ಅಪಕ್ವ ಮನಸುಗಳಿಗೆ ಅನಿವಾರ್ಯ ಲೈಂಗಿಕ ಶಿಕ್ಷಣ

ಆಧುನಿಕ ಮನೋವಿಜ್ಞಾನದ ಹರಿಕಾರ, ಮನೋ ವೈದ್ಯಕೀಯ ಪಿತಾಮಹನೆಂದೇ ಕರೆಯಲ್ಪಡುವ ಸಿಗ್ಮಂಡ್ ಫ್ರಾಯ್ಡ್ ಹೇಳುವ ಪ್ರಕಾರ ಮಾನವನಲ್ಲಿ ಹಲವು ಹುಟ್ಟಾಸೆಗಳಿರುತ್ತವೆ. ಅವುಗಳಲ್ಲಿ ಮುಖ್ಯವಾದವು ಹಸಿವು, ನೀರಡಿಕೆ, ಮತ್ತು ನಿದ್ದೆ. ಇವುಗಳೊಂದಿಗೆ ಇನ್ನೊಂದು ಮುಖ್ಯವಾದ ಹುಟ್ಟಾಸೆ ಲೈಂಗಿಕತೆ. ಉಳಿದ ಹುಟ್ಟಾಸೆಗಳಿಗಿಂತ ಲೈಂಗಿಕ ಹುಟ್ಟಾಸೆಯು ಭಿನ್ನವಾದದ್ದು ಎನ್ನಬಹುದು. ಅದಕ್ಕೆ ಕಾರಣ ಲೈಂಗಿಕತೆ ಎನ್ನುವುದು ಬಹಳ ಸೂಕ್ಷ್ಮವಾದ ವಿಚಾರ. ಒಂದು ಕಾಲದಲ್ಲಿ ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ಮತ್ತು ಧರ್ಮಗಳಲ್ಲಿ ಲೈಂಗಿಕತೆಯ ಕುರಿತು ಸಾರ್ವಜನಿಕವಾಗಿ ಮಾತನಾಡುವುದೇ ತಪ್ಪು ಎನ್ನುವ ಭಾವನೆ ಇತ್ತು. ಅದನ್ನು ಇಂದಿಗೂ ಹಲವು ಧರ್ಮಗಳಲ್ಲಿ, ಹಲವು ಜನಾಂಗಗಳಲ್ಲಿ ನಾವು ಕಾಣಬಹುದು. ಇದಕ್ಕೆ ಹಿಂದೂ ಧರ್ಮವೂ ಹೊರತಲ್ಲ. ಒಬ್ಬ ವ್ಯಕ್ತಿಯು ಮೋಕ್ಷ ಪಡೆಯಲು ಧರ್ಮ, ಅರ್ಥ ಮತ್ತು ಕಾಮದ ಕ್ಷೇತ್ರಗಳಲ್ಲಿ ಸಾಧನೆ ಮಾಡಬೇಕು. ಹಾಗೆ ಸಾಧನೆ ಮಾಡಿದ ವ್ಯಕ್ತಿ ಮೋಕ್ಷ ಪಡೆಯಲು ಸಾಧ್ಯ ಎಂಬುದು ವೇದೋಪನಿಷತ್ತುಗಳ ಅಭಿಮತ. ಆದರೆ ಲೈಂಗಿಕತೆಯ ಕುರಿತಾದ ಮಡಿವಂತಿಕೆಗೆ ಮಾತ್ರ ಯಾರೂ ಆಕ್ಷೇಪಿಸಿರಲಿಲ್ಲ. ಲೈಂಗಿಕತೆ ಎಂಬುದನ್ನು ಅತಿ ರಹಸ್ಯವಾದ ವಿಷಯ ಎಂದು ಪರಿಗಣಿಸಿ ಅದನ್ನು ಗುಟ್ಟಾಗಿ ಇಡಲು ಪ್ರಯತ್ನಿಸಲಾಯಿತು. ಇಷ್ಟಾದರೂ ಒಂದು ಅಂಶವನ್ನು ನಾವು ಕಾಣಬಹುದಾಗಿದೆ. ವಾತ್ಸಾಯನನು ಕಾಮಶಾಸ್ತ್ರವನ್ನು ಬರೆದು ವ್ಯಾಪಕವಾಗಿ ಪ್ರಚುರಪಡಿಸಿದ್ದನು. ಶಿಲ್ಪಕಲೆಗಳಲ್ಲಿ ವಿವಿಧ ಭಂಗಿಗಳ ಮೂಲಕ ಲೈಂಗಿಕ ಪ್ರಕಾರಗಳನ್ನು ಪ್ರಚುರಪಡಿಸಿರುವುದನ್ನು ಬೇರೆ ಬೇರೆ ದೇವಾಲಯಗಳಲ್ಲಿ ನಾವು ಕಾಣಬಹುದು. ಇದಕ್ಕೆ ಒಡಿಶಾದಲ್ಲಿನ ಖಜುರಾಹೋ ದೇವಾಲಯವು ಒಂದು ಉದಾಹರಣೆ. ಈ ಬಗೆಯ ದ್ವಂದ್ವಗಳಿದ್ದರೂ ಲೈಂಗಿಕ ವಿಷಯ ಎಂಬುದನ್ನು ಮನಬಿಚ್ಚಿ ಮಾತನಾಡುವುದಿರಲಿ, ಅದರ ಬಗ್ಗೆ ಸಾರ್ವಜನಿಕವಾಗಿ ಚರ್ಚಿಸುವುದಾಗಲೀ, ಸಾಮಾನ್ಯರಿಗೆ ಸರಿಯಾದ ಮಾಹಿತಿ ನೀಡುವುದಾಗಲೀ ಸಮಾಜ ಸಹಿಸುವುದಿಲ್ಲ ಎಂಬುದು ನಿರ್ವಿವಾದ.
ಹಾಗಾದರೆ ಲೈಂಗಿಕತೆ ಎಂದರೇನು, ಅದರ ಆಯಾಮಗಳು ಒಬ್ಬ ವ್ಯಕ್ತಿಯ ಜೀವನದಲ್ಲಿ ವ್ಯಾಪಕವಾಗಿದೆಯೇ ಅಥವಾ ಲೈಂಗಿಕ ಅಂಗಾಂಗಗಳು ಮತ್ತು ಕ್ರಿಯೆಗಳಿಗೆ ಸೀಮಿತವಾಗಿದೆಯೇ ಎಂಬುದು ಎಲ್ಲರೂ ಅರಿಯಲೇಬೇಕಾದ ವಿಷಯ. ಒಂದು ಕಾಲದಲ್ಲಿ ಲೈಂಗಿಕತೆ ಎಂಬುದು ಕೇವಲ ಲೈಂಗಿಕ ಅಂಗಾಂಗಗಳಿಗೆ ಮತ್ತು ಲೈಂಗಿಕ ಕ್ರಿಯೆಗೆ ಅಂದರೆ ಸಂತಾನೋತ್ಪತ್ತಿಗೆ ಸೀಮಿತವಾದ ಪ್ರಕ್ರಿಯೆ ಎಂಬುದು ಸಾರ್ವಜನಿಕರ ನಂಬಿಕೆಯಾಗಿತ್ತು. ಅದೇ ಕಾರಣದಿಂದ ಲೈಂಗಿಕ ವಿಷಯದ ಕುರಿತು ಯಾವ ಮಾಹಿತಿಯನ್ನೂ ನೀಡುವ ಅವಶ್ಯಕತೆ ಇಲ್ಲ ಎಂದೇ ಜನ ಭಾವಿಸುತ್ತಿದ್ದರು. ಹರೆಯದ ಮಕ್ಕಳು ಲೈಂಗಿಕ ಕುತೂಹಲಗಳನ್ನು ಅಥವಾ ಸಂದೇಹಗಳನ್ನು ತಮ್ಮ ತಾಯಿ ತಂದೆಯರಲ್ಲಿ ಹೇಳಿಕೊಳ್ಳಲು ಹಿಂಜರಿಯುತ್ತಿದ್ದರು. ಹಾಗೇನಾದರೂ ಧೈರ್ಯದಿಂದ ಕೇಳಿಯೇಬಿಟ್ಟರು ಅಂದುಕೊಳ್ಳೋಣ. "ಅದು ನಿನಗೆ ಮುಂದೆ ತಿಳಿಯುತ್ತೆ" ಎಂದೋ, "ಹಾಗೆಲ್ಲ ಅದು ಕೇಳುವ ವಿಷಯವಲ್ಲ" ಎಂಬ ಹಾರಿಕೆಯ ಉತ್ತರ ಸಾಮಾನ್ಯವಾಗಿ ಎಲ್ಲ ಪೋಷಕರಿಂದಲೂ ಬರುತ್ತಿತ್ತು. ಇದರಿಂದ ತಮ್ಮ ಸಂದೇಹಗಳನ್ನು ಪರಿಹರಿಸಿಕೊಳ್ಳುವ ಉದ್ದೇಶದಿಂದ ಹಲವಾರು ಶೋಷಣೆಯ ಜಾಹೀರಾತುಗಳಿಗೆ, ಇಂತಹ ಅವಕಾಶಗಳನ್ನು ಹಣಗಳಿಕೆಯ ದಂಧೆಯನ್ನಾಗಿ ಮಾಡಿಕೊಂಡವರು ನೀಡುವ ಮಾಹಿತಿಗಳಿಗೆ ಮೊರೆ ಹೋಗುತ್ತಿದ್ದರು ಈ ಹರೆಯದ ಹಸುಳೆಗಳು. ಕೆಲವು ದೃಶ್ಯ ಮಾಧ್ಯಮಗಳು ಹರೆಯದವರ ಅನೇಕ ಕುತೂಹಲಗಳನ್ನು ಕೆರಳಿಸುವ, ಅಷ್ಟೇ ತಪ್ಪು ಮಾಹಿತಿಗಳನ್ನು ನೀಡುವ ಲೈಂಗಿಕ ಸಾಹಿತ್ಯಗಳು, ಅದಕ್ಕೆ ಸೀಮಿತವಾದ ನಿಯತಕಾಲಿಕಗಳು ಮಾರುಕಟ್ಟೆಯಲ್ಲಿ ಸಿಗುತ್ತವೆ. ಇವುಗಳ ಮೂಲಕ ಪಡೆದ ತಪ್ಪು ಮಾಹಿತಿಗಳಿಂದ ಆ ವ್ಯಕ್ತಿಯ ಜೀವನವೇ ಅಲ್ಲೋಲಕಲ್ಲೋಲವಾದ ಉದಾಹರಣೆಗಳು ಮನೋವೈದ್ಯಕೀಯದಲ್ಲಿ ಸಾಕಷ್ಟು ಬರುತ್ತವೆ.
ಸುಮಾರು ಹದಿನಾರು ವರ್ಷದ, ಮೊದಲನೇ ಪಿ.ಯು.ಸಿ.ಯಲ್ಲಿ ಓದುತ್ತಿದ್ದ ವಿದ್ಯಾರ್ಥಿ ರವಿ. ಕಳೆದ ಎರಡು ವರ್ಷಗಳಿಂದ ರವಿಗೆ ಹೊಟ್ಟೆ ನೋವಿನ ತೊಂದರೆ. ತಂದೆ ತಾಯಿಗೆ ಒಬ್ಬನೇ ಮಗ. ಅಪ್ಪ ಅಮ್ಮ ಬುದ್ಧಿವಂತರು. ಅತಿ ಶಿಸ್ತಿನ ಜೀವನವನ್ನು ಅಳವಡಿಸಿಕೊಂಡವರು. ಮಗನ ತೊಂದರೆಗೆ ಮೊದಲಿಗೆ ಅದೂ ಇದೂ ಔಷಧವಾಯಿತು. ಹಲವಾರು ವೈದ್ಯರ ಭೇಟಿಯಾಯಿತು. ವೈದ್ಯಕೀಯ ಸೂರಿನಡಿ ಇರುವ ಎಲ್ಲಾ ಪರೀಕ್ಷೆಗಳೂ ನಡೆದವು. ಎಲ್ಲವೂ ನಾರ್ಮಲ್ ಆಗಿರುತ್ತಿದ್ದವು. ಎಲ್ಲಾ ವೈದ್ಯರೂ ಹೇಳುವುದೇನೆಂದರೆ 'ನಿಮ್ಮ ಮಗನಿಗೆ ಏನೂ ಆಗಿಲ್ಲ. ಚೆನ್ನಾಗಿದ್ದಾನೆ. ಏನೋ ಸ್ವಲ್ಪ ವರಿ ಮಾಡುತ್ತಾನೆ. ಎಲ್ಲಾ ಸರಿ ಹೋಗುತ್ತೆ". ಜೊತೆಗೆ ಒಂದಿಷ್ಟು ಮಾತ್ರೆ, ಔಷಧ ಉಪಚಾರ. ಜೋಯಿಸರ ಸಲಹೆಯಂತೆ ಪೂಜೆ, ಹವನ, ಹರಕೆ ಎಲ್ಲವೂ ಆದವು. ಆದರೆ ಮಗನಿಗೆ ತೊಂದರೆಯಿಂದ ಮುಕ್ತಿಯಿಲ್ಲ. ಇದೆಲ್ಲಾ ಆಗುತ್ತಾ ಎರಡು ವರ್ಷಗಳು ಕಳೆದವು. ರವಿ ದಿನದಿನಕ್ಕೂ ಶರೀರದಲ್ಲಿ ಕ್ಷೀಣಿಸುತ್ತಿದ್ದ. ಹತ್ತನೇ ತರಗತಿಯಲ್ಲಿ ಚೆನ್ನಾಗಿ ಓದಿ ನೂರಕ್ಕೆ ಎಂಬತ್ತು ಅಂಕ ಪಡೆದ ರವಿ ಮೊದಲನೇ ಪಿ.ಯು.ಸಿ.ಯಲ್ಲಿ ಪಡೆದದ್ದು ಕೇವಲ ನಲವತ್ತೈದು ಅಂಕಗಳು ಮಾತ್ರ. ಅದರೊಂದಿಗೆ ಯಾವಾಗಲೂ ಮಂದ ಸ್ವಭಾವದವನಾಗಿರಲು ಪ್ರಾರಂಭಿಸಿದ.
ಸಮಯಕ್ಕೆ ಸರಿಯಾಗಿ ರವಿಯ ತಂದೆಯ ಸ್ನೇಹಿತರೊಬ್ಬರು ಮನೆಗೆ ಬಂದಾಗ ಅವರೊಂದಿಗೆ ಈ ವಿಷಯವನ್ನು ಅವನ ತಾಯಿ ವತ್ಸಲಾ ಹೇಳಿದರು. ವತ್ಸಲಾ ಹೇಳಿದ್ದೆಲ್ಲವನ್ನೂ ಅವರು ಸಮಾಧಾನದಿಂದ ಕೇಳಿ "ಒಮ್ಮೆ ರವಿಯನ್ನು ಮನೋವೈದ್ಯರಲ್ಲಿಗೆ ಏಕೆ ತೋರಿಸಿ ಸಲಹೆ ಪಡೆಯಬಾರದು?" ಎಂದರು. ಇದನ್ನು ಕೇಳಿದಾಕ್ಷಣ ರವಿಯ ತಂದೆಗೆ ಆಕಾಶವೇ ತಲೆಯ ಮೇಲೆ ಬಿದ್ದಂತಾಗಿ, ಅದು ಸಾಧ್ಯವೇ ಇಲ್ಲ. ರವಿಗೆ ಅಂತಹ ಕಾಯಿಲೆ ಏನೂ ಆಗಿಲ್ಲ ಎಂದರು. ಕೊನೆಗೆ ಸ್ನೇಹಿತರ ಒತ್ತಾಯದ ಮೇರೆಗೆ ಒಲ್ಲದ ಮನಸ್ಸಿನಿಂದ ಮಗ ರವಿಯನ್ನು ಮನೋವೈದ್ಯರಲ್ಲಿಗೆ ಕರೆದೊಯ್ದರು.
ರವಿ ಹೇಳಿದ್ದೆಲ್ಲವನ್ನೂ ಆಲಿಸಿದ ವೈದ್ಯರು ರವಿಯ ಮನೋ ಪರೀಕ್ಷೆ ಮಾಡಿದರು. ನಂತರ 'ನಿನಗೆ ಸೆಕ್ಸ್ ಬಗ್ಗೆ ಏನನ್ನಿಸುತ್ತೆ?' ಎಂದು ಕೇಳಿದಾಗ ರವಿಯ ಮುಖ ಚರ್ಯೆ ಬದಲಾಯಿತು. ಸ್ವಲ್ಪ ತಮಾಷೆಯ ಮಾತುಗಳ ನಂತರ ಮತ್ತೆ ಅದೇ ಪ್ರಶ್ನೆ ಕೇಳಿದಾಗ ರವಿ "ಸಾರ್, ಅದರ ಬಗ್ಗೆ ಕೇಳ್ಬೇಡಿ. ನಾನು ಇನ್ನು ಕೆಲವು ದಿನಗಳಲ್ಲಿ ನಪುಂಸಕನಾಗ್ತೇನೆ" ಎಂದಾಗ ಆ ಮನೋವೈದ್ಯರಿಗೆ ರವಿಯ ದೀರ್ಘಾವಧಿಯ ತೊಂದರೆಗೆ ಕಾರಣ ಏನು ಎಂಬುದು ಅರ್ಥವಾಯಿತು. "ಯಾಕೆ ಹಾಗೆ ಭಾವಿಸುತ್ತೀಯಾ?" ಎಂದಾಗ "ಸಾರ್, ನನಗೆ ಹಾಸಿಗೆಯಲ್ಲಿ ನಾಲ್ಕು-ಐದು ದಿನಕ್ಕೊಮ್ಮೆ ಧಾತು ಹೋಗ್ತದೆ. ಹಾಗೆ ಹೋದ್ರೆ ಮುಂದೆ ನಾನು ನಿರ್ವೀರ್ಯನಾಗ್ತೀನಂತೆ. ಹಾಗಾದ್ರೆ ನಾನು ಮುಂದೆ ಮದುವೆ ಆಗೋದು ಹೇಗೆ? ನಾನು ಗಂಡಸು ಅನ್ನಿಸಿಕೊಳ್ಳೋದು ಹೇಗೆ?" ಎಂದ. "ಹದಿವಯಸ್ಸಿನ ಗಂಡು ಮಕ್ಕಳಲ್ಲಿ ವೀರ್ಯೋತ್ಪತ್ತಿಯಾಗುವುದು, ಉತ್ಪತ್ತಿ ಹೆಚ್ಚಾದಾಗ ಅದು ಮೂತ್ರನಾಳದ ಮೂಲಕ ಹೊರ ಚೆಲ್ಲುವುದು ಸಹಜ. ಅದು ಒಂದು ರೀತಿಯಲ್ಲಿ ಆರೋಗ್ಯಕರ ಲೈಂಗಿಕತೆಯ ಚಿಹ್ನೆ" ಎಂದು ರವಿಗೆ ವೈದ್ಯರು ಆಪ್ತ ಸಮಾಲೋಚನೆ ಮೂಲಕ ತಿಳಿಸಿ ಹೇಳಿದರು. ರವಿಗೆ ಆಳವಾದ ಖಿನ್ನತೆ ಇದ್ದುದರಿಂದ ಅದಕ್ಕೆ ಔಷಧವನ್ನು ಬರೆದುಕೊಟ್ಟರು. ಈ ವಿಷಯವನ್ನು ರವಿಯ ತಂದೆ ತಾಯಿಗೂ ವಿವರಿಸಿ ಕಳುಹಿಸಿದರು. ಚಿಕಿತ್ಸೆ ನಂತರ ಅವನು ಮೊದಲಿನಂತೆ ಓದುವುದರಲ್ಲಿ ಮುಂದಾದ. ಶಾರೀರಿಕವಾಗಿಯೂ ಸುಧಾರಿಸಿದ.
ಹೀಗೆ ಬೇರೆ ಬೇರೆ ತೊಂದರೆಗಳೆಂದು ಬರುವ ಹರೆಯದವರಲ್ಲಿ ಶೇಕಡಾ ಅರವತ್ತು ಮಂದಿಗೆ ಲೈಂಗಿಕತೆಯ ತಪ್ಪು ಮಾಹಿತಿಯೇ ಸಮಸ್ಯೆಗೆ ಕಾರಣ ಎಂಬುದು ವಾಸ್ತವ. ಇದನ್ನು ಮನಗಂಡ ವಿಶ್ವ ಆರೋಗ್ಯ ಸಂಸ್ಥೆಯು ಹರೆಯದವರ ಲೈಂಗಿಕ ಸಮಸ್ಯೆಗಳು, ದಾಂಪತ್ಯ ಸಮಸ್ಯೆಗಳಲ್ಲಿ ಲೈಂಗಿಕತೆಯ ಪಾತ್ರ, ಹರೆಯದವರಲ್ಲಿ ಕಂಡುಬರುವ ಅನೈತಿಕ ಲೈಂಗಿಕ ಕಿರುಕುಳಗಳು, ಹರೆಯದ ಹೆಣ್ಣುಮಕ್ಕಳಲ್ಲಿ ಗರ್ಭಧಾರಣೆ, ಹರೆಯದವರಲ್ಲಿ ಹೆಚ್ಚುತ್ತಿರುವ ಲೈಂಗಿಕ ರೋಗಗಳು ಮತ್ತು ಹೆಚ್.ಐ.ವಿ. ಸೋಂಕುಗಳನ್ನು ಕುರಿತು ವ್ಯಾಪಕವಾದ ಅಧ್ಯಯನವನ್ನು ಕೈಗೊಂಡಿತು. ಈ ಅಧ್ಯಯನಗಳಿಂದ ಹಲವು ಕುತೂಹಲಕರ ಅಂಶಗಳು ಕಂಡುಬಂದವು. ಕೆಲವು ಮುಖ್ಯವಾದ ಅಧ್ಯಯನಗಳನ್ನು ಹೆಸರಿಸಬೇಕೆಂದರೆ, 2003ರಲ್ಲಿ ವಿಶ್ವ ಆರೋಗ್ಯ ಸಂಸ್ಥೆಯು ಕುಟುಂಬ ಜೀವನ ಶಿಕ್ಷಣ ಮತ್ತು ಜನಸಂಖ್ಯಾ ಶಿಕ್ಷಣ ಎಂಬ ಶೀರ್ಷಿಕೆಯಡಿ ನಡೆಸಿದ ಅಧ್ಯಯನ, 2007ರಲ್ಲಿ ನಮ್ಮ ಭಾರತ ಸರ್ಕಾರ "ಮಕ್ಕಳಲ್ಲಿ ನಡೆಯುವ ದೌರ್ಜನ್ಯ" ಎಂಬ ಹೆಸರಿನಲ್ಲಿ ಕೈಗೊಂಡ ಅಧ್ಯಯನ, 2011ರಲ್ಲಿ UNICEF ಕೈಗೊಂಡ ವಿಶ್ವದ ಮಕ್ಕಳ ಸ್ಥಿತಿಗತಿ - ಹರೆಯ ಅವಕಾಶಗಳ ಒಂದು ಅವಧಿ (adolescence is a period of opportunity) ಎಂಬ ಅಧ್ಯಯನ ಮತ್ತು 2006ರಲ್ಲಿ ವಿಶ್ವ ಸಂಸ್ಥೆಯು ಹರೆಯದವರ ಲೈಂಗಿಕ ಮತ್ತು ಸಂತಾನೋತ್ಪತ್ತಿಯ ಕ್ಷಮತೆಯನ್ನು ಕಾಪಾಡುವುದು ಹೇಗೆ ಎಂಬ ವಿಷಯದ ಕುರಿತ ಅಧ್ಯಯನ.
ಈ ಮೇಲಿನ ಅಧ್ಯಯನಗಳು ಮತ್ತು ಇಂತಹುದೇ ಹಲವು ಅಧ್ಯಯನಗಳಿಂದ ಕಂಡುಬಂದ ಅಂಶಗಳು ಲೈಂಗಿಕ ಶಿಕ್ಷಣದ ಮಹತ್ವವನ್ನು ತಿಳಿಸಿದವು. ಅವುಗಳ ಸಾರಾಂಶವನ್ನು ತಿಳಿಸಬೇಕೆಂದರೆ (1) ಲೈಂಗಿಕತೆ ಎಂಬುದು ಕೇವಲ ಸಂತಾನೋತ್ಪತ್ತಿ ಮತ್ತು ಲೈಂಗಿಕ ಕ್ರಿಯೆಗೆ ಸಂಬಂಧಪಟ್ಟಿದ್ದಲ್ಲ (2) ಭಾವನಾತ್ಮಕವಾಗಿ ಮತ್ತು ಮನೋಸಾಮಾಜಿಕವಾಗಿ ಲೈಂಗಿಕತೆಯ ಪರಿಣಾಮ ಒಬ್ಬ ವ್ಯಕ್ತಿಯ ಮೇಲೆ ಅಗಾಧವಾದ ಪರಿಣಾಮ ಬೀರುತ್ತದೆ (3) ಒಬ್ಬ ವ್ಯಕ್ತಿಯ ವ್ಯಕ್ತಿತ್ವ ವಿಕಸನದಲ್ಲಿ ಲೈಂಗಿಕತೆಯ ಪಾತ್ರ ಮಹತ್ವದ್ದು (4) ಮೊದಲೇ ತಿಳಿಸಿದ ಹಾಗೆ ಲೈಂಗಿಕತೆಯು ಹುಟ್ಟಾಸೆಗಳಲ್ಲಿ ಒಂದಾದರೂ ಸರಿಯಾದ ಲೈಂಗಿಕ ಶಿಕ್ಷಣದಿಂದ ಮಾತ್ರ ಅದನ್ನು ಆರೋಗ್ಯಕರ ಚಟುವಟಿಕೆಯಾಗಿ ಪರಿವರ್ತಿಸಬಹುದು (4) ಸಮಾಜದಲ್ಲಿ ಲೈಂಗಿಕತೆ ಕುರಿತಾಗಿರುವ ತಪ್ಪು ಕಲ್ಪನೆಗಳಿಂದ ಮತ್ತು ಮಡಿವಂತಿಕೆಯಿಂದ, ಹೆಚ್ಚಿನ ಯುವಕ ಯುವತಿಯರು ಹರೆಯದಲ್ಲೇ ದಾರಿ ತಪ್ಪಿ ನಾನಾ ವಿಧದ ತೊಂದರೆಗಳಿಗೊಳಗಾಗುತ್ತಾರೆ (5) ಈ ವಿಧದ ತೊಂದರೆಗಳು ಅವರ ಭವಿಷ್ಯವನ್ನೇ ಕುಂಠಿತಗೊಳಿಸಬಹುದು (6) ಅವರ ವ್ಯಕ್ತಿತ್ವ ವಿಕಸನದಲ್ಲಿ ವ್ಯತ್ಯಯಗಳಾಗಬಹುದು (7) ಹಲವಾರು ಲೈಂಗಿಕ ರೋಗಗಳು, ಹರೆಯದವರಲ್ಲಿ ಹೆಚ್ಚಾಗಿ ಕಂಡುಬರುತ್ತಿರುವ ಹೆಚ್.ಐ.ವಿ. ಸೋಂಕುಗಳು, ಲೈಂಗಿಕ ಅತ್ಯಾಚಾರ ಮತ್ತು ವಿಕೃತ ಲೈಂಗಿಕತೆಯನ್ನು ತಡೆಗಟ್ಟಲು ಲೈಂಗಿಕ ಶಿಕ್ಷಣವು ಮಹತ್ವದ ಪಾತ್ರ ವಹಿಸುತ್ತದೆ (8) ಅತಿಯಾಗುತ್ತಿರುವ ದಾಂಪತ್ಯ ಸಮಸ್ಯೆಗಳಲ್ಲಿ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಲೈಂಗಿಕತೆಯೇ ಬಹುತೇಕ ಕಾರಣ ಎಂಬ ಅಂಶಗಳು ಸ್ಪಷ್ಟವಾದವು. ಶೇಕಡಾ ಎಂಬತ್ತೈದು ವ್ಯಕ್ತಿಗಳಲ್ಲಿ ಮೇಲಿನ ಅಂಶಗಳು ಬೀಜಾಂಕುರವಾಗುವುದು ಅವರ ಹರೆಯದ ಅವಧಿಯಲ್ಲಿ ಎಂಬುದು ಓದುಗರು ಗಮನಿಸಬೇಕಾದ ಅಂಶ.
ಮೇಲಿನ ಅಂಶಗಳನ್ನು ಗಮನಿಸಿದ ಸರ್ಕಾರ, ಸಮಾಜ ಚಿಂತಕರು, ಮನೋ ವಿಜ್ಞಾನಿಗಳು ಶಿಕ್ಷಣದಲ್ಲಿ ಲೈಂಗಿಕ ವಿಷಯವನ್ನು ಅಳವಡಿಸಬೇಕೆಂಬ ತೀರ್ಮಾನಕ್ಕೆ ಬಂದರು. ಲೈಂಗಿಕತೆಯು ಒಬ್ಬ ವ್ಯಕ್ತಿಯ ಜೀವನದಲ್ಲಿ ಪ್ರಮುಖ ಪಾತ್ರ ವಹಿಸುವ ಅಂಶವಾದ್ದರಿಂದ ಲೈಂಗಿಕ ಶಿಕ್ಷಣಕ್ಕೆ ಮತ್ತೊಂದು ಹೆಸರು ಕುಟುಂಬ ಜೀವನ ಶಿಕ್ಷಣ (family life education)ಎಂದೂ ಕರೆದರು. ಲೈಂಗಿಕ ಶಿಕ್ಷಣದ ಪ್ರಮುಖ ಉದ್ದೇಶಗಳು (1)ಮಕ್ಕಳು ಮತ್ತು ಹರೆಯದವರಲ್ಲಿ ಲೈಂಗಿಕತೆಯ ಕುರಿತು ವಾಸ್ತವಾಂಶಗಳನ್ನು ತಿಳಿಸುವುದು (2) ಹರೆಯದಲ್ಲಿ ಲೈಂಗಿಕ ವಿಷಯಗಳಿಗೆ ಸಂಬಂಧಿಸಿದಂತೆ ಭಾವನಾತ್ಮಕ ಅಂಶಗಳ ಬಗ್ಗೆ ಗಮನ ನೀಡಿ ಸರಿಯಾದ ಮಾಹಿತಿ ಒದಗಿಸುವುದು (3) ಲೈಂಗಿಕ ಅಂಗಾಂಗಳ ಕುರಿತು ಸರಿಯಾದ ಮಾಹಿತಿ ಒದಗಿಸುವುದು (4) ಲೈಂಗಿಕ ನಡವಳಿಕೆಯಿಂದ ಆಗುವ ಮಾನಸಿಕ ಮತ್ತು ಸಾಮಾಜಿಕ ಪರಿಣಾಮಗಳ ಕುರಿತು ತಿಳಿಸುವುದು (5) ವ್ಯಕ್ತಿಯ ಲೈಂಗಿಕ ನಡವಳಿಕೆಗಳು ಹೇಗೆ ಅವರ ಭವಿಷ್ಯದಲ್ಲಿ ಒಳ್ಳೆಯ ಅಥವಾ ಕೆಟ್ಟ ಪರಿಣಾಮ ಬೀರಬಹುದು ಎಂಬುದನ್ನು ಹರೆಯದವರಿಗೆ ಮನದಟ್ಟು ಮಾಡುವುದು (6) ಲೈಂಗಿಕ ನಡವಳಿಕೆಗಳು ಇತರರ ಮೇಲೆ ಮತ್ತು ಸಮಾಜದ ಮೇಲೆ ಹೇಗೆ ಪರಿಣಾಮ ಬೀರಬಹುದು ಎಂಬ ಅಂಶಗಳನ್ನು ತಿಳಿಸುವುದು. ಒಟ್ಟಿನಲ್ಲಿ ಲೈಂಗಿಕ ಶಿಕ್ಷಣದಿಂದ ವ್ಯಕ್ತಿಯ ಸಾಮಾಜಿಕ ಮತ್ತು ನೈತಿಕ ನಡವಳಿಕೆಗಳು ಉತ್ತಮಗೊಳ್ಳುತ್ತವೆ. ಅವರಿಗೆ ಲೈಂಗಿಕತೆಯ ಕುರಿತು ಸರಿಯಾದ ಧೋರಣೆಗಳು, ಕೌಟುಂಬಿಕ ಸಂಬಂಧಗಳು ಮತ್ತು ಮಾನವೀಯ ಸಂಬಂಧಗಳಲ್ಲಿ ಮಾರ್ಪಾಡಾಗಿ ಸ್ವಸ್ಥ ಸಮಾಜ ನಿರ್ಮಾಣವಾಗಲು ಸಹಾಯವಾಗುತ್ತದೆ ಎಂಬುದು ಇದರ ಸಾರಾಂಶ. ಅದೇ ರೀತಿ ಹರೆಯದಲ್ಲೇ ಗರ್ಭದಾರಣೆ, ಲೈಂಗಿಕ ಅತ್ಯಾಚಾರಗಳು, ಹೆಚ್.ಐ.ವಿ. ಸೋಂಕು ಹಾಗೂ ಜನಸಂಖ್ಯಾ ಸ್ಫೋಟಗಳನ್ನು ಸಹ ಲೈಂಗಿಕ ಶಿಕ್ಷಣದಿಂದ ತಹಬಂದಿಗೆ ತರಲು ಸಾಧ್ಯ ಎಂಬುದೂ ಗಮನಿಸಬೇಕಾದ ಅಂಶ.
ಲೈಂಗಿಕ ಶಿಕ್ಷಣದ ಉದ್ದೇಶ ಮತ್ತು ಅದರ ಅವಶ್ಯಕತೆಗಳು ನಿಖರವಾದಾಗ ಲೈಂಗಿಕ ಶಿಕ್ಷಣವನ್ನು ಯಾವ ಹಂತದಲ್ಲಿ ಅಳವಡಿಸಬೇಕು ಮತ್ತು ಯಾವ ವಿಧದಲ್ಲಿ ಅದನ್ನು ಕೊಡಬೇಕು ಎಂಬುದು ಇಂದಿಗೂ ಚರ್ಚೆಯಾಗುತ್ತಿರುವ ವಿಷಯ. ಈ ಅಂಶದ ಕುರಿತು ಆಧುನಿಕ ಮನೋವಿಜ್ಞಾನದಲ್ಲಿ ಕಂಡುಬರುವ ಅಂಶಗಳನ್ನು ತಿಳಿದರೆ ಒಳ್ಳೆಯದು:
ಲೈಂಗಿಕತೆಯು ಹುಟ್ಟಾಸೆಗಳಲ್ಲಿ ಒಂದಾದರೂ ಅದು ವ್ಯಕ್ತಿಯ ಅರಿವಿಗೆ ಬರುವುದು ಹರೆಯದ ಹಂತದಲ್ಲಿ. ಸಿಗ್ಮಂಡ್ ಫ್ರಾಯ್ಡ್ ಹೇಳುವ ಹಾಗೆ "ಜನಿಸಿದ ಮೂರು ವರ್ಷಗಳಿಗೆ ಕಾಣಿಸಿಕೊಳ್ಳುವ ಈಡಿಪಸ್ ಕಾಂಪ್ಲೆಕ್ಸ್ (oedipus complex) ಮತ್ತು ನಂತರ ಮಗುವಿಗೆ ಖಷಿ ಕೊಡುವ ಹಲವು ಚಟುವಟಿಕೆಗಳೂ ಲೈಂಗಿಕತೆಗೆ ಸಂಬಂಧಿಸಿದ ಲಕ್ಷಣಗಳು. ಆದರೆ ಲೈಂಗಿಕ ಚಟುವಟಿಕೆಯ ಅರಿವುಂಟಾಗುವುದು ಮಗು ಹರೆಯಕ್ಕೆ ಬಂದಾಗ ಎಂಬುದು ವಿಶೇಷ. ಇದಕ್ಕೆ ಪ್ರಮುಖವಾದ ಕಾರಣಗಳು ಎರಡು. ಮೊದಲನೆಯದಾಗಿ ಲೈಂಗಿಕ ಅಂಗಾಂಗಗಳ ವಿಕಾಸಗೊಳ್ಳುವಿಕೆ, ಅದರಲ್ಲೂ ವಿಶೇಷವಾಗಿ ಗಂಡುಮಕ್ಕಳಲ್ಲಿ ವೀರ್ಯೋತ್ಪತ್ತಿ ಮತ್ತು ಹೆಣ್ಣು ಮಕ್ಕಳಲ್ಲಿ ಋತುಮತಿಯಾಗುವಿಕೆ. ಇವು ಎರಡೂ ಪ್ರಕ್ರಿಯೆಗಳು ಹರೆಯದ ಹಂತದಲ್ಲಿ ಜರುಗುತ್ತವೆ. ಎರಡನೆಯದಾಗಿ ಮನೋವಿಕಾಸ. ಬಾಲ್ಯದಲ್ಲಿ ಅಂದರೆ ಜನಿಸಿದ ಸುಮಾರು ಆರು ವರ್ಷಗಳವರೆಗೆ ಮಗುವಿನ ಯೋಚನೆಗಳು ಮೂರ್ತ ಸ್ವರೂಪದಲ್ಲಿರುತ್ತವೆ. ನಂತರದಲ್ಲಿ ಅಮೂರ್ತ ಯೋಚನೆಗಳು ಮಗುವಿನ ಮನಸ್ಸಿನಲ್ಲಿ ಮೂಡಲು ಪ್ರಾರಂಭವಾಗುತ್ತವೆ. ಸುಮಾರು ಹನ್ನೆರಡನೇ ವಯಸ್ಸಿಗೆ ಮಗುವು ಅಮೂರ್ತವಾಗಿ ಯೋಚಿಸಲು ಹೆಚ್ಚು ಶಕ್ತವಾಗುತ್ತದೆ. ಕಲ್ಪನಾಲೋಕದಲ್ಲಿ ವಿಹರಿಸುವುದು, ಕುತೂಹಲದಿಂದ ಪರೀಕ್ಷಿಸುವುದು ಮತ್ತು ಹೇಗಾದರೂ ಮಾಡಿ ಉತ್ತರ ಕಂಡುಕೊಳ್ಳಲು ಪ್ರಯತ್ನಿಸುವುದು ಅಮೂರ್ತ ಮನಸ್ಸಿನ ವಿಶೇಷ. ಹರೆಯ ಎಂಬುದು ಸಂಕ್ರಮಣ ಕಾಲ. ಯೋಚನೆಯಲ್ಲಿ ಪಕ್ವತೆ ಇಲ್ಲದ ಪರಿಸ್ಥಿತಿ ಒಂದೆಡೆ. ಭಾವನೆಗಳ ಮಹಾಪೂರದಿಂದ ಹಿರಿಯರು ಹೇಳಿದ್ದನ್ನು ಕೇಳಿಸಿಕೊಳ್ಳುವಷ್ಟು ತಾಳ್ಮೆಯ ಕೊರತೆ ಇನ್ನೊಂದೆಡೆ. ಲೈಂಗಿಕ ಕ್ಷೇತ್ರಕ್ಕೆ ಬಂದರೆ ಈ ಪರಿಸ್ಥಿತಿ ಇನ್ನೂ ಆಯೋವುಯ. ಕಾರಣ ಹರೆಯದ ಮನಸ್ಸಿಗೆ ಲೈಂಗಿಕ ಜ್ಞಾನದ ಕೊರತೆ, ಜೊತೆಗೆ ವಿಕಾಸಗೊಳ್ಳುತ್ತಿರುವ ಲೈಂಗಿಕ ಅಂಗಾಂಗಗಳ ಕುರಿತು ಸಂಶಯ, ಕುತೂಹಲಗಳು. ಆದರೆ ವಾಸ್ತವ ಮಾಹಿತಿಗಳನ್ನು ನೀಡಲು ಹಿಂಜರಿಯುವ ಪೋಷಕರು-ಸಮಾಜ. ಇದರಿಂದ ಸಹಿಸಲಾಗದ ಒತ್ತಡಕ್ಕೆ ಸಿಲುಕುವ ಹರೆಯದ ಮನಸ್ಸು ಅಲ್ಲಿ ಇಲ್ಲಿ ದೊರಕುವ ತಪ್ಪು ಮಾಹಿತಿಗಳಿಗೆ ಮೊರೆ ಹೋಗಿ ಆ ಅಂಶಗಳೇ ವಾಸ್ತವವೆಂದು, ಅವುಗಳನ್ನೇ ನಂಬಿ ತನ್ನ ಲೈಂಗಿಕ ಧೋರಣೆಗಳನ್ನು ಅಳವಡಿಸಿಕೊಳ್ಳುತ್ತದೆ. ಇದು ಅಪಾಯಕಾರಿ ಎಂಬ ಭಾವನೆ ಹರೆಯದ ಅಪಕ್ವ ಮನಸ್ಸಿಗೆ ಹೊಳೆಯುವುದಿಲ್ಲ. ವ್ಯಕ್ತಿತ್ವ ವಿಕಸನ ಪ್ರಕ್ರಿಯೆಯು ಗಟ್ಟಿಯಾಗುವುದೂ ಹರೆಯದ ಹಂತದಲ್ಲಿ.
ಹರೆಯದವರ ಮನಸ್ಸಿನ ಕುರಿತು ಇನ್ನೂ ಒಂದು ಅಂಶವನ್ನು ಗಮನಿಸುವುದು ಅವಶ್ಯ. ಮೊದಲೇ ತಿಳಿಸಿದ ಹಾಗೆ ಹರೆಯದ ಮನಸ್ಸು ಯಾವಾಗಲೂ ಗೊಂದಲದ ಸ್ಥಿತಿಯಲ್ಲಿರುತ್ತದೆ. ಹೆಚ್ಚಿನ ಸಂದರ್ಭಗಳಲ್ಲಿ ಪೋಷಕರು ಹೇಳುವ ಮಾತುಗಳಿಗೂ, ಬಾಹ್ಯ ಪ್ರಪಂಚದಲ್ಲಿ ಅಂದರೆ ಸಮಾಜದಲ್ಲಿ ನಡೆಯುವ ಘಟನೆಗಳು ಮತ್ತು ಬೇರೆ ಬೇರೆ ಮಾಧ್ಯಮಗಳಿಂದ ದೊರೆಯುವ ಮಾಹಿತಿಗಳಿಗೂ ತದ್ವಿರುದ್ಧವಾಗಿರುತ್ತವೆ. ಇದರಿಂದ ಹರೆಯದ ಮನಸ್ಸು ಇನ್ನಷ್ಟು ಗೊಂದಲದ ಗೂಡಾಗಿ, ಅವರ ನಡವಳಿಕೆಗಳು ರೋಚಕ ನಡೆನುಡಿಗಳತ್ತ ಆಕರ್ಷಿತವಾಗುತ್ತದೆ. ಇದು ಮನೋ ಲೈಂಗಿಕ ವಿಷಯದಲ್ಲಿ ಇನ್ನೂ ಹೆಚ್ಚಿನದು ಎನ್ನಬಹುದು. ಭವಿಷ್ಯದಲ್ಲಿ ಬಂದೊದಗುವ ಸಾಧಕ ಬಾಧಕಗಳ ಕುರಿತು ಚಿಂತಿಸುವ ಸಾಮರ್ಥ್ಯವಿಲ್ಲದ ಹರೆಯದ ಮನಸ್ಸು ಆ ಕ್ಷಣಕ್ಕೆ ಒತ್ತಡ ನೀಗುವ ಮತ್ತು ಮನಸ್ಸಿಗೆ ಖುಷಿ ನೀಡುವ ನಡವಳಿಕೆಗಳಿಗೆ ಮಾರುಹೋಗುತ್ತದೆ. ಲೈಂಗಿಕ ಶಿಕ್ಷಣವು ಶಾರೀರಿಕ, ಭಾವನಾತ್ಮಕ, ಸಾಮಾಜಿಕ. ಸಾಂಸ್ಕೃತಿಕ ಮತ್ತು ನೈತಿಕ ಅಂಶಗಳ ಕುರಿತಾಗಿರುವುದರಿಂದ ಈ ಹಂತದಲ್ಲಿ ಲೈಂಗಿಕ ಶಿಕ್ಷಣವನ್ನು ಅಳವಡಿಸಿದಾಗ ಅದು ಅರ್ಥಪೂರ್ಣವೆನಿಸುತ್ತದೆ ಎಂಬುದು ಮನೋವಿಜ್ಞಾನಿಗಳ ಅಭಿಪ್ರಾಯ. ಲೈಂಗಿಕ ಶಿಕ್ಷಣ ಕ್ಷೇತ್ರದಲ್ಲಿ ನಡೆಸಿದ ಆಳವಾದ ಅಧ್ಯಯನಗಳು ಈ ಅಂಶವನ್ನು ಕ್ರೋಢೀಕರಿಸುತ್ತವೆ.
"ಹರೆಯದ ಹಂತದಲ್ಲಿ ಲೈಂಗಿಕ ಶಿಕ್ಷಣವನ್ನು ಕೊಟ್ಟರೆ ಅದರಿಂದ ಆಗುವ ಅನಾಹುತಗಳೇ ಹೆಚ್ಚು. ಹಾಗಾಗಿ ಅದು ಸಲ್ಲ" ಎಂಬುದು ಕೆಲವರ ವಾದ. ಇದರಲ್ಲಿ ಹುರುಳಿಲ್ಲ ಎಂದು ಅಲ್ಲಗಳೆಯಲಾಗದು. ಇದಕ್ಕೆ ಕಾರಣವೂ ಇದೆ. ಪ್ರಸ್ತುತ ಲೈಂಗಿಕ ಶಿಕ್ಷಣವನ್ನು ಪ್ರೌಢಶಾಲೆ ಮಕ್ಕಳಿಗೆ ಕೊಡುವವರು ಅಲ್ಲಿ ಕೆಲಸ ಮಾಡುವ ಉಪಾಧ್ಯಾಯರೇ. ಅವರಿಗೆ ಎರಡು ಮೂರು ಅಥವಾ ಒಂದು ವಾರದ ಶಿಬಿರಗಳನ್ನು ನಡೆಸಿ, "ನೀವು ಹೋಗಿ ವಿದ್ಯಾರ್ಥಿಗಳಿಗೆ ಇದನ್ನು ತಿಳಿಸಿ ಹೇಳಿ" ಎಂದರೆ ಅದು ಖಂಡಿತವಾಗಿಯೂ ಅಪೂರ್ಣವಾಗುತ್ತದೆ. ತಾವು ಸತತವಾಗಿ ಅಭ್ಯಾಸ ಮಾಡಿ ತಮಗೆ ಇಷ್ಟವಾದ ವಿಷಯದ ಕುರಿತು ಪಾಠ ಮಾಡುತ್ತಿರುವ ಉಪಾಧ್ಯಾಯರಿಗೆ ಒಂದು ವಾರದ ಶಿಬಿರದಲ್ಲಿ ಅತಿ ಕ್ಲಿಷ್ಟವಾದ ಲೈಂಗಿಕ ವಿಷಯವನ್ನು ಅರ್ಥ ಮಾಡಿಕೊಳ್ಳುವುದಾದರೂ ಹೇಗೆ? ಅದನ್ನು ವಿದ್ಯಾರ್ಥಿಗಳಿಗೆ ತಿಳಿಸುವುದಾದರೂ ಹೇಗೆ? ಇದರಿಂದ ಆ ವಿದ್ಯಾರ್ಥಿಗಳು ಮತ್ತಷ್ಟು ಗೊಂದಲಕ್ಕೊಳಗಾಗಬಹುದು. ಎರಡನೆಯದಾಗಿ, ಹಾಗೆ ಪಾಠ ಹೇಳುವ ಉಪಾಧ್ಯಾಯರು ಲೈಂಗಿಕತೆಯ ಕುರಿತು ಹೊಂದಿರುವ ಧೋರಣೆ. ಆ ಧೋರಣೆ ಸಕಾರಾತ್ಮಕವಾಗಿದ್ದರೆ ಅವರು ವಿದ್ಯಾರ್ಥಿಗಳಿಗೆ ಒಳ್ಳೆಯ ಸಂದೇಶ/ಮಾಹಿತಿ ನೀಡಬಲ್ಲರು. ಅದಿಲ್ಲದೇ ಅವರೇ ನಕಾರಾತ್ಮಕ ಧೋರಣೆ ಹೊಂದಿದ್ದರೆ ಅದರಿಂದ ಅವರು ಕೊಡುವ ಮಾಹಿತಿಗಳಿಂದ ವಿದ್ಯಾರ್ಥಿಗಳಿಗೆ ಆಗುವ ತೊಂದರೆಗಳೇ ಹೆಚ್ಚು. ಇದರ ಕುರಿತೂ ಅಧ್ಯಯನಗಳು ನಡೆದಿವೆ ಮತ್ತು ಈ ಅಂಶಗಳು ನಿಜವೆಂದು ಕಂಡುಬಂದಿದೆ.
ಎಲ್ಲ ಸಮಸ್ಯೆಗಳಿಗೂ ಪರಿಹಾರ ಎಂಬುದು ಇದ್ದೇ ಇದೆ. ಅದಕ್ಕೆ ಲೈಂಗಿಕ ಶಿಕ್ಷಣ ಹೊರತಲ್ಲ. ವ್ಯಾಪಕವಾದ ಅಧ್ಯಯನಗಳ ಮೂಲಕ ಸಾಬೀತಾದ ಅಂಶಗಳನ್ನು ಗಮನಿಸಿದಾಗ ಹರೆಯದವರಿಗೆ ಲೈಂಗಿಕ ಶಿಕ್ಷಣ ಅನಿವಾರ್ಯ ಎಂಬುದರಲ್ಲಿ ಎರಡು ಮಾತಿಲ್ಲ. ಈಗ ಎಲ್ಲ ಶಾಲೆಗಳಲ್ಲಿಯೂ ಆಪ್ತಸಮಾಲೋಚಕರು ಎಂಬುವರೊಬ್ಬರಿರುತ್ತಾರೆ. ಅವರಿಗೆ ಲೈಂಗಿಕ ವಿಷಯದ ಕುರಿತು ಕನಿಷ್ಠ ಆರು ತಿಂಗಳಾದರೂ ತರಬೇತಿ ನೀಡಿ, ನಂತರದಲ್ಲಿ ಅವರಿಗೆ ಆ ಶಾಲೆಯಲ್ಲಿ ಲೈಂಗಿಕ ಶಿಕ್ಷಣದ ಜವಾಬ್ದಾರಿ ವಹಿಸಿದರೆ ಅದು ಫಲಕಾರಿಯಾಗಬಹುದು ಎಂಬುದು ಹಲವರ ಅಭಿಪ್ರಾಯ. ಅದು ಸದ್ಯ ನಮ್ಮ ಸಮಾಜಕ್ಕೆ ಸರಿಹೋಗುವ ಒಂದು ಮಾರ್ಗ. ಮತ್ತೊಂದು ಉತ್ತಮ ವಿಧಾನವೆಂದರೆ ಪೋಷಕರು ತಮ್ಮ ಮಡಿವಂತಿಕೆಯಿಂದ ಹೊರಬಂದು, ಬಾಲ್ಯದಿಂದಲೇ ಮಕ್ಕಳಿಗೆ ಕತೆ ಹೇಳುವುದರ ಮೂಲಕ ಅವರ ಸಂದೇಹಗಳನ್ನು ಹಂಚಿಕೊಳ್ಳಲು ಪ್ರೇರೇಪಿಸುವುದು, ಹಾಗೆಯೇ ಸಂದೇಹಗಳನ್ನು ನಿವಾರಿಸುವುದು. ಮೂರನೆಯದು ಸ್ವಸ್ಥ ಸಮಾಜ ಕಟ್ಟಲು ಈಗಿನ ಮಾಹಿತಿ ತಂತ್ರಜ್ಞಾನ ಯುಗದಲ್ಲಿ ಮಾಹಿತಿಗಳ ಪಾತ್ರ ಹಿರಿದು. ಮಾಧ್ಯಮಗಳು, ವಿಶೇಷವಾಗಿ ದೃಶ್ಯ ಮಾಧ್ಯಮಗಳು ಲೈಂಗಿಕ ಶಿಕ್ಷಣದಲ್ಲಿ ಸಕಾರಾತ್ಮಕವಾಗಿ ಸ್ಪಂದಿಸಿದಾಗ ಅದರಿಂದ ಹರೆಯದವರ ಬಾಳು ಹಸನಾಗುತ್ತದೆ. ಇವೆಲ್ಲದರ ಬಗ್ಗೆ ಯೋಚಿಸಿ ಸರ್ಕಾರ ದಿಟ್ಟ ಹೆಜ್ಜೆ ಇಟ್ಟಾಗ ಮಾತ್ರ ಈ ಕಾರ್ಯಕ್ರಮಕ್ಕೆ ಯಶಸ್ಸು ದೊರಕುತ್ತದೆ.
ಪ್ರಸ್ತುತ ಪರಿಸ್ಥಿತಿಯನ್ನು ಗಮನಿಸಿದಾಗ ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಹೆಚ್ಚಾಗುತ್ತಿದೆ. ಲೈಂಗಿಕ ಶಿಕ್ಷಣದಲ್ಲಿ ಮೇಲೆ ತಿಳಿಸಿದ ಅಂಶಗಳೊಂದಿಗೆ ಲೈಂಗಿಕ ದೌರ್ಜನ್ಯಗಳಿಂದ ಹೇಗೆ ರಕ್ಷಣೆ ಮಾಡಿಕೊಳ್ಳಬೇಕೆಂಬ ಮಾಹಿತಿಯನ್ನೂ ನೀಡಿದರೆ ಅದು ಇನ್ನೂ ಉತ್ತಮ ಲೈಂಗಿಕ ಶಿಕ್ಷಣ ಎನಿಸಿಕೊಳ್ಳುತ್ತದೆ.
ಈಗಿನ ಸಂದರ್ಭದಲ್ಲಿ ಲೈಂಗಿಕ ಶಿಕ್ಷಣ ಎಂದರೆ ಅದು ಲೈಂಗಿಕ ಅಂಗಾಂಗಗಳು, ಅವುಗಳ ಕ್ರಿಯೆ ಮತ್ತು ಲೈಂಗಿಕ ರೋಗಗಳು ಮತ್ತು ಹೆಚ್.ಐ.ವಿ. ಸೋಂಕು ಹೀಗೆ ಸೀಮಿತವಾದ ಅಂಶಗಳ ಕುರಿತು ಮಾಹಿತಿ ನೀಡಲಾಗುತ್ತಿದೆ. ಆದರೆ ಲೈಂಗಿಕ ಶಿಕ್ಷಣವು ಪರಿಪೂರ್ಣ ಎನಿಸಿಕೊಳ್ಳಬೇಕಾದರೆ ಅದು ನಮ್ಮ ಜೀವನದ ಒಂದು ಅಂಗ, ಆರೋಗ್ಯಕರ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಲು ಲೈಂಗಿಕ ಶಿಕ್ಷಣ ಅತ್ಯವಶ್ಯ ಎಂಬ ಮನೋಧೋರಣೆ ಹರೆಯದವರಲ್ಲಿ ಮೂಡಬೇಕು. ಅದೇ ರೀತಿ ಈ ಸದುದ್ದೇಶದಿಂದ ಉಪಾಧ್ಯಾಯರು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಬೇಕು. ಆಗ ಮಾತ್ರ ಲೈಂಗಿಕ ಶಿಕ್ಷಣವು ಅರ್ಥಪೂರ್ಣವೆನಿಸುತ್ತದೆ. ಅದರಿಂದ ವ್ಯಕ್ತಿಯ ಮತ್ತು ಸಮಾಜದ ಹಲವಾರು ಸಮಸ್ಯೆಗಳು ಬಗೆಹರಿಯುತ್ತವೆ ಎಂದರೆ ಅತಿಶಯೋಕ್ತಿಯಾಗಲಾರದು.
- ಡಾ. ಕೆ.ಆರ್. ಶ್ರೀಧರ್ ಮನೋವೈದ್ಯರು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


