

ಚಿಂತಕರ ಚಾವಡಿ, ಬುದ್ಧಿಜೀವಿಗಳ ವೇದಿಕೆ ಎಂದು ಕರೆಸಿಕೊಳ್ಳುವ ರಾಜ್ಯಸಭೆ ಮತ್ತು ವಿಧಾನ ಪರಿಷತ್ ಎಂಬ 'ಮೇಲ್ಮನೆ'ಗಳಿಗೆ ಇಂಥ ದುರ್ಗತಿ ಬರಬಾರದಿತ್ತು.
ಕರ್ನಾಟಕ ವಿಧಾನಸಭೆಯಿಂದ ಈ ಎರಡೂ ಮೇಲ್ಮನೆಗಳಿಗೆ ಆಯ್ಕೆಯಾಗಿರುವ ಕೆಲ ಸದಸ್ಯರನ್ನು ನೋಡಿದಾಗ ಹೀಗೆ ಅನ್ನಿಸದಿರಲು ಸಾಧ್ಯವೇ ಇಲ್ಲ. ಎಂಥೆಂಥವರು ಅಲಂಕರಿಸಿದ ಆಸನಗಳಲ್ಲಿ ಎಂಥೆಂಥವರೋ ಬಂದು ತೂರುತ್ತಿರುವುದನ್ನು ನೋಡಿದಾಗ ಒಂದು ಕ್ಷಣ ರಾಜ್ಯಸಭೆ ಮತ್ತು ವಿಧಾನ ಪರಿಷತ್ ಪರಿಸ್ಥಿತಿಯ ಬಗ್ಗೆಯೇ ಅಯ್ಯೋ ಅನ್ನಿಸದಿರದು.
ಹೌದು, ಜನನಾಯಕರ ಬುದ್ಧಿಯ ಜಾಗವನ್ನು ಕಾಂಚಾಣ ಆಕ್ರಮಿಸಿಕೊಂಡಿದೆ. ಹೀಗಾಗಿ ಬುದ್ದಿಜೀವಿಗಳ ಮನೆಗಳಿಗೆ 'ಅನ್ಯಬುದ್ಧಿ'ಗಳ ಪ್ರವೇಶವಾಗುತ್ತಿದೆ. ದುಡ್ಬುದ್ಧಿ, ದೊಡ್ಬುದ್ಧಿ, ಸಣ್ಬುದ್ಧಿ, ದುರ್ಬುದ್ಧಿ ಹೀಗೆ ತರೇಹವಾರಿ ಬುದ್ಧಿಗಳ ಆಗಮನದಿಂದ ಮೇಲ್ಮನೆಯ ಮೂಲೋದ್ದೇಶವೇ 'ಬುದ್ಧಿಹೀನ'ವಾಗುತ್ತಿದೆ.
ಮೇಲ್ಮನೆಗಳು 'ಮಾತಿನ ಮನೆ'ಗಳು ಎಂದೇ ಖ್ಯಾತಿ. ನೇರ ಚುನಾವಣೆಯಲ್ಲಿ ಗೆದ್ದು ಬರಲು ಅವಕಾಶ ಹಾಗೂ ಸಾಮರ್ಥ್ಯ ಇಲ್ಲದ ಅರ್ಹರು, ಸಮಾಜದ ನಾನಾ ಕ್ಷೇತ್ರಗಳ ಪರಿಣತರು, ವಿಚಾರವಾದಿಗಳನ್ನು ಇಲ್ಲಿಗೆ ತರುವುದು ವಾಡಿಕೆ. ಸರಕಾರದ ನೀತಿ-ನಿರೂಪಣೆಗಳು ಕಾಯಿದೆ ಸ್ವರೂಪ ಪಡೆಯುವ ಮುನ್ನ ಅವುಗಳಲ್ಲಿನ ಓರೆಕೋರೆಗಳನ್ನು ತಿದ್ದಿತೀಡಲು, ಗಂಭೀರ ಸಮಸ್ಯೆಗಳ ಸಂದರ್ಭದಲ್ಲಿ ಸೂಕ್ತ ಮಾರ್ಗದರ್ಶನ ಪಡೆಯುವುದು ಸೇರಿದಂತೆ ನಾಡಿನ ಸರ್ವಾಂಗೀಣ ಪ್ರಗತಿಗೆ ಅವರು ಸರಕಾರದ ಬೆನ್ನೆಲುಬಾಗಿ ನಿಲ್ಲಬೇಕು ಎಂಬುದು ಮೂಲ ಉದ್ದೇಶ. ಅಂದರೆ ವಿಧಾನಸಭೆ ಕಲಾಪಗಳಲ್ಲಿ ಹೊರಹೊಮ್ಮಿದ ವಿಚಾರಗಳಿಗೆ, ನಾನಾ ವಿಧೇಯಕಗಳಿಗೆ ನುಡಿಗನ್ನಡಿ ಮೂಲಕ ಮತ್ತಷ್ಟು ಹೊಳಪು ನೀಡುವ ಹೊಣೆ ಆ ಮನೆಗಳ ಸದಸ್ಯರ ಮೇಲಿದೆ. ಇಲ್ಲಿ ಪ್ರತಿಯೊಂದು ವಿಷಯನದ ಬಗ್ಗೆ ಮಂಥನ ನಡೆಯುತ್ತದೆ. ಸೂಕ್ಷ್ಮ, ಅತಿಸೂಕ್ಷ್ಮ ವಿಚಾರಗಳಿಗೆ ವಿವೇಕ-ವಿವೇಚನೆಯ ಸಾಣೆ ಹಿಡಿಯಲಾಗುತ್ತದೆ. ಲೋಪದೋಷಗಳನ್ನು ಸರಿಪಡಿಸಲಾಗುತ್ತದೆ., ಹೀಗಾಗಿ ಪ್ರತಿಯೊಂದು ರಾಜಕೀಯ ಪಕ್ಷವೂ ತನ್ನ ಸದಸ್ಯಬಲದ ಆಧಾರದ ಮೇರೆಗೆ ಬುದ್ಧೀಜೀವಿಗಳನ್ನು ಮೇಲ್ಮನೆಗೆ 'ಕೊಡುಗೆ'ಯಾಗಿ ಕಳುಹಿಸುತ್ತಿದ್ದರು. ಹೀಗಾಗಿ ಸಾಹಿತಿಗಳು, ಕಲಾವಿದರು, ಚಿಂತಕರು, ತರ್ಕಶಾಸ್ತ್ರಜ್ಞರು, ಶಿಕ್ಷಣತಜ್ಞರು ಆಯ್ಕೆಯಾಗಿಯೋ, ನಾಮನಿರ್ದೇನಗೊಂಡೋ ಇಲ್ಲಿಗೆ ಬರುತ್ತಿದ್ದರು. ಇದು ನಡೆದು ಬಂದ ಸಂಪ್ರದಾಯ.
ಹಿಂದೆ ಮಾಜಿ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ಅವಧಿಯಲ್ಲಿ ಮೈಸೂರಿನ ಪಿಟೀಲು ವಿದ್ವಾನ್ ಟಿ. ಚೌಡಯ್ಯ, ಹಾಸನ ಮೂಲದ ಖ್ಯಾತ ಸಾಹಿತಿ ಗೊರೂರು ರಾಮಸ್ವಾಮಿ ಅಯ್ಯಂಗಾರ್, ನಿಜಲಿಂಗಪ್ಪ ಕಾಲದಲ್ಲಿ ಸಾಹಿತಿ ಬಸವರಾಜ ಕಟ್ಟಿಮನಿ, ಗುಂಡೂರಾವ್ ಅಧಿಕಾರದಲ್ಲಿದ್ದಾಗ ಶಿಕ್ಷಣತಜ್ಞ ಎಚ್. ನರಸಿಂಹಯ್ಯ, ಅದೇ ರೀತಿ ಬೇರೆ-ಬೇರೆ ಸಂದರ್ಭಗಳಲ್ಲಿ ಮೈಸೂರಿನ ಶಿಕ್ಷಕ ಎಂ. ಸತ್ಯನಾರಾಯಣರಾವ್, ದಕ್ಷಿಣ ಕನ್ನಡದ ರೈತ ಕೆ. ಜತ್ತಪ್ಪ ರೈ, ಬೆಂಗಳೂರಿನ ಶಿಕ್ಷಣ ತಜ್ಞ ಸಿ.ವಿ.ಎಲ್. ಶಾಸ್ತ್ರೀ, ದಲಿತ ಕವಿ ಸಿದ್ದಲಿಂಗಯ್ಯ. ಸಾಹಿತಿ ಚಂದ್ರಶೇಖರ ಕಂಬಾರ - ಹೀಗೆ ನಾನಾ ಕ್ಷೇತ್ರಗಳ ಅನೇಕ ಖ್ಯಾತನಾಮರು ವಿಧಾನ ಪರಿಷತ್ನ ಗೌರವ-ಘನತೆಯನ್ನು ಹೆಚ್ಚಿಸಿದರು. ಇವರೆಲ್ಲರೂ ತಮ್ಮ ಕ್ಷೇತ್ರಗಳಲ್ಲಿ ಮಾಡಿದ ಸಮಾಜಮುಖಿ ಸೇವೆ, ಸಾಧನೆಗಳಿಂದ ಮೇಲ್ಮನೆ ಅಂದ ಹಿಗ್ಗಿಸಿದವರು. ಇವರ್ಯಾರೂ ಒಂದು ರುಪಾಯಿ ಲಂಚ-ರುಷುವತ್ತು ಕೊಟ್ಟಿರಲಿಲ್ಲ. ರಾಜಕೀಯ ನಾಯಕರ ಮನೆಬಾಗಿಲಲ್ಲಿ 'ಹೆಜ್ಜೆ ನಮಸ್ಕಾರ' ಹಾಕಿರಲಿಲ್ಲ. ಇವರ ಮನೆಬಾಗಿಲಿಗೇ ನಾಯಕರು ಹುಡುಕಿಕೊಂಡು ಹೋಗಿದ್ದರು. ಫಲತಾಂಬೂಲ ಕೈಗಿತ್ತು ಮೇಲ್ಮನೆಗೆ ಕರೆದುಕೊಂಡು ಬಂದಿದ್ದರು.
ಆದರೆ ಈಗ 'ಮಾತಿನ ಮನೆ'ಗೆ ಬಂದಿರುವವರು ಯಾರು..?! ಆಹಾ... ಹೇಳಿಕೊಳ್ಳುವುದಕ್ಕೆ ಮಾತೇ ಸಾಲದು. ಏಕೆಂದರೆ ಕಾಂಚಾಣವೇ ಅವರ ಮಾತು. ವಾಗ್ಝರಿ ಹರಿಯಬೇಕಾದ ಜಾಗದಲ್ಲಿ ಬರೀ ಕಾಂಚಾಣದ್ದೇ ಸದ್ದು. ಮಾತನ್ನು ದುಡ್ಡು ನುಂಗಿ ಹಾಕಿದೆ! ಮೇಲ್ಮನೆಗಳ ಗೌರವವನ್ನು ಹರಾಜಿನಲ್ಲಿ ಖರೀದಿಸಿದೆ. ನೋಡಿ, ಎಂಥೆಂಥವರು ಬಂದಿದ್ದಾರೆ ಅಂತ. ರಿಯಲ್ ಎಸ್ಟೇಟ್ ಉದ್ಯಮಿ ಕುಪೇಂದ್ರ ರೆಡ್ಡಿ, ಚಿನ್ನಾಭರಣ ವ್ಯಾಪಾರಿ ಟಿ. ಶರವಣ... ಎಲ್ಲಿಯ ಗೊರೂರು ರಾಮಸ್ವಾಮಿ ಅಯ್ಯಂಗಾರ್, ಎಲ್ಲಿಯ ಕುಪೇಂದ್ರರೆಡ್ಡಿ? ಎಲ್ಲಿಯ ನರಸಿಂಹಯ್ಯ, ಎಲ್ಲಿಯ ಶರವಣ? ನಿಜ ಹೇಳಬೇಕೆಂದರೆ ವಿಕ್ಟೋರಿಯಾ ಆಸ್ಪತ್ರೆ ಶವಾಗಾರದಲ್ಲಿ ಶವಪರೀಕ್ಷೆ ಮಾಡುವವರನ್ನು ನೇಮಕ ಮಾಡಿದ್ದರೂ ಚೆನ್ನಿತ್ತು. ಏಕೆಂದರೆ ತಮ್ಮ ಭಾವನೆಗಳನ್ನು ಪಣಕ್ಕಿಟ್ಟು, ಸಾವಿರಾರೂ ಶವಪರೀಕ್ಷೆಗಳ ಮೂಲಕ ಅವರು ಮಾಡಿರುವ, ಮಾಡುತ್ತಿರುವ 'ಸಮಾಜ ಸೇವೆ' ನಿಜಕ್ಕೂ ಕಡಿಮೆಯೇನಲ್ಲ, ಶರವಣ ಅವರಂಥವರಿಗೆ ಹೋಲಿಸಿ ನೋಡಿದಾಗ!
ಮೊದಲೇ ಹೇಳಿದಂತೆ ಚುನಾವಣೆ ಎದುರಿಸುವ ಆರ್ಥಿಕ ಸಾಮರ್ಥ್ಯ, ಅವಕಾಶ ಇಲ್ಲದ ಅರ್ಹ ಚಿಂತಕರು, ಸಾಹಿತಿಗಳು, ಕಲಾವಿದರು, ಶಿಕ್ಷಣತಜ್ಞರ ಸೇವೆ ಬಳಸಿಕೊಳ್ಳಲು ಮೇಲ್ಮನೆಗೆ ಕರೆತರುವುದು ಸಮಂಜಸ ಹಾಗೂ ಅಪೇಕ್ಷಣೀಯ. ಆದರೆ ಕುಪೇಂದ್ರರೆಡ್ಡಿ, ಶರವಣ ಅವರಿಗೆ ಏಕಕಾಲಕ್ಕೆ ಹತ್ತತ್ತು ಚುನಾವಣೆ ಎದುರಿಸುವ ಎಲ್ಲ ತಾಕತ್ತೂ ಇದೆ. ಹೋಗಲಿ, ಆ ವಿಷಯ ಪಕ್ಕಕ್ಕಿಟ್ಟು ನೋಡಿದರೂ ಅವರಿಗಿರುವ 'ಅನ್ಯ ಅರ್ಹತೆ'ಗಳು ಮೇಲ್ಮನೆ ಸದಸ್ಯತ್ವಕ್ಕೆ ಶಿಫಾರಸ್ಸು ಮಾಡುತ್ತವೆಯೇ ಎಂದರೂ ಸಕಾರಾತ್ಮಕ ಉತ್ತರ ಸಿಗದು. ಏಕೆಂದರೆ ಇವರೇನು ಸಾರಸ್ವತ ಲೋಕದ ದಿಗ್ಗಜರಲ್ಲ, ಶಿಕ್ಷಣತಜ್ಞರಲ್ಲ, ಕಲೆ-ಸಾಹಿತ್ಯದಲ್ಲಿ ಪಾರಮ್ಯ ಮೆರೆದವರಲ್ಲ. ಕುಬೇರರು ಎಂಬುದಷ್ಟೇ ಅವರ ಅರ್ಹತೆ ಮತ್ತು ಯೋಗ್ಯತೆ.
ಬೇರೆಲ್ಲ ವಿಚಾರ ಪಕ್ಕಕ್ಕಿಡೋಣ. ಜೆಡಿಎಸ್ ಮುಖಂಡ, ಮಾಜಿ ಮಂತ್ರಿ, ಕಾನೂನು ತಜ್ಞ ಎಂ.ಸಿ. ನಾಣಯ್ಯ
ಅವರಿದ್ದ ಜಾಗದಲ್ಲಿ ಶರವಣ ಅವರಂಥ ಬಂಗಾರದ ವ್ಯಾಪಾರಿಯನ್ನು ಕಲ್ಪಿಸಿಕೊಳ್ಳುವುದು ನಿಜಕ್ಕೂ ಕಷ್ಟವೇ. ನಾಣಯ್ಯ ಅವರಿಂದಾಗಿ ಅವರು ಪ್ರತಿನಿಧಿಸುತ್ತಿರುವ ಪಕ್ಷ ಹಾಗೂ ವಿಧಾನ ಪರಿಷತ್ ಎರಡಕ್ಕೂ ಒಂದು ಗೌರವ, ಘನತೆ ಇರುವುದು ಸುಳ್ಳಲ್ಲ. ನಾಣಯ್ಯ ಅವರ ವಿಚಾರಪೂರಿತ ವಾದ ಮಂಡನೆ ಶೈಲಿಗೆ ಇಡೀ ಸದನವೇ ತಲೆದೂಗುತ್ತಿತ್ತು. ಅವರು ಆಡಳಿತ ಪಕ್ಷದ ಸಾಲಿನಲ್ಲಿದ್ದಾಗ ಪ್ರತಿಪಕ್ಷದವರು, ಅವರು ಪ್ರತಿಪಕ್ಷ ಸಾಲಿನಲ್ಲಿದ್ದಾಗ ಆಡಳಿತ ಪಕ್ಷದವರು ಪ್ರತ್ಯುತ್ತರ ಕೊಡಲು ತಡಬಡಾಯಿಸಿ ಬಿಡುತ್ತಿದ್ದರು. ಇನ್ನೂ ಸರಿಯಾಗಿ ಹೇಳಬೇಕೆಂದರೆ ಅವರು ಒಂದು ಕಡೆ ಆಡಳಿತ ಪಕ್ಷ, ಮತ್ತೊಂದೆಡೆ ಪ್ರತಿಪಕ್ಷ, ಮಗದೊಂದೆಡೆ ಮೇಲ್ಮನೆ ಮೂರಕ್ಕೂ ಆಸ್ತಿಯೇ. ಅವರಿಂದ ಕಲಾಪಕ್ಕೆ ಒಂದು ಮೆರುಗಿತ್ತು, ಬೆರಗಿತ್ತು. ಅವರು ಕಲಾಪದಲ್ಲಿ ಪಾಲ್ಗೊಳ್ಳುತ್ತಲೇ ಕಲಿಯುತ್ತಿದ್ದರು. ಕಲಿಯುತ್ತಲೇ ಸಹೊದ್ಯೋಗಿಗಳಿಗೆ ಕಲಿಸುತ್ತಿದ್ದರು. ಆದರೇನು ಮಾಡುವುದು? ಮೇಲ್ಮನೆ ಸದಸ್ಯತ್ವ ಖರೀದಿಸಲು ಅವರೇನು ಕುಬೇರಲ್ಲವಲ್ಲ. ಕುಪೇಂದ್ರರೆಡ್ಡಿ, ಶರವಣ ಅವರಂಥವರ ಮುಂದೆ ನಾಣಯ್ಯ ತೀರಾ ಬಡವರು. ಅವರ ಅನುಪಸ್ಥಿತಿಯಿಂದ ಮೇಲ್ಮನೆಯೂ ಬಡವೇ..!
ವಿಚಾರವಂತರ ಬದಲು ಧನವಂತರು ಮೇಲ್ಮನೆ ಪ್ರವೇಶ ಪ್ರಕ್ರಿಯೇ ಇತ್ತೀಚೆಗೆ ಪ್ರಬಲವಾಗಿದೆ. ಹಾಗೆಂದು ಹಿಂದೆನೂ ಈ ರೀತಿ ಇರಲಿಲ್ಲ ಎಂದೇನೂ ಅಲ್ಲ. ಅಬಕಾರಿ ಉದ್ಯಮಿಗಳು, ಶಿಕ್ಷಣ ಕ್ಷೇತ್ರವದರು ಆಯ್ಕೆ ಆಗಿರುವುದು ಉಂಟು. ಆದರೆ ಅವರು 'ಲಕ್ಷ್ಮಿ'ಯನ್ನು ಕೊಟ್ಟು 'ಸರಸ್ವತಿ'ಯ ಜಾಗವನ್ನು ಅಂದರೆ ಮೇಲ್ಮನೆ ಸದಸ್ಯತ್ವವನ್ನು ಖರೀದಿಸುತ್ತಿರಲಿಲ್ಲ. ಅವರಲ್ಲಿರುವ 'ಲಕ್ಷ್ಮಿ' ಜತೆಗೆ 'ಸರಸ್ವತಿ' ಕೂಡ ಆಯ್ಕೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿತ್ತು. ಈಗ 'ಲಕ್ಷ್ಮಿ' ಪ್ರಭಾವಲಯದಲ್ಲಿ 'ಸರಸ್ವತಿ' ಕಳೆದು ಹೋಗಿದ್ದಾಳೆ.
್ಡಇರಲಿ, ಬೇರೆ ಪಕ್ಷದಲ್ಲೂ ಇಂಥದ್ದೇ ಹೊಯ್ದಾಟಗಳು ಆಗಿಲ್ಲ ಎಂದೇನೂ ಅಲ್ಲ. ಆದರೆ ಸ್ವರೂಪ ಮಾತ್ರ ಬೇರೆ. ಅವರು ಮೇಲ್ಮನೆಯನ್ನು 'ರಾಜಕೀಯ ನಿರಾಶ್ರಿತರ ಶಿಬಿರ'ವನ್ನಾಗಿ ಪರಿವರ್ತಿಸಿದ್ದಾರೆ. ಬಿಜೆಪಿಯಲ್ಲಿ ಪಾಪ ಈಶ್ವರಪ್ಪ ಸೋತು ಸುಣ್ಣವಾಗಿದ್ದರು. ವಿಧಾನಸಭೆ ಚುನಾವಣೆಯಲ್ಲಿ ಮಗುಚಿಬಿದ್ದ ಮಾಜಿ ಉಪಮುಖ್ಯಮಂತ್ರಿಗೆ ಈಗ ಪರ್ಯಾಯ ವ್ಯವಸ್ಥೆ ಆಗಿದೆ. ಅದೇ ರೀತಿ ಕಾಂಗ್ರೆಸ್ನ ಡಾ. ಜಿ. ಪರಮೇಶ್ವರ್ ಕೂಡ ಆಶ್ರಯ ಕಂಡುಕೊಂಡಿದ್ದಾರೆ. ಇನ್ನು ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ಸಿಗದೆ ಮುನಿಸಿಕೊಂಡಿದ್ದ ರೇವಣ್ಣ, ಇಕ್ಬಾಲ್ ಅಹಮದ್ ಸರಡಗಿ, ಅಹಮದ್ ಜಬ್ಬಾರ್, ಬೋಸ್ರಾಜ್ ಇದೀಗ 'ಸಮಾಜಸೇವೆ' ನೆಪದಲ್ಲಿ ಮೇಲ್ಮನೆ ಪ್ರವೇಶಿಸಿದ್ದಾರೆ. ಜಯಮ್ಮ ಅವರೊಬ್ಬರನ್ನು ಹೊರತುಪಡಿಸಿದರೆ ಉಳಿದವರೆಲ್ಲ ಕೋಟಿ-ಕೋಟಿಗಳಲ್ಲಿ ತೂಗುವವರೇ. ಇಲ್ಲಿ ಕಾಸಿಗಿಂತ ಪ್ರಭಾವ ಹೆಚ್ಚು ಕೆಲಸ ಮಾಡಿದೆ. ನಿರಾಶ್ರಿತರಿಗೆ ಪುನರ್ವಸತಿ ಕಲ್ಪಿಸಿದೆ.
ಯಾವಾಗ ಹಣದ ಕೈ ಮೇಲಾಯಿತೋ ಕನ್ನಡ ನಾಡು-ನುಡಿಗಾಗಿ ಸೇವೆ ಸಲ್ಲಿದವರನ್ನು ಮರೆಯುವ ಪರಿಪಾಒ ಸದ್ದಿಲ್ಲದೆ, ತನ್ನಂತಾನೆ ಶರುವಾಗಿದೆ. ಆಯ್ಕೆಯೋ, ನಾಮನಿರ್ದೇಶನವೋ ದುಡ್ಡಿಲ್ಲದೆ ಏನೂ ಆಗುವುದಿಲ್ಲ ಎಂಬುದು ಬರಬರುತ್ತಾ ಮನದಟ್ಟಾಗುತ್ತಿದೆ. ಹಾಗೆ ನೋಡಿದರೆ ಕನ್ನಡಕ್ಕಾಗಿ ಸೇವೆ ಸಲ್ಲಿಸಿದವರನ್ನು ಹುಡುಕುವುದೇ ಬೇಕಿರಲಿಲ್ಲ. ಬೇಕಾದಷ್ಟು ಮಂದಿ ಸಿಗುತ್ತಿದ್ದರು. ಆದರೆ ಯಾರೊಬ್ಬರೂ ಅವರ ಕಣ್ಣಿಗೆ ಬಿದ್ದಿಲ್ಲ. ತಪ್ಪೋ, ಸರಿಯೋ ವಿಧಾನಸಭೆಯಲ್ಲಿ ಕನ್ನಡದ ಸದ್ದು ಮೊಳಗಿಸುತ್ತಿದ್ದ ವಾಟಾಳ್ ನಾಗರಾಜ್ ಅವರಂಥವರನ್ನಾದರೂ ಪರಿಗಣಿಸಬಹುದಿತ್ತು. ಏಕೆಂದರೆ ಅವರು ಯಾವುದೇ ಪಕ್ಷದ ಜತೆ ಗುರುತಿಸಿಕೊಂಡಿರಲಿಲ್ಲ. ಅವರ ವಾಟಾಳ್ ಪಕ್ಷ ಅವರೊಬ್ಬರ ಜತೆ ಮಾತ್ರ ಗುರುತಿಸಿಕೊಂಡಿತ್ತು. ಕೊನೇ ಪಕ್ಷ ಪರಿಷತ್ನಲ್ಲಿ ಸದಾ ಕನ್ನಡದ ಸದ್ದಾದರೂ ಕೇಳಿಸುತ್ತಿತ್ತು. ವಿಧಾನಸಭೆಯಲ್ಲಿ ಅವರ ಗೈರು ಮಹಾರಾಷ್ಟ್ರ ಏಕೀಕರಣ ಸದಸ್ಯರ ಕೂಗಿನ ಎತ್ತರವನ್ನು ದುಪ್ಪಟ್ಟು ಮಾಡಿದೆ. ಮೇಲ್ಮನೆಯಲ್ಲಿ ವಾಟಾಳ್ ಕೂಗಿದ್ದರೆ ವಿಧಾನಸಭೆಯಲ್ಲಿ ಅದು ಪ್ರತಿಧ್ವನಿಸಲು ಸಾಧ್ಯವಿತ್ತು. ಶರವಣ ಅವರಂಥವರಿಗೆ ಹೋಲಿಸಿದರೆ ಖಂಡಿತವಾಗಿಯೂ ವಾಟಾಳ್ ಉತ್ತಮ ಆಯ್ಕೆಯೇ. ಆದರೆ ನಾನಾ ಪಕ್ಷಗಳ ನಾಯಕರ ಹೃದಯ ವೈಶಾಲ್ಯದ ಕೊರತೆ ಹಾಗೂ ಅದೇ ಕಾಲಕ್ಕೆ ಆರ್ಥಿಕ ಲೋಭದ ಒರತೆ ಈ ಸಾಧ್ಯತೆಯನ್ನು ಸುಳ್ಳು ಮಾಡಿದೆ. ಕನ್ನಡಮ್ಮನ ಮೇಲಿನ ಮಮತೆಯನ್ನು ಬರೀ ಭಾಷಣಕ್ಕೆ ಸೀಮಿತಗೊಳಿಸಿದೆ.
ಲಗೋರಿ: ರಾಜಕೀಯ ಇರುವುದು ತನ್ನನ್ನು ಮಾತ್ರವೇ ಪ್ರತಿನಿಧಿಸಲಿಕ್ಕಲ್ಲ, ಸಮಾಜಕ್ಕೆ ಪ್ರಾತಿನಿಧ್ಯ ನೀಡುವುದಕ್ಕೆ.
-ಪಿ. ತ್ಯಾಗರಾಜ್
thyagarjun@gmail.com