ಭಾರತವನ್ನು ಒಗ್ಗೂಡಿಸಿರುವ ಶಕ್ತಿ ಯಾವುದು?
ಪ್ರೊ.ಎಮ್.ಎಮ್.ಕಲಬುರ್ಗಿಯವರ ಹೇಳಿಕೆ "ದೇವರ ಶಕ್ತಿ ಬೋಗಸ್" ಎಂಬ ಶಿರ್ಷಿಕೆಯೊಂದಿಗೆ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಅದಕ್ಕೆ ಅನೇಕ ವ್ಯಕ್ತಿಗಳಿಂದ ಮತ್ತು ಸಂಘಟನೆಗಳಿಂದ ವ್ಯಾಪಕ ವಿರೋಧ ವ್ಯಕ್ತವಾದದ್ದು ಈಗ ಎಲ್ಲರಿಗೂ ತಿಳಿದ ಸಂಗತಿ.
ದೇವತೆಗಳ ಮೂರ್ತಿ ದೇವತೆಗಳ ಪ್ರತೀಕ. ನಮ್ಮ ರಾಷ್ಟ್ರಧ್ವಜ ನಮ್ಮ ರಾಷ್ಟ್ರದ ಪ್ರತೀಕ. ಆ ಪ್ರತೀಕಕ್ಕೆ ನೀಡುವ ಗೌರವ - ಅವಮಾನಗಳೆರಡೂ ಆ ದೇವತೆಯ ಗೌರವ - ಅವಮಾನಗಳೇ ಆಗುತ್ತವೆ. ರಾಷ್ಟ್ರಧ್ವಜಕ್ಕೆ ಅವಮಾನವಾದಾಗ ನಾವು ಸಹಿಸುತ್ತೇವೆಯೇ? ನಮ್ಮ ಕಾನೂನು ವ್ಯವಸ್ಥೆ ಸಹಿಸುತ್ತದೆಯೇ? ಕಲಬುರ್ಗಿಯವರು ತಾವು ದೇವರನ್ನು ಒಪ್ಪುತ್ತೇವೆ. ಆದರೆ ದೇವರಮೂರ್ತಿಯನ್ನು ಒಪ್ಪುವುದಿಲ್ಲವೆಂದಿದ್ದಾರೆ. ಇದೊಂದು ವಿಚಿತ್ರವಾದ ಮಾತು - "ನಾನು ನಿನ್ನನ್ನು ಒಪ್ಪುತ್ತೇನೆ. ನಿನ್ನ ಶರೀರವನ್ನಲ್ಲ" ಎಂದ ಹಾಗೆ. ದೇವರನ್ನು ಮೂರ್ತಿಗಷ್ಟೇ ಸೀಮಿತ ಎಂಬುದಾಗಿ ಭಾವಿಸುವುದು ತಪ್ಪು ಎಂಬುದಾಗಿ ಭಗವದ್ಗೀತೆಯೇ ಹೇಳುತ್ತದೆ (ಅಧ್ಯಾಯ 18.12) ಆದರೆ ದೇವರಲ್ಲಿ ಶ್ರದ್ಧೆ, ಭಕ್ತಿ ಮತ್ತು ಏಕಾಗ್ರತೆಗಳು ಬೆಳೆಯಲು ಮೂತರ್ತಿಗಳು ಬೇಕಾಗುತ್ತವೆ. ಅಮೂರ್ತವಾದ ದೇವರಲ್ಲಿ ಒಮ್ಮೆಲೆ ಶ್ರದ್ಧೆ ಹಾಗೂ ಭಕ್ತಿ ಉಂಟಾಗಲು ಸಾಧ್ಯವೇ ಇಲ್ಲ. ಇನ್ನು ಭಕ್ತಿಯಂತೂ ಬರಲು ಸುತರಾಂ ಸಾಧ್ಯವೇ ಇಲ್ಲ. ಮೂರ್ತಿಪೂಜೆಗೆ ಮಹತ್ವ ಕೊಟ್ಟಿರುವುದರಿಂದಲೇ ಭಾರತ ದೇಶದಲ್ಲಿ ದೇವಭಕ್ತಿ ಅತಿಶಯವಾಗಿ ಬೆಳೆದಿದೆ. ಕಬೀರದಾಸರು, ಕನಕದಾಸರು, ಪುರಂದರದಾಸರು, ಆಂಡಾಳ್, ಸಂತ ಜ್ಞಾನೇಶ್ವರರು, ನಾರಾಯಣಗುರು ಮುಂತಾದ ಎಲ್ಲಾ ಮಹಾತ್ಮರು ಕೂಡಾ ದೇವರ ಒಂದೊಂದು ಮೂರ್ತಿಯಲ್ಲಿ ಭಕ್ತಿ ಇಟ್ಟವರೇ ಆಗಿದ್ದಾರೆ.
ಕಲಬುರ್ಗಿಯಂಥವರು ತಮ್ಮ ಅನಿಸಿಕೆಯನ್ನು ಹೇಳುವಾಗ ಸಮಾಜದ ಬಗ್ಗೆ ಜವಾಬ್ದಾರಿಯುತವಾಗಿ ಗಮನ ಇಡಬೇಕು. ಮಾನಸಿಕಸ್ವಾಸ್ಥ್ಯ ಬಹಳ ಮುಖ್ಯವಾದದ್ದು. ಇವತ್ತು ಹೆಚ್ಚಿನ ಜನರ ಮಾನಸಿಕಸ್ವಾಸ್ಥ್ಯ ಚೆನ್ನಾಗಿಲ್ಲದಿದ್ದರಿಂದಲೇ ಮಧುಮೇಹ, ರಕ್ತದೊತ್ತಡದಂತಹ ಖಾಯಿಲೆಗಳು ಜಾಸ್ತಿಯಾಗಿವೆ. ನಾಸ್ತಿಕತೆಯಿಂದ ಅಥವಾ ಅರೆನಾಸ್ತಿಕತೆಯಿಂದ(ಕಲಬುರ್ಗಿಯವರು ದೇವರನ್ನು ಒಪ್ಪುತ್ತೇನೆ, ದೇವರ ಮೂರ್ತಿಯನ್ನಲ್ಲ ಎಂದಿದ್ದರಿಂದ ಅವರು ಅರೆನಾಸ್ತಿಕರು)ಜನರ ಮಾನಸಿಕ ಸ್ವಾಸ್ಥ್ಯ ಕಾಪಾಡಲು ಸಾಧ್ಯವೇ? ಆಸ್ತಿಕತೆಯಿಂದ ಮೂರ್ತಿಧ್ಯಾನದಿಂದ ಜನರ ಮಾನಸಿಕ ಸ್ವಾಸ್ಥ್ಯ ಕಾಪಾಡಿದ ಉದಾಹರಣೆಗಳು ಸಾವಿರಾರು ಇವೆ. ನಾಸ್ತಿಕತೆಯಿಂದ ಕಾಪಾಡಿದ ಉದಾಹರಣೆಗಳೆಷ್ಟಿವೆ? ಆಸ್ತಿಕತೆಯಿಂದ, ಮೂರ್ತಿಪೂಜೆಯಿಂದ ಸಮಾಜವನ್ನು ಕಟ್ಟಲು ಸಾಧ್ಯವಿದೆ. ತಿಲಕರು ಗಣೇಶೋತ್ಸವವನ್ನು ಪ್ರಚುರ ಪಡಿಸಿದ್ದರಿಂದ ಎಲ್ಲ ಜನರೂ ಸಾರ್ವಜನಿಕವಾಗಿ ಗಣೇಶೋತ್ಸವವನ್ನು ಆಚರಿಸುವ ಮೂಲಕ ಸಮಾಜ ಒಗ್ಗಟ್ಟಾಗುವುದು ಕಂಡು ಬಂದಿದೆ. ನಾಸ್ತಿಕತೆಯಿಂದ, ಅರೆನಾಸ್ತಿಕತೆಯಿಂದ ಇದು ಸಾಧ್ಯವೇ?
ನಮ್ಮ ದೇಶದ ಆಸ್ತಿಕತೆಯು ಅನೇಕ ಒಳ್ಳೆಯ ಬೆಳವಣಿಗೆಗಳಿಗೆ ಕಾರಣವಾಗಿದೆ. ಅನೇಕ ಕಲೆಗಳು ಹುಟ್ಟಿಕೊಂಡು ಭಾರತದ ಸಂಸ್ಕೃತಿಯನ್ನು ಶ್ರೀಮಂತಗೊಳಿಸಿವೆ. ಶಿಲ್ಪಕಲೆ, ನಾಟ್ಯ, ಚಿತ್ರಕಲೆ, ಸಂಗೀತ, ಜಾನಪದ ಕಲೆಗಳು ಆಸ್ತಿಕತೆ ಅಥವಾ ಮೂರ್ತಿಪೂಜೆಯನ್ನೇ ಅವಲಂಬಿಸಿದೆ. ನಾಸ್ತಿಕತೆಯಿಂದ ಅರೆನಾಸ್ತಿಕತೆಯಿಂದ ಯಾವ ಕಲೆ ಹುಟ್ಟಿಕೊಂಡಿವೆ?
ಗಂಗೆಯನ್ನು ಕುರಿತು ಟೀಕಿಸುವ ಕಲಬುರ್ಗಿಯವರು ಒಂದು ಸಂಗತಿಯನ್ನು ಗಮನದಲ್ಲಿಡಬೇಕು. ಇವತ್ತು ಗಂಗೆ ಇಡೀ ಭಾರತದೇಶವನ್ನು ಒಗ್ಗೂಡಿಸುತ್ತಿದ್ದಾಳೆ. ಒಂದು ಮಹಾಕುಂಭ ಮೇಳ ನಡೆದರೆ ಹತ್ತು - ಹನ್ನೆರಡು ಕೋಟಿ ಜನ ಪ್ರಯಾಗದಲ್ಲಿ ಸೇರುತ್ತಾರೆ. ವಿಶ್ವದಲ್ಲಿಯೇ ಇನ್ನಾವ ಉತ್ಸವಗಳಲ್ಲಿಯೂ ಇಷ್ಟು ಪ್ರಮಾಣದ ಜನ ಸೇರುವುದಿಲ್ಲ. ಯಾವ ವೈಯುಕ್ತಿಕ ಆಮಂತ್ರಣವಿಲ್ಲದೇ ಯಾವ ಭೌತಿಕ ಲಾಭದ ಆಸೆಯೂ ಇಲ್ಲದೇ ಇಷ್ಟೊಂದು ಕೋಟಿ ಜನ ಅಲ್ಲಿ ಸೇರುತ್ತಾರಲ್ಲಾ, ಇದು ಯಾವ ಶಕ್ತಿ? ಇದು ಗಂಗೆಯ ಶಕ್ತಿ ಅಲ್ಲವೇ?
ಕಲಬುರ್ಗಿಯವರ ಬಗ್ಗೆ ನಮಗೆ ವೈಯುಕ್ತಿಕವಾಗಿ ಯಾವುದೇ ಅನ್ಯಥಾ ಭಾವನೆಯಿಲ್ಲ. ಅವರು ನಮ್ಮ ಸಂಸ್ಥಾನಕ್ಕೆ(ಮಠಕ್ಕೆ) ಹಿಂದೆ ಬಂದಿದ್ದಾರೆ. ಅವರ ಮಾತು ಮಾಧ್ಯಮಗಳಲ್ಲಿ ಪ್ರಚುರಗೊಂಡಿದ್ದರಿಂದ ಈ ಪ್ರತಿಕ್ರಿಯೆ.
-ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು
ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

