ಅಂಕಣಗಳು

ಇದೇನಿದು ಅಖಿಲೇಶ?

Published On :

ಭಾರತದ ಅತಿದೊಡ್ಡ ರಾಜ್ಯ ಎಂಬ ಖ್ಯಾತಿಯ ಉತ್ತರ ಪ್ರದೇಶದಿಂದ ಈ ದಿನಗಳಲ್ಲಿ ವರದಿಯಾಗುತ್ತಿರುವುದು ಎರಡೇ ಬಗೆಯ ಸುದ್ದಿ. ಒಂದೋ ಯುವತಿಯರ ಮೇಲೆ ಅತ್ಯಾಚಾರವಾಗಿರುತ್ತದೆ. ಹೆಚ್ಚಿನ ಸಂದರ್ಭಗಳಲ್ಲಿ ಅವರ ಹತ್ಯೆಯೂ ಆಗಿರುತ್ತದೆ. ಅದಿಲ್ಲ ಎಂದಾದರೆ ಸ್ಥಳೀಯ ಬಿಜೆಪಿ ಮುಖಂಡನ ಹತ್ಯೆಯೋ, ಇಲ್ಲವೇ ಬಿಜೆಪಿ ಪದಾಧಿಕಾರಿಗಳ ಮೇಲೆ ಹಲ್ಲೆಯೋ ಆಗಿರುತ್ತದೆ. ಇವನ್ನೆಲ್ಲ ಹತ್ತಿಕ್ಕುವ ಕೆಲಸ ಹಾಗಿರಲಿ, ಆ ಬಗ್ಗೆ ಕಳವಳವೂ ಇಲ್ಲದಂತೆ ಮರೆಯುತ್ತಿದೆ ಉತ್ತರ ಪ್ರದೇಶದ ಸಮಾಜವಾದಿ ಸರ್ಕಾರ. ಮುಲಾಯಂ- ಅಖಿಲೇಶ್‌ರಿಗೆ ನೈತಿಕತೆ ಎಂಬುದೇನಾದರೂ ಇದೆಯೇ?
    ಪ್ರಧಾನಿ ನರೇಂದ್ರ ಮೋದಿ ಈ ಹಿಂದೆ ಗುಜರಾತ್ ಮುಖ್ಯಮಂತ್ರಿ ಆಗಿದ್ದಾಗ ನಡೆದ ಗೋದ್ರೋತ್ತರ ಗಲಭೆಯನ್ನೇ ಆಧಾರವಾಗಿಟ್ಟುಕೊಂಡು ಅವರ ವಿರುದ್ಧ ಪ್ರತಿಪಕ್ಷ- ಬೌದ್ಧಿಕ ವರ್ಗ- ಮಾಧ್ಯಮದ ಒಂದು ವರ್ಗ ಮುಗಿಬಿದ್ದಿತು. ಅವರನ್ನು ಸೈತಾನ ಎಂದೇ ಚಿತ್ರಿಸಿ ಬೊಬ್ಬೆ ಹಾಕಲಾಯಿತು. ಇದರಲ್ಲಿ ಅವರ ಕೈವಾಡ ಏನಿಲ್ಲ ಎಂದು ನ್ಯಾಯಾಲಯಗಳು ಹೇಳಿದ ಮೇಲೂ ನರಹಂತಕ ಪದಪ್ರಯೋಗಗಳು ನಿಲ್ಲಲಿಲ್ಲ. ಅಲ್ಲಿ ವ್ಯಕ್ತವಾದ ಆಕ್ರೋಶದ ಚಿಕ್ಕದೊಂದು ಭಾಗವೂ ಅಖಿಲೇಶ್ ವಿರುದ್ಧ ಕಂಡುಬರುತ್ತಿಲ್ಲ ಏಕೆ? ಮುಲಾಯಂ- ಅಖಿಲೇಶರು ತಥಾಕಥಿತ ಸೆಕ್ಯುಲರ್ ಪಾಳೆಯದಲ್ಲಿ ಗುರುತಿಸಿಕೊಂಡಿದ್ದಾರೆ ಎಂಬ ಕಾರಣಕ್ಕೆ ಬೌದ್ಧಿಕ ವರ್ಗ ತಣ್ಣಗಿದೆಯೇ?
    ಈ ವಿಷಯದಲ್ಲೂ ಮೋದಿ ಅವರನ್ನು ಪ್ರಶ್ನಿಸುವುದು ವ್ಯಂಗ್ಯವಲ್ಲವೇ? ಹಾಗಾದರೆ ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷವು ಸರ್ಕಾರ ನಡೆಸುತ್ತಿರುವುದಾದರೂ ಯಾವ ಭಾಗ್ಯಕ್ಕೆ?
    ಅಖಿಲೇಶ್ ಸಾಮ್ರಾಜ್ಯದಲ್ಲಿ ಮಹಿಳೆಯರ ವಿರುದ್ಧದ ಅಪರಾಧ ಪ್ರಕರಣಗಳು ಈವರೆಗೆ 23,569. ಪ್ರತಿದಿನ ಸರಾಸರಿ 10 ಅತ್ಯಾಚಾರ ಎಂಬಂತೆ ಈವರೆಗೆ 1951 ಪ್ರಕರಣಗಳು ವರದಿಯಾಗಿವೆ. 7910 ಅಪಹರಣ, ಒತ್ತೆ ಪ್ರಕರಣಗಳು. ಬರೋಬ್ಬರಿ 5676 ಗಲಭೆ ಪ್ರಕರಣಗಳು. ಪರಿಶಿಷ್ಟ ಜಾತಿಯವರ ಮೇಲಿನ ದೌರ್ಜನ್ಯ ಪ್ರಕರಣಗಳು 6202. ಹಾಗೆ ನೋಡಿದರೆ ಪ್ರಜಾಪ್ರಭುತ್ವ ಮತ್ತು ಕೆಳವರ್ಗದವರ ರಕ್ಷಣೆಗೆ ಎಂದೇ ಜನ್ಮವೆತ್ತಿರುವಂತೆ ಮಾತನಾಡುವ ನಮ್ಮ ಬುದ್ಧಿಜೀವಿವರ್ಗ ಇಷ್ಟೊತ್ತಿಗಾಗಲೇ ಉತ್ತರ ಪ್ರದೇಶದಲ್ಲಿ ತನ್ನ ಹೋರಾಟದ ಕ್ಯಾಂಪ್ ಹಾಕಿಬಿಡಬೇಕಾಗಿತ್ತು. ಬೇರೆ ಯಾವುದಾದರೂ ರಾಜ್ಯದಲ್ಲಿ ಇಂಥದ್ದೆಲ್ಲ ನಡೆದಿದ್ದರೆ ಕೇಸರೀಕರಣ, ಕೋಮುವಾದ ಅಂತೆಲ್ಲ ವಿಚಾರ ಸಂಕಿರಣಗಳು, ಧರಣಿಗಳೆಲ್ಲ ಆಗಿರುತ್ತಿದ್ದವು. ಅಕ್ಷರಶಃ ಗೂಂಡಾರಾಜ್ಯವೊಂದನ್ನು ಮುನ್ನಡೆಸುವಂತೆ ವರ್ತಿಸುತ್ತಿರುವ ಅಖಿಲೇಶ್ ವಿರುದ್ಧ ರಾಷ್ಟ್ರೀಯ- ಅಂತಾರಾಷ್ಟ್ರೀಯ ಮಟ್ಟದಲ್ಲಿ ಧ್ವನಿ ಎತ್ತಬೇಕಿದ್ದವರೆಲ್ಲ ಎಲ್ಲಿ ಸತ್ತು ಮಲಗಿದ್ದಾರೆ?
    ಅತ್ಯಾಚಾರ- ಕೊಲೆಗಳಿಂದ ಮುಕ್ತ ರಾಜ್ಯ ಯಾವುದೂ ಇಲ್ಲದಿರಬಹುದು. ಆದರೆ ಆ ಬಗ್ಗೆ ಇರುವ ಕಾಳಜಿ- ಇಚ್ಛಾಶಕ್ತಿ ಮುಖ್ಯವಾಗುತ್ತದೆ. 'ಹುಡುಗರು ತಪ್ಪು ಮಾಡುತ್ತಾರೆ ಬಿಡಿ. ಅದಕ್ಕೆಲ್ಲ ಗಲ್ಲು ಹಾಕಿದರೆ ಹೇಗೆ' ಅಂತ ಮುಲಾಯಮ್ ಸಿಂಗ್ ಹೇಳುತ್ತಾರೆ! ಉತ್ತರ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಏಕೆ ಈ ಪರಿ ಕೆಟ್ಟಿದೆ ಅಂತ ಪ್ರಶ್ನಿಸಿದ ಪತ್ರಕರ್ತಗೆ 'ನೀನು ಸೌಖ್ಯವಾಗಿದ್ದೀಯಲ್ಲ? ಅದನ್ನೇ ಹೋಗಿ ಬೇರೆಯವರಿಗೆ ಹೇಳು' ಎನ್ನುವ ಮುಖ್ಯಮಂತ್ರಿ ಅಖಿಲೇಶ್ ಯಾದವ್? ಉತ್ತರ ಪ್ರದೇಶದಲ್ಲಿ ನಿಜಕ್ಕೂ ಪ್ರಜಾಪ್ರಭುತ್ವ ಇದೆಯಾ?
    ಉತ್ತರ ಪ್ರದೇಶದಲ್ಲಿ ಹೀಗೆಲ್ಲ ಆಗುತ್ತಿದ್ದರೆ ಕರ್ನಾಟಕದಲ್ಲಿ ಹೀಗೆಲ್ಲ ಚರ್ಚಿಸಿದರೇನು ಪ್ರಯೋಜನ ಎಂಬ ಪ್ರಶ್ನೆ ಇದೆಯೇ? ಗೊತ್ತಿರಲಿ, ಇಂಥದೇ ಪ್ರಭೃತಿಗಳೊಂದಿಗೆ ಸೇರಿಕೊಂಡು ಕೇಂದ್ರದಲ್ಲಿ ತೃತೀಯ ರಂಗ ಸರ್ಕಾರ ರಚಿಸುತ್ತೇವೆ ಎಂಬ ಉಮೇದಿನವರು ನಮ್ಮಲ್ಲಿದ್ದಾರೆ. ಅವರಿಗೆಲ್ಲ ತುಸುವಾದರೂ ನಾಚಿಕೆಯಾಗಬೇಡವೇ? ಇಂಥ ಗೂಂಡಾ ಮನಸ್ಥಿತಿಯವರ ಕೈಗೆ ದೇಶ ಸಿಕ್ಕಿದರೆ ಗತಿಯೇನು?

- ಸುಮುಖ ಎನ್.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.