆ ತರುವ ಔಚಿತ್ಯವೇನು? ಉತ್ತರ ಪ್ರದೇಶದಲ್ಲಿ ಅಖಿಲೇಶ್ ಮತ್ತು ಮುಲಾಯಂರವರ ಭಾವಚಿತ್ರವಿರುವ ಪರದೆಯನ್ನು ಬದಲಿಸಲು ಪ್ರಯತ್ನಿಸಿದ ಹಲವು ವಿದ್ಯಾರ್ಥಿಗಳ ಲ್ಯಾಪ್ಟಾಪ್ಗಳಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು ಯೋಜನೆಯ ಹಿಂದಿನ ರಾಜಕೀಯ ಲಾಲಸೆಯನ್ನು ಬೆತ್ತಲುಗೊಳಿಸಿದೆ.
ವಿದ್ಯಾರ್ಥಿಗಳು ಕಂಪ್ಯೂಟರ್ ಬಳಕೆಗೆ ಹೆಚ್ಚೆಚ್ಚು ತೆರೆದುಕೊಳ್ಳಬೇಕು, ಅದರ ಪ್ರಯೋಜನ ಪಡೆದುಕೊಳ್ಳಬೇಕೆಂಬ ಪ್ರಾಮಾಣಿಕ ಕಾಳಜಿ ಸರ್ಕಾರದ್ದಾಗಿದ್ದರೆ ಸುಲಭವಾಗಿ ಬಳಕೆಗೆ ದೊರಕುವಂತೆ ಕಾಲೇಜುಗಳಲ್ಲಿ, ಪ್ರೌಢ ಹಾಗೂ ಪ್ರಾಥಮಿಕ ಹಂತದಲ್ಲಿಯೇ ವಿದ್ಯಾರ್ಥಿಗಳ ಪ್ರಮಾಣಕ್ಕೆ ಅನುಗುಣವಾಗಿ ಸಾಕಷ್ಟು ಸಂಖ್ಯೆಯ ಕಂಪ್ಯೂಟರ್ಗಳನ್ನು ಹೊಂದಿರುವ ಸುಸಜ್ಜಿತ ಕಂಪ್ಯೂಟರ್ ಕೇಂದ್ರ ತೆರೆಯಬಹುದು. ಅದರೊಂದಿಗೆ ಪ್ರತೀ ಗ್ರಾಮಗಳಲ್ಲಿಯೂ ಅಗತ್ಯಕ್ಕೆ ತಕ್ಕಂತೆ ಒಂದು ಅಥವಾ ಎರಡು ಇಂತಹ ಕಂಪ್ಯೂಟರ್ ಕೇಂದ್ರಗಳನ್ನು ತೆರೆಯುವುದರಿಂದ ವಿದ್ಯಾರ್ಥಿಗಳು ತಮ್ಮ ಬಿಡುವಿನ ವೇಳೆಯಲ್ಲಿಯೂ ಕಂಪ್ಯೂಟರ್ ಬಳಸುವಂತೆ, ಅಗತ್ಯ ಮಾಹಿತಿಗಳನ್ನು ಪಡೆಯುವಂತೆ ರೂಪಿಸಬಹುದು. ಅಲ್ಲದೇ ಗ್ರಾಮಕ್ಕೊಂದು ಸೈಬರ್ ಸೆಂಟರ್ ತೆರೆಯಬೇಕೆಂಬ ಗ್ರಾಮೀಣಾಭಿವೃದ್ಧಿ ಇಲಾಖೆಯ ಉದ್ದೇಶ ಈಡೇರುವುದರಿಂದ ಆ ಇಲಾಖೆಯ ಸಹಕಾರವನ್ನೂ ಪಡೆಯಬಹುದು. ಕಂಪ್ಯೂಟರ್ ಕೇಂದ್ರದ ಸೌಲಭ್ಯವನ್ನು ಅಗತ್ಯಕ್ಕೆ ತಕ್ಕಂತೆ ಗ್ರಾಮಸ್ಥರ ಬಳಕೆಗೂ ದೊರಕುವಂತೆ ಮಾಡಬಹುದು. ಈ ಬಗೆಯ ಯೋಜನೆಗಳಿಗೆ ಅಧಿಕ ಸಂಪನ್ಮೂಲ ವ್ಯಯವಾದರೂ ಶಾಶ್ವತ ವ್ಯವಸ್ಥೆಯಾಗಿ ದೂರದೃಷ್ಟಿಯ ಅಗತ್ಯಗಳನ್ನು ಸಾಕಾರಗೊಳಿಸಬಲ್ಲುದು. ಇಂತಹ ಯೋಜನೆಯನ್ನು ಮೊದಲು ಒಂದೆರಡು ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಆರಂಭಿಸಿ ಸಾಧಕ ಬಾಧಕಗಳನ್ನು ಮನಗಂಡು ನಂತರ ಇಡೀ ರಾಜ್ಯಕ್ಕೆ ವಿಸ್ತರಿಸಬಹುದು.
ಶ್ರೀಮಂತರ ಮಕ್ಕಳು ಲ್ಯಾಪ್ಟಾಪ್ ಹಿಡಿದಿದ್ದಾರೆ ಎನ್ನುವುದನ್ನು ಈ ಯೋಜನೆಯ ಅನುಷ್ಠಾನಕ್ಕೆ ಮಾನದಂಡವನ್ನಾಗಿ ಪರಿಗಣಿಸಿ ಉಚಿತ ಲ್ಯಾಪ್ಟಾಪ್ ಅನ್ನು ಬಡ ಮಕ್ಕಳ ಕೈಗಿಟ್ಟು ದಿಕ್ಕುತಪ್ಪಿಸುವುದಕ್ಕಿಂತ, ಅವರ ಅಗತ್ಯಕ್ಕನುಗುಣವಾಗಿ ಬಳಸಲು ಅನುಕೂಲವಾಗುವಂತೆ ಸೂಕ್ತ ಬದಲಿ ವ್ಯವಸ್ಥೆ ಕಲ್ಪಿಸುವುದರಲ್ಲಿಯೂ ಯೋಜನೆಯ ಆಶಯ ನಿರೂಪಿತವಾಗಬಲ್ಲದು. ಪರಿಶೀಲನೆಯ ಹಂತದಲ್ಲಿರುವ ಈ ಯೋಜನೆಯು ರಾಜಕೀಯ ಕಾರಣಕ್ಕಾಗಿ ಆತುರದಲ್ಲಿ ಜಾರಿಯಾಗಿ ಇನ್ನಷ್ಟು ಉಪದ್ವ್ಯಾಪ ಸೃಷ್ಟಿಸುವ ಬದಲು ಅದರ ವಿವಿಧ ಆಯಾಮಗಳನ್ನು ಆಮೂಲಾಗ್ರವಾಗಿ ವಿವೇಚನಾಪೂರ್ಣವಾಗಿ ಪರಿಶೀಲಿಸಿ ಸೂಕ್ತ ಬದಲಾವಣೆಯೊಂದಿಗೆ ಸಾವಧಾನದಿಂದ ಅನುಷ್ಠಾನಕ್ಕೆ ತರುವಲ್ಲಿಯೂ ಯೋಜನೆಯ ಯಶಸ್ಸು ಅಡಗಿರುತ್ತದೆ.
ಸಂದೇಶ್. ಎಚ್. ನಾಯ್ಕ್
ಹಕ್ಲಾಡಿ, ಕುಂದಾಪುರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


