ನಿರ್ಧರಿಸೋರು ಮತದಾರರೇ, ಆದರೆ ಅವರಿಗೆಲ್ಲಿದೆ ಆಯ್ಕೆ ಅವಕಾಶ?
ಮತ್ತೆ ಚುನಾವಣೆಗಳು ಸಮೀಪಿಸುತ್ತಿವೆ. ರಾಜಕೀಯವೆಂಬ ರಣರಂಗದಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ಚುನಾವಣಾ ಸಮರಕ್ಕಾಗಿ ಸನ್ನದ್ಧಗೊಳ್ಳುತ್ತಿವೆ. ಚುನಾವಣಾ ಕಣಕ್ಕೆ ತಮ್ಮ ಪಕ್ಷದಿಂದ ಸ್ಪರ್ಧೆಗೆ ಇಳಿಸಬೇಕಾದ ಅಭ್ಯರ್ಥಿಗಳ ಆಯ್ಕೆಯ ವಿಚಾರದಲ್ಲಂತೂ ವ್ಯಕ್ತಿಯ ಅರ್ಹತೆ, ಯೋಗ್ಯತೆಯ ಹೊರತಾಗಿ ಉಳಿದ ಎಲ್ಲಾ ಲೆಕ್ಕಾಚಾರಗಳು ನಡೆಯುತ್ತಿವೆ. ಅಭ್ಯರ್ಥಿಯು ಚುನಾವಣೆಗೆ ಖರ್ಚು ಮಾಡಬಹುದಾದ ಅವನ ಹಣಬಲ, ಸಾಮಾನ್ಯವಾಗಿ ಮತ್ತು ಸುಲಭವಾಗಿ ಗಿಟ್ಟಿಸಿಕೊಳ್ಳಲು ಅವನ ಜಾತಿಬಲ ಹಾಗೂ ಪಕ್ಷದ ಮುಖಂಡರ ಕೃಪಾಕಟಾಕ್ಷಗಳೇ ಅಭ್ಯರ್ಥಿಯ ಆಯ್ಕೆಗೆ ಮಾನದಂಡಗಳಾಗಿ ಬಿಟ್ಟಿವೆ. ಇದಕ್ಕೆ ಸಂಬಂಧಿಸಿದ ಕೋಟ್ಯಂತರ ರುಪಾಯಿಗಳ ವ್ಯವಹಾರಗಳು ಆರಂಭಗೊಂಡಿವೆ. ಇದು ನಿಜವಾದ ಪ್ರಜಾಪ್ರಭುತ್ವ ಪದ್ಧತಿಯ ರೀತಿಯಲ್ಲದಿದ್ದರೂ, ನಡೆದೇ ತೀರುವ ಬೆಳವಣಿಗೆಯಾಗಿ ಬಿಟ್ಟಿದೆ. ಈ ಪ್ರಕ್ರಿಯೆಯಲ್ಲಿ, ಮತ್ತೆ ಹಳೇ ಮುಖಗಳೇ ಆಯ್ಕೆಗೊಳ್ಳುತ್ತಿವೆ.
ಕಾರಣಗಳಾದರೂ ಇಷ್ಟೆ: ರಾಜಕೀಯ ಪಕ್ಷಗಳಿಗಂತೂ ಶತಾಯಗತಾಯ ಅಧಿಕಾರದ ಗದ್ದುಗೆ ಹಿಡಿಯಲೇಬೇಕೆಂಬ ಛಲ. ಇದಕ್ಕಾಗಿ, ಅಭ್ಯರ್ಥಿ ಯಾರೇ ಆಗಿರಲಿ, ಗೆಲ್ಲಲು ಆತ ಅನುಸರಿಸುವ ಮಾರ್ಗಗಳೇನೇ ಇರಲಿ, ಒಟ್ಟಿನಲ್ಲಿ ಆತ ಗೆಲ್ಲುವ ಕುದುರೆಯಾಗಿರಬೇಕು. ರಾಜಕಾರಣಿಗಳಿಗಂತೂ, ನಾಲ್ಕಾರು ಬಾರಿ ಗೆದ್ದು ಬಂದಿದ್ದರೂ, ಮತ್ತೆ ಅವರಿಗೇ ಟಿಕೆಟ್ ಬೇಕು. "ಜನಸೇವೆ ಮಾಡಲು ಇನ್ನೊಂದು ಅವಕಾಶವನ್ನು ನೀಡಿ" ಎಂಬ ಕಪಟ ನಾಟಕೀಯ ಮಾತುಗಳಿಂದ ಮತದಾರರನ್ನು ಬಲೆಗೆ ಹಾಕಿಕೊಂಡು ತಮ್ಮ ಸ್ವಾರ್ಥ ತೀರಿಸಿಕೊಳ್ಳಬೇಕೆಂಬ ದುರಾಸೆ ಇವರದು. ಕಾರಣ, ರಾಜಕೀಯದಲ್ಲಿ ಅಧಿಕಾರವೆಂಬುದು ಒಂದು ತೀರದ ಆಸೆ-"ಹೆಚ್ಚೆಚ್ಚು ಉಪ್ಪು ತಿಂದಂತೆ ಹೆಚ್ಚೆಚ್ಚು ಬಾಯಾರಿಕೆ" ಆಗುವಂತೆ, ಒಮ್ಮೆ ಅಧಿಕಾರವನ್ನು ಅನುಭವಿಸಿದವರು ಅಧಿಕಾರವನ್ನು ಬಿಟ್ಟಿರಲಾರರು. ಇಂತಹವರು ಅಧಿಕಾರವನ್ನು ಕಳೆದುಕೊಂಡಾಗ, ನೀರಿಲ್ಲದ ಮೀನಿನಂತೆ, ಹಲ್ಲಿಲ್ಲದ ಹುಲಿಯಂತೆ ಚಡಪಡಿಸುತ್ತಾರೆ. ಮೇಲಾಗಿ, ಚುನಾವಣೆಗಳನ್ನು ಗೆಲ್ಲಲು ಬೇಕಾದ ಎಲ್ಲಾ ತಂತ್ರಗಾರಿಕೆ-ಕುತಂತ್ರಗಳನ್ನು ಇಷ್ಟರಲ್ಲೇ ಇವರು ಕರಗತ ಮಾಡಿಕೊಂಡಿರುತ್ತಾರೆ. ಮೊದಲು ಟಿಕೆಟ್ ಗಿಟ್ಟಿಸಿಕೊಳ್ಳುವುದೇ ಇವರ ಗುರಿ. ಮುಂದಿನ ವಿಚಾರ ಮುಂದೆ. ಮೇಲಾಗಿ ಇಷ್ಟರಲ್ಲೇ ರಾಜಕೀಯ ಪ್ರಭಾವಿ ವ್ಯಕ್ತಿಗಳಾಗಿರುವ ಇವರನ್ನು ತಡೆಯುವುದಾದರೂ ಹೇಗೆ? ತಡೆಯುವವರಾದರೂ ಯಾರು? ಮತದಾರನಿಗೋ, ಒಮ್ಮೆ ಅನುಭವಿಸಿ ಕೈ ಸುಟ್ಟುಕೊಂಡ ಕಳಂಕಿತ ಹಳೇ ಅಭ್ಯರ್ಥಿಗಳು ಬೇಡ; ಒಳ್ಳೆಯ ಅಭ್ಯರ್ಥಿಗಳು ಬೇಕು. ಹೊಸಹುರುಪು, ಹೊಸ ಚಿಂತನೆಯೊಂದಿಗೆ ಕೆಲಸ ಮಾಡಲು ಉತ್ಸುಕರಾಗಿರುವ ಹೊಸ ಮುಖಗಳು ಬೇಕು. ಮತ್ತೆ ಹಳೇ ಮುಖಗಳೇ ಸ್ಪರ್ಧಿಸುವುದಾದರೆ, ಮತದಾರನಿಗೆಲ್ಲಿದೆ ಆಯ್ಕೆ? ಮಾರ್ಕೆಟ್ಗೆ ಹೋಗಿ ಹಣ್ಣು ಹಂಪಲು ತರಕಾರಿಗಳನ್ನು ಆರಿಸುವಾಗಲೂ ನಮ್ಮ ಬಳಿ ಆಯ್ಕೆ ಇರುತ್ತದೆ. ಸರಿಯಾದ ಒಳ್ಳೆಯ ವಸ್ತು ಸಿಗದಿದ್ದ ಪಕ್ಷದಲ್ಲಿ ಬರಿ ಕೈಯಲ್ಲೇ ವಾಪಸ್ಸಾಗುವೆವು. ಆದರೆ ಬಯಸಿದ ಒಳ್ಳೆಯ ವಸ್ತು ಲಭ್ಯವಿಲ್ಲವೆಂದ ಮಾತ್ರಕ್ಕೆ ಕಳಪೆ, ಕೊಳೆತ ವಸ್ತುವನ್ನು ಖರೀದಿಸಿ, ಮನೆ ತುಂಬಲಾರೆವು. ಈ ಸ್ವಾತಂತ್ರ್ಯ ನಮಗೆ ಇದೆ. ಆದರೆ ದೇಶದ ಭವಿಷ್ಯವನ್ನೇ ನಿರ್ಧರಿಸುವ ಜನಪ್ರತಿನಿಧಿಗಳನ್ನು ಆರಿಸುವ ವಿಚಾರದಲ್ಲಿ ಒಳ್ಳೆಯ ಅಭ್ಯರ್ಥಿಗಳ ಆಯ್ಕೆಯೇ ಇಲ್ಲದಿರೋದು ನಿಜಕ್ಕೂ ಒಂದು ದುರಂತವೇ ಸರಿ. ಹಾಗೆಂದು, ಮತದಾನ ಮಾಡದಿರುವುದಕ್ಕಾಗುತ್ತದೆಯೇ? ಮತದಾನ ಮಾಡಬೇಕಾದುದು ನಮ್ಮೆಲ್ಲರ ಕಡ್ಡಾಯದ ಕರ್ತವ್ಯ ಹಾಗೂ ಜವಾಬ್ದಾರಿಯಲ್ಲವೇ?ಸ್ಪರ್ಧಿಸುವವರ ಪೈಕಿ ಸೂಕ್ತ ಅಭ್ಯರ್ಥಿ ಲಭ್ಯವಿಲ್ಲವೆಂದ ಮಾತ್ರಕ್ಕೆ, ಮತದಾನ ಮಾಡದೇ ಸುಮ್ಮನೆ ಕೂತರೂ, ಚುನಾವಣೆಯಂತೂ ನಡೆದೇ ನಡೆಯುತ್ತದೆ; ಯಾರಾದರೂ ಒಬ್ಬ ಅಭ್ಯರ್ಥಿ ಆಯ್ಕೆಯಾಗೇ ಆಗುತ್ತಾನೆ. ಅಂತಹ ಅಭ್ಯರ್ಥಿ ಅಯೋಗ್ಯನಾಗಿದ್ದರೂ, ಅವನ ಆಯ್ಕೆಗೆ ನಾವೆಲ್ಲರೂ ಪರೋಕ್ಷವಾಗಿ ಕಾರಣರಾಗುತ್ತೇವೆ ಹಾಗೂ ಅವನನ್ನು ಪರೋಕ್ಷವಾಗಿ ಬೆಂಬಲಿಸಿದಂತಾಗುತ್ತದೆ. ಹೀಗಾದಾಗ ನಾವು ಇತರರನ್ನು ದೂಷಿಸಲು ಬರುವಂತಿಲ್ಲ. ಹೋಗಲಿ ಬಿಡಿ, ನಾನಾ ಪಕ್ಷಗಳ ಅಭ್ಯರ್ಥಿಗಳು ಪುನರಾಯ್ಕೆ ಬಯಸಿ ಸ್ಪರ್ಧಿಸಿದಾಗ, ಅವರ ಪೈಕಿ ಕಡಿಮೆ ಭ್ರಷ್ಟ, ಕಡಿಮೆ ಕೆಟ್ಟವನನ್ನು ಆರಿಸಬೇಕಾದುದು ಉಳಿದಿರುವ ಏಕೈಕ ಮಾರ್ಗವೆಂದರೂ ಆಪತ್ತೇ. ಏಕೆಂದರೆ, ಈ ಕಡಿಮೆ ಕೆಟ್ಟವ ಒಮ್ಮೆ ಆರಿಸಿ ಬಂದನೆಂದರೆ, ನೋಡು ನೋಡುತ್ತಿದ್ದಂತೆಯೇ, ದೊಡ್ಡ ಭ್ರಷ್ಟನಾಗುತ್ತಾನೆ; ಭಾರಿ ಕೆಟ್ಟವನಾಗುತ್ತಾನೆ ಹಾಗೂ ಭಯಂಕರನಾಗುತ್ತಾನೆ. ಏಕೆಂದರೆ, ಚುನಾವಣೆಯನ್ನು ಗೆಲ್ಲಲು ಹೂಡಿದ ಬಂಡವಾಳವನ್ನು ಮತ್ತೆ ಅನಿವಾರ್ಯವಾಗಿ ಪಡೆಯಲೇ ಬೇಕಲ್ಲಾ ಹಾಗೂ ಮುಂದಿನ ಚುನಾವಣೆಗೆ ಬೇಕಾದ ಹಣವನ್ನು ಈಗಿಂದಲೇ ಸಂಪಾದಿಸಿ ಇಟ್ಟುಕೊಳ್ಳಬೇಕಲ್ಲ! ಚುನಾವಣೆಗಳಲ್ಲಿ ಅಭ್ಯರ್ಥಿಯೊಬ್ಬನು ಖರ್ಚು ಮಾಡಬೇಕಾದ ವೆಚ್ಚದ ಮಿತಿಯ ಮೇಲೆ ಚುನಾವಣಾ ಆಯೋಗ ನಿರ್ಬಂಧವನ್ನು ಹೂಡಿದ್ದರೂ, ಇವೆಲ್ಲಾ ಕಣ್ಣಾ ಮುಚ್ಚಾಲೆ ಆಟವಿದ್ದಂತೆ. ಚುನಾವಣಾ ಆಯೋಗಕ್ಕೂ ಗೊತ್ತು, ಊರಿಗೂ ಗೊತ್ತು-ಒಂದು ಚುನಾವಣೆಯನ್ನು ಗೆಲ್ಲಲು ಎಷ್ಟು ಕೋಟಿ ರುಪಾಯಿಗಳು ಬೇಕೂಂತ. ಇಷ್ಟನ್ನು ಗಳಿಸಿ ಮತ್ತೆ ಅದಕ್ಕೆ ಇನ್ನಷ್ಟನ್ನು ಸೇರಿಸುವಲ್ಲಿ ಆಯ್ಕೆಯಾದವ ಹುಷಾರಾಗಿರುತ್ತಾನೆ. ಕೈಗೆ ಸಿಗದ ಕಳ್ಳನಾಗಿ ಬಿಡುತ್ತಾನೆ. ಈ ವರ್ತುಲ ಎಲ್ಲಾ ಚುನಾವಣೆಗಳಲ್ಲೂ ಪಕ್ಷಾತೀತವಾಗಿ ಮುಂದುವರಿಯುತ್ತಲೇ ಇರುತ್ತದೆ. ಹಣದ ಮಳೆಯು ಸುರಿಯುತ್ತದೆ, ಆಶ್ವಾಸನೆಗಳ ಗುಡುಗುಗಳೇ ಗುಡುಗುತ್ತವೆ.
ಇದನ್ನು ನೋಡಿ ಪ್ರಜ್ಞಾವಂತ ಮತದಾರನಂತೂ ಸುಸ್ತಾಗಿ ಬಿಟ್ಟಿದ್ದಾನೆ. ಪರಿಹಾರವಿಲ್ಲದ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾನೆ. ಒಂದು ಪಕ್ಷದವರು ಭ್ರಷ್ಟರೆಂದು ತಿಳಿದು ಇನ್ನೊಂದು ಪಕ್ಷಕ್ಕೆ ಅಧಿಕಾರ ಕೊಟ್ಟು ನೋಡಿದ್ದಾಯಿತು. ಇವರಾದರೂ ನಮ್ಮ ನಿರೀಕ್ಷೆಗಳನ್ನು ಹುಸಿ ಮಾಡಲಾರರೆಂದು ಕನಸು ಕಂಡಿದ್ದಾಯಿತು. ಇವರಾದರೋ, ಹಿಂದಿನವರಿಗಿಂತ ನಾವೇನು ಕಮ್ಮಿ ಎನ್ನುತ್ತಾ ಒಂದು ಕೈ ನೋಡಿಯೇ ಬಿಟ್ಟರು. ಸರ್ಕಾರದ ಆಸ್ತಿ, ಜನರ ದುಡ್ಡನ್ನು ಕೊಳ್ಳೆ ಹೊಡೆಯುವುದರಲ್ಲಿ ಹಿಂದಿನವರಿಗಿಂತ ಮೀರಿ ಮೆರೆದರು. ಮತದಾರರನ್ನು ಮರೆತೇ ಬಿಟ್ಟರು. "ಯಾರು ಹಿತವರು ನಿನಗೆ ಈ ಭ್ರಷ್ಟರೊಳಗೆ?" ಎಂಬ ಧರ್ಮ ಸಂಕಟವನ್ನು ಮತದಾರನಿಗೆ ತಂದೊಡಿದ್ದರು. ಒಳಜಗಳ, ತಿಕ್ಕಾಟ, ಗುದ್ದಾಟ, ಹಗರಣಗಳಿಗೆ ಒಳಗಾಗದ ಪಕ್ಷವೇ ಇಲ್ಲದಂತಾಗಿದೆ. ಸ್ವಾರ್ಥಿಗಳಿಲ್ಲದ, ಭ್ರಷ್ಟರಲ್ಲದ ರಾಜಕಾರಣಿಗಳೇ ಬಲು ಅಪರೂಪವಾಗಿದ್ದಾರೆ. ಎಲ್ಲರೂ ವ್ಯಾಪಾರ ಆರಂಭಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಬಾರಿಯಾದರೂ ದೇಶದ ಹಿತದೃಷ್ಟಿಯಿಂದ, ಓರ್ವ ಸಮರ್ಥ ನಾಯಕನ ಅವಶ್ಯಕತೆ ಇದೆ ಎಂಬುದು ಜನರಿಗೆ ಚೆನ್ನಾಗಿ ಮನವರಿಕೆ ಆಗಿದೆ. ಆದರೆ ಅವನ ಕೈ ಬಲಪಡಿಸುವ ಜನಪ್ರತಿನಿಧಿಗಳು ಅಷ್ಟೇ ಸಮರ್ಥರಾಗಿರಬೇಕಲ್ಲವೇ?ಪ್ರಾಮಾಣಿಕರಾಗಿರಬೇಕಲ್ಲವೇ? ಅವನ ಹೆಸರಿನ ಮೂಲಕ ಹಳೇ ತೋಳಗಳೇ ಮತ್ತೆ ಗೆದ್ದು ಬರುವಂತಾದರೆ ಏನು ಬದಲಾವಣೆ ತಂದಂತಾಯಿತು? ಮತ್ತೆ ಮತದಾರ ಸೋತಂತಾಯಿತಲ್ಲವೇ? ಇಂತಹ ಒಂದು ಸರಿಪಡಿಸಲಾಗದ ಸಂದಿಗ್ಧ ಪರಿಸ್ಥಿತಿಯಲ್ಲಿ ಮತದಾರ (ಪ್ರಭು!) ಹತಾಶನಾಗಿದ್ದಾನೆ. ಈ ಕಾರಣದಿಂದಲೇ ಮತದಾನ ಗೈಯ್ಯುವವರ ಸಂಖ್ಯೆಯು ಕಡಿಮೆಯಾಗುತ್ತಿದೆ.
ಇದಕ್ಕೆಲ್ಲಾ ಉಳಿದಿರುವ ಪರಿಹಾರ ಮಾರ್ಗವೆಂದರೆ "ಹಳೆ ಬೇರು ಹೊಸ ಚಿಗುರು" ಎಂಬ ಸಿದ್ಧಾಂತದಡಿ ರಾಜ್ಯಭಾರ ನಡೆಸುವಲ್ಲಿ ಕೆಲವಾರು ಅನುಭವೀ ರಾಜಕೀಯ ಧುರೀಣರ ಅವಶ್ಯಕತೆಯು ಇರೋದರಿಂದ, ಒಂದಷ್ಟು ಟಿಕೆಟ್ಗಳನ್ನು ಇಂತಹ ಅನುಭವಿ, ಸಾಚಾ ಹಳೇ ಅಭ್ಯರ್ಥಿಗಳಿಗೂ ನೀಡಿ ಇನ್ನಷ್ಟು ಟಿಕೇಟುಗಳನ್ನು ಹೊಸಬರಿಗೆ ನೀಡಬೇಕು. ಹಾಗೇ ಮಾಡುವಾಗ, ಅಭ್ಯರ್ಥಿಯ ಹಣಬಲ, ಜಾತಿಬಲಕ್ಕಿಂತಲೂ ಮಿಗಿಲಾಗಿ, ಆತನ, ಶಿಕ್ಷಣ, ಸಂಸ್ಕಾರ, ಸಾಮಾಜಿಕ ಕಳಕಳಿ, ನಿಷ್ಠೆ, ಪ್ರಾಮಾಣಿಕತೆ, ವಯಸ್ಸು, ಶುದ್ಧ ಚಾರಿತ್ರ್ಯ, ಅಪ್ಪಟ ದೇಶಪ್ರೇಮ, ನಿಸ್ವಾರ್ಥ ಮನೋಭಾವ, ವಿಶಾಲದೃಷ್ಟಿ, ಸಾರ್ವಜನಿಕ ಜೀವನದಲ್ಲಿ ಪಾರದರ್ಶಕತೆ -ಎಲ್ಲವುಗಳನ್ನೂ ಗಣನೆಗೆ ತೆಗೆದುಕೊಳ್ಳಬೇಕು. ಇದಕ್ಕೆ ಪೂರಕವಾಗಿ, ಪಕ್ಷದ ನಿಷ್ಠಾವಂತ ಸಾಮಾನ್ಯ ಕಾರ್ಯಕರ್ತರ ಹಾಗೂ ಜನಸಾಮಾನ್ಯರ ಅಭಿಪ್ರಾಯಗಳನ್ನು ಸಂಗ್ರಹಿಸಿಕೊಳ್ಳಬಹುದು. ಅವಕಾಶ ನೀಡದ ಹೊರತು, ಹೊಸಬರ ಶಕ್ತಿ ಸಾಮರ್ಥ್ಯಗಳನ್ನು ಅರಿತುಕೊಳ್ಳುವುದಾದರೂ ಹೇಗೆ? ಅದನ್ನು ಅವರು ಸಾಬೀತುಪಡಿಸುವುದಾದರೂ ಹೇಗೆ? ಈ ಕೆಲಸವನ್ನು ಪಕ್ಷದ ವರಿಷ್ಠರೇ ಆರಂಭಿಸಬೇಕು.
ಇದು ನಡೆಯದೇ ಇದ್ದ ಪಕ್ಷದಲ್ಲಿ, ಮತದಾರರೇ ಸಾಮೂಹಿಕವಾಗಿ ಸೇರಿ, ಒಳ್ಳೆಯ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಆತನನ್ನು ಬೆಂಬಲಿಸಿ, ಗೆಲ್ಲಿಸಬೇಕು. ಆಗಲೇ ಉತ್ತಮರು ಚುನಾಯಿತರಾಗಿ, ದೇಶ ಪ್ರಗತಿಯತ್ತ ಸಾಗಲು ಸಾಧ್ಯ.
- ಡಾ. ಕೆ.ಪಿ. ಪುತ್ತೂರಾಯ
anisikeprabha@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

