ಜಾತಿ- ಧರ್ಮಗಳ ಲೆಕ್ಕ ಮೀರಿ ಜೈಹಿಂದ್ ಎನ್ನುವ ಕಾಲ ಬಂತೇ?

ಅಜರುದ್ದೀನ್ ಬೌಂಡರಿ ಹೊಡೆದಾಗ ಶಿಳ್ಳೆ ಹೊಡೆಯದ ಹಿಂದುಗಳಿಲ್ಲ, ಕಪಿಲ್ ಸಿಕ್ಸರ್ ಬಾರಿಸಿದಾಗ ಚಪ್ಪಾಳೆ ಹೊಡೆಯದ ಮುಸ್ಲಿಮರೂ ಇಲ್ಲ. ಇಂಥ ಪರಸ್ಪರ ಪ್ರೇಮವನ್ನು ಬಾಲಿವುಡ್, ಆಧ್ಯಾತ್ಮ, ನಿತ್ಯಜೀವನದ ವಿಷಯಗಳಲ್ಲಿ ಸಾಕಷ್ಟು ಉದಾಹರಣೆಯಾಗಿ ಕಾಣಬಹುದಾಗಿದೆ.
ಕೆಲವು ಕಿಡಿಗೇಡಿಗಳಿಂದ ಹಿಂದು ಮುಸ್ಲಿಂ ಮತೀಯ ಗಲಭೆಗಳುಂಟಾದಾಗ ಎಷ್ಟೋ ಜನ ಮುಸ್ಲಿಂ ಸ್ನೇಹಿತರನ್ನು ಹಿಂದುಗಳು ಕಾಪಾಡುವುದು, ಹಿಂದು ಸ್ನೇಹಿತರನ್ನು ಮುಸ್ಲಿಮರು ಕಾಪಾಡುವ ಘಟನೆಗಳು ಕೂಡ ನೂರಾರು ಕಾಣಸಿಗುತ್ತವೆ. ಹೀಗೆ ಸಾಮಾನ್ಯ ಜನರಲ್ಲಿ ಯಾವುದೇ ರೀತಿಯ ಮತೀಯ ಅಸಹನೆಗಳಿಲ್ಲದೇ ಹೋದರೂ ಅದು ಗೋಚರವಾಗುವುದು ಮಾಧ್ಯಮಗಳಲ್ಲಿ ನಡೆಯುವ ಬುದ್ಧಿಜೀವಿಗಳ ಚರ್ಚೆಗಳಲ್ಲಿ, ವಿಜೃಂಭಿಸುವುದು ರಾಜಕಾರಣಿಗಳ ಕೊಳಕು ಮನಸ್ಸಿನಲ್ಲಿ. ಅದರಲ್ಲೂ ಒಡೆದು ಆಳುವ ಬ್ರಿಟಿಷರ ನೀತಿಯನ್ನು ಸ್ವಾತಂತ್ರ್ಯಾನಂತರ ಮುಂದುವರೆಸಿಕೊಂಡು ಹೋಗುತ್ತಿರುವ ಕಾಂಗ್ರೆಸ್ಸಿಗರ ಹಾಗೂ ಸೋಗಲಾಡಿ ಜಾತ್ಯತೀತರ ಆಡಳಿತ ವೈಖರಿಯಲ್ಲಿ.
ದೇಶಕ್ಕೆ ಸ್ವಾತಂತ್ರ ಸಿಗುವ ಸಮಯದಲ್ಲಿ ಮುಸ್ಲಿಮರೆಲ್ಲ ಸೇರಿ ಅಥವಾ ಹಿಂದೂಗಳೆಲ್ಲ ಒಂದುಗೂಡಿ ತಮಗೆ ಪರಸ್ಪರರ ಜತೆ ಬದುಕಲಾಗದು, ಹೀಗಾಗಿ ದೇಶ ವಿಭಜನೆ ಮಾಡಿ ಎಂದಿರಲಿಲ್ಲ. ಸ್ವಾತಂತ್ರ್ಯ ಹೋರಾಟದಲ್ಲಿ ಮಂಚೂಣಿಯಲ್ಲಿದ್ದ ಇಬ್ಬರು ನಾಯಕರ ಅಧಿಕಾರ ಲಾಲಸೆಯಿಂದ ದೇಶ ವಿಭಜನೆ ಮಾಡಬೇಕಾಗಿ ಬಂತೇ ವಿನಃ ಸಾಮಾನ್ಯ ಹಿಂದು, ಸಾಮಾನ್ಯ ಮುಸ್ಲಿಮನ ಬಯಕೆಯಿಂದಂತೂ ಖಂಡಿತಾ ಅಲ್ಲ ಎಂಬುದು ಚಾರಿತ್ರಿಕ ಸತ್ಯ.
ಶತಮಾನಗಳ ಹಿಂದೆ ನಡೆದ ದುರಾತಿಕ್ರಮಣದ ಕಹಿ ಭಾವನೆಗಳನ್ನು ಹಿಂದು ಮುಸಲ್ಮಾನರಿಬ್ಬರೂ ಮರೆತು ಒಟ್ಟಾಗಿ ಸಾಗುತ್ತಿದ್ದರೆಂಬುದಕ್ಕೆ ಬ್ರಿಟಿಷರ ವಿರುದ್ಧ ನಡೆದ ಭಾರತೀಯ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಅವರಿಬ್ಬರೂ ಸೇರಿ ಒಟ್ಟಾಗಿ ಭಾಗವಹಿಸುತ್ತಿದ್ದುದೇ ಸಾಕ್ಷಿ. ಬ್ರಿಟಿಷರಿಗೆ ಆ ಅಗಾಧ ಶಕ್ತಿಯನ್ನು ಎದುರಿಸಲು ಕಷ್ಟವಾಯಿತು. ಆಗ ಎದುರಾಳಿಗಳನ್ನು ಮಣಿಸಲು ಅವರಿಗೆ ಇದ್ದುದು ಒಂದೇ ಅಸ್ತ್ರ. ಅದು ಧಾರ್ಮಿಕ ಭಾವನೆಗಳನ್ನು ಕೆರಳಿಸಿ ಒಡಕುಂಟುಮಾಡಿ ತಮ್ಮ ಸ್ಥಾನ ಭದ್ರಮಾಡಿಕೊಳ್ಳುವುದು. ಹಾಗಾಗಿ ಅವರು ಎರಡೂಕಡೆಯಿದ್ದ ಮೂಲಭೂತವಾದಿಗಳನ್ನು ಉಪಯೋಗಿಸಿಕೊಂಡು ವಿಷಬೀಜ ಬಿತ್ತಿದರು. ಅದು ಅವರಿಗೆ ಫಲವನ್ನೂ ಕೊಟ್ಟಿತು. ಬ್ರಿಟಿಷರೇನೋ ಮೂರನೆಯವರು, ತಮ್ಮ ಸ್ವಾರ್ಥಕ್ಕಾಗಿ ನಮ್ಮನ್ನು ಒಡೆದು ಆಳಿದರೆಂದರೆ, ಸ್ವಾತಂತ್ರ್ಯಾನಂತರ ನಮ್ಮವರೂ ಅದನ್ನೇ ಮುಂದುವರೆಸಿ ಜಾತಿ ಧರ್ಮದ ಹೆಸರಿನಲ್ಲಿ ನಮ್ಮನ್ನು ಒಡೆದು ಅಧಿಕಾರ ಹಿಡಿಯುವುದು ಎಂಥ ದರಿದ್ರ ಸಂಗತಿ.
ದೇಶ ಇಬ್ಭಾಗವಾದ ಮೇಲೆ ಎರಡೂ ದೇಶಗಳೂ ತಮ್ಮತಮ್ಮ ದೇಶದಲ್ಲಿ ಎಲ್ಲರೂ ತಮ್ಮತಮ್ಮ ಧಾರ್ಮಿಕ ಪದ್ಧತಿಗಳನ್ನು ಅನುಸರಿಸಲು ಸ್ವತಂತ್ರರು ಎಂದು ಘೋಷಿಸಿದರೂ ನಡೆದುಕೊಳ್ಳುತ್ತಿರುವ ರೀತಿ ಮಾತ್ರ ಬೇರೆಯದೇ ಆಗಿದೆ. ಧಾರ್ಮಿಕರಾಷ್ಟ್ರವೆಂದು ಗುರುತಿಸಿಕೊಂಡ ಆ ದೇಶದಲ್ಲಿ ಮತಾಂಧರು ಆ ದೇಶದ ಅಲ್ಪಸಂಖ್ಯಾತರ ಮೇಲೆ ಎಲ್ಲ ರೀತಿಯ ದೌರ್ಜನ್ಯಗಳನ್ನೆಸಗುವುದು, ಬಲವಂತದ ಮತಾಂತರ ಮಾಡಿಸುವುದು, ಮತಾಂತರ ಮಾಡಬೇಕು ಇಲ್ಲಾ ದೇಶ ಬಿಟ್ಟು ಹೊರಡಬೇಕು ಎನ್ನುವಂಥ ಭಯಾನಕ ವಾತಾವರಣ ಸೃಷ್ಟಿಸಿ ದೇಶ ಬಿಟ್ಟು ಓಡಿಹೋಗುವಂತೆ ಮಾಡುತ್ತಿದ್ದರೆ ಸರ್ಕಾರ ಮೂಕಪ್ರೇಕ್ಷಕನಂತೆ ವರ್ತಿಸಿ ತನ್ನ ಮತಬ್ಯಾಂಕ್ ಗಟ್ಟಿಮಾಡಿಕೊಳ್ಳುತ್ತಿದೆ. ಇನ್ನು ಜಾತ್ಯತೀತ ರಾಷ್ಟ್ರ ಎಂದು ಗುರುತಿಸಿಕೊಂಡ ನಮ್ಮ ದೇಶದಲ್ಲಿ ಅಲ್ಪಸಂಖ್ಯಾತರ ಮತಗಳು ಚುನಾವಣೆ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸುವಷ್ಟು ಪ್ರಮಾಣದಲ್ಲಿರುವುದರಿಂದ ಅವರ ತುಷ್ಟೀಕರಣ, ಬಹುಸಂಖ್ಯಾತರ ತುಚ್ಛೀಕರಣ ನಿರಂತರವಾಗಿ ಸಾಗಿದೆ. ಬಹುಸಂಖ್ಯಾತರನ್ನು ಜಾತಿ ಹೆಸರಲ್ಲಿ ವಿಭಾಗಿಸುವುದು, ಒಂದೊಂದು ಜಾತಿಯ ಶೇಕಡಾವಾರು ಮತಗಳನ್ನು ಲೆಕ್ಕ ಹಾಕಿ ಅದನ್ನು ತಮ್ಮ ಫಿಕ್ಸೆಡ್ ಡೆಪಾಸಿಟ್ ಎಂದೇ ಭಾವಿಸಿ ಅಲ್ಪಸಂಖ್ಯಾತರ ಮತಗಳ ಜೊತೆ ಕೂಡಿ ಕಳೆದು ಗೆಲ್ಲಬಹುದಾದ ಸಮೀಕರಣವೊಂದನ್ನು ಸೃಷ್ಟಿಸಿ ಚುನಾವಣೆ ಗೆಲ್ಲುವುದು, ಇದೇ ಒಂದು ತಂತ್ರವಾಗಿದೆ. ಆ ಸಮೀಕರಣದ ಒಂದು ಲೆಕ್ಕಾಚಾರವೇ ಅಹಿಂದ (ಅಲ್ಪಸಂಖ್ಯಾತ -ಹಿಂದುಳಿದ- ದಲಿತ). ಈ ಮೂರು ವರ್ಗಗಳ ಮತಗಳನ್ನು ಕ್ರೋಢೀಕರಿಸಿಕೊಂಡು, ಯಾವ ಕ್ಷೇತ್ರದಲ್ಲಿ ಮೇಲ್ವರ್ಗದ ಯಾವ ಜಾತಿಯ ಜನ ಹೆಚ್ಚಿದ್ದಾರೋ ಆ ಜಾತಿಯ ಅಭ್ಯರ್ಥಿಯನ್ನು ಹಾಕಿ ಆ ಜಾತಿಯವರ ಮತ 'ಅಹಿಂದ ಮತ' ಗೆಲುವು. ಹೇಗಿದೆ ನೋಡಿ ಲೆಕ್ಕಾಚಾರ.
ಹೋಗಲಿ, ತಮ್ಮನ್ನೇ ನೆಚ್ಚಿಕೊಂಡು ಅಧಿಕಾರದಲ್ಲಿ ಕೂಡಿಸುತ್ತಾ ಬಂದ ಈ ಅಹಿಂದ ವರ್ಗವನ್ನು ಉದ್ಧಾರ ಆದರೂ ಮಾಡಿದ್ದಾರೆಯೇ? ಸ್ವಾತಂತ್ರ್ಯ ಬಂದು ಆರೂವರೆ ದಶಕಗಳು ಕಳೆದರೂ ಅವರ ಸ್ಥಿತಿ ಶೋಚನೀಯವಾಗಿಯೇ ಇದೆಯೆಲ್ಲಾ ಏಕೆ? ಈ ಜಾತ್ಯತೀತತೆಯ ಸೋಗಿನಲ್ಲಿ ಚುನಾವಣೆ ಗೆದ್ದು ಅಧಿಕಾರ ಹಿಡಿಯುವವರಿಗೆ ದೀನರು ದೀನರಾಗೇ ಇರಬೇಕು. ಆಗ ಮಾತ್ರ ಇವರ ಮತಬ್ಯಾಂಕ್ ಭದ್ರ. ಅದಕ್ಕೆ ಅವರನ್ನು ಸಶಕ್ತರನ್ನಾಗಿ, ಸ್ವಾಭಿಮಾನಿಗಳಾಗಿ ಬದುಕುವಂತೆ ಮಾಡುವ ಯಾವ ಯೋಜನೆಗಳನ್ನೂ ರೂಪಿಸುವುದಿಲ್ಲ.
ಇನ್ನು ಅಲ್ಪಸಂಖ್ಯಾತರ ವಿಷಯಕ್ಕೆ ಬಂದರೆ, ಇವರು ಕೆಂಪುಕೋಟೆ ಮೇಲೆ ನಿಂತು ಭಾಷಣಮಾಡುತ್ತಾ ಉದುರಿಸುವ ಈ ದೇಶದ ಸಂಪತ್ತಿಗೆ ಮುಸಲ್ಮಾನರೇ ಮೊದಲ ಹಕ್ಕುದಾರರು ಎಂಬ ನುಡಿಮುತ್ತುಗಳನ್ನು ಕೇಳಿಸಿಕೊಂಡೇ ಹೊಟ್ಟೆ ತುಂಬಿಸಿಕೊಳ್ಳಬೇಕು. ಹಜ್ ಯಾತ್ರೆ ಕೈಗೊಳ್ಳಲು ಸರ್ಕಾರ ಕೊಡುವ ಸಹಾಯಧನದಿಂದಲೇ ಬಾಳು ಹಸನಾಗಿ ಹೋಯಿತೆಂದು ಭಾವಿಸಬೇಕು. ಇನ್ನು ಸಚಿವರು, ಶಾಸಕರು ಇಫ್ತಾರ್ ಕೂಟಗಳಲ್ಲಿ ಅವರಂತೆ ಟೋಪಿ ಧರಿಸಿ ಅವರ ಜೊತೆ ಊಟ ಮಾಡಿಬಿಟ್ಟರೆ ಇಡೀ ಮುಸ್ಲಿಂ ಸಮುದಾಯದ ಸರ್ವತೋಮುಖ ಅಭಿವೃದ್ಧಿಯಾಯಿತೆಂದೇ ಪರಿಗಣಿಸಬೇಕು. ಇವರನ್ನು ಎಂದೂ ರಾಷ್ಟ್ರೀಯ ಮುಖ್ಯವಾಹಿನಿಗೆ ತರುವ ಪ್ರಯತ್ನ ಮಾಡದೇ, ಆರೆಸ್ಸೆಸ್ ಹಾಗೂ ಬಿಜೆಪಿ ಎಂಬ ಗುಮ್ಮನನ್ನು ತೋರಿಸಿ ಅವರು ಹೆದರಿಸುತ್ತಿದ್ದರೆ, ಅದನ್ನೇ ನಂಬಿ ಹೆದರಿಕೊಂಡು ಗುಂಪುಗುಂಪಾಗಿ ಮತಗಟ್ಟೆಗಳಿಗೆ ಸಾಗಿ ಆ ಪಕ್ಷಕ್ಕೆ ಮುದ್ರೆ ಒತ್ತಿ ಒತ್ತಿ ಬರುತ್ತಿರಬೇಕು. ಇದು ಅಲ್ಪಸಂಖ್ಯಾತರ ಬಗ್ಗೆ ಅವರಿಗಿರುವ ಧೋರಣೆ.
ಆದರೆ ಈಗ ಕಾಲ ಬದಲಾಗಿದೆ. ನರೇಂದ್ರಮೋದಿ ಒಂದು ಹಿಂದುಳಿದ ಜಾತಿಗೆ ಸೇರಿದವರಾಗಿದ್ದು, ಗುಜರಾತ್ ರಾಜ್ಯವನ್ನು ಹನ್ನೆರಡು ವರುಷಗಳ ಕಾಲ ಅಜೇಯರಾಗಿ ಆಳಿ ಈಗ ಪ್ರಧಾನಿಯಾಗಿದ್ದಾರೆ. ಆವರ ಆಳ್ವಿಕೆಯಲ್ಲಿ ಗುಜರಾತಿಗಳು ಜಾತಿ-ಧರ್ಮಗಳ ಸಂಕುಚಿತ ಮನೋಭಾವಗಳಿಂದ ಹೊರಬಂದು, ಸರ್ವರೂ ಸಮಾನ ಹಾಗೂ ಸರ್ವತೋಮುಖ ಅಭಿವೃದ್ಧಿ ಕಂಡಿರುವುದನ್ನು ಇಡೀ ದೇಶದ ಜನ ಕಂಡಿದ್ದಾರೆ, ಕೇಳಿದ್ದಾರೆ. ಹಾಗಾಗಿ ಎಲ್ಲರೂ ಜಾತಿಮತಗಳ ಸಂಕೋಲೆಗಳಿಂದ ಹೊರಬಂದು ಕೇವಲ ಅಭಿವೃದ್ಧಿ ಎಂಬ ಮಂತ್ರವನ್ನೇ ಪಠಿಸುತ್ತಿದ್ದಾರೆ. ಇದರಿಂದ ಈ ಬಾರಿಯ ಚುನಾವಣೆಯಲ್ಲಿ ಅಹಿಂದ ಎಂಬ ಸಮೀಕರಣದಲ್ಲಿ ಹಿಂದ (ಹಿಂದುಳಿದ ಹಾಗೂ ದಲಿತ) ಕಳಚಿಕೊಂಡು ಮೇಲ್ಜಾತಿಯವರ ಜೊತೆ ಕೈಜೋಡಿಸಿ ಮೇಹಿಂದ ಆಗಿದೆ. ಆದ್ದರಿಂದಲೇ ಜಾತ್ಯತೀತರೆಂದು ಹೇಳಿಕೊಂಡು ಬರೀ ಜಾತಿ ರಾಜಕೀಯವನ್ನೇ ಮಾಡುತ್ತಿದ್ದ ಪಕ್ಷಗಳೆಲ್ಲಾ ನಾಮಾವಶೇಷವಾಗಿ, ಮೇಲ್ಜಾತಿಯವರ ಪಕ್ಷವೆಂಬ ಮೂದಲಿಕೆಗೆ ಪಾತ್ರವಾಗಿದ್ದ ಭಾರತೀಯ ಜನತಾ ಪಕ್ಷ ಸ್ವಂತವಾಗೇ ಬಹುಮತ ಸಾಧಿಸಿದೆ.
ಇದೇ ರೀತಿ ದೇಶದ ಅಲ್ಪಸಂಖ್ಯಾತರು ಹಾಗೂ ಬಹುಸಂಖ್ಯಾತರ ನಡುವೆ ಇರುವ ಕಂದಕವು ಸಂಪೂರ್ಣ ದೂರವಾಗಿ ಪರಸ್ಪರ ವಿಶ್ವಾಸದಿಂದ ಬದುಕುವಂತಾಗಬೇಕು. ಆ ದಿನಗಳೂ ದೂರವಿಲ್ಲ ಎಂಬ ಸುಳಿವನ್ನು ಈ ಚುನಾವಣೆ ಈಗಾಗಲೇ ನೀಡಿದೆ. ಗುಜರಾತ್ನಲ್ಲಿ ಇದುವರೆಗೂ ನಡೆಯುತ್ತಿದ್ದ ರಾಜ್ಯ ವಿಧಾನಸಭಾ ಚುನಾವಣೆಗಳಲ್ಲಿ ನರೇಂದ್ರಮೋದಿ ಯವರು ಸ್ಪಷ್ಟ ಬಹುಮತ ಪಡೆಯುತ್ತಿದ್ದರೂ ಲೋಕಸಭಾ ಚುನಾವಣೆಯಲ್ಲಿ ಅಂಥಾ ಹೇಳಿಕೊಳ್ಳುವಂಥಾ ಗೆಲುವು ಸಾಧಿಸುತ್ತಿರಲಿಲ್ಲ. ಹಾಗಾಗಿ ಅಲ್ಪಸಂಖ್ಯಾತರಿಗೆ ಭಾರತೀಯ ಜನತಾ ಪಕ್ಷದ ಬಗ್ಗೆ ಜಾತ್ಯತೀತರು ಹುಟ್ಟುಹಾಕಿದ್ದ ಅನುಮಾನ ದೂರವಾಗಿಲ್ಲವೇನೋ, ಬಿ.ಜೆ.ಪಿ ಯನ್ನು ಅವರು ಪೂರ್ಣ ನಂಬಲು ತಯಾರಿಲ್ಲವೇನೋ ಎಂಬ ಅನುಮಾನ ಸಹಜವಾಗಿ ಮೂಡುತ್ತಿತ್ತು. ಆದರೆ ಈ ಬಾರಿ ಇಪ್ಪತ್ತಾರಕ್ಕೆ ಇಪ್ಪತ್ತಾರು ಕ್ಷೇತ್ರಗಳಲ್ಲೂ ಗೆಲ್ಲಿಸಿದ್ದಲ್ಲದೆ ಮೋದಿಯವರನ್ನು ದಾಖಲೆ ಅಂತರದಿಂದ ಗೆಲ್ಲಿಸಿದ್ದಾರೆ. ಇದರಿಂದಲೇ ತಿಳಿಯುತ್ತದೆ, ಗುಜರಾತ್ ಜನರು ಜಾತಿ- ಧರ್ಮಗಳ ಸಮೀಕರಣ ಮೀರಿ ಮತ ಹಾಕಿದ್ದಾರೆ ಎಂದು. ಇದೇ ನಮೂನೆಯ ಮತದಾನ ಬಿ.ಜೆ.ಪಿ ಆಡಳಿತವಿರುವ ಎಲ್ಲಾ ರಾಜ್ಯಗಳಲ್ಲೂ ನಡೆದಿದೆ. ಅಲ್ಲದೇ ಜಮ್ಮ- ಕಾಶ್ಮೀರದಲ್ಲೂ ಬಿಜೆಪಿ ಮೂರು ಲೋಕಸಭೆ ಸ್ಥಾನಗಳನ್ನು ಗೆದ್ದಿರುವುದು ಗಮನಾರ್ಹ. ಮುಸ್ಲಿಮರ ಅಲ್ಪ ಸಹಕಾರವೂ ಇರದೇ ಆ ಸಾಧನೆ ಸಾಧ್ಯವಿರಲಿಲ್ಲ.
ಆದರೂ ಬಹಳಷ್ಟು ರಾಜ್ಯಗಳಲ್ಲಿ ಅಲ್ಪಸಂಖ್ಯಾತರು ಹಾಗೂ ಬಹುಸಂಖ್ಯಾತರ ನಡುವೆ ಇರುವ ಕಂದಕವನ್ನು ಹಾಗೇ ಉಳಿಸುವಲ್ಲಿ ಜಾತ್ಯತೀತರೆಂದು ಹೇಳಿಕೊಳ್ಳುವ ಕೆಲವು ಪ್ರಾದೇಶಿಕ ಪಕ್ಷಗಳು ಯಶಸ್ವಿಯಾಗಿವೆ. ಬಹುಶಃ ಅವರಿಗೆ ಮೋದಿ ಮ್ಯಾಜಿಕ್ ತಲುಪಿಲ್ಲ. 2019ರ ಚುನಾವಣೆ ವೇಳೆಗೆ ಜಾತಿ-ಧರ್ಮಗಳ ಮೀರಿದ ಮೋದಿಯ ಅಭಿವೃದ್ಧಿ ಮ್ಯಾಜಿಕ್ ಅವರಿಗೂ ತಲುಪಿ ಎಲ್ಲರೂ ಜಾತಿಮತಗಳನ್ನು ಮರೆತು ಮತದಾನ ಮಾಡುವಂತಾಗಿಬಿಟ್ಟರೆ ಭಾರತಾಂಬೆ ಧನ್ಯಳು. ಈ ಚುನಾವಣೆಯಲ್ಲಿ ಅಹಿಂದ (ಅಲ್ಪಸಂಖ್ಯಾತ-ಹಿಂದುಳಿದ-ದಲಿತ) ದಿಂದ ಹಿಂದ ಕಳಚಿಕೊಂಡು ಮೇಹಿಂದ (ಮೇಲ್ವರ್ಗ-ಹಿಂದುಳಿದ-ದಲಿತ) ಆಗಿದೆ. ಮುಂದೆ ಮೇಹಿಂದ ಜೊತೆಗೆ 'ಅ' ಕೂಡ ಸೇರಿಕೊಂಡು ಅಮೇಹಿಂದ (ಅಲ್ಪಸಂಖ್ಯಾತ-ಮೇಲ್ವರ್ಗ-ಹಿಂದುಳಿದ-ದಲಿತ) ಆಗಿ ಎಲ್ಲರಲ್ಲೂ ಸಮಗ್ರ ಭಾರತೀಯರಾದ ನಾವೆಲ್ಲರೂ ಒಂದೇ ಎಂಬ ರಾಷ್ಟ್ರೀಯಭಾವನೆ ಬಂದು, ಎಲ್ಲರೂ ಒಕ್ಕೊರಲಿನಿಂದ ಜೈಹಿಂದ್ ಎಂದು ಹೇಳುವಂತಾದರೆ ಎಷ್ಟು ಚೆಂದ ಅಲ್ಲವೇ?
- ಫಣಿರಾಮಚಂದ್ರ
paniramachandra.hs@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


