ಯುದ್ಧದ ಸದ್ದಲ್ಲಿ ಮೌನವಾಯ್ತು ಅವಳೊಳಗಿನ ಚಿಲಿಪಿಲಿ
ಒಂದು ಯುದ್ಧ, ಒಂದು ಸಂಘರ್ಷ...
ವಾಸ್ತವದಲ್ಲಿ ಅದು ನಡೆಯುವುದು ಖಂಡಿತಾ ಎರಡು ಗುಂಪು, ವರ್ಗ, ದೇಶ, ಸೇನೆಗಳ ನಡುವೆಯಲ್ಲ. ನಿಜಕ್ಕೂ ಅದು ನಡೆಯುವುದು ಆ ಪ್ರದೇಶದ ಪ್ರತಿ ಹೆಣ್ಣಿನ ಆಂತರ್ಯದಲ್ಲಿ. ಇಲ್ಲಿ ಅವರು ಸೋತರು, ಇವರು ಗೆದ್ದರು ಎಂಬ ಮಾತೇ ಬರುವುದಿಲ್ಲ. ಯಾರು ಸೋತರೂ, ಗೆದ್ದರೂ ಹೆಣ್ಣಿಗೆ ಮಾತ್ರ ಸೋಲು ಕಟ್ಟಿಟ್ಟದ್ದು. ಅದು ದುರದೃಷ್ಟವಶಾತ್ ಪೂರ್ವ ನಿಗದಿತ.
ಮನುಕುಲ ಅನಾದಿಕಾಲದಿಂದ ಕಂಡ ಯುದ್ಧಗಳಿಗೆ ಲೆಕ್ಕವಿಲ್ಲ. ವರ್ಗ ಸಂಘರ್ಷ, ಧರ್ಮ ಸಂಘರ್ಷ, ಸ್ವಾತಂತ್ರ್ಯಕ್ಕಾಗಿ ನಡೆದ ಹೋರಾಟ, ದಾಯಾದಿ ಕಲಹ ಎಲ್ಲವೂ ಇದರಲ್ಲಿ ಒಳಗೊಂಡಿದೆ. ಒಬ್ಬರ ಗೆಲವು, ಇನ್ನೊಬ್ಬರ ಹೀನಾಯ ಸೋಲಲ್ಲಿ ಇವು ಅಂತ್ಯಗೊಂಡಿವೆ. ಈಗ ಮತ್ತೆ ಯುದ್ಧದ ಸದ್ದು ಕೇಳಿಬಂದಿದೆ. ಇರಾಕ್ ಎನ್ನುವ ತೈಲ ಕಣಜದಲ್ಲಿ ಸುನ್ನಿ ಉಗ್ರರು ಶಿಯಾಗಳ ಮೇಲೆ ಸಮರ ಸಾರಿದ್ದಾರೆ. ಪ್ರತಿನಿತ್ಯವೂ ಹೆಣಗಳ ರಾಶಿ ಬೀಳುತ್ತಿವೆ. ಮುಂದೊಂದು ದಿನ ಈ ಸಂಘರ್ಷವೂ ಯಾವುದೋ ರೀತಿಯಲ್ಲಿ ಅಂತ್ಯ ಕಾಣಬಹುದು. ಆದರೆ, ಯುದ್ಧವೆಂಬ ಭಯಾನಕತೆಯಲ್ಲಿ ಪ್ರತಿ ಬಾರಿಯೂ ನಲುಗಿರುವುದು ಹೆಣ್ಣು. ಈಗ ನಲುಗುತ್ತಿರುವುದೂ ಆಕೆಯೇ ಎನ್ನುವುದು ಅಗೋಚರ ಸತ್ಯ.
ಸದ್ಯ ಯುದ್ಧದ ಕರಿನೆರಳಿನಲ್ಲಿರುವ ಇರಾಕ್ ಆಗಲಿ, ಈ ಹಿಂದೆ ಇಂತಹ ಕಾಳಗಗಳನ್ನು ಕಂಡ ಭಾರತ, ಪಾಕಿಸ್ತಾನ, ಸಿರಿಯಾ, ಚೀನಾ, ಶ್ರೀಲಂಕಾ ಯಾವುದೇ ರಾಷ್ಟ್ರವಾಗಿರಲಿ, ಬಲಿಪಶುವಾಗಿದ್ದು ಇಲ್ಲಿನ ಮಹಿಳೆಯರು ಮತ್ತು ಮಕ್ಕಳು. ಇತಿಹಾಸ, ಪುರಾಣ, ದಂತಕತೆಗಳಿಂದ ಹಿಡಿದು ಮನೆಯಲ್ಲಿ ನಡೆಯುವ ದಾಯಾದಿ ಕಲಹಗಳವರೆಗೂ ಸೋಲಿನ ರುಚಿ, ನೋವಿನ ಕಹಿ ಉಣ್ಣುವವಳು ಮಹಿಳೆ.
ಮತ್ತೆ ಇರಾಕ್ನತ್ತ ಬರೋಣ. ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಅಂಡ್ ಅಲ್ ಶಾಮ್(ಇಸಿಸ್) ಎಂಬ ರಕ್ತದಾಹಿ ಉಗ್ರರು ಮಾನವತೆಯ ನಾಶಕ್ಕೆ ಮುನ್ನುಡಿ ಬರೆದಿದ್ದಾರೆ. ಇಡೀ ಇರಾಕ್ ಅನ್ನು ಕೈವಶಪಡಿಸಿಕೊಳ್ಳಬೇಕೆಂದು ಸಿಕ್ಕಸಿಕ್ಕವರನ್ನು ಹತ್ಯೆ ಮಾಡುತ್ತಾ, ಹೆಣಗಳ ರಾಶಿಯ ಮೇಲೆ ಮುಂದೆ ಸಾಗುತ್ತಿದ್ದಾರೆ. ಒಂದೆಡೆ ಸೈನಿಕರನ್ನು ಸಾಲಾಗಿ ನಿಲ್ಲಿಸಿ ಅವರ ನೆತ್ತಿ ಮೇಲೆ ಉಗ್ರರು ಗುಂಡಿನ ನಳಿಕೆಯನ್ನಿಡುತ್ತಿದ್ದರೆ, ಮತ್ತೊಂದೆಡೆ ಆ ಯೋಧರ ತಾಯಿ, ಪತ್ನಿ, ಮಕ್ಕಳು ಅತಂತ್ರರಾಗುತ್ತಿದ್ದಾರೆ. ಅಲ್ಲಿನ ಪ್ರತಿ ಮಹಿಳೆಯ ಅಂತರಾಳದಲ್ಲಿ ಪ್ರತಿಕ್ಷಣವೂ ಹೋರಾಟ, ಆತಂಕ, ಗೊಂದಲ, ನೋವಿನ ಮೇಲಾಟ ನಡೆಯುತ್ತಲೇ ಇದೆ.
ಒಬ್ಬಳು ತಾಯಿ, ಪ್ರೀತಿಯನ್ನು ಧಾರೆಯೆರೆದು ಸಾಕಿದ ಮಗ ಉಗ್ರನಾಗಿಬಿಟ್ಟನಲ್ಲ ಎಂದು ಅಳುತ್ತಿದ್ದರೆ, ಯಾರೋ ರಕ್ತಪಿಪಾಸುವಿನ ಕೈಗೆ ಸಿಕ್ಕಿ ತನ್ನ ಕಂದಮ್ಮ ಜೀವ ಕಳೆದುಕೊಂಡಿತಲ್ಲ ಎಂದು ಮಗದೊಬ್ಬಳು ನರಳುತ್ತಿರುತ್ತಾಳೆ. ಗಂಡ, ಅಣ್ಣ, ತಮ್ಮಂದಿರ ಶವಗಳ ಮುಂದೆ ರೋದಿಸುವವಳು, ಮನೆಯಲ್ಲಿದ್ದ ಎಲ್ಲ ಗಂಡುಕುಡಿಗಳೂ ನಿರ್ನಾಮವಾದ ಬಳಿಕ ಮುಂದೇನು ಎಂದು ತಲೆಮೇಲೆ ಕೈಹೊತ್ತು ಕುಳಿತುಕೊಳ್ಳಬೇಕಾದವಳು, ಮನೆಯಲ್ಲಿ ಉಳಿದಿರುವವರ ಹೊಣೆ ಹೊರಬೇಕಾದವಳು, ಅಗಾಧ ವೇದನೆ ಮನದಲ್ಲಿಟ್ಟುಕೊಂಡು ದಿನದೂಡಬೇಕಾದವಳು... ಎಲ್ಲವೂ ಹೆಣ್ಣೆ.
ಅಲ್ಲಿ ಉಗ್ರರ ಅಟ್ಟಹಾಸ ಆರಂಭವಾದಾಗಿನಿಂದ ಈವರೆಗೆ 10 ಲಕ್ಷಕ್ಕೂ ಅಧಿಕ ಮಂದಿ ನಿರ್ವಸಿತರಾಗಿ ವಲಸೆ ಹೋಗಿದ್ದಾರೆ. ತಾವೆಲ್ಲಿಗೆ ಹೋಗುತ್ತಿದ್ದೇವೆ ಎಂಬುದು ಅವರಿಗೇ ಗೊತ್ತಿರುವುದಿಲ್ಲ, ಮುಂದಿರುವ ದಾರಿ ಯಾವುದು, ಅಲ್ಲಿ ತಲುಪಿದ ಬಳಿಕ ಏನು ಮಾಡುವುದು ಎಂಬ ಅರಿವೂ ಅವರಿಗಿರುವುದಿಲ್ಲ. ಒಂದೊಂದು ಹೆಜ್ಜೆಯಲ್ಲೂ ಒಮ್ಮೆ ಈ ನರಕದಿಂದ ಪಾರಾದರೆ ಸಾಕು ಎನ್ನುವ ಯೋಚನೆಯೊಂದೇ ಇರುತ್ತದೆ. ಯಾವುದೇ ಯುದ್ಧವಿರಲಿ, ಹಿಂಸಾಚಾರವಿರಲಿ, ಈ ರೀತಿ ನಿರ್ವಸಿತರಾದವರಲ್ಲಿ ಶೇ.70ರಿಂದ 90ರಷ್ಟು ಮಂದಿ ಮಹಿಳೆಯರು ಮತ್ತು ಮಕ್ಕಳೇ ಆಗಿರುತ್ತಾರೆ ಎನ್ನುತ್ತದೆ ವಿಶ್ವಸಂಸ್ಥೆ. ಸೋಜಿಗದ ವಿಚಾರವೆಂದರೆ, ಬಹುತೇಕ ಮಂದಿ ನಿರಾಶ್ರಿತರು ತೆರಳುತ್ತಿರುವುದು ಕರ್ಬಾಲಾ ಎಂಬ ಪ್ರದೇಶಕ್ಕೆ. ಏಕೆಂದರೆ ಅಲ್ಲಿರುವವರೆಲ್ಲ ನಿರ್ವಸಿತರೇ. ಅಲ್ಲಿ ಶೇ.90ರಷ್ಟು ಕುಟುಂಬದಲ್ಲಿ ಪುರುಷರಿಲ್ಲ. ಅಂದರೆ ಇಲ್ಲಿರುವ ಪ್ರತಿ ಕುಟುಂಬದ ಹೆಣ್ಣು ಮಗಳೂ ಸೇನಾನಿಯೇ. ಏಕೆಂದರೆ ಅವಳೊಳಗೆ ನಡೆಯುತ್ತಿರುವುದು ನಿಜವಾದ ಯುದ್ಧ. ದೈಹಿಕವಾಗಿ ರಣರಂಗದಿಂದ ಹೊರಗೆ ಬಂದರೂ ಹೆಣ್ಣಿನೊಳಗಿನ ಹೋರಾಟವು ಮುಗಿದಿರುವುದಿಲ್ಲ. ಪ್ರತಿ ಮಹಿಳೆಯೂ ಮತ್ತೊಂದು ಯುದ್ಧಕ್ಕೆ ಅಣಿಯಾಗಬೇಕು. ಏಕೆಂದರೆ, ಅವಳಿಗೆ ಆಸರೆಯಾಗಿ ನಿಲ್ಲಲು ಪತಿಯೂ ಇರುವುದಿಲ್ಲ, ಅಪ್ಪನೂ ಇರುವುದಿಲ್ಲ, ಸಹೋದರರೂ ಇರುವುದಿಲ್ಲ. ತನ್ನೊಂದಿಗೆ ಬಂದ ವಯಸ್ಸಾದ ತಾಯಿಯನ್ನೋ, ಅತ್ತೆಯನ್ನೋ, ಪುಟಾಣಿ ಮಕ್ಕಳನ್ನೋ ಸಾಕುವ ಹೊಣೆ ಆಕೆಯ ಮೇಲಿರುತ್ತದೆ. ಇಂತಹ ಸಂದಿಗ್ಧತೆಯಲ್ಲಿ ಸಿಲುಕುತ್ತಾಳೆ ಹೆಣ್ಣು. ಈ ಪರಿಸ್ಥಿತಿಯಲ್ಲಿ ಅವಳೇನು ಮಾಡಬೇಕು, ಯೋಚಿಸಿ.
ಅಬೇದ್ ಎಂಬ ಯುವತಿ ತನ್ನ ಅನಾರೋಗ್ಯಪೀಡಿತ ತಾಯಿ ಹಾಗೂ ಅಕ್ಕನ ಮಕ್ಕಳೊಂದಿಗೆ ಮೊಸೂಲ್ ಪಟ್ಟಣದಿಂದ ವಲಸೆ ಬಂದಿದ್ದಾಳೆ. 'ಉಗ್ರರಿಗೆ ಹೆದರಿ ಮನೆಬಿಟ್ಟು ಬಂದಾಗಿದೆ. ಇವತ್ತು ರಾತ್ರಿ ಎಲ್ಲಿ ಮಲಗುವುದೆಂದು ಗೊತ್ತಿಲ್ಲ. ವಾಪಸ್ ಹೋಗುವ ಧೈರ್ಯವಿಲ್ಲ. ಉಟ್ಟ ಬಟ್ಟೆಯಲ್ಲೇ ಬಂದಿದ್ದೇವೆ. ಒಂದು ಬಾಟಲಿ ನೀರು ಬಿಟ್ಟರೆ ಬೇರೇನೂ ನಮ್ಮಲ್ಲಿಲ್ಲ. ಮುಂದಿನ ಬದುಕು ಹೇಗೆ ಎಂದು ಯೋಚಿಸಿದರೆ ಕರಾಳ ಭಯ ಆವರಿಸುತ್ತದೆ, ಎದೆಯಲ್ಲಿ ನಡುಕ ಶುರುವಾಗುತ್ತದೆ' ಎನ್ನುತ್ತಾಳೆ ಅಬೇದ್. ಇಂತಹ ಎಷ್ಟೋ ಹೆಣ್ಣುಮಕ್ಕಳು ಅಲ್ಲಿದ್ದಾರೆ. ಸಣ್ಣ ವಯಸ್ಸಿನಲ್ಲಿಯೇ ದೊಡ್ಡ ಹೊಣೆ ಹೆಗಲ ಮೇಲೆ ಬಿದ್ದಿದೆ. ಅದನ್ನು ಅವರು ಹೇಗೆ ನಿಭಾಯಿಸುತ್ತಾರೋ, ದೇವರೇ ಬಲ್ಲ. ಇಂಥವರು ಗಡಿ ದಾಟಿ ಇನ್ಯಾವುದೋ ರಾಷ್ಟ್ರದೊಳಕ್ಕೆ ಕಾಲಿಡುತ್ತಾರೆ. ಅಲ್ಲಿ ಅವರನ್ನು ಹೇಗೆ ಸ್ವೀಕರಿಸಲಾಗುತ್ತದೆ, ಹೇಗೆ ನಡೆಸಿಕೊಳ್ಳಲಾಗುತ್ತದೆ ಎಂಬುದು ಮತ್ತೊಂದು ಯಕ್ಷಪ್ರಶ್ನೆ.
ಕೆಲವರಂತೂ ಹೇಗೋ ತಪ್ಪಿಸಿಕೊಂಡು ಇರಾಕ್ ಗಡಿ ದಾಟಿರಬಹುದು. ಧೈರ್ಯವೋ, ಭೀತಿಯೋ ಯಾವುದೋ ಒಂದು ಅವರನ್ನು ದಾಟಿಸಿಬಿಟ್ಟಿದೆ. ಇನ್ನೂ ಎಷ್ಟೋ ಹೆಣ್ಣುಮಕ್ಕಳು ಯುದ್ಧಪೀಡಿತ ರಾಷ್ಟ್ರದಲ್ಲೇ ಕ್ಷಣ ಕ್ಷಣವೂ ಭಯದಿಂದ ಜೀವ ಕೈಯಲ್ಲಿ ಹಿಡಿದುಕೊಂಡು ದಿನದೂಡುತ್ತಿದ್ದಾರೆ. ಯಾವಾಗ ಗುಂಡು ದೇಹವನ್ನು ಸೀಳುವುದೋ, ಮನೆಯಂಗಳದಲ್ಲಿ ಬಾಂಬ್ ಸ್ಫೋಟವಾಗುವುದೋ ಎಂಬ ಭಯ, ಉಗ್ರರು ನಮ್ಮೂರಿಗೆ ಸಮೀಪದಲ್ಲೇ ಇದ್ದಾರೆ ಎನ್ನುವ ಸುದ್ದಿಗಳಿಂದ ಶುರುವಾಗುವ ನಡುಕ. ಹೊರಹೋದ ಪತಿ ವಾಪಸ್ ಬರುತ್ತಾನೋ, ಇಲ್ಲವೋ ಎಂಬ ಆತಂಕ. ಮಕ್ಕಳು, ಅಮ್ಮಾ ಹಸಿವು ಎಂದಾಗ ಹಿಂಡುವ ಕರುಳು ಇಂತಹ ಎಷ್ಟೋ ತಲ್ಲಣಗಳು ಹೆಣ್ಣಿನ ಹೃದಯದೊಳಗೇ ಬಿರುಗಾಳಿ ಎಬ್ಬಿಸಿರುತ್ತದೆ. ಆಕೆ ಕ್ಷಣ ಕ್ಷಣಕ್ಕೂ ನರಳುತ್ತಿರುತ್ತಾಳೆ.
ಕೆಲವು ಮಹಿಳೆಯರು ಧರ್ಮಗುರುಗಳ ಕರೆಗೆ ಕಿವಿಗೊಟ್ಟು ಉಗ್ರರ ವಿರುದ್ಧ ಹೋರಾಡಲು ಮಕ್ಕಳನ್ನೇ ಕಳುಹಿಸಿಕೊಡುತ್ತಿದ್ದಾರೆ. ಓರಗೆಯವರೊಂದಿಗೆ ಆಡಬೇಕಾದ ಮಕ್ಕಳೂ ಸೈನ್ಯ ಸೇರುತ್ತಿದ್ದಾರೆ. ಆಟಿಕೆಗಳನ್ನು ಹಿಡಿಯಬೇಕಾಗಿದ್ದ ಪುಟ್ಟ ಕೈಗಳು ಗನ್ ಹಿಡಿದಿವೆ. ಉಗ್ರರನ್ನು ದಮನಿಸುವೆ ಎಂಬ ಛಲ ಅವುಗಳ ಕಣ್ಣುಗಳಲ್ಲಿ ಕಾಣುತ್ತಿವೆ. ನನ್ನ ಕಂದಮ್ಮನನ್ನು ನಾನಾಗಿಯೇ ರಣರಂಗಕ್ಕೆ ಕಳುಹಿಸುತ್ತಿದ್ದೇನೆ ಎಂದು ಗೊತ್ತಿದ್ದೂ ಅಂತಹ ನಿರ್ಧಾರ ತೆಗೆದುಕೊಂಡಿರುವ ಹೆಣ್ಣನ್ನು ಏನೆನ್ನಬೇಕು? ಅಪಾರ ನೋವನ್ನು, ಉಮ್ಮಳಿಸಿ ಬರುವ ದುಃಖವನ್ನು ತನ್ನೊಳಗೆ ಬಚ್ಚಿಟ್ಟುಕೊಂಡು ಆಕೆ ಎಂತಹ ಘೋರ ಹೋರಾಟ ಮಾಡುತ್ತಿದ್ದಾಳೆ ಗೊತ್ತಾ?
'Only the dead have seen the end of war' ಎಂದಿದ್ದರು ಪ್ಲೇಟೋ. ಯುದ್ಧಭೂಮಿಯೆಂದರೆ ಹಾಗೆ. ಇಲ್ಲಿ ಅನೇಕ ಮಕ್ಕಳು ಅನಾಥರಾಗುತ್ತಾರೆ, ಹೆಣ್ಣುಮಕ್ಕಳು ಅತ್ಯಾಚಾರಕ್ಕೊಳಗಾಗುತ್ತಾರೆ. ಯುದ್ಧದಲ್ಲಿ ಸಿಡಿಮದ್ದುಗಳಂತೆ ಅತ್ಯಾಚಾರವೂ ಒಂದು ಅಸ್ತ್ರದಂತೆ ಬಳಕೆಯಾಗುತ್ತದೆ ಎಂಬುದು ಕಠೋರ ವಾಸ್ತವ.
ಎರಡು ಸಿದ್ಧಾಂತಗಳ ನಡುವೆ ಸಂಘರ್ಷವೇರ್ಪಟ್ಟರೆ ಅದು ಒಂದು ಕ್ರಾಂತಿಗೆ, ಬಹುಶಃ ಒಂದು ಅಭಿವೃದ್ಧಿಗೂ ಕಾರಣವಾಗಬಹುದು. ಆಚಾರ್ಯ ರಜನೀಶರು ಇದನ್ನೇ ಪ್ರತಿಪಾದಿಸಿದ್ದಾರೆ. ಸಕಾರಣ ಯುದ್ಧವಿಲ್ಲದೆ, ಮಹತ್ತರ ಕ್ರಾಂತಿಯಿಲ್ಲದೆ, ಗಮನಾರ್ಹ ಸಂಘರ್ಷವಿಲ್ಲದೆ ಯಾವುದೇ ಅಭಿವೃದ್ಧಿ ಕಾಣಲು ಸಾಧ್ಯವಿಲ್ಲ. ಹಳೆಯದೆಲ್ಲದರ ನಾಶದ ಬಳಿಕವೇ ಹೊಸತೊಂದು ಗಟ್ಟಿಯಾಗಿ ಎದ್ದುನಿಲ್ಲಲು ಸಾಧ್ಯ ಎಂಬುದು ಅವರ ಪ್ರತಿಪಾದನೆಯಾಗಿತ್ತು. ಆದರೆ ಇರಾಕ್ನಲ್ಲಿ ನಡೆಯುತ್ತಿರುವುದು ಸೈದ್ಧಾಂತಿಕ ಸಮರವಲ್ಲ. ಅಧಿಕಾರಕ್ಕಾಗಿ ಧರ್ಮಾಂಧರು ನಡೆಸುತ್ತಿರುವ ಕಾಳಗ. ಇದರ ಫಲಿತಾಂಶ ಯಾರ ಉದ್ಧಾರವೂ ಆಗಿರುವುದಿಲ್ಲ. ಅಮೆರಿಕದ ಖ್ಯಾತ ಲೇಖಕ, ಕಾದಂಬರಿಕಾರ ಜಾನ್ ಸ್ಟೀನ್ಬೆಕ್ ಹೇಳುವಂತೆ,'All war is a symptom of mans failure as a thinking animal' ಮನುಷ್ಯ ಯಾವಾಗ ಚಿಂತನೆ ಮಾಡುವಲ್ಲಿ ವಿಫಲನಾಗುತ್ತಾನೋ ಅದರ ಲಕ್ಷಣವಾಗಿರುತ್ತದೆ ಯುದ್ಧ.
ಪ್ರೀತಿ, ಸೌಹಾರ್ದ, ಮಾನವೀಯತೆಯಿಂದ ಬದುಕಬೇಕಾಗಿದ್ದ ಮನುಷ್ಯ ಕ್ರೂರಿಯಾದಾಗ ಅದು ಜಗತ್ತಿನ ನಾಶಕ್ಕೆ ನಾಂದಿಯಾಗುತ್ತದೆ. ಸ್ವಹಿತಾಸಕ್ತಿ, ಅಧಿಕಾರಕ್ಕಾಗಿ ಇಡೀ ಮಾನವಕುಲವನ್ನೇ ಬಲಿಕೊಡುವುದರಿಂದ ದಕ್ಕುವುದಾದರೂ ಏನು? ಶಾಶ್ವತವಲ್ಲದ ಈ ಬದುಕಿನಲ್ಲಿ ಸಾಧಿಸುವುದಾದರೂ ಏನು? ಯಾವ ಧರ್ಮ ಇದನ್ನು ಪ್ರೇರೇಪಿಸುತ್ತದೆ? ಇಂತಹ ರಕ್ತಪಾತ, ನೋವು, ರೋದನದ ಅಂತ್ಯವೇನು? ಬರೀ ಕಣ್ಣೀರು...
'Mankind must put an end to war, before war puts an end to mankind' ಎಂಬ ಜಾನ್ ಎಫ್. ಕೆನಡಿಯವರ ಮಾತು ಇಲ್ಲಿ ನೆನಪಿಗೆ ಬರುತ್ತದೆ. ನನ್ನ ಅಸ್ತಿತ್ವಕ್ಕಾಗಿ ನಾನು ನಡೆಸುವ ಹೋರಾಟ ನನ್ನದೇ ತಾಯಿ, ಪತ್ನಿ, ಮಗುವಿನ ನಾಶಕ್ಕೆ ಕಾರಣವಾಗುತ್ತದೆ ಎಂದಾದರೆ ಅಂತಹ ಯುದ್ಧ ಏಕೆ ಬೇಕು? ಇನ್ನಾದರೂ ಇಂತಹ ಕರಾಳತೆಗಳು ಮರೆಯಾಗಲಿ. ವಿಶ್ವದಲ್ಲಿ ಶಾಂತಿ ನೆಲೆಸಲಿ. ಮಮತೆಯ ಪ್ರತಿರೂಪವಾದ ಹೆಣ್ಣಿಗೆ ನೆಮ್ಮದಿ ಸಿಗಲಿ.
- ಹಲೀಮತ್ ಸಅದಿಯಾ
halee_diya@yahoo.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

