ಅಂಕಣಗಳು

ಕುಲಪತಿಗಳ ಆಯ್ಕೆ ಅನುಕರಣೀಯವಾಗಿರಬಾರದೇಕೆ?

ಕುಲಪತಿಗಳ ಆಯ್ಕೆ ಅನುಕರಣೀಯವಾಗಿರಬಾರದೇಕೆ?
Published On :

ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳಿಗೆ ಕುಲಪತಿಗಳನ್ನು ಆಯ್ಕೆ ಮಾಡಿದಾಗಲೆಲ್ಲಾ ಇತ್ತೀಚಿನ ದಿನಗಳಲ್ಲಿ ಒಂದಲ್ಲ ಒಂದು ವಾದ -ವಿವಾದ ಸರ್ವೇಸಾಧಾರಣವಾಗಿರುವುದು ನಿಜಕ್ಕೂ ವಿಷಾದನೀಯ. ಅದರ ಬಗ್ಗೆ ಸರ್ಕಾರವೇ ಆಗಲಿ ಸಾರ್ವಜನಿಕರೇ ಆಗಲಿ ತಲೆಕೆಡಿಸಿಕೊಳ್ಳದೆ ಇರುವುದು ದುರ್ದೈವ. ನಾನು ಗ್ರಹಿಸಿಕೊಂಡಿರುವಂತೆ, ಸುಮಾರು ಶೇ.75 ರಷ್ಟು ಸಂದರ್ಭಗಳಲ್ಲಿ ಕುಲಪತಿಗಳ ಆಯ್ಕೆ ಇಂತಹ ವಿವಾದಕ್ಕೆ ಒಳಗಾಗಿರುವುದು ಕಟುಸತ್ಯ.
2000ನೇ ಇಸವಿಯಿಂದೀಚೆಗೆ ಮಾತ್ರ ಇಂತಹ ಅಂದರೆ - ಅರ್ಹತೆಯ ಆಧಾರದ ಮೇಲೆ ಆಯ್ಕೆಯಾಗಿಲ್ಲ. ತಪ್ಪು ಮಾಹಿತಿ (ಖಜಡ್ಡಟಜ) ನೀಡಿದ್ದರೂ ಅದನ್ನು ಗಮನಿಸದೆ ಅನರ್ಹರನ್ನು ಆಯ್ಕೆ ಮಾಡಲಾಗಿದೆ. ಆಯ್ಕೆ ಪ್ರಕ್ರಿಯೆಯನ್ನು ಬೇಕೆಂದೇ ತಡಮಾಡಿ, ಜೂನಿಯರ್‌ಗಳು, ನಿಗದಿ ಪಡಿಸಿರುವ ಅರ್ಹತೆ ತಲುಪುವವರೆಗೆ ಕಾಯ್ದು ನಂತರ ಪ್ರಕ್ರಿಯೆ ಶರುಮಾಡಲಾಗಿದೆ, ತಮಗೆ ಬೇಕಾದವರನ್ನು ಶೋಧನಾ ಸಮಿತಿಗೆ ಸೇರಿಸುವ ಕಸರತ್ತು ಮುಗಿಯುವವರೆಗೆ ಸಮಿತಿ ರಚಿಸುವ ಪ್ರಕ್ರಿಯೆ ಮುಂದೂಡಲಾಗಿದೆ ಹೀಗೆ ಅನೇಕ ಊಹಾಪೋಹ ಅಥವಾ ಹಲವು ಬಾರಿ ಸತ್ಯವಾದ ಸಂಗತಿಗಳು ಈಗ ಕೇಳಿಬರುತ್ತಿವೆ. ಕೆಲವು ಪ್ರಭಾವಶಾಲಿ ಆಕಾಂಕ್ಷಿಗಳ ಆಯ್ಕೆಗೆ ಅನುವು ಮಾಡಿಕೊಡಲು ಕಾಯಿದೆಯನ್ನೇ ಪುನಾರಚಿಸಲಾಯಿತು ಎನ್ನುವ ಅಪವಾದಗಳೂ ಕೇಳಿಬಂದಿವೆ. ಕುಲಾಧಿಪತಿಗಳಿಗೂ ಸರ್ಕಾರಕ್ಕೂ ಹೊಂದಾಣಿಕೆಯಿಲ್ಲ, ಆದ್ದರಿಂದ ಈ ತಿಕ್ಕಾಟದ ಕಾರಣದಿಂದ ಅರ್ಹತೆಯ ಮೇಲೆಯೇ ಆಯ್ಕೆಯಾಗುವುದು ಅಸಂಭವ ಎನ್ನುವ ಟೀಕೆಗಳೂ ಇವೆ.
ಯಾವುದೇ ವಿಶ್ವವಿದ್ಯಾಲಯದಲ್ಲಿನ ಕುಲಪತಿಗಳು ಕಾರ್ಯಾವಧಿಯಲ್ಲಿರುವಾಗಲೇ ಅವರ ಅವಧಿ ಮುಗಿಯು ಮುನ್ನ ಆಯ್ಕೆ ಪ್ರಕ್ರಿಯೆಯನ್ನು ಮುಗಿಸುವಂತೆ ವ್ಯವಸ್ಥೆಯಾಗಬೇಕು. ಇದು ಹಿಂದಿನ ದಶಕಗಳಲ್ಲಿ ನಡೆದುಬಂದಿರುವ ದಾರಿ. ನಾನು ಎರಡು ಸಾರಿ ಕುಲಪತಿಯಾಗಿ ಹುದ್ದೆ ವಹಿಸಿಕೊಳ್ಳುವಾಗಲೂ ಮತ್ತು ನನ್ನ ಉತ್ತರಾಧಿಕಾರಿಗೆ ವಹಿಸಿಕೊಡುವಾಗಲೂ ಸಹ ಮುಂದಿನ ಕುಲಪತಿ ಆಯ್ಕೆ ಪ್ರಕ್ರಿಯೆ ಸಕಾಲದಲ್ಲಿ ಸಂಪೂರ್ಣವಾಗಿ ಮುಗಿದಿತ್ತು.
ಇತ್ತೀಚಿನ ದಿನಗಳಲ್ಲಿ ಅಧಿಸೂಚನೆ (ಪ್ರಕಟಣೆ) ಹೊರಡಿಸಿ, ಅರ್ಜಿ ಆಹ್ವಾನಿಸಿ ಬೇರೆ ಎಲ್ಲಾ ಹುದ್ದೆಗಳನ್ನು ತುಂಬುವಂತೆ ಕುಲಪತಿಗಳ ಆಯ್ಕೆ ಮಾಡುವುದು ಆ ಸ್ಥಾನಕ್ಕೆ ತಕ್ಕುದಲ್ಲ. ಅರ್ಜಿ ಸಲ್ಲಿಸಿ ಕುಲಪತಿಯಾಗುವುದು ಕುಲಪತಿಯಾಗಬಯಸುವವರಿಗೂ ಸಂಕಟದ ಕೆಲಸ. ಶೈಕ್ಷಣಿಕ ಮತ್ತು ಅಂತಹ ಕ್ಷೇತ್ರಗಳಲ್ಲಿ ಉನ್ನತ ಸ್ಥಾನದಲ್ಲಿರುವವರು ಅವರದೇ ಆದ ಸಮೀಕ್ಷೆಯ ಆಧಾರದ ಮೇಲೆ ಅರ್ಹರೆನಿಸಿದವರ ಹೆಸರನ್ನು ತರಿಸಿಕೊಂಡು ನಾಮಕರಣ ಮಾಡಬೇಕು. ಈ ರೀತಿ ನಾಮಕರಣ ಮಾಡುವಾಗ ಅವರ ಅರ್ಹತೆಯನ್ನು ಎಲ್ಲರಿಗೂ ಸರಿಯೆನ್ನಿಸುವ ಕೆಲವು ಅಳತೆಗೋಲುಗಳನ್ನು ಆಧಾರವಾಗಿಟ್ಟುಕೊಂಡು ಪರಿಶೀಲಿಸಿರಬೇಕು. ಸರ್ಕಾರವೇ ಆಗಲಿ, ವಿಶ್ವವಿದ್ಯಾಲಯಗಳ ಪರಿಷತ್ತೇ ಆಗಲಿ ಅಥವಾ ಅಕಾಡೆಮಿಕ್ ಪರಿಷತ್ತಿನಿಂದ ಶಿಫಾರಸು ಮಾಡಬಹುದಾದವರು (ನಾಮಕರಣ) ನಿಯಮಬದ್ಧವಾಗಿ ಪರಿಶೀಲನೆಗೆ ಯೋಗ್ಯರೆಂದು ಪರಿಗಣಿಸಲು ಕನಿಷ್ಠ ಯಾವ ಯಾವ ಅರ್ಹತೆಗಳನ್ನು ಹೊಂದಿರಬೇಕು ಎಂಬುದನ್ನು ಅಥವಾ ಒಂದು ಯೋಗ್ಯ ಅಳತೆಗೋಲನ್ನು ನಾಮಕರಣ ಮಾಡುವ ಸಂಸ್ಥೆಗಳಿಗೆ ಅಥವಾ ವ್ಯಕ್ತಿಗಳಿಗೆ ತಿಳಿಯಪಡಿಸಬೇಕು. ಸಂಭವನೀಯ ಅಭ್ಯಥಿಗಳ ಪಟ್ಟಿಯೊಂದನ್ನು ಸಿದ್ಧಪಡಿಸಿ ಅದರಿಂದ ಅಯ್ಕೆ ಮಾಡುವ ಪ್ರಯೋಗ ಜಾರಿಗೆ ತರಲು ಚಿಂತನೆ ನಡೆಯುತ್ತಿದೆಯಾದರೂ ಸರ್ಕಾರ ಅದನ್ನು ಗಂಭೀರವಾಗಿ ಪರಿಗಣಿಸಿರುವಂತೆ ಕಂಡುಬಂದಿಲ್ಲ.
ಅಭ್ಯರ್ಥಿಗಳು ತಮ್ಮ ಪ್ರಮಾಣಪತ್ರದೊಡನೆ ಎಲ್ಲಾ ಮಾಹಿತಿಯನ್ನು ಮರೆಮಾಚದೆ ಅಥವಾ ಉತ್ಪ್ರೇಕ್ಷೆಯಿಲ್ಲದೆ ನಮೂದಿಸಿರಬೇಕು ಮತ್ತು ಅದಕ್ಕಾಗಿ ಪ್ರಮಾಣಪತ್ರವನ್ನು ಕಡ್ಡಾಯವಾಗಿ ಲಗತ್ತಿಸಬೇಕು. ಸಾಮಾನ್ಯವಾಗಿ ಸಂದರ್ಶನ ಮಾಡುವ ಪ್ರಕ್ರಿಯೆಯ ಅವಶ್ಯಕತೆಯಿಲ್ಲ. ವಿಶೇಷ ಸನ್ನಿವೇಶಗಳಲ್ಲಿ, ಶೋಧನಾ ಸಮಿತಿಗೆ ಅದು ಅನಿವಾರ್ಯವೆನಿಸಿದಾಗ ಮಾತ್ರ ಸಂದರ್ಶನ ನಡೆಸಬಹುದು. ಸಂದರ್ಶನವು ಬೇಕಾದವರನ್ನು ಆಯ್ಕೆ ಮಾಡಲು ಬಳಸಬಹುದಾದ ಮಾರ್ಗವಾಗಲೂಬಹುದು!
ಶೋಧನಾ ಸಮಿತಿ ರಚನೆ ಬಹಳ ಮಹತ್ವದ ವಿಷಯ. ಇಂತಹ ಸಮಿತಿಯ ರಚನೆಯಲ್ಲಿ ಸದಸ್ಯರಾಗುವವರು, ಶಿಕ್ಷಣ, ನ್ಯಾಯಾಂಗ ಮತ್ತು ಆಡಳಿತ ಕ್ಷೇತ್ರಗಳಲ್ಲಿ ಹೆಸರು ಮಾಡಿರುವ ಹಿರಿಯ ಹಾಗೂ ನಿರ್ವಿವಾದ ವ್ಯಕ್ತಿಗಳಾಗಿರಬೇಕು. ಸಾಮಾನ್ಯವಾಗಿ ಸರ್ಕಾರದಿಂದ, ರಾಜ್ಯಪಾಲರಿಂದ, ಶೈಕ್ಷಣಿಕ ಪರಿಷತ್ತಿ (ಶೈಕಣಿಕ ಪರಿಷತ್ತು/ಆಡಳಿತ ಮಂಡಳಿ) ನಿಂದ, ಯು.ಜಿ.ಸಿ. ಯಿಂದ ನೇಮಿಸಲ್ಪಟ್ಟ ಸದಸ್ಯರೇ ಶೊಧನಾ ಸಮಿತಿಯಲ್ಲಿ ಭಾಗವಹಿಸಿ ಆಯ್ಕೆ ಪ್ರಕ್ರಿಯೆ ಮುಗಿಸಬೇಕಾಗುತ್ತದೆ. ಒಂದು ಅಥವಾ ಎರಡು ಸಾರಿ ಕುಳಿತು ಸಾಮಾನ್ಯವಾಗಿ ಮೂರು ಹೆಸರಿನ ಒಂದು ಆಯ್ದ ಅರ್ಹತೆಯುಳ್ಳವರ ಪಟ್ಟಿಯೊಂದನ್ನು ಮಾಡಿ ಅದನ್ನು ಮುಂದಿನ ಕ್ರಮಕ್ಕಾಗಿ ಸರ್ಕಾರಕ್ಕೆ ಸಲ್ಲಿಸುವುದು ಪ್ರಚಲಿತದಲ್ಲಿ, ಪಟ್ಟಿಮಾಡಿ ಸಂಬಂಧಪಟ್ಟವರಿಗೆ ಅದನ್ನು ಸಲ್ಲಿಸಿದ ಮೇಲೆ ಶೋಧನಾ ಸಮಿತಿಯ ಜವಾಬ್ದಾರಿ ಮುಗಿಯಿತು. ಶೋಧನಾ ಸಮಿತಿಯ ಅಧ್ಯಕ್ಷರೇ ಆಗಲಿ ಅಥವಾ ಸದಸ್ಯರೇ ಆಗಲಿ  ಪಟ್ಟಿಯಿಂದ ಇಂತಹವರನ್ನೇ ಮಾಡಬೇಕಾಗಿತ್ತು ಎಂದು ಸರ್ಕಾರವನ್ನೇ ಆಗಲಿ ಅಥವಾ ಕುಲಾಧಿಪತಿಗಳನ್ನೇ ಆಗಲಿ ದೂಷಿಸುವುದು ತಪ್ಪು. ಆ ರೀತಿ ದೂಷಿಸಿದವರನ್ನು ಮುಂದಿನ ಶೋಧನಾ ಸಮಿತಿಗಳಿಂದ ಹೊರಗಿಡುವ ನಿರ್ಧಾರ ಸರ್ಕಾರದ ನೀತಿಯಾಗಬೇಕು.
ಒಂದು ಆಯ್ದ ಅರ್ಹತೆಯುಳ್ಳವರ ಪಟ್ಟಿಯೊಂದರ(ಕಿಛಟಿಜಟ) ರಚನೆ/ ಸ್ವರೂಪ ಹೇಗಿರಬೇಕು ಎನ್ನುವುದು ಬಹಳ ಮುಖ್ಯವಾದ ವಿಷಯವಾದರೂ ಸೂಕ್ಷ್ಮವಾದ ವಿಷಯವೂ ಹೌದು. ವೈವಿಧ್ಯತೆ ಸೃಷ್ಟಿಯ ನಿಯಮ. ಮಾನವ ಸಂಪನ್ಮೂಲ ಅದರಿಂದ ಹೊರತಾಗಿಲ್ಲ. ಯಾರೇ ಮೂವರು ವ್ಯಕ್ತಿಗಳು ಎಲ್ಲಾ ದೃಷ್ಟಿಯಿಂದಲೂ ಸಮ ಎಂದು ಹೇಳಲಾಗದು. ಅದು ಬಹಳ ಕಷ್ಟದ ಕೆಲಸ. ಆದ್ದರಿಂದ ಮೆರಿಟ್ ಆಧಾರದ ಮೇಲೆ ಅರ್ಹತೆಯುಳ್ಳವರ ಮೂರು ಹೆಸರುಗಳ ಪಟ್ಟಿಯೊಂದನ್ನು ಮಾಡುವುದು ಶೋಧನಾ ಸಮಿತಿಗೆ ತಲೆ ನೋವು ತರಲಾರದು ಎಂಬುದನ್ನು ಯಾರಾದರೂ ಒಪ್ಪಿಯಾರು. ಒಮ್ಮೊಮ್ಮೆ ಮೆರಿಟ್ ಇರುವವರು ಸಿಗದಿದ್ದಾಗ ಒಂದೇ ಹೆಸರಿನ ಪಟ್ಟಿಯನ್ನು ಸಲ್ಲಿಸಲೂ ಹಿಂಜರಿಯಬಾರದು. ಸಾಮಾಜಿಕ ಸಮತೋಲನವನ್ನು ಕಾಪಾಡಲು ಬೇರೆ ವಿಧಾನ ಮತ್ತು ನೀತಿ-ನಿಯಮಗಳಿಂದ ಸಾಧ್ಯ ಹಾಗೂ ಸುಲಭ.
ಕುಲಪತಿಗಳಾಗಿ ಕೆಲಸ ಮಾಡಿ ಸಮಾಜದ ಆರೋಗ್ಯಕರವಾದ ಬೆಳವಣಿಗೆಗೆ ನೆರವಾಗಬೇಕೆಂಬ ಆಕಾಂಕ್ಷಿಗಳು ಅನೇಕರಿರುವುದು ನಿರೀಕ್ಷಿತ. 20ನೇ ಶತಮಾನದಿಂದೀಚೆಗೆ ವಿಶ್ವವಿದ್ಯಾಲಯಗಳು ಬೇರೆ ಬೇರೆ ವಿಷಯಗಳಿಗೆ ಒತ್ತುಕೊಟ್ಟು ವಿಶಿಷ್ಟ ಸಂಸ್ಥೆಗಳಾಗಿ (ಖಠಜ್ಛ್ಝಛಟ್ಝಣಜಜ ್ಡಟ್ಝಿಢಜ್ಠಡ್ಝಡ್ಝಿಜಡ) ಆರಂಭಿಸಲ್ಪಟ್ಟಿವೆ. ಕೃಷಿ ಕ್ಷೇತ್ರಕ್ಕೆ, ವೈದ್ಯಕೀಯ ಕ್ಷೇತ್ರಕ್ಕೆ, ತಾಂತ್ರಿಕತೆ ವಿಷಯಕ್ಕೆ, ಕನ್ನಡ ಭಾಷಾ ಸಂಶೋಧನೆ ಮತ್ತು ಅಭಿವೃದ್ಧಿಗೆ, ಸಂಸ್ಕೃತಕ್ಕೆ, ಕಲೆ ಮತ್ತು ಸಂಗೀತ, ಜಾನಪದ ಕ್ಷೇತ್ರಕ್ಕೆ ಹೀಗೆ ಸಮಾಜದ ಸರ್ವತೋಮುಖ ಬೆಳವಣಿಗೆಗಾಗಿ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಿರುವುದು ಕರ್ನಾಟಕದ ವೈಶಿಷ್ಟ್ಯ. ಇದು ಪ್ರಶಂಸನೀಯವೂ ಹೌದು. ಈ ಸಂಸ್ಥೆಗಳು ಅರ್ಥಪೂರ್ಣವಾಗಿ ಕೆಲಸ ಮಾಡಬೇಕಾದರೆ ಆಯಾ ಕ್ಷೇತ್ರಗಳಲ್ಲಿ ಅನುಭವ ಹೊಂದಿರುವವರನ್ನು ಮಾತ್ರ ಪರಿಗಣಿಸುವುದರಿಂದ ಸಂಸ್ಥೆಗಳ ಗುರಿ ಮುಟ್ಟುವಂತೆ ಪ್ರೋತ್ಸಾಹಿಸಿದಂತಾಗುತ್ತದೆ. ಆದರೆ ಇತ್ತೀಚೆಗೆ ನಾನು ಕಂಡಂತೆ ಕೆಲವು ಆಕಾಂಕ್ಷಿಗಳು ಆತುರಾತುರವಾಗಿ ಕುಲಪತಿಯಾಗಿ ಪಟ್ಟ ಏರುವ ಆಸೆಯಿಂದ ಯಾವುದೇ ಕ್ಷೇತ್ರವಾದರೇನು, ಕುಲಪತಿಯಾಗಿಬಿಡಬೇಕು ಎಂಬ ಮನೋಭಾವ ಉಳ್ಳವರಾಗಿದ್ದು ಎಲ್ಲಾ ರೀತಿಯ ಪ್ರಭಾವ ಬೀರಿ, ಪ್ರಯತ್ನಿಸುತ್ತಿರುವುದು ವಿಷಾದನೀಯ. ಕ್ಷೇತ್ರದ ಹೊರಗಿನ ವ್ಯಕ್ತಿಗಳನ್ನು ಯಾವುದೇ ಸಂಪೂರ್ಣ ಸಂಬಂಧವಿಲ್ಲದ ಸಂಸ್ಥೆಯ ಕುಲಪತಿಯಾಗಿ ಮಾಡುವುದು ತಪ್ಪು. ಹಾಗಿದ್ದರೆ ಒಂದು ವ್ಯವಸ್ಥೆಯಿಂದ ಇನ್ನೊಂದು ವ್ಯವಸ್ಥೆಗೆ ಸಲ್ಲುವವರು ಇಲ್ಲವೇ ಇಲ್ಲವೆ ಎಂದು ಪ್ರಶ್ನಿಸಬಹುದು. ಇಲ್ಲ ಎನ್ನುವುದು ತಪ್ಪಾಗುತ್ತದೆ. ಬೇರೆ ಕ್ಷೇತ್ರಗಳಿಂದ ಬಂದು ವಿಶ್ವವಿದ್ಯಾಲಯಗಳನ್ನು ಉನ್ನತ ಮಟ್ಟಕ್ಕೇರಿಸಿದ ಕೆಲವು ಉದಾಹರಣೆಗಳಿವೆ. ಆದರೆ ಅಂತಹವರು ವಿರಳ ಎಂಬುದು ಸತ್ಯ.
ಮೇಲಿನ ಸಲಹೆಯನ್ನು ಸಂಕುಚಿತವಾಗಿ ನೋಡಬಾರದು. ಉದಾಹರಣೆಗೆ ನಾನು ಕೆಲಸ ಮಾಡಿದ ಕ್ಷೇತ್ರವನ್ನೇ ಉದಾಹರಿಸಬಹುದು. ಕೃಷಿ ವಿಶ್ವವಿದ್ಯಾಲಯ ಬೇರೆ ವಿಶ್ವವಿದ್ಯಾಲಯಗಳಿಗಿಂತ ಭಿನ್ನವಾದುದು. ಕೃಷಿ ಎಂದರೆ ಅದು ಒಂದು ಸಂಸ್ಕೃತಿ. ಇದರಲ್ಲಿ ಹೊಲ ಗದ್ದೆಗಳ ಮತ್ತು ತೋಟಗಾರಿಕೆ ಬೆಳೆಗಳನ್ನು ಬೆಳೆಯುವುದು, ಜಾನುವಾರುಗಳನ್ನು ಸಾಕುವುದು, ಹೈನುಗಾರಿಕೆ, ಮೀನುಗಾರಿಕೆ, ಜೇನುಸಾಕಣೆ, ರೇಷ್ಮೆ ಉತ್ಪಾದನೆ ಮತ್ತಿತರ ಉತ್ಪಾದನೆ ಹಾಗೂ ಅವುಗಳ ಶೇಖರಣೆ, ಪರಿಷ್ಕರಣೆ ಎಲ್ಲಾ ಸೇರಿರುತ್ತದೆ. ಅದೇ ನಿಜವಾದ ಕೃಷಿ. ಅದನ್ನು ಅರಿತವನೇ ನಿಜವಾದ ಕೃಷಿಕ. ಆದ್ದರಿಂದಲೇ ಸಮಗ್ರ ಕೃಷಿ ಪುರಾತನ ಕಾಲದಿಂದಲೂ ಬಳಕೆಯಲ್ಲಿದೆಯಲ್ಲದೆ ಅದನ್ನು ಮರೆತಿದ್ದ ಸರ್ಕಾರ ಮತ್ತು ವಿಜ್ಞಾನಿಗಳು ಅದರ ಮಹತ್ವವನ್ನು ಅರಿತು ಈಗ ವಿಶ್ವಾದ್ಯಂತ ಮತ್ತು ರಾಷ್ಟ್ರಾದ್ಯಂತ ಬಳಕೆಗೆ ತರಲು ಹೆಚ್ಚು ಒತ್ತುಕೊಡುತ್ತಿರುವುದು ಸರಿಯಾದ ದಿಕ್ಕು. ತಡವಾದರೂ ಅದರ ಮಹತ್ವ ಎಲ್ಲರ ಗಮನಕ್ಕೂ ಬಂದು, ಅದರ ಫಲ ಸಣ್ಣ ಮತ್ತು ಅತಿಸಣ್ಣ ರೈತರಿಗೂ ಮತ್ತು ಗ್ರಾಮೀಣ ಕೃಷಿಯಾಧಾರಿತ ಕಸುಬುಗಳ ಬೆಳವಣಿಗೆಗೂ ಒಳ್ಳೆಯದು. ಈ ವಿಶ್ವವಿದ್ಯಾಲಯಗಳಿಗೆ ಕುಲಪತಿಗಳ ಆಯ್ಕೆಗೆ ಕೃಷಿ ಸಂಸ್ಕೃತಿಯ ಯಾವುದೇ ವಿಷಯ ತಜ್ಞರ ಆಯ್ಕೆಯನ್ನು ಸ್ವಾಗತಿಸಬೇಕು. ಕರ್ನಾಟಕದವರೇ ಆದ ಡಾ. ಎಸ್.ಅಯ್ಯಪ್ಪನ್ ಅವರು ಮೀನುಗಾರಿಕೆಯಲ್ಲಿ ಉನ್ನತ ಶಿಕ್ಷಣ ಪಡೆದವರಾದರೂ ಕೃಷಿ ಸಂಸ್ಕೃತಿಯಲ್ಲಿ ಅನುಭವ ಹೊಂದಿದವರಾಗಿದ್ದು ಭಾರತ ಕೃಷಿ ಅನುಸಂಧಾನ ಪರಿಷತ್ತಿನ ಮಹಾನಿರ್ದೇಶಕರಾಗಿ ರಾಷ್ಟ್ರ ಮಟ್ಟದಲ್ಲಿ ಕೃಷಿ ಸಂಸ್ಕೃತಿಯ ಎಲ್ಲಾ ಶಾಖೆಗಳಲ್ಲೂ ಅದ್ಭುತ ಸಾಧನೆಗೆ ಕಾರಣರಾಗಿರುವುದು ನಮ್ಮ ಕಣ್ಣ ಮುಂದೆ ಇರುವ ಹಾಗೂ ನಾವು ಹೆಮ್ಮೆ ಪಡಬೆಕಾದ ವಿಷಯ.
ಆಯಾ ರಾಜ್ಯದವರೇ ಆಯ್ಕೆಯಾಗಬೇಕೆಂಬ ನಿಲುವು ಬದಲಾಗಬೇಕು. ಬೇರೆ ಬೇರೆ ರಾಜ್ಯಗಳಿಂದ ಬಂದು ವಿಶ್ವವಿದ್ಯಾಲಯಗಳನ್ನು ಎತ್ತರಕ್ಕೇರಿಸಿದ ಅನೇಕ ಉದಾಹರಣೆಗಳಿವೆ. ಎಲ್ಲಾ ವಿಶ್ವವಿದ್ಯಾಲಯಗಳಿಗೂ, ರಾಷ್ಟ್ರ ಹಾಗೂ ರಾಜ್ಯ ಮಟ್ಟದಲ್ಲಿ ಕುಲಪತಿ ಸ್ಥಾನಕ್ಕೆ ಅರ್ಹ ವ್ಯಕ್ತಿಗಳ ಪಟ್ಟಿಯೊಂದನ್ನು ಸಿದ್ಧಪಡಿಸಿ ಅದರಿಂದ ಆಯ್ಕೆಯ ಪ್ರಕ್ರಿಯೆ ನಡೆದರೆ ಆಯ್ಕೆಯ ವಿಧಾನದಲ್ಲಿ ಸುಧಾರಣೆಯಾಗಬಲ್ಲದು ಎಂದು ಆಗಾಗ ಪ್ರಸ್ತಾವನೆಗಳು ದಾಖಲಾಗಿದ್ದರೂ ಸಹ ಅದು ಇನ್ನೂ ಆಚರಣೆಗೆ ಬಂದಿಲ್ಲ.
ಕುಲಪತಿಗಳ ಮತ್ತು ಕುಲಸಚಿವರ ಮಧ್ಯೆ ಹೊಂದಾಣಿಕೆ ಇಲ್ಲದೆ ವಿಶ್ವವಿದ್ಯಾಲಯಗಳು ಪದೇ ಪದೇ ಸುದ್ದಿಗೆ ಕಾರಣವಾಗುತ್ತವೆ. ಕುಲಸಚಿವರ ಆಯ್ಕೆ ಮಾಡುವಾಗ ಕುಲಪತಿಗಳ ಸಮ್ಮತಿಯಿರಬೇಕು. ಸಂಸ್ಥೆಯ ಇತರೇ ಅಧಿಕಾರಿಗಳನ್ನು ಆಯ್ಕೆ ಮಾಡುವಂತೆ ಕುಲಸಚಿವರನ್ನೂ ಆಯ್ಕೆಮಾಡಬಾರದೇಕೆ? ಕೃಷಿ ವಿಶ್ವವಿದ್ಯಾಲಗಳಲ್ಲಿ ಹೆಚ್ಚಿನ ಮಟ್ಟಿಗೆ ಈ ಪ್ರಕಾರದ ಆಯ್ಕೆ ನಡೆದುಬರುತ್ತಿದ್ದು ಅಲ್ಲಿ ಹೆಚ್ಚಿನ ಗೊಂದಲ ಇಲ್ಲದಿರುವುದು ಅನುಕರಣೀಯ.
ವಿಶ್ವವಿದ್ಯಾಲಯಗಳ ಆಕ್ಟ್‌ಗಳು ಸದನದಲ್ಲಿ ಆಗಾಗ ಮಾರ್ಪಾಡಾಗುತ್ತಲೇ ಇರುವುದು ಇತ್ತೀಚೆಗೆ ಸಾಮಾನ್ಯವಾಗಿದೆ. ಮಾರ್ಪಾಡು ಅನಿವಾರ್ಯ ಎಂಬುದು ಸತ್ಯ. ಆದರೆ ಅದನ್ನು ಗಂಭೀರವಾಗಿ ಸಂಬಂಧ ಪಟ್ಟವರೊಡನೆ ಮತ್ತು ಪರಿಣಿತರೊಡನೆ ಚರ್ಚಿಸಿ, ಪರಿಶೀಲಿಸಿ ಬದಲಾವಣೆ ತರಬೇಕು. ಹಾಗೆ ಮಾಡಿದ್ದೇ ಆದರೆ, ಆಕ್ಟ್‌ಪದೇ ಪದೇ ಮಾರ್ಪಾಡಾಗುವ ಪರಿಸ್ಥಿತಿ ಇರುವುದಿಲ್ಲ. ಅಲ್ಲದೆ ಈಗ ಕರ್ನಾಟಕಲ್ಲಿರುವ 22 ವಿಶ್ವವಿದ್ಯಾಲಯಗಳಲ್ಲಿನ ಆಕ್ಟ್‌ಗಳನ್ನು ಹೋಲಿಸಿ ವಿಶ್ಲೇಷಿಸಿದರೆ ಸಾಮ್ಯತೆ ಕಾಣದು. ಕೆಲವು ವಿಷಯಗಳಲ್ಲಿ ಸಾಮ್ಯತೆ ಇರಬೇಕಾಗುತ್ತದೆ. ಕುಲಪತಿಗಳ ಅವಧಿ, ಅವಧಿ ವಿಸ್ತರಣೆಗೆ ಅವಕಾಶ, ಶೋಧನಾ ಸಮಿತಿಗಳ ರಚನೆ ಮುಂತಾದವುಗಳಲ್ಲಿ ಸಾಮ್ಯತೆಗೆ ಅವಕಾಶವಿದೆ.

-ಪ್ರೊ.ಎಂ.ಮಹದೇವಪ್ಪ
mahadevrice@yahoo.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.