ಅಂಕಣಗಳು

ಮತ್ತೊಮ್ಮೆ ಬೆಂಗಳೂರನ್ನು ವಿಫಲಗೊಳಿಸಿದ ಸರ್ಕಾರ

ಮತ್ತೊಮ್ಮೆ ಬೆಂಗಳೂರನ್ನು ವಿಫಲಗೊಳಿಸಿದ ಸರ್ಕಾರ
Published On :

ಬೆಂಗಳೂರಿನಲ್ಲಿ ಪ್ರಚಲಿತ ಚರ್ಚೆಗಳೆಲ್ಲವೂ ಕೂಡ ಕಸ ಮತ್ತು ತ್ಯಾಜ್ಯ ವಿಲೇವಾರಿಯ ಕುರಿತಾಗಿಯೇ ನಡೆಯುತ್ತಿವೆ. ಕೆಲ ತಿಂಗಳುಗಳ ಹಿಂದೆ ಇಲ್ಲಿನ ವಾಹನದಟ್ಟಣೆ, ಇಲ್ಲಿನ ಕಾನೂನು ಸುವ್ಯವಸ್ಥೆ ಚರ್ಚೆಯ ವಿಷಯವಾಗಿತ್ತು. ಇನ್ನು ಸದ್ಯದಲ್ಲಿಯೇ ನೀರಿನ ಸಮಸ್ಯೆ ತಲೆದೋರಲಿದೆ ಮತ್ತು ಈ ಸಮಸ್ಯೆಗಳ ಪಟ್ಟಿ ಮುಂದುವರಿಯುತ್ತಲೇ ಇರುತ್ತದೆ. ಅದು ಸಹಜವೂ ಕೂಡ. ಆದರೆ ಮೊದಲು ಒಂದು ಮೂಲಭೂತ ಸತ್ಯವನ್ನು ನಾವು ತಿಳಿದುಕೊಳ್ಳಬೇಕು - ಅದೇ ಯೋಜನಾರಾಹಿತ್ಯ!
ನಮ್ಮ ಈ ಮಹಾನಗರ ವಿಫಲವಾಗಿರುವುದಕ್ಕೆ ಕಾರಣವಾದರೂ ಏನು? ಸುಂದರ ಉದ್ಯಾನ ನಗರಿಯಾಗಿದ್ದ ನಮ್ಮ ಬೆಂಗಳೂರು, ಇಂದು ದೇಶ-ವಿದೇಶಗಳ ಮುಖಪುಟಗಳ ಸುದ್ದಿಗಳಲ್ಲಿ 'ಗಾರ್ಬೇಜ್ ಸಿಟಿ'ಯಾಗಿ ಏಕೆ ರಾರಾಜಿಸುತ್ತಿದೆ?
ಏಕೆಂದರೆ, ಬೆಂಗಳೂರಿಗಾಗಿ ಒಂದು ಸಮಗ್ರ ಸಮರ್ಪಕ ಯೋಜನೆಯೇ ನಮ್ಮಲ್ಲಿ ಇಲ್ಲ! ಭವಿಷ್ಯದಲ್ಲಿ ನಗರದ ಅಭಿವೃದ್ಧಿ ಮತ್ತು ನಗರದ ವಿವಿಧ ಸಮಸ್ಯೆಗಳಿಗೆ, ಆಳವಾದ ಅಧ್ಯಯನಗಳ ಮೂಲಕ ಒಂದು ಸಮಗ್ರ ಯೋಜನೆಯನ್ನು, ಇಲ್ಲಿನ ರಾಜಕೀಯ ನಾಯಕತ್ವವಾಗಲಿ, ಅಧಿಕಾರಶಾಹಿಗಳಾಗಲಿ ನಿರೂಪಿಸುವ ಗೋಜಿಗೇ ಹೋಗಿಲ್ಲ. ಯಾವುದೇ ಯೋಜನೆಯಿಲ್ಲ, ಹಾಗಾಗಿ ಯಾರೂ ಉತ್ತರದಾಯಿಯಲ್ಲ! ನಮ್ಮ ನಗರವನ್ನು ನಾವು ವಿಫಲಗೊಳಿಸಿರುವುದು ಹೀಗೆಯೇ!! ಅಂದ ಹಾಗೆ, ಇದೇನೂ ಸರ್ಕಾರಕ್ಕೆ ತಿಳಿದಿರದ ಸಂಗತಿಯಲ್ಲ. ಭಾರತದಲ್ಲೇ ನಂ.1 ನಗರವಾಗುವ ಮತ್ತು ಪ್ರಮುಖ ಅಂತಾರಾಷ್ಟ್ರೀಯ ಮೆಟ್ರೋಪೊಲಿಸ್ ಆಗುವ ಯೋಗ್ಯತೆ ಮತ್ತು ಅರ್ಹತೆ ಬೆಂಗಳೂರಿಗಿದೆ. ಇದನ್ನು ಸಾಧ್ಯವಾಗಿಸಲು ನಾವು ಒಂದು ನೂತನ ನಗರ ಯೋಜನೆಯ ಮಾದರಿಯನ್ನು  ಅಳವಡಿಸಿಕೊಳ್ಳಬೇಕು. ನಮ್ಮ ಮೂಲ ಸೌಕರ್ಯಗಳನ್ನು ಹೆಚ್ಚಿಸಬೇಕು, ಸಾಮಾಜಿಕ ಸೌಲಭ್ಯಗಳನ್ನು ಇನ್ನೂ ಅಭಿವೃದ್ಧಿಪಡಿಸಬೇಕು ಮತ್ತು ಉತ್ತಮ ಜೀವನಮಟ್ಟವನ್ನು ಸಾಕಾರಗೊಳಿಸಲು ಸೂಕ್ತ ಪರಿಸರವನ್ನು ನಿರ್ಮಿಸಬೇಕು. ಅಂದರೆ, ಬೆಂಗಳೂರನ್ನು ನಾವು ಪುನಃನಿರ್ಮಿಸಬೇಕು ಎಂದು 2008ರಲ್ಲೇ ಅದು ಹೇಳಿತ್ತು. ಆಗ ಸರ್ಕಾರ ಅಬೈಡನ್ನು ಸಂಯೋಜಿಸಿತು. ಅಬೈಡ್ ನೂರಾರು ನಾಗರಿಕರು ಮತ್ತು ತಜ್ಞರೊಂದಿಗೆ ಸಮಾಲೋಚನೆಗಳನ್ನು ನಡೆಸಿ, ಗಣನೀಯ ವೆಚ್ಚವನ್ನು ಭರಿಸಿ, ಕೇವಲ ವಾಹನದಟ್ಟಣೆಯೊ, ಮತ್ತೊಂದೊ, ಹೀಗೆ ಸಮಸ್ಯೆ ಕೇಂದ್ರಿತ ಚಿಂತನೆಗಳನ್ನು ನಡೆಸದೆ ನಗರದ ಎಲ್ಲ ನಾಗರಿಕರನ್ನು ಬಾಧಿಸುತ್ತಿರುವ ಸಮಸ್ಯೆಗಳ ವಾಸ್ತವ ಪರಿಹಾರದ ನಿಟ್ಟಿನಲ್ಲಿ, ಬೆಂಗಳೂರಿನ ಎಲ್ಲ ಸಮಸ್ಯೆಗಳಿಗೆ ಅನುಷ್ಠಾನ ಯೋಗ್ಯ ಪರಿಹಾರಗಳನ್ನೊಳಗೊಂಡ 'ಪ್ಲಾನ್ ಬೆಂಗಳೂರು - 2020'ಯನ್ನು ಸಿದ್ಧಪಡಿಸಿತು. ವರದಿಯನ್ನು ಸ್ವೀಕರಿಸಿದ ನಂತರವು ಕೂಡ, ಮುಂದಿನ ಸರ್ಕಾರಗಳು ಅದರ ಶಿಫಾರಸುಗಳನ್ನು ಅನುಷ್ಠಾನಗೊಳಿಸಲು ವಿಫಲವಾದವು. ಸಮರ್ಥ ನಾಯಕತ್ವ, ದೂರದೃಷ್ಟಿ ಮತ್ತು ಯೋಜನೆಗಳ ಕೊರತೆಯ ಪರಿಣಾಮದಿಂದ ಉಂಟಾಗುತ್ತಿರುವ ಗೊಂದಲ ನಮ್ಮ ಕಣ್ಣೆದುರಿಗೇ ಇದೆ. ಹಾಗಾದರೆ, ಅಭಿವಂದ್ಧಿ ಮತ್ತು ಹೂಡಿಕೆಗಳಿಗೆ ಅನುಕೂಲವಾಗುವ ಒಂದು ಸಮಗ್ರ ಯೋಜನೆ ಮತ್ತು ಯೋಜನಾಬದ್ಧ ವಿಧಾನವನ್ನು ಅಳವಡಿಸಿಕೊಳ್ಳಲು ಹಿಂಜರಿಕೆಯೇಕೆ? ಪ್ರತಿವರ್ಷದ ಬಜೆಟ್‌ಗಳಲ್ಲಿ "ಬೆಂಗಳೂರಿಗೆ 30000 ಕೋಟಿ ಅನುದಾನ ಘೋಷಣೆ" ಅಥವಾ ಅಂತಹುದೇ ಸುದ್ದಿಗಳನ್ನು ನಾವು ಓದುತ್ತಲೇ ಬಂದಿದ್ದೇವೆ. ಒಬ್ಬ ರಾಜಕಾರಣಿಗೆ ಅಥವಾ ಆಡಳಿತಕ್ಕೆ ಹಣವನ್ನು ಖರ್ಚುಮಾಡಲು ಮತ್ತು ಗುತ್ತಿಗೆ ನೀಡಲು ಇರುವ ತವಕ, ಸಾರ್ವಜನಿಕ ಸೇವೆಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಜನರಿಗೆ ತಲುಪಿಸುವಲ್ಲಿ ಇರುವುದಿಲ್ಲ.
ನಗರದ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಒಂದು ಸಮಗ್ರ, ಪಾರದರ್ಶಕ ಮತ್ತು ಬಹಿರಂಗ ಯೋಜನೆಯ ಅಭಾವದಲ್ಲಿ, ತಾತ್ಕಾಲಿಕ ಯೋಜನಾನುಷ್ಠಾನಗಳೆಲ್ಲವೂ ಕೂಡ ಬಹುತೇಕ ಗುತ್ತಿಗೆದಾರರ/ಮಾರಟಗಾರರ ಅನುಕೂಲಕ್ಕೆ ತಕ್ಕಂತೆ ಇರುತ್ತವೆ. ಸಂಕ್ಷಿಪ್ತವಾಗಿ ಹೇಳಬೇಕೆಂದರೆ, ಈ ಎಲ್ಲ ಸಮಸ್ಯೆಗಳಿಗೆ ಕಾರಣ ನಗರಾಡಳಿತದ ವೈಫಲ್ಯ - ಪ್ರಸ್ತುತ ತ್ಯಾಜ್ಯ ನಿರ್ವಹಣೆ ಮತ್ತು ಸಂಭಾವ್ಯ ಆರೋಗ್ಯ ಬಿಕ್ಕಟ್ಟಿಗೆ ನಗರಾಡಳಿತದ ವೈಫಲ್ಯವೇ ಕಾರಣ. ಇದರಲ್ಲಿ ಸಂದೇಹವೇ ಬೇಡ. ಇದು ರಾಜಕೀಯವಲ್ಲ, ಕಟು ವಾಸ್ತವ! ಕೇವಲ ಚರ್ಚೆಗಳನ್ನು ನಡೆಸುವುದು ಮಾತ್ರವಲ್ಲದೆ, ಪ್ರಸಕ್ತ ಸಮಸ್ಯೆ ನಿವಾರಣೆಯಲ್ಲಿ ನಾಗರಿಕರು ಮತ್ತು ಮಾಧ್ಯಮ, ಇನ್ನೂ ಪ್ರಮುಖ ಪಾತ್ರವನ್ನು ವಹಿಸಿಕೊಳ್ಳಬೇಕಿದೆ. ನಮ್ಮ ನಗರಕ್ಕೆ ಒಂದು ಧೀರ್ಘಕಾಲೀನ ದೂರದೃಷ್ಟಿಯ ಯೋಜನಾನುಷ್ಠಾನದ ಜೊತೆಗೆ ನಮ್ಮ ನಗರ ಮತ್ತು ನಾಗರಿಕರೆಡೆಗಿನ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸುವಂತೆ ರಾಜಕೀಯ ನಾಯಕತ್ವದ ಮೇಲೆ ನಿರಂತರ ಒತ್ತಡಹೇರಬೇಕಿದೆ.

-ರಾಜೀವ್ ಚಂದ್ರಶೇಖರ್
ರಾಜ್ಯಸಭೆ ಸದಸ್ಯರು


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.