ಅಂಕಣಗಳು

ಹೊಸ ಮಾರ್ಗದ ಕಥೆ ಹಾಗಿರಲಿ, ಈಗಿನ ವ್ಯವಸ್ಥೆ ಸುಧಾರಿಸಲಿ

Published On :

ಕರ್ನಾಟಕದ ರೈಲ್ವೆ ಸೌಲಭ್ಯಗಳ ಕೊರತೆಯ ಬಗ್ಗೆ ಪತ್ರಿಕೆಗಳಲ್ಲಿ ಬಹಳಷ್ಟು ಲೇಖನಗಳು ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿರುತ್ತವೆ. ಅವುಗಳೆಲ್ಲಾ ಹೊಸ ಮಾರ್ಗಗಳ ನಿರ್ಮಾಣದ ಬಗ್ಗೆ ಮತ್ತು ನಿರ್ಮಾಣ ವಿಳಂಬದ ಬಗ್ಗೆ ಕೇಂದ್ರೀಕೃತಗೊಂಡಿರುತ್ತವೆ. ಈಗಿರುವ ಮಾರ್ಗಗಳಲ್ಲೇ ಕರ್ನಾಟಕದೊಳಗೆ ಬಹಳಷ್ಟು ಹೆಚ್ಚುವರಿ ರೈಲುಗಳನ್ನು ಓಡಿಸಲು ಅವಕಾಶವಿದೆ. ಹೊಸ ಮಾರ್ಗಗಳ ನಿರ್ಮಾಣಕ್ಕೆ ಅನೇಕ ವರ್ಷಗಳ ಸಮಯ, ಸಾವಿರಾರು ಕೋಟಿ ಬಂಡವಾಳ ಇತ್ಯಾದಿಗಳು ಬೇಕಾಗುತ್ತವೆ.
ಕರ್ನಾಟಕದ ರೈಲು ಮಾರ್ಗಗಳನ್ನು ಗಮನಿಸಿದಾಗ ಬಹಳಷ್ಟು ನಗರಗಳು ರೈಲುಮಾರ್ಗಗಳನ್ನು ಹೊಂದಿದ್ದರೂ ಓಡುತ್ತಿರುವ ರೈಲುಗಳು ಮಾತ್ರ ಹೊರರಾಜ್ಯಗಳಿಗೆ ಸಂಪರ್ಕ ಕಲ್ಪಿಸುವಂಥವೇ ಹೆಚ್ಚಾಗಿವೆ. ಇದರಿಂದ ಕರ್ನಾಟಕದ ನಿವಾಸಿಗಳು ಕರ್ನಾಟಕದೊಳಗಿನ ಪ್ರಯಾಣಕ್ಕೂ ಹೊರ ರಾಜ್ಯಗಳಿಗೆ ಹೋಗುವ ಅಥವಾ ಹೊರ ರಾಜ್ಯಗಳಿಂದ ಬರುವ ರೈಲುಗಳನ್ನೇ ಅನಿವಾರ್ಯವಾಗಿ ಅವಲಂಬಿಸಬೇಕಾಗಿದೆ. ಅವುಗಳೂ ಸಹ ಕೆಲವೇ ಮಾರ್ಗಗಳಿಗೆ ಸೀಮಿತವಾಗಿದ್ದು, ರೈಲು ನಿಲ್ದಾಣಗಳನ್ನು ಹೊಂದಿದ ನಗರಗಳಿಗೆ ಪ್ರಯಾಣಿಸು ವಾಗಲೂ ರಸ್ತೆ ಸಾರಿಗೆಯನ್ನು ಅವಲಂಬಿಸಬೇಕಾಗಿದೆ. ಈಗ ಬಸ್ ಪ್ರಯಾಣದರ ರೈಲು ಪ್ರಯಾಣದರಕ್ಕಿಂತಲೂ ಮೂರು ಪಟ್ಟು ಹೆಚ್ಚಾಗಿದ್ದು, ಇದರಿಂದ ರೈಲು ಸಂಪರ್ಕ ಹೊಂದಿರುವ ನಗರಗಳ ನಡುವೆ ದಟ್ಟಣೆ ಹೆಚ್ಚಾಗಿ 5-6 ಗಂಟೆಗಳಷ್ಟು ಸಮಯ ನಿಂತು ಪ್ರಯಾಣ ಮಾಡುವ ಪರಿಸ್ಥಿತಿಯಿದೆ. ಧಾರವಾಡದಿಂದ ಬೆಂಗಳೂರಿಗೆ ಚಲಿಸುವ ಇಂಟರ್‌ಸಿಟಿ ಎಕ್ಸ್‌ಪ್ರೆಸ್ ರೈಲು ದಾವಣಗೆರೆ ತಲುಪುವಷ್ಟರಲ್ಲಿ ಭರ್ತಿಯಾಗಿರುತ್ತದೆ. ಟಿಕೆಟ್ ಪಡೆದವರು ಅನಿವಾರ್ಯವಾಗಿ ದಾವಣಗೆರೆಯಿಂದ ಬೆಂಗಳೂರು ವರೆಗೂ ನಿಂತುಕೊಂಡೇ ಪ್ರಯಾಣಿಸುವಂಥಾ ಪರಿಸ್ಥಿತಿಯಿದೆ.
ರಾಜ್ಯದ ಕೆಲವು ಪ್ರಮುಖ ನಗರಗಳಿಂದ ಹೊರಡುವ ರೈಲುಗಳನ್ನು ಗಮನಿಸಿದಾಗ ಹೆಚ್ಚು ರೈಲುಗಳು ಹೊರ ರಾಜ್ಯಗಳಿಗೆ ಹೊರಡುತ್ತಿರುವುದು ಕಂಡುಬರುತ್ತದೆ. ಬೆಳಗಾವಿಯಿಂದ ಒಟ್ಟು 50 ರೈಲುಗಳು ಹೊರಡುತ್ತಿದ್ದು, ಅವುಗಳಲ್ಲಿ ಎಲ್ಲಾ 50 ರೈಲುಗಳೂ ಅಂತಾರಾಜ್ಯ ರೈಲುಗಳಾಗಿವೆ. (ಬೆಳಗಾವಿಯಿಂದ ಕರ್ನಾಟಕದ ಯಾವುದೇ ಪ್ರಮುಖ ನಗರವನ್ನು ಸಂಪರ್ಕಿಸುವಂತಹ ಒಂದು ರೈಲನ್ನೂ ಕರ್ನಾಟಕ ಹೊಂದಿಲ್ಲ) ಗುಲಬರ್ಗಾದಿಂದ ಒಟ್ಟು 74 ರೈಲುಗಳು ಹೊರಡುತ್ತಿದ್ದು, ಅವುಗಳಲ್ಲಿ ಎಲ್ಲಾ 74 ರೈಲುಗಳೂ ಅಂತಾರಾಜ್ಯ ರೈಲುಗಳಾಗಿವೆ.  ದಾವಣಗೆರೆಯಿಂದ -62 ರೈಲುಗಳು-41 ಅಂತಾರಾಜ್ಯ.  ಮೈಸೂರು- 43 ರೈಲುಗಳಲ್ಲಿ, 16 ಅಂತಾರಾಜ್ಯ, ಮಂಗಳೂರು-31 ರೈಲುಗಳು -26 ಅಂತಾರಾಜ್ಯ, ಹುಬ್ಬಳ್ಳಿ- 83 ರೈಲುಗಳು- 66 ಅಂತಾರಾಜ್ಯ, ಬೆಂಗಳೂರು ಸಿಟಿ ಜಂಕ್ಷನ್-103 ರೈಲುಗಳು- 62 ಅಂತಾರಾಜ್ಯ ಮತ್ತು ಯಶವಂತಪುರ ಜಂಕ್ಷನ್‌ನಿಂದ 124 ರೈಲುಗಳು ಹೊರಡುತ್ತಿದ್ದು, ಅವುಗಳಲ್ಲಿ 80 ರೈಲುಗಳು ಅಂತಾರಾಜ್ಯ ರೈಲುಗಳಾಗಿವೆ.
ಈಗಿರುವ ರೈಲುಮಾರ್ಗಗಳ ಮೂಲಕವೇ ಕರ್ನಾಟಕದ ಬಹಳಷ್ಟು ನಗರಗಳಿಗೆ ಉತ್ತಮ ರೈಲು ಸಂಪರ್ಕ ಒದಗಿಸಲು ಅವಕಾಶಗಳಿವೆ:
1)ಚಿಕ್ಕಮಗಳೂರು ಜಿಲ್ಲಾ ಕೇಂದ್ರವಾಗಿದ್ದು, ಇಲ್ಲಿಗೆ ಕಡೂರು ಜಂಕ್ಷನ್ ಚಿಕ್ಕಮಗಳೂರು ನಡುವೆ ಏಕಮಾತ್ರ ಪ್ಯಾಸೆಂಜರ್ ರೈಲು ಚಲಿಸುತ್ತಿದೆ. ವಿಶ್ವವಿಖ್ಯಾತ ಧರ್ಮಸ್ಥಳ ಮತ್ತು ಸುಬ್ರಹ್ಮಣ್ಯ ಕ್ಷೇತ್ರಗಳು ಚಿಕ್ಕಮಗಳೂರಿನ ಸಮೀಪದಲ್ಲಿರುವುದರಿಂದ ಅಲ್ಲಿಂದ ರಾಜ್ಯದ ಪ್ರಮುಖ ನಗರಗಳಿಗೆ ರೈಲುಗಳನ್ನು ಪ್ರಾರಂಭಿಸಿದಲ್ಲಿ ಪ್ರಯಾಣಿಕರ ಕೊರತೆಯಂತೂ ಉಂಟಾಗುವುದಿಲ್ಲ. ಚಿಕ್ಕಮಗಳೂರಿನಿಂದ ಅನೇಕ ರೈಲುಗಳನ್ನು ಈ ರೀತಿ ಓಡಿಸಿ ಕರ್ನಾಟಕದ ನಿವಾಸಿಗಳಿಗೆ ಅನುಕೂಲ ಮಾಡಿಕೊಡಬಹುದು. 1) ಚಿಕ್ಕಮಗಳೂರು-ಕಡೂರು-ಅರಸಿಕೆರೆ-ಹಾಸನ ಮೈಸೂರು-ಚಾಮರಾಜನಗರ 2) ಚಿಕ್ಕಮಗಳೂರು-ಕಡೂರು -ಬೀರೂರು-ತರೀಕೆರೆ- ಭದ್ರಾವತಿ- ಶಿವಮೊಗ್ಗ- ತಾಳಗುಪ್ಪ  3) ಚಿಕ್ಕಮಗಳೂರು-ಕಡೂರು-ಬೀರೂರು- ಚಿಕ್ಕಜಾಜೂರು- ಚಿತ್ರದುರ್ಗ- ಚಳ್ಳಕೆರೆ-ಬಳ್ಳಾರಿ-ಗುಂತಕಲ್-ರಾಯಚೂರು-ಗುಲ್ಬರ್ಗಾ (ಬೀದರ್ ಗುಲ್ಬರ್ಗಾ ಮಾರ್ಗ ಪೂರ್ಣಗೊಂಡ ಬಳಿಕ ಇದನ್ನು ಬೀದರ್‌ವರೆಗೂ ವಿಸ್ತರಿಸಬಹುದು) 4) ಚಿಕ್ಕಮಗಳೂರು-ಕಡೂರು-ಬೀರೂರು-ದಾವಣಗೆರೆ-ಹರಿಹರ-ಹಾವೇರಿ-ಹುಬ್ಬಳ್ಳಿ-ಧಾರವಾಡ-ಬೆಳಗಾವಿ 5) ಚಿಕ್ಕಮಗಳೂರು-ಕಡೂರು- ಬೀರೂರು -ದಾವಣಗೆರೆ-ಹರಿಹರ-ಹರಪನಹಳ್ಳಿ-ಕೊಟ್ಟೂರು-ಹೊಸಪೇಟೆ-ಬಳ್ಳಾರಿ 6) ಚಿಕ್ಕಮಗಳೂರು-ಕಡೂರು-ಬೀರೂರು-ದಾವಣಗೆರೆ-ಹರಿಹರ-ಹಾವೇರಿ-ಹುಬ್ಬಳ್ಳಿ-ಗದಗ-ಬಾಗಲಕೋಟೆ- ಬಿಜಾಪುರ 7) ಚಿಕ್ಕಮಗಳೂರು-ಕಡೂರು-ಅರಸಿಕೆರೆ-ತುಮಕೂರು-ಬೆಂಗಳೂರು 8) ಚಿಕ್ಕಮಗಳೂರು-ಕಡೂರು-ಅರಸಿಕೆರೆ-ಹಾಸನ-ಸಕಲೇಶಪುರ-ಮಂಗಳೂರು-ಕಾರವಾರ
2) ಹುಬ್ಬಳ್ಳಿಯು ನೈಋತ್ಯ ರೈಲೈಯ ಕೇಂದ್ರ ಸ್ಥಾನವಾಗಿದ್ದು, ಕರ್ನಾಟಕಕ್ಕೆ ಪ್ರತ್ಯೇಕ ವಲಯ ಬೇಕೆಂಬ ಉದ್ದೇಶದಿಂದ ಸ್ಥಾಪನೆಯಾಗಿದ್ದರೂ ಇಲ್ಲಿಂದ ಕರ್ನಾಟಕದ ಎಲ್ಲಾ ಭಾಗಗಳಿಗೆ ರೈಲುಗಳಿಲ್ಲ. ಹುಬ್ಬಳ್ಳಿ ಮೂಲಕ ಹೊಸದಾಗಿ ಈ ಮಾರ್ಗಗಳಲ್ಲಿ ರೈಲುಗಳನ್ನು ಓಡಿಸಲು ಅವಕಾಶವಿದೆ. 1) ಬೆಳಗಾವಿ-ಧಾರವಾಡ-ಹುಬ್ಬಳ್ಳಿ-ಹಾವೇರಿ-ಹರಿಹರ-ದಾವಣಗೆರೆ-ಚಿಕ್ಕಜಾಜೂರು-ಚಿತ್ರದುರ್ಗ-ಚಳ್ಳಕೆರೆ 2) ಬೆಳಗಾವಿ-ಧಾರವಾಡ-ಹುಬ್ಬಳ್ಳಿ-ಹಾವೇರಿ-ಹರಿಹರ-ದಾವಣಗೆರೆ-ಅರಸಿಕೆರೆ-ಹಾಸನ-ಸಕಲೇಶಪುರ-ಮಂಗಳೂರು 3) ಬೆಳಗಾವಿ-ಧಾರವಾಢ-ಹುಬ್ಬಳ್ಳಿ-ಹಾವೇರಿ-ಹರಿಹರ-ದಾವಣಗೆರೆ-ಚಿಕ್ಕಜಾಜೂರು-ಬೀರೂರು-ತರೀಕೆರೆ-ಭದ್ರಾವತಿ-ತಾಳಗುಪ್ಪ 4) ಧಾರವಾಡದಿಂದ ಮೈಸೂರುವರೆಗೆ ಹಾಲಿ ಇರುವ ರೈಲನ್ನು ಬೆಳಗಾವಿಯಿಂದ ಚಾಮರಾಜನಗರದವರೆಗೆ ವಿಸ್ತರಿಸಬಹುದು. 5) ಹುಬ್ಬಳ್ಳಿಯಿಂದ ವಾಸ್ಕೊಗೆ ಇರುವ ರೈಲುಗಳನ್ನು ಕೊಂಕಣ ರೈಲ್ವೆ ಮೂಲಕ ಕಾರವಾರ-ಮಂಗಳೂರುವರೆಗೆ ವಿಸ್ತರಿಸಬಹುದು.
3)ಚಿತ್ರದುರ್ಗವು ಅತ್ಯಂತ ಹಳೆಯ ರೈಲು ನಿಲ್ದಾಣವಾಗಿದ್ದರೂ ಅದರ ಪ್ರಯೋಜನವನ್ನು ರಾಜ್ಯದ ಬಹಳಷ್ಟು ಪ್ರದೇಶಗಳ ಜನರು ಪಡೆಯಲು ಸಾಧ್ಯವಾಗುತ್ತಿಲ್ಲ. ಚಿತ್ರದುರ್ಗದಿಂದ ಬೆಂಗಳೂರು, ಬಳ್ಳಾರಿ ಮತ್ತು ಹರಿಹರಕ್ಕೆ ಮಾತ್ರ ಅತಿ ಕಡಿಮೆ ಪ್ರಮಾಣದಲ್ಲಿ ರೈಲುಗಳಿವೆ. ಇಲ್ಲಿಂದ ಒದಗಿಸಬಹುದಾದ ರೈಲುಗಳೆಂದರೆ, 1) ಚಿತ್ರದುರ್ಗ-ಚಳ್ಳಕೆರೆ-ಬಳ್ಳಾರಿ-ಹೊಸಪೇಟೆ 2) ಚಿತ್ರದುರ್ಗ-ಚಿಕ್ಕಜಾಜೂರು-ದಾವಣಗೆರೆ-ಹರಿಹರ-ಹರಪನಹಳ್ಳಿ-ಕೊಟ್ಟೂರು-ಹೊಸಪೇಟೆ 3) ಚಿತ್ರದುರ್ಗ-ಚಿಕ್ಕಜಾಜೂರು- ಬೀರೂರು-ಅರಸಿಕೆರೆ-ಹಾಸನ- ಸಕಲೇಶಪುರ-ಮಂಗಳೂರು 4) ಚಿತ್ರದುರ್ಗ-ಚಿಕ್ಕಜಾಜೂರು-ಬೀರೂರು-ಅರಸಿಕೆರೆ-ಹಾಸನ- ಮೈಸೂರು 5) ಚಿತ್ರದುರ್ಗ-ಚಿಕ್ಕಜಾಜೂರು-ಬೀರೂರು-ತರೀಕೆರೆ-ಭದ್ರಾವತಿ-ಶಿವಮೊಗ್ಗ-ತಾಳಗುಪ್ಪ 4)ಬಳ್ಳಾರಿಯಿಂದ ರಾಜ್ಯದ ಹುಬ್ಬಳ್ಳಿ ಮಾರ್ಗದಲ್ಲಿ ಮಾತ್ರ ರೈಲುಗಳ ಸಂಚಾರವಿದೆ. 1) ಬಳ್ಳಾರಿಯಿಂದ ಚಿತ್ರದುರ್ಗ ಮೂಲಕ ಬೆಂಗಳೂರು, ಚಿಕ್ಕಮಗಳೂರು, ಮಂಗಳೂರು, ಮೈಸೂರು, ಚಾಮರಾಜನಗರ ಮುಂತಾದ ನಗರಗಳಿಗೆ ರೈಲು ಸಂಚಾರ ಪ್ರಾರಂಭಿಸಬಹುದು. 2) ಬಳ್ಳಾರಿ-ಹೊಸಪೇಟೆ-ಕೊಟ್ಟೂರು-ಹರಿಹರ ಮೂಲಕವೂ ಚಿಕ್ಕಮಗಳೂರು, ಮಂಗಳೂರು, ಶಿವಮೊಗ್ಗ, ಮೈಸೂರು, ಚಾಮರಾಜನಗರ ಮುಂತಾದ ನಗರಗಳಿಗೆ ರೈಲು ಸಂಚಾರ ಪ್ರಾರಂಭಿಸಬಹುದು. 3) ಬಳ್ಳಾರಿ-ಹೊಸಪೇಟೆ-ಗದಗ-ಬಾಗಲಕೋಟೆ-ಬಿಜಾಪುರ
3)ಬೆಳಗಾವಿಯಿಂದ ಕರ್ನಾಟಕಕ್ಕೇ ಮೀಸಲಾದ ರೈಲುಗಳೇ ಹೊರಡದಿರುವುದರಿಂದ ಬೆಳಗಾವಿಯಿಂದ ಹುಬ್ಬಳ್ಳಿ ಮಾರ್ಗವಾಗಿ ಬಳ್ಳಾರಿ, ಚಿತ್ರದುರ್ಗ, ಮಂಗಳೂರು, ಚಿಕ್ಕಮಗಳೂರು, ಮೈಸೂರು-ಚಾಮರಾಜನಗರ, ಶಿವಮೊಗ್ಗ ಮುಂತಾದ ನಗರಗಳಿಗೆ ರೈಲುಗಳನ್ನು ಪ್ರಾರಂಭಿಸಬಹುದು.
5)ಬಿಜಾಪುರದಿಂದ ಬಳ್ಳಾರಿ, ಬೆಳಗಾವಿ, ಚಿಕ್ಕಮಗಳೂರು, ಮಂಗಳೂರು, ಶಿವಮೊಗ್ಗ, ಮೈಸೂರು, ಚಾಮರಾಜನಗರಗಳಿಗೆ ರೈಲುಗಳನ್ನು ಪ್ರಾರಂಭಿಸಬಹುದು.
6) ಶ್ರವಣಬೆಳಗೊಳಕ್ಕೆ ರೈಲು ಸಂಪರ್ಕ ಇದೆಯೆಂಬ ವಿಷಯವೇ ಹಾಸನ ಹೊರತುಪಡಿಸಿ ಕರ್ನಾಟಕದ ಇತರ ಪ್ರದೇಶಗಳ ನಿವಾಸಿಗಳಿಗೆ ಮರೆತುಹೋಗಿರಬಹುದು. 1) ಶ್ರವಣಬೆಳಗೊಳ-ಹಾಸನ-ಅರಸಿಕೆರೆ-ತುಮಕೂರು-ಬೆಂಗಳೂರು 2) ಶ್ರವಣಬೆಳಗೊಳ-ಹಾಸನ-ಮೈಸೂರು-ಚಾಮರಾಜನಗರ 3) ಶ್ರವಣಬೆಳಗೊಳ-ಹಾಸನ-ಸಕಲೇಶಪುರ-ಮಂಗಳೂರು 4) ಶ್ರವಣಬೆಳಗೊಳ-ಹಾಸನ-ಅರಸಿಕೆರೆ-ಕಡೂರು-ಬೀರೂರು-ಚಿಕ್ಕಜಾಜೂರು-ಚಿತ್ರದುರ್ಗ-ಚಳ್ಳಕೆರೆ-ಬಳ್ಳಾರಿ 5)ಶ್ರವಣಬೆಳಗೊಳ-ಹಾಸನ-ಅರಸಿಕೆರೆ-ಕಡೂರು-ಬೀರೂರು-ಚಿಕ್ಕಜಾಜೂರು-ದಾವಣಗೆರೆ-ಹರಿಹರ-ಹರಪನಹಳ್ಳಿ-ಕೊಟ್ಟೂರು-ಹೊಸಪೇಟೆ-ಬಳ್ಳಾರಿ-ಗುಂತಕಲ್- ರಾಯಚೂರು-ಗುಲ್ಬರ್ಗಾ 6) ಶ್ರವಣಬೆಳಗೊಳ-ಹಾಸನ-ಅರಸಿಕೆರೆ-ಕಡೂರು-ಬೀರೂರು-ಚಿಕ್ಕಜಾಜೂರು-ದಾವಣಗೆರೆ-ಹರಿಹರ-ಹಾವೇರಿ-ಹುಬ್ಬಳ್ಳಿ-ಬೆಳಗಾವಿ 7) ಶ್ರವಣಬೆಳಗೊಳ-ಹಾಸನ-ರಸಿಕೆರೆ-ಕಡೂರು-ಬೀರೂರು-ಚಿಕ್ಕಜಾಜೂರು-ದಾವಣಗೆರೆ-ಹರಿಹರ-ಹಾವೇರಿ-ಹುಬ್ಬಳ್ಳಿ-ಗದಗ-ಬಾಗಲಕೋಟೆ-ಬಿಜಾಪುರ
8)ಚಾಮರಾಜನಗರದಿಂದಲೂ ರಾಜ್ಯದ ಪ್ರಮುಖ ನಗರಗಳಿಗೆ ರೈಲು ಸಂಪರ್ಕ ಒದಗಿಸುವ ಮೂಲಕ ಆ ಪ್ರದೇಶದ ಅಭಿವೃದ್ಧಿಗೆ ಸಹಾಯಕವಾಗಬಹುದು. 1) ಚಾಮರಾಜನಗರ-ಮೈಸೂರು-ಹಾಸನ-ಸಕಲೇಶಪುರ-ಮಂಗಳೂರು-ಕಾರವಾರ, 2) ಚಾಮರಾಜನಗರ-ಮೈಸೂರು-ಮಂಡ್ಯ-ಬೆಂಗಳೂರು-ಕೋಲಾರ3) ಚಾಮರಾಜನಗರ ಮೈಸೂರು-ಹಾಸನ-ಅರಸಿಕೆರೆ - ಚಿಕ್ಕಜಾಜೂರು-ಚಿತ್ರದುರ್ಗ- ಚಳ್ಳಕೆರೆ-ಬಳ್ಳಾರಿ 4) ಚಾಮರಾಜನಗರ-ಮೈಸೂರು-ಹಾಸನ-ಅರಸಿಕೆರೆ-ಚಿಕ್ಕಜಾಜೂರು-ದಾವಣಗೆರೆ-ಹರಿಹರ-ಕೊಟ್ಟೂರು-ಹೊಸಪೇಟೆ
ಈ ರೀತಿ ರಾಜ್ಯದ ಎಲ್ಲಾ ಭಾಗಗಳನ್ನು ಸಂಪರ್ಕಿಸುವ ರೈಲುಗಳ ಸೌಲಭ್ಯ ಕರ್ನಾಟಕದ ನಿವಾಸಿಗಳಿಗೆ ದೊರೆಯಬೇಕಾಗಿದೆ.  
ಹೊಸ ಮಾರ್ಗಗಳು ಪೂರ್ಣಗೊಂಡ ನಂತರ ಅಲ್ಲಿಂದ ಹತ್ತಿರದ ಜಂಕ್ಷನ್‌ಗೆ ಒಂದು ಪ್ಯಾಸೆಂಜರ್ ರೈಲು ಮಾತ್ರ ಪ್ರಯಾಣ ಪ್ರಾರಂಭಿಸಿ ಜನರ ಮೂಗಿಗೆ ತುಪ್ಪ ಹಚ್ಚುವಂಥಾ ರೈಲ್ವೆ ಅಧಿಕಾರಿಗಳ ಮನೋಭಾವನೆ ಬದಲಾಗಬೇಕು. ರೈಲ್ವೆ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಹರಿಹರದಿಂದ ಕೊಟ್ಟೂರಿಗೆ ಒಂದೇ ಒಂದು ಪ್ಯಾಸೆಂಜರ್ ರೈಲು ಸೌಲಭ್ಯವಿದೆ. 65 ಕಿ.ಮೀ. ಪ್ರಯಾಣಿಸಲು ಮೂರೂವರೆ ಗಂಟೆಗಳ ಸಮಯ ನಿಗದಿಪಡಿಸಲಾಗಿದೆ. ಬಸ್‌ಗಳಲ್ಲಿ ಒಂದೂವರೆ ಗಂಟೆ ಪ್ರಯಾಣವಷ್ಟೆ! ಹರಿಹರದಿಂದ ಕೊಟ್ಟೂರಿನ ಬದಲು ಹೊಸಪೇಟೆಗಾದರೆ ದಿನಕ್ಕೆ 10 ರೈಲುಗಳ ಸೌಲಭ್ಯ ಒದಗಿಸಿದರೂ ಪ್ರಯಾಣಿಸುವಷ್ಟು ಪ್ರಯಾಣಿಕರಿರುತ್ತಾರೆ. ಆದರೆ ಕೊಟ್ಟೂರಿಗೆ ಹೋಗುವ ಏಕಮಾತ್ರ ರೈಲು ಸಹಾ ಮುಕ್ಕಾಲು ಪಾಲು ಖಾಲಿಯಾಗಿಯೇ ಚಲಿಸುತ್ತಿರುತ್ತದೆ! ಚಿಕ್ಕಮಗಳೂರಿನಿಂದ ಕಡೂರಿನ ರೈಲುಮಾರ್ಗದ ಪರಿಸ್ಥಿತಿಯೂ ಇದೇ ರೀತಿಯಾಗಿದೆ.
ಈಗ ಕರ್ನಾಟಕದ ಸದಾನಂದಗೌಡರೇ ರೈಲ್ವೆ ಮಂತ್ರಿಗಳಾಗಿದ್ದಾರೆ. ಕರ್ನಾಟಕದ ಪ್ರತಿಯೊಂದು ಭಾಗಕ್ಕೂ ಕರ್ನಾಟಕದ ಪ್ರಮುಖ ನಗರಗಳಿಂದಲೇ ಹೊರಡುವಂತೆ ರೈಲುಗಳನ್ನು ಘೋಷಿಸುವ ಕ್ರಮವನ್ನು ಮುಂಬರುವ ರೈಲ್ವೆ ಮುಂಗಡಪತ್ರದಲ್ಲಿ ಕೈಗೊಳ್ಳಲಿ. ಒಂದೇ ವರ್ಷದಲ್ಲಿ ಈ ಎಲ್ಲಾ ಮಾರ್ಗಗಳ ಘೋಷಿಸುವುದು ತೊಂದರೆಯಾದರೆ, ತಮ್ಮ 5 ವರ್ಷದ ಅವಧಿಯಲ್ಲಿ ಈ ಎಲ್ಲಾ ಮಾರ್ಗಗಳಲ್ಲಿ ರೈಲುಗಳನ್ನು ಘೋಷಿಸುವಂತೆ ಯೋಜನೆಯನ್ನಾದರೂ ಹಾಕಿಕೊಳ್ಳಲಿ. ರೈಲ್ವೆಯ ಉನ್ನತ ಅಧಿಕಾರಿಗಳು ಹೊರಗಿನವರಾಗಿರುವುದು ಸದಾನಂದ ಗೌಡರ ಕಾರ್ಯವನ್ನು ಕಠಿಣಗೊಳಿಸಬಹುದು. ಆದರೆ ಅದನ್ನು ಮೀರಿಯೂ ಕ್ರಮ ಕೈಗೊಳ್ಳುವ ಛಾತಿಯನ್ನು ಅವರು ತೋರಲಿ.

-ಜಯಶ್ರೀ ಎಲ್. ಜವಳಿ
ದಾವಣಗೆರೆ


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.