ಖುಷಿ ಕೊಡುವ ಮಕ್ಕಳೇ ಕಣ್ಣೀರನ್ನೂ ಬರಿಸೋದ್ಯಾಕೆ?

Updated on: 

ಮಕ್ಕಳೊಂದಿಗೆ ಹೆಚ್ಚು ಸಮಯ ಕಳೆಯುವ, ಅವರನ್ನು ಸೂಕ್ಷ್ಮವಾಗಿ ಗಮನಿಸುವ, ಜನ ಹೆಮ್ಮೆ ಮತ್ತು ಬೆರಗಿನಿಂದ ಹೇಳುವ ಮಾತು: 'ಮಕ್ಕಳು ದೊಡ್ಡವರಿಗಿಂತ ಭಿನ್ನವಾಗಿ ಯೋಚಿಸುತ್ತಾರೆ' ಎಂಬುದು. ಹೀಗೆ ಭಿನ್ನವಾಗಿ ಯೋಚಿಸುವುದರಲ್ಲಿ ತುಂಟತನವೂ ಕಾಣಬಹುದು. ಬುದ್ಧಿವಂತಿಕೆಯ ಪ್ರದರ್ಶನವೂ ಆಗಬಹುದು. ಅಥವಾ ಪೋಷಕರು ಉತ್ತರಿಸಲು ಸಾಧ್ಯವೇ ಆಗದಂಥ ಪ್ರಶ್ನೆಯನ್ನು ಮಕ್ಕಳು ಕೇಳಿಬಿಡಬಹುದು. ಈ ಮಾತಿಗೆ ಕೆಲವು ಉದಾಹರಣೆ ಕೇಳಿ:
ಪ್ರಸಂಗ1: ಒಂದನೇ ತರಗತಿಯಲ್ಲಿದ್ದ ಮಗನನ್ನು ಸ್ಕೂಲ್‌ಗೆ ಕಳಿಸುವ ಗಡಿಬಿಡಿಯಲ್ಲಿದ್ದ ಅಮ್ಮನಿಗೆ, ಅವನ ಶರ್ಟ್ ಸಿಗಲೇ ಇಲ್ಲ. ಅದು ಬಟ್ಟೆಗಳ ಮಧ್ಯೆ ಎಲ್ಲೋ ಅಡಗಿಕೊಂಡಿತ್ತು. ಅಮ್ಮ ಪರದಾಡುವುದನ್ನು ಗಮನಿಸಿದ ಮಗು ಕೇಳಿತು: ಅಮ್ಮಾ, ಎಲ್ರೂ ಬಟ್ಟೆ ಹಾಕ್ಕೊಂಡೇ ಓಡಾಡಬೇಕು ಅಂತ ರೂಲ್ಸ್ ಇದೆಯಾ? ವಾರಕ್ಕೆ ಒಮ್ಮೆ, ಎಲ್ರೂ ಬಟ್ಟೆ ಹಾಕದೆ ತಿರುಗಾಡಿದ್ರೆ ಅದರಲ್ಲಿ ತಪ್ಪೇನಿದೆ?'
ಪ್ರಸಂಗ 2: ಮಗಳಿಗೆ ಬಡತನದ ಬಗ್ಗೆ ತಿಳಿಸಬೇಕು ಎಂಬ ಉದ್ದೇಶದಿಂದ ತಂದೆಯೊಬ್ಬ ಹೇಳಿದ: 'ನಮ್ಮ ಬಾಲ್ಯ ಬಹಳ ಕಷ್ಟದಿಂದ ಕೂಡಿತ್ತು, ಒಂದು ಹೊತ್ತಿನ ಊಟಕ್ಕೂ ತೊಂದರೆಯಿತ್ತು. ಒಂದು ಕೆ.ಜಿ. ಅಕ್ಕಿಗೂ ಗತಿಯಿರಲಿಲ್ಲ...' ಮಗಳು ತಕ್ಷಣವೇ ಉತ್ತರಿಸಿದಳು: 'ಅಪ್ಪಾ, ಅದಕ್ಕೆಲ್ಲಾ ಯಾಕೆ ಯೋಚನೆ ಮಾಡಬೇಕಿತ್ತು? ಅಂಗಡೀಗೆ ಹೋಗಿ ಎಂಟಿಆರ್ ರೆಡಿ ಟು ಈಟ್ ತಂದಿದ್ರೆ ನೀವು ಐದೇ ನಿಮಿಷದಲ್ಲಿ ಊಟ ಮಾಡಬಹುದಿತ್ತು! ಅಲ್ವಾ?'
ಪ್ರಸಂಗ 3: ತಂದೆಯೊಬ್ಬ ಮಗನಿಗೆ ಪುರಾತನ ಕಾಲದ ನಾಯಿ-ಬೆಕ್ಕು, ಕೋತಿ-ಮೊಸಳೆ, ಆನೆ-ಸಿಂಹದ ಕಥೆ ಹೇಳುತ್ತಿದ್ದ. ಕಥೆಯಲ್ಲಿ ಪ್ರಾಣಿಗಳು ಮಾತಾಡುತ್ತಿದ್ದವು. ಅದನ್ನು ಗಮನಿಸಿದ ಮಗ ಕೇಳಿದ: 'ಅಪ್ಪಾ, ಈಗ ನೀನು ಹೇಳ್ತಾ ಇದ್ದೀಯಲ್ಲ, ಆ ಕಥೆ ರಿಯಲ್ಲೋ, ಡಬ್ಬಾನೋ?' 'ರಿಯಲ್ಲು ಕಣೋ. ನಾನು ಯಾವತ್ತಾದ್ರೂ ಸುಳ್ಳು ಹೇಳ್ತಿನಾ?'- ಅಪ್ಪನ ಸಮಜಾಯಿಷಿ. ಒಂದು ನಿಮಿಷ ಸುಮ್ಮನಿದ್ದ ಮಗ ಕೇಳಿದ: 'ಹಾಗಾದ್ರೆ ಅಪ್ಪಾ, ನೀನು ಹೇಳುವ ಕಥೆಗಳಲ್ಲಿ ಪ್ರಾಣಿಗಳಿಗೆಲ್ಲ ಮನುಷ್ಯರ ಮಾತು ಅರ್ಥವಾಗುತ್ತೆ. ಅದೇ ನಿಜ ಎನ್ನುವುದಾದರೆ-ನಾನೀಗ ನಾಯಿಯ ಬಳಿ ಹೋಗಿ -ನಿಂಗೆ ಊಟ ಬೇಕಾ ಅಂತ ಕೇಳಿದ್ರೆ ಅದು ಬೇಕೂ ಎಂದು ಹೇಳಬೇಕು. ಆದ್ರೆ ಅಂಥ ಸೀನ್ ಖಂಡಿತ ಸೃಷ್ಟಿಯಾಗೋದಿಲ್ಲ. ಅಂದ ಮೇಲೆ ನೀನು ಹೇಳುವುದೆಲ್ಲಾ  'ಡಬ್ಬಾ'. ನೀನು ಹೇಳ್ತಾ ಇರುವುದೆಲ್ಲಾ ಬರೀ ಕಲ್ಪನೆಯ ಕಥೆ ಎಂದೇ ಅರ್ಥ. ಅಲ್ವೇನಪ್ಪಾ?'
ಮಗನ ಈ ಉತ್ತರಕ್ಕೆ ಹೇಗೆ ಪ್ರತಿಕ್ರಿಯಿಸಬೇಕೋ ಗೊತ್ತಾಗದೆ ಅಪ್ಪ, ಯಾವುದೋ ಕುಂಟು ನೆಪ ಹೇಳಿ, ಕಥೆಯನ್ನು ಅರ್ಧಕ್ಕೇ ನಿಲ್ಲಿಸಿ ಹೊರಗೆ ಹೋಗಿ ಬಿಟ್ಟ. ಆನಂತರದ ದಿನಗಳಲ್ಲಿ ಮಗನ ಬುದ್ಧಿವಂತಿಕೆಯ ಬಗ್ಗೆ ಪರಿಚಯದವರಿಗೆ, ಬಂಧುಗಳಿಗೆ, ನೆರೆಹೊರೆಯ ಗೆಳೆಯರಿಗೆ ಹೇಳಿಕೊಂಡು ಖುಷಿಪಟ್ಟ.
ಈವರೆಗೂ ವಿವರಿಸಿದಂಥ ಪ್ರಸಂಗಗಳು ಬಹುಪಾಲು ಎಲ್ಲ ಮನೆಗಳಲ್ಲೂ ನಡೆದಿರುತ್ತವೆ. ಎಷ್ಟೋ ಸಲ 'ಅಯ್ಯೋ, ಮಕ್ಕಳಿಗೆ ಏನೂ ಗೊತ್ತಾಗುವುದಿಲ್ಲ. ಅವರನ್ನು ಸಮಾಧಾನ ಮಾಡಲಿಕ್ಕೆ ಏನಾದ್ರೂ ಒಂದಷ್ಟು ಹೇಳಿದರಾಯ್ತು' ಎಂದುಕೊಂಡೇ ಪೋಷಕರು ಮಾತು ಆರಂಭಿಸಿರುತ್ತಾರೆ. ಆದರೆ ಪೋಷಕರ ನಿರೀಕ್ಷೆಯನ್ನು ಸುಳ್ಳು ಮಾಡುವಂಥ ಬುದ್ಧಿವಂತಿಕೆಯನ್ನು ಮಕ್ಕಳು ಪ್ರದರ್ಶಿಸಿದಾಗ ಹೆತ್ತವರ ಕಂಗಳ ತುಂಬಾ ಖುಷಿಯ ಕಣ್ಣೀರು! ಅಂಥ ಸಂದರ್ಭಗಳಲ್ಲೆಲ್ಲ  ಅವರು ದೈವಕ್ಕೆ ಮೊರೆಯಿಡುವುದು ಹೀಗೆ: ದೇವರೇ, ಬದುಕಿನುದ್ದಕ್ಕೂ ಮಗು ಇಷ್ಟೇ ಚಟುವಟಿಕೆಯಿಂದ ಉಳಿಯಲಿ ಅವನ(ಳ) ಬಾಳು ಬಂಗಾರವಾಗಲಿ. ಕಷ್ಟಗಳು ಬಾರದೇ ಇರಲಿ. ಸಂತೋಷವೆಂಬುದು ಸದಾ ಜೊತೆಯಲ್ಲೇ ಇರಲಿ...'
ವಿಪರ್ಯಾಸ ಕೇಳಿ: ಚಿಕ್ಕಂದಿನಲ್ಲಿ ಹೆತ್ತವರ ಖುಷಿ ಇಮ್ಮಡಿಯಾಗುವಂತೆ ಮಾತಾಡುತ್ತಿದ್ದ ಮಗ(ಳು), ಪ್ರಾಪ್ತ ವಯಸ್ಕನಾ(ಳಾ)ದ ನಂತರ ಎಷ್ಟೋ ಬಾರಿ ಹೆತ್ತವರು ಕಂಬನಿ ಮಿಡಿವ ಮಾತುಗಳನ್ನು ಆಡಿಬಿಡುತ್ತಾರೆ. ಅಷ್ಟೇ ಅಲ್ಲ; ಬಾಲ್ಯದಲ್ಲಿ ಸೂಪರ್‌ಹೀರೋ- ಹೀರೋಯಿನ್‌ಗಳಂತೆ ಗೋಚರಿಸಿದ್ದ ಅಪ್ಪ-ಅಮ್ಮ, ಬೆಳೆದು ನಿಂತ ಮಕ್ಕಳ ಪಾಲಿಗೆ ಹೆಜ್ಜೆ ಹೆಜ್ಜೆಗೂ ಕಿರಿಕಿರಿ ಮಾಡುವ ಆಸಾಮಿಗಳಂತೆ ಕಾಣತೊಡಗುತ್ತಾರೆ. ಪಿಯುಸಿ ಮುಗಿಸಿ ಡಿಗ್ರಿ ಓದಲೆಂದು ಮನೆಯಿಂದ ಐವತ್ತು ಕಿಲೋಮೀಟರ್ ದೂರದ ಸಿಟಿಗೆ ದಿನವೂ ಹೋಗಿ ಬರುವ ಬದಲು, ಸಿಟಿಯಿಂದ ದೂರವಿರುವ ರೆಸಿಡೆನ್ಶಿಯಲ್ ಶಾಲೆಯಲ್ಲಿ ಮಗಳು ಓದಲಿ ಎಂದು ತಂದೆ ಯೋಚಿಸುತ್ತಾನೆ. ಹೇಳಿ ಕೇಳಿ ಹದಿಹರೆಯದ ವಯಸ್ಸು: ಬೈ ಛಾನ್ಸ್, ದಿನವೂ ಮನೆಯಿಂದ ಕಾಲೇಜಿಗೆ ಹೋಗಿ ಬರುವ ಸಂದರ್ಭದಲ್ಲಿ ಯಾರಾದರೂ ಪ್ರಪೋಸ್ ಮಾಡಿಬಿಟ್ಟರೆ? ಸೌಮ್ಯ ಸ್ವಭಾವದ ಮಗಳು ಯೌವನದ ಕಾರಣಕ್ಕೆ ದಾರಿ ತಪ್ಪಿಬಿಟ್ಟರೆ, ಆನಂತರ ಅವಳ ಬದುಕೇ ಕೆಟ್ಟು ಹೋದರೆ? ಅಥವಾ ಪ್ರಪೋಸ್ ಮಾಡಿದಾಗ ಒಪ್ಪಲಿಲ್ಲ ಎಂಬ ಕಾರಣಕ್ಕೆ ಹುಡುಗನೇ ಹಲ್ಲೆ ಮಾಡಿದರೆ? ಅತಿಯಾದ ಮುದ್ದಿನ ಕಾರಣದಿಂದ ಸರಿಯಾಗಿ ಓದದೇ ಹೋದರೆ ಎಂದೆಲ್ಲ ಹೆತ್ತವರು ಯೋಚಿಸುತ್ತಾರೆ. ಮನೇಲಿ ಮಗಳನ್ನು ಉಳಿಸಿಕೊಂಡರೆ ತಾನೇ ಇದೆಲ್ಲಾ ರಗಳೆ? ಇದರ ಬದಲು ಆಕೆ ಹಾಸ್ಟೆಲ್‌ನಲ್ಲಿ ನೆಮ್ಮದಿಯಾಗಿರಲಿ ಎಂದು ಬಯಸುತ್ತಾರೆ. ಆದರೆ, ಇದನ್ನು ಅರ್ಥ ಮಾಡಿಕೊಳ್ಳದ ಮಕ್ಕಳು, ಹೆತ್ತವರೇ ನಮ್ಮ ಪಾಲಿನ ವಿಲನ್‌ಗಳಾಗಿದ್ದಾರೆ ಎಂದು ದೂರುವುದುಂಟು.
ಪೋಷಕರ ಮೇಲೆ ಕಂಪ್ಲೆಂಟ್ ಹೇಳುವ ವಿಷಯಕ್ಕೆ ಬಂದರೆ, ಹೆಣ್ಣು ಮಕ್ಕಳೇ ವಾಸಿ. ಗಂಡು ಮಕ್ಕಳ ಮಾತು ಕತ್ತಿಯ ಅಲುಗಿಗಿಂತ ಚೂಪಾಗಿರುತ್ತದೆ. ಕೆಲವೊಮ್ಮೆ ಕಾಲೇಜಿನ ಫೀ ಕೊಡಲು ತಡ ಮಾಡಿದ್ದಕ್ಕೆ, ಪಾಕೆಟ್ ಮನಿ ಕೊಡಲಿಲ್ಲ ಎಂಬ ಕಾರಣಕ್ಕೆ, ಬೈಕ್ ಕೊಡಿಸಲಿಲ್ಲ ಎಂಬ ಅಸಮಾಧಾನಕ್ಕೆ, ಪ್ರೀತಿಯನ್ನು ಒಪ್ಪಿಕೊಳ್ಳಲಿಲ್ಲ ಎಂಬ ಸಂಕಟಕ್ಕೆ ಸಿಡಿದು ನಿಲ್ಲುವುದುಂಟು. ಜಗಳಕ್ಕೇ ಹೋಗುವುದುಂಟು. ಕೇಳಿದ್ದನ್ನು ಕೊಡಿಸಲು ಆಗಲ್ಲ ಅಂದ್ಮೇಲೆ ನಾವು ಯಾಕೆ ಬದುಕಿರಬೇಕು ಎಂದು ಪ್ರಶ್ನಿಸುವುದುಂಟು. ಮನೆ ಬಿಟ್ಟು ಹೋಗಿ ಅಪ್ಪನನ್ನು ಬ್ಲಾಕ್‌ಮೇಲ್ ಮಾಡುವುದೂ ಉಂಟು. ಗೆಳೆಯರೊಂದಿಗೆ ಮಾತಾಡುತ್ತಾ- ನಮ್ಮ ಅಪ್ಪ ಥೇಟ್ ಹಿಟ್ಲರ್ ಥರಾ ಎಂದು ಕಹಿಯನ್ನೆಲ್ಲ ಕಾರಿಕೊಳ್ಳುವುದೂ ಉಂಟು!
ಮಕ್ಕಳ ಈ ಮಾತುಗಳನ್ನು, ಸಹಿಸಲಾಗದಂಥ ವರ್ತನೆಯನ್ನು ಕಂಡಾಗೆಲ್ಲ ಹೆತ್ತವರು ಯೋಚನೆಗೆ ಬೀಳುತ್ತಾರೆ. ಯಾರಿಗೂ ಗೊತ್ತಾಗದಂತೆ ಅತ್ತು ಸಮಾಧಾನ ಮಾಡಿಕೊಳ್ಳುತ್ತಾರೆ. ಆನಂತರದಲ್ಲಿ ತಮಗೆ ತಾವೇ ಕೇಳಿಕೊಳ್ಳುತ್ತಾರೆ: ಖುಷಿ ಕೊಡುವ ಮಕ್ಕಳೇ ಕಣ್ಣೀರು ಹರಿಯುವಂತೆಯೂ ಮಾಡಿಬಿಡ್ತಾರಲ್ಲ ಯಾಕೆ?
ಕ್ಷಮಿಸಿ: ನನ್ನಲ್ಲಿ ಕೂಡ ಈ ಪ್ರಶ್ನೆಗೆ ಉತ್ತರವಿಲ್ಲ.

-ನಾನು ಪ್ರಣತಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com