ಹಾಗೊಂದು ಕಾಲವಿತ್ತು, ಬಲಪಂಥೀಯ ವಿಚಾರ ಅಪರಾಧವಾಗಿತ್ತು!

ಹ್ಯೂಗೋ ರಿಫ್ಕಿಂಡ್ ಸ್ವಸಾಮರ್ಥ್ಯದಿಂದ ರೂಪುಗೊಂಡ ಪತ್ರಕರ್ತ. ಆದರೆ, ಸ್ಕಾಟ್ಲ್ಯಾಂಡ್ನ ಮಾಜಿ ವಿದೇಶ ಸಚಿವರ ಮಗನಾಗಿಯೂ ಅವರ ಗುರುತಿದೆ. ರಾಜಕಾರಣಿಯನ್ನು ಪಾಲಕ ಸ್ಥಾನದಲ್ಲಿ ಹೊಂದಿರುವವರ ಕಷ್ಟ ಏನೆಲ್ಲ ಅಂತ ಅವರು 'ಸ್ಪೆಕ್ಟೇಟರ್' ಪತ್ರಿಕೆಯಲ್ಲಿ ಬರೆದುಕೊಂಡಿದ್ದಾರೆ. ಪ್ರಸಿದ್ಧಿ- ಅಪ್ರಸಿದ್ಧಿಗಳ ಹೊಯ್ದಾಟಗಳ ಕತೆಯಂತೂ ಇದ್ದದ್ದೇ. ಇದರ ಜತೆಗೆ ಅವರ ತಂದೆ ಏಕಕಾಲದಲ್ಲಿ ಸ್ಕಾಟಿಷ್, ಯಹೂದಿ ಆಗಿದ್ದರು. ಮಾರ್ಗರೇಟ್ ಥ್ಯಾಚರ್ ಅವರನ್ನು ನಮ್ಮ ಸೋಮನಾಥದಲ್ಲಿ ಮಹಮ್ಮದ್ ಘಜ್ನಿಯನ್ನು ಹೇಗೆ ಕಾಣುತ್ತಾರೋ ಹಾಗೆ ಪರಿಭಾವಿಸಿದ್ದವರು ಸ್ಕಾಟ್ ಜನ. ರಿಫ್ಕಿಂಡ್ ಕುಟುಂಬಕ್ಕೆ ಇದು ಆಪ್ಯಾಯ ಸಂಗತಿಯೇನೂ ಆಗಿರಲಿಲ್ಲ. ಸರ್ಕಾರದ ಆರೋಗ್ಯ ಅಭಿಯಾನದಲ್ಲಿ ಸಾಮಾನ್ಯ ಉದ್ಯೋಗವೊಂದನ್ನು ಹೊಂದಿದ್ದ ತಮ್ಮ ತಾಯಿಯ ಅನುಭವವನ್ನು ರಿಫ್ಕಿಂಡ್ ವಿವರಿಸಿದ್ದಾರೆ. ಇವರು ಪರಿಚಿತರು- ಸ್ನೇಹಿತರೊಂದಿಗೆ ಬೆರೆಯುವ ಸಂದರ್ಭದಲ್ಲೆಲ್ಲ ಅವರೆಲ್ಲರೂ ಇವರೊಂದಿಗೆ ಮಾತು ಆರಂಭಿಸುತ್ತಿದ್ದದ್ದೇ 'ನಿಮ್ಮ ರಾಜಕೀಯ ವಿಚಾರಗಳನ್ನು ನಾವು ಒಪ್ಪುವುದಿಲ್ಲ. ಆದರೆ...' ಎಂದೇ.
ನನ್ನ ಯೌವನ ದಿನಗಳ ಆರಂಭದಿಂದಲೂ, ಯಾವಾಗ ರಾಜಕೀಯ ಅಂಕಣಗಳನ್ನು ಬರೆಯಲು ತೊಡಗಿದೆನೋ, ಟಿವಿ ಚರ್ಚೆಗಳಲ್ಲಿ ನನ್ನ ಸ್ಥಾನವನ್ನು ಪಕ್ಕಾಗೊಳಿಸುವುದಕ್ಕೆ ಶುರು ಮಾಡಿದೆನೋ ಆಗಿನಿಂದ ರಿಫ್ಕಿಂಡ್ನ ತಾಯಿಗೆ ಆದ ಅನುಭವಗಳೇ ನನಗೂ ಆಗಿವೆ. ನನ್ನ ನಿಖರ ಅಭಿಪ್ರಾಯಗಳಿಗೆ ಕುಟುಂಬ ಸ್ನೇಹಿತರಿಂದ ಹಾಗೂ ಅಪರಿಚಿತರಿಂದಲೂ ಆಗಾಗ ಪ್ರಶಂಸೆಗಳು ಸಂದಾಯವಾಗುತ್ತಿದ್ದವು ಎಂಬುದೇನೋ ಹೌದು. ಇತಿಹಾಸದಲ್ಲಿ ಹುದುಗಿದ ಸಂಗತಿಗಳಿಗೆ ಸಮಕಾಲೀನ ವಿದ್ಯಮಾನದಲ್ಲಿ ಹೋಲಿಕೆಗಳನ್ನು ಗುರುತಿಸುವ ಯತ್ನಕ್ಕೆ ನಾನು ತೆರೆದುಕೊಂಡಿರುವುದಕ್ಕೆ ವ್ಯಾಪಕ ಪ್ರಶಂಸೆಯೂ ಇನ್ನು ಕೆಲವರಿಂದ ಸಂದಿತು. ಆದರೆ ಇವೆಲ್ಲವೂ ಅವಶ್ಯವಾಗಿ ಪ್ರಾರಂಭಿಕ ರಾಗವೊಂದನ್ನು ಹೊಂದಿರುತ್ತಿದ್ದವು. 'ನಿಮ್ಮ ಒಟ್ಟಾರೆ ಅಭಿಪ್ರಾಯವನ್ನೇನೂ ನಾನು ಒಪ್ಪುವುದಿಲ್ಲ' ಎಂದೋ, 'ಈ ಬಾರಿ ನಿಮ್ಮ ವಾದ ಒಪ್ಪಿಕೊಳ್ಳುತ್ತಿದ್ದೇನೆ...' ಅಂತಲೋ ಹೇಳುವುದನ್ನು ಮರೆಯುತ್ತಿರಲಿಲ್ಲ.
ಹಾಗೆಂದು ನನಗೆ ನನ್ನದೇ ಆದ ಚಿಕ್ಕದೊಂದು ಅಭಿಮಾನಿ ವರ್ಗ ಇದ್ದಿರಲಿಲ್ಲ ಅಂತೇನಲ್ಲ. ರಾಜಕೀಯ ಉದ್ದೇಶದ ಜತೆ ಪ್ರಬಲವಾಗಿ ಗುರುತಿಸಿಕೊಂಡ ಟೆಕಿಗಳು ಅವರೆಲ್ಲ. ಟ್ವಿಟ್ಟರ್ನಲ್ಲಿ ಆಕ್ರಮಕ ಶೈಲಿಯಲ್ಲಿ ತಮ್ಮ ಇಷ್ಟಾನಿಷ್ಟಗಳನ್ನು ಮುಂದಿಡುವವರು. ಆದರೆ ನನ್ನದೇ ವೃತ್ತಿ ಜಗತ್ತಿನ ಸಹಯಾತ್ರಿಕರಿಗೆ, ಜೈಪುರ ಸಾಹಿತ್ಯ ಸಮಾರಂಭದಂತಹ ಸಾಮಾಜಿಕ ವಾತಾವರಣದಲ್ಲಿ ಭೇಟಿಯಾಗುವವರಿಗೆಲ್ಲ ನಾನೊಬ್ಬ ವಿಕ್ಷಿಪ್ತ ವ್ಯಕ್ತಿಯೇ ಆಗಿಬಿಟ್ಟಿದ್ದೆ. ಏಕೆಂದರೆ ಬಲಪಂಥೀಯ ಭದ್ರಲೋಕಕ್ಕೆ ಸೇರಿದವನು ನಾನು! 1990ರ ಕಾಲಘಟ್ಟದಲ್ಲಂತೂ ಪರಿಸ್ಥಿತಿ ತೀರ ಕೆಟ್ಟದಾಗಿತ್ತು. ಆಗ ಬಲಪಂಥೀಯ ರಾಜಕೀಯ ವಿಚಾರಧಾರೆಯೊಂದಿಗೆ ಗುರುತಿಸಿಕೊಳ್ಳುವುದು ಎಂದರೆ ಎಲಿಜಿಬೆತ್ಳ ಇಂಗ್ಲೆಂಡ್ನಲ್ಲಿ ಕ್ಯಾಥೋಲಿಕ್ ಮತ ಅಪ್ಪಿಕೊಂಡಂತೆ. ಅದು ಯಾರಿಗೂ ಸಹ್ಯವಾಗುತ್ತಿರಲಿಲ್ಲ. ನಮ್ಮನ್ನು ಯಾರೂ ಸುಟ್ಟುಹಾಕಲಿಲ್ಲ ಎಂಬುದೇನೋ ಖರೆಯಾದರೂ ಒಬ್ಬ ವ್ಯಕ್ತಿ ಎಂಬಂತೆಯೂ ನೋಡುತ್ತಿರಲಿಲ್ಲ. ಸಾಮಾಜಿಕ ಮತ್ತು ಬೌದ್ಧಿಕ ವಲಯಗಳಲ್ಲಿ ನೀವೆಂದರೆ ಅಷ್ಟು ಕೀಳು. ಭಾರತದ ಸಮಾಜವಾದಿ ತಳಹದಿಯ ಅಭಿವೃದ್ಧಿಯನ್ನು ಟೀಕಿಸಿ, ಮಾರುಕಟ್ಟೆ ಅರ್ಥವ್ಯವಸ್ಥೆ ಪ್ರತಿಪಾದಿಸುವಷ್ಟರಮಟ್ಟಿಗೆ ನೀವು ಬಲಪಂಥೀಯರಾಗಿದ್ದರೆ ಅದಕ್ಕೆ ಅಷ್ಟೇನೂ ತಕರಾರು ಇದ್ದಿರಲಿಲ್ಲ. ಆದರೆ, 1973ರಲ್ಲಿ ಸ್ವತಂತ್ರ ಪಕ್ಷವು ಕರಗುವುದರೊಂದಿಗೆ ಈ ಥರದ ವಾದಗಳನ್ನು ಮಂಡಿಸುವ ಅವಕಾಶವೂ ಕೆಲವರ ಪಾಲಿಗೆ ಮಾತ್ರ ಸಿಗುತ್ತಿತ್ತು. ಮುಂಬೈ ಮತ್ತು ಕೋಲ್ಕತಾಗಳಲ್ಲಿ ಪ್ರತಿವರ್ಷ ಬಜೆಟ್ ಮೇಲೆ ನಾನಿ ಪಾಲ್ಖಿವಾಲರ ಉಪದೇಶ ಕೇಳಲು ಹೋಗುತ್ತಿದ್ದದ್ದೇ ಸಮಾಜವಾದಿ ವ್ಯವಸ್ಥೆಯನ್ನು ಟೀಕಿಸುವುದಕ್ಕೆ ಈ ಗುಂಪಿಗೆ ಒಲಿದಿದ್ದ ಅರ್ಹತೆ.
ಇಂಗ್ಲಿಷ್ ಮಾಧ್ಯಮ ಸಾಮ್ರಾಜ್ಯದಲ್ಲಿ, ಬೌದ್ಧಿಕ ವರ್ಗದ ವೃತ್ತಿಯಲ್ಲಿ ನಿರತರಾಗಿರುವವರು ನೀವಾಗಿದ್ದರೆ ನೀವು ಮೀರಬಾರದ ಲಕ್ಷ್ಮಣರೇಖೆ ಬಹಳ ಸ್ಪಷ್ಟವಾಗಿರುತ್ತಿತ್ತು. ಯಾವುದೇ ಛಾಯೆಯಿಂದ ನೀವು ಸ್ವಲ್ಪ ಕಮ್ಯುನಿಸ್ಟ್ ಅಂತ ಬಿಂಬಿಸುವುದಕ್ಕೆ ಸಫಲರಾದರೂ ಸುರಕ್ಷಿತ. ಕೋಲ್ಕತಾದಲ್ಲಂತೂ ಎಡಪಂಥೀಯರೆನಿಸಿಕೊಳ್ಳುವುದು ಅತ್ಯಂತ ಸಹಜ ಸ್ಥಿತಿ. ದೆಹಲಿಯ ಕೇಂದ್ರದಲ್ಲಿ ನೀವು ಎಡಪಂಥೀಯರಾಗಿರುವುದು, ಒಂದು ಮಟ್ಟದಲ್ಲಿ ನಕ್ಸಲೀಯರ ಬಗ್ಗೆ ಅನುಕಂಪ ಪ್ರದರ್ಶಿಸುವುದು ಇವೆಲ್ಲವೂ ಚೆಲುವಿನ ವಿಷಯಗಳಾಗಿದ್ದವು. ಆದರೆ ಈ 'ಗೌರವಾನ್ವಿತ ವಲಯ'ದ ಪಾಲಿಗೆ ಬಿಜೆಪಿ ಸಹ ಒಂದು ಸಕಾರಾತ್ಮಕ ಬಲ ಎಂಬುದನ್ನು ಒಪ್ಪಿಕೊಳ್ಳುವುದು ಮಾತ್ರ ಊಹೆಗೆ ಮೀರಿದ್ದಾಗಿತ್ತು. ಅದರೊಂದಿಗೆ ಗುರುತಿಸಿಕೊಳ್ಳುವುದೆಂದರೆ ಸಭ್ಯತೆ ಮತ್ತು ಸಹಿಷ್ಣುತೆಯ ಎಲ್ಲ ಮೇರೆಗಳನ್ನು ಮೀರಿದಂತೆ!
ಇವತ್ತಿಗೆ ಇವೆಲ್ಲವೂ ಅಯೇಮಯ- ಅಪರಿಚಿತ ಕತೆಗಳಾಗಿ ಕಾಣಬಹುದು. ಏಕೆಂದರೆ ಮಧ್ಯಮವರ್ಗದ ಅಭೂತಪೂರ್ವ ಬೆಂಬಲದೊಂದಿಗೆ ಬಿಜೆಪಿ ಲೋಕಸಭೆಯಲ್ಲಿ ನಿಚ್ಚಳ ಬಹುಮತ ಸಾಧಿಸಿದೆ. ಆದರೆ ಒಂದೊಮ್ಮೆ ಭಾರತದಲ್ಲಿ ಕೇಸರಿ ವರ್ಣದೊಂದಿಗೆ ಗುರುತಿಸಿಕೊಳ್ಳುವುದೆಂದರೆ ಅತಿ ಕೆಟ್ಟದ್ದು ಎಂಬ ಭಾವನೆಯನ್ನು ಹುಟ್ಟುಹಾಕಲಾಗಿತ್ತು. ಅವರ ಪಾಲಿಗೆ ಬಿಜೆಪಿ ಎಂದರೆ ಮೂರ್ಖರ ಪಕ್ಷವಷ್ಟೇ ಅಲ್ಲ, ಕೊಚ್ಚೆಯೂ ಹೌದು! ಹಿಂದೂ ಪುರೋಹಿತಶಾಹಿಗಳ, ಹಿಂದು ವಿಭಜಕ ಮನದವರ, ಕವಳ ಮೆಲ್ಲುತ್ತಿರುವ ಅನಾಗರಿಕರ ಪಕ್ಷ ಬಿಜೆಪಿ ಎಂದೇ ಅವರು ಬಿಂಬಿಸಿದ್ದರು. ಎಲ್ಲಕ್ಕಿಂತ ಹೆಚ್ಚಾಗಿ ಅದು ದಂಗೆಕೋರ ಪಕ್ಷ. ಎಲ್ಲಂದಲೋ ಚಡ್ಡಿ ಹಾಕಿ ಪ್ರತ್ಯಕ್ಷರಾಗುವ ವ್ಯಕ್ತಿಗಳು ದಂಗೆಯ ಬೆಂಕಿ ಹಚ್ಚಿಬಿಡುತ್ತಾರೆ ಎಂಬುದು ಬಿಜೆಪಿ ಕುರಿತು ಬೌದ್ಧಿಕ ವರ್ಗ ಕಟ್ಟಿಕೊಟ್ಟಿದ್ದ ಪರಿಕಲ್ಪನೆ. ಬಿಜೆಪಿ ಪ್ರತಿನಿಧಿಸುವುದೇನಿದ್ದರೂ ಗತಕಾಲವನ್ನು. ಪ್ಗತಿ ಬಯಸುವ ಯಾವ ವ್ಯಕ್ತಿಯೂ ಈ ಪಕ್ಷಕ್ಕೆ ಸಲ್ಲಲಾರ. ಆಧುನಿಕ ಭಾರತಕ್ಕೆ ಬಿಜೆಪಿ ಅಪ್ರಸ್ತುತ. ಹೀಗೆಲ್ಲ ಅಭಿಪ್ರಾಯ ರೂಪಿಸಲಾಗಿತ್ತು.
ಬಲಪಂಥೀಯ ಬಲ ಎಂಬುದು ಜೋಕಿನ ವಿಷಯವೂ ಆಗಿತ್ತು. ದೆಹಲಿ ವಿಶ್ವವಿದ್ಯಾಲಯಕ್ಕೆ ಸೇರಿದ 'ಪ್ರಗತಿಪರ'ರೊಬ್ಬರು ಮಾಡಿದ್ದ ಗೇಲಿ ನೆನಪಾಗುತ್ತಿದೆ. ಅವರ ವಿಶ್ವವಿದ್ಯಾಲಯದ ಸಂಸ್ಕೃತ ವಿಭಾಗಕ್ಕೆ ಪ್ರಾಧ್ಯಾಪಕರೇ ಇಲ್ಲದ ಪರಿಸ್ಥಿತಿ ಬಂದಿತ್ತಂತೆ. ಏಕೆಂದರೆ ಸಂಸ್ಕೃತ ಕಲಿಸುವವರೆಲ್ಲ ಆರೆಸ್ಸೆಸ್ ಒಲವು ಹೊಂದಿರುತ್ತಾರೆ ಎಂದು ಉಪನ್ಯಾಸಕರನ್ನೆಲ್ಲ ಜೈಲಿನಲ್ಲಿ ಇರಿಸಲಾಗಿತ್ತು. ಅದು 1975ರ ತುರ್ತು ಪರಿಸ್ಥಿತಿಯ ಪ್ರಾರಂಭದ ವಾರ. ಭಾರತವನ್ನು 'ಫ್ಯಾಸಿಸ್ಟ್ ಶಕ್ತಿ'ಗಳಿಂದ ರಕ್ಷಿಸುವ ಇಂದಿರಾ ಯತ್ನದ ಫಲವಾಗಿ ಜೈಲು ಸೇರಿದ್ದವರು ಇವರೆಲ್ಲ. ಈ ಕಠೋರ ಪರಿಸ್ಥಿತಿಯನ್ನು ಜೋಕ್ ಆಗಿ ಹಂಚಿಕೊಂಡಿದ್ದ ಆ ಪ್ರಗತಿಪರ ಮಹಾಶಯ!
1990ರ ವೇಳೆಗೂ ಹೀಗೆ ಗೇಲಿ ಮಾಡುವ ಪರಿಸ್ಥಿತಿಯಲ್ಲಿ ಸುಧಾರಣೆಗಳು ಆಗಿರಲಿಲ್ಲವಾದರೂ ರಾಮ ಜನ್ಮಭೂಮಿ ಚಳವಳಿಯ ಬಿಸಿ ಬೌದ್ಧಿಕ ವರ್ಗದಲ್ಲಿ ತಲ್ಲಣ ತಂದಿತ್ತು. 1990ರ ಅಕ್ಟೋಬರ್ನಲ್ಲಿ ಸೋಮನಾಥದಿಂದ ಅಯೋಧ್ಯೆಯವರೆಗೆ ಎಲ್ಕೆ ಆಡ್ವಾಣಿ ಕೈಗೊಂಡ ರಥಯಾತ್ರೆಗೆ ಜನಸಾಗರವೇ ಹರಿದುಬಂತು. ಇದನ್ನು ಉಲ್ಲೇಖಿಸುತ್ತ ನಾನು, ಹಿಂದೂಗಳು ಸೆಕ್ಯುಲರಿಸ್ಟರ ಗೇಲಿಗಳನ್ನು ಮೆಟ್ಟಿ ನಿಲ್ಲುವ ಕಾಲ ಬಂದಾಯಿತು ಎಂದು ಟೈಮ್ಸ್ ಆಫ್ ಇಂಡಿಯಾದಲ್ಲಿ ಲೇಖನ ಬರೆದಾಗ ಅದನ್ನು ಅತ್ಯಂತ ವಿವಾದಾತ್ಮಕ ಎನ್ನಲಾಯಿತು. ಅಕಾಡೆಮಿಕ್ ವರ್ಗದವರಿಂದ ಇನ್ನಿಲ್ಲದ ಪ್ರತಿರೋಧ ಪ್ರತಿಕ್ರಿಯೆಗಳು ಬಂದವು. ಇತಿಹಾಸಕಾರರು ಎಂದು ಗುರುತಿಸಿಕೊಂಡಿದ್ದ ಕೆಲವು ಅಕಾಡೆಮಿ ವ್ಯಕ್ತಿಗಳು ಸೇರಿಕೊಂಡು ಬರೆದಿದ್ದ ಪತ್ರದಲ್ಲಿ ಒಂದು ಅನಪೇಕ್ಷಿತ ವಾದ ಹೂಡಲಾಗಿತ್ತು. ಇಂಥ ಲೇಖನವು ಮುಖ್ಯವಾಹಿನಿ ಮಾಧ್ಯಮದಲ್ಲಿ ಪ್ರಕಟವಾಗಬಾರದಿತ್ತು ಎಂದು ಅವರು ಸೂಚಿಸಿದ್ದರು!
ಈ ಸೆಕ್ಯುರಿಸ್ಟ್ ದ್ವೇಷವನ್ನು ನಾನು ತಾಳಿಕೊಂಡು ಉಳಿಯುವುದಕ್ಕೆ ಮುಖ್ಯವಾಗಿ ಎರಡು ಕಾರಣಗಳಿದ್ದವು. 1990ರ ಕಾಲಕ್ಕೆಲ್ಲ ಆಂಗ್ಲ ಬಲ್ಲ ಸುಶಿಕ್ಷಿತ ವರ್ಗವೂ ಸೆಕ್ಯುಲರಿಸ್ಟರ ಕಟ್ಟರ್ವಾದವನ್ನು ಒಪ್ಪಿಕೊಳ್ಳುವುದಕ್ಕೆ ನಿರಾಕರಣ ತೋರಿತು. ಆಧುನಿಕ ಭಾರತದ ಗಣನೀಯ ವರ್ಗವು ತನ್ನನ್ನು ರಾಜಕೀಯವಾಗಿ ಹಿಂದು ಎಂದು ಗುರುತಿಸಿಕೊಳ್ಳುವುದಕ್ಕೆ ಖುಷಿಪಡತೊಡಗಿತು. ಇದನ್ನು ಪತ್ರಿಕೆಗಳ ಸಂಪಾದಕೀಯ ವರ್ಗ ತೀರ ನಿರ್ಲಕ್ಷಿಸಲಾರದಾಯಿತು. 1991ರ ಚುನಾವಣೆಯಲ್ಲಿ ಬಿಜೆಪಿಯು ತಾನೊಂದು ಪರ್ಯಾಯ ಸೈದ್ಧಾಂತಿಕ ಬಲ ಎಂಬುದನ್ನು ಸಾಬೀತುಮಾಡಿದ ನಂತರವಂತೂ ಅವರಿಗೆ ಮೊದಲಿನ ಉಪೇಕ್ಷೆ ಸಾಧ್ಯವಿರಲಿಲ್ಲ.
ಎರಡನೆಯದಾಗಿ ವರ್ಗದ ಅಂಶ. ಹಿಂದಿ ಮಾತನಾಡುವ ಜನರು ಏನೇ ಹೇಳಿದರೂ ಅವರನ್ನು ಬೌದ್ಧಿಕ ಅಹಂಕಾರ ವಲಯವು ಬದಿಗೆ ಸರಿಸುತ್ತಿತ್ತೇನೋ. ಆದರೆ ಉನ್ನತ ಇಂಗ್ಲಿಷ್ ಸ್ಕೂಲ್ಗಳು ಎಂದು ಗುರುತಿಸಿಕೊಂಡಿದ್ದ ಸಂಸ್ಥೆಗಳಲ್ಲಿ ಶಿಕ್ಷಣ ಪಡೆದವರೇ ಬಲಪಂಥದ ಮಾತುಗಳನ್ನಾಡಿದಾಗ, ಅಭಿಪ್ರಾಯ ನಿರೂಪಣೆಯ ಮೂಲೆಯ ಜಾಗಗಳನ್ನಾದರೂ ಬಲಪಂಥೀಯ ಚಿಂತನೆಗೆ ನೀಡಬೇಕಾದ ಅನಿವಾರ್ಯವು ಸಂಪಾದಕೀಯ ವರ್ಗಕ್ಕೆ ಪ್ರಾಪ್ತವಾಯಿತು. ಈ ಸಮರದಲ್ಲಿ ನಾನೇನೂ ಏಕಾಂಗಿಯಾಗಿರಲಿಲ್ಲ. ಗಿರಿಲಾಲ್ ಜೈನ್ ಹಾಗೂ ಸಮರ ಸೇನಾನಿಯಂತೆ ಮುನ್ನುಗ್ಗಿದ ಅರುಣ್ ಶೌರಿ ಇವರನ್ನೆಲ್ಲ ನೆನಪಿಸಿಕೊಳ್ಳಬೇಕು.
1990ರಿಂದ 2014ರ ಅವಧಿ ಅಂಕಣಕಾರನಾಗಿ ಏಳುಬೀಳಿನದ್ದು. ಹಳೆಯ-ಆಪ್ತ ಸ್ನೇಹಿತರಲ್ಲಿ ಹಲವರನ್ನು ಕಳೆದುಕೊಳ್ಳಬೇಕಾಯಿತು. ಹೊಸ ಸ್ನೇಹಿತರು ಸಿಕ್ಕಿದರು. ವೈಯಕ್ತಿಕವಾಗಿ ಕಷ್ಟದ ಯಾನವೇ ಆದರೂ ಬೇರೆಯವರು ಗುರುತಿಸಿ ವಿವರಿಸಲು ಧೈರ್ಯ ತೋರದ ಟ್ರೆಂಡ್ ಅನ್ನು ಬರೆದಿದ್ದಕ್ಕೆ ವೃತ್ತಿಪರವಾಗಿ ಯಶಸ್ಸೇ ಸಿಕ್ಕಿತು. ರಾಜಕೀಯ ವರ್ಗದಲ್ಲಿ ಹಲವರು ಮಿತ್ರರಾದರು,ಇನ್ನು ಕೆಲವರು ಮಿತ್ರತ್ವ ರದ್ದುಪಡಿಸಿದರು. ಒಂದು ಯಕಃಶ್ಚಿತ, ಆಕ್ಷೇಪಾರ್ಹ ಎಂಬಂತಿದ್ದ ಗುಂಪು ಇವತ್ತು ರಾಜಕೀಯ ಬಲದ ಕೇಂದ್ರ ಸ್ಥಾನದಲ್ಲಿ ನಿಂತಿರುವ ಬೃಹತ್ ವಿದ್ಯಮಾನದಲ್ಲಿ, ಆ ದಾರಿಯಲ್ಲಿ ಸುಮಾರು 25 ವರ್ಷಗಳ ಯಾನದ ಬಹಳ ಚಿಕ್ಕ ಅಂಶಗಳು ಇವು.
ಈ ಬೌದ್ಧಿಕ- ರಾಜಕೀಯ ಪರಿವರ್ತನೆಯನ್ನು ರಿಂಗಿನಾಚೆ ನಿಂತು ವೀಕ್ಷಿಸಿದ ಅನುಭವದಲ್ಲಿ ಹೇಳುವುದಾದರೆ ನಾಯಕತ್ವ ಸ್ಥಾಪಿಸುವ ನಿಟ್ಟಿನಲ್ಲಿ ಚುನಾವಣೆಯ ವಿಜಯ ಸಣ್ಣ ಹೆಜ್ಜೆ ಮಾತ್ರ. ಜವಹಾರ್ಲಾಲ್ ನೆಹರು ಅಥವಾ ನೆಹರು-ಗಾಂಧಿ ಕುಟುಂಬದ ಪ್ರಸ್ತುತತೆ ಅವರು 1947ರಿಂದ ಭಾರತವನ್ನು ಆಳಿದ್ದರು ಎಂಬುದರಲ್ಲಿಲ್ಲ. ಬದಲಾಗಿ ನೆಹರೂವಿಯನ್ ಎಂಬಂಥ ಸಿದ್ಧಾಂತವನ್ನು ಅವರು ರೂಪಿಸಿದರು ಎಂಬುದು ಮುಖ್ಯ. ನರೇಂದ್ರ ಮೋದಿ ಬಹಳ ಮುಖ್ಯ ಸಮರವೊಂದನ್ನು ಗೆದ್ದಿದ್ದಾರೆ. ಅವರು ಇತಿಹಾಸದಲ್ಲಿ ಸ್ಥಾನ ಪಡೆಯುವಲ್ಲಿ ಎರಡು ಸಾಧ್ಯತೆಗಳಿವೆ. ಕುಟುಂಬ ರಾಜಕಾರಣ ಪಾರಮ್ಯ ಕೊನೆಗಾಣಿಸಿದರೆಂಬ ಶ್ರೇಯಸ್ಸಿನಿಂದ ಗುರುತಿಸಿಕೊಳ್ಳುವುದು. ಇನ್ನೊಂದು, ಅದಕ್ಕೂ ಮೀರಿ, ಭಾರತವು ಭಿನ್ನವಾಗಿ ಯೋಚಿಸುವುದಕ್ಕೆ ನಾಯಕತ್ವ ಒದಗಿಸಿದರೆಂಬುದು. ಎರಡನೆಯ ಅಂಶ ಸಾಕಾರವಾಗಬೇಕಿದೆ.
- ಸ್ವಪನ್ದಾಸ್ ಗುಪ್ತ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


