ಅಂಕಣಗಳು

ಮುಂಗಾರು ಬಿತ್ತನೆಗೆ ಸರ್ಕಾರ ಕೈಗೊಂಡ ಕ್ರಮ ಪರ್ಯಾಪ್ತವೇ?

ಮುಂಗಾರು ಬಿತ್ತನೆಗೆ ಸರ್ಕಾರ ಕೈಗೊಂಡ ಕ್ರಮ ಪರ್ಯಾಪ್ತವೇ?
Published On :

ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ಉತ್ತಮ ಮಳೆಯಾಗುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ರಾಜ್ಯದ ಕೆಲವೆಡೆ ಆಗಲೇ ಮಳೆ ಅಬ್ಬರಿಸುತ್ತಿದೆ. ಅನ್ನದಾತ ಬಿತ್ತನೆಯ ಸಿದ್ಧತೆಗೆ ಅಣಿಯಾಗುತ್ತಿದ್ದಾನೆ. ನಮ್ಮ ಸರ್ಕಾರ ತೆಗೆದುಕೊಂಡಿರುವ ಕ್ರಮಗಳು, ಅದಕ್ಕಾಗಿ ಮಾಡಿಕೊಂಡಿರುವ ಸಿದ್ಧತೆ ಗಮನಿಸಿದಲ್ಲಿ ಸರ್ಕಾರ ಕೃಷಿ ವಲಯವನ್ನು ನಿರ್ಲಕ್ಷ್ಯ ಮಾಡುತ್ತಿರುವುದು ಗೋಚರಿಸುತ್ತದೆ.
ಗ್ರಾಮೀಣರಿಗೆ ಇಂದಿಗೂ ಕೃಷಿಯೇ ಪ್ರಮುಖ ಉದ್ಯೋಗ. ರಾಜ್ಯದ ಭೌಗೋಳಿಕ ವಿಸ್ತೀರ್ಣದಲ್ಲಿ ಶೇ. 64ರಷ್ಟು ಭೂಮಿ, ಅಂದರೆ 123.85 ಲಕ್ಷ ಹೆಕ್ಟೇರ್ ಪ್ರದೇಶ ಕೃಷಿಗೆ ಯೋಗ್ಯ. ಅದರಲ್ಲಿ ಬಿತ್ತನೆ ಕಾರ್ಯ ನಡೆಯುತ್ತಿದೆ. 2001ರ ಜನಗಣತಿ ಪ್ರಕಾರ ರಾಜ್ಯದ ಒಟ್ಟು ಜನಸಂಖ್ಯೆಯ ಶೇ. 56ರಷ್ಟು ಜನರು ಕೃಷಿ ಹಾಗೂ ಕೃಷಿ ಸಂಬಂಧಿತ ಚಟುವಟಿಕೆಯಲ್ಲಿ ತೊಡಗಿದ್ದಾರೆ. (2011ರ ಗಣತಿ ಆಧಾರದಲ್ಲಿ ಈ ಸಂಖ್ಯೆ ಕಡಿಮೆಯಾಗಿರುವ ಸಾಧ್ಯತೆ ಇದೆ.)
ಕೃಷಿ ಕ್ಷೇತ್ರ ವಾಣಿಜ್ಯ ಬೆಳೆಗಳಿಗಾಗಿ ಸಂಪೂರ್ಣವಾಗಿ ಅವಲಂಬಿಸಿರುವುದು ಮುಂಗಾರು ಮಳೆಯನ್ನೇ. ರಾಜ್ಯದಲ್ಲಿರುವ ಸದ್ಯದ ಒಟ್ಟು ಕೃಷಿ ಭೂಮಿಯಲ್ಲಿ ಶೇ. 26.8 ಜಮೀನು ಮಾತ್ರ ನೀರಾವರಿ ಸೌಲಭ್ಯ ಹೊಂದಿದೆ ಎನ್ನುವುದನ್ನು ಸೂಕ್ಷ್ಮವಾಗಿ ಗಮನಿಸಿದಲ್ಲಿ ರಾಜ್ಯದ ಕೃಷಿ ವಲಯ ಎಷ್ಟೊಂದು ಮಳೆಯನ್ನು ಆಧರಿಸಿ ನಡೆಯುತ್ತಿದೆ ಎನ್ನುವುದು ಸ್ಪಷ್ಟವಾಗುತ್ತದೆ.
ನೃಋತ್ಯ ಮುಂಗಾರು ಮತ್ತು ಈಶಾನ್ಯ ಮಾರುತಗಳ ಮೂಲಕ ರಾಜ್ಯದಲ್ಲಿ ವಾರ್ಷಿಕ ಸರಾಸರಿ 1139 ಮಿ.ಮೀ. ಮಳೆಯಾಗುತ್ತದೆ. ಇದನ್ನು ಆಧರಿಸಿ ಬಿತ್ತನೆ ಮಾಡಿದ ರೈತರಿಗೆ ಶೇ. 49ರಷ್ಟು ಮಾತ್ರ ಫಸಲು ಸಿಗಲು ಸಾಧ್ಯ ಎಂದು ವಾಣಿಜ್ಯ ಇಲಾಖೆ ಸಮೀಕ್ಷೆಯಲ್ಲಿ ಸಾಬೀತಾಗಿದೆ. ಉತ್ತಮ ಮಳೆಯಾದರೂ ರೈತರು ಸಂಕಷ್ಟ ಎದುರಿಸುತ್ತಿದ್ದಾರೆ ಎನ್ನುವುದು ಸ್ಪಷ್ಟ. ಆದರೆ, ಮುಂಗಾರು ಪ್ರಾರಂಭದಲ್ಲಿ ಸರ್ಕಾರ ಕಳೆದ ಸಾಲಿನಲ್ಲಿ ಕೃಷಿ ಇಲಾಖೆಯಲ್ಲಾದ ಲೋಪದೋಷಗಳು ಹಾಗೂ ಅದರಿಂದ ರೈತರಿಗಾದ ಸಮಸ್ಯೆಯ ಬಗ್ಗೆ ಈ ವರ್ಷವೂ ಗಮನ ನೀಡುತ್ತಿಲ್ಲ ಎನ್ನುವುದು ಸರ್ಕಾರದ ಸದ್ಯದ ನಿಲುವಿನಿಂದ ಸ್ಪಷ್ಟ. ಕಳೆದ ಸಾಲಿನಲ್ಲಿ ಉತ್ತಮವಾಗಿ ಮಳೆಯಾದರೂ ಉತ್ತರ ಕರ್ನಾಟಕದ 8 ಜಿಲ್ಲೆಗಳ ವ್ಯಾಪ್ತಿಯಲ್ಲಿ ರೈತರು ಅಧಿಕ ಇಳುವರಿಯ ಆಸೆಗಾಗಿ ಬಿತ್ತನೆ ಮಾಡಿದ್ದ ಬಿಟಿ ಹತ್ತಿ ಸಮರ್ಪಕವಾಗಿ ಬೆಳೆಯಲಿಲ್ಲ. ಸರ್ಕಾರ ಧಾರವಾಡ ಹಾಗೂ ರಾಯಚೂರು ಕೃಷಿ ವಿವಿಗಳ ಹಿರಿಯ ಅಧಿಕಾರಿಗಳೊಂದಿಗೆ ಸಮೀಕ್ಷೆ ನಡೆಸಿ, 64 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದ್ದ ಬಿಟಿ ಹತ್ತಿ ಕಳಪೆ ಬೀಜದಿಂದಲೇ ರೈತರಿಗೆ ನಷ್ಟವಾಗಿದೆ ಎಂದು ಸರ್ಕಾರಕ್ಕೆ ವರದಿ ನೀಡಿದೆ.
ಆದರೆ, ವಿಪರ್ಯಾಸವೆಂದರೆ ಪ್ರಸಕ್ತ ಸಾಲಿನಲ್ಲಿಯೂ ಅದೇ ಕಂಪನಿಗಳೇ ಮತ್ತೆ ರೈತರಿಗೆ ಹೆಚ್ಚಿನ ಇಳುವರಿಯ ಆಮಿಷದ ಮೂಲಕ ಬಿಟಿ ಹತ್ತಿ ಬೀಜ ಮಾರಾಟ ಮಾಡುತ್ತಿವೆ. ಇದರ ಬಗ್ಗೆ ರಾಜ್ಯ ಮಟ್ಟದಲ್ಲಿಯೇ ಒಂದು ತನಿಖಾ ತಂಡ ರಚಿಸಿ, ರೈತರಿಗೆ ಮೋಸವಾಗದಂತೆ ತಡೆಯಾಗುವುದು ಎಂದು ಹೇಳಿದ್ದ ಸರ್ಕಾರ ಇಂದಿಗೂ ಆ ಕ್ರಮಕ್ಕೆ ಮುಂದಾಗುತ್ತಿಲ್ಲ. ಇನ್ನು ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರಗಳ ಮೂಲಕ ಬೀಜ ವಿತರಣೆ ಮಾಡಲು ಕಳೆದ ಸಾಲಿನಲ್ಲಿ ಬಿತ್ತನೆಯಾದ ಪ್ರದೇಶವನ್ನು ಆಧಾರವಾಗಿಟ್ಟುಕೊಂಡು ವಿವಿಧ ಬೆಳೆಗಳ (ಆಯಾ ಪ್ರದೇಶಕ್ಕೆ ಅನುಗುಣವಾಗುವಂತೆ) 50 ಲಕ್ಷ ಮೆಟ್ರಿಕ್ ಟನ್ ಬೀಜ ದಾಸ್ತಾನಿವೆ ಎಂದು ತಿಳಿಸಿದೆ.
ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ ಸರ್ಕಾರವೇನೋ ರೈತರಿಗೆ ಸಬ್ಸಿಡಿ ದರದಲ್ಲಿ ಬೀಜ ನೀಡಲು ಕ್ರಮ ತೆಗೆದುಕೊಂಡಿದೆ. ಅಗತ್ಯ ಬೀಜ ದಾಸ್ತಾನು ಮಾಡಿಕೊಂಡಿರಬಹುದು. ಆದರೆ, ದಾಸ್ತಾನಿರುವ ಬೀಜಗಳು ಯಾವ ಗುಣಮಟ್ಟ ಹೊಂದಿವೆ, ಸರ್ಕಾರಕ್ಕೆ ಬೀಜ ಪೂರೈಕೆ ಮಾಡುತ್ತಿರುವ ಕಂಪನಿ ಎಷ್ಟು ವರ್ಷಗಳಿಂದ ಈ ಕ್ಷೇತ್ರದಲ್ಲಿದೆ, ಅದರ ವಿಶ್ವಾಸಾರ್ಹತೆ ಏನು, ಈ ಬಗ್ಗೆ ಚಿಂತನೆಗಳು ಮಾತ್ರ ನಡೆಯುತ್ತಿಲ್ಲ. ಬೀಜದಲ್ಲಿ ಮೋಸವಾದರೆ ರೈತರಿಗೆ ಒಂದು ವರ್ಷದ ಆದಾಯಕ್ಕೆ ಕೊಡಲಿ ಪೆಟ್ಟು ಬೀಳಲಿದೆ.
ಕಳೆದ 3 ವರ್ಷದಲ್ಲಿ ಕೃಷಿ ಇಲಾಖೆಯ ಮಾಹಿತಿ ಆಧಾರದಲ್ಲಿಯೇ ರೈತ ಸಂಪರ್ಕ ಕೇಂದ್ರಗಳಿಂದಲೇ ವಿತರಣೆಯಾದ ಬೀಜಗಳು ಕಳಪೆಯಾಗಿವೆ ಎಂದು 11 ಸಾವಿರ ಪ್ರಕರಣ ದಾಖಲಾಗಿವೆ ಎಂದಾದರೆ, ಸರ್ಕಾರ ಇಲ್ಲಿಯವರೆಗೆ ತೆಗೆದುಕೊಂಡ ಕ್ರಮಗಳು ಸರಿಯಾಗಿವೆಯೇ? ಸರಿಯಾಗಿದ್ದಲ್ಲಿ ಕಳಪೆ ಬೀಜಗಳು ಹೇಗೆ ಸರ್ಕಾರಿ ವಿತರಣಾ ವ್ಯವಸ್ಥೆಯಲ್ಲಿ ತೂರಿದವು ಎನ್ನುವ ಬಗ್ಗೆ ಕಟ್ಟುನಿಟ್ಟಿನ ಪರಿಶೀಲನೆಯಾಗಬೇಕಿದೆ.
ಗೊಬ್ಬರದ ವಿಷಯವಾಗಿ ಸಾಕಷ್ಟು ಗೊಂದಲಗಳಿವೆ. ಪ್ರಸಕ್ತ ಸಾಲಿನಲ್ಲಿಯೂ ರೈತರಿಗೆ ಸಕಾಲದಲ್ಲಿ ಅವರಿಗೆ ಬೇಕಾದ ರಸಗೊಬ್ಬರ ಸಿಗುತ್ತಿಲ್ಲ ಎನ್ನುವುದು ವಾಸ್ತವ ಸಂಗತಿ. ಆದರೆ, ಸರ್ಕಾರ ಮಾತ್ರ ಪ್ರಸಕ್ತ ಸಾಲಿನ ಮುಂಗಾರಿಗೆ ಬೇಕಾಗುವಷ್ಟು ಗೊಬ್ಬರ ದಾಸ್ತಾನು ರಾಜ್ಯದಲ್ಲಿದೆ ಎನ್ನುತ್ತಿದೆ. ಕೃಷಿ ಇಲಾಖೆ ಈಚೆಗೆ ಬಿಡುಗಡೆ ಮಾಡಿರುವ ಮಾಹಿತಿ ಪತ್ರದಲ್ಲಿ 2012-13 ಸಾಲಿನಲ್ಲಿ ಕೇಂದ್ರ ಸರ್ಕಾರ 136.55 ಲಕ್ಷ ಟನ್ ರಸಗೊಬ್ಬರವನ್ನು ರಾಜ್ಯಕ್ಕೆ ಮಂಜೂರು ಮಾಡಿತ್ತು. ಪ್ರಸಕ್ತ ಸಾಲಿನಲ್ಲಿ ಇದಕ್ಕಿಂತ ಶೇ. 10ರಷ್ಟು ಹೆಚ್ಚುವರಿಯಾಗಿ ಬೇಡಿಕೆ ಸಲ್ಲಿಸಲಾಗಿದೆ ಎಂದು ತಿಳಿಸಿದೆ.
ಕೇಂದ್ರ ಸರ್ಕಾರ ಎಷ್ಟು ಪೂರೈಕೆ ಮಾಡುತ್ತದೆಯೋ, ಅದನ್ನು ರಾಜ್ಯ ಸರ್ಕಾರ ಯಾವ ಪ್ರಮಾಣದಲ್ಲಿ ಹಂಚಿಕೆ ಮಾಡುತ್ತದೆಯೋ ಅದರ ಬಗ್ಗೆ ಇಂದಿಗೂ ಸ್ಪಷ್ಟತೆ ಸಿಗುತ್ತಿಲ್ಲ. ಆದರೆ, ಲಭ್ಯವಾಗುವ (ದಾಸ್ತಾನಿರುವ) ಎಲ್ಲ ರಸಗೊಬ್ಬರ ರೈತರಿಗೆ ಉಪಯುಕ್ತವಾಗಿದೆಯೇ ಎನ್ನುವುದು ಕೂಡಾ ಅಷ್ಟೇ ಪ್ರಮುಖ ಅಂಶ. ಉತ್ತರ ಕರ್ನಾಟಕ ಭಾಗದಲ್ಲಿ ಮುಂಗಾರು ಹಂಗಾಮಿನಲ್ಲಿ ಬಿತ್ತನೆಯಾಗುವ ಪ್ರಮುಖ ಬೆಳೆಗಳು, ಈರುಳ್ಳಿ, ಮೆಣಸಿನಕಾಯಿ, ಹತ್ತಿ, ತೊಗರಿ, ಹೆಸರು ಇವುಗಳಿಗೆ ರೈತರು ತಮ್ಮ ತಮ್ಮ ಭೂಮಿಯ ಗುಣಧರ್ಮ ಆಧರಿಸಿ ರಸಗೊಬ್ಬರ ಬಳಕೆ ಮಾಡುತ್ತಾರೆ. ದಕ್ಷಿಣ ಕರ್ನಾಟಕ ಹಾಗೂ ಕರಾವಳಿ ಭಾಗದಲ್ಲಿ ರೈತರ ಬೇಡಿಕೆಯೇ ಬೇರೆಯಾಗಿರುತ್ತದೆ. ಈ ಹಿಂದೆ ಹಾವೇರಿ ಜಿಲ್ಲೆಯಲ್ಲಿ ಗೊಬ್ಬರ ವಿಷಯವಾಗಿ ಉಂಟಾದ ಗೋಲಿಬಾರ್ ಎಲ್ಲರಿಗೂ ಗೊತ್ತಿರುವ ವಿಚಾರವೇ, ಒಂದೆಡೆ ಸರ್ಕಾರ ಸಾಕಷ್ಟು ಬೀಜ-ಗೊಬ್ಬರದ ದಾಸ್ತಾನಿದೆ ಎಂದು ಹೇಳುತ್ತಿದೆ. ಇನ್ನೊಂದೆಡೆ ರೈತರು ಪ್ರತಿವರ್ಷವೂ ಸಕಾಲಕ್ಕೆ ನಮಗೆ ಬೀಜ-ಗೊಬ್ಬರ ಲಭ್ಯವಾಗುತ್ತಿಲ್ಲ ಎನ್ನುತ್ತಾರೆ. ಇವೆರಡನ್ನೂ ಸೂಕ್ಷ್ಮವಾಗಿ ಗಮನಿಸಿದಲ್ಲಿ ರೈತನ ಬೇಡಿಕೆ ಮತ್ತು ಸರ್ಕಾರದ ಪೂರೈಕೆ ಕ್ರಮಗಳ ಮಧ್ಯೆ ದೊಡ್ಡ ಕಂದಕವಿದೆ ಎನ್ನುವುದು ಸ್ಪಷ್ಟವಾಗುತ್ತದೆ. ಇನ್ನು ಪೂರೈಕೆಯಾಗುವ ವಸ್ತುಗಳು ಪ್ರಮಾಣೀಕೃತವಾಗಿರುತ್ತವೆ ಎನ್ನುವ ಭರವಸೆಯಲ್ಲಿ ಬಿತ್ತನೆ ಮಾಡಿ ಸಾವಿರಾರು ರೈತರು ಕೈ ಸುಟ್ಟುಕೊಂಡ ಉದಾಹರಣೆಗಳೂ ಇವೆ. ರಾಜ್ಯದ ಜನಸಂಖ್ಯೆಯ ಶೇ. 56 ಜನರು ನಂಬಿರುವ ರಾಜ್ಯದ ಅತ್ಯಂತ ಹೆಚ್ಚಿನ ಮಾನವ ಸಂಪನ್ಮೂಲ ಬಳಕೆಯಾಗುತ್ತಿರುವ ಕೃಷಿ ಕ್ಷೇತ್ರದಲ್ಲಿ, ಈ ಕ್ಷೇತ್ರದ ಬೆಳವಣಿಗೆ ಸರ್ಕಾರ ತೆಗೆದುಕೊಂಡ ಕ್ರಮಗಳು ಸಾಕೇ? ರೈತ ಒಮ್ಮೆ ನಷ್ಟ ಅನುಭವಿಸಿದರೆ ಅದನ್ನು ಸುಧಾರಿಸಿಕೊಳ್ಳಲು ಅವನಿಗೆ ಹಲವಾರು ವರ್ಷಗಳೇ ಬೇಕಾಗುತ್ತದೆ. ಇನ್ನು ಹಲವಾರು ಜಿಲ್ಲೆಗಳಲ್ಲಿ ನಕಲಿ ಬೀಜದ ಕಂಪನಿಗಳು ರೈತರಿಗೆ ಇಲ್ಲ ಸಲ್ಲದ ಆಮಿಷಗಳ ಮೂಲಕ ನೇರವಾಗಿ ರೈತರಿಗೆ ಬೀಜ ಮಾರಾಟ ಮಾಡುತ್ತಿವೆ.
ಇನ್ನು ರಸಗೊಬ್ಬರ ವಿಷಯದಲ್ಲಿ ರೈತರು ನಿತ್ಯವೂ ಮೋಸ ಹೋಗುತ್ತಿದ್ದಾರೆ. ಹೆಚ್ಚಿನ ಇಳುವರಿಯ ಆಮಿಷ ತೋರಿಸಿ ನೇರವಾಗಿ ರೈತರನ್ನೇ ಸಂಪರ್ಕಿಸುತ್ತಿರುವ ಖಾಸಗಿ ಕಂಪನಿಗಳು ಜಾಣ್ಮೆಯ ಮಾತುಗಳ ಮೂಲಕ ರೈತರನ್ನು ಶೋಷಣೆ ಮಾಡುತ್ತಿವೆ. 'ಈಗ ಅರ್ಧ ಬೆಲೆ ಕೊಡಿ, ಬೆಳೆ ಬಂದ ನಂತರ ಇನ್ನುಳಿದ ಹಣ ಕೊಡಿ' ಎಂದು ನಂಬಿಸಿ, ರೈತರಿಗೆ ಹಣ ಕಿತ್ತುಕೊಂಡು ಕಳಪೆ ಗುಣಮಟ್ಟದ ಬೀಜ, ಗೊಬ್ಬರ ಮಾರಾಟದ ಜಾಲ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ವ್ಯಾಪಕವಾಗಿ ಹರಡಿದೆ.
ಮಳೆ ಬರುವ ಕಾಲಕ್ಕೆ ವ್ಯವಸ್ಥೆ ನಿದ್ರಾವಸ್ಥೆಯಲ್ಲಿದ್ದರೆ ರೈತರ ಹಿತ ಕಾಪಾಡುವವರು ಯಾರು?


- ಶಿವಕುಮಾರ ಕುಷ್ಟಗಿ
ಕನ್ನಡಪ್ರಭ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.