ಕಾಲಕ್ಕೆ ಸರಿಯಾ ಎಂಬ ಪ್ರಶ್ನೆ 'ಶರಿಯಾ'ದ್ದಷ್ಟೇ ಅಲ್ಲ
ಶರಿಯಾ ಕಾನೂನಿಗೆ ಸಂಬಂಧಿಸಿ ದೇಶದ ಸರ್ವೋಚ್ಚ ನ್ಯಾಯಾಲಯ ನೀಡಿರುವ ಐತಿಹಾಸಿಕ ತೀರ್ಪು ಭಾರಿ ಚರ್ಚೆಗೆ ಗ್ರಾಸವಾಗಿದೆ. ಶರಿಯಾ ಕೋರ್ಟ್ಗಳಿಗೆ ಕಾನೂನಾತ್ಮಕ ಮಾನ್ಯತೆ ಇಲ್ಲ, ಇವು ನ್ಯಾಯಾಂಗ ವ್ಯವಸ್ಥೆಗೆ ಪರ್ಯಾಯವಾಗಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಖಡಕ್ಕಾಗಿ ನುಡಿದಿದೆ. ಅಷ್ಟೇ ಅಲ್ಲ, ತನ್ನ ಮುಂದೆ ಇಲ್ಲದ ವ್ಯಕ್ತಿಯ ವಿರುದ್ಧ ಫತ್ವಾ ಹೊರಡಿಸುವ ಹಕ್ಕು ಶರಿಯಾ ಕೋರ್ಟ್ಗೆ ಇಲ್ಲ ಎಂದಿದೆ ಸುಪ್ರೀಂ ನ್ಯಾಯಪೀಠ.
ಸುಪ್ರೀಂನ ಈ ಮಹತ್ವದ ತೀರ್ಪಿಗೆ ಸಂಬಂಧಿಸಿ ಮುಸ್ಲಿಂ ಧರ್ಮಗುರುಗಳಲ್ಲೇ ಭಿನ್ನ ಭಿನ್ನ ಅಭಿಪ್ರಾಯಗಳು ವ್ಯಕ್ತವಾಗಿವೆ. ಕೆಲವರು ಸುಪ್ರೀಂ ತೀರ್ಪನ್ನು ಸ್ವಾಗತಿಸಿದರೆ, ಮತ್ತೆ ಕೆಲವರು ಅದನ್ನು ವಿರೋಧಿಸಿದ್ದಾರೆ. ಅದೇನೇ ಇರಲಿ, ಇಲ್ಲಿ ಯಾವುದೇ ನಿರ್ಧಾರ ಪ್ರಕಟಿಸುವ ಮುನ್ನ ಶರಿಯಾ ಕಾನೂನಿನ ಬಗ್ಗೆ ತಿಳಿದುಕೊಳ್ಳುವುದು, ಅಭ್ಯಸಿಸುವುದು ಸೂಕ್ತ ಎನ್ನುವುದು ನನ್ನ ಅಭಿಪ್ರಾಯ.
ನಿಜಕ್ಕೂ ಶರಿಯಾ ಎಂದರೇನು? ಅದು ಯಾವಾಗ ಜಾರಿಗೆ ಬಂತು? ಫತ್ವಾಗಳನ್ನು ಹೇರುವವರು ಯಾರು? ಉತ್ತರ ಹುಡುಕುತ್ತಾ ಹೋದಾಗ ಗೊತ್ತಾಗಿದ್ದಿಷ್ಟು.
ಶರಿಯಾ ಎನ್ನುವುದು ಅರೆಬಿಕ್ ಪದ. ಇದರ ಅರ್ಥ 'ನೈಜ ಪಥ'(ಸನ್ಮಾರ್ಗ) ಎಂದು. ಇಸ್ಲಾಂ ಧರ್ಮದ ಪವಿತ್ರ ಗ್ರಂಥ ಕುರಾನ್ ಅನ್ನು ಆಧರಿಸಿದ ಅನೇಕ ಕಾನೂನು, ನಿಯಮಗಳನ್ನೊಳಗೊಂಡ ಒಂದು ವ್ಯವಸ್ಥೆಯಿದು. ಪ್ರವಾದಿ ಮುಹಮ್ಮದ್ (ಸ.ಅ.)ರ ಉಪದೇಶಗಳು ಹಾಗೂ ಆ ಉಪದೇಶಗಳ ಬಗ್ಗೆ ಕೆಲ ಮುಸ್ಲಿಂ ವಿದ್ವಾಂಸರು ನೀಡಿರುವ ವ್ಯಾಖ್ಯಾನಗಳೂ ಇದರಲ್ಲಿ ಒಳಗೊಂಡಿವೆ. ಇಲ್ಲಿ ಕುರಾನ್ ಮಾನವನ ಜೀವನಕ್ರಮಗಳನ್ನು ಉಲ್ಲೇಖಿಸಿದೆಯಾದರೂ ವಿವರವಾದ ಕಾನೂನು ಸಂಹಿತೆಯನ್ನು ನೀಡಿಲ್ಲ. ಒಟ್ಟಾರೆ ಯೆಹೂದಿ ಕಾನೂನು ಹೇಗೆ ಪಾಶ್ಚಿಮಾತ್ಯ ಕಾನೂನು ವ್ಯವಸ್ಥೆಯ ಮೇಲೆ ಪ್ರಭಾವ ಬೀರಿದೆಯೋ, ಅದೇ ರೀತಿ ಶರಿಯಾ ಕಾನೂನು ಇಸ್ಲಾಂ ಧರ್ಮದ ಪ್ರಮುಖ ಭಾಗವೆಂದು ಪರಿಗಣಿಸಲ್ಪಟ್ಟಿದೆ.
ಇದು ಹಲವು ಶತಮಾನದ ಹಿಂದಿನ ಕಥೆ. ಅರೇಬಿಯನ್ ಪರ್ಯಾಯ ದ್ವೀಪದಲ್ಲಿ ಅಲೆಮಾರಿ ಬುಡಕಟ್ಟು ಜನಾಂಗೀಯರು ವಾಸವಿದ್ದರು. ಅವರು ಮೂರ್ತಿ ಪೂಜೆಯನ್ನೂ ಮಾಡುತ್ತಿದ್ದರು. ಇವರ ನಡುವೆ ಜಗಳ, ಮನಸ್ತಾಪಗಳು ಸಾಮಾನ್ಯವಾಗಿತ್ತು. ಮದುವೆ, ಆತಿಥ್ಯ, ಸೇಡು ಸೇರಿದಂತೆ ಎಲ್ಲ ವಿಚಾರಗಳಲ್ಲೂ ಪ್ರತಿಯೊಂದು ಜನಾಂಗಕ್ಕೂ ಅವರದ್ದೇ ಆದ ಸಂಪ್ರದಾಯಗಳಿದ್ದವು. ಈ ಸಂಪೂರ್ಣ ಅಸ್ತವ್ಯಸ್ತ ಅರಬ್ ಲೋಕಕ್ಕೆ ಹೊಸ ಧರ್ಮವೊಂದನ್ನು ಪರಿಚಯಿಸಿದವರೇ ಪ್ರವಾದಿ ಮುಹಮ್ಮದ್. ಅವರೊಳಗೆ ನಡೆಯುತ್ತಿದ್ದ ಎಲ್ಲ ಕಲಹಗಳನ್ನೂ ನ್ಯಾಯಮೂರ್ತಿಯ ಸ್ಥಾನದಲ್ಲಿ ನಿಂತು ಪ್ರವಾದಿಯೇ ಪರಿಹರಿಸುತ್ತಿದ್ದರು. ಇದಕ್ಕೆಲ್ಲ ಅವರು ಕುರಾನ್ನ ವ್ಯಾಖ್ಯಾನಗಳನ್ನು, ನಿಬಂಧನೆಗಳನ್ನು ಆಧಾರವಾಗಿಟ್ಟುಕೊಳ್ಳುತ್ತಿದ್ದರು. ಅಂದಿನಿಂದ ಇಸ್ಲಾಮಿಕ್ ಕಾನೂನು(ಶರಿಯಾ) ಇಸ್ಲಾಂ ಧರ್ಮದ ಅವಿಭಾಜ್ಯ ಅಂಗವಾಯಿತು. ಕ್ರಿ.ಶ. 632ರಲ್ಲಿ ಮುಹಮ್ಮದ್ರು ಇಹಲೋಕ ತ್ಯಜಿಸಿದ ಬಳಿಕ 30 ವರ್ಷಗಳ ಕಾಲ ಅವರ ಸಹಚರರು ಅರೇಬಿಯಾವನ್ನು ಆಳಿದರು. ನಂತರ ಬಂದ ರಾಜಕೀಯ-ಧಾರ್ಮಿಕ ದೊರೆಗಳು (ಖಲೀಫಾಗಳು) ತಮ್ಮದೇ ಆದ ಆದೇಶ, ನಿರ್ಧಾರಗಳನ್ನು ಘೋಷಿಸುತ್ತಾ ಶರಿಯಾ ಕಾನೂನನ್ನು ವಿಸ್ತರಿಸುತ್ತಾ ಸಾಗಿದರು. ಈ ಕಾನೂನಿನಲ್ಲಿ ಏನನ್ನು ಸೇರಿಸಬೇಕು ಎಂಬ ವಿಚಾರವಾಗಿ ಉಮಯ್ಯದ್ ವಂಶ ಹಾಗೂ ಅಬ್ಬಾಸಿದ್ ಖಲೀಫರ ನಡುವೆ ಭಿನ್ನಾಭಿಪ್ರಾಯಗಳು ಸ್ಫೋಟಗೊಂಡಿದ್ದೂ ಇದೆ. ಒಟ್ಟಾರೆ 10ನೇ ಶತಮಾನದ ಶ್ರೇಷ್ಠ ಕಾನೂನು ಇಸ್ಲಾಂನ ಸ್ವರ್ಣಯುಗದ ಪ್ರಮುಖ ಭಾಗವಾಗಿತ್ತು. ಆದರೆ, ತದನಂತರ ಪರಿಸ್ಥಿತಿಗೆ, ವಿಚಾರಕ್ಕೆ, ಸನ್ನಿವೇಶಗಳಿಗೆ ಅನುಗುಣವಾಗಿ ಶರಿಯಾ ಕಾನೂನಿನಲ್ಲಿ ಬದಲಾವಣೆಗಳು ಆಗುತ್ತಾ ಬಂದವು.
ಇದು ಶರಿಯಾ ಕಾನೂನಿನ ಹಿನ್ನಲೆ. ಈಗ ಮತ್ತೆ ಸುಪ್ರೀಂ ಕೋರ್ಟ್ ತೀರ್ಪಿನ ವಿಚಾರಕ್ಕೆ ಬರೋಣ. ಒಬ್ಬ ವ್ಯಕ್ತಿಯು ಶರಿಯಾದ ಬಗ್ಗೆ ತನಗಿರುವ ಅನುಮಾನವನ್ನು ಹೊತ್ತು ಅಥವಾ ಯಾವುದಾದರೂ ವಿಚಾರವನ್ನೆತ್ತಿ ಶರಿಯಾ ನ್ಯಾಯಾಲಯದ ಮೊರೆ ಹೋದಾಗ ಆತನಿಗೆ ಇಸ್ಲಾಮಿಕ್ ಕಾನೂನಿನ್ವಯ ಮಾಹಿತಿ ನೀಡಬಹುದು, ಫತ್ವಾ ಹೊರಡಿಸಬಹುದು. ಈ ಫತ್ವಾವನ್ನು ಪಾಲಿಸುವುದು, ಬಿಡುವುದು ಆ ವ್ಯಕ್ತಿಯ ಇಚ್ಛೆಗೆ ಬಿಟ್ಟಿದ್ದು. ಆದರೆ, ಇಸ್ಲಾಮಿಕ್ ಜಡ್ಜ್ ನೀಡುವ ತೀರ್ಪು ಆ ವ್ಯಕ್ತಿಗೇ ಹೊರತು ಅಲ್ಲಿಲ್ಲದ ಯಾವೊಬ್ಬನಿಗೂ ಅದು ಅನ್ವಯಿಸುವುದಿಲ್ಲ ಎಂದು ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ಸ್ಪಷ್ಟವಾಗಿ ತಿಳಿಸಿದೆ. ಅಂದರೆ ಇಲ್ಲಿ ಸುಪ್ರೀಂ ಕೋರ್ಟ್ ಶರಿಯಾ ಕಾನೂನಿಗಾಗಲೀ, ಕೋರ್ಟ್ಗಾಗಲೀ ನಿಷೇಧ ಹೇರಿಲ್ಲ. ಸ್ವಇಚ್ಛೆಯಿಂದ ಆ ಕೋರ್ಟ್ ಮೊರೆಹೋಗಲು ಇಚ್ಛಿಸುವವರಿಗೆ ತಾನು ಅಡ್ಡಿಪಡಿಸುವುದಿಲ್ಲ ಎಂದೂ ಹೇಳಿದೆ.
ಇಲ್ಲಿ ನ್ಯಾಯಪೀಠ ಪ್ರಮುಖವಾಗಿ ಪರಿಗಣಿಸಿದ್ದು ಮಾನವ ಹಕ್ಕುಗಳನ್ನು. ಒಬ್ಬ ವ್ಯಕ್ತಿಯ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುವಂತಹ ಫತ್ವಾ ಹೊರಡಿಸುವುದು ಸಲ್ಲ ಎಂದು ಕೋರ್ಟ್ ಹೇಳಿದೆ. ಇದು ಒಪ್ಪತಕ್ಕದ್ದು. ಇಲ್ಲಿ ಒಂದು ಘಟನೆ ನೆನಪಿಗೆ ಬರುತ್ತದೆ. ಅಪ್ಪನ ಸ್ಥಾನದಲ್ಲಿರಬೇಕಾದ ಮಾವನೇ(ಪತಿಯ ತಂದೆ) ಸೊಸೆಯ ಮೇಲೆ ಅತ್ಯಾಚಾರ ಎಸಗಿದ ಘಟನೆ ಉತ್ತರ ಭಾರತದಲ್ಲಿ ನಡೆದಿತ್ತು. ಈ ಪ್ರಕರಣ ಶರಿಯಾ ನ್ಯಾಯಾಲಯದ ಮೆಟ್ಟಿಲೇರಿತ್ತು. ವಿಚಾರಣೆಯೆಲ್ಲ ಮುಗಿದ ಬಳಿಕ, ಗಂಡ, ಮಕ್ಕಳನ್ನು ತೊರೆದು ನೀನು ಇನ್ನು ಮುಂದೆ ಅತ್ಯಾಚಾರವೆಸಗಿದ ಮಾವನೊಂದಿಗೇ ಸಂಸಾರ ನಡೆಸಬೇಕು. ಇನ್ನು ಪತಿಯನ್ನು ಮಗನಂತೆ ಕಾಣಬೇಕು ಎಂದು ಕೋರ್ಟ್ ತೀರ್ಪು ನೀಡಿತು. ಇಲ್ಲಿ ನೊಂದ ಮಹಿಳೆಯ ಗಾಯದ ಮೇಲೆ ಉಪ್ಪು ಸುರಿಯಲಾಯಿತು. ನ್ಯಾಯ ಬೇಡಿದ ಮಹಿಳೆಗೆ ನ್ಯಾಯಾಲಯವೇ ಆಘಾತ ನೀಡಿತು. ಇದೇ ಘಟನೆಯನ್ನು ಉಲ್ಲೇಖಿಸಿ ವಕೀಲ ವಿಶ್ವಲೋಚನ್ ಮದನ್ ಸುಪ್ರೀಂ ಕೋರ್ಟ್ನ ಕದ ತಟ್ಟಿದರು. ಶರಿಯಾ ಕೋರ್ಟ್ ಕಾನೂನುಬದ್ಧತೆಯೇನು, ಅದು ನ್ಯಾಯಾಂಗ ವ್ಯವಸ್ಥೆಗೆ ಪರ್ಯಾಯವೇ ಎಂದು ಪ್ರಶ್ನಿಸಿದರು. ಮದನ್ರ ಇದೇ ಅರ್ಜಿ ಸುಪ್ರೀಂ ಕೋರ್ಟ್ನ ಈ ತೀರ್ಪಿಗೆ ಮುನ್ನುಡಿ ಬರೆದದ್ದು.
ಮಕ್ಕಳ ಹಕ್ಕುಗಳಿಗಾಗಿ ಹೋರಾಡಿದ ಪಾಕಿಸ್ತಾನದ ಬಾಲಕಿ ಮಲಾಲಾ ಯೂಸುಫ್ಝಾಯ್ ವಿರುದ್ಧ ಫತ್ವಾ ಹೇರಿದ್ದು ಎಲ್ಲರಿಗೂ ಗೊತ್ತಿದೆ. ಉಗ್ರರ ಬಂದೂಕಿನ ನಳಿಕೆಗೆ ಎದೆಯೊಡ್ಡಿದ ಆಕೆಯ ಧೈರ್ಯವನ್ನು ಇಡೀ ವಿಶ್ವವೇ ಕೊಂಡಾಡುತ್ತಿದ್ದರೆ ಧರ್ಮಗುರು ಶೇಖ್ ಒಮರ್ ಬಖ್ರಿ ಆಕೆಯ ವಿರುದ್ಧವೇ ಫತ್ವಾ ಹೊರಡಿಸಿದ್ದರು. ಮತ್ತೊಬ್ಬರು ಮಲಾಲಾಗೆ ಗುಂಡಿಕ್ಕಿದ ಉಗ್ರನ ವಿರುದ್ಧ ಫತ್ವಾ ಹೊರಡಿಸಿದ್ದರು. ಇವರಿಬ್ಬರೂ ಮುಸ್ಲಿಂ ಧರ್ಮಗುರುಗಳೇ. ಹಾಗಿದ್ದರೂ ಇವರು ಹೊರಡಿಸಿದ ಫತ್ವಾದಲ್ಲಿ ಭಿನ್ನತೆ ಏಕೆ ಬಂತು? ಹಾಗಿದ್ದರೆ ಇಲ್ಲಿ ನೈಜ ಶರಿಯಾ ಕಾನೂನನ್ನು ಪಾಲಿಸಿದವರು ಯಾರು ಎಂಬ ಪ್ರಶ್ನೆಗೆ ಉತ್ತರವಿಲ್ಲ. ಅದೇ ರೀತಿ ಇತ್ತೀಚೆಗಷ್ಟೇ ದಾರುಲ್ ಉಲೂಮ್ ದೇವ್ಬಂದ್ ಭಯೋತ್ಪಾದನೆ ವಿರುದ್ಧವೇ ಫತ್ವಾ ಹೊರಡಿಸಿತ್ತು. ಸಮಾಜದ ಹಿತದೃಷ್ಟಿಯಿಂದ ಹೊರಡಿಸುವ ಇಂತಹ ಫತ್ವಾವನ್ನು ಖಂಡಿತಾ ಸ್ವಾಗತಿಸಬಹುದು.
ಇಲ್ಲಿ ಮತ್ತೊಂದು ವಿಚಾರ ಪ್ರಸ್ತಾಪಿಸಲೇಬೇಕು. ಉತ್ತರ ಭಾರತದಲ್ಲಿ ಜಾರಿಯಲ್ಲಿರುವ ಖಾಪ್ ಪಂಚಾಯತ್ಗಳತ್ತಲೂ ಸುಪ್ರೀಂ ಕೋರ್ಟ್ ಗಮನಹರಿಸಬೇಕು. ಹೆಣ್ಣು ಮಕ್ಕಳು ಜೀನ್ಸ್ ಧರಿಸುವುದಕ್ಕೆ, ಮೊಬೈಲ್ ಬಳಸುವುದಕ್ಕೆ, ಏಕಾಂಗಿಯಾಗಿ ಪ್ರಯಾಣಿಸುವುದಕ್ಕೆ ಖಾಪ್ ಪಂಚಾಯತ್ಗಳು ನಿಷೇಧ ಹೇರಿವೆ. ಕೆಲವೊಮ್ಮೆ ಇವುಗಳು ನೀಡುವ ತೀರ್ಪುಗಳು ತಾಲಿಬಾನಿಗರ ಆದೇಶಕ್ಕಿಂತಲೂ ಕ್ರೂರವಾಗಿರುತ್ತವೆ. ಬೇರೆ ಜಾತಿಯ ಯುವಕನೊಂದಿಗೆ ಮಾತನಾಡಿದ ತಪ್ಪಿಗೆ ಯುವತಿಯೊಬ್ಬಳಿಗೆ ಖಾಪ್ ಪಂಚಾಯತ್ ನೀಡಿದ ಶಿಕ್ಷೆಯೇನು ಎಂಬುದನ್ನು ಕೆಲ ತಿಂಗಳ ಹಿಂದಷ್ಟೇ ಪತ್ರಿಕೆಗಳಲ್ಲಿ ನೀವು ಓದಿರಬಹುದು. ದಂಡ ನೀಡಲು ಹಣವಿಲ್ಲ ಎಂದಿದ್ದಕ್ಕೆ ಯುವತಿಯನ್ನು ಮರವೊಂದಕ್ಕೆ ಕಟ್ಟಿಹಾಕಿ, ರಾತ್ರಿಯಾದ ಬಳಿಕ 8 ಮಂದಿ ಖಾಪ್ ಸದಸ್ಯರೇ ಸೇರಿ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದರು. ಇದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾದ ಪ್ರಕರಣ. ಇಂತಹ ಅಮಾನುಷ ತೀರ್ಪುಗಳನ್ನು ನೀಡುವ ಖಾಪ್ ಪಂಚಾಯತ್ಗಳ ಬಗ್ಗೆ ಯಾರೂ ಚಕಾರವೆತ್ತದಿರುವುದು ದುರಂತ.
ಸುಪ್ರೀಂ ಕೋರ್ಟ್ ತೀರ್ಪಿನಲ್ಲಿ ಯಾವುದೇ ತಪ್ಪಿಲ್ಲ. ಈ ತೀರ್ಪಿನಿಂದ ಶರಿಯಾ ಕೋರ್ಟ್ ಕಾರ್ಯಕಲಾಪಗಳಿಗೆ ಅಡ್ಡಿಯಾಗುವುದೂ ಇಲ್ಲ ಎಂದು ಇಮಾರತ್ ಶರಿಯಾ ಸದಸ್ಯ ಮೌಲಾನ ಅನೀಸುರ್ ರೆಹಮಾನ್ ಅವರೇ ತಿಳಿಸಿದ್ದಾರೆ. ಇಲ್ಲಿ ಶರಿಯಾ ಕೋರ್ಟ್ಗಳು ತನ್ನ ಆದೇಶವನ್ನು ಯಾರ ಮೇಲೂ ಹೇರುವುದಿಲ್ಲ. ಅಂತಹ ಅಧಿಕಾರ ಇರುವುದು ಈಜಿಪ್ಟ್ನ ನ್ಯಾಯಾಂಗ ವ್ಯವಸ್ಥೆಗೆ ಮಾತ್ರ. 19ನೇ ಶತಮಾನದಿಂದೀಚೆಗೆ ಪಾಶ್ಚಿಮಾತ್ಯ ವಸಾಹತುಶಾಹಿ ಪ್ರಭಾವಕ್ಕೊಳಗಾಗಿ ಅನೇಕ ಮುಸ್ಲಿಂ ರಾಷ್ಟ್ರಗಳು ಆಧುನಿಕ ಜಗತ್ತಿಗೆ ಅನುಗುಣವಾಗಿ ಶರಿಯಾ ಕಾನೂನುಗಳಲ್ಲಿ ಬದಲಾವಣೆ ತರುತ್ತಿವೆ. ಶರಿಯಾದೊಳಗೇ ಪಾಶ್ಚಿಮಾತ್ಯ ಶೈಲಿ ಕಾನೂನು, ಕೋರ್ಟ್, ಶಿಕ್ಷೆ ಮತ್ತಿತರ ವಿಚಾರಗಳು ಸೇರ್ಪಡೆಯಾಗಿವೆ.ಟರ್ಕಿಯಂತಹ ಕೆಲವು ರಾಷ್ಟ್ರಗಳಂತೂ ಶರಿಯಾ ಕಾನೂನಿಂದ ಹೊರತಾಗಿ ಹೊಸ ಕಾನೂನು ಸಂಹಿತೆ ಅಳವಡಿಸಿಕೊಂಡಿವೆ. ಶರಿಯಾದಲ್ಲಿನ ಆದೇಶವನ್ನು 20ನೇ ಶತಮಾನಕ್ಕೆ ಅನುಗುಣವಾಗಿ ವ್ಯಾಖ್ಯಾನಿಸುವ, ಬದಲಾಯಿಸುವ ಕಾರ್ಯವನ್ನೂ ಕೆಲ ಮುಸ್ಲಿಂ ಕಾನೂನು ವಿದ್ವಾಂಸರು ಮಾಡುತ್ತಿದ್ದಾರೆ. ಇಸ್ಲಾಂ ಧರ್ಮ ಚಿಗುರೊಡೆದ, ಸಂಪ್ರದಾಯವಾದಿ ಸೌದಿ ಅರೇಬಿಯಾದಲ್ಲೂ ಇದು ನಡೆಯುತ್ತಿದೆ.
ಒಟ್ಟಿನಲ್ಲಿ ಪರಿವರ್ತನೆ ಜಗದ ನಿಯಮ. ಕೋರ್ಟ್ ತನ್ನ ತೀರ್ಪಿನಲ್ಲಿ ಹೇಳಿದಂತೆ, ಯಾವ ಧರ್ಮವೂ ಹಿಂಸೆಯನ್ನು ಪ್ರೇರೇಪಿಸುವುದಿಲ್ಲ, ಅಮಾಯಕರನ್ನು ಶಿಕ್ಷಿಸುವುದಿಲ್ಲ. ಯಾವುದೇ ಧರ್ಮವಾಗಿರಲಿ, ಅದರ ಮೂಲ ಆಶಯಕ್ಕೆ ಧಕ್ಕೆ ತಾರದಂತೆ ಸಣ್ಣ ಪುಟ್ಟ ಬದಲಾವಣೆಗಳನ್ನು ಮಾಡಿಕೊಳ್ಳುತ್ತಾ ಮುಂದೆ ಸಾಗಬೇಕು. ಧಾರ್ಮಿಕ ನಾಯಕರು ಮಾನವೀಯ ಮೌಲ್ಯಗಳನ್ನು ಬಿತ್ತುವ, ವಿಶ್ವಶಾಂತಿಯನ್ನು ಪಸರಿಸುವ ಕಾರ್ಯದಲ್ಲಿ ಸಾರ್ಥಕ್ಯ ಕಾಣಬೇಕು.
-ಹಲೀಮತ್ ಸಅದಿಯಾ
haleesukhi@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

