ಖಳನಾಯಕನ ಪಟ್ಟ ಕಟ್ಟಲು ನಿಂತವರಿಗೆ ವಾಸ್ತವ ತಿಳಿದಿಲ್ಲವೇ?
ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅಸ್ತಿತ್ವಕ್ಕೆ ಬಂದು ಒಂದು ತಿಂಗಳು ಕಳೆದಿದೆ. ಈ ಅವಧಿಯಲ್ಲಿ ಪ್ರಧಾನಿ ಮೋದಿಯವರು ಜನಪರ ಆಡಳಿತ ನೀಡುವುದರಲ್ಲಿ ಯಶಸ್ಸು ಪಡೆದರಾ? ಈ ಹಿಂದಿನ ಯುಪಿಎ ಸರ್ಕಾರಕ್ಕಿಂತ ತುಂಬಾ ಭಿನ್ನ ಎಂದು ತೋರಿಸಿಕೊಳ್ಳುವುದರಲ್ಲಿ ಈ ಸರ್ಕಾರ ಯಶಸ್ವಿಯಾಗಿದೆಯಾ? ಇವು ಎಲ್ಲರ ಪ್ರಶ್ನೆಗಳು. ಐದು ವರ್ಷದ ಅವಧಿಗೆ ಜನಾದೇಶ ಪಡೆದ ಸರ್ಕಾರದ ಯಶಸ್ಸನ್ನು ಒಂದು ತಿಂಗಳ ಆಡಳಿತ ನೋಡಿ ನಿರ್ಧರಿಸಲು ಸಾಧ್ಯವಿಲ್ಲ. ಯಾವ ರೀತಿಯಿಂದಲೂ ಅದು ಸರಿಯಲ್ಲ ಕೂಡ. ಈ ಹಿಂದಿನ ಯುಪಿಎ ನೇತೃತ್ವದ ಸರ್ಕಾರ, ಖಜಾನೆಯನ್ನು ಬರಿದಾಗಿಸಿ, ತನ್ನ ಆಡಳಿತದ ಅವಧಿಯನ್ನು ಮುಗಿಸಿತ್ತು. ಇಂಥ ಸಂದರ್ಭದಲ್ಲಿ ಆಡಳಿತವನ್ನು ಚರಿತ್ರಕಾರರು ಹೇಳಿರುವ ಮಾತೊಂದರ ಮೂಲಕ ಉಲ್ಲೇಖಿಸಬಹುದು: ರೋಮ್ ಮಹಾನಗರದ ನಿರ್ಮಾಣ ರಾತ್ರೋರಾತ್ರಿ ಆಗಿಬಿಡಲಿಲ್ಲ. ಒಂದೇ ವಾರ ಅಥವಾ ಒಂದು ತಿಂಗಳ ಅವಧಿಯಲ್ಲಿ ಆ ಮಹಾನಗರ ನಿರ್ಮಾಣದ ಕೆಲಸ ಆಗಲಿಲ್ಲ. ಸದೃಢ ಬುನಾದಿಯ ಆ ನಗರ ನಿರ್ಮಾಣಕ್ಕೆ ವರ್ಷಗಳೇ ಬೇಕಾದವು. ಈಗಿನ ಪರಿಸ್ಥಿತಿಯಲ್ಲಿ ಸದೃಢ ಭಾರತದ ನಿರ್ಮಾಣಕ್ಕೆ ಮೋದಿಯವರ ಸರ್ಕಾರಕ್ಕೂ ವರ್ಷಗಳೇ ಬೇಕಾಗಬಹುದೇನೋ...
ಮನಮೋಹನ ಸಿಂಗ್ ಅವರು ಪ್ರಧಾನಿಯಾಗಿದ್ದ ದಿನಗಳನ್ನು ಒಮ್ಮೆ ನೆನಪುಮಾಡಿಕೊಳ್ಳಿ. ಯುಪಿಎ ಸರ್ಕಾರದ ಕಡೆಯ ದಿನಗಳಲ್ಲಿ ಷೇರುಪೇಟೆಯಲ್ಲಿ ಮೇಲಿಂದ ಮೇಲೆ ಬೆಲೆ ಕುಸಿತ ಉಂಟಾಗುತ್ತಿತ್ತು. ವಿದೇಶಿ ಹೂಡಿಕೆದಾರರು ಬಂಡವಾಳ ಹೂಡಲು ಹಿಂಜರಿಯುತ್ತಿದ್ದರು. ಆದರೆ, ಚುನಾವಣೆ ಘೋಷಣೆಯಾಗಿ ನರೇಂದ್ರ ಮೋದಿಯವರು ಪ್ರಧಾನಿಯಾಗುವ ಸಾಧ್ಯತೆಗಳು ಹೆಚ್ಚಾಗಿವೆ ಎಂಬುದು ಸಾರ್ವತ್ರಿಕ ಅಭಿಪ್ರಾಯವಾದಾಗ, ಮೊದಲಿಗೆ ಷೇರುಪೇಟೆಯಲ್ಲಿ ಚೇತರಿಕೆ ಕಂಡು ಬಂತು. ಅದರ ಹಿಂದೆಯೇ ವಿವಿಧ ಕ್ಷೇತ್ರಗಳಲ್ಲಿ ಬಂಡವಾಳ ಹೂಡಲು ವಿದೇಶಿ ಹೂಡಿಕೆದಾರರು ಪೈಪೋಟಿಯ ವೇಗದಲ್ಲಿ ನಡೆದುಬಂದರು.
ನರೇಂದ್ರ ಮೋದಿ ಪ್ರಧಾನಿ ಹುದ್ದೆಯ ಅಭ್ಯರ್ಥಿ ಎಂದು ಘೋಷಣೆಯಾದಾಗ, ಮೋದಿಯೊಬ್ಬ ಸರ್ವಾಧಿಕಾರಿ, ಆತ ನರ ಹಂತಕ. ಅಂಥ ವ್ಯಕ್ತಿ ಪ್ರಧಾನಿ ಹುದ್ದೆಗೇರುವುದು ಸರಿಯಲ್ಲ, ಆತನಿಗೆ ಪ್ರಧಾನಿಯಾಗಲು ಸಾಧ್ಯವೇ ಇಲ್ಲ ಎಂದೆಲ್ಲ ಕಾಂಗ್ರೆಸ್ ಮುಖಂಡರು ಬೊಬ್ಬೆ ಹಾಕಿದ್ದರು. ಆದರೆ, ಎಲ್ಲರ ನಿರೀಕ್ಷೆ ಮೀರಿ ಬಿಜೆಪಿಗೆ ಯಾರೂ ನಿರೀಕ್ಷಿಸದಷ್ಟು ಸ್ಥಾನಗಳು ಲಭಿಸಿದವು. ಇಷ್ಟಾದ ನಂತರ, ಒಂದು ತಿಂಗಳ ಮಟ್ಟಿಗಾದರೂ ನರೇಂದ್ರ ಮೋದಿಯವರು ಪ್ರಧಾನಿಯಾದ ಸಂಭ್ರಮದಲ್ಲಿ ಖುಷಿಯಾಗಿರಲಿ ಎಂದು ಕಾಂಗ್ರೆಸ್ ನಾಯಕರು ಯೋಚಿಸಲಿಲ್ಲ. ಬದಲಾಗಿ ಕೇಂದ್ರದಲ್ಲಿ ಎನ್ಡಿಎ ಅಧಿಕಾರಕ್ಕೆ ಬಂದ ಮರುದಿನದಿಂದಲೇ ಅದರ ಮೇಲೆ ಮುಗಿಬಿದ್ದರು. ಹೀಗಿರುವಾಗಲೇ ಪೂನಾದಲ್ಲಿ ಟೆಕ್ಕಿಯೊಬ್ಬನ ಕೊಲೆಯಾಯಿತು. ಬೆಟ್ಟದಷ್ಟಿರುವ ಸವಾಲುಗಳನ್ನು ಬಗೆಹರಿಸುವುದು ಹೇಗೆ ಎಂದು ಯೋಚಿಸುತ್ತಿದ್ದ ಮೋದಿಯವರು ಟೆಕ್ಕಿಯ ಮರ್ಡರ್ ಕುರಿತು ಮೊದಲ ದಿನ ಹೇಳಿಕೆ ನೀಡಲಿಲ್ಲ. ಇದನ್ನೇ ಒಂದು ಇಶ್ಯು ಮಾಡಿದ ಕಾಂಗ್ರೆಸ್ ನಾಯಕರು, ಗದ್ದಲ ಆರಂಭಿಸಿಯೇಬಿಟ್ಟರು. ಮರುದಿನವೇ ಟೆಕ್ಕಿಯ ಹತ್ಯೆ ಪ್ರಕರಣವನ್ನು ಖಂಡಿಸಿ ಮೋದಿಯವರು ಹೇಳಿಕೆ ನೀಡಿದರೆ, ಆಗಲೂ ಕಾಂಗ್ರೆಸ್ ಮುಖಂಡರ ಗದ್ದಲ ಕಡಿಮೆಯಾಗಲಿಲ್ಲ. ಈ ಪ್ರಕರಣ ನಡೆದ ದಿನವೇ ಖಂಡಿಸುವ ಬದಲು ತಡವಾಗಿ ಖಂಡಿಸುತ್ತಿದ್ದಾರೆ ಎಂದೆಲ್ಲಾ ವಾಹಿನಿಗಳ ಮುಂದೆ ಕೂತು ಬೊಬ್ಬೆ ಹಾಕಲು ಆರಂಭಿಸಿದರು.
ಆನಂತರದಲ್ಲಿ ಮೋದಿಯವರನ್ನು ಟೀಕಿಸಲು ಕಾದಿದ್ದವರಿಗೆ ಸಿಕ್ಕಿದ್ದು 'ಹಿಂದಿ ಹೇರಿಕೆ' ಎಂಬ ಮತ್ತೊಂದು ವಿಚಾರ. ಆಡಳಿತ ವ್ಯವಹಾರದಲ್ಲಿ ಹಿಂದಿ ಬಳಸುವಂತೆ ಸುತ್ತೋಲೆ ಹೊರಡಿಸಲು ಮೋದಿ ಸಿದ್ಧತೆ ನಡೆಸಿದ್ದಾರೆ. ಪ್ರಾದೇಶಿಕ ಭಾಷೆಗಳನ್ನು ಕಡೆಗಣಿಸಿ ಅವುಗಳ ಮೇಲೆ ಹಿಂದಿಯನ್ನು ಹೇರುವುದೇ ಇದರ ಉದ್ದೇಶ. ಈ ಯೋಜನೆಯ ಹಿಂದೆ ಆರ್ಎಸ್ಎಸ್ನ ಷಡ್ಯಂತ್ರವಿದೆ ಎಂದೂ ಕೂಗಾಡಿದರು. ಒಂದೆರಡಲ್ಲ, ಭರ್ತಿ ಒಂದು ವಾರ ಇದೇ ವಿಷಯವಾಗಿ ಚರ್ಚೆ ನಡೆಯಿತು. ಪ್ರಧಾನಿಯಾಗುತ್ತಿದ್ದಂತೆಯೇ ರಾಜ್ಯಗಳ ಮೇಲೆ ಸವಾರಿ ಮಾಡಲು ಹೊರಟಿದ್ದಾರೆ ಎಂಬ ಪುಕಾರು ಶುರುವಾಯಿತು. ವಾಸ್ತವ ಏನೆಂದರೆ, ಆಡಳಿತ ಭಾಷೆಯಾಗಿ ಹಿಂದಿಯನ್ನು ಹೇರುವ ಉದ್ದೇಶ ಕೇಂದ್ರ ಸರ್ಕಾರಕ್ಕೆ ಇರಲಿಲ್ಲ. ಈ ಸಂಬಂಧವಾಗಿ ಸುತ್ತೋಲೆ ಕೂಡ ಹೊರಟಿರಲಿಲ್ಲ. ಆದರೆ ಮೋದಿ ಆಡಳಿತದಲ್ಲಿ ಏನಾದರೂ ಹುಳುಕು ಕಂಡುಹಿಡಿದು ಜನರ ದೃಷ್ಟಿಯಲ್ಲಿ ಅವರಿಗೆ 'ಖಳ ನಾಯಕನ' ಪಟ್ಟ ಕಟ್ಟಲು ನಿಂತವರಿಗೆ ಈ ವಾಸ್ತವ ಸಂಗತಿಗಳ ಅರಿವೇ ಇರಲಿಲ್ಲ.
ಮುಂದೆ, ರೈಲು ಪ್ರಯಾಣ ದರ ಏರಿಕೆಗೆ ಕೇಂದ್ರ ಸರ್ಕಾರ ಮುಂದಾದಾಗ ಮತ್ತೊಮ್ಮೆ ಮೋದಿ ವಿರೋಧಿಗಳ ಬಾಯಿಗೆ ಶಕ್ತಿ ಬಂತು. ಅಧಿಕಾರಕ್ಕೆ ಬರುವ ಮೊದಲು ಒಳ್ಳೆಯ ದಿನಗಳನ್ನು ಕಾಣಬೇಕು ಎಂಬ ಆಸೆ ಇದ್ದರೆ ಬಿಜೆಪಿಗೆ ಮತ ನೀಡಿ ಎಂದು ಮೋದಿ ಹೇಳಿದ್ದರು. ಒಳ್ಳೆಯ ದಿನಗಳನ್ನು ಕೊಡುವುದು ಎಂದರೆ ಬೆಲೆ ಹೆಚ್ಚಿಸುವುದು ಎಂಬ ಅರ್ಥವೇ ಎಂದು ಇವರು ಪ್ರಶ್ನೆ ಹಾಕಿದರು. ಅಷ್ಟೇ ಅಲ್ಲ, ಹೆಚ್ಚಿಸಲಾಗಿರುವ ರೈಲು ಪ್ರಯಾಣ ದರವನ್ನು ಕೂಡಲೇ ರದ್ದು ಮಾಡಬೇಕೆಂದು ಪ್ರತಿಭಟನೆಯನ್ನೂ ನಡೆಸಿದರು. ಇಂಥದೊಂದು ಬೆಳವಣಿಗೆಯನ್ನು ನಿರೀಕ್ಷಿಸಿದ್ದ ರೇಲ್ವೆ ಸಚಿವ ಸದಾನಂದಗೌಡರು-'ಈಗ ಚಾಲ್ತಿಯಲ್ಲಿರುವ ಸುಧಾರಣೆಯೇ ಇಲ್ಲದ ರೈಲು ಸೇವೆ ಬೇಕೋ ಅಥವಾ ವಿಶ್ವದರ್ಜೆಯ ಸೌಲಭ್ಯ ಹೊಂದಿದ ಸೇವೆ ಬೇಕೋ? ಅತ್ಯಾಧುನಿಕ ರೈಲ್ವೆ ವ್ಯವಸ್ಥೆ ಬೇಕು ಎನ್ನುವುದಾದರೆ ದರ ಏರಿಕೆಯನ್ನು ಒಪ್ಪಿಕೊಳ್ಳದೇ ವಿಧಿಯಿಲ್ಲ' ಎಂದದ್ದಲ್ಲದೆ ಆ ದರ ಏರಿಕೆಗೆ ಕಾರಣವಾಗಿರುವ ವಿಷಯಗಳನ್ನು ಸಮರ್ಥವಾಗಿ ಜನತೆಯ ಮುಂದಿಟ್ಟರು. ಸಚಿವರ ಮಾತುಗಳ ಹಿಂದೆ ಪ್ರಾಮಾಣಿಕತೆ ಇದ್ದುದನ್ನು ಗಮನಿಸಿದ ದೇಶದ ಯುವಜನತೆ, ದರ ಏರಿಕೆ ಖಂಡಿಸಿ ನಡೆಸುತ್ತಿದ್ದ ಪ್ರತಿಭಟನೆಯನ್ನೂ ಕೈಬಿಟ್ಟರು. ಹೀಗೆ, ಮೋದಿಯವರನ್ನು 'ವಿಲನ್' ಎಂದು ಬಿಂಬಿಸಲೇಬೇಕೆಂದು ಹೊರಟ ಕಾಂಗ್ರೆಸ್ ನಾಯಕರಿಗೆ ಪ್ರತಿಯೊಂದು ಸಂದರ್ಭದಲ್ಲೂ ಸೋಲಾಯಿತು.
ಈಗ ಅಧಿಕಾರದ ಮೊದಲ ಒಂದು ತಿಂಗಳ ಅವಧಿಯನ್ನು ಯಶಸ್ವಿಯಾಗಿ ಮುಗಿಸಿ, ಹಳೆಯ ವಿಶ್ವಾಸದೊಂದಿಗೇ ಹೆಜ್ಜೆ ಮುಂದಿಟ್ಟಿದ್ದಾರೆ ಮೋದಿ. ಈಗ ಎಲ್ಲರ ಗಮನವೂ ಜುಲೈ 10ರ ಕಡೆಗಿದೆ. ಅಂದು ವಾರ್ಷಿಕ ಬಜೆಟ್ ಮಂಡನೆಯಾಗಲಿದೆ. ಸದೃಢ ಭಾರತದ ನಿರ್ಮಾಣವೇ ನನ್ನ ಗುರಿ ಎಂದು ಮೊದಲಿನಿಂದಲೂ ಹೇಳಿಕೊಂಡು ಬಂದಿರುವ ಮೋದಿ, ಆಡಳಿತದ ಮುಂದಿನ ಹೆಜ್ಜೆಗಳು ಹೇಗಿರಬಹುದು? ಅವರು ಪ್ರಧಾನಿಯಾಗಿ ಏನೇನು ಹೊಸ ಯೋಜನೆಗಳನ್ನು ಹಮ್ಮಿಕೊಳ್ಳಬಹುದು ಎಂಬಂಥ ಕುತೂಹಲದ ಪ್ರಶ್ನೆಗಳಿಗೆ, ಮುಂದಿನ ಕೆಲವೇ ದಿನಗಳಲ್ಲಿ ನಡೆಯಲಿರುವ ಅಧಿವೇಶನದಲ್ಲಿಯೇ ಸ್ಪಷ್ಟ ಉತ್ತರಗಳು ಸಿಗಲಿವೆ.
-
ಈಗಿನ ಸಂದರ್ಭದಲ್ಲಿ, ನರೇಂದ್ರ ಮೋದಿಯವರನ್ನು ಬಿಟ್ಟರೆ ಮತ್ತೆ ಮತ್ತೆ ಸುದ್ದಿಯಾಗುತ್ತಿರುವ ಮತ್ತೊಬ್ಬರೆಂದರೆ ಅರವಿಂದ ಕೇಜ್ರಿವಾಲ್. ಅಣ್ಣಾ ಹಜಾರೆ ಅವರೊಂದಿಗಿನ ಭ್ರಷ್ಟಾಚಾರದ ವಿರುದ್ಧದ ಹೋರಾಟದ ಮೂಲಕ ಜನಪ್ರಿಯತೆ ದಕ್ಕಿಸಿಕೊಂಡ ಕೇಜ್ರಿವಾಲ್, ಆನಂತರದಲ್ಲಿ ಆಮ್ ಆದ್ಮಿ ಪಕ್ಷ ಕಟ್ಟಿ ದೆಹಲಿಯ ಮುಖ್ಯಮಂತ್ರಿಯೂ ಆದರು. ಆದರೆ ಅವರು ಸುದ್ದಿಯಾದದ್ದು ಒಂದಲ್ಲ ಒಂದು ವಿವಾವದಿಂದಲೇ. ದೆಹಲಿಯ ಮುಖ್ಯಮಂತ್ರಿ ಗದ್ದುಗೆಯಿಂದ ಕೆಳಗಿಳಿದ ನಂತರವೂ, ಮುಖ್ಯಮಂತ್ರಿಗಳ ವಾಸಕ್ಕೆ ನೀಡಲಾಗಿದ್ದ ಮನೆಯನ್ನು ಖಾಲಿ ಮಾಡಿಲ್ಲ ಎಂಬ ಆಪಾದನೆಗೆ ಗುರಿಯಾಗಿದ್ದ ಕೇಜ್ರಿವಾಲ್, ಆನಂತರದಲ್ಲಿ ದೆಹಲಿಯ ತಿಲಕ್ ಮಾರ್ಗ್ನಲ್ಲಿದ್ದ ಹಳೆಯ ಕಾಲದ ಬಂಗಲೆಗೆ ವಾಸ್ತವ್ಯ ಬದಲಾಯಿಸಿದರು. "ಈ ಮನೆಯನ್ನು ಹಿತೈಷಿಯೊಬ್ಬರು ಬಾಡಿಗೆಗೆ ಕೊಟ್ಟಿದ್ದಾರೆ. ಅವರಿಗೆ ತಿಂಗಳಿಗೆ 'ಒಂದು ರುಪಾಯಿ' ಬಾಡಿಗೆ ನೀಡಲಾಗುತ್ತದೆ" ಎಂದು ಹೇಳಿದ್ದಲ್ಲದೇ ಬಡ ಮಧ್ಯಮ ವರ್ಗದವರೇ ವಾಸಿಸುವ ಏರಿಯಾದಲ್ಲಿ ತಮಗೊಂದು ಮನೆ ತೋರಿಸಿದ ಹಿತೈಷಿಗೆ ಧನ್ಯವಾದಗಳನ್ನೂ ಅರ್ಪಿಸಿದ್ದರು.
ಆದರೆ ಇಲ್ಲಿ ಕೂಡ ಕೇಜ್ರಿವಾಲ್ ಸುಳ್ಳು ಹೇಳಿದ್ದರು ಎಂಬುದನ್ನು ಹಿಂದೂಸ್ತಾನ್ ಟೈಮ್ಸ್ ಪತ್ರಿಕೆ ನಡೆಸಿದ ತನಿಖೆಯಿಂದ ಬೆಳಕಿಗೆ ಬಂದಿದೆ. ಅವರು ತಿಂಗಳಿಗೆ 1 ರುಪಾಯಿ ಬಾಡಿಗೆ ನೀಡುತ್ತಿರುವುದು ನಿಜವಿರಬಹುದು. ಆದರೆ ಈ ಮನೆಯ ನವೀಕರಣಕ್ಕಾಗಿಯೇ 8 ರಿಂದ 10 ಲಕ್ಷ ರುಪಾಯಿ ಖರ್ಚಾಗಿದೆ. ಅದಕ್ಕಿಂತ ಮುಖ್ಯವಾಗಿ, ಈ ಹಳೆಯ ಬಂಗಲೆಯ ಒಡೆತನದ ವಿಷಯವಾಗಿಯೇ ತಕರಾರುಗಳಿವೆ.
ಈ ಸಂಗತಿಯ ಬಗ್ಗೆ ಗೊತ್ತಿದ್ದರೂ ಕೇಜ್ರಿವಾಲ್ ಅವರು ಆ ಬಂಗಲೆಯಲ್ಲಿ ವಾಸಿಸಲು ಒಪ್ಪಿದ್ದು ತಪ್ಪು. ಅದಕ್ಕಿಂತ ಹೆಚ್ಚಾಗಿ, ಕೇವಲ ಒಂದು ರುಪಾಯಿ ಮಾಸಿಕ ಬಾಡಿಗೆಯ ಮನೆಯ ನವೀಕರಣಕ್ಕೆ 8-10 ಲಕ್ಷ ರುಪಾಯಿಗಳನ್ನು ಖರ್ಚು ಮಾಡಿಸಿದ್ದು ಇನ್ನೊಂದು ತಪ್ಪು. ಹೀಗೆ ಬಳಕೆಯಾಗಿರುವ ಹಣದ ಮೂಲ ಯಾವುದು? ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಇಂಥದೊಂದು ಅನುಕೂಲವನ್ನು ಕೇಜ್ರಿವಾಲ್ ಅವರಂಥ ಪ್ರಭಾವಿ ವ್ಯಕ್ತಿಗೆ ಯಾರಾದರೂ ಬಾಡಿಗೆ ಕೊಡಲು ಸಾಧ್ಯವೆ? ಅದಕ್ಕಿಂತ ಮುಖ್ಯವಾಗಿ, ಭ್ರಷ್ಟಾಚಾರದ ವಿರುದ್ಧ ದನಿ ಎತ್ತಿದ್ದು ಕೇಜ್ರಿವಾಲ್, ಲೆಕ್ಕಾಚಾರವೇ ಸಿಗದಂಥ ಖರ್ಚುವೆಚ್ಚಗಳಿಂದ ಕೂಡಿದ ಮನೆಯಲ್ಲಿ ವಾಸಿಸಲು ಬಂದಿದ್ದು ಎಷ್ಟು ಮಟ್ಟಿಗೆ ಸರಿ?
ಇಂಥದೇ ಪ್ರಶ್ನೆಗಳು ಹಲವು ದಿಕ್ಕಿನಿಂದ ಕೇಳಿ ಬಂದಾಗ, ಬಡವರಂತೆ ಸರಳವಾಗಿ ಬದುಕಬೇಕೆಂಬ ಇಚ್ಛೆಯಿಂದಲೇ ಹಳೆಯ ಕಾಲದ ಬಂಗಲೆಗೆ ಹೋಗಿದ್ದಾಗಿ ಅವರು ಹೇಳಿದ್ದಾರೆ. ವ್ಯಂಗ್ಯ ಏನೆಂದರೆ- ಇದೇ ಕೇಜ್ರಿವಾಲ್, ದೆಹಲಿಯ ಮುಖ್ಯಮಂತ್ರಿ ಆಗುವ ಮೊದಲು ಅಧಿಕಾರಿಗಳಿಗೆಂದು ಮೀಸಲಾಗಿದ್ದ ಸರ್ಕಾರದ ಫ್ಲಾಟ್ನಲ್ಲಿ ವಾಸಿಸುತ್ತಿದ್ದರು. ಈ ಫ್ಲಾಟ್, ಕೇಜ್ರಿವಾಲ್ ಪತ್ನಿಗೆ ನೀಡಿದ್ದಾಗಿತ್ತು. ಬಡವರಂತೆ ಸರಳವಾಗಿ ಬದುಕಬೇಕು ಎಂದು ನಿಜಕ್ಕೂ ಇದ್ದಿದ್ದರೆ, ಮುಖ್ಯಮಂತ್ರಿ ಆಗುವ ಮೊದಲೇ ಕೇಜ್ರಿವಾಲ್ ಅವರು ಗುಡಿಸಲಿನಲ್ಲಿ ವಾಸಿಸಿ 'ನಾನು ಎಂದೆಂದೂ ಢಿಫರೆಂಟ್' ಎಂದು ತೋರಿಸಬಹುದಿತ್ತಲ್ಲವೇ?
ಇಂಥ ಸೂಕ್ಷ ಸಂಗತಿಗಳನ್ನೂ ಅರ್ಥಮಾಡಿಕೊಳ್ಳದೆ ಸುದ್ದಿಯಾಗುವ ಉದ್ದೇಶದಿಂದಲೇ ಗಿಮಿಕ್ ಮಾಡುತ್ತಾ ಹೋದರೆ, ಗಿಮಿಕ್ ಕಿಂಗ್ ಎಂಬ ಕುಖ್ಯಾತಿ ಕೇಜ್ರಿಗೆ ಶಾಶ್ವತವಾಗಿ ಅಂಟಿಕೊಳ್ಳುವ ಅಪಾಯ ಇದ್ದೇ ಇದೆ. ಸದಾ ಸುದ್ದಿಯಲ್ಲಿರಬೇಕೆಂದು ಹಂಬಲಿಸುವ ಕೇಜ್ರಿವಾಲ್, ಇದರ ಬಗ್ಗೆ ಯೋಚಿಸಬಹುದು ಎಂಬ ನಂಬಿಕೆ ಹೆಚ್ಚಿನವರಿಗೆ ಇಲ್ಲ...
-ವೀರೇಂದ್ರ ಕಪೂರ್
virendra1946@yahoo.co.in
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

