ಮೇಡಂ ಇಬ್ಬರ ಮನದಾಳ

ಮೊನ್ನೆ ನಮ್ಮ ಪ್ರಧಾನಿ ಮೋದಿಯವರನ್ನು ಭೇಟಿ ಮಾಡಿ ಹೋದ ಫೇಸ್ಬುಕ್ ಕಂಪನಿಯ ಮುಖ್ಯ ಯೋಜನಾಧಿಕಾರಿ ಶೆರಿಲ್ ಸ್ಯಾಡ್ಬರ್ಗ್ ಅವರನ್ನು ಪ್ರಚಾರ ಮಾಧ್ಯಮದಲ್ಲಿ ಗಮನಿಸಿರುತ್ತೀರಿ. ಆಕೆ ಇಲ್ಲಿ ಬಂದಾಗ ಮಹಿಳೆ ಉನ್ನತ ಸ್ಥಾನಕ್ಕೆ ತಲುಪಬೇಕಾದಾಗ ಎದುರಿಸುವ ಸವಾಲುಗಳ ಬಗ್ಗೆ ಮಾತನಾಡಿದ್ದರು. ವೃತ್ತಿ ಮತ್ತು ಕುಟುಂಬವನ್ನು ಸಂಭಾಳಿಸುವುದು ಸ್ತ್ರೀಗೆ ಸಾಧ್ಯ ಎಂಬುದವರ ನಿಲವು. ಆದರೆ ಭಾರತೀಯ ಮೂಲದವರೇ ಆದ ಇಂದ್ರಾ ನೂಯಿ 'ವೃತ್ತಿ-ಕುಟುಂಬ ಎರಡರಲ್ಲೂ ಸಂತೃಪ್ತಿ ಕಾಣುವುದು ಉನ್ನತ ಉದ್ಯೋಗದಲ್ಲಿರುವ ಮಹಿಳೆಗೆ ಸಾಧ್ಯವೇ ಇಲ್ಲ' ಅಂತ ಮಾಧ್ಯಮ ಸಂದರ್ಶನವೊಂದರಲ್ಲಿ ಹೇಳಿದರು. ಹೇಗಿದೆ ಇವರ ಯಾನ? ಏನಿವರ ಅನುಭವ ಕಥನ? ಇದೋ ಓದಿ...
ಫೋರ್ಬ್ಸ್ ನಿಯತಕಾಲಿಕದ ಪ್ರಪಂಚದ ನೂರು ಬಲಿಷ್ಠ ಮಹಿಳೆಯರ ಪಟ್ಟಿಯಲ್ಲಿ 13ನೇ ಸ್ಥಾನದಲ್ಲಿದ್ದಾರೆ, ಪೆಪ್ಸಿಕೋ ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ 58 ವರ್ಷದ ಇಂದ್ರಾ ಕೃಷ್ಣಮೂರ್ತಿ ನೂಯಿ. ಮೊದಲು ಜಾನ್ಸನ್ ಆಂಡ್ ಜಾನ್ಸನ್ನಲ್ಲಿ ಕೆಲಸ ನಿರ್ವಹಿಸಿ, ನಂತರ 1994ರಲ್ಲಿ ಪೆಪ್ಸಿಕೋ ಕಂಪನಿಯ ಭಾಗವಾದ ನೂಯಿ ಒಂದು ದಶಕಕ್ಕೂ ಹೆಚ್ಚು ಕಾಲ ಆ ಕಂಪನಿಯ ಜಾಗತಿಕ ಕಾರ್ಯತಂತ್ರವನ್ನು ನಿರ್ದೇಶಿಸಿದವರು. ಟ್ರಾಪಿಕಾನ ಕಂಪನಿಯನ್ನು ಖರೀದಿಸುವುದಕ್ಕೆ, ಗೆಟೊರೇಡ್ನಂಥ ಪ್ರಖ್ಯಾತ ಪಾನೀಯ ಮತ್ತು ಆಹಾರ ಉತ್ಪನ್ನ ಕಂಪನಿಯನ್ನು ಪೆಪ್ಸಿಕೋದ ಭಾಗವಾಗಿಸುವುದಕ್ಕೆ ನೂಯಿ ನಾಯಕತ್ವವೇ ಕಾರಣವಾಯಿತು. 2006ರಲ್ಲಿ ನೂಯಿ ಪೆಪ್ಸಿಕೋದ ಸಿಇಓ ಆಗಿ ನೇಮಕವಾದರು.
ಮಹಿಳೆ ಅಬಲೆಯಲ್ಲ ಎನ್ನುವುದನ್ನು ತಮ್ಮ ಸಾಮರ್ಥ್ಯದಿಂದ ಸಾಬೀತು ಮಾಡಿದ್ದಾರೆ ನೂಯಿ. ಆದರೆ ಮಹಿಳೆಗೆ ಮನೆ ಮತ್ತು ವೃತ್ತಿ ಜೀವನವನ್ನು ಸರಿದೂಗಿಸಲು ಸಾಧ್ಯವಿದೆ ಎನ್ನುವುದನ್ನು ಅಲ್ಲಗಳೆಯುವ ಅವರು, ಮಹಿಳೆಯರು ಹೊರಪ್ರಪಂಚದಲ್ಲಿ ಯಶಸ್ವಿಯಾಗಬೇಕಾದರೆ, ಏನೆಲ್ಲ ಪರಿಪಾಟಲು ಪಡಬೇಕಾಗುತ್ತದೆ ಎನ್ನುವುದನ್ನು ತಮ್ಮ ಕಥೆಯ ಮೂಲಕವೇ ಹೇಳುತ್ತಾರೆ:
= 2006ರಲ್ಲಿ ನಡೆದ ಘಟನೆಯಿದು. ಅಂದು ತಡರಾತ್ರಿಯವರೆಗೂ ಕಚೇರಿಯಲ್ಲಿ ಕೆಲಸವಿತ್ತು. ಸುಮಾರು 9.30ಯಾಗಿತ್ತು. ಪೆಪ್ಸಿಕೋ ಕಂಪನಿಯಿಂದ ನಿವೃತ್ತರಾಗಲಿದ್ದ ಚೇರ್ಮನ್ರಿಂದ ನನಗೆ ಕರೆ ಬಂತು. ನಾನು ಅವರ ಸ್ಥಾನಕ್ಕೆ ಆಯ್ಕೆಯಾಗಿರುವುದಾಗಿ ತಿಳಿಸಿ, ಶುಭ ಹಾರೈಸಿದರು! ಆಗ ನನಗಾದ ಸಂತೋಷ ಹೇಳತೀರದು. ಕುಟುಂಬದವರಿಗೆಲ್ಲ ಈ ಸಿಹಿ ಸುದ್ದಿ ತಿಳಿಸಬೇಕೆಂದು ಕೂಡಲೇ ಕಚೇರಿಯಿಂದ ಹೊರಟು 10 ಗಂಟೆಗೆ ಮನೆ ತಲುಪಿದೆ. ಅಮ್ಮ ಬಾಗಿಲಲ್ಲೇ ಕಾಯುತ್ತಾ ನಿಂತಿದ್ದಳು. ಆಕೆಯನ್ನು ನೋಡಿದ್ದೇ ಖುಷಿಯಿಂದ, "ಅಮ್ಮ ಒಂದು ಅದ್ಭುತ ಸುದ್ದಿ ಇದೆ" ಎಂದೆ. ಅದಕ್ಕೆ ಅಮ್ಮ ಏನೆಂದಳು ಗೊತ್ತೇ? "ಆ ಸುದ್ದಿ ಒತ್ತಟ್ಟಿಗಿರಲಿ, ಮೊದಲು ಅಂಗಡಿಗೆ ಹೋಗಿ ಹಾಲು ತೊಗೊಂಡು ಬಾ...!!" ನನ್ನ ಗಂಡ ರಾಜ್ಗೆ ಈ ಕೆಲಸ ಹೇಳಬಹುದಿತ್ತಲ್ಲ ಎಂದಾಗ, ಅಮ್ಮ ಅಂದಳು "ಪಾಪ ಅವನು ಕೆಲಸ ಮಾಡಿ ಸುಸ್ತಾಗಿದ್ದಾನೆ!"
ಹಾಲು ತಂದು ಕೊಟ್ಟವಳೇ ಆಕೆಗೆ ಸಿಟ್ಟಿನಿಂದ "ಅಮ್ಮ ಪೆಪ್ಸಿಕೋ ಕಂಪನಿಯ ಬೋರ್ಡ್ ಆಫ್ ಡೈರೆಕ್ಟರ್ನ ಮುಖ್ಯಸ್ಥೆಯಾಗಿ ಆಯ್ಕೆ ಆಗಿದ್ದೇನೆ. ನಿನಗೆ ಈ ಒಳ್ಳೆಯ ಸುದ್ದಿ ಹೇಳೋಣವೆಂದರೆ, ಅದನ್ನು ಕೇಳದೇ ಅಂಗಡಿಗೆ ಓಡಿಸುತ್ತೀಯಲ್ಲ?" ಎಂದೆ. ಅದಕ್ಕೆ ಅಮ್ಮ ಹೇಳಿದ್ದಿಷ್ಟೆ: "ನೀನು ಏನು ಬೇಕಾದ್ರೂ ಆಗು. ಆದರೆ ಈ ಮನೆಗೆ ಕಾಲಿಟ್ಟ ಮೇಲೆ ನೀನು ಒಬ್ಬ ಹೆಂಡತಿ, ಮಗಳು, ಸೊಸೆ ಮತ್ತು ತಾಯಿಯಷ್ಟೆ. ಈ ಪಾತ್ರಗಳನ್ನೆಲ್ಲ ನೀನೇ ನಿರ್ವಹಿಸಬೇಕು, ಈ ಜವಾಬ್ದಾರಿಯನ್ನೆಲ್ಲ ನೀನೇ ಹೊರಬೇಕು. ನಿನ್ನ 'ಕಿರೀಟ' ಹೊರಗೇ ಇರಲಿ, ಮನೆಯೊಳಗೆ ತರಬೇಡ"!
= ಮಹಿಳೆಗೆ ಮನೆ ಮತ್ತು ಕೆಲಸವನ್ನು ಸರಿದೂಗಿಸುವುದಕ್ಕೆ ಸಾಧ್ಯವಿದೆ ಎನ್ನುವುದು ಸುಳ್ಳು. ಸಾಧ್ಯ ಎಂದು ನಾವು ನಂಬುತ್ತೇವಷ್ಟೆ. ನಮ್ಮ ಮದುವೆಯಾಗಿ 34 ವರ್ಷವಾಯಿತು. ಈಗಲೂ ಕಚೇರಿಗೆ ಹೋದರೂ ಮನೆಯ ಬಗ್ಗೆಯೂ ಯೋಚಿಸುತ್ತಿರಬೇಕು. ಆಗ ಮಕ್ಕಳನ್ನು ನೋಡಿಕೊಳ್ಳುವುದಕ್ಕೆ ಕುಟುಂಬದವರ, ಸ್ನೇಹಿತರ ಸಹಾಯ ಪಡೆದೆವು. ನಾವಿಬ್ಬರೂ ಉತ್ತಮ ಪೋಷಕರಾಗಲು ಅಂದಿನಿಂದ ಪ್ರಯತ್ನಿಸುತ್ತಲೇ ಇದ್ದೇವೆ. ಆದರೆ ನೀವು ನನ್ನ ಹೆಣ್ಣು ಮಕ್ಕಳನ್ನು ಕೇಳಿ ನೋಡಿ, ನನ್ನನ್ನು ಅವರು 'ಉತ್ತಮ ತಾಯಿ' ಎಂದು ಕರೆಯುವುದು ಅನುಮಾನವೇ!
= ಮಗಳ ಕ್ಯಾಥೋಲಿಕ್ ಶಾಲೆಯಲ್ಲಿ ಪ್ರತಿ ಬುಧವಾರ ಪೋಷಕರ ಸಭೆ ನಡೆಯುತ್ತಿತ್ತು. ಬಹುತೇಕ ಎಲ್ಲಾ ತಾಯಂದಿರೂ ಹಾಜರಿರುತ್ತಿದ್ದರು, ನನ್ನೊಬ್ಬಳನ್ನು ಬಿಟ್ಟು. ದೊಡ್ಡ ಕಂಪನಿಯೊಂದರಲ್ಲಿ ಪ್ರಮುಖ ಹುದ್ದೆಯಲ್ಲಿದ್ದ ನನಗೆ ಶಾಲೆಗೆ ಹೋಗಲು ರಜೆ, ಸಮಯ ಸಿಗುತ್ತಿರಲಿಲ್ಲ. ಮನೆಗೆ ಬಂದಾಗ ಮಗಳ ಅಸಮಾಧಾನ ಎದುರಿಸಬೇಕಾಗುತ್ತಿತ್ತು. ಮೊದ ಮೊದಲು ನಾನು ತಪ್ಪಿತಸ್ಥ ಭಾವನೆಯಿಂದ ಕುಗ್ಗಿಹೋಗುತ್ತಿದ್ದೆ. ನಂತರ ಏನಾದರೂ ನೆಪ ಹೇಳಿ ಮಗಳನ್ನು ಸಮಾಧಾನ ಮಾಡತೊಡಗಿದೆ. ಆದರೆ ಆ ತಪ್ಪಿತಸ್ಥ ಭಾವನೆಯಿಂದ ಪ್ರತಿ ಕ್ಷಣವೂ ಜೀವ ಹೋದಂತಾಗುತ್ತಿತ್ತು. ಈಗಲೂ ಆಗುತ್ತದೆ.
= ಜೈವಿಕ ಗಡಿಯಾರ ಮತ್ತು ವೃತ್ತಿ ಗಡಿಯಾರದ ನಡುವೆ ಯಾವಾಗಲೂ ತಿಕ್ಕಾಟವಿದ್ದದ್ದೇ. ನೀವು ವೃತ್ತಿ ಜೀವನದಲ್ಲಿ ನೆಲೆಯೂರಬೇಕಾದ ಸಮಯದಲ್ಲಿ ಮದುವೆಯಾಗುತ್ತದೆ, ಮಕ್ಕಳಾಗುತ್ತವೆ. ವೃತ್ತಿಯಲ್ಲಿ ಬೆಳೆಯುತ್ತಿರುವ ಹೊತ್ತಲ್ಲೇ ಹದಿಹರೆಯದ ಮಕ್ಕಳಿಗೆ ನಮ್ಮ ಅಗತ್ಯ ಎದುರಾಗುತ್ತದೆ. ಇನ್ನು ಅದೇ ಸಮಯದಲ್ಲೇ ಪತಿರಾಯನೂ ಹದಿಹರೆಯದವರಂತಾಗುತ್ತಾನೆ. ಹಾಗಾಗಿ ಆತನಿಗೂ ನಮ್ಮ ಅಗತ್ಯ ಎದುರಾಗುತ್ತದೆ.
= ಒಂದು ಕಂಪನಿಯ ಸಿಇಓ ಆಗುವುದು ನಿಜಕ್ಕೂ ಅತಿದೊಡ್ಡ ಜವಾಬ್ದಾರಿ. ಹಾಗಾಗಿ ಒಂದೇ ವೇಳೆಯಲ್ಲೇ ಕೆಲಸದ ಜೊತೆಗೆ ಮನೆಯತ್ತ ಗಮನಹರಿಸುವುದು ಅಷ್ಟು ಸುಲಭವಲ್ಲ. ಈ ಗಿಲ್ಟ್ ನನಗೂ ಇದೆ. ಈ ವಿಷಯದಲ್ಲಿ ನನಗೆ ಹೆಚ್ಚು ಮನನೋಯಿಸುವುದು ನನ್ನ ಪತಿ ರಾಜ್. ಅವರು ಯಾವಾಗಲೂ ಅನ್ನುತ್ತಾರೆ, "ಇಂದ್ರಾ ನಿನ್ನ ಪಟ್ಟಿಯಲ್ಲಿ ಮೊದಲ ಮೂರು ಸ್ಥಾನವನ್ನೂ ಪೆಪ್ಸಿಕೋ ಕಂಪನಿಗೇ ಕೊಟ್ಟುಬಿಟ್ಟಿದ್ದೀಯಾ, ನಂತರದ ಸ್ಥಾನ ಮಕ್ಕಳಿಗೆ, ಆನಂತರದ್ದು ನಿನ್ನ ತಂದೆ ತಾಯಿಗೆ. ಕೊನೆಯ ಸ್ಥಾನ ನನಗೆ!"
ಹೀಗೆ ಹೇಳಿದಾಗಲೆಲ್ಲ ನಾನು ತಮಾಷೆ ಮಾಡುತ್ತೇನೆ: "ರಾಜ್, ನಿನ್ನ ಹೆಸರು ಪಟ್ಟಿಯಲ್ಲಂತೂ ಇದೆಯಲ್ಲ. ಅದಕ್ಕೆ ಖುಷಿ ಪಡು. ಪ್ಲೀಸ್ ಅರ್ಥಮಾಡಿಕೋ...".
ನಿಜಕ್ಕೂ ವೃತ್ತಿ ಮತ್ತು ಕುಟುಂಬದ ನಿರ್ವಹಣೆಯನ್ನು ಸರಿದೂಗಿಸುವುದಕ್ಕೆ ಸಾಧ್ಯವಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


