ಅಂಕಣಗಳು

ಬೆಚ್ಚಿ ಬೀಳಿಸುವ ಸುದ್ದಿಗಳ ನಡುವೆ ಅಗಣಿತ ಆತಂಕ

Published On :

ಪುಟ್ಟ ಹೆಣ್ಣು ಮಗುವನ್ನು ಸ್ಕೂಲ್ ವ್ಯಾನು ಹತ್ತಿಸಿ ಮನೆಗೆ ಬರುತ್ತೇನೆ, ಡ್ರೈವರ್ 'ಅಂಥವನಾಗಿದ್ದರೆ?' ಚಡಪಡಿಕೆ ಶುರುವಾಗುತ್ತದೆ. ಮಗಳು ತಲುಪಿದಳಾ ಅಂತ ದಿನವೂ ಫೋನು ಮಾಡಿದರೆ ಜನ ಹುಚ್ಚೆಂದುಕೊಂಡಾರು ಅಂತ ಸುಮ್ಮನಾಗುತ್ತೇನೆ. ಸಂಜೆ ಹತ್ತಿಪ್ಪತ್ತು ನಿಮಿಷ ತಡವಾದರೂ ಭಯ. ಮೇಷ್ಟ್ರು, ಡ್ರೈವರು, ವ್ಯಾನೊಳಗಿನ ದೊಡ್ಡ ಹುಡುಗರು, ಅಂಗಡಿಯವರು, ಬೇರೆ ಯಾರಾದರೂ? ಬೆವರು ಒರೆಸಿಕೊಳ್ಳುತ್ತಲೇ ಬಾಗಿಲು ಕಾಯುತ್ತೇನೆ. ಬಂದ ಮೇಲೆಯೇ ನಿಟ್ಟುಸಿರು. 'ಅಮ್ಮ ಹೊರಗೆ ಆಡುತ್ತೇನೆ'- ಮಗಳು ಕೇಳಿದರೆ 'ಬೇಡ, ಕೂತು ಓದಿಕೋ' ಅನ್ನುತ್ತೇನೆ. ಹೊರಗೆ ಗಂಡು ಮಕ್ಕಳಿವೆ. ಭಯವಾಗುತ್ತದೆ. ಮುಖ ಸಣ್ಣಗೆ ಮಾಡುವ ಮಗಳಿಗೆ ಅಮ್ಮನ ಆತಂಕ ಅರ್ಥವಾಗುವುದಿಲ್ಲ. ಮದುವೆಗೆ ಕರೆದುಕೊಂಡು ಹೋದರೆ 'ಬಾ ಪುಟ್ಟಿ' ಅಂತ ಕರೆವ ಸಂಬಂಧಿಕರ ಬಗ್ಗೆ ಭಯ. ರಾತ್ರಿ ಅಪ್ಪಿ ತಪ್ಪಿಯೂ ಬೇರೆಡೆ ಮಲಗಿಸಲಾರೆ, ಭಯವಾಗುತ್ತದೆ. ಮದುವೆ ಮನೆಗಳಲ್ಲಿ ಮಗಳ ಅಪ್ಪಿಕೊಂಡೇ ಮಲಗಬೇಕು. ಚಿಕ್ಕಪ್ಪನೇ ಚಾಕೋಲೇಟು ಕೊಟ್ಟರೂ ಅನುಮಾನ. ಖುದ್ದು ಅಪ್ಪನೂ, ತಾತನೂ ಅತ್ಯಾಚಾರ ಮಾಡಿದ ಸುದ್ದಿ ಮೊನ್ನೆಯಷ್ಟೇ ವರದಿಯಾಗಿದೆ. ಕ್ಯಾಂಪು, ನಾಟಕದ ರಿಹರ್ಸಲ್ಲು, ಫ್ರೆಂಡ್ ಮನೆ...ಬೆಳೆದ ಹುಡುಗಿ ಎಲ್ಲಿ ಹೊರಟು ನಿಂತರೂ ಭಯ, ಹೆಣ್ಣುಮಗಳ ಅಮ್ಮನಿಗೆ. "ಮನೆಯವರೇ ನನ್ನನ್ನ ನಂಬುವುದಿಲ್ಲ. ಹೆತ್ತ ಅಮ್ಮನಿಗೇ ಯಾಕಿಂಥ ಅನುಮಾನ?" ಅಂತ ಮಗಳು ನೋಟ್ಸಿನ ಕಡೆಯ ಹಾಳೆಯಲ್ಲಿ ಬರೆಯುತ್ತಾಳೆ. ಇಲ್ಲಿ ಪರಸ್ಪರ ಕೊಟ್ಟು, ಪಡೆವ ವಿವರಣೆಗಳು ಮುಖ್ಯವಲ್ಲ. ಬೆಚ್ಚಿಬೀಳಿಸುವ ಘಟನೆಗಳ ಮುಂದೆ ಅಮ್ಮನ ಆತಂಕಕ್ಕೆ ಅರ್ಥವಿಲ್ಲದಿಲ್ಲ.
ಸುಮ್ಮನೇ ಗೂಗಲ್ಲಿಗೆ ಹೋಗಿ ಕನ್ನಡದಲ್ಲಿ 'ಅತ್ಯಾಚಾರ' ಅಂತ ಟೈಪ್ ಮಾಡಿ. ಅಪ್ರಾಪ್ತೆ, ಯುವತಿ, ಗೃಹಿಣಿಯರ ಮೇಲೆ ಎಷ್ಟೊಂದು ಸುದ್ದಿಗಳು!! ಅಪ್ರಾಪ್ತೆ, ಯುವತಿ, ಗೃಹಿಣಿಯರ ಮೇಲೆ, ಯುವಕರು, ಸಂಬಂಧಿ, ಅಪ್ಪ, ಪರಿಚಿತ, ತಾತ, ಪಾಠ ಹೇಳುವ ಮೇಷ್ಟ್ರು ಮುಂತಾದವರಿಂದ ಅತ್ಯಾಚಾರ. ಕೋಲಾರ, ಹುಬ್ಬಳ್ಳಿ, ಬಳ್ಳಾರಿ, ಮಂಗಳೂರು, ಹಾಸನ ನಮ್ಮವೇ ಊರುಗಳು. ನಮ್ಮ ಹೆಣ್ಣುಮಕ್ಕಳು ಅತ್ಯಾಚಾರಕ್ಕೀಡಾದ ಸಾಲು ಸಾಲು ಸುದ್ದಿಗಳು. ಶಿಕ್ಷೆಯಾದ ಸುದ್ದಿಯೆಷ್ಟು? ಉತ್ತರಪ್ರದೇಶದ ಬದೌನ್‌ನಲ್ಲಿ ಅತ್ಯಾಚಾರವಾಯ್ತೆಂದು ದೇಶವ್ಯಾಪಿ ಸುದ್ದಿಯಾಯ್ತು. ಆಗ ಮುಲಾಯಂ ಸಿಂಗ್ ಯಾದವ್ "ಇದು ಎಲ್ಲ ಕಡೆ ಆಗುವ  ಮಾಮೂಲಿ ವಿಚಾರ. ನಮ್ಮ ರಾಜ್ಯದ್ದನ್ನೇ ಯಾಕೆ ವೈಭವೀಕರಿಸ್ತೀರಿ?" ಅಂದರು. ಅದನ್ನು ಬೇಜವಾಬ್ದಾರೀ ಹೇಳಿಕೆ ಅಂತ ಮಾಧ್ಯಮಗಳು ಮತ್ತೆ ಗುಲ್ಲೆಬ್ಬಿಸಿದವು. ಆದರೆ ಆ ಹೇಳಿಕೆ ಸುಳ್ಳೇನಲ್ಲ. ಕರ್ನಾಟಕದಲ್ಲಾದ, ಆಗುತ್ತಿರುವ ಪ್ರಕರಣಗಳೇ ಇದಕ್ಕೆ ಸಾಕ್ಷಿ.
ಇನ್ನು ಅವರು ಬಳಸಿದ 'ಮಾಮೂಲಿ' ಅನ್ನುವ ಪದ. ಪೊಲೀಸರಿಗೆ, ರಾಜಕಾರಣಿಗಳಿಗೆ, ವೈದ್ಯರುಗಳಿಗೆ, ಮಾಧ್ಯಮಗಳಿಗೆ ಮತ್ತು ನಿರಂತರ ಇಂಥ ಸುದ್ದಿಗಳಿಗೆ ಸಾಕ್ಷಿಯಾಗುತ್ತಿರುವ ನಮಗೆ ಇದು 'ಮಾಮೂಲಿ' ಸುದ್ದಿಯೇ ಆಗಿಲ್ಲವೇ? ಆಗಿಲ್ಲದಿದ್ದರೆ ಮತ್ತೆ ಮತ್ತೆ ಹೊಸ ಪ್ರಕರಣಗಳು ಹುಟ್ಟುತ್ತಲೇ ಇರಲಿಲ್ಲ. ಅಂಕಿ ಸಂಖ್ಯೆಗಳು ಹೇಳುತ್ತವೆ, ಶೇಕಡ 54.35 ಮಕ್ಕಳು ಲೈಂಗಿಕ ದೌರ್ಜನ್ಯಕ್ಕೊಳಗಾಗುತ್ತಿದ್ದಾರೆ ಎಂದು. 5 ರಿಂದ 12ರವೆರೆಗಿನ ಮಕ್ಕಳು ತೀರಾ ಪರಿಚಿತರಿಂದಲೇ ದೌರ್ಜನ್ಯಕ್ಕೊಳಗಾಗುತ್ತಿದ್ದಾರೆ. ದೇಶದಲ್ಲಿ ವರ್ಷಕ್ಕೆ 25 ಸಾವಿರಕ್ಕೂ ಹೆಚ್ಚು ಅತ್ಯಾಚಾರಗಳು ನಡೆಯುತ್ತಿವೆ, ಅದರಲ್ಲಿ ಏಳೂವರೆ ಸಾವಿರಕ್ಕೂ ಹೆಚ್ಚು ಪುಟ್ಟ ಪುಟ್ಟ ಮಕ್ಕಳು! 'ಯತ್ರ ನಾರ್ಯಸ್ತು ಪೂಜ್ಯಂತೆ ರಮಂತೆ ತತ್ರದೇವತಃ' ಅಂದ ಭರತಭೂಮಿಗೆ, ಅತ್ಯಾಚಾರ ದೌರ್ಜನ್ಯಕ್ಕಿಂದು ವಿಶ್ವದಲ್ಲೇ ಮೊದಲ ಸ್ಥಾನ!
ಅಲ್ಲಿ ದೂರದ ದೆಹಲಿಯಲ್ಲಿ ನಿರ್ಭಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿ ಎಷ್ಟೊಂದು ಪ್ರತಿಭಟನೆಗಳು?! ಒಗ್ಗೂಡಿ ಕಿರುಚಿದ್ದು ಅದೆಷ್ಟು ಗಂಟಲುಗಳು! ಸುಟ್ಟದ್ದು ಅದೆಷ್ಟು ಮೇಣದಬತ್ತಿಗಳು! ಹೌದು, ಆ ಅನ್ಯಾಯಕ್ಕೆ ನಾವು ಪ್ರತಿಭಟಿಸಲೇಬೇಕಿತ್ತು ಸರಿ. ಆದರೆ ಅದಾದ ನಂತರ ಇಲ್ಲೇ, ನಮ್ಮ ಅಕ್ಕಪಕ್ಕದಲ್ಲೇ ಇಂಥ ಪ್ರಕರಣಗಳಾದಾಗ ನಾವ್ಯಾಕೆ ಮೌನ ಸಡಿಲಿಸಲಿಲ್ಲ? ಮನೆ ಬಿಟ್ಟು ಹೊರಬರಲಿಲ್ಲ? ಧನಿಯೇರಿಸಲಿಲ್ಲ? ಸಂಘಟನೆಗಳು ಬಾವುಟ ಹಿಡಿಯಲಿಲ್ಲ? ನಿರ್ಭಯ ಪ್ರಕರಣದಲ್ಲಿ ಬೀದಿಗಿಳಿದ ಕರ್ನಾಟಕದ ಅಷ್ಟೂ ಪ್ರತಿಭಟನಾಕಾರರು ಎಲ್ಲಿ ಮಾಯವಾಗಿಹೋದರು? ಹಾಗಾದರೆ ಆಗ ಮಾಡಿದ ಪ್ರತಿಭಟನೆ ಸುಮ್ಮನೆ ಸಮೂಹ ಸನ್ನಿಯೊಂದರ ಫಲವಾಗಿತ್ತಾ?
ಇದೀಗ ಬೆಂಗಳೂರಿನಲ್ಲಿ ನಡೆದ ಪ್ರಕರಣದ ಕುರಿತಾಗಿ ಸದನದಲ್ಲೂ ಕೋಲಾಹಲ. ಪಕ್ಷಬೇಧ ಮರೆತು ಎಲ್ಲರೂ ಧನಿಯೇರಿಸಿದ್ದು ಮೆಚ್ಚತಕ್ಕ ವಿಷಯವೇ. ಆದರೆ ಮಂತ್ರಿ ಮಹೋದಯರೇ, ಇಷ್ಟು ದಿನ ನೀವೆಲ್ಲ ಎಲ್ಲಿ ಹೋಗಿದ್ದಿರಿ? ದಿನವೂ ಪತ್ರಿಕೆಗಳಲ್ಲಿ, ಟಿವಿಗಳಲ್ಲಿ ಬರುವ ಅತ್ಯಾಚಾರದ ಸುದ್ದಿ ನಿಮಗೆ ಕಾಣಲೇ ಇಲ್ಲವೇ ಅಥವಾ ಬೆಂಗಳೂರು, ದೆಹಲಿ ಇಂಥ ಕಡೆ ಆಗುವ ಘಟನೆಗಳಿಗೆ ಮಾತ್ರ ನಿಮ್ಮ ದನಿಯೇ? ಹಳ್ಳಿಗಾಡಿನಲ್ಲಿ, ಕಾಡ ಹಾದಿಯಲ್ಲಿ, ಕಬ್ಬಿನ ಗದ್ದೆಗೊಯ್ದು ಅಮಾನವೀಯವಾಗಿ ಅತ್ಯಾಚಾರ ಮಾಡಲಾಯಿತಲ್ಲ? ಅವರೂ ಈ ರಾಜ್ಯದ ಹೆಣ್ಣು ಮಕ್ಕಳೇ ತಾನೇ?  ಅಷ್ಟೇ ಯಾಕೆ, ಖುದ್ದು ನಿಮ್ಮ ನಿಮ್ಮ ಕ್ಷೇತ್ರಗಳಲ್ಲಾದ ಅತ್ಯಾಚಾರ ಪ್ರಕರಣಗಳನ್ನು ವಿಚಾರಿಸಿದ್ದೀರಾ? ಅತ್ಯಾಚಾರಕ್ಕೊಳಗಾದವರ ಬೆನ್ನಿಗೆ ನಿಂತಿದ್ದೀರಾ? ಆರೋಪಿಗೆ ಶಿಕ್ಷೆ ಕೊಡುವ ಯತ್ನ ಮಾಡಿದ್ದೀರ? "ಒಂದ್ ಕೆಲ್ಸ ಮಾಡಿ ಜಾರ್ಜ್ ನೀವು ಖುದ್ದಾಗಿ ಆ ಹೆಣ್ಣುಮಗಳ ಮನೆಗೆ ಹೋಗಿ ಸರ್ಕಾರದ ಪರವಾಗಿ ಧೈರ್ಯ ಹೇಳಿ ಬನ್ನಿ" ಅಂದ ಕಾಗೋಡು ತಿಮ್ಮಪ್ಪನವರು ಈ ಮುನ್ನ ಇಂಥ ಪ್ರಕರಣಗಳಾದಾಗ ಗೃಹಮಂತ್ರಿಗಳಿಗಿರಲಿ, ಆಯಾ ಕ್ಷೇತ್ರದ ಶಾಸಕರಿಗೋ, ಮಂತ್ರಿಗೋ ಯಾಕೆ ಹೀಗೆ ಆಜ್ಞಾಪಿಸಲಿಲ್ಲ? ಬೆಂಗಳೂರಿನ ಪ್ರಕರಣದ ಬಗ್ಗೆ ಭಾಷಣ ಬಿಗಿದ ಜಗದೀಶ್ ಶೆಟ್ಟರ್ ಹಳೆ ಹುಬ್ಬಳ್ಳಿಯ ಬಳಿ ಇಬ್ಬರು ಯುವತಿಯರ ಮೇಲಾದ ಗ್ಯಾಂಗ್ ರೇಪ್ ಘಟನೆಯನ್ನ ಸದನದಲ್ಲಿ ಯಾಕೆ ಪ್ರಸ್ತಾಪಿಸಲಿಲ್ಲ? ಸರ್ಕಾರವಿರುವುದು ಕೇವಲ ಶ್ರೀಮಂತರ ಮಾನ ಕಾಯಲಿಕ್ಕಾ? ದುಡ್ಡಿದ್ದವರ ಮಾನಕ್ಕೆ ಬೇರೆಯ ಬೆಲೆಯಾ?
ಇವರು ಬಡವರ ಪಾಲಿನ ಆಶಾಕಿರಣ, 'ಭಾಗ್ಯಗಳ ದೊರೆ' ಅಂತ ಜನ ನಂಬಿದ್ದ ಸಿದ್ದರಾಮಯ್ಯನವರು ಈ ಬಗ್ಗೆ ಒಂದೇ ಒಂದು ಗಟ್ಟಿ ಹೇಳಿಕೆ ನೀಡಲಿಲ್ಲ. ಆಕ್ರೋಶ ವ್ಯಕ್ತಪಡಿಸಲಿಲ್ಲ. ಹೆಣ್ಣುಮಕ್ಕಳ ಮಾನ ಕಾಪಾಡಲಾಗದ ಬಗ್ಗೆ ಸಣ್ಣ ಬೇಸರವನ್ನೂ ವ್ಯಕ್ತಪಡಿಸಲಿಲ್ಲ. ಅದು ಹೋಗಲಿ, ಮೊನ್ನೆಯಂತೂ ಅತ್ಯಾಚಾರದ ಬಗ್ಗೆ ಸದನದಲ್ಲಿ ಚರ್ಚೆ ನಡೆಯುತ್ತಿದ್ದರೆ ಇವರು ಗಡದ್ದಾಗಿ ಗೊರಕೆ ಸದ್ದು ಮಾಡಿಬಿಟ್ಟಿದ್ದರು. ಚುನಾವಣಾ ಪ್ರಚಾರದ ವೇಳೆ ಆಗದ ಆಯಾಸ ಈಗ ಆಗಿಬಿಡುತ್ತೆ ಹೇಗೆ? ರಾಷ್ಟ್ರೀಯ ಸುದ್ದಿ ವಾಹಿನಿಗಳ ತುಂಬ ನಮ್ಮ ಮುಖ್ಯಮಂತ್ರಿಗಳ ನಿದ್ದೆಯ ಸುದ್ದಿಯೇ! ಇನ್ನು ನಮ್ಮ ಉಮಾಶ್ರೀ ಮೇಡಂ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ, ಸಂಸ್ಕೃತಿ ಇಲಾಖೆಯೂ ಅವರದೇ. ರಾಜ್ಯದಲ್ಲಿ ನಿರಂತರ ಅತ್ಯಾಚಾರದಂಥ ನೀಚ ಸಂಸ್ಕೃತಿ ಪ್ರದರ್ಶನವಾಗುತ್ತಿದ್ದರೂ ಸುಮ್ಮನೇ ನೋಡುತ್ತಿದ್ದಾರೆ. ತುಟಿಬಿಚ್ಚುತ್ತಿಲ್ಲ ಯಾಕೆ? ಮಹಿಳಾ ಸದಸ್ಯರೆಲ್ಲ ಒಟ್ಟಾಗಿ ಸರ್ಕಾರದ ಕುತ್ತಿಗೆ ಪಟ್ಟಿ ಹಿಡಿದು ಪ್ರಶ್ನಿಸಲಿಲ್ಲ, ಯಾಕೆ?
ರಾಜಕಾರಣಿಗಳ ವಿಚಾರ ಬಿಡಿ, ರೈತನ ಸಾವಲ್ಲೂ, ಅತ್ಯಾಚಾರ ಪ್ರಕರಣಗಳಲ್ಲೂ ಜಾತಿ, ಮತ ಹುಡುಕುವವರು ನಾವು. ನಾವೇನು ಮಾಡುತ್ತಿದ್ದೇವೋ ಸುಮ್ಮನೆ ಗಮನಿಸಿ. ಯಾವುದೋ ಹಳ್ಳೀಲಿ ಯಾರೋ ಅತ್ಯಾಚಾರ ಮಾಡಿದ ಸುದ್ದಿ ಟಿವಿಯಲ್ಲಿ ಬರುತ್ತಿದ್ದರೆ, ಅತ್ಯಾಚಾರಕ್ಕೊಳಗಾದ ಹುಡುಗಿಯ ಅಪ್ಪನೋ, ಅಮ್ಮನೋ ಹೇಳಿಕೆ ಕೊಡುವಾಗ ಅವರೊಂದಿಗೆ ನಾಲ್ಕು ಜನ ನಿಂತಿರುವುದಿಲ್ಲ. ಹಾಗಾದರೆ ಆ ಊರುಗಳಲ್ಲಿ ಜನ ಸತ್ತುಹೋಗಿದ್ದರೇ? ಅತ್ಯಾಚಾರಿ ಯಾವನಾದರೇನು? ಸ್ಥಳೀಯರೇ ಒಂದಾಗಿ ಅವನಿಗೆ ತಕ್ಕ ಪಾಠ ಕಲಿಸಿಬಿಟ್ಟರೆ ಮತ್ತೊಬ್ಬ ಅಂಥ ಕೆಲಸಕ್ಕೆ ಕೈ ಹಾಕಲು ಯೋಚಿಸುತ್ತಾನೆ. ಯಾವ್ಯಾವುದೋ ಕಾರಣಕೆ ಸಾಮಾಜಿಕ ಬಹಿಷ್ಕಾರ ಹಾಕುವುದನ್ನು ಕೇಳಿದ್ದೇವೆ. ಯಾವ ಊರಲ್ಲಾದರೂ ಯಾವನನ್ನಾದರೂ ಅತ್ಯಾಚಾರದ ಕಾರಣಕ್ಕೆ ಬಹಿಷ್ಕಾರ ಹಾಕಿದ್ದು ಉಂಟಾ?
 ಬೆಂಗಳೂರಿನ ಶ್ರೀಮಂತ ಜನರ ಶಾಲೆಯಲ್ಲಾದ ದೌರ್ಜನ್ಯಕ್ಕೆ ಮತ್ತದೇ ಸಮೂಹಸನ್ನಿಯ ಸ್ವರೂಪ. ಆ ಘಟನೆ ವಿರುದ್ಧ ಆಗುತ್ತಿರುವ ಭಾರೀ ಮತ್ತು ನಿರಂತರ ಪ್ರತಿಭಟನೆ, ಪಕ್ಕದ ಕೋಲಾರದಲ್ಲಿ ಯಾಕಾಗುತ್ತಿಲ್ಲ? ಬಳ್ಳಾರಿ, ಹುಬ್ಬಳ್ಳಿ, ಮಂಗಳೂರು...ಎಲ್ಲೂ ಬೆಂಗಳೂರಿನಷ್ಟು ತೀವ್ರ ಪ್ರತಿಭಟನೆ ನಡೆಯುತ್ತಿಲ್ಲ ಯಾಕೆ?
ದೆಹಲಿ ಪ್ರಕರಣ ಅಷ್ಟು ಗಂಭೀರ ಸ್ವರೂಪ ಪಡೆಯಲು, ಸರ್ಕಾರವೇ ಉರುಳಿಹೋಗಲು ಕಾರಣವಾಗಿದ್ದು ದೊಡ್ಡಮಟ್ಟದ ವಿದ್ಯಾರ್ಥಿ ಶಕ್ತಿ. ಕರ್ನಾಟಕದಲ್ಲಿ ಕಾಲೇಜುಗಳಿಲ್ಲವೇ? ವಿದ್ಯಾರ್ಥಿಗಳು, ಯುವಶಕ್ತಿ ಸಿಡಿದು ಪ್ರತಿಭಟನೆಗೆ ನಿಂತಾಗ ಫಲಿತಾಂಶ ಸಿಗದ ಉದಾಹರಣೆಗಳು ಕಡಿಮೆ. ಭಾಷೆಯ ವಿಚಾರ ಬಂದಾಗ ಕಿಡಿಕಾರುವ ಕನ್ನಡ ಪರ ಸಂಘಟನೆಗಳು, ಕನ್ನಡ ಮಣ್ಣಿನಲ್ಲಿ ಹೆಣ್ಣುಗಳ ಸೆರಗೆಳೆದಾಗಲೂ ಅಷ್ಟೇ ತೀವ್ರವಾಗಿ ರೊಚ್ಚಿಗೇಳಲೇಬೇಕಲ್ಲವೇ?
ಬೀದಿನಾಯಿಗಳ ಕಾಟ ಹೆಚ್ಚಾದರೆ ಮುಲಾಜಿಲ್ಲದೇ ಕೊಂದು ಲಾರಿಗೆ ತುಂಬುತ್ತೀರಿ, ಆನೆಯೋ, ಚಿರತೆಯೋ ಊರಿಗೆ ನುಗ್ಗಿ ರಕ್ತಹೀರಲು ಬಂದರೆ ಬೋನಿಗೆ ನೂಕಿ ಕಾಡಿಗೆ ಬಿಡುತ್ತೀರಿ. ಅದೇ ಮನುಷ್ಯನೇ ಪ್ರಾಣಿಗಳಿಗಿಂತ ನೀಚಾತಿ ನೀಚವಾಗಿ ವರ್ತಿಸಿದರೆ, ಜಾತಿ, ಹಣ, ಕಾನೂನು, ಕಡೆಗೆ, ಮಾನವ ಹಕ್ಕು ಅಂತ ಕೂಗುತ್ತೀರಿ. ಮನುಷ್ಯನಾದವನಿಗೆ ಮಾನವ ಹಕ್ಕು, ಅಲ್ಲದವನಿಗೆಂಥದ್ದು?


- ಪಿ. ಕುಸುಮ ಆಯರಹಳ್ಳಿ
kusumabaale@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.