ಏಕಾಂಗಿಯಾದರೂ ಪಾಠ ಕಲಿಯದ ಕಾಂಗ್ರೆಸ್!

ಇಂದಿಗೂ ಕಾಂಗ್ರೆಸ್ಸನ್ನು ಅಸಾಮರ್ಥ್ಯವೇ ಆಳುತ್ತಿದೆ. ಸೋತು ಮುಗ್ಗರಿಸಿಬಿದ್ದರೂ ಈ ಪಕ್ಷ ಹೊಸ ಹಾದಿಯಲ್ಲಿ ನಡೆಯುವ ಲಕ್ಷಣಗಳೇ ಕಾಣುತ್ತಿಲ್ಲ. ಹೊಸ ಹಾದಿಯಲ್ಲಿ ನಡೆಯಬೇಕೆಂದರೆ ಅದು ಗಾಂಧಿ ಕುಟುಂಬವೆಂಬ ಹಳೆಯ ಹಾದಿಯಿಂದ ಮುಕ್ತವಾಗಲೇಬೇಕಲ್ಲವೇ? ಒಂದು ವೇಳೆ ನೀವು ಕಾಂಗ್ರೆಸ್ನ ಹಿತೈಷಿಗಳಾಗಿದ್ದರೆ ಖಂಡಿತ ಈ ಮಾತನ್ನು ಒಪ್ಪುತ್ತೀರಿ. ಕಾಂಗ್ರೆಸ್ನಲ್ಲಿನ ರಾಜವಂಶದ ಮಾದರಿ ನಾಯಕತ್ವ ಮತ್ತು ಅದನ್ನು ಸುತ್ತುವರಿದ ಭಟ್ಟಂಗಿ ಮನಸ್ಥಿತಿಗಳೆಲ್ಲ ಕಾಲಕಾಲಕ್ಕೆ ಎಷ್ಟೊಂದು ಬಾರಿ ಬೆತ್ತಲಾಗಿವೆಯೆಂದರೆ, ಇಷ್ಟು ಹೊತ್ತಿಗಾಗಲೇ ಬದಲಾವಣೆಗಳಾಗಬೇಕಿತ್ತು. ಆದರೂ ಧೈರ್ಯ ಮತ್ತು ಸ್ವನಂಬಿಕೆಯಿಲ್ಲದ ಕಾಂಗ್ರೆಸ್ಸಿಗರು ಇಂದಿಗೂ ಜಿಗಣೆಗಳಂತೆ ಅಮ್ಮ ಮತ್ತು ಮಗನ ಜೋಡಿಗೆ ಅಂಟಿಕೊಂಡಿದ್ದಾರೆ.
ಇದೆಲ್ಲ ಸ್ಪಷ್ಟವಾಗಿ ಅರ್ಥವಾಗಬೇಕೆಂದರೆ ಕಾಂಗ್ರೆಸ್ ತನ್ನ ಗೋಲ್ಪೋಸ್ಟ್ನಲ್ಲೇ ಹೊಡೆದುಕೊಂಡ ಎರಡು ಗೋಲುಗಳನ್ನು ನಾವು ಗಮನಿಸಬೇಕಾಗುತ್ತದೆ. ಮೊದಲನೆಯದು ತಮಗೆ ಲೋಕಸಭೆಯಲ್ಲಿ ಅಧಿಕೃತ ವಿರೋಧ ಪಕ್ಷದ ಸ್ಥಾನ ಕೊಡಬೇಕು ಎಂಬ ಅದರ ಕಿರುಚಾಟ. ಜನರು ತನಗೆ ಸ್ಪಷ್ಟವಾಗಿ ನಿರಾಕರಿಸಿದ ಸ್ಥಾನವನ್ನು ಹಿಂಬಾಗಿಲ ಮೂಲಕ ಪಡೆದುಬಿಡಬಹುದೆಂದು ಅದು ಭಾವಿಸಿದಂತಿದೆ. ಸಂಸತ್ತಿನ ಕಾನೂನು ಮತ್ತು ಸಂಪ್ರದಾಯವನ್ನು ಮರೆತು, ಟಿ.ವಿ ಮತ್ತು ಸುದ್ದಿವಾಹಿನಿಗಳಲ್ಲಿ ಕುಳಿತುಕೊಂಡು ವಿರೋಧ ಪಕ್ಷದ ಸ್ಥಾನ ತಮಗೇ ಸಿಗಬೇಕು ಎನ್ನುವ ಧಾಟಿಯಲ್ಲಿ ಕಾಂಗ್ರೆಸ್ಸಿಗರು ಗಂಟಲು ಹರಿದುಕೊಳ್ಳುತ್ತಿದ್ದಾರೆ. ಅದೇನೋ ತಮ್ಮ ಜನ್ಮಸಿದ್ಧ ಹಕ್ಕು ಹಾಗಾಗಿ ಅದನ್ನು ಹರಿವಾಣದಲ್ಲಿ ತಂದು ಮುಂದೆ ಇಡಬೇಕು ಎಂದು ಅವರು ಭಾವಿಸಿದಂತಿದೆ.
ಅಬ್ಬರಿಸಿ ಬೊಬ್ಬಿರಿದರೂ ಪ್ರಯೋಜನವಾಗಿಲ್ಲ ಎನ್ನುವುದು ಸತ್ಯ. ಏಕೆಂದರೆ ವಿರೋಧ ಪಕ್ಷದ ಸ್ಥಾನದಲ್ಲಿ ಗಟ್ಟಿಯಾಗಿ ನಿಲ್ಲಬೇಕು ಎಂದು ಬಯಸುತ್ತಿರುವ ಕಾಂಗ್ರೆಸ್ನ ಕಾಲುಗಳನ್ನೇ ಮತದಾರರು ಕಡಿದುಹಾಕಿದ್ದಾರೆ. ಆದರೂ ಕೆಲವು ಸ್ವಹಿತಾಸಕ್ತ ಕಾಂಗ್ರೆಸ್ ನಾಯಕರು ತಮ್ಮಿಂದ ಮತದಾರ ಕಸಿದುಕೊಂಡ ಹಕ್ಕನ್ನು ಯೇನಕೇನ ಪಡೆದುಕೊಳ್ಳಬೇಕೆಂದು ಪರದಾಡುತ್ತಿದ್ದಾರೆ.
ಇನ್ನು ಎರಡನೆಯ ಗೋಲು. ಟ್ರಾಯ್ ಸುಗ್ರೀವಾಜ್ಞೆಯನ್ನು ಬದಲಿಸಿ, ಆ ಜಾಗದಲ್ಲಿ ನರೇಂದ್ರ ಮೋದಿಯವರಿಗೆ ತಮ್ಮಿಷ್ಟದ ಪ್ರಧಾನ ಕಾರ್ಯದರ್ಶಿಯನ್ನು ಆಯ್ಕೆ ಮಾಡಿಕೊಳ್ಳಲು ಹಾದಿ ಮಾಡಿಕೊಡುವ ಮಸೂದೆಯನ್ನು ಕಾಂಗ್ರೆಸ್ ನಾಯಕತ್ವ ಕಟುಪದಗಳಿಂದ ಟೀಕಿಸಿದ್ದು. ಇದನ್ನು ಕಾಂಗ್ರೆಸ್ ವಿರೋಧಿಸಿದ್ದಷ್ಟೇ ಅಲ್ಲ, ಮಿಶ್ರಾ ಅವರು ಆರ್ಎಸ್ಎಸ್ನ ಆಪ್ತರು ಎಂಬ ಸುಳ್ಳು ಆಪಾದನೆಯನ್ನೂ ಮಾಡಿತು.
ಆದರೆ ಒಂದಂತೂ ಸತ್ಯ. ವ್ಯಕ್ತಿ ಕೇಂದ್ರಿತ ಸುಗ್ರೀವಾಜ್ಞೆಯನ್ನು, ಅದೂ ಸಂಸತ್ ಅಧಿವೇಶನದ ಮುನ್ನಾ ದಿನ ಹೊರಡಿಸಬಾರದಿತ್ತು ಎಂಬುದನ್ನು ಯಾರೇ ಆಗಲಿ ಒಪ್ಪುತ್ತಾರೆ. ನೃಪೇಂದ್ರ ಮಿಶ್ರಾ ನೇಮಕಾತಿಯಲ್ಲಿ ಇರುವ ನಿರ್ಬಂಧನೆಗಳ ಬಗ್ಗೆ ಮೋದಿಯವರಿಗೆ ಯಾರೂ ತಿಳಿಸಿರಲಿಲ್ಲ ಎನ್ನುವ ಸಾಧ್ಯತೆಯೂ ಇದೆ. ಒಂದು ವೇಳೆ ಇದು ನಿಜವಾಗಿದ್ದರೆ, ತಮ್ಮ ಭವಿಷ್ಯದ ಉದ್ಯೋಗದಾತನನ್ನು ಈ ವಿಷಯದಲ್ಲಿ ಕತ್ತಲಲ್ಲಿಟ್ಟಿದ್ದಕ್ಕಾಗಿ ಮಿಶ್ರಾ ಅವರನ್ನು ದೂರಲೇಬೇಕು.
ಇನ್ನು ಮಿಶ್ರಾ ಒಮ್ಮೆ ತಮ್ಮ ಹೊಸ ಸ್ಥಾನದಲ್ಲಿ ಕುಳಿತರೆಂದರೆ, ತಮ್ಮ ಬಾಸ್ಗಳಿಂದ ಮುಜುಗರವನ್ನೇನೂ ಅನುಭವಿಸಲಾರರು. ಹೀಗಾಗೇ, ಅವರ ಮರುನೇಮಕಾತಿಗೆ ಅಡ್ಡಿಯಾಗಿದ್ದ ಸುಗ್ರೀವಾಜ್ಞೆಯ ಜಾಗದಲ್ಲಿ ಮಸೂದೆಯೊಂದನ್ನು ಜಾರಿಗೆ ತರಲು ಮುಂದಾದದ್ದು. ಒಂದು ವೇಳೆ ಕಾಂಗ್ರೆಸ್ನಲ್ಲಿ ತಿಳಿವಳಿಕಸ್ಥರಿದ್ದರೆಂದರೆ, ನಿಸ್ಸಂಶಯವಾಗಿಯೂ ಮಿಶ್ರಾ ನೇಮಕಾತಿಯ ಕುರಿತು ಎದ್ದಿದ್ದ ವಿರೋಧವನ್ನು ನಿಲ್ಲಿಸಬೇಕೆಂದು ತಮ್ಮವರಿಗೆ ಸಲಹೆ ನೀಡುತ್ತಿದ್ದರು. ಆದಾಗ್ಯೂ, ಸುಗ್ರೀವಾಜ್ಞೆಯ ಕುರಿತು ಆಗಲೇ ಎನ್ಡಿಎ ತನ್ನ ನಿಲವನ್ನು ಸ್ಪಷ್ಟಪಡಿಸಿದೆ ಮತ್ತು ಮಾಧ್ಯಮಗಳೂ ಕೂಡ ಈ ನಿಲವಿನ ಪರವಾಗೇ ಮಾತನಾಡಿವೆ.
ಈ ವಿಷಯವನ್ನು ಹಿಡಿದುಕೊಂಡು ಜನರ ವಿಶ್ವಾಸವನ್ನು ಮತ್ತೆ ಗಳಿಸಿಕೊಳ್ಳಬಹುದೆಂದು ಕಾಂಗ್ರೆಸ್ ಬಯಸಿದಂತಿತ್ತು. ಪ್ರಧಾನಿಗೆ ತಮಗೆ ಇಷ್ಟವಾದವರನ್ನು ಕಾರ್ಯದರ್ಶಿಯಾಗಿ ನೇಮಿಸಿಕೊಳ್ಳುವ ಅಧಿಕಾರವಿಲ್ಲ ಎನ್ನುವ ವಾದವನ್ನು ಸಾಮಾನ್ಯ ಜನರೂ ವಿರೋಧಿಸುತ್ತಾರೆ. ಇದರಿಂದ ಯಾರಿಗೆ, ಯಾವ ರೀತಿಯಲ್ಲಿ ಲುಕ್ಸಾನಾಗುತ್ತದೆ ಹೇಳಿ? ವಿರೋಧಿಸಲೇಬೇಕು ಎನ್ನುವ ಕಾರಣಕ್ಕೆ ಕಾಂಗ್ರೆಸ್ ಗನ್ ಹಿಡಿದುಕೊಂಡೇ ಇತ್ತು. ಈ ವಿಷಯದಲ್ಲಿ ತೃಣಮೂಲ ಕಾಂಗ್ರೆಸ್ ಬುದ್ಧಿವಂತಿಕೆ ಮೆರೆಯಿತು. ಮತ ಚಲಾಯಿಸುವ ಸಮಯದಲ್ಲಿ ಗೈರಾಗಿ, ನಂತರ ತನ್ನ ಆಕ್ಷೇಪಣೆಗಳನ್ನು ಅದು ಪಟ್ಟಿಮಾಡಿತು. ಲೋಕಸಭೆಯಲ್ಲಿ ಮಸೂದೆ ಮಂಡನೆ ಪೂರ್ವನಿರ್ಧರಿತ ನಿರ್ಣಯವಾಗಿತ್ತು ಬಿಡಿ.
ಆದರೆ ರಾಜ್ಯಸಭೆಯಲ್ಲಿ ಅಂಗೀಕಾರ ನೀಡುವ ಸಮಯ ಬಂದಾಗಲೇ ಕಾಂಗ್ರೆಸ್ನ ಅವಿವೇಕದ ಅನಾವರಣವಾದದ್ದು. ಮೇಲ್ಮನೆಯಲ್ಲಿ ತನ್ನ ಜೊತೆಗೆ ಯಾರೂ ಇಲ್ಲ ಎನ್ನುವ ಅರಿವಿದ್ದರೂ ಕೂಡ, ಕಡೇ ಪಕ್ಷ ಎನ್ಡಿಎಯೇತರ ಪಕ್ಷಗಳು ತನ್ನ ಬೆಂಬಲಕ್ಕೆ ಬರಬಹುದು ಎಂದು ಅದು ಭಾವಿಸಿತ್ತೇನೋ? ಬಹುಕಾಲದ ಮಿತ್ರ ಎನ್ಸಿಪಿ ಕೂಡ ಕಾಂಗ್ರೆಸ್ಗೆ ಕೈಕೊಟ್ಟಿತು. ಮಮತಾರ ಟಿಎಮ್ಸಿ, ಯಾದವ್ರ ಎಸ್ಪಿ ಮತ್ತು ಮಾಯಾವತಿಯವರ ಬಿಎಸ್ಪಿ ಕಾಂಗ್ರೆಸ್ ಪಕ್ಷದ ಏಕಾಂಗಿತನವನ್ನು ಇನ್ನಷ್ಟು ಎದ್ದುಕಾಣುವಂತೆ ಮಾಡಿದವು.
ಕಾಂಗ್ರೆಸ್ನ ಕೆಲವು ಪೇಪರ್ ಹುಲಿಗಳು ಸಂಸತ್ತಿನಲ್ಲಿ ಮೋದಿ ಸರ್ಕಾರದ ಪರಿಸ್ಥಿತಿಯನ್ನು ಬಿಗಡಾಯಿಸುತ್ತೇವೆಂಬ ಧೈರ್ಯದಲ್ಲಿ ಅಬ್ಬರಿಸಿದ್ದಷ್ಟೇ ಆಯಿತು. ಇಂದಿಗೂ ಅಮ್ಮ-ಮಗನ ಹಿಡಿತದಿಂದ ತಪ್ಪಿಸಿಕೊಳ್ಳಲಾಗದೆ ಕೊಸರಾಡುತ್ತಿದೆ ಕಾಂಗ್ರೆಸ್. ಮೊದಲು ಆ ಹಿಡಿತ ಸಡಿಲವಾಗಬೇಕು. ಇಂದು ಕಾಂಗ್ರೆಸ್ ಘಟಕಗಳಿರುವ ರಾಜ್ಯಗಳಲ್ಲಿ, ಅದರಲ್ಲೂ ಯಾವ ರಾಜ್ಯಗಳಲ್ಲಿ ಅದು ಅಧಿಕಾರದಲ್ಲಿದೆಯೋ, ಅಲ್ಲಿನ ಪರಿಸ್ಥಿತಿ ನೋಡಿದಾಗ ನಮ್ಮ ನಿಲುವು ಸರಿಯಾಗಿದೆ ಎಂದೆನಿಸುವುದಿಲ್ಲವೇ?
ಗಾಂಧಿ ಕುಟುಂಬ ಹೊಸತನ್ನು ಕಲಿಯುವುದಿಲ್ಲ, ಕಲಿತದ್ದನ್ನು ಬಿಡುವುದಿಲ್ಲ!
ನ
ತೀರಾ ಚಿಕ್ಕ ವಿಷಯವೊಂದನ್ನು ಹಿಡಿದುಕೊಂಡು ರಾಜಕೀಯ ವರ್ಗ ಮತ್ತು ಮಾಧ್ಯಮದ ಕೆಲವು ಬಣಗಳು ಹಿಂದೆಂದೂ ಈ ಪರಿ ಸಮಯ ವ್ಯರ್ಥ ಮಾಡಿರಲಿಲ್ಲ. ಫ್ರೀಲ್ಯಾನ್ಸ್(ಸ್ವತಂತ್ರೋದ್ಯೋಗ) ಪತ್ರಕರ್ತ ವೇದ ಪ್ರತಾಪ್ ವೈದಿಕ್ ಯಾವ ರೀತಿಯ ಪತ್ರಕರ್ತರೆಂದರೆ, "ನಿಮ್ಮ ಬಗ್ಗೆ ಹೇಳಿ" ಎಂದು ಅವರನ್ನೇನಾದರೂ ಕೇಳಿದರೆ, ತಮಗೆ ಯಾವ್ಯಾವ ವಿಐಪಿಗಳ ಪರಿಚಯ ಇದೆ, ಯಾವ ಜಾಗತಿಕ ನಾಯಕರು ತಮ್ಮ ಸಲಹೆ ಕೇಳುತ್ತಾರೆ ಮುಂತಾದ ವಿಷಯಗಳನ್ನು ಹೇಳಿಯೇ ತಮ್ಮ ಪರಿಚಯ ಮಾಡಿಕೊಳ್ಳುವಂಥ ವ್ಯಕ್ತಿ ಅವರು. ಈ ಹೆಸರಿಲ್ಲದ ಪತ್ರಕರ್ತ ಮಹಾಷಯರು ಯಾವುದಾದರೂ ದೊಡ್ಡ ಸಮಸ್ಯೆಯೊಳಗೆ ದಿನವೂ ಮೂಗು ತೂರಿಸುತ್ತಿರುತ್ತಾರೆ. ಮಂದಿರ-ಮಸೀದಿ ವಿವಾದ, ಅಣ್ಣಾ ಹಜಾರೆ ಉಪವಾಸ ಅಥವಾ ಎಂದಿಗೂ ಮುಗಿಯದ ಭಾರತ-ಪಾಕ್ ಸಮಸ್ಯೆಗಳು...ಇದರಲ್ಲೆಲ್ಲ ವೇದ್ ಪ್ರತಾಪ್ ಇದ್ದೇ ಇರುತ್ತಾರೆ.
ಬಹುಶಃ ಭಾರತ-ಪಾಕ್ ಶಾಂತಿ ಮಾತುಕತೆಯ ನಿರ್ವಹಣೆ ಹೊತ್ತಿದ್ದ ಪಾಕಿಯೊಬ್ಬ, ಸೆಮಿನಾರ್ಗಳಲ್ಲಿ ಖಾಲಿ ಬಿದ್ದ ಕುರ್ಚಿಗಳನ್ನು ತುಂಬಲು ಯಾರೂ ಸಿಗದೇ ಕಡೆಗೆ ಈ ವೈದಿಕ್ರನ್ನು ಕರೆದು ಕೂರಿಸಿರುತ್ತಾನಷ್ಟೆ. ತಮ್ಮ ಗುಣಕ್ಕೆ ತಕ್ಕಂತೆಯೇ ವೈದಿಕ್ ನಡೆದುಕೊಂಡರು. ಈ ವ್ಯಕ್ತಿ ಆರು ದಶಕಗಳ ಭಾರತ-ಪಾಕ್ ಸಮಸ್ಯೆಗಳಿಗೆ ಕಾರ್ಯಾತ್ಮಕ ಪರಿಹಾರಗಳನ್ನಂತೂ ಕೊಡಲಿಲ್ಲ. ಆದರೆ ಕಾಶ್ಮೀರವನ್ನು ಪ್ರತ್ಯೇಕವಾಗಿಸಲು ಸಹಕಾರಿಯಾಗಬಲ್ಲ ವ್ಯಕ್ತಿಯಾಗಿಯಂತೂ ಪಾಕಿಗರ ಕಣ್ಣಿಗೆ ಗೋಚರವಾದರು!
ಪಾಕ್ ಮತ್ತು ಭಾರತದ ಹಿಡಿತದಲ್ಲಿಲ್ಲದ ಏಕೀಕೃತ ಕಾಶ್ಮೀರದ ಬಗ್ಗೆ ವೈದಿಕ್ ಮಾತನಾಡಿದ್ದಾಯಿತು, ಅಲ್ಲದೆ ನೂತನ ಪ್ರಧಾನಿ ನರೇಂದ್ರ ಮೋದಿಯವರೂ ತಾವೂ ಬಹಳ ಆಪ್ತರು ಎನ್ನುವ ಧಾಟಿಯಲ್ಲಿ ತಮ್ಮನ್ನು ಬಿಂಬಿಸುಕೊಂಡದ್ದೂ ಆಯಿತು. ಇಷ್ಟೆಲ್ಲ ಆದ ನಂತರ ಮುಂಬೈ ದಾಳಿಯ ಮಾಸ್ಟರ್ಮೈಂಡ್ ಹಫೀಜ್ ಸಯೀದ್ನೊಂದಿಗೆ ವೈದಿಕ್ ಅವರ ಮಾತುಕತೆಗೆ ಪಾಕಿಸ್ತಾನಿಗಳು ಏಕೆ ಏರ್ಪಾಟು ಮಾಡಿದರು ಎನ್ನುವುದು ಅರ್ಥವಾಗುವಂಥದ್ದೆ! ದೆಹಲಿಯ ಆಡಳಿತ ಮತ್ತು ತಮ್ಮ ನಡುವೆ ಸೇತುವೆಯಾಗಬಲ್ಲ ವ್ಯಕ್ತಿಗಳಿಗೆ ಪಾಕಿಸ್ತಾನ ಭಾರೀ ಮಹತ್ವ ಕೊಡುತ್ತದೆ. ಇಂಥದ್ದರಲ್ಲಿ, ವೈದಿಕ್ ತಮ್ಮ ಪಾಲಿನ ಸೇವೆ ಸಲ್ಲಿಸಲು ತಯಾರಾಗಿ ನಿಂತಿದ್ದರು.
ಇದರಲ್ಲಿ ವೈದಿಕ್ ಅವರನ್ನು ಬೈಯುವುದಕ್ಕೇನಿದೆ? ತಮ್ಮ ಜೀವನದುದ್ದಕ್ಕೂ ಮಾಡಿಕೊಂಡು ಬಂದ ಕೆಲಸವನ್ನೇ ಅವರು ಅಲ್ಲೂ ಮಾಡಿದ್ದಾರಷ್ಟೆ- ಅಂದರೆ, ತಮ್ಮನ್ನು ತಾವು ಮಾರ್ಕೆಟಿಂಗ್ ಮಾಡಿಕೊಳ್ಳುವುದು!
ಅಂದ ಹಾಗೆ ವೈದಿಕ್ ಅವರ 'ಪರಿಹಾರಕ್ಕೂ', ಮೇ 1964ರಲ್ಲಿ ಇದೇ ವಿಷಯವನ್ನು ಎತ್ತಿಕೊಂಡು ಪಾಕಿಸ್ತಾನಕ್ಕೆ ತೆರಳಿದ್ದ ಶೇಖ್ ಅಬ್ದುಲ್ಲಾ ಅವರ 'ಸಲಹೆಗೂ' ಯಾವುದೇ ವ್ಯತ್ಯಾಸವಿಲ್ಲ. ಪ್ರಧಾನಿ ನೆಹರು ಅವರ ಅಪ್ಪಣೆಯ ಮೇರೆಗೆ ಪಾಕಿಸ್ತಾನಕ್ಕೆ ತೆರಳಿದ್ದ ಶೇಖ್, 'ಸ್ವತಂತ್ರ ಕಾಶ್ಮೀರದ ಸ್ಥಾಪನೆಯಾಗಬೇಕು ಮತ್ತು ಅದರ ಸಾರ್ವಭೌಮತ್ವವನ್ನು ಭಾರತ ಮತ್ತು ಪಾಕಿಸ್ತಾನ ಖಚಿತಪಡಿಸಬೇಕು' ಎಂದು ಮಾತನಾಡಿದ್ದರು. ದುರ್ದೈವವಶಾತ್, ತಮ್ಮ ಮಿತ್ರ ಮತ್ತು ಮಾರ್ಗದರ್ಶಕ ನೆಹರು ಅವರ ಅಚಾನಕ್ ಮರಣದಿಂದಾಗಿ ಶೇಖ್ ಭಾರತಕ್ಕೆ ವಾಪಸ್ಸಾಗಬೇಕಾಯಿತು. ಅದೇಕೆ ಕಾಂಗ್ರೆಸ್ಸಿಗರು ವೈದಿಕ್ ಅವರ 'ಸಲಹೆಯನ್ನು' ಬೆಂಬಲಿಸಲಿಲ್ಲವೋ? ಅಥವಾ ಇವರಿಗೆಲ್ಲ ತಮ್ಮ ಇತಿಹಾಸವಾದರೂ ತಿಳಿದಿದೆಯೇ?
ನ
ಪಾಶ್ಚಾತ್ಯರೇ ಎಲ್ಲ ವಿಷಯದಲ್ಲೂ ನಮಗಿಂತ ಮುಂದೆ ಎಂಬ ಕೀಳರಿಮೆಯಿಂದ ಭಾರತೀಯರು ನರಳುತ್ತಾರೆ. ಆದರೆ ಭಾರತದ ಪ್ರಧಾನಮಂತ್ರಿ ಅಭ್ಯರ್ಥಿಯಾಗಿದ್ದಾಗ ಮೋದಿ ನಡೆಸಿದ ಚುನಾವಣಾ ಪ್ರಚಾರದ ವೈಖರಿಯ ಬಗ್ಗೆ ಎಲ್ಲೆಡೆಯೂ ಮೆಚ್ಚುಗೆಯ ಮಾತುಗಳು ಕೇಳಿಬರುತ್ತಿವೆ. ಅಮೆರಿಕ ಅಧ್ಯಕ್ಷ ಒಬಾಮ ಅವರ ಮಾಜಿ ಸಲಹೆಗಾರರೊಬ್ಬರು ಕಳೆದ ವಾರ 'ವಾಲ್ ಸ್ಟ್ರೀಟ್ ಜರ್ನಲ್'ನಲ್ಲಿ ಈ ಕುರಿತು ಬರೆದದ್ದು ಹೀಗೆ: "ಅಮೆರಿಕದ ಅಧ್ಯಕ್ಷೀಯ ಚುನಾವಣೆಗಳಲ್ಲಿ ಮೊಬೈಲ್ ಫೋನ್, ಟಿ.ವಿ. ಮತ್ತು ಕಂಪ್ಯೂಟರ್ಗಳು ಪ್ರಚಾರ ಸಾಧನಗಳಾಗುತ್ತವೆ. ಆದರೆ ಭಾರತದಲ್ಲಿ? ನರೇಂದ್ರ ಮೋದಿಯವರು ಹೊಲೋಗ್ರಾಮ್ ತಂತ್ರಜ್ಞಾನದ ಮೂಲಕ ಹಿಂದಿನ ಎಲ್ಲಾ ಆಧುನಿಕ ಪ್ರಚಾರಗಳ ರೆಕಾರ್ಡ್ಗಳನ್ನು ಮುರಿದುಹಾಕಿದ್ದಾರೆ."
- ವೀರೇಂದ್ರ ಕಪೂರ್
virendra1946@yahoo.co.in
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


