ಸಾರ್ವಜನಿಕ ಹಿತಕ್ಕೆ ನಾನು ಧಕ್ಕೆ ತಂದಿಲ್ಲ

ದಿ. 25.02.2014ರಂದು ಪಿ.ತ್ಯಾಗರಾಜ್ ಅವರು ಬರೆದ "ವ್ಯಕ್ತಿಗತ ರಾಗ-ದ್ವೇಷಕ್ಕೆ ಶಾಸನಸಭೆ ಬಳಕೆ ಸರಿಯೇ?" ಎಂಬ ಲೇಖನವನ್ನು ಓದಿದೆ. ನಾನು ಎಚ್ಚರ ತಪ್ಪಿಯೂ ಶ್ರೀಯುತ ಎಸ್.ಆರ್. ಹಿರೇಮಠರವರ ಬಗ್ಗೆ ಏಕವಚನ ಪ್ರಯೋಗ ಮಾಡಿರುವುದಿಲ್ಲ. ಬಹುಶಃ ನಾನು ಉದ್ವೇಗದಿಂದ ಮಾತಾಡಿದ್ದೇನೆ ಎಂಬ ನಿಮ್ಮ ಅಭಿಪ್ರಾಯ ನಾನು ನಿರಾಕರಿಸುವುದಿಲ್ಲ. ಕಳೆದ ಎರಡು ವರ್ಷಗಳಿಂದ ನಿರಂತರವಾಗಿ ಯಾವ ಸಾಕ್ಷ್ಯಾಧಾರಗಳಿಲ್ಲದೆ ಈ ವಿಷಯ ನ್ಯಾಯಾಲಯದಲ್ಲಿ ಇದ್ದರೆ ಮತ್ತು ನ್ಯಾಯಾಲಯದಲ್ಲಿ ಅಂತಿಮವಾಗಿ ತೀರ್ಮಾನವಾದಾಗ ಯಾವುದನ್ನೂ ಲೆಕ್ಕಿಸದೆ ಎಸ್.ಆರ್. ಹಿರೇಮಠರವರ ನಿರಾಧಾರಿತ ಆರೋಪಗಳ ಹೊಗೆ ಬಂಡಿ ಅಡೆತಡೆ ಇಲ್ಲದೆ ಸಾಗಿದೆ. ಇದರಿಂದ ಆಗುವ ಮಾನಸಿಕ ಹಿಂಸೆ ಅನುಭವಿಸುವವರು ಆರೋಪಕ್ಕೊಳಗಾಗದವರು, ಅವರ ಕುಟುಂಬದವರು ಹಾಗೂ ಅವರ ಮಿತ್ರ ವರ್ಗ. ಇಡೀ ದೇಶವನ್ನೇ ಲೂಟಿ ಹೊಡೆದವರು ನಿರ್ಭಯಿತರಾಗಿ ನಗ್ನ ನೃತ್ಯವನ್ನು ಮಾಡಿ ಸಮಾಜಕ್ಕೆ, ಸಂವಿಧಾನಕ್ಕೆ, ನ್ಯಾಯಾಲಯಗಳಿಗೆ ಸಾಲಾಗಿ ನಿಂತಿರುವಾಗ ಈ ಮಹಾನುಭಾವನಿಗೆ ನಾನೊಬ್ಬ ಮಾತ್ರ ಕಣ್ಣಿಗೆ ಬಿದ್ದಿದ್ದೇನೆ. ನಿಜವಾಗಿಯೂ ಈ ಸಮಾಜ ಚಿಂತಕ, ಭ್ರಷ್ಟಾಚಾರಿಯ ವಿರುದ್ಧದ ಮಹಾನ್ ದಂಡ ನಾಯಕನ ಪ್ರಯತ್ನವನ್ನೂ, ಪ್ರಾಮಾಣಿಕತೆಯನ್ನೂ ಹಾಗೂ ಇವರ ಹಿಂದೆ ಮಾರುವೇಷದಲ್ಲಿ ಸಂತೋಷಪಡುತ್ತಿರುವ ದೇಶಭಕ್ತರನ್ನು ನಾನು ಅಭಿನಂದಿಸಬೇಕು.
ನಾನು ಇದುವರೆಗೆ ಶ್ರೀಯುತ ಎಸ್.ಆರ್. ಹಿರೇಮಠ್ರ ಎಲ್ಲಾ ಹೇಳಿಕೆಗಳಿಗೆ ಬಹಿರಂಗವಾಗಿ ಪ್ರತಿಕ್ರಿಯಿಸಿದ್ದು ಕೇವಲ ಮೂರು ಬಾರಿ ಮಾತ್ರ.
1. ವಿಧಾನಸಭೆಯಲ್ಲಿ ಹಕ್ಕುಚ್ಯುತಿ ನಿರ್ಣಯ ಮಂಡಿಸುವಾಗ
2. ಸದನದಲ್ಲಿ ಇಡೀ ರಾಜ್ಯದಲ್ಲಿ ದುರ್ಬಲ ವರ್ಗದ ಜನ ಹತ್ತಾರು ವರ್ಷಗಳಿಂದ ಸಾಗುವಳಿ ಮಾಡುತ್ತಿರುವ ಭೂಮಿಯಿಂದ ಅರಣ್ಯ ಇಲಾಖೆಯವರು ಏಕಾಏಕಿ ಈ ಜನರ ಮೈ ಮೇಲೆ ಎರಗಿ ಅವರನ್ನು ಒಕ್ಕಲೆಬ್ಬಿಸುತ್ತಿರುವ ವಿಷಯ ಪ್ರಸ್ತಾಪಕ್ಕೆ ಬಂದು ತತ್ಸಂಬಂಧವಾಗಿ ಹಿರೇಮಠ್ರವರು ವಿಧಾನಸಭೆಯ ಅಧ್ಯಕ್ಷರನ್ನು ಟೀಕಿಸಿದ್ದು ಹಾಗೂ ಶ್ರೇಷ್ಠ ರಾಜ್ಯ ನ್ಯಾಯಾಲಯದಲ್ಲಿ ಈ ರೈತರನ್ನು ಹೊರದಬ್ಬಬೇಕೆಂದು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರ ಚರ್ಚೆಗೆ ಬಂದಾಗ.
3. ರಾಜ್ಯ ಬಜೆಟ್ ಮೇಲಿನ ಸಾಮಾನ್ಯ ಚರ್ಚೆಯಲ್ಲಿ ತೊಡಗಿದ್ದಾಗ ಪೊಲೀಸ್ ಇಲಾಖೆಗೆ ಸಂಬಂಧಿಸಿ ನನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸುವಾಗ ಮಾತ್ರ.
ಇದಕ್ಕೆ ಕಾರಣ ಎಸ್.ಆರ್. ಹಿರೇಮಠ್ರವರ ನೇತೃತ್ವದಲ್ಲಿ ಮುನ್ನಡೆಯುತ್ತಿರುವ ಸಮಾಜ ಪರಿವರ್ತನಾ ಸಮುದಾಯದ ಆರ್ಥಿಕ ವ್ಯವಹಾರಗಳನ್ನು ಪರಿಶೋಧನೆ ಮಾಡಲು, ಇವರೇ ನೇಮಕಗೊಳಿಸಿದ ಅಧಿಕೃತ ಲೆಕ್ಕ ಪರಿಶೋಧಕರು. ಕೆಲವು ಗಂಭೀರ ಸ್ವರೂಪದ ಆಕ್ಷೇಪಣೆಗಳನ್ನು ಎತ್ತಿದ್ದಾರೆ. ಈ ಎಲ್ಲ ಆಕ್ಷೇಪಣೆಗಳು ಕೇಂದ್ರ ಶಾಸನವಾದ ವಿದೇಶಿ ಮೂಲಗಳಿಂದ ಪಡೆಯುವ ದೇಣಿಗೆ ವಿಚಾರಕ್ಕೆ ಸಂಬಂಧಿಸಿ ಅದರ ನಿರ್ವಹಣೆಯಲ್ಲಿ ಆಗಿರುವ ಉಲ್ಲಂಘನೆಗಳ ಕುರಿತಾಗಿ ಇರುವುದರಿಂದಲೂ ಹಾಗೂ ಈ ವಿಚಾರವು ರಾಜ್ಯ ಪೊಲೀಸ್ ಇಲಾಖೆಯ ವ್ಯಾಪ್ತಿಗೆ ಒಳಪಡದೇ ಇರುವುದರಿಂದ, ಈ ಎಲ್ಲಾ ಚಟುವಟಿಕೆಗಳು ರಾಜ್ಯದಲ್ಲೇ ನಡೆದಿರುವುದರಿಂದಲೂ ಹಾಗೂ ವಿದೇಶದಿಂದ ಪಡೆದ ಲಕ್ಷಾಂತರ ಡಾಲರುಗಳ ದೇಣಿಗೆಯ ಮೂಲ, ಖರ್ಚು ಮಾಡಿದ ವಿಧಾನ, ಎಲ್ಲವೂ ಅನುಮಾನಾಸ್ಪದವಾಗಿರುವುದರಿಂದ ರಾಜ್ಯ ಸರ್ಕಾರವು ಸಭಾಧ್ಯಕ್ಷರ ಮುಖಾಂತರ ಕಳುಹಿಸುವ ಅಧಿಕೃತ ದಾಖಲೆಗಳನ್ನು ಪರಿಶೀಲಿಸಿ ಮುಂದಿನ ಕ್ರಮ ಜರುಗಿಸಬೇಕೆಂದು ಸಲಹೆ ನೀಡಿದ್ದೇನೆ. ನಾನೊಬ್ಬ ಸಮಾಜೋದ್ಧಾರಕ ಎಂಬ ಶಿರೋನಾಮೆಯಡಿ ಈ ವ್ಯಾಪ್ತಿಯ ಚಟುವಟಿಕೆಗಳ ಬಗ್ಗೆ ಮೇಲ್ನೋಟಕ್ಕೆ ಗುರುತರವಾಗಿರತಕ್ಕ ಅಪಾದನೆಗಳು ಬಂದಾಗ ವಿಧಾನಸಭೆಯ ಒಬ್ಬ ಕ್ರಿಯಾಶೀಲ ಸದಸ್ಯನಾಗಿ ಈ ವಿಷಯವನ್ನು ನಾನು ಈ ಪ್ರಸ್ತಾಪ ಮಾಡುವ ಹಿಂದಿನ ದಿವಸ ಸದನದಲ್ಲಿ ದುರ್ಬಲ ವರ್ಗದ ರೈತರನ್ನು ಒಕ್ಕಲೆಬ್ಬಿಸುವ ವಿಚಾರ ಬಂದಾಗ ಇಡೀ ಸದನ ಒಕ್ಕೊರಲಿನಿಂದ ಎಸ್.ಆರ್. ಹಿರೇಮಠ್ರನ್ನು ಹಾಗೂ ಅವರ ಚಟುವಟಿಕೆಗಳನ್ನು ಟೀಕಿಸಿದರು. ವೈ.ಎಸ್.ವಿ. ದತ್ತ, ಜನತಾದಳದ ಶಾಸಕಾಂಗ ಪಕ್ಷದ ಉಪನಾಯಕರು ಇದಕ್ಕೆ ಧ್ವನಿಗೂಡಿಸಿದರು. ಜನತಾದಳದ ಶಾಸಕಾಂಗ ಪಕ್ಷದ ನಾಯಕರೂ ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಎಚ್.ಡಿ. ಕುಮಾರಸ್ವಾಮಿಯವರು ಅಲ್ಲೇ ಉಪಸ್ಥಿತರಿದ್ದರು. ಎಸ್.ಆರ್. ಹಿರೇಮಠ್ರವರು ಸದನದ ಸದಸ್ಯರಲ್ಲವೆಂದು ಮತ್ತು ಅವರನ್ನು ಅವರು ಸಮರ್ಥಿಸಿಕೊಳ್ಳಲಾಗುವುದಿಲ್ಲವೆಂದು, ಆದ್ದರಿಂದ ಅವರ ಹೆಸರು ಪ್ರಸ್ತಾಪಿಸುವುದು ಉತ್ತಮ ಸಂಸದೀಯ ನಡವಳಿಕೆ ಅಲ್ಲವೆಂದು ಎಚ್.ಡಿ. ಕುಮಾರಸ್ವಾಮಿಯವರು ಖಂಡಿತಾ ಹೇಳಲಿಲ್ಲ. ಆದರೆ ಮೂರನೆಯ ದಿವಸ ನಾನು ಎಚ್.ಡಿ. ಕುಮಾರಸ್ವಾಮಿಯವರಿಗೆ ಸಂಸದೀಯ ಪ್ರಜಾಸತ್ತೆಯ ಘನತೆ ಹಾಗೂ ಗೌರವದ ಬಗ್ಗೆ ಅರಿವಾದದ್ದು ನನಗೆ ಆಶ್ಚರ್ಯವನ್ನಂಟು ಮಾಡಿತು. ಈ ಹಿಂದಿನ ಮರ್ಮ ಏನಿರಬಹುದೆಂದು ನಿಮ್ಮ ಊಹೆಗೆ ಬಿಡುತ್ತೇನೆ.
ರಾಜ್ಯ ರೈತರ ಒಕ್ಕಲೆಬ್ಬಿಸುವ ವಿಚಾರ ಬಂದಾಗ, ಪ್ರಾಸ್ತಾವಿಕವಾಗಿ ಕೆಲವು ಸದಸ್ಯರು ಸಾಂದರ್ಭಿಕವಾಗಿ ಡಾ. ವಿ. ಬಾಲಸುಬ್ರಹ್ಮಣ್ಯಂ ಅವರನ್ನೂ ಹಾಗೂ ಹಿರಿಯ ರಾಜಕಾರಣಿ ಎ.ಟಿ. ರಾಮಸ್ವಾಮಿ ಅವರನ್ನೂ ಟೀಕಿಸಲು ಯತ್ನಿಸಿದರು. ಆ ಕೂಡಲೇ ನಾನು ಎದ್ದು ನಿಂತು ಮಾನ್ಯ ಸಭಾಧ್ಯಕ್ಷರಲ್ಲಿ ಮನವಿ ಮಾಡಿ, ಇದು ಸರಿಯಾದ ಕ್ರಮ ಅಲ್ಲ, ಇದು ಸಮಾಜಕ್ಕೆ ತಪ್ಪು ಸಂದೇಶವನ್ನು ರವಾನಿಸುತ್ತದೆ. ಇವರೀರ್ವರು ಕೊಟ್ಟಿರುವ ವರದಿಗಳನ್ನು ಸರ್ಕಾರ ಗಣನೆಗೆ ತೆಗೆದುಕೊಂಡು ಮುಂದುವರೆದರೆ ನಮಗೆ ಯಾವ ಅಭ್ಯಂತರವೂ ಇಲ್ಲವೆಂದು ಹೇಳಿದ್ದೇನೆ.ಬಾಲಸುಬ್ರಹ್ಮಣ್ಯಂರವರು ತಮ್ಮ ವರದಿಯಲ್ಲಿ ಪ್ರಸ್ತಾಪಿಸಿರುವ ವಿಚಾರ ಅನುಸಂಗೀತವಾಗಿ ನನ್ನನ್ನು ಒಳಪಡಿಸಿದ್ದರೂ ನಾನು ಈ ನಿಲುವನ್ನು ತಾಳಿದ್ದೇನೆ. ನನ್ನನ್ನು ಕುರಿತಾಗಿ ಅವರು ಮಾಡಿರುವ ಆರೋಪಗಳನ್ನು ಎದುರುಗೊಳ್ಳುವ ನೈತಿಕ ಬಲ ನನ್ನಲಿದೆ. ವೈಯಕ್ತಿಕ ಕಾರಣಕ್ಕಾಗಿ ಸಾರ್ವಜನಿಕ ಹಿತಕ್ಕೆ ಮಾರಕವಾಗುವ ಕೆಲಸಕ್ಕೆ ಎಂದೂ ನಾನು ಕೈ ಹಾಕುವುದಿಲ್ಲ.
-ಕೆ. ಆರ್.ರಮೇಶ್ ಕುಮಾರ್, ಶಾಸಕ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


