ಅಂಕಣಗಳು

ಖಂಡನಾರ್ಹ ಗೂಂಡಾಗಿರಿ, ಕೋಮುಬಣ್ಣ ಎಷ್ಟು ಸರಿ?

ಖಂಡನಾರ್ಹ ಗೂಂಡಾಗಿರಿ, ಕೋಮುಬಣ್ಣ ಎಷ್ಟು ಸರಿ?
Published On :

ಶಿವಸೇನೆ ಇಷ್ಟು ವರ್ಷಗಳಿಂದ ಯಾವ ರೀತಿಯ ರಾಜಕೀಯ ನಡೆಸಿಕೊಂಡು ಬಂದಿದೆ ಎನ್ನುವುದಕ್ಕೆ, ಇತ್ತೀಚೆಗೆ ಅದರ ಸಂಸದನೊಬ್ಬ ಕ್ಯಾಮೆರಾ ಕಂಗಳೆದುರು ತೋರಿಸಿದ ಪೌರುಷವೇ ಸಾಕ್ಷಿ. ಮಹಾರಾಷ್ಟ್ರ ಸದನದಲ್ಲಿ ಮಾಧ್ಯಮಗಳ ಮುಂದೆ ಅಬ್ಬರಿಸಿ ಬೊಬ್ಬಿಟ್ಟೊಡನೆ ರಾಜ್ಯದ ಜನರಿಂದ ಪ್ರಶಂಸೆಯ ಹೊಳೆ ಹರಿದುಬರುತ್ತದೆ ಎಂದು ನಂಬುವುದಕ್ಕೆ ಶಿವಸೇನೆಯ ಬಳಿ ಕಾರಣವೂ ಇತ್ತು. ಏಕೆಂದರೆ, ಶಿವಸೇನೆಯ ಇಲ್ಲಿಯವರೆಗಿನ ರಾಜಕೀಯವೆಲ್ಲ ಹೊಡೆದಾಟ, ಬೆದರಿಕೆ, ಪ್ರಚೋದನೆಗಳ ಸಂಗಮವೇ ಆಗಿದೆ. ಅಲ್ಲದೆ ಆಗಾಗ "ಮರಾಠಿ ಗೌರವ" ಮತ್ತು "ಹಿಂದುತ್ವ" ಎನ್ನುತ್ತಾ ಖಾಲಿ ವಾಕ್ಚಾತುರ್ಯಗಳನ್ನೂ ಅದು ತೋರಿಸುವುದುಂಟು. ಕೇಂದ್ರ ಮಟ್ಟದಲ್ಲಿ ಅಧಿಕಾರ ಹಂಚಿಕೊಳ್ಳುವ ಮಟ್ಟಕ್ಕೆ ಬೆಳೆದರೂ ಶಿವ ಸೈನಿಕರ ಬೀದಿ ಪುಂಡಾಟ ಇಂದಿಗೂ ನಿಂತಿಲ್ಲ.
ಆದರೆ ಒಂದಂತೂ ಸ್ಪಷ್ಟ. ಶಿವಸೇನೆಯ ಸಂಸದನೊಬ್ಬ ಭಾರತೀಯ ರೇಲ್ವೆಯ ಮುಸ್ಲಿಂ ಉದ್ಯೋಗಿಯೊಬ್ಬನಿಗೆ (ಮುಸ್ಲಿಂ ಎನ್ನುವ ಕಾರಣಕ್ಕೇ) ಅವಮಾನ ಮಾಡಿದ ಎನ್ನುವುದನ್ನು ಮಾತ್ರ ಒಪ್ಪಲಿಕ್ಕಾಗದು. ಗಂಟಲೊಳಗೆ ಇಳಿಯದಂಥ ಆಹಾರವನ್ನು ಐಆರ್‌ಸಿಟಿಸಿ ಒದಗಿಸುವುದರಿಂದ, ಆ ತಪ್ಪಿಗೆ ಶಿಕ್ಷೆಯನ್ನು ಮೇಲ್ವಿಚಾರಕ ಅನುಭವಿಸಬೇಕಾಯಿತು. ಆದರೆ ಆತನನ್ನೇ ಗುರಿಯಾಗಿಸಿದ್ದು ಶಿವಸೇನೆಯ ಪೂರ್ವನಿರ್ಧರಿತ ನಡೆಯೇನೂ ಆಗಿರಲಿಲ್ಲ. ಕಾಲೇಜು ಹಾಸ್ಟೆಲ್‌ಗಳಲ್ಲಿನ ಕೆಲವು ಪುಂಡ ವಿದ್ಯಾರ್ಥಿಗಳು ಗುಂಪುಕಟ್ಟಿಕೊಂಡು ಹೇಗೆ ಕ್ಯಾಂಟೀನ್ ಮೆನೇಜರ್ ಮೇಲೆ ಮುಗಿಬೀಳುತ್ತಾರೋ, ಅಂಥದ್ದೇ ಕೆಲಸವನ್ನು ಈ ಸಂಸದ ಮಹಾಶಯ ಮೇಲ್ವಿಚಾರಕನ ಮೇಲೆ ಮಾಡಿದ್ದಾನೆ.
ಹಾಗಾಗೇ ಈ ಘಟನೆಗೆ ಕೋಮು ಬಣ್ಣ ಕೊಡುವುದು ಖಂಡಿತ ತಪ್ಪು. ಆ ಸಂಸದ "ತಿನ್ನಲು ಸಾಧ್ಯವಾಗದಂಥ ಚಪಾತಿಯನ್ನು ಇಲ್ಲಿ ತಯಾರಿಸುತ್ತಾರೆ" ಎನ್ನುವುದನ್ನು ತೋರಿಸುವುದಕ್ಕೆ ಮೇಲ್ವಿಚಾರಕನ ಬಾಯಿಗೆ ಒತ್ತಾಯಪೂರ್ವಕವಾಗಿ ಚಪಾತಿ ತುರುಕಿದ್ದಾನೆ. ಆದರೆ ತೊಂದರೆಗೀಡಾದವ ಮುಸಲ್ಮಾನನಾಗಿದ್ದರಿಂದ ಆ ಘಟನೆಗೆ ಕೆಲ ರಾಜಕೀಯ ಪಕ್ಷಗಳು ಮತ್ತು ಮಾಧ್ಯಮಗಳು ಬೇರೆಯದ್ದೇ ಆಯಾಮ ಕೊಟ್ಟುಬಿಟ್ಟವು!
ಶಿವಸೇನೆಯ ಮೇಲೆ ಎಷ್ಟೇ ದ್ವೇಷವಿದ್ದರೂ ಮಹಾರಾಷ್ಟ್ರ ಸದನದಲ್ಲಿ ನಡೆದ ಘಟನೆಗೆ ಅನವಶ್ಯಕವಾಗಿ ಧರ್ಮದ ಬಣ್ಣ ಬಳಿದದ್ದನ್ನು ಯಾರೂ ಮೆಚ್ಚರು.
 ಆದರೆ ಎಲ್ಲವನ್ನೂ ಹೊಡಿ ಬಡಿಯಿಂದಲೇ ಬಗೆಹರಿಸುತ್ತೇವೆ ಎನ್ನುವ ಶಿವಸೇನೆಯ ಹುಂಬತನವನ್ನು ಅಸಾದುದ್ದೀನ್ ಓವೈಸಿಯಂಥವರು ತಮ್ಮ ಲಾಭಕ್ಕೆ ತಕ್ಕಂತೆ ಬಳಸಿಕೊಂಡು ಕೋಮು ದ್ವೇಷ ಬಿತ್ತುವಲ್ಲಿ ಯಶಸ್ವಿಯಾಗಿಬಿಟ್ಟರು. ಇನ್ನೊಂದು ವಿಷಯವೂ ನಿಜ. ಒಂದು ವೇಳೆ ಜನ್ಮಾಷ್ಠಮಿಯ ಸಮಯದಲ್ಲಿ ಹಿಂದುವೊಬ್ಬ ಉಪವಾಸ ಮಾಡುತ್ತಿದ್ದಾಗ ಜಾತ್ಯತೀತ ಸಂಸದನೊಬ್ಬ ಇದೇ ರೀತಿ ಒತ್ತಾಯಪೂರ್ವಕವಾಗಿ ಚಪಾತಿ ತಿನ್ನಿಸಿದ್ದರೆ, ನಿಸ್ಸಂಶಯವಾಗಿಯೂ ಶಿವಸೇನೆ 'ಹಿಂದು ಧರ್ಮಕ್ಕೆ ಆಘಾತ' ಎಂದು ಆರ್ಭಟಿಸುತ್ತಿತ್ತು! ಬಹುಸಂಖ್ಯಾತರ ಕೋಮುವಾದವನ್ನೇ ಅಲ್ಪಸಂಖ್ಯಾತರ ಕೋಮುವಾದ ಆಹಾರ ಮಾಡಿಕೊಳ್ಳುತ್ತದೆ ಎನ್ನುವುದು ಸತ್ಯ.
ಓವೈಸಿಯಂಥವರಿಗೆ ಶಿವಸೇನೆ ಎಷ್ಟು ಬೇಕೋ, ಶಿವಸೇನೆಗೂ ತನ್ನ ಸಂಸದ ಮತ್ತು ತನ್ನ ವಿರುದ್ಧ ಲೋಕಸಭೆಯ ಬಾವಿಯಲ್ಲಿ ಧಿಕ್ಕಾರ ಕೂಗುತ್ತಾ ಓಡಾಡಿದ ಓವೈಸಿ ಮತ್ತು ಅಂಥದ್ದೇ ವಿರೋಧಿಗಳು ಬೇಕು! ಇನ್ನು ಕಳೆದ ಲೋಕಸಭಾ ಚುನಾವಣೆಯಲ್ಲಿ ಸೋತು ಸುಣ್ಣವಾದರೂ ಕಾಂಗ್ರೆಸ್ ತನ್ನ ಬುದ್ಧಿ ಬಿಡುತ್ತಿಲ್ಲ. ಓವೈಸಿಯ ಹುಸಿ ಆರ್ಭಟವನ್ನು ಬೆಂಬಲಿಸಿದರೆ ತನ್ನನ್ನೂ ಯಾರಾದರೂ ಕೇಳುತ್ತಾರೆ ಎನ್ನುವ ಭ್ರಮೆಯಲ್ಲಿ ಆ ಪಕ್ಷವಿದ್ದಂತಿದೆ.
ಆದರೆ ಓವೈಸಿ ಕಾಂಗ್ರೆಸ್‌ಗಿಂತಲೂ ಚಾಣಾಕ್ಷ. ತನ್ನ ಹಿಂಸಾತ್ಮಕ ರಾಜಕೀಯದಿಂದ ಕಾಂಗ್ರೆಸ್‌ಗೆ ಲಾಭ ಮಾಡಿಕೊಡಲು ಆತನಂತೂ ಸಿದ್ಧನಿಲ್ಲ! ಓವೈಸಿ ಕೋಮು ಆರ್ಭಟಗಳೇನಿದ್ದರೂ ಆತನ ಕುಟುಂಬದ ಆಸ್ತಿಯಾದ 'ಆಲ್ ಇಂಡಿಯಾ ಮಜ್ಲಿಸ್ ಎ ಇತ್ತೆಹಾದುಲ್ ಎ ಮುಸಲ್ಮೀನ್‌ಗೆ' ಲಾಭ ಮಾಡಿಕೊಡುವುದಕ್ಕಷ್ಟೇ ಮೀಸಲು. ಏಕೆಂದರೆ ಈ ಬಾರಿ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ, ಅದರಲ್ಲೂ ಮುಖ್ಯವಾಗಿ ಮುಸ್ಲಿಂ ಪ್ರಾಬಲ್ಯವಿರುವ ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಗಳನ್ನು ನಿಲ್ಲಿಸಲು ಆ ಪಕ್ಷ ಸಿದ್ಧವಾಗಿದೆ. ಅದರಂತೆಯೇ ಬದ್ರುದ್ದೀನ್ ಅಜ್ಮಲ್‌ನ ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ ಕೂಡ ಚುನಾವಣಾ ಯುದ್ಧಕ್ಕೆ ಸಜ್ಜಾಗುತ್ತಿದೆ. ಇದೆಲ್ಲವನ್ನೂ ನೋಡಿಯಾದರೂ ಕಾಂಗ್ರೆಸ್ ಪಾಠ ಕಲಿಯಬೇಕಿತ್ತು. ಒಂದು ವೇಳೆ ಕಾಂಗ್ರೆಸ್ ಮಹಾರಾಷ್ಟ್ರದಲ್ಲಿ ಮುಖವೆತ್ತಿಕೊಂಡು ಅಡ್ಡಾಡಲು ಬಯಸುತ್ತದೆಂದರೆ ಅದು ನಿಜವಾದ ಜಾತ್ಯತೀತ ರಾಜಕೀಯಕ್ಕೆ ಅಂಟಿಕೊಳ್ಳಬೇಕು ಮತ್ತು ಓವೈಸಿಯಂಥ ತೀವ್ರವಾದಿಗಳು ಮುಖ್ಯವಾಹಿನಿ ರಾಜಕೀಯದಲ್ಲಿ ಪ್ರಾಮುಖ್ಯ ಪಡೆಯದಂತೆ ಎಚ್ಚರಿಕೆ ವಹಿಸಬೇಕು.
ಇವೆಲ್ಲದರ ನಡುವೆ ಶಿವಸೇನೆಯ ಸಂಸದನ ಹುಚ್ಚಾದಿಂದ ಆಡಳಿತ ಬಿಜೆಪಿ ತೀವ್ರ ಮುಜುಗರಕ್ಕೊಳಗಾಗಿದೆ. ಬಿಜೆಪಿಯ ನಾಯಕತ್ವ ಶಿವಸೇನೆಯ ಮೇಲೆ ಮುನಿಸಿಕೊಂಡಿರುವುದು ನಿಜವಾದರೂ, ತನ್ನ ಅಸಮಾಧಾನವನ್ನೂ ಬಹಿರಂಗವಾಗಿ ವ್ಯಕ್ತಿಪಡಿಸುವುದು ಸಂಶಯವೇ. ಇನ್ನು ಸುದ್ದಿ ವಾಹಿನಿಗಳು ಚಿಕ್ಕ ವಿವಾದಗಳಲ್ಲೂ ಎಳೆದು ತರಬೇಕು ಎಂದು ಎಷ್ಟೇ ಪ್ರಯತ್ನಿಸಿದರೂ, ಪ್ರಧಾನ ಮಂತ್ರಿಗಳಾಗಲಿ ಅಥವಾ ಸರ್ಕಾರದ ಪ್ರಮುಖ ನಾಯಕರಾಗಲಿ ಅವುಗಳ ಈ ಪ್ರಯತ್ನಕ್ಕೆ ಬಲಿಯಾಗುತ್ತಿಲ್ಲ. ಆದರೆ ಶಿವಸೇನೆಗೆ "ತಪ್ಪೆಸಗಿದ ತನ್ನ ಸಂಸದನ ಮೇಲೆ" ಪ್ರಧಾನಿ ಮೋದಿ ಮುನಿಸಿಕೊಂಡಿದ್ದಾರೆ ಎನ್ನುವುದಂತೂ ಅರ್ಥವಾಗಿದೆ. ಹಾಗಾಗಿ ಇಂಥ "ತೊಂದರೆ ತಯಾರಕರನ್ನು" ಮುಂದಿನ ಕೆಲವು ದಿನಗಳವರೆಗೆ ಅದು ಹದ್ದುಬಸ್ತಿನಲ್ಲಿಡಬಹುದು.
ಹೌದು, ಲೋಕಸಭೆಯಲ್ಲಿ ಅದ್ಭುತ ಗೆಲುವಿನ ನಂತರ ಶಿವಸೇನೆಯ ತಲೆ ಗಿರ್ರನೆ ತಿರುಗಿ, ಅದಕ್ಕೆ ತಾನು ಇನ್ನಷ್ಟು ಬಲಿಷ್ಠನಾಗಿದ್ದೇನೆ ಎನ್ನುವ ಭಾವನೆ ಬಂದಿರುವುದು ಸಹಜವೇ. ಆದಾಗ್ಯೂ ಯಾವುದೇ ಪಕ್ಷವಿರಲಿ ಅದರಲ್ಲಿ ರಾಕ್ಷಸ ಪ್ರವೃತ್ತಿಯವರು ಇದ್ದೇ ಇರುತ್ತಾರೆ. ಅಂಥವರನ್ನು ಹದ್ದುಬಸ್ತಿನಲ್ಲಿಡುವುದೇ ಜಾಣತನ! ಹೆಚ್ಚು ಎಗರಾಡಿದರೆ ಪಕ್ಷದಿಂದ ಕಿತ್ತೆಸೆಯುತ್ತೇವೆ ಎನ್ನುವ ಎಚ್ಚರಿಕೆಯ ಧ್ವನಿ ಬಂದಾಗಲೇ ಅವರು ಸುಮ್ಮನಾಗುತ್ತಾರೆ.
ಇವೆಲ್ಲದರ ನಡುವೆ ಇನ್ನೊಂದು ಅಂಶವೂ ಮೆಚ್ಚುಗೆಗೆ ಅರ್ಹವಾಗಿದೆ. ಅದೆಂದರೆ, 'ಹಿಂದೂ ರಾಷ್ಟ್ರ' ಎಂಬ ನಾನ್‌ಸೆನ್ಸ್ ಮಾತನಾಡುತ್ತಿರುವವರ ಮತ್ತು ಸಾನಿಯಾ ಮಿರ್ಜಾಳ ಪೌರತ್ವವನ್ನು ಪ್ರಶ್ನಿಸುವವರ ವಿರುದ್ಧ ಬಿಜೆಪಿಯ ಹಿರಿಯ ನಾಯಕರೆಲ್ಲ ಆಕ್ರೋಶಗೊಂಡಿರುವುದು. (ಆದರೂ ಸಾನಿಯಾ ಮಿರ್ಜಾಗೆ ಬಡ ತೆಲಂಗಾಣ ಸರ್ಕಾರ 1 ಕೋಟಿ ಕೊಟ್ಟದ್ದು ಏಕೋ ಅತಿಯಾಯಿತು ಎನಿಸುತ್ತದೆ. ಹೊಸ ರಾಜ್ಯದ ನಾಯಕರಿಂದ ಹೈದ್ರಾಬಾದ್‌ನಲ್ಲಿ ವ್ಯಾಸಂಗ ಮಾಡುತ್ತಿರುವ ಆಂಧ್ರದ ವಿದ್ಯಾರ್ಥಿಗಳು ಉಚ್ಚಾಟನೆಯ ಬೆದರಿಕೆಯನ್ನು ಎದುರಿಸುತ್ತಿದ್ದಾರಲ್ಲ..ಪಾಪ ಆ ಬಡಪಾಯಿ ವಿದ್ಯಾರ್ಥಿಗಳಿಗೆ ಈ ಹಣವನ್ನು ಕೊಡಬಹುದಿತ್ತಲ್ಲವೇ?)
--
ರಾಬರ್ಟ್ ವಾದ್ರಾ ರಾಜಸ್ಥಾನದಲ್ಲಿ ನಡೆಸಿದ್ದಾರೆನ್ನಲಾದ ಭೂಹಗರಣದ ಕುರಿತು ವಸುಂಧರಾ ರಾಜೆ ಸರ್ಕಾರ ಹೊರಡಿಸಿದ್ದ ತನಿಖೆಗೆ ಈಗ ಏನಾಗಿದೆ? ಸೋನಿಯಾ ಅಳಿಯ ರಾಬರ್ಟ್ ವಾದ್ರಾನ ಲಾಭಕ್ಕಾಗಿ ಅಂದಿನ ಅಶೋಕ್ ಗೆಹ್ಲೋಟ್ ಅವಧಿಯಲ್ಲಿ ನಡೆದ ಈ ಭೂ ವ್ಯವಹಾರ ಮುಗಿದು ಹೋದ ಅಧ್ಯಾಯವೆಂದು ನಾವು ಭಾವಿಸಿದ್ದೆವು. ಪ್ರಕಟಿತ ಲೆಕ್ಕಪತ್ರಗಳನ್ನೆಲ್ಲ ನೋಡಿದಾಗ, ಅಶೋಕ್ ಗೆಹ್ಲೋಟ್ ಸರ್ಕಾರದಲ್ಲಿ ರಾಬರ್ಟ್ ವಾದ್ರಾಗೆ ಅತಿ ಆಪ್ತರು ಇದ್ದರು, ಇದರಿಂದಾಗಿ ವಾದ್ರಾ ಆಸ್ತಿ ಏರುತ್ತಾ ಹೋಯಿತು ಎನ್ನುವುದು ಯಾರಿಗಾದರೂ ಅರ್ಥವಾಗುತ್ತದೆ. ಕುತೂಹಲಕರ ಸಂಗತಿಯೆಂದರೆ, ತನಿಖೆಯ ಬಗ್ಗೆ ಈಗ ಯಾವ ಸುದ್ದಿಯೂ ಇಲ್ಲ!
ಅದರ ಬದಲಾಗಿ ವಾದ್ರಾನ ಈ ವ್ಯವಹಾರವನ್ನು ಮುಚ್ಚಿಹಾಕಲು ಒಳಒಪ್ಪಂದವೊಂದು ನಡೆದಿದೆ ಎನ್ನುವ ವದಂತಿ ಹೊರಬಿದ್ದಿದೆ. ಗಾಂಧಿ ಕುಟುಂಬದ ಆಪ್ತರೊಬ್ಬರು ಈ ತನಿಖೆಯನ್ನು ಹಳ್ಳ ಹಿಡಿಯಸಲು ಯಶಸ್ವಿಯಾಗಿದ್ದಾರೆ ಎನ್ನುವುದು ಆ ವದಂತಿ. ಇದನ್ನು ನಿಜವೆಂದು ಹೇಳಲು ನಮ್ಮ ಬಳಿ ಯಾವ ಪುರಾವೆಯೂ ಇಲ್ಲ. ಅಲ್ಲದೆ ರಾಜೆ ಅವರು ಸಂಘಪರಿವಾರದ ಸಂಸ್ಕೃತಿಯಲ್ಲಿ ತಮ್ಮನ್ನು ಅದಾಗಲೇ ಎಷ್ಟು ಹುದುಗಿಸಿಕೊಂಡಿದ್ದಾರೆಂದರೆ, ಸಾಮಾಜಿಕ ಗೆಳೆಯರ ಸಲುವಾಗಿ ತಮ್ಮ ಸ್ವಾತಂತ್ರ್ಯವನ್ನು ಅವರು ವ್ಯಾಪಾರಕ್ಕಿಡುವವರಲ್ಲ.
ಹಾಗಾಗಿ ರಾಜೆ, "ತನಿಖೆಗೆ ಬಾಹ್ಯ ಶಕ್ತಿಗಳಿಂದ ಅಡಚಣೆ ಆಗಿಲ್ಲ" ಎನ್ನುವ ಸ್ಪಷ್ಟೀಕರಣ ಕೊಟ್ಟುಬಿಟ್ಟರೆ, ಈ ಆಪಾಯಕರ ವದಂತಿಗಳೆಲ್ಲ ಇಲ್ಲವಾಗುತ್ತವೆ. ಹೇಗೆ ವಾದ್ರಾ ಅತಿ ಕಡಿಮೆ ದರದಲ್ಲಿ ಭೂ ಖರೀದಿ ಮಾಡಿದರು, ಹೇಗೆ ಅದೇ ಜಾಗಗಳನ್ನು ಸೋಲಾರ್ ಎನರ್ಜಿ ವಲಯ ಎಂದು ಸರ್ಕಾರ ಘೋಷಿಸಿತು ಮತ್ತು ಕೋಟ್ಯಂತರ ರುಪಾಯಿಗಳನ್ನು ಅದಕ್ಕಾಗಿ(ಮೂಲಸೌಕರ್ಯ ಅಭಿವೃದ್ಧಿಗೆ) ವ್ಯಯಿಸಿತು. ನಂತರ ವಾದ್ರಾ ಅದೇ ಪ್ಲಾಟ್‌ಗಳನ್ನು ಖಾಸಗಿ ವ್ಯಕ್ತಿಗಳಿಗೆ ಅತಿ ಹೆಚ್ಚಿನ ದರದಲ್ಲಿ ಮಾರಾಟ ಮಾಡಿದ....ಎನ್ನುವುದನ್ನೆಲ್ಲ ರಾಜೆ ಸರ್ಕಾರ ಶ್ವೇತಪತ್ರದ ಮೂಲಕ ಬಹಿರಂಗಪಡಿಸಬೇಕು.

-ವೀರೇಂದ್ರ ಕಪೂರ್
virendra1946@yahoo.co.in


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.