ಚುಟುಕು-ಕುಟುಕು
ಚುಟುಕು-ಕುಟುಕು
ಟ್ಯಾಟು
ಎಡಗಾಲ ಮೇಲಾನೆ, ಬಲಗಾಲ ಮೇಲೆ ಇಲಿ
ಹೊಟ್ಟೆ ಮೇಲೆ ಹದ್ದು, ಕುತ್ತಿಗೆಯ ಹಿಂದೆ ಹುಲಿ
ಹಚ್ಚೆ ಹುಚ್ಚರದೀಗ ದೊಡ್ಡದಿದೆ ಪಾಳಯ
ಇವರ ಕಾಲೇ ಕಂಬ, ಮೈಯೇ ಮೃಗಾಲಯ!
=
ಜಿಪುಣ
ಮೂಗುತಿಯ ಖರ್ಚಾದರೂ
ಉಳಿಯುತ್ತಿತ್ತು ಸಖಿ...
ಆಗಿದಿದ್ದರೆ ನೀ ಶೂರ್ಪನಖಿ!
ಸುದ್ದಿಕತೆ
ಈಕೆ ಆಧುನಿಕ ಗಾಂಧಾ(ಧೀ)ರಿ. ಒಬ್ಬನೇ ಒಬ್ಬ ಗಂಡು ಮಗ. ಆಕೆಯನ್ನು ತಾಯಿಯೆಂದು ಭಾವಿಸುವ ನೂರಾರು ಜನರಿದ್ದರೂ ಅವರನ್ನು ಮಾತ್ರ ಆಕೆ ಚರಣಸೇವಕರಂತೆಯೇ ನೋಡುತ್ತಾಳೆ. ಇದು ಈ ಪೆದ್ದರಿಗೆ ತಿಳಿಯದು. ಹಾಗಾಗೇ ಮುಂದೆ ತನ್ನ ಸಾಮ್ರಾಜ್ಯವನ್ನು ಮುನ್ನಡೆಸುವ ಹಕ್ಕಿರುವುದು ತನ್ನ ಗುಳಿಕೆನ್ನೆಯ ಕುವರನಿಗಷ್ಟೇ ಎನ್ನುವ ಆಕೆಯ ನಿಲುವಿಗೆ 'ನೀವು ಹೇಳಿದ ಹಾಗೆ ಆಗಲಿ ಅಮ್ಮ' ಎಂದು ಈ ಮಕ್ಕಳೆಲ್ಲ ಬಹುಪರಾಕ್ ಹಾಕಿದರು.
ಇನ್ನೇನು ಮಹಾಯುದ್ಧ ಶುರುವಾಗುವುದರಲ್ಲಿತ್ತು. ಈ ನೂರಾರು ಮಕ್ಕಳಲ್ಲಿ ಎಷ್ಟೋ ಜನ ಪರಾಕ್ರಮಿಗಳಿದ್ದರೂ, ಅನುಭವಿಗಳಿದ್ದರೂ ಅವರನ್ನೆಲ್ಲ ಕಡೆಗಣಿಸಿ ಪೇಪರ್ಮೆಂಟು ತಿನ್ನುವ ತನ್ನ ಪಾಪಚ್ಚಿಗೇ ಯುದ್ಧದ ಸಾರಥ್ಯ ವಹಿಸಿಕೊಟ್ಟಳು. ಒಲ್ಲೆ ಒಲ್ಲೆ ಎನ್ನುತ್ತಲೇ ಬಿಲ್ಲು ಹಿಡಿದು ಒಲ್ಲದ ಮನಸ್ಸಿನಿಂದಲೇ ಯುವರಾಜ ಯುದ್ಧಕ್ಕೆ ಸಿದ್ಧನಾದ. ಅಷ್ಟರಲ್ಲಿ ಎಲ್ಲಿಂದಲೋ ಉದ್ಭವವಾದ ವ್ಯಕ್ತಿಯೊಬ್ಬ "ನಾನೆಲ್ಲವನ್ನೂ ಗುಡಿಸಿ ಹಾಕುತ್ತೇನೆ" ಎಂದು ಕಸಬರಿಗೆಯಂಥ ಆಯುಧವೊಂದನ್ನು ಹಿಡಿದು ಅಬ್ಬರಿಸತೊಡಗಿದ. ಗಾಂಧೀರಿ ಅವನನನ್ನು ದತ್ತು ಪುತ್ರನನ್ನಾಗಿ ಸ್ವೀಕರಿಸಿದಳು.
ವನವಾಸ ಅನುಭವಿಸಿ ಬಂದ ಬಲಿಷ್ಠ ಎದುರಾಳಿಗಳ ಮೇಲೆ ಒಂದೆಡೆಯಿಂದ ದತ್ತುಪುತ್ರ, ಇನ್ನೊಂದೆಡೆಯಿಂದ ಸ್ವಂತ ಪುತ್ರ ಮುಗಿಬಿದ್ದರು. ಯುದ್ಧ ಮುಗಿಯಿತು. ವಿರೋಧಿಗಳು ಕಸಬರಿಗೆ ಕುಮಾರನನ್ನು ಗುಡಿಸಿಗುಂಡಾಂತರ ಮಾಡಿದರು, ಗಾಂಧೀರಿಯ ಸಾಮ್ರಾಜ್ಯಕ್ಕೆ ಗಂಗಾಜಲ ಬಿಟ್ಟರು.
ಇಷ್ಟೆಲ್ಲ ಆದ ನಂತರವೂ ಗಾಂಧೀರಿಗೆ ಪುತ್ರ ವ್ಯಾಮೋಹ ಕಡಿಮೆಯಾಗಲಿಲ್ಲ. ಮುರಿದುಬಿದ್ದ ಸಾಮ್ರಾಜ್ಯವನ್ನು ನಾನು ಮತ್ತು ನನ್ನ ಮಗನೇ ಮುನ್ನಡೆಸಿ ಮುಂದಿನ ಬಾರಿ ದಿಗ್ವಿಜಯಂಗೈಯುತ್ತೇವೆ ಎಂದಳು. ಪೆದ್ದ ಚರಣಸೇವಕರು "ನೀವು ಹೇಳಿದ ಹಾಗೆ ಆಗಲಿ ಅಮ್ಮ" ಎಂದು ಕಾಲಿಗೆರಗಿ, ಕೈ ಮುಗಿದರು!
ಜಗ ಜಾಲಾಟ
ಕಲೆ, ಸಾಹಿತ್ಯ, ಸಂಗೀತವನ್ನೆಲ್ಲ ಹರಾಮ್ ಎನ್ನುವ ತಾಲಿಬಾನಿಗಳು, ದಶಕಗಳಿಂದ ಅಫ್ಗಾನಿಸ್ತಾನದಲ್ಲಿನ ಸಂಗೀತಗಾರರು ಮತ್ತು ಕವಿಗಳನ್ನು ಹಿಂಸಿಸುತ್ತಲೇ ಬಂದಿದ್ದರು. ಇನ್ನು ಮಹಿಳೆಯರಂತೂ ಮನೆಯ ಹೊರಗೆ ಕಾಲಿಡುವಂತಿರಲಿಲ್ಲ. ಯಾರಿಗೇ ಆಗಲಿ, ಹೆಚ್ಚು ಹಿಂಸಿಸುತ್ತಾ ಹೋದರೆ ಒಂದು ದಿನ ಅವರು ತಿರುಗಿಬಿದ್ದೇ ಬೀಳುತ್ತಾರೆ. ಅಲ್ಲೂ ಹೀಗೇ ಆಯಿತು. ಮನೆಯೊಳಗೆ ಅಡಗಿದ್ದ ಮಹಿಳೆಯರು ತಾಲಿಬಾನಿಗಳನ್ನು ಎದುರಿಸಲು ಹೊಸ ಅಸ್ತ್ರವೊಂದನ್ನು ಹುಡುಕಿಕೊಂಡರು. ಅದೇ "ಪಾಶ್ತುವಾನ್ ಪದ್ಯ"! ಪದ್ಯಗಳ ಮೂಲಕ ತಾಲಿಬಾನಿಗಳ ಕ್ರೌರ್ಯಗಳನ್ನು ವಿರೋಧಿಸತೊಡಗಿದರು. ತಮ್ಮ ಮನದಾಳದ ಬಯಕೆಯನ್ನು ಹಂಚಿಕೊಂಡರು. ಅವು ರಹಸ್ಯವಾಗಿ ಎಲ್ಲೆಡೆಯೂ ಹರಿದಾಡತೊಡಗಿದವು. "ಕಾಲಡಿ ಇರಬೇಕಿದ್ದ ಹುಡುಗಿಯರು ಕವಿತೆ ಬರೆದು ತಮ್ಮನ್ನು ಖಂಡಿಸುವುದೆಂದರೇನು?"! ತಾಲಿಬಾನಿಗಳಿಗೆ ಸಹಿಸದಾಯಿತು. ಕವಿತೆ ಬರೆಯುವ ಹೆಣ್ಣುಮಕ್ಕಳನ್ನೆಲ್ಲ ಹುಡುಕಿ ಕೊಲ್ಲತೊಡಗಿದರು. ಆದರೂ ಹೆಣ್ಣುಮಕ್ಕಳು ಜಗ್ಗಲಿಲ್ಲ, ಹುಸಿ ಹೆಸರಲ್ಲಿ ಬರೆದರು, ಎಲ್ಲರೂ ಒಂದೆಡೆ ಸೇರಿ ಕವಿಗೋಷ್ಠಿ ನಡೆಸತೊಡಗಿದರು. 2001ರಲ್ಲಿ ರಾಹಿಲಾ ಎನ್ನುವ ಹೆಸರಿನಲ್ಲಿ ಪದ್ಯಗಳನ್ನು ಬರೆಯುತ್ತಿದ್ದ ಝರ್ಮೀನಾ ಪ್ರೇಮ ಪದ್ಯವೊಂದನ್ನು ಬರೆದು ಗೆಳತಿಗೆ ಫೋನಿನಲ್ಲಿ ಓದುವಾಗ ಮನೆಯವರಿಗೆ ಸಿಕ್ಕಿಬಿದ್ದಳು. ಧರ್ಮಾಂಧ ಮನೆಯವರು ಆಕೆಯನ್ನು ತಾಲಿಬಾನಿಗಳಿಗೆ ಒಪ್ಪಿಸುವುದಾಗಿ ಧಮಕಿ ಹಾಕಿದರು. ಸಹೋದರರು ಚರ್ಮ ಸುಲಿಯುವಂತೆ ಬಡಿದು, ಆಕೆಯ ಪುಸ್ತಕಗಳನ್ನೆಲ್ಲ ಹರಿದುಹಾಕಿದರು. ಅದಾದ ಎರಡೇ ವಾರಗಳಲ್ಲಿ ಆಕೆ ಬೆಂಕಿ ಹಚ್ಚಿಕೊಂಡು ಸತ್ತು ಹೋದಳು!
ಅಮೆರಿಕ ಅಫ್ಘಾನಿಸ್ತಾನಕ್ಕೆ ಲಗ್ಗೆಯಿಟ್ಟ ನಂತರ ತಾಲಿಬಾನಿಗಳ ಪಾರುಪತ್ಯ ಕಡಿಮೆಯಾಗಿತ್ತು. ಯುವತಿಯರೆಲ್ಲರೂ ಸೇರಿಕೊಂಡು ಕಾಬುಲ್ನಲ್ಲಿ ಬಹಿರಂಗವಾಗಿಯೇ 'ಮಹಿಳಾ ಸಾಹಿತ್ಯ ಕೂಟ'ವನ್ನು ಸ್ಥಾಪಿಸಿ ಖುಷಿಪಟ್ಟರು. ಆದರೆ ಈಗ ತನ್ನ ಪಡೆಗಳನ್ನು ವಾಪಸ್ ಕರೆಸಿಕೊಳ್ಳುವ ಬಗ್ಗೆ ಅಮೆರಿಕ ಯೋಚಿಸುತ್ತಿದೆ. ಹೀಗೇನಾದರೂ ಆದರೆ ಕಟ್ಟರ್ಪಂಥಿ ತಾಲಿಬಾನಿಗಳು ಮತ್ತೊಮ್ಮೆ ಅಲ್ಲಿ ಬೆಳೆಯುತ್ತಾರೆ, ರಾಹಿಲಾರಂಥವರ ಮೇಲೆ ಮತ್ತೆ ತಮ್ಮ ದೌರ್ಜನ್ಯವೆಸಗುತ್ತಾರೆ ಎನ್ನುವುದು ಸತ್ಯ. ಏನೇ ಆಗಲಿ ತಾವು ಯಾರಿಗೂ ಹೆದರೆವು ಎನ್ನುವುದನ್ನು ಕಾಬೂಲ್ನ ಮೀನಾ ಎನ್ನುವ ಯುವತಿ ಹೀಗೆ ಬರೆಯುತ್ತಾಳೆ: "ನಮ್ಮ ಜೀವನ ಕಿರಿದಾದಂತೆ, ನೋವುಗಳು ಹೆಚ್ಚಬಹುದು...ಆದರೆ ಭರವಸೆ ತುಂಬಿದ ಹೃದಯದೊಂದಿಗೇ ನಾವು ಸಾಯುತ್ತೇವೆ"!!
ಕೊಳವೆಗೆ ಕಣ್ಣು
ಸಿನೆಮಾ ನಿರ್ದೇಶನ, ಫೋಟೋಗ್ರಾಫಿ, ಆ್ಯಡ್ ಫಿಲಂ ಮೇಕಿಂಗ್ ಬಗ್ಗೆ ಆಸಕ್ತಿ ಇರುವವರು ಎಲ್ಲೆಡೆಯೂ ಇದ್ದಾರೆ. ಆದರೆ ದುಬಾರಿ ಹಣ ತೆತ್ತು ಫಿಲ್ಮ್ ಸ್ಕೂಲ್ಗಳಿಗೆ ಸೇರುವುದು ಎಲ್ಲರಿಗೂ ಸಾಧ್ಯವಿಲ್ಲ. ಹಾಗಾಗಿ, ಸೀನ್ ಕಾಂಪೋಶಿಷನ್ ಹೇಗಿರಬೇಕು, ಲೈಟಿಂಗ್ ಟೆಕ್ನಿಕ್ಸ್ ಹೇಗಿರುತ್ತದೆ, ಅತಿ ಕಡಿಮೆ ದರದಲ್ಲಿ ಸಿನೆಮಾ ತಯಾರಿಸುವುದು ಹೇಗೆ, ಯಾವ ಸಾಫ್ಟವೇರ್ಗಳನ್ನು ಎಡಿಟಿಂಗ್ಗಾಗಿ ಬಳಸಬಹುದು, ಡಾಕ್ಯುಮೆಂಟರಿ ಚಿತ್ರಗಳಿಗೆ ಬೆಳಕಿನ ಸಂಯೋಜನೆ ಹೇಗೆ ಮಾಡಬೇಕು, ಯಾವ್ಯಾವ ಸಿನೆಮಾಗಳಲ್ಲಿ ಯಾವ ರೀತಿಯ ಕೆಮೆರಾ ತಂತ್ರಗಳನ್ನು ಬಳಸಿದ್ದಾರೆ, ಐಫೋನ್ಗಳಲ್ಲೂ ಕಿರುಚಿತ್ರಗಳನ್ನು ನಿರ್ಮಿಸುವುದು ಹೇಗೆ ಎನ್ನುವ ಬಗ್ಗೆ ತಿಳಿದುಕೊಳ್ಳಬೇಕಿದ್ದರೆ ಯೂಟ್ಯೂಬ್ನಲ್ಲಿ ಗದ್ದಲವೆಬ್ಬಿಸಿರುವ 'ಫಿಲ್ಮ್ ರಾಯ್ಟ್' ವೀಡಿಯೋಗಳನ್ನು ವೀಕ್ಷಿಸಬಹುದು. ಮುಫತ್ತು ತರಬೇತಿಗೆ: https://www.youtube.com/user/filmriot ಟೈಪ್ಮಾಡಿ.
ವಿರಾಮ-ಲೋಕಾಭಿರಾಮ
"ನೀವು ಸಾವಿರ ಏಳಿ ಸರ್, ಹೀ ನನ್ ಮಕ್ಳು ಉತ್ತರ ಬಾರತದವರು ಬಂದು ಬೆಂಗಳೂರು ಆಳಾಗೋಯ್ತು, ಸಂಸ್ಕೃತಿನಾ ಸಂಸ್ಕಾರಾನಾ? ಇವ್ರಿಂದಾಗಿ ನಮ್ ಕನ್ನಾಡಾನೂ ಓಯ್ತಾಯಿದೆ.." ಎಂದ ಹಾರ್ನ್ ಒತ್ತಿದ ಆಟೋದವ.
ಮುಂದುವರೆದು, "ಜಿಪುಣ ಮುಂಡೇವು ಸರ್ ಇವೆಲ್ಲಾಡಡಡ, ನಾವು ಮೀಟರ್ ಮೇಲೆ ಒಂದು ಅತ್ ರುಪಾಯಿ ಜಾಸ್ತಿ ಕೇಳಿದ್ರೆ ಹಳ್ತಾವೆ. ನಮ್ ಜನಾ ಅಂಗಲ್ಲ ನೋಡಿ. ಮೊನ್ನೆ ಸಿಲ್ಕ್ ಬೋರ್ಡಿಗೆ ಒಬ್ರನ್ನ ಬಿಟ್ಟೆ, ಕೇಳ್ದೆ ಹೆಕ್ಸಟ್ರಾ ಇಪ್ಪತ್ತು ರುಪಾಯಿ ಜಾಸ್ತಿ ಕೊಟ್ಬುಟ್ರು..." ಎನ್ನುತ್ತಾ ಕನ್ನಡಿಗರ ಮೇಲೆ 'ಎಮ್ಮೆ' ಪಟ್ಟ.
ಮನೆ ಬಂತು. ಇಳಿದವನೇ ಮೀಟರ್ ನೋಡಿ, ಅದರಲ್ಲಿ ತೋರಿಸಿದಷ್ಟು ದುಡ್ಡು ಹೊರತೆಗೆದೆ. "ಇನ್ನ 40 ಕೊಡಿ" ಅಂದ. "ಅಲ್ಲಾ ಮೀಟರ್ರು..." ಎನ್ನುವಷ್ಟರಲ್ಲೇ ಮಾತು ತುಂಡರಿಸಿ, "ಟೈಂ ನೋಡಿ ಸರ್, ಒನಂಡಾಫ್(ಒನ್ ಆ್ಯಂಡ್ ಹಾಫ್)" ಅಂದು ಮುಖ ನೋಡಿದ. ನಾನು ವಾಚು ನೋಡಿದೆ. ಒನಂಡಾಫ್ ಕೊಡುವಷ್ಟು ಟೈಮೇನೂ ಆಗಿರಲಿಲ್ಲ. "ಏ ಇಷ್ಟೇ.." ಎಂದು ಅವನ ಕೈಗೆ ದುಡ್ಡಿಟ್ಟು ನಡೆದೆ. ಸಿಟ್ಟಿನಿಂದ ಆಟೋ ಚಾಲೂ ಮಾಡಿ ಹೊರಡುವಾಗ ತುಸು ಜೋರಾಗಿಯೇ ಗೊಣಗಿದ: "ಹಿಂತ ನನ್ ಮಕ್ಳು ಬಂದೇ ಬೆಂಗಳೂರು ಆಳಾಗೋಯ್ತು"!
ಹಿಂದಿರುಗಿ ನೋಡಿದೆ, ಆಟೋದ ಹಿಂದೆ ಬರೆದಿತ್ತು: "ಕೈ ಮುಗಿದು ಹೇರು"
ಕೈಯಂತೂ ಮುಗಿದೆ, ಏನು ಹೇರಬೇಕೋ ತಿಳಿಯಲಿಲ್ಲ!
-ರಾಘವೇಂದ್ರ ಆಚಾರ್ಯ
raghu.bioastra@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

