ವಿಕೃತ ಮನಸ್ಸುಗಳ ದಂಡಿಸಲು ವಯಸ್ಸಿನ ಮಿತಿಯೇಕೆ?
'ವಯಸ್ಸು 16 ವರ್ಷವಷ್ಟೇ ಆಗಿದ್ದರೂ ಅವರಿಗೆ ಬಾಲ ನ್ಯಾಯ ಕಾಯ್ದೆ ಬಗ್ಗೆ ಚೆನ್ನಾಗಿ ಗೊತ್ತು. ಅದು ಗೊತ್ತಿರುವುದಕ್ಕೇ ಅವರು ಅಪರಾಧ ಮಾಡುತ್ತಿರುವುದು. ಕೊಲೆ, ಅತ್ಯಾಚಾರದಂತಹ ಕೃತ್ಯ ಎಸಗುವ ಮಕ್ಕಳನ್ನು ವಯಸ್ಕರೆಂದೇ ಪರಿಗಣಿಸಿ ಶಿಕ್ಷಿಸಿದರೆ ಮಾತ್ರ ಅವರಲ್ಲಿ ಭಯ ಹುಟ್ಟಲು ಸಾಧ್ಯ'.
ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಮನೇಕಾ ಗಾಂಧಿ ಅವರು ಆಡಿದ ಈ ಮಾತುಗಳು ಹಲವರಿಗೆ ರುಚಿಸಿರಲಿಕ್ಕಿಲ್ಲ. ಮನೇಕಾರ ಮಾತುಗಳು ಒಪ್ಪುವಂಥದ್ದಲ್ಲ ಎಂದು ಅನೇಕರು ವಾದಿಸಬಹುದು. ಆದರೆ, ಬಾಲ ನ್ಯಾಯ ಕಾಯ್ದೆಯಲ್ಲಿ ಆಮೂಲಾಗ್ರ ಬದಲಾವಣೆ ತರಬೇಕು ಎಂಬ ನಿಟ್ಟಿನಲ್ಲಿ ಸಚಿವೆ ಮನೇಕಾ ಈ ಹೇಳಿಕೆ ನೀಡಿದ್ದಾರೆ. ಅಷ್ಟೇ ಅಲ್ಲ, ಸಚಿವೆಯ ಈ ಮಾತುಗಳು ಮಾಧ್ಯಮಗಳಿಗೆ ಆಹಾರವಾಗುತ್ತಿದೆ ಎನ್ನುವಾಗಲೇ ದೇಶದ ಸರ್ವೋಚ್ಚ ನ್ಯಾಯಾಲಯ ಮಹತ್ವದ ಆದೇಶವೊಂದನ್ನು ಹೊರಡಿಸಿದೆ. ಸರ್ಕಾರಿ ಉದ್ಯೋಗಕ್ಕೆ ವಯಸ್ಸು ನಿಗದಿಪಡಿಸುವಂತೆ ಅಪರಾಧ ಪ್ರಕರಣಗಳಲ್ಲಿ ವಯಸ್ಸಿನ ಮಿತಿ ಹೇರಲು ಸಾಧ್ಯವಿಲ್ಲ. ಸರ್ಕಾರವು ಬಾಲ ನ್ಯಾಯ ಕಾಯ್ದೆ (ಒ್ಡಢಜಟ್ಝಿಟಜ ಒ್ಡಡಡ್ಝ್ಛಿಜ ಆ್ಛಡಿ)ಯನ್ನು ಮರುಪರಿಶೀಲನೆ ನಡೆಸುವ ಅಗತ್ಯವಿದೆ ಎಂದು ಹೇಳಿದೆ.
ಇಲ್ಲಿ ಮೇನಕಾರ ಹೇಳಿಕೆ ಮತ್ತು ಸುಪ್ರೀಂ ನೀಡಿರುವ ಸಲಹೆ ಎರಡನ್ನೂ ನೋಡಿದರೆ, ಬಾಲಾಪರಾಧ ಎನ್ನುವುದು ಎಂತಹ ಅಪಾಯದ ಮಟ್ಟಕ್ಕೆ ತಲುಪಿದೆ ಎನ್ನುವುದು ತಿಳಿಯುತ್ತದೆ. ಸರ್ಕಾರ ಕೂಡಲೇ ಈ ಬಗ್ಗೆ ಕ್ರಮ ಕೈಗೊಳ್ಳದಿದ್ದರೆ ಮುಂದೆ ಆಗಬಹುದಾದ ಅನಾಹುತಗಳ ಬಗ್ಗೆ ಯೋಚಿಸಿದಾಗ ನಡುಕ ಹುಟ್ಟುತ್ತದೆ.
ಹೌದು. ನಮ್ಮ ದೇಶದಲ್ಲಿ ಬಾಲಾಪರಾಧ ಎನ್ನುವುದು ಇತ್ತೀಚಿನ ದಿನಗಳಲ್ಲಿ ಗಂಭೀರ ಸಮಸ್ಯೆಯಾಗಿ ಕಾಡತೊಡಗಿದೆ. ಬಾಲಾಪರಾಧಕ್ಕೆ ನಿಗದಿಪಡಿಸಿರುವ ಅತ್ಯಲ್ಪ ಶಿಕ್ಷೆಯ ಪ್ರಮಾಣ ಇದಕ್ಕೆ ಕಾರಣವೋ ಅಥವಾ ಬದಲಾಗುತ್ತಿರುವ ಸಾಮಾಜಿಕ ವ್ಯವಸ್ಥೆ ಕಾರಣವೋ ಗೊತ್ತಾಗುತ್ತಿಲ್ಲ.
2012ರ ಡಿ.16ರಂದು ದೆಹಲಿಯಲ್ಲಿ ಅರೆವೈದ್ಯಕೀಯ ವಿದ್ಯಾರ್ಥಿನಿ ಮೇಲೆ 6 ಮಂದಿ ರಾಕ್ಷಸರು ನಡೆಸಿದ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನೇ ಗಮನಿಸೋಣ. ನಿರ್ಭಯಾಳ ಮೇಲೆ ಅಮಾನುಷವಾಗಿ ಅತ್ಯಾಚಾರ ಮಾಡಿದ ಐವರಿಗೆ ಕೋರ್ಟ್ ಗಲ್ಲುಶಿಕ್ಷೆ ವಿಧಿಸಿತು. ಆದರೆ ಒಬ್ಬ ಬಾಲ ರಾಕ್ಷಸ ಮಾತ್ರ ಶಿಕ್ಷೆಯಿಂದ ತಪ್ಪಿಸಿಕೊಂಡ. ಇದಕ್ಕೆ ಕಾರಣ ಆತನ ವಯಸ್ಸು. ಪ್ರಕರಣ ನಡೆದಾಗ ಆತನಿಗೆ 17 ವರ್ಷ 4 ತಿಂಗಳಾಗಿತ್ತು. ಹಾಗಾಗಿ ಈತ ಬಾಲಾಪರಾಧಿ ಎಂದು ಕೋರ್ಟ್ ತೀರ್ಪಿತ್ತಿತು. ಮೂರು ವರ್ಷ ಮನಪರಿವರ್ತನೆ ಕೇಂದ್ರದಲ್ಲಿ ಕಳೆದರೆ, ನಂತರ ಆತ ಸ್ವತಂತ್ರ.
ನೈಜ ವಿಚಾರವೆಂದರೆ, ನಿರ್ಭಯಾಳ ಮೇಲೆ ಅತ್ಯಾಚಾರ ಆದ ಸಂದರ್ಭದಲ್ಲಿ ಆಕೆಯೊಂದಿಗೆ ಅತ್ಯಂತ ಕ್ರೂರವಾಗಿ ವರ್ತಿಸಿದ್ದು ಬೇರ್ಯಾರೂ ಅಲ್ಲ, ಇದೇ ಬಾಲ ಅಪರಾಧಿ. ಕಬ್ಬಿಣದ ರಾಡ್ ಅನ್ನು ಆಕೆಯ ಗುಪ್ತಾಂಗದೊಳಕ್ಕೆ ತೂರಿ, ಆಕೆಯ ಕರುಳೇ ಕಿತ್ತು ಹೊರಬರುವಂತೆ ಮಾಡಿದ್ದು ಬೇರ್ಯಾರೂ ಅಲ್ಲ. '18 ವರ್ಷ ತುಂಬಿರದ' ಇದೇ ರಾಕ್ಷಸ. ಕರುಳಿಗಾದ ಹಾನಿ, ಕಿಬ್ಬೊಟ್ಟೆ ಸೋಂಕಿನಿಂದ ನರಳಿ ನರಳಿ ನಿರ್ಭಯಾ ಕೊನೆಯುಸಿರೆಳೆಯಲು ಕಾರಣನಾದವನು ಇದೇ 'ಅಪ್ರಾಪ್ರ ವಯಸ್ಸಿನ'(?) ವಿಕೃತಕಾಮಿ. ಇಂತಹ ಕ್ರೌರ್ಯವನ್ನು ಮೆರೆದವನು, ಮೃಗದಂತೆ ವರ್ತಿಸಿದವನು ಬಾಲಕ ಎಂದರೆ ಯಾರಾದರೂ ಒಪ್ಪಲು ಸಾಧ್ಯವೇ? ಆತ ಇನ್ನೂ ಮಾನಸಿಕವಾಗಿ ಪ್ರೌಢಾವಸ್ಥೆಗೆ ಬಾರದ ಹುಡುಗ ಎಂಬುದನ್ನು ಅರಗಿಸಿಕೊಳ್ಳಲು ಮನಸ್ಸು ಒಪ್ಪುತ್ತದೆಯೇ? ಖಂಡಿತಾ ಇಲ್ಲ. ನನ್ನ ಪ್ರಕಾರ, ಇಷ್ಟೊಂದು ಕ್ರೂರತೆ ಮೈಗೂಡಿಸಿಕೊಂಡವರು ಮಕ್ಕಳಾಗಿರಲು ಸಾಧ್ಯವೇ ಇಲ್ಲ. 18 ವರ್ಷ ತುಂಬಿದೊಡನೆ ಅವನು ಪ್ರೌಢನಾಗಿ, ಒಳ್ಳೆಯ ವ್ಯಕ್ತಿಯಾಗುತ್ತಾನೆಂಬ ನಂಬಿಕೆಯೂ ಇಲ್ಲ.
ಅತ್ಯಾಚಾರ, ಕೊಲೆಯಂತಹ ಘೋರ ಅಪರಾಧ ಮಾಡುವವರನ್ನು, 18ರೊಳಗಿನವರಾಗಿದ್ದರೂ ವಯಸ್ಕರಂತೆ ಪರಿಗಣಿಸಿ ಶಿಕ್ಷಿಸಬೇಕು ಎಂಬ ಸಚಿವೆಯ ಮಾತು ಒಪ್ಪತಕ್ಕದ್ದು. 18ರೊಳಗಿನ ಮಕ್ಕಳು ಮಾಡಿದ ಸಾಧನೆಯನ್ನು, ಅವರು ವಿಜ್ಞಾನ, ತಂತ್ರಜ್ಞಾನ ಕ್ಷೇತ್ರದಲ್ಲಿ ಗಳಿಸಿದ ಯಶಸ್ಸನ್ನು ನಾವು ಗಂಭೀರವಾಗಿ ಪರಿಗಣಿಸುತ್ತೇವೆ. ಅವರ ಸಾಧನೆಯನ್ನೂ ವಯಸ್ಕರು ಮಾಡಿದ ಸಾಧನೆಯಂತೆಯೇ ಎಂದು ಪರಿಗಣಿಸಿ ಶ್ಲಾಘಿಸುತ್ತೇವೆ. ಅವರಿಗೂ ಪ್ರಶಸ್ತಿ, ಬಿರುದು ನೀಡಿ ಸನ್ಮಾನಿಸುತ್ತೇವೆ. ಆದರೆ ಶಿಕ್ಷೆಯ ವಿಚಾರಕ್ಕೆ ಬಂದಾಗ ಮಾತ್ರ ಅವರು ಎಸಗಿದ ಅಪರಾಧ ಎಷ್ಟು ಘೋರವಾಗಿದ್ದರೂ 18 ವರ್ಷ ತುಂಬಿಲ್ಲ ಎಂಬ ಕಾರಣಕ್ಕೆ ಬಿಟ್ಟುಬಿಡುತ್ತೇವೆ. ಮನಪರಿವರ್ತನೆ ಕೇಂದ್ರದಲ್ಲಿ ಹಾಕಿ ಕೈತೊಳೆದುಕೊಳ್ಳುತ್ತೇವೆ. ಕ್ರೌರ್ಯವನ್ನು ತುಂಬಿಕೊಂಡ ಮಕ್ಕಳು ಮನಪರಿವರ್ತನೆ ಕೇಂದ್ರದಲ್ಲಿ ಹಾಕಿದೊಡನೆ ಬದಲಾಗುತ್ತಾರಾ?
'ಇಲ್ಲ. ಅಂತಹ ಮಕ್ಕಳ ಮನಸ್ಸಲ್ಲಿ ಕ್ರೌರ್ಯಕ್ಕೆ ಮಾತ್ರವೇ ಜಾಗವಿರುತ್ತದೆ. ಅವರು ಎಲ್ಲವನ್ನೂ ಅದೇ ದೃಷ್ಟಿಯಿಂದ ನೋಡುತ್ತಾರೆ. ಅವರು ವಿವೇಚನೆ ಇಲ್ಲದೆ ಅಪರಾಧ ಎಸಗುವುದಿಲ್ಲ. ತಾನು ಏನು ಮಾಡುತ್ತಿದ್ದೇನೆ, ಅದರ ಪರಿಣಾಮ ಏನಾಗಬಹುದು ಎಂದು ಗೊತ್ತಿದ್ದೇ ಕ್ರಿಮಿನಲ್ ಕೆಲಸಕ್ಕೆ ಕೈಹಾಕುತ್ತಾರೆ. ಇಂತಹ ಮಕ್ಕಳನ್ನು ಮನಪರಿವರ್ತನೆ ಕೇಂದ್ರಕ್ಕೆ ಹಾಕಿದರೂ ಅವರು ಬದಲಾಗುವುದಿಲ್ಲ. ಅಲ್ಲಿರುವ ಇತರೆ ಬಾಲಾರೋಪಿಗಳ ಮೇಲೆ ತಮ್ಮ ಕ್ರೌರ್ಯ ಪ್ರದರ್ಶಿಸುವ, ಅವರ ಮೇಲೆ ದಾಳಿ ನಡೆಸುವ ಅಪಾಯವೇ ಹೆಚ್ಚು. ಹಾಗಾಗಿ ಘೋರ ಅಪರಾಧಗಳನ್ನು ಎಸಗುವ ಮಕ್ಕಳನ್ನು ವಯಸ್ಕರೆಂದು ಪರಿಗಣಿಸಿ ಶಿಕ್ಷಿಸುವುದರಲ್ಲಿ ತಪ್ಪಿಲ್ಲ ಎನ್ನುತ್ತಾರೆ ಬೆಂಗಳೂರಿನ ಖ್ಯಾತ ಮನಶ್ಶಾಸ್ತ್ರಜ್ಞ ಡಾ. ಶ್ರೀಧರ್.
ದೆಹಲಿ ಪೊಲೀಸರು ನೀಡಿದ ವರದಿಯ ಪ್ರಕಾರ, ರಾಷ್ಟ್ರ ರಾಜಧಾನಿಯಲ್ಲಿ ನಡೆದಿರುವ ಶೇ.50ರಷ್ಟು ಲೈಂಗಿಕ ಕಿರುಕುಳ ಪ್ರಕರಣದ ಆರೋಪಿಗಳು 16 ವರ್ಷಕ್ಕಿಂತ ಕೆಳಗಿನವರು. ರಾಷ್ಟ್ರೀಯ ಅಪರಾಧ ದಾಖಲೆಗಳ ವಿಭಾಗ ನೀಡಿದ ಅಂಕಿ ಅಂಶದತ್ತ ಕಣ್ಣು ಹಾಯಿಸೋಣ. 2013ರಲ್ಲಿ ಬಾಲಾಪರಾಧಿಗಳ ಮೇಲೆ ದಾಖಲಾದ ಲೈಂಗಿಕ ದೌರ್ಜನ್ಯ ಪ್ರಕರಣಗಳು ಬರೋಬ್ಬರಿ 4,085. ಈ ಪೈಕಿ 16ರಿಂದ 18 ವರ್ಷದೊಳಗಿನವರ ಮೇಲೆ 2,838 ಪ್ರಕರಣ ದಾಖಲಾಗಿವೆ. ಈಗ ಹೇಳಿ, ಇವರೆಲ್ಲಾ ಮಕ್ಕಳಾ? ವಿವೇಚನೆ ಇಲ್ಲದೆ, ಬುದ್ಧಿ ಬೆಳೆಯದೇ ಇಂತಹ ಕೃತ್ಯ ಎಸಗುತ್ತಾರಾ?
ನಾವು ಜಾಗತೀಕರಣಕ್ಕೆ ತೆರೆದುಕೊಂಡ ಬಳಿಕ, ಆಧುನಿಕ ತಂತ್ರಜ್ಞಾನಗಳನ್ನು ಮೈಗೂಡಿಸಿಕೊಂಡ ಬಳಿಕ ಪರಿಸ್ಥಿತಿ ಮೊದಲಿನಂತಿಲ್ಲ. ಎಲ್ಲ ಮಕ್ಕಳಿಗೂ ಮೊಬೈಲ್, ಟಿವಿ, ಇಂಟರ್ನೆಟ್ ಸುಲಭವಾಗಿ ದಕ್ಕುವಂತಾಗಿದೆ.
ಅನುಕೂಲದ ಜತೆಗೇ ಈ ತಂತ್ರಜ್ಞಾನಗಳಿಂದ ಆಗುತ್ತಿರುವ ದುಷ್ಪರಿಣಾಮಗಳು ಒಂದೆರಡಲ್ಲ. ಮಾಧ್ಯಮಗಳೂ ಸಾಮಾಜಿಕ ಬದ್ಧತೆ ಮರೆತು ಅಶ್ಲೀಲ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಿವೆ. ಮಕ್ಕಳ ಮನಸ್ಸನ್ನು ಕದಡಿಸುವಲ್ಲಿ ಇವುಗಳ ಪಾತ್ರ ಇಲ್ಲ ಎಂದು ಹೇಳುವಂತಿಲ್ಲ. ಇದೇ ವೇಳೆ ಮಕ್ಕಳ ಬೌದ್ದಿಕ ಮಟ್ಟವೂ ಬೆಳೆದಿದೆ. ಹೆಣ್ಣು ಮಕ್ಕಳೂ ಅಷ್ಟೆ, ಸಣ್ಣ ಪ್ರಾಯದಲ್ಲೇ ಋತುಮತಿಯಾಗುತ್ತಿದ್ದಾರೆ. ಹೆತ್ತವರ ಸೂಕ್ತ ಮಾರ್ಗದರ್ಶನದ ಕೊರತೆ ಅವರನ್ನು ಸುಲಭವಾಗಿ ದಾರಿ ತಪ್ಪುವಂತೆ ಅಥವಾ ದುರುಳರ ಕೈಗೆ ಸಿಕ್ಕಿ ನಲುಗುವಂತೆ ಮಾಡುತ್ತಿದೆ.
ನಮ್ಮಲ್ಲಿ ಬಾಲಾಪರಾಧಿಗಳಿಗೆ ಹೆಚ್ಚೆಂದರೆ 3 ವರ್ಷ ಶಿಕ್ಷೆ. ಅದೂ ಜೈಲಲ್ಲೇನೂ ಕೊಳೆಯಬೇಕಾಗಿಲ್ಲ. ಮನಪರಿವರ್ತನೆ ಕೇಂದ್ರದಲ್ಲಿ ದಿನದೂಡಿದರೆ ಸಾಕು. ಈ ವಿಚಾರ ಗೊತ್ತಿರುವ ಕಾರಣಕ್ಕೇ ಹಿಂಸಾಪ್ರವೃತ್ತಿಯ ಮಕ್ಕಳು ಅಪರಾಧ ಕೃತ್ಯಗಳಲ್ಲಿ ಹೆಚ್ಚೆಚ್ಚು ತೊಡಗುತ್ತಿದ್ದಾರೆ. ದಿನೇ ದಿನೇ ಬಾಲಾಪರಾಧಿಗಳ ಸಂಖ್ಯೆ ಹೆಚ್ಚುತ್ತಿದೆ. ನಮ್ಮ ಕಾನೂನಿನಲ್ಲಿ ಬಾಲಾಪರಾಧಿಗಳಿಗೆ ನೀಡಿರುವ ವಿನಾಯ್ತಿ ಎಷ್ಟರ ಮಟ್ಟಿಗೆ ದುರ್ಬಳಕೆಯಾಗುತ್ತಿದೆ ಎನ್ನುವುದಕ್ಕೆ ತಾಜಾ ಉದಾಹರಣೆ ಇಲ್ಲಿದೆ. ಇತ್ತೀಚೆಗಷ್ಟೇ ಪಾಕಿಸ್ತಾನದ ಮುಹಮ್ಮದ್ ನಾವೀದ್ ಜಟ್ ಎಂಬ ಉಗ್ರನನ್ನು ಶ್ರೀನಗರದಲ್ಲಿ ಪೊಲೀಸರು ಬಂಧಿಸಿದ್ದರು. ಭಾರತದೊಳಕ್ಕೆ ನುಸುಳಿದ್ದ ಈತನನ್ನು ಸೆರೆಹಿಡಿದ ಪೊಲೀಸರು, ನಿನ್ನ ವಯಸ್ಸೆಷ್ಟು ಎಂದು ಪ್ರಶ್ನಿಸಿದಾಗ ಆತ 17 ಎಂದು ಉತ್ತರಿಸಿದ್ದ. ನಂತರ ಆತನನ್ನು ಪರೀಕ್ಷೆಗೊಳಪಡಿಸಿದಾಗ ನೈಜ ವಯಸ್ಸು 22 ಎಂದು ತಿಳಿದುಬಂತು. ವಿಚಾರಣೆ ನಡೆಸಿದಾಗ, ತಾನು ಸುಳ್ಳು ಹೇಳಿದ್ದಾಗಿ ಆತ ಒಪ್ಪಿಕೊಂಡ. ನಮ್ಮನ್ನು ವಿಧ್ವಂಸಕ ಕೃತ್ಯವೆಸಗಲೆಂದು ಭಾರತಕ್ಕೆ ಕಳುಹಿಸಲಾಗಿದೆ. ಆಕಸ್ಮಿಕವಾಗಿ ಯೋಧರು ಅಥವಾ ಪೊಲೀಸರ ಕೈಗೆ ಸಿಕ್ಕಿಬಿದ್ದರೆ ನಿಮ್ಮ ವಯಸ್ಸು 18ಕ್ಕಿಂತ ಕಡಿಮೆ ಎಂದು ಸುಳ್ಳು ಹೇಳಿ. ಭಾರತದಲ್ಲಿ 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ 3 ವರ್ಷಕ್ಕಿಂತ ಹೆಚ್ಚು ಶಿಕ್ಷೆಯಾಗುವುದಿಲ್ಲ ಎಂದು ನಮ್ಮನ್ನು ಕಳುಹಿಸಿಕೊಟ್ಟಿರುವ ಲಷ್ಕರ್ ನಾಯಕ ಹೇಳಿಕೊಟ್ಟಿದ್ದಾನೆ. ಹಾಗಾಗಿಯೇ ನಾನು 17 ಎಂದು ಸುಳ್ಳು ಹೇಳಿದೆ ಎಂದಿದ್ದಾನೆ ನಾವೀದ್. ಇದಕ್ಕೆ ಏನನ್ನಬೇಕು?
ಒಟ್ಟಾರೆಯಾಗಿ ಸುಪ್ರೀಂ ಕೋರ್ಟ್ ಸೂಚಿಸಿರುವಂತೆ ಬಾಲ ನ್ಯಾಯ ಕಾಯ್ದೆಯನ್ನು ಮರುಪರಿಶೀಲನೆಗೆ ಒಳಪಡಿಸದಿದ್ದರೆ, ಕಾನೂನನ್ನೇ ರಕ್ಷಾಕವಚವಾಗಿಟ್ಟುಕೊಂಡು ಅಪರಾಧ ಮಾಡುವವರ ಸಂಖ್ಯೆ ಹೆಚ್ಚಾಗುವ ಅಪಾಯವಿದೆ.
ಬ್ರಿಟನ್, ಫ್ರಾನ್ಸ್, ಅಮೆರಿಕ ಸೇರಿದಂತೆ ಅನೇಕ ರಾಷ್ಟ್ರಗಳಲ್ಲಿ ಪ್ರಕರಣದ ಗಂಭೀರತೆಯ ಆಧಾರದಲ್ಲಿ 18 ವರ್ಷದ ಕೆಳಗಿನವರನ್ನೂ ಕ್ರಿಮಿನಲ್ ಕೋರ್ಟ್ನಲ್ಲಿ ವಿಚಾರಣೆ ನಡೆಸಲಾಗುತ್ತದೆ. ವಯಸ್ಕರಿಗೆ ನೀಡುವಂತೆ ಶಿಕ್ಷೆ ನೀಡಲಾಗುತ್ತದೆ. ಈಗ ಭಾರತದಲ್ಲೂ ಬಾಲನ್ಯಾಯ ಕಾಯ್ದೆಯಲ್ಲಿ ಸುಧಾರಣೆ ತರಬೇಕಾದ ಕಾಲ ಬಂದಿದೆ. ಅಪರೂಪದಲ್ಲಿ ಅಪರೂಪದ ಪ್ರಕರಣಗಳು(ಘೋರ) ನಡೆದಾಗ ಬಾಲಕ ಎಂದು ನೋಡದೆ ಆತನಿಗೆ ಸೂಕ್ತ ಶಿಕ್ಷೆ ನೀಡುವಂತಹ ಕಾನೂನು ಜಾರಿಯಾಗಬೇಕು. ಬಾಲಾಪರಾಧಿಯ ವಯಸ್ಸಿನ ಮಿತಿಯನ್ನು 16ಕ್ಕಿಳಿಸಬೇಕು. ಕ್ರಿಮಿನಲ್ಗಳ ಮನಸ್ಸಲ್ಲಿ ಸ್ವಲ್ಪವಾದರೂ ಭಯ ಹುಟ್ಟಿಸಬೇಕು. ಅಪರಾಧ ಕೃತ್ಯಕ್ಕೆ ಮನಸ್ಸು ಮಾಡುವ ಮುಂಚೆಯೇ ಅವರಲ್ಲಿ ಶಿಕ್ಷೆಯ ಭಯ ಆವರಿಸಬೇಕು. ಆಗ ಮಾತ್ರ ಇಂತಹ ಪ್ರಕರಣಗಳಿಗೆ ಕಡಿವಾಣ ಬೀಳಲು ಸಾಧ್ಯ.
- ಹಲೀಮತ್ ಸಅದಿಯಾ
haleesukhi@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

