ರಾಷ್ಟ್ರ ನಿಷ್ಠೆ ವ್ಯಾಖ್ಯಾನಿಸಿದ ಲಾಲಾ ಹರ್ದಯಾಳ್

ಗದರ್ ಕ್ರಾಂತಿಯ ಪ್ರವರ್ತಕ, ಸ್ವಾತಂತ್ರ್ಯ ಹೋರಾಟಗಾರ ಲಾಲಾ ಹರ್ದಯಾಳ್ರ 75ನೇ ಸ್ಮೃತಿ ವರ್ಷದ ನಿಮಿತ್ತ ಈ ಲೇಖನ...
ನವೆಂಬರ್ 1912ರ ಗದರ್ ಪತ್ರಿಕೆಯ ಮುಖಪುಟದಲ್ಲಿನ ಜಾಹೀರಾತಿನ ಒಕ್ಕಣೆ
ಬೇಕಾಗಿದ್ದಾರೆ: ಭಾರತದಲ್ಲಿ ಬಂಡಾಯವೆಬ್ಬಿಸಲು ಸೈನಿಕರು
ವೇತನ: ಸಾವು
ಬಹುಮಾನ: ಹುತಾತ್ಮತೆ
ಪೆನ್ಷನ್: ಸ್ವಾತಂತ್ರ್ಯ
ಯುದ್ಧಕ್ಷೇತ್ರ: ಭಾರತ
ಗದರ್ (ಬಂಡಾಯ) ಪಕ್ಷ, ಗದರ್ ಪತ್ರಿಕೆ, ಗದರ್ ಚಳವಳಿಯು ಮೊದಲನೆಯ ಮಹಾಯುದ್ಧದ ಸಂದರ್ಭದಲ್ಲಿ, ಭಾರತದಲ್ಲಿ ಯುದ್ಧ ನಡೆಸಿ ಸಶಸ್ತ್ರ ಕ್ರಾಂತಿಯ ಮೂಲಕ ಭಾರತವನ್ನು ಬ್ರಿಟಿಷರ ಕಪಿಮುಷ್ಠಿಯಿಂದ ಸ್ವತಂತ್ರಗೊಳಿಸಲು ಮೊದಲನೇ ವಿಶ್ವಯುದ್ಧದ ಪ್ರಾರಂಭಕ್ಕೆ ಒಂದು ವರ್ಷ ಮುಂಚೆ ಅಮೆರಿಕ ಮತ್ತು ಕೆನಡಾ ದೇಶಗಳ ಅನಿವಾಸಿ ಭಾರತೀಯರನ್ನು ಒಳಗೊಂಡಂತೆ ಪ್ರಾರಂಭವಾದವು. ಈ ಎಲ್ಲ ಪ್ರಯತ್ನಗಳ ಅತೀ ಮುಖ್ಯ ಮಹಾಪುರುಷ ಲಾಲಾ ಹರದಯಾಳ್.
14.10.1884 ರಂದು ಗೌರಿದಯಾಳ್ ಮಾಥುರ್ ಮತ್ತು ಬೋಲಿ ರಾಣಿಯವರ ಮಗನಾಗಿ ಜನಿಸಿದ ಹರದಯಾಳ್ ಬಾಲ್ಯದಲ್ಲಿಯೇ ತಮ್ಮ ತಾಯಿಯಿಂದ ಭಾರತ ದೇಶದ ಮಹಾನ್ ಸಂಸ್ಕೃತಿ, ಮಹಾಪುರುಷರ ಬಗ್ಗೆ ತಿಳಿದುಕೊಂಡರು. ಬ್ರಿಟಿಷ್ ಸರ್ಕಾರದಿಂದಲೇ ವಿದ್ಯಾರ್ಥಿ ವೇತನವನ್ನು ಪಡೆದು 1905ರಲ್ಲಿ ಆಕ್ಸ್ಫರ್ಡ್ ವಿಶ್ವವಿದ್ಯಾನಿಲಯದಲ್ಲಿ ಇತಿಹಾಸ, ರಾಜನೀತಿ ಮತ್ತು ಸಂಸ್ಕೃತದ ಅಧ್ಯಯನಕ್ಕೆ ತೆರಳಿ ಯಶಸ್ವಿಯಾದ ಹರದಯಾಳ್ ಇಂಗ್ಲೆಂಡಿನಲ್ಲಿ "ಭಾರತ ಭವನದ" ಸಂಪರ್ಕಕ್ಕೆ ಬಂದರು. ಶ್ಯಾಮಜಿ ಕೃಷ್ಣವರ್ಮ, ಸಾವರ್ಕರ್ ಭಾಯಿ ಪರಮಾನಂದರ ಪ್ರಭಾವದಿಂದ ಪ್ರೇರಿತರಾಗಿ ಬ್ರಿಟಿಷ್ ಸರ್ಕಾರದ ವಿರುದ್ಧ ಶಸ್ತ್ರ ಹಿಡಿದೇ ಹೋರಾಡಬೇಕು ಎಂಬ ನಿರ್ಧಾರಕ್ಕೆ ಬಂದರು.
ಬ್ರಿಟಿಷರ ದಬ್ಬಾಳಿಕೆ, ಶೋಷಣೆ, ದೌರ್ಜನ್ಯಗಳಿಂದ ಅತ್ಯಂತ ದುಃಖಿತರಾಗಿದ್ದ ಹರದಯಾಳರು ಬ್ರಿಟಿಷರಿಂದ ಪಡೆದ ವಿದ್ಯಾರ್ಥಿ ವೇತನವನ್ನು ಹಿಂತಿರುಗಿಸಿ ತಮ್ಮ ವಿದ್ಯಾಭ್ಯಾಸವನ್ನು ಅರ್ಧಕ್ಕೆ ನಿಲ್ಲಿಸಿದರು. ತಮಗೆ ದೊರೆತ ವಿದ್ಯಾರ್ಥಿ ವೇತನವನ್ನು ರಾಷ್ಟ್ರಭಕ್ತಿಯ, ದೇಶದ ಸ್ವಾತಂತ್ರ್ಯ ಹೋರಾಟದ ಕಾರಣದಿಂದ ಹಿಂತಿರುಗಿಸಿದವರಲ್ಲಿ ಹರದಯಾಳರು ಮೊದಲಿಗರು. ಅನಂತರವೂ ಅವರ ಈ ಶ್ರೇಷ್ಠ ಮೇಲ್ಪಂಕಿಯ ಆದರ್ಶವನ್ನು ಅನುಸರಿಸಿದವರು ವಿರಳ. ಲಂಡನ್ನಿನಲ್ಲಿ ಶ್ಯಾಮಜಿ ಕೃಷ್ಣವರ್ಮ, ಸಾವರ್ಕರ್ ಮತ್ತು ಹರದಯಾಳರ ನಡುವೆ ಸುದೀರ್ಘ ಚರ್ಚೆ ನಡೆದು ಹರದಯಾಳ್ ಭಾರತಕ್ಕೆ ಹಿಂತಿರುಗಿ ಪಂಜಾಬ್ ಮತ್ತು ಉತ್ತರಭಾರತದಲ್ಲಿ ಕ್ರಾಂತಿಕಾರಿ ಪಕ್ಷವೊಂದನ್ನು ಸಂಘಟಿಸಲು ಪುಣೆಯಲ್ಲಿ ಲೋಕಮಾನ್ಯ ತಿಲಕರನ್ನು ಭೇಟಿ ಮಾಡಿದರು.
ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕ್ರಾಂತಿಕಾರಿಯಾಗಿ ರೂಪುಗೊಂಡ ಹರದಯಾಳ್ ತಮ್ಮ ಸಾಂಸಾರಿಕ ಜೀವನವನ್ನು ತ್ಯಜಿಸಿದರು. ಹಲವು ಪತ್ರಿಕೆಗಳಿಗೆ ದೇಶದ ರಾಜಕೀಯ ಮತ್ತು ಸಾಮಾಜಿಕ ವಿಷಯಗಳ ಮೇಲೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿ ಲೇಖನಗಳನ್ನು ಬರೆಯತೊಡಗಿದರು. ಭಾರತದಲ್ಲಿ ಬ್ರಿಟಿಷರ ಶೈಕ್ಷಣಿಕ ನೀತಿ, ಹಿಂದೂ ಜನಾಂಗದ ಮೇಲೆ ಬ್ರಿಟಿಷರ ಸಾಮಾಜಿಕ ವಿಜಯ ಇವು ಹರದಯಾಳರ ಪ್ರಸಿದ್ಧವಾದ ಲೇಖನಗಳು.
ಇಷ್ಟೆಲ್ಲ ಪ್ರಖರ ದೇಶಪ್ರೇಮಿ ಚಟುವಟಿಕೆಗಳ ನಡುವೆ ರಾಜಕೀಯ ಪರಿಸ್ಥಿತಿ ಪ್ರತಿಕೂಲ ಪರಿಸ್ಥಿತಿಗೆ ತಿರುಗಿತು. ಬ್ರಿಟಿಷ್ ಸರ್ಕಾರದ ಕೆಂಗಣ್ಣು ಹರದಯಾಳ್ರ ಮೇಲೆ ಹರಿಯಿತು. ತೀರಾ ಅನಿವಾರ್ಯವಾದ ಪರಿಸ್ಥಿತಿಯಲ್ಲೂ ಲಾಲಾ ಲಜಪತ್ರಾಯ್ರ ಸಲಹೆಯಂತೆ ಭಾರತವನ್ನು ಬಿಟ್ಟು ಲಂಡನ್ನಿಗೆ 1908ರಲ್ಲಿ ತೆರಳಿದರು. ಮತ್ತ್ತೆಂದೂ ಭಾರತಕ್ಕೆ ವಾಪಸ್ ಬರಲಾಗದ ಲಾಲಾಹರದಯಾಳ್ ತಮ್ಮ ಪತ್ನಿಯನ್ನು ಮತ್ತೆಂದೂ ನೋಡಲಾಗಲಿಲ್ಲ ಮತ್ತು ಲಂಡನ್ನಿಗೆ ತೆರಳಿದ ಸ್ವಲ್ಪ ದಿನದ ನಂತರ ಜನಿಸಿದ ತಮ್ಮ ಒಬ್ಬಳೇ ಮಗಳು ಶಾಂತಿಯನ್ನು ಒಮ್ಮೆಯೂ ಪ್ರತ್ಯಕ್ಷ ನೋಡಲಾಗಲಿಲ್ಲ.
1908ರಲ್ಲಿ ಲಂಡನ್ನಿನ ಭಾರತ ಭವನದಲ್ಲಿ ನಡೆದ ಭಾರತ ಸ್ವಾತಂತ್ರ್ಯ ಸಂಗ್ರಾಮ 1857ರ 50ನೇ ವರ್ಷಾಚರಣೆ, 1909ರಲ್ಲಿ ದೇಶಭಕ್ತ ಮದನ್ಲಾಲ್ ಢಿಂಗ್ರಾ ಭಾರತದ ಶತ್ರು ಕರ್ಜನ್ ವಾಯಿಲಿಯನ್ನು ಸಂಹಾರ ಮಾಡಿದ್ದು, ಮುಂತಾದ ಹಲವಾರು ಘಟನೆಗಳಿಂದ ಭಾರತೀಯ ಕ್ರಾಂತಿಕಾರಿಗಳು ತಮ್ಮ ಕಾರ್ಯ ನಿರ್ವಹಣೆ ಮಾಡಲು ಅತ್ಯಂತ ಕಷ್ಟಕರವಾಗಿ, ಹರದಯಾಳ್ ತಮ್ಮ ಕಾರ್ಯಕ್ಷೇತ್ರವನ್ನು ಪ್ಯಾರಿಸ್ಸಿಗೆ ಬದಲಾಯಿಸಿಕೊಂಡರು.
ಕ್ರಾಂತಿಕಾರಿಗಳು ಪ್ರಾರಂಭ ಮಾಡಿದ 'ವಂದೇ ಮಾತರಂ' ಪತ್ರಿಕೆಯ ಸಂಪಾದಕರಾದ ಹರದಯಾಳರು 1910ರಲ್ಲಿ ಸಾವರ್ಕರ್ ಬಂಧನವಾದಾಗ ಅವರನ್ನು ಬಿಡಿಸಲು ಸರ್ವ ಪ್ರಯತ್ನವನ್ನು ಮೇಡಂ ಭೀಕಾಜಿ ಕಾಮಾ, ವಿ.ವಿ.ಎಸ್. ಅಯ್ಯರ್, ಸರ್ದಾರ್ಸಿಂಗ್ ರಾಣಾರವರೊಂದಿಗೆ ಮಾತುಕತೆ ನಡೆಸಿದರೂ ಯಶಸ್ವಿಯಾಗಲಿಲ್ಲ.
ಭಾರತದ ರಾಜಧಾನಿಯನ್ನು ಕಲ್ಕತ್ತೆಯಿಂದ ದೆಹಲಿಗೆ ಬದಲಾಯಿಸಿದ ಸಂಬಂಧವಾಗಿ ವೈಸ್ರಾಯ್ ಲಾರ್ಡ್ ಹಾರ್ಡಿಂಗ್ನ ಮೆರವಣಿಗೆಯ ಮೇಲೆ ಬಾಂಬ್ ಎಸೆದ ರಾಸ್ ಬಿಹಾರಿ ಬೋಸರು ಹರದಯಾಳ್ ಸಂಘಟಿಸಿದ್ದ ಕ್ರಾಂತಿಕಾರಿ ತಂಡದ ಸದಸ್ಯರಾಗಿದ್ದರು. ಈ ಪ್ರಕರಣದಲ್ಲಿ ಹರದಯಾಳ್ರ ಪ್ರಮುಖ ಅನುಯಾಯಿಗಳಾಗಿದ್ದ ಮಾಸ್ಟರ್ ಅಮೀರ್ ಚಂದ್, ಅವಲ್ ಬಿಹಾರಿ, ಭಾಯಿ ಬಾಲ ಮುಕುಂದ್, ಬಸಂತ್ ಕುಮಾರ್ ಬಿಶ್ವಾಸರಿಗೆ ಗಲ್ಲುಶಿಕ್ಷೆಯಾಯಿತು. ದುರಾದೃಷ್ಟವೆಂದರೆ ಸರಿಯಾದ ಸಾಕ್ಷಿ ಪುರಾವೆ ಇಲ್ಲದಿದ್ದರೂ ಗಲ್ಲು ಶಿಕ್ಷೆ ವಿಧಿಸಿ ಬ್ರಿಟಿಷ್ ಸರ್ಕಾರ ಎಲ್ಲ ಕ್ರಾಂತಿಕಾರಿ ಹೋರಾಟವನ್ನು ಸದೆಬಡಿಯುವ ತನ್ನ ಉದ್ಧಟತನವನ್ನು ತೋರಿಸಿತು. ಈ ಪ್ರಕರಣವನ್ನು ಕುರಿತು 'ಯುಗಾಂತರ್ ಸರ್ಕ್ಯುಲರ್' ಎಂಬ ಕಿರುಪುಸ್ತಕವನ್ನು ಹರದಯಾಳ್ ಬರೆದರು. ಜೊತೆ ಜೊತೆಯಲ್ಲಿ ವಿದೇಶಗಳಿಗೆ ವಿದ್ಯಾಭ್ಯಾಸಕ್ಕೆ ಬರುವ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಗುರುಗೋವಿಂದ ಸಿಂಹ ಸ್ಮಾರಕ ವಿದ್ಯಾರ್ಥಿ ವೇತನವನ್ನು ಪ್ರಾರಂಭಿಸಿದರು. ಕಾರ್ಮಿಕ ಚಳವಳಿಯಲ್ಲಿ ಸಕ್ರಿಯರಾಗಿದ್ದ ಅವರು ಜಾಗತಿಕ ಕೈಗಾರಿಕಾ ಕಾರ್ಮಿಕರ ಒಕ್ಕೂಟದ ಅಮೆರಿಕೆಯ ಸ್ಯಾನ್ಫ್ರಾನ್ಸಿಸ್ಕೋ ಶಾಖೆಯ ಕಾರ್ಯದರ್ಶಿಯಾಗಿಯೂ ಕಾರ್ಯನಿರ್ವಹಿಸಿದರು.
ವರ್ಣಭೇದ ನೀತಿಯನ್ನು ಪ್ರತಿಪಾದಿಸಿ ಏಷ್ಯಾ ಖಂಡದವರನ್ನು ಸಾಮಾನ್ಯವಾಗಿ ಗುರಿಯಾಗಿಸಿಕೊಂಡು ಮತ್ತು ಭಾರತೀಯರನ್ನು ಮುಖ್ಯವಾಗಿ ಗುರಿಯಾಗಿಸಿಕೊಂಡು ಕೆನಡಾ ದೇಶ ಜಾರಿಗೊಳಿಸಿದ "ಏಷ್ಯನ್ ಇಮ್ಮಿಗ್ರೇಷನ್ ಕಾಯ್ದೆ"ಯನ್ವಯದಿಂದಾಗಿ ಅನ್ಯಾಯಕ್ಕೊಳಗಾದ ಭಾರತೀಯ ವಲಸೆಗಾರ ಕಾರ್ಮಿಕರ ಹಿತ ಕಾಪಾಡಲು ಹಲವು ಮುತ್ಸದ್ಧಿಗಳ ಜೊತೆ ಪ್ರಯತ್ನಿಸಿದ ಹರದಯಾಳ್ ಭಾರತದಲ್ಲಿ ರಾಷ್ಟ್ರೀಯ ಸ್ವದೇಶಿ ಸರ್ಕಾರವೊಂದರಿಂದಲೇ ಭಾರತೀಯರ ಹಿತ ಕಾಪಾಡುವುದು ಸಾಧ್ಯವೆಂದು ಪ್ರತಿಪಾದಿಸಿದರು. ಈ ನಿಟ್ಟಿನಲ್ಲಿ ಲಾಲಾಹರದಯಾಳ್, ಸೋಹನಸಿಂಗ್ ಬಕ್ನಾ, ಪಂಡಿತ್ ಕಾಶೀರಾಂರವರ ನೇತೃತ್ವದಲ್ಲಿ ಅಮೆರಿಕ ಮತ್ತು ಕೆನಡಾಗಳಲ್ಲಿದ್ದ ಅನಿವಾಸಿ ಭಾರತೀಯರು, ಮುಖ್ಯವಾಗಿ ಪಂಜಾಬ್ ರಾಜ್ಯದವರನ್ನೊಳಗೊಂಡು 01.04.1913ರಂದು 'ಗದರ್ ಪಕ್ಷ'ವನ್ನು ಪ್ರಾರಂಭಿಸಲಾಯಿತು. ಲಾಲಾ ಹರದಯಾಳ್ ಗದರ್ ಪಕ್ಷದ ಪ್ರಧಾನ ಕಾರ್ಯದರ್ಶಿಯಾದರು. ಗದರ್ನ ಉದ್ದೇಶಗಳನ್ನು ಪ್ರಚುರಪಡಿಸಲು ಗದರ್ ಹೆಸರಿನಲ್ಲಿ ಭಾರತದ ವಿವಿಧ ಭಾಷೆಗಳಲ್ಲಿ ಪತ್ರಿಕೆ ಪ್ರಾರಂಭಿಸಲಾಯಿತು.
ಬ್ರಿಟಿಷ್ ಸರ್ಕಾರದ ದಬ್ಬಾಳಿಕೆ, ಭಾರತೀಯರನ್ನು ಅದು ತುಳಿಯುತ್ತಿದ್ದ ರೀತಿ ಎಲ್ಲವನ್ನೂ ಪತ್ರಿಕೆ ಸಾರಿ ಹೇಳಿತು. ಅಂಡಮಾನಿನ ಜೈಲಿನಲ್ಲಿ ವೀರ ಸಾವರ್ಕರ್ ಎಣ್ಣೆಯ ಗಾಣವನ್ನು ಎಳೆಯುತ್ತಿರುವ ಚಿತ್ರವನ್ನು ಪ್ರಕಟಿಸಿತು. ಕ್ರಾಂತಿಗಾಗಿ ಸರ್ವ ಸಿದ್ಧತೆಯನ್ನು ನಡೆಸಿದ ಅವರು ತಮ್ಮ ಪತ್ರಿಕೆಯಲ್ಲಿ ಭಾರತದಲ್ಲಿ ಬ್ರಿಟಿಷರ ಅನ್ಯಾಯ, ಅತ್ಯಾಚಾರಗಳನ್ನು, ಅದರಿಂದ ಭಾರತದ ಆರ್ಥಿಕ ದುಃಸ್ಥಿತಿ ಪಕ್ಷಪಾತದ ಕಾನೂನುಗಳನ್ನು ಪ್ರಕಟಿಸಿ ಓದುಗರಲ್ಲಿ ಸ್ವಾತಂತ್ರ್ಯೇಚ್ಛೆ ಉತ್ಕಟಗೊಳ್ಳುವಂತೆ ಮಾಡಿದರು. ಆಗ ಇಂಗ್ಲೆಂಡ್ನ್ನು ಸಮರ್ಥವಾಗಿ ಎದುರಿಸಿ ತಲೆಯೆತ್ತಿದ್ದ ಏಕೈಕ ಪ್ರಬಲ ರಾಷ್ಟ್ರ ಜರ್ಮನಿಯೊಂದಿಗೆ ಹರದಯಾಳ್ ಸಂಪರ್ಕ ಬೆಳೆಸಿದರು. 30.12.1913ರಂದು ಜರ್ಮನಿಯ ಸ್ಯಾಕ್ರಮೆಂಟೋ ಎಂಬ ಊರಿನಲ್ಲಿ ನಡೆದ ಭಾರೀ ಸಭೆಯಲ್ಲಿ ವೇದಿಕೆಯ ಮೇಲೆ ಜರ್ಮನ್ ಸರ್ಕಾರದ ಪ್ರತಿನಿಧಿಯು ಗದರ್ ಪಕ್ಷದ ನಾಯಕರುಗಳೊಂದಿಗೆ ಪಾಲ್ಗೊಂಡಿದ್ದರು.
ಇದರಿಂದ ಎಚ್ಚೆತ್ತುಕೊಂಡ ಬ್ರಿಟಿಷ್ ಸರ್ಕಾರ ಹರದಯಾಳ್ರನ್ನು ಬಂಧಿಸಿತು. ಅಮೆರಿಕದ ಮೇಲೆ ಒತ್ತಡ ತಂದು ಯಶಸ್ವಿಯಾಯಿತು. ಬಂಧನದಿಂದ ಜಾಮೀನಿನ ಮೇಲೆ ಬಿಡುಗಡೆಹೊಂದಿದ ಹರದಯಾಳ್ರು ತಮ್ಮ ದೂರಾಲೋಚನೆಯ ಕಾರ್ಯತಂತ್ರವಾಗಿ ಸ್ವಿಟ್ಜರ್ಲೆಂಡಿಗೆ ತಮ್ಮ ಕಾರ್ಯಸ್ಥಾನವನ್ನು ಬದಲಾಯಿಸಿದರು.
ಗದರ್ ಪಕ್ಷವು ವಿದೇಶಗಳಲ್ಲಿ ನೆಲೆಸಿದ್ದ ಭಾರತೀಯರಿಗೆ ಬೇಗ ಭಾರತಕ್ಕೆ ಮರಳಲು ಕರೆ ನೀಡಿತು. ಜಿನೀವಾದಲ್ಲಿದ್ದ ಹರದಯಾಳ್ ತುರ್ಕಿಯ ಮೂಲಕ ಭಾರತದ ಬ್ರಿಟಿಷರ ಮೇಲೆ ದಾಳಿ ಮಾಡುವ ಯೋಜನೆಯೊಂದನ್ನು ರೂಪಿಸಿದರು. ಭಾರತವು ಗುಲಾಮ ದೇಶವಾಗಿರುವ ತನಕ ವಿದೇಶಗಳಲ್ಲಿ ಭಾರತೀಯರಿಗೆ ಸಮಾನ ಹಕ್ಕುಗಳಾಗಲಿ, ಗೌರವವಾಗಲಿ ದೊರೆಯುವುದಿಲ್ಲ ಎಂದು ಎಲ್ಲ ಅನಿವಾಸಿ ಭಾರತೀಯರಿಗೆ ಸ್ಪಷ್ಟವಾಗಿ ನಿರೂಪಿಸಿದ ಹರದಯಾಳ್, ಜನ ಸಂಘಟನೆ, ಕ್ರಾಂತಿಗಾಗಿ ಸಂಪನ್ಮೂಲಗಳ ಕ್ರೋಡೀಕರಣಕ್ಕೆ ಸಮಿತಿಯೊಂದಿಗೆ ತಮ್ಮ ಪ್ರಯತ್ನಗಳನ್ನು ಮುಂದುವರಿಸಿದರೂ, ಕರ್ತಾಲ್ಸಿಂಗ್ ಸರಾಬಾ, ವಿಷ್ಣು ಗಣೇಶ್ ಪಿಂಗಳೆ, ಜಗತ್ಸಿಂಹ, ಭಾಯಿ ಪರಮಾನಂದ್, ಗದರ್ ಪಕ್ಷದ ನಾಯಕರು ಮತ್ತು ಸುಮಾರು 8000 ಕಾರ್ಯಕರ್ತರು ಭಾರತಕ್ಕೆ ಬಂದು ರಾಸ್ ಬಿಹಾರಿ ಬೋಸರ ನೇತೃತ್ವದಲ್ಲಿ ಸೇನಾ ತುಕಡಿಗಳಲ್ಲಿದ್ದ ಬ್ರಿಟಿಷ್ ನಿಷ್ಠೆಯನ್ನು ಭಾರತ ನಿಷ್ಠೆಯನ್ನಾಗಿಸಿ ಬ್ರಿಟಿಷರ ವಿರುದ್ಧ ಬಂಡಾಯದ ಮನೋಭೂಮಿಕೆ ಸಿದ್ಧಪಡಿಸುವಲ್ಲಿ ಯಶಸ್ವಿಯಾದರು.
1919ರಲ್ಲಿ ಸ್ವೀಡನ್ನಿನಲ್ಲಿ ನೆಲೆಸಿದ ಹರದಯಾಳ್ರು ಭಾರತೀಯ ಸಂಸ್ಕೃತಿ, ತತ್ವಶಾಸ್ತ್ರ, ಕಲೆಗಳನ್ನು ಪ್ರಚಾರ ಮಾಡಿದರು. 1932ರಿಂದ ಲಂಡನ್ನಿನಲ್ಲಿ ನೆಲೆಸಿ "ಬೋಧಿಸತ್ವ ಸಿದ್ಧಾಂತ" ಎಂಬ ತಮ್ಮ ಮಹಾಗ್ರಂಥಕ್ಕೆ ಲಂಡನ್ ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ಪದವಿ ಪಡೆದರು. ತಮ್ಮ ಬಹುಮುಖದ ಜೀವನಾನುಭವ ಮತ್ತು ಪಾಂಡಿತ್ಯದ ಆಧಾರದ ಮೇಲೆ "ಹನ್ನೆರಡು ಮತಧರ್ಮಗಳು ಹಾಗೂ ಆಧುನಿಕ ಜೀವನ", "ಆತ್ಮಸಂಸ್ಕಾರಕ್ಕೆ
ಸೂಚನೆಗಳು" ಎಂಬ ಮೌಲಿಕ ಕೃತಿಗಳನ್ನು ರಚಿಸಿ ಭಾರತಕ್ಕೆ ಹಿಂತಿರುಗಲು ಭಾರತ ಮತ್ತು ಬ್ರಿಟನ್ನಿನ ತಮ್ಮ ಮಿತ್ರರು ಅನುಮತಿ ದೊರಕಿಸಿಕೊಂಡರು. ಅನೇಕ ಕಠಿಣ ಷರತ್ತುಗಳನ್ನು ಹೊಂದಿದ್ದ ಅನುಮತಿ ಪತ್ರ ದೊರೆಯುವ ವೇಳೆಗೆ ಅವರು ವಿ.ವಿ.ಗಳಲ್ಲಿನ ಉಪನ್ಯಾಸ ಪ್ರವಾಸಕ್ಕಾಗಿ ಅಮೆರಿಕಕ್ಕೆ ತೆರಳಿದ್ದರು. ಅವರ ಮಿತ್ರರು, ಅನುಯಾಯಿಗಳು ಆಸಕ್ತಿಯಿಂದ ಅವರ ಆಗಮನವನ್ನು ನಿರೀಕ್ಷಿಸುತ್ತಿದ್ದಾಗಲೇ ಲಾಲಾ ಹರದಯಾಳ್ರು 04.03.1939ರಂದು ಅಮೆರಿಕದ ಫಿಲಡೆಲ್ಫಿಯಾದಲ್ಲಿ ವಿಧಿವಶರಾದ ದುಃಖದ ಸುದ್ದಿ ಮುಟ್ಟಿತು.
ನೇತಾಜಿ ಸುಭಾಷ್ರ ಹೋರಾಟವೂ ಹರದಯಾಳ್ರ ಹೋರಾಟದಿಂದ ಮಾರ್ಗದರ್ಶನ ಪಡೆದಿದೆ. ವಿದೇಶದಲ್ಲಿ ಭಾರತೀಯ ಕ್ರಾಂತಿಕಾರರು ಭಾರತದ ಸ್ವಾತಂತ್ರ್ಯಕ್ಕಾಗಿ ನಡೆಸಿದ ಹೋರಾಟಗಳಲ್ಲೂ ಅಗ್ರಗಣ್ಯವಾದದ್ದು ಲಾಲಾ ಹರದಯಾಳ್ರ ಹೋರಾಟ.
-ಟಿ.ಎನ್. ರಾಮಕೃಷ್ಣ
ರಾಷ್ಟ್ರಗೌರವ ಸಂರಕ್ಷಣಾ ಪರಿಷತ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


