ತನ್ನಂತೆ ಪರರ ಬಗೆದೊಡೆ ಅನಾಚಾರಕ್ಕೆ ಆಸ್ಪದವೆಲ್ಲಿಹುದು?

ಅತ್ಯಾಚಾರ, ಅತ್ಯಾಚಾರ, ಅತ್ಯಾಚಾರ...ಈಗ ಎಲ್ಲೆಡೆ ಅದೇ ಮಾತು, ಅದರದೇ ಕತೆ...
ತನ್ನಂತೆ ಪರರ ಬಗೆದೊಡೆ ಅನಾಚಾರಕ್ಕೆ ಆಸ್ಪದವೆಲ್ಲಿಹುದು?
Updated on: 

ಅತ್ಯಾಚಾರ, ಅತ್ಯಾಚಾರ, ಅತ್ಯಾಚಾರ...
ಈಗ ಎಲ್ಲೆಡೆ ಅದೇ ಮಾತು, ಅದರದೇ ಕತೆ. ಯಾವ ಪತ್ರಿಕೆ ನೋಡಿ, ಯಾವ ಟಿವಿ ಚಾನೆಲ್ ಹಾಕಿ ಅದೇ ಸುದ್ದಿ. ಬಸ್‌ಸ್ಟ್ಯಾಂಡ್, ಹೋಟೆಲ್, ಪಾರ್ಕ್, ಸ್ಕೂಲ್, ಮಾಲ್, ಮನೆ, ಮಠ ಎಲ್ಲ ಕಡೆ ಅದರದೇ ಚರ್ಚೆ. ಅಲ್ಲಿ ಹಂಗಾಯ್ತಂತೆ, ಇಲ್ಲಿ ಹಿಂಗಾಯ್ತಂತೆ ಬರೀ ಇದೇ ಮಾತು. ಈ ಪಾಪಿಗಳಿಗೆ ಏನ್ ಬಂದಿರೋದು..? ಮಕ್ಕಳನ್ನೂ ಬಿಡಲ್ಲ, ಮುದುಕಿಯರನ್ನೂ ಬಿಡಲ್ಲ, ಇವರ ಮನೆ ಹಾಳಾಗಿ ಹೋಗಾ.. ಅಂತ ಹಿಡಿ ಶಾಪ. ರೇಪ್ ಮಾಡ್ದೋರನ್ನಾ ಗುಂಡಿಕ್ಕಿ ಕೊಲ್ಲಬೇಕು ಅಂತ ಒಬ್ಬರು, ನರ ಕಟ್ ಮಾಡಬೇಕು ಅಂತ ಮತ್ತೊಬ್ಬರು, ಲಿಂಗಚ್ಛೇದ ಮಾಡಬೇಕು ಅಂತ ಇನ್ನೊಬ್ಬರು, ಗಲ್ಲಿಗೇರಿಸಬೇಕು ಅಂತ ಮಗದೊಬ್ಬರು - ಹೀಗೆ ವೀರಾವೇಶದ ಮಾತುಗಳು ನಾನಾ ಸ್ವರೂಪದಲ್ಲಿ ಪ್ರತಿಧ್ವನಿಸುತ್ತಿವೆ.
ನಿಜ, ಪ್ರತಿನಿತ್ಯ ವರದಿ ಆಗುತ್ತಿರುವ ಅತ್ಯಾಚಾರ ಪ್ರಕರಣಗಳಿಂದ ಜನರ ಸಹನೆ ಕಳೆದು ಹೋಗಿದೆ. ನೋವಿನ ಕಟ್ಟೆಯೊಡೆದಿದೆ, ಅಕ್ರೋಶ ಸ್ಫೋಟಗೊಂಡಿದೆ. ಬೀದಿಗಿಳಿದು ಹೋರಾಡುವಂತೆ ಮಾಡಿದೆ. ಸರ್ಕಾರ, ಪೊಲೀಸ್ ಎಂದು ಕಾಯ್ದುಕೊಂಡರೆ ಆಗಲ್ಲ, ನಾವೇ ಏನಾದರೂ ಮಾಡಬೇಕು ಎಂದು ಅಂದುಕೊಳ್ಳುವವರೆಗೂ, ಅಂದರೆ ತಾವೇ ಕಾನೂನು ಕೈಗೊತ್ತಿಕೊಳ್ಳಬೇಕು ಎನ್ನುವಷ್ಟರ ಮಟ್ಟಿಗೆ ಅವರನ್ನು ಚಿಂತನೆಗೆ ಹಚ್ಚಿದೆ. ಇದು ಹತಾಶೆಯೋ, ಅಸಹಾಯಕತೆಯ ವಿಭೃತ ರೂಪವೋ, ಸರ್ಕಾರದ ಮಾತು, ಭರವಸೆಗಳ ಬಗೆಗಿನ ವಿಶ್ವಾಸ ಕೊರತೆಯ ಉತ್ತುಂಗವೋ ಹೇಳಲು ಆಗುತ್ತಿಲ್ಲ. ಏಕೆಂದರೆ ಅವರಿಗೆ ಸಾಮಾಜಿಕ ಜೀವನ ವ್ಯವಸ್ಥೆಯ ಬಗೆಗೆ ನಂಬಿಕೆ ಹೊರಟು ಹೋಗಿದೆ. ಹೀಗಾಗಿ ಅವರ ಚಿಂತನೆ ಮತ್ತು ಒಪ್ಪಿಕೊಂಡ ವ್ಯವಸ್ಥೆಯ ಸ್ವರೂಪದ ನಡುವೆ ಕಂದಕ ಕಾಣಿಸಿಕೊಂಡಿದೆ.
ಹಾಗಾದರೆ ಈಗ ಇದ್ದಕ್ಕಿದ್ದಂತೆ ಅತ್ಯಾಚಾರ ಪ್ರಕರಣಗಳು ಹೆಚ್ಚಾಗಿ ಹೋಗಿವೆಯೇ? ಈ ಹಿಂದೆ ಇಷ್ಟೊಂದು ಪ್ರಮಾಣದಲ್ಲಿ ಪ್ರಕರಣಗಳು ನಡೆಯುತ್ತಿರಲಿಲ್ಲವೇ? ಈಗ ಇದ್ದಕ್ಕಿದ್ದಂತೆ ಹೆಚ್ಚಾಗಲು ಕಾರಣಗಳೇನು? ಕಾನೂನು ವ್ಯವಸ್ಥೆಯಲ್ಲಿನ ದೋಷಗಳೇನು? ಸರ್ಕಾರದ ಲೋಪವೇನು? ಸಮಾಜದ ಪಾತ್ರವೇನು? ಎಂಬ ಪ್ರಶ್ನೆಗಳು ಸಹಜವಾಗಿಯೇ ಏಳುತ್ತವೆ. ಅದಕ್ಕೆ ಉತ್ತರ ಕೂಡ ಸ್ಪಷ್ಟವಿದೆ. ಸಮಾಜದಲ್ಲಿ ಈ ಅತ್ಯಾಚಾರದಂಥ ಘಾತಕ ಕೃತ್ಯಗಳು ಹಿಂದೆಯೂ ಇದೇ ರೀತಿ ನಡೆದಿದ್ದವು. ಈಗಲೂ ನಡೆಯುತ್ತಿವೆ. ಪ್ರಮಾಣದಲ್ಲಿ ಏರುಪೇರು ಇರಬಹುದು. ಆದರೆ ಇಡೀ ವಿಶ್ವದ ಗಮನ ಸೆಳೆದ ದಿಲ್ಲಿಯ ಅರೆವೈದ್ಯ ವಿದ್ಯಾರ್ಥಿನಿ ನಿರ್ಭಯಾಳ ನಿರ್ದಯ 'ಹತ್ಯಾಚಾರ' ಪ್ರಕರಣದ ನಂತರ ಭಾರತದಲ್ಲಿ ಅತ್ಯಾಚಾರ ಪ್ರಕರಣಗಳು 'ಸಾರ್ವಜನಿಕ ಮಹತ್ವ' ಪಡೆದುಕೊಂಡಿವೆ.
ಈ ಹಿಂದೆ ಎಲ್ಲ ಅತ್ಯಾಚಾರ ಪ್ರಕರಣಗಳು ಬೆಳಕಿಗೆ ಬರುತ್ತಿರಲಿಲ್ಲ. ಈಗಿನಂತೆ ವರದಿಯೂ ಆಗುತ್ತಿರಲಿಲ್ಲ. ನಿರ್ದಿಷ್ಟ ಪ್ರಕರಣಗಳು ಮಾತ್ರ ಪೊಲೀಸ್ ಠಾಣೆ ಮೆಟ್ಟಿಲು ಹತ್ತುತ್ತಿದ್ದವು. ಇದಕ್ಕೆ ಕಾರಣ ಸಾಮಾಜಿಕ ಮರ್ಯಾದೆ ಭೀತಿ. ಎಷ್ಟೋ ಪ್ರಕರಣಗಳು 'ಮರ್ಯಾದೆ' ಛಾಯೆಯಡಿ ಮುಚ್ಚಿ ಹೋಗುತ್ತಿದ್ದವು. ಅಂದರೆ ಮಾನಭಂಗಕ್ಕೆ ಒಳಗಾದವಳ ಭವಿಷ್ಯ ಹಾಗೂ ಕುಟುಂಬ ಗೌರವದ ನೆಪವೊಡ್ಡಿ ಪೋಷಕರೇ ಪ್ರಕರಣಕ್ಕೆ ಮನದೊಳಗೇ ಸಮಾಧಿ ಕಟ್ಟಿಬಿಡುತ್ತಿದ್ದರು. ಆದರೆ ನಿರ್ಭಯಾ ಪ್ರಕರಣದಲ್ಲಿ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಹಾಗೂ ಪತ್ರಿಕಾರಂಗ ಒಗ್ಗೂಡಿ ನಡೆದುಕೊಂಡ, ಅದನ್ನು ನಿರ್ವಹಿಸಿದ, ಪಾತಕಿಗಳಿಗೆ ಹೆಡೆಮುರಿಗೆ ಕಟ್ಟಿದ ರೀತಿ ಸಮಾಜದಲ್ಲೊಂದು ವಿಶ್ವಾಸದ ಬುಗ್ಗೆ ಉಕ್ಕಿಸಿದೆ. ಅತ್ಯಾಚಾರಕ್ಕೆ ಒಳಗಾದವರು ಮತ್ತು ಅವರ ಕುಟುಂಬ ಸದಸ್ಯರಲ್ಲಿಯೂ ಕೂಡ ಪ್ರಕರಣ ಮುಚ್ಚಿಟ್ಟರೆ ಕ್ರೌರ್ಯ ಸಮಾಜವನ್ನೇ ಅಣಕಿಸಿ ಮೆರೆಯುತ್ತದೆ ಎಂಬ ಪ್ರಜ್ಞೆ ಅರಳಿಸಿದೆ. ಭೀತಿ, ಭೀಡೆ ಕಳೆದಿದೆ. ಹೀಗಾಗಿ ಪೊಲೀಸ್ ಠಾಣೆಗೆ ಬರುತ್ತಿರುವ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ. ಹಿಂದೆ ಎಲ್ಲ ಪ್ರಕರಣಗಳು ವರದಿ ಆಗುತ್ತಿರಲಿಲ್ಲ. ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ಕಾಣುತ್ತಿರಲಿಲ್ಲ. ಕೋರ್ಟ್ ಮೆಟ್ಟಿಲು ಹತ್ತುತ್ತಿರಲಿಲ್ಲ. ಈಗ ಎಲ್ಲ ಅಲ್ಲದಿದ್ದರೂ ಬಹುತೇಕ ಬೆಳಕಿಗೆ ಬರುತ್ತಿವೆ. ಹಳ್ಳಿಹಾಡಿಯ ಸಂತ್ರಸ್ತರೂ ಮರ್ಯಾದೆ ಭೀತಿ ಬದಿಗೊತ್ತಿ ಪೊಲೀಸ್ ಠಾಣೆ ಮೆಟ್ಟಿಲು ಹತ್ತುತ್ತಿದ್ದಾರೆ. ಹೀಗಾಗಿ ಪ್ರಕರಣಗಳ ಸಂಖ್ಯೆಯೂ ಹೆಚ್ಚಿದೆ.
ನಿರ್ಭಯಾ ಪ್ರಕರಣದ ನಂತರ ಮಹಿಳಾ ದೌರ್ಜನ್ಯದ ಬಗ್ಗೆ ಜನರಲ್ಲಿ ಜಾಗೃತಿ ಹಾಗೂ ಆತಂಕ ಎರಡೂ ಒಟ್ಟೊಟ್ಟಿಗೆ ಬೆಳೆದಿದೆ. ಪ್ರತಿ ಅತ್ಯಾಚಾರಿಯ ಪಕ್ಕದಲ್ಲೂ ಒಬ್ಬೊಬ್ಬ ಪೊಲೀಸನನ್ನು ಕಾವಲಿಗೆ ಇಟ್ಟಿರಲು ಸಾಧ್ಯವಿಲ್ಲ. ಪ್ರತಿ ಮನೆಗೂ ಒಬ್ಬೊಬ್ಬ ಪೊಲೀಸನನ್ನು ಒದಗಿಸಲಾಗುವುದಿಲ್ಲ ಎಂಬುದೇನೋ ಸರಿ. ಆದರೆ, ಮಹಿಳಾ ದೌರ್ಜನ್ಯ ಪ್ರಕರಣಗಳು ವರದಿ ಆದಾಗ ಪೊಲೀಸರು ಕಾನೂನು ಪ್ರಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬಾರದು ಎಂದೇನೂ ಇಲ್ಲವಲ್ಲ. ಲಂಚದ ಆಸೆಗೋ, ಪ್ರಭಾವಿಗಳ ಒತ್ತಡಕ್ಕೋ ಮಣಿಯಬೇಕು ಎಂದು ಕಾನೂನಿನಲ್ಲಿ ಹೇಳಿಲ್ಲವಲ್ಲ. ಸಂಬಂಧಪಟ್ಟ ದಂಡ ಸಂಹಿತೆ, ಸೆಕ್ಷನ್ ಪ್ರಕಾರ ಪ್ರಕರಣ ದಾಖಲಿಸಿ ಆರೋಪಿಗಳಿಗೆ ಅರ್ಹ ಶಿಕ್ಷೆ ವಿಧಿಸುವಂತೆ ಮಾಡಿದರೆ ಸಾರ್ವಜನಿಕ ವಲಯದಲ್ಲಿ 'ಭಯ ಜಾಗೃತಿ' ಮೂಡಿಸಬಹುದಲ್ಲ. ಆದರೆ, ಬಹುತೇಕ ಪ್ರಕರಣಗಳಲ್ಲಿ ಪೊಲೀಸರ 'ಮಧ್ಯಸ್ಥಿಕೆ' ಹಾಗೂ 'ಸಹಕಾರ'ದಿಂದ ಆರೋಪಿಗಳು ಪಾರಾಗುತ್ತಿದ್ದಾರೆ. ಇದರ ಜತೆಗೆ ನ್ಯಾಯ ಪ್ರಕ್ರಿಯೆ ಹಂತದಲ್ಲಿ ಆರೋಪಿಗಳ ಜತೆಗೆ ಸಂತ್ರಸ್ತರು ರಾಜಿ ಮಾಡಿಕೊಳ್ಳುತ್ತಾರೆ. ಶಿಕ್ಷೆ ಪ್ರಮಾಣ ಕುಸಿತಕ್ಕೆ ಈ ಎರಡೂ ಮೂಲ ಕಾರಣ.
ಇಲ್ಲಿ ಇನ್ನೂ ಒಂದು ವಿಷಯವಿದೆ. ನಿರ್ಭಯಾ ಪ್ರಕರಣದ ನಂತರ ಸಂಬಂಧಪಟ್ಟ ಕಾನೂನು, ಕಾಯ್ದೆಗೆ ಅಂದಿನ ಯುಪಿಎ ಸರ್ಕಾರ ಒಂದಷ್ಟು ತಿದ್ದುಪಡಿಗಳನ್ನು ತಂದಿತು. ಲೈಂಗಿಕ ಕಿರುಕುಳ ಕೂಡ ಅತ್ಯಾಚಾರಕ್ಕೆ ಸಮ ಎಂಬ ಅಂಶ ಇದರಲ್ಲಿ ಸೇರಿದೆ. ಆಶ್ಚರ್ಯ ಹಾಗೂ ದುರಂತವೆಂದರೆ ಇಂಥದೊಂದು ಕಾನೂನು ಜಾರಿಯಲ್ಲಿದೆ ಎಂಬ ಅಂಶ ಬೆಂಗಳೂರಿನಲ್ಲಿ ಮೊನ್ನೆ ನಡೆದ ಯುವತಿಯ ಅಪಹರಣ ಹಾಗೂ ಲೈಂಗಿಕ ಕಿರುಕುಳ ಪ್ರಕರಣದ ವಿಚಾರಣೆ ನಡೆಸಿದ ಪೊಲೀಸ್ ಇನ್ಸ್‌ಪೆಕ್ಟರ್ ಮಹಮ್ಮದ್ ರಫಿಕ್ ಅವರಿಗೆ ಗೊತ್ತೇ ಇರಲಿಲ್ಲವಂತೆ. ಹಾಗೆಂದು ಅವರೇ ಒಪ್ಪಿಕೊಂಡಿದ್ದಾರೆ. ಕರ್ತವ್ಯಲೋಪದ ಮೇಲೆ ಅವರು ಸೇವೆಯಿಂದ ಅಮಾನತುಗೊಂಡಿದ್ದಾರೆ ಎಂಬುದು ಬೇರೆ ವಿಚಾರ.
ಕಾನೂನು ರಕ್ಷಣೆ ಜವಾಬ್ದಾರಿ ಹೊತ್ತಿರುವ ಪೊಲೀಸ್ ಅಧಿಕಾರಿಗಳಿಗೇ ಕಾನೂನು ಬಗ್ಗೆ ಜ್ಞಾನವಿಲ್ಲವೆಂದರೆ ಇದೆಂಥಾ ಆತ್ಮಘಾತುಕದ ವಿಚಾರ? ಇದಕ್ಕೆ ಕಾರಣ ಕಾನೂನು ತಿದ್ದುಪಡಿ ಜ್ಞಾನವನ್ನು ಪೊಲೀಸ್ ಘಟಕಾಧಿಕಾರಿಗಳು ತಮ್ಮ ಅಧೀನ ಅಧಿಕಾರಿಗಳಿಗೆ ರವಾನಿಸದಿರುವುದು. ಹೀಗಾಗಿ ಕೆಳಹಂತದ ಅಧಿಕಾರಿಗಳು ಒಬಿರಾಯನ ಕಾಲದ ಕಾನೂನು ನಂಬಿಕೆಯನ್ನೇ ಹಿಡಿದುಕೊಂಡು ಬೆತ್ತ ಕುಟ್ಟುತ್ತಿದ್ದಾರೆ. ಕಳ್ಳರನ್ನು ಹಿಡಿಯುವುದು, ಬಾಜಿ ಕಟ್ ಹಾಕುವುದು, ಏರೋಪ್ಲೇನ್ ಹತ್ತಿಸುವುದು, ಲಾಳ ಬಾರಿಸುವುದು ಇವಿಷ್ಟೇ ಪೊಲೀಸರ ಕೆಲಸವಲ್ಲ. ಅವರಲ್ಲಿ ಸಮಾಜಮುಖಿ ಕಾನೂನುಗಳು, ಅವುಗಳ ತಿದ್ದುಪಡಿಗಳು, ಸಮರ್ಪಕ ಅನುಷ್ಠಾನದ ಬಗ್ಗೆಯೂ ಅರಿವು ಮೂಡಿಸುವುದು ಹಿರಿಯ ಅಧಿಕಾರಿಗಳ ಕರ್ತವ್ಯ. ಇದಕ್ಕಾಗಿ ಕಾಲಕಾಲಕ್ಕೆ ಕಾರ್ಯಾಗಾರ ನಡೆಸಬೇಕು. ತಿಳಿವಳಿಕೆ ಮೂಡಿಸಬೇಕು.
ಪೊಲೀಸ್ ಇಲಾಖೆ ಆಧುನೀಕರಣ ಎಂದರೆ ನವವಿನ್ಯಾಸದ ಕಟ್ಟಡಗಳ ನಿರ್ಮಾಣ, ಅತ್ಯಾಧುನಿಕ ರಿವಾಲ್ವರ್, ಪಿಸ್ತೂಲ್, ಬುಲೆಟ್, ವಾಹನ ಒದಗಿಸುವುದಷ್ಟೇ ಅಲ್ಲ. ಕಾಲಕಾಲಕ್ಕೆ ಆಗುವ ಕಾನೂನು ತಿದ್ದುಪಡಿಗಳ ಬಗ್ಗೆ ಅರಿವು ಮೂಡಿಸುವುದು ಕೂಡ ಇದರ ವ್ಯಾಪ್ತಿಗೆ ಬರುತ್ತದೆ. ಮೊದಲಿಗೆ ಈ ಕೆಲಸ ಆಗಬೇಕು. ಇದರ ಜತೆಗೆ ಅಪರಾಧ ನಿಯಂತ್ರಣಕ್ಕೆ ಬಳಸುವ 'ಸಾಮ', 'ಬೇಧ', 'ದಂಡ' ಪ್ರಯೋಗವನ್ನು ಪೊಲೀಸ್ ಇಲಾಖೆಯ ಆಂತರಿಕ ವಲಯಕ್ಕೂ ಅನ್ವಯಿಸಬೇಕು. ಅಪರಾಧ ಪ್ರಕರಣಗಳ ಕುಸಿತ ಹಾಗೂ ಶಿಕ್ಷೆಯ ಪ್ರಮಾಣ ಹೆಚ್ಚಳಕ್ಕೆ ಇದು ಅನಿವಾರ್ಯ.  ಹಿಂದೆ ಪೊಲೀಸ್ ಮಹಾನಿರ್ದೇಶಕರಾಗಿದ್ದ (ಡಿಜಿಪಿ) ಅಜಯಕುಮಾರ್ ಸಿಂಗ್ ಪದೇ ಪದೇ ಒಂದು ಮಾತು ಹೇಳುತ್ತಿದ್ದರು. 'ನೊಂದವರಿಗೆ ನೆರವು ನೀಡಿ. ಅದೇ ಇಲಾಖೆಯ ತತ್ವ ಆಗಿರಲಿ, ಗುರಿ ಆಗಿರಲಿ. ಮಹಿಳಾ ದೌರ್ಜನ್ಯ ಪ್ರಕರಣಗಳನ್ನು ನಿರ್ವಹಿಸುವಾಗ ಸೂಕ್ಷ್ಮ ಸಂವೇದನೆ ಇರಲಿ' ಎಂದು ಪುನರುಚ್ಚರಿಸುತ್ತಿದ್ದರು. ನಿಜ. ಒಬ್ಬ ವ್ಯಕ್ತಿ ಪಕ್ಕದ ಮನೆ ಮಹಿಳೆ ಮೇಲೆ ಹಲ್ಲೆ, ಅತ್ಯಾಚಾರ ನಡೆದಾಗ ನೋಡುವ ರೀತಿ ಹಾಗೂ ಅದೇ ಪ್ರಕರಣ ತನ್ನ ಮನೆಯಲ್ಲಿ ಘಟಿಸಿದಾಗ ನೋಡುವ ಪರಿ ನಡುವೆ ಸಾಕಷ್ಟು ವ್ಯತ್ಯಾಸ ಇರುತ್ತದೆ. ತನ್ನ ಘಟನೆ ಬಗ್ಗೆ ಇರುವ ಅನುಕಂಪ ಪಕ್ಕದ ಮನೆಯ ಪ್ರಕರಣ ನೋಡುವಾಗ 'ತುಚ್ಛ'ವಾಗಿ ಪರಿವರ್ತನೆ ಹೊಂದಿರುತ್ತದೆ. ಹೀಗಾಗಿ ಇಂಥ ಪ್ರಕರಣಗಳು ಪೊಲೀಸ್ ಠಾಣೆಗೆ ಬಂದಾಗ ತಮ್ಮ ಮನೆಯವೇ ಎಂಬ ರೀತಿಯಲ್ಲಿ ಪೊಲೀಸರು ಪರಿಗಣಿಸಬೇಕು. ಅದಕ್ಕೆ ತಕ್ಕ ರೀತಿಯಲ್ಲಿ ವರ್ತಿಸಬೇಕು ಎಂಬುದು ಅವರ ಮಾತಿನ ಆಶಯವಾಗಿತ್ತು. ಅದು ಬಿಟ್ಟು ಪೊಲೀಸರು ಅತ್ಯಾಚಾರ ಪ್ರಕರಣದ ವಿಚಾರಣೆಯನ್ನು ಪರಂಪರಾಗತ ಒರಟು ಶೈಲಿಯಲ್ಲಿ ನೆರೆ ದೇಶದ ಮೇಲಿನ ಯುದ್ಧ ರೀತಿ ಮಾಡಹೊರಟರೆ ಸಂತ್ರಸ್ತಳು ಮತ್ತೊಮ್ಮೆ 'ನುಡಿ ಅತ್ಯಾಚಾರ'ಕ್ಕೆ ಒಳಗಾದಂತೆಯೇ ಸರಿ. ಹೀಗಾಗಿ ಸಾಕಷ್ಟು ಪ್ರಕರಣಗಳು ಠಾಣೆಯಿಂದ ದೂರ ಉಳಿಯುತ್ತವೆ. ಇಲ್ಲವೇ ಠಾಣೆಯಲ್ಲೇ ಗೋರಿ ಕಾಣುತ್ತವೆ.
ಇನ್ನು ಅತ್ಯಾಚಾರ ಪ್ರಕರಣಗಳ ರಾಜಕೀಕರಣದ ಬಗ್ಗೆ ಅಸಹ್ಯ ಉಂಟಾಗುತ್ತದೆ. ಒಂದು ಸಾಮಾಜಿಕ ಸಮಸ್ಯೆಗೆ ಪರಿಹಾರ ಕಂಡು ಹಿಡಿಯುವ ಬದಲು ರಾಜಕೀಯ ಪ್ರತಿಷ್ಠೆ ಮೆರೆಯಲು ಬಳಕೆ ಮಾಡುತ್ತಿರುವುದು ಘೋರ ದುರಂತ. ಆಡಳಿತ ಮತ್ತು ಪ್ರತಿಪಕ್ಷಗಳು "ನಮ್ಮ ಕಾಲದಲ್ಲಿ ಏನಾಗಿತ್ತು? ನಿಮ್ಮ ಕಾಲದಲ್ಲಿ ಎಷ್ಟಾಗುತ್ತಿವೆ?" ಎಂಬ ಗುಣಾಕಾರಕ್ಕೆ ಅಪರಾಧ ಪ್ರಕರಣಗಳನ್ನು ಸೀಮಿತಗೊಳಿಸಲು ಹೊರಟಿರುವುದರ ಹಿಂದೆ ಸಂಕುಚಿತ ಮನೋಭಾವ ಮೆರೆದಾಡುತ್ತಿದೆಯೇ ಹೊರತು ಯಾವುದೇ ಸಾಮಾಜಿಕ ಕಾಳಜಿ, ಹೊಣೆಗಾರಿಕೆ ಅಲ್ಲ. ಉತ್ತರ ಪ್ರದೇಶದ ಜನಸಂಖ್ಯೆಗೆ ಹೋಲಿಸಿದರೆ ಅಲ್ಲಾಗುತ್ತಿರುವ ಅತ್ಯಾಚಾರ ಪ್ರಕರಣಗಳ ಪ್ರಮಾಣ ಬಹಳ ಕಡಿಮೆ ಎಂದು ಆ ರಾಜ್ಯದ ಮುಖ್ಯಮಂತ್ರಿಯ ಅಪ್ಪ, ಮಾಜಿ ಮುಖ್ಯಮಂತ್ರಿ ಮುಲಾಯಂ ಸಿಂಗ್ ಯಾದವ್ ಅಪ್ಪಣೆ ಕೊಡಿಸುತ್ತಾರೆ. ಮಹಿಳೆಯರು ಮೈ ಕಾಣಿಸುವಂತೆ ವಸ್ತ್ರ ಧರಿಸಿದರೆ ಆಗುವುದೇ ಹೀಗೇ ಎಂದು ನಿರ್ಭಯಾಳ 'ಹತ್ಯಾಚಾರ' ನಡೆದಾಗ ದಿಲ್ಲಿಯ ಮುಖ್ಯಮಂತ್ರಿ ಈಗ ಮಾಜಿಯಾಗಿರುವ ಶೀಲಾ ದಿಕ್ಷಿತ್ ಉಲಿಯುತ್ತಾರೆ. ಮುರ್ನಾಲ್ಕು ವರ್ಷದ ಹಾಲುಗಲ್ಲದ ಹಸುಗೂಸಿನ ಮೇಲೆ, ಅರವತ್ತೈದು ವರ್ಷದ ಹಲ್ಲಿಲ್ಲದ ಮುದುಕಿ ಮೇಲೆ ಅತ್ಯಾಚಾರ ನಡೆದಿದೆಯಲ್ಲ ಇವರ್ಯಾವ ಅಂಗ ಪ್ರದರ್ಶನಕ್ಕೆ ಹೋಗಿದ್ದರು, ಕಾಮುಕರ ವಾಂಛೆಯನ್ನು ಕೆರಳಿಸಿದ್ದರು ಎಂಬುದನ್ನು ಆ ಶೀಲಾ ಮಾತೆಯೇ, ಅವರಂತೆ ಬೇಜವಾಬ್ದಾರಿ ಹೇಳಿಕೆಗಳನ್ನು ಮಹಾಮಹಿಮರು ಹೇಳಬೇಕು. ಬರೀ 'ಶೀಲಾ' ಎಂದು ಹೆಸರಿಟ್ಟುಕೊಂಡರೆ ಸಾಲದು. ಬೇರೆಯವರಲ್ಲಿಯೂ ಕಾಣಬೇಕು ಹಾಗೂ ಗೌರವಿಸಬೇಕು.
ಜವಾಬ್ದಾರಿಯ ವಿಚಾರ ಬಂದಾಗ ಸರ್ಕಾರವೇ ಆಗಲಿ, ರಾಜಕಾರಣಿಗಳೇ ಆಗಲಿ, ಶಾಲಾ- ಕಾಲೇಜು ಆಡಳಿತ ಮಂಡಳಿಗಳೇ ಆಗಲಿ, ಜನಸಾಮಾನ್ಯರೇ ಆಗಲಿ ಯಾರೂ ಪಲಾಯನ ಮಾಡಲು ಸಾಧ್ಯವಿಲ್ಲ. ಹಾಗೆಯೇ ಪರಸ್ಪರರ ಮೇಲೆ ಹೊರಿಸಲೂ ಆಗುವುದಿಲ್ಲ. ಸತಿ ಪದ್ಧತಿ, ಬಾಲ್ಯ ವಿವಾಹ, ಹೆಣ್ಣು ಭ್ರೂಣ ಹತ್ಯೆಯಂಥ ಹಲವು ಸ್ತ್ರೀ ಸಂಬಂಧಿ ಪಿಡುಗುಗಳ ನಿಯಂತ್ರಣದ ಹಿಂದೆ ಸಾಂಘಿಕ ಹೋರಾಟ ಕೆಲಸ ಮಾಡಿದೆ. ಒಬ್ಬ ವ್ಯಕ್ತಿಯ ಮನದೊಳಗಿನ 'ಅತ್ಯಾಚಾರಿ' ಯಾವಾಗ, ಹೇಗೆ ಕೆರಳಿ ನಿಲ್ಲುತ್ತಾನೆ ಎಂಬುದನ್ನು ಊಹಿಸಲು ಸಾಧ್ಯವಿಲ್ಲದಿದ್ದರೂ, ಸಾಮಾಜಿಕ ಪ್ರಜ್ಞೆಯ ಮೂಲಕ ಆ 'ಅತ್ಯಾಚಾರಿ'ಯನ್ನು ನಾಶ ಮಾಡಲು ಪ್ರಯತ್ನಿಸಬೇಕು. ಈ ಪ್ರಯತ್ನ ಕೂಡ ಸಾಂಘಿಕವಾಗಿರಬೇಕು.
ಲಗೋರಿ:  ಜವಾಬ್ದಾರಿಯಿಂದ ನುಣುಚಿಕೊಂಡವರು, ಬದಲಾವಣೆಗೆ ಕಾರಣವಾಗಬಹುದಾದ ತಮ್ಮ ಶಕ್ತಿಯನ್ನು ಕಳೆದುಕೊಳ್ಳುತ್ತಾರೆ.


- ಪಿ. ತ್ಯಾಗರಾಜ್
thyagarjun@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com