ನಂಬಿದವರ ಮನೆಯೊಳಗೆ ತುಂಬಿ ತುಳುಕಾಡು ಬಾಪ್ಪ...
ಮಂಟೇಸ್ವಾಮಿ ಕೆಳವರ್ಗಕ್ಕೆ ಸೇರಿದವರು ಎಂಬದರಲ್ಲಿ ಅನುಮಾನವಿಲ್ಲ. ಇಂದಿಗೂ ಅಸ್ತಿತ್ವದಲ್ಲಿರುವ ಈ ಪಂಥದ ನೀಲಗಾರ ಸಂಪ್ರದಾಯಗಳು ಮತ್ತು ಅವರ ಆಚರಣೆಗಳು ಈ ವಾದಕ್ಕೆ ಪುಷ್ಟಿ ನೀಡುತ್ತವೆ.
ಮಾರ್ಗ ಸಾಹಿತ್ಯವನ್ನು ಧಿಕ್ಕರಿಸಿ ದೇಸೀ ಸಾಹಿತ್ಯದೆಡೆಗೆ ಮುಖ ಮಾಡಿದ ಕಾಲದಲ್ಲಿ ವಚನ ಸಾಹಿತ್ಯ ಆವಿರ್ಭವಗೊಂಡಿತು. ಜೇಡರದಾಸಿಮಯ್ಯನಾದಿಯಾಗಿ ಬಸವಣ್ಣ, ಅಲ್ಲಮಪ್ರಭುಗಳ ಸಮರ್ಥ ಮಾರ್ಗದರ್ಶನದ ಮೂಲಕ ಕಲ್ಯಾಣದಲ್ಲಿ ಅನುಭವ ಮಂಟಪವು ರೂಪುಗೊಂಡಿತು. ಅಂದು ಅವರು ಉಸುರಿದ ಮಾನವಪರ ಚಿಂತನೆಗಳು, ಆಯಾ ಯುಗದ ಅಸಡ್ಡೆಗಳನ್ನು ಕಿತ್ತೊಗೆದು ಮನುಷ್ಯನನ್ನು ಮನುಷ್ಯನನ್ನಾಗಿ ನೋಡುವುದನ್ನು ಕಲಿಸಿದೆ. ಈ ಸಮಸಂಸ್ಕೃತಿಯ ಹರಿಕಾರನಾಗಿ ಹದಿನಾರನೆಯ ಶತಮಾನದಲ್ಲಿ ಮಂಟೇಸ್ವಾಮಿಗಳು ಜನಿಸಿ, ಬಸವಾದಿ ಪ್ರಮಥರ ಬೌದ್ಧಿಕ ಕ್ರಾಂತಿಯನ್ನು ಮುಂದುವರಿಸಿದರು. ಉತ್ತರದಿಂದ ಬಂದ ಮಂಟೇಸ್ವಾಮಿಗಳು ಜನಪದರ ಮನಸ್ಸಿನಲ್ಲಿ ಮಂಟೇದ, ಮಂಟಯ್ಯ, ಮಂಟೇದಲಿಂಗಯ್ಯ ಎಂಬಿತ್ಯಾದಿ ಹೆಸರುಗಳಿಂದ ಜನಜನಿತರಾಗಿದ್ದಾರೆ. ಮಂಟೇಸ್ವಾಮಿ ದೈವತ್ವಕ್ಕೇರಿದ ಒಬ್ಬ ಜನಸಾಮಾನ್ಯ. ತಳಸಂಸ್ಕೃತಿಯ ಅಧಿಕೃತ ವಕ್ತಾರ. ತನ್ನ ಅನುಭವದ ಮೂಸೆಯಲ್ಲಿ ಶಿಷ್ಯ ಸಮೂಹವೊಂದನ್ನು ಸೃಷ್ಟಿಸಿ ಆ ಮುಖೇನ ಲೋಕಕಲ್ಯಾಣ ಮಾಡಿಸಿದ ಶ್ರೇಯಸ್ಸು ಆ ದಿವ್ಯ ಪುರುಷನಿಗೆ ಸಲ್ಲುತ್ತದೆ.
ಕಲ್ಯಾಣದಲ್ಲಿ ಪ್ರಚುರಗೊಂಡಿದ್ದ ಪ್ರಗತಿಪರ ವಿಚಾರಗಳಿಂದ ಶರಣ ಸಂಕುಲ ಕ್ರಮೇಣ ಪ್ರತ್ಯೇಕ ಪಂಥಗಳಾಗಿ ಮಾರ್ಪಟ್ಟವು. ಅವರು ಹಲವು ನೀತಿ ನಿಯಮಗಳನ್ನು ವಿಧಿಸಿಕೊಂಡು ತಮ್ಮ ಅವಸಾನವನ್ನು ತಾವೇ ಕಂಡುಕೊಳ್ಳಲು ತೊಡಗಿದರು. ಇದರಿಂದ ಹತಾಶರಾದ ಕೆಳವರ್ಗದ ಶರಣರು ಆ ಒಕ್ಕೂಟದಿಂದ ಸಿಡಿದು ನಿಂತಿರಬೇಕು. ಜನಪರ ಚಳವಳಿಯ ಮೂಲಕ ಚರಿತ್ರೆಯಲ್ಲಿಯೇ ಮೊದಲ ಬಾರಿಗೆ ಬೀದಿಗೆ ಬಂದ ಕೆಳ ವರ್ಗದ ಜನ, ಆನಂತರದ ಅನಿರೀಕ್ಷಿತ ಸೋಲಿನಿಂದ ಹತಾಶರಾಗಿ ತಂತಮ್ಮ ದಾರಿಗಳನ್ನು ತಾವು ಹಿಡಿದಂತೆ ಕಾಣುತ್ತದೆ. ಹೀಗಾಗಿ, ಮಂಟೇಸ್ವಾಮಿ ಮಹಾಕಾವ್ಯದ ನಾಯಕ ಮಂಟೇಸ್ವಾಮಿಯನ್ನು ನಾವು ಈ ಹಿನ್ನೆಲೆಯಲ್ಲಿ ನೋಡಬೇಕಾಗಿದೆ. ಮಂಟೇಸ್ವಾಮಿ ಉತ್ತರ ದೇಶದಿಂದ ಬಂದವರು ಎಂಬ ಮಾತು ಈ ಮಹಾಕಾವ್ಯದ ಅನೇಕ ಕಡೆ ಉಲ್ಲೇಖವಾಗಿದೆ.
ಅಲ್ಲದೆ ಬಸವಣ್ಣನವರ ಜೊತೆಗೂ ಸಂಬಂಧ ಕಲ್ಪಿಸುವ ಕಥಾಭಾಗಗಳೂ ದೊರೆಯುತ್ತವೆ. ಆದರೆ ಮಂಟೇಸ್ವಾಮಿ ಆ ಚಳವಳಿಯ ಒಂದು ಭಾಗವಾಗಿದ್ದರು ಎಂಬುದಕ್ಕಾಗಲೀ ಅಥವಾ ಬಸವಣ್ಣ ಅಲ್ಲಮಾದಿಗಳ ಸಮಕಾಲೀನರಾಗಿದ್ದರು ಎಂಬುದಕ್ಕಾಗಲೀ ಯಾವುದೇ ಆಧಾರಗಳು ಉಪಲಬ್ಧವಿಲ್ಲ. ಆದರೆ ಆ ಮಹಾನ್ ಚಳವಳಿಯ ನಂತರದ ಕಾಲದಲ್ಲಿ ಇದ್ದರು ಎಂಬುದಕ್ಕೆ ಸಾಕಷ್ಟು ಆಧಾರಗಳಿವೆ.
ಮಂಟೇಸ್ವಾಮಿ ಕೆಳವರ್ಗಕ್ಕೆ ಸೇರಿದವರು ಎಂಬದರಲ್ಲಿ ಅನುಮಾನವಿಲ್ಲ. ಇಂದಿಗೂ ಅಸ್ತಿತ್ವದಲ್ಲಿರುವ ಈ ಪಂಥದ ನೀಲಗಾರ ಸಂಪ್ರದಾಯಗಳು ಮತ್ತು ಅವರ ಆಚರಣೆಗಳು ಈ ವಾದಕ್ಕೆ ಪುಷ್ಟಿ ನೀಡುತ್ತವೆ. ಮಂಟೇಸ್ವಾಮಿ ಕೇವಲ ಹೊಟ್ಟೆಹೊರೆಯುವ ಫಕೀರನಾಗಿರಲಿಲ್ಲ, ಮೇಲು ಸಂಸ್ಕೃತಿಗೆ ವಿರುದ್ಧವಾದ ಕೆಳವರ್ಗಗಳ ಅಸ್ತಿತ್ವವನ್ನು ಪುನರ್ ಸ್ಥ್ಥಾಪಿಸುವ ಪ್ರತಿ ಸಂಸ್ಕೃತಿಯ ನಿರ್ಮಾಣ ಅವರ ಜನನೋದ್ದೇಶವಿದ್ದಂತೆ ತೋರುತ್ತದೆ. ಈ ಆರಾಧ್ಯದೈವವನ್ನು ಕುರಿತು ವಿಫುಲವಾದ ಸಾಹಿತ್ಯ ರಚನೆಯಾಗಿದೆ. ಇದನ್ನು ಶಿಷ್ಠರು ಜನಪದ ಕಾವ್ಯ ಎಂದು ಕರೆದರೆ ಜನಪದರಿಗೆ ಇದೊಂದು ಭಕ್ತಿ ಸಮುದ್ರ. ಬದುಕಿನ ಪ್ರತಿಯೊಂದು ಸೂಕ್ಷ್ಮ ವಿಚಾರಗಳು ಇದರಲ್ಲಿ ಅಡಗಿವೆ.
ಮಂಟೇಸ್ವಾಮಿ ಕಾವ್ಯವನ್ನು ಹಾಡುವ ನೀಲಗಾರರು ಚಾಮರಾಜನಗರ, ಮಂಡ್ಯ, ಮೈಸೂರು, ಹಾಸನ, ಬೆಂಗಳೂರು ಗ್ರಾಮಾಂತರ, ತಮಿಳುನಾಡಿನ ಸೇಲಂ ಜಿಲ್ಲೆಗಳಲ್ಲಿ ಕಂಡು ಬರುತ್ತಾರೆ. ಮಳವಳ್ಳಿ, ಬೊಪ್ಪೇಗೌಡನಪುರ, ಕುರುಬನಕಟ್ಟೆ, ಚಿಕ್ಕಲ್ಲೂರು, ಕಪ್ಪಡಿ ಇವುಗಳಲ್ಲಿ ಮಂಟೇಸ್ವಾಮಿ ಮತ್ತು ಅವರ ಶಿಷ್ಯರುಗಳ ಗದ್ದುಗೆಗಳಿವೆ. ನೀಲಗಾರರಲ್ಲಿ ಪ್ರಧಾನವಾಗಿ ಹರಿಜನರೇ ಬಹುಸಂಖ್ಯೆಯಲ್ಲಿ ಇದ್ದಾರೆ. ಉಳಿದಂತೆ ಕುರುಬರು, ಉಪ್ಪಲಿಗಶೆಟ್ಟರು, ಮಡಿವಾಳರು, ಅಕ್ಕಸಾಲಿಗರು, ಪರಿವಾರದವರು, ಕುಂಬಾರರು, ವಿಶ್ವಕರ್ಮರು, ಬೆಸ್ತರೂ ನೀಲಗಾರರಾಗಿರುವುದುಂಟು. ಇವರು ತಮ್ಮನ್ನು ಮಂಟೇಸ್ವಾಮಿಯ ಒಕ್ಕಲಿನ ನೀಲಗಾರರೆಂದು ಕರೆದುಕೊಳ್ಳುತ್ತಾರೆ.
ನೀಲಗಾರರ ಹಾಡಿನ ವೈಖರಿಯೇ ಬೇರೆ. "ನಂಬಿದವರ ಮನೆಯ ಒಳಗೆ, ತುಂಬಿ ತುಳುಕಾಡು ಬಾಪ್ಪ, ಸಿದ್ದಯ್ಯ ಸ್ವಾಮಿ ಬನ್ಯೋ..."
ಹೀಗೆ ಆರಂಭವಾಗುವ ಪದ್ಯದ ಸಾಲುಗಳು ಹೊಸ ಹುಮ್ಮಸ್ಸನ್ನು ಕೊಡುವ ಜೀವದ್ರವ್ಯದಂತೆ ಕಾವ್ಯದ ಗತಿ ಅನೂಚಾನವಾಗಿ ಭರತದ (ಅಲೆ) ಹಾಗೆ ಭೋರ್ಗರೆಯುತ್ತದೆ. ಒಮ್ಮೊಮ್ಮೆ ಕುಗ್ಗಿ ಪ್ರಶಾಂತವಾಗಿ ಪ್ರವಹಿಸುತ್ತದೆ.
ಕಾವ್ಯದ ಕಲ್ಯಾಣ ಸಾಲಿನಲ್ಲಿ ನೀಲಗಾರರು ಮಂಟೇಸ್ವಾಮಿಯನ್ನು ಚಿತ್ರಿಸುವ ಬಗೆ ಮನೋಹರವಾಗಿದೆ. ಅವರ ಒಳಗಿದ್ದ ತತ್ತ್ವಗಳು ಯಾವುದು ಎನ್ನುವ ಒಲವನ್ನು ನೋಡಿದಾಗಲೇ ಮನದಟ್ಟಾಗುತ್ತದೆ. ತಿಪ್ಪೆಗುಂಡಿಯಿಂದ ಬರುವ ಮಂಟೇಸ್ವಾಮಿ ತಮ್ಮ ದೇಹದ ತುಂಬ ಕೀವು ರಸುಕನ್ನು ಸುರಿಸುತ್ತಾ ಗದಗದನೆ ನಾರುವ ಜಂಗಮನಾಗಿ ಮೂರ್ತರೂಪವನ್ನು ಬಸವಣ್ಣನಿಗೂ ನೀಲಾಂಬಿಕೆಗೂ ತೋರಿಸುತ್ತಾರೆ. ಆಗ ಕಲ್ಯಾಣದಲ್ಲಿ ಲಿಂಗವಂತರ ಲಿಂಗಗಳನ್ನೆಲ್ಲ ಮಾಯ ಮಾಡಿ ಹೆಂಡದ ಗಡಿಗೆಯಲ್ಲಿ ಅಡಗಿಸಿಬಿಡುತ್ತಾರೆ. ಕಾಯಕ ಜೀವಿಗಳಿಗೆ ಮಾತ್ರ ಲಿಂಗಧಾರಣೆ ಮಾಡಿ ಉಳಿದ ಜಂಗಮರೆಲ್ಲರಿಗೂ ಕಲ್ಲು ವಡ್ಡರಾಗಿ ದುಡಿದು ತಿನ್ನಲಿ ಎಂಬ ಶಾಪವನ್ನು ನೀಡುತ್ತಾರೆ. ಇದರ ಅರ್ಥ ಇಷ್ಟೇ ಶತಶತಮಾನಗಳಿಂದಲೂ ಶ್ರೀಮಂತರ ಜಾತಿಯಲ್ಲಿಯೇ ಹುಟ್ಟಿ ಅಹಂಕಾರ, ದರ್ಪ ಪಡುತ್ತಿದ್ದ ಒಂದು ಸಮುದಾಯವನ್ನು ಹೇಗಾದರೂ ಮಾಡಿ ನಿರಶನ ಪ್ರಕ್ರಿಯೆಗೆ ಒಳಪಡಿಸಿ ಕಾಲಕಾಲದಿಂದಲೂ ತುಳಿತಕ್ಕೊಳಗಾದ ಜನಸಮೂಹವನ್ನು ಮೇಲೆತ್ತಬೇಕು ಎನ್ನುವುದು. ಆದ್ದರಿಂದಲೇ ಒಂಬತ್ತು ತಳಜಾತಿಗಳನ್ನು ಆಯ್ಕೆ ಮಾಡಿ ಕಾಯಕ ದೀಕ್ಷೆಯನ್ನು ಕೊಡಿಸಿದರು. ಹಾಗಾಗಿಯೇ ಬಸವಣ್ಣನ ಕಲ್ಯಾಣನಗರದ ತುಂಬ ಎಲ್ಲ ಜಾತಿಗಳಿಗೆ ಮಹತ್ವವಿತ್ತು. ಅಂದಮಾತ್ರಕ್ಕೆ ಬಸವಣ್ಣನವರನ್ನು ದೂರ ತಳ್ಳುವಂತಿಲ್ಲ. ಅವರ ತತ್ತ್ವಗಳನ್ನು ತಳಸಂಸ್ಕೃತಿಯ ಕಡೆಗೆ ಸಂಪೂರ್ಣವಾಗಿ ವಾಲಿಸುವ ಕ್ರಿಯೆ ಮಂಟೇಸ್ವಾಮಿಯವರಲ್ಲಿ ನಡೆಯಿತು ಎಂಬುದನ್ನು ಗಮನಿಸಬಹುದು.
ಮಂಟೇಸ್ವಾಮಿ ಶಿಷ್ಯರ ಒತ್ತಾಸೆಯ ಮೇರೆಗೆ ಬೊಪ್ಪೇಗೌಡನಪುರಕ್ಕೆ ಧಾವಿಸಿ ಬರುತ್ತಾರೆ. ಬರುವಾಗ ಹೊನ್ನಯ್ಯ, ಚೆನ್ನಯ್ಯ, ರಾಚಪ್ಪಾಜಿ, ದೊಡ್ಡಮ್ಮ ತಾಯಿ, ಅರಸು ಮಕ್ಕಳು, ಮಡಿವಾಳ ಮಾಚಯ್ಯ, ಸಿದ್ದಪ್ಪಾಜಿ ಮೊದಲಾದವರನ್ನು ಮನಃಪರಿವರ್ತನೆ ಮಾಡಿ ತಮ್ಮೊಟ್ಟಿಗೆ ನೆಲೆ ನಿಲ್ಲುವಂತೆ ಮಾಡುತ್ತಾರೆ. ಹೀಗೆ ತಮ್ಮ ಅಂತಃಚಕ್ಷುವಿನಿಂದ ಪ್ರಪಂಚದ ಮುಂದಿನ ಸ್ಥಿತಿಗಳನ್ನು ಬೊಪ್ಪೇಗೌಡನಿಗೆ ಉಪದೇಶಿಸಿ, ಕಲಿಯುಗ ದರ್ಶನ ಹೇಗೆ ಇರುತ್ತದೆ ಎಂಬುದರ ಅರಿವು ಮೂಡಿಸುತ್ತಾರೆ. "ಕಂಡದ್ದು, ಕಾಣದ ಹಾಗೆ ಇರುವುದು ಕಲಿಯುಗ" ಎಂಬ ಸೂಚನೆ ಮಂಟೇಸ್ವಾಮಿ ಹೇಳಿದ್ದು, ಅವರ ಕಾಲಜ್ಞಾನವೇ ಸರಿ.
ಮಂಟೇಸ್ವಾಮಿ ಕಾವ್ಯದಲ್ಲಿ ಪ್ರಸ್ತುತ ದಿನಮಾನಗಳಲ್ಲಿ ಉದ್ಭವಿಸುವ ಉಲ್ಬಣಗಳ ಸೂಚನೆಯನ್ನು ಕಾಣಬಹುದು. ನಮ್ಮ ಕಣ್ಮುಂದೆ ನಡೆಯುತ್ತಿರುವ ಮನುಷ್ಯನ ಭೋಗದಾಸೆ, ಮನಸ್ತಾಪಗಳ ತಿಕ್ಕಾಟ, ಸಾಮಾಜಿಕ ವ್ಯವಸ್ಥೆಯಲ್ಲಿ ಅಲ್ಲೋಲಕಲ್ಲೋಲ ಧಾರ್ಮಿಕ ವಿಚಾರಗಳ ಅಧಃಪತನ, ಹೆಣ್ಣು ಗಂಡುಗಳ ನಡುವಣ ಸಂಬಂಧಗಳು ಅರ್ಥ ಕಾಣದೇ ಹೋಗುತ್ತಿರುವುದು, ಗುರು ಕಾಮಿಯಾಗುತ್ತಿರುವುದು, ಶಿಷ್ಯ ದುಶ್ಚಟಗಳಿಗೆ ಅಂಟಿಕೊಳ್ಳುತ್ತಿರುವುದು, ಸೌಂದರ್ಯ ಮನಸ್ಸಿನಲ್ಲಿ ಅರಳದೆ ಕಣ್ಣಿನೆಡೆಗೆ ಹೊರಳಿ ಆ ವಕ್ರದೃಷ್ಟಿಯೇ ಸೊಸೆಯನ್ನು ಕಾಮಿಸುವ ದುಷ್ಟ ಬೆಳವಣಿಗೆ, ಶೀಲವಿಲ್ಲದ ರಾಜಕೀಯ, ವಿಪರೀತ ಸ್ವಾರ್ಥ, ಇವುಗಳೆಲ್ಲವುಗಳ ಬಗೆಗೆ ಮಂಟೇಸ್ವಾಮಿಗಳ ನಿಲುವು ಅಂದೇ ಸ್ಪಷ್ಟವಾಗಿತ್ತು. ಅಂತಲೇ ಅವರಿಗೆ ಅಭಿನವ ಅಲ್ಲಮಪ್ರಭು ಎಂದು ಕರೆದದ್ದು. ಬುದ್ಧಿಜೀವಿಗಳಿಗೆ ಅತಿಶಯೋಕ್ತಿ ಎನಿಸಿದರೂ ಜನಪದರಿಗೆ ಅದು ಕಣ್ಮುಂದಿನ ಬೆಳಕು.
ಸಮಾಜದ ವರ್ಣವ್ಯವಸ್ಥೆಯನ್ನು ಕುರಿತು ಮಂಟೇಸ್ವಾಮಿ ಆಡಿರುವ ಮಾತುಗಳು ಸಾಕ್ಷಾತ್ ಆತ್ಮಸಾತ್ ಆದಂತವು. ಅಂದು ನೊಂದು ಬೆಂದು ತುಳಿತಕ್ಕೊಳಗಾದ ಜನಸಮುದಾಯ ಇಂದು ಆಚಾರ-ವಿಚಾರ, ಅಂತಸ್ತು ಈ ಮೊದಲಾದವುಗಳಲ್ಲಿ ಪಟ್ಟಭದ್ರ ಮೇಲ್ವರ್ಗದ ಪುರೋಹಿತಶಾಹೀ ವ್ಯವಸ್ಥೆಯನ್ನು ಧಿಕ್ಕರಿಸಿ ಬೆಳೆದಿರುವುದನ್ನು ಕಾಣಬಹುದು. ಇಲ್ಲಿ ಕೀಳು ಎಂಬುದು ಹೊಲೆಯಲ್ಲ ಅದು ಪವಿತ್ರ.
ಹಿಂದೆ ಧರ್ಮೋ ರಕ್ಷತಿ ರಕ್ಷಿತಃ ಎಂಬ ಉಕ್ತಿ ತುಂಬ ಪ್ರಸಿದ್ಧಿಯಲ್ಲಿತ್ತು. ಇಂದು ಅಧರ್ಮೋ ರಕ್ಷತಿ ರಕ್ಷಿತಃ, ಕಾಮ ಮಧ್ಯೆ ಜಗತ್ಸರ್ವಂ ಎಂಬ ಅಪ್ರಸ್ತುತಿಗಳನ್ನು ಆಡಬೇಕಾದ ದುರಂತ ಸತ್ಯಕ್ಕೆ ಒಳಗಾಗಿದ್ದೇವೆ. ಬುಟಾಟಿಕೆಯನ್ನು ಇಂದಿನ ಹಲಕೆಲವು ಮಠಗಳಲ್ಲಿ ಕಾಣಬಹುದು. ಜ್ಞಾನದ ಕೇಂದ್ರಗಳಾಗಬೇಕಾಗಿದ್ದ ಶಾಲೆಗಳು, ಮಠಮಾನ್ಯಗಳು ಇಂದು ಪ್ರಚಾರವನ್ನು ಬಯಸುತ್ತಿವೆ. ವಿದ್ಯಾವಿಹೀನ ಪಶುಸಮಾನ ಎಂಬ ಮಾತನ್ನು ತಮ್ಮ ಕ್ರಿಯೆಯಿಂದಲೇ ತೋರ್ಪಡಿಸುತ್ತಿದ್ದಾರೇನೋ ಎಂದೆನಿಸುತ್ತದೆ. ಬೊಗಳೇ ದಾಸಯ್ಯರೆಲ್ಲ ಸ್ವಾಮಿಗಳೆಂಬ ವೇಷವನ್ನು ಧರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸಾಂಸ್ಕೃತಿಕ ದಾರ್ಶನಿಕ ಶ್ರೇಷ್ಠನಾದ ಮಂಟೇಸ್ವಾಮಿಯವರ ಬದುಕು ಬೋಧನೆ ಮತ್ತು ಸಾಧನೆಯು ಸಾರ್ವಕಾಲೀಕವಾದುದು.
ಡಾ.ಪಿ. ಮಣಿ
ಸಹಾಯಕ ಪ್ರಾಧ್ಯಾಪಕರು,
ಕನ್ನಡ ಅಧ್ಯಯನ ಮತ್ತು ಸಂಶೋಧನ ವಿಭಾಗ
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ, ಮೈಸೂರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

