ಅಂಕಣಗಳು

ಪ್ರತಿ ಮಕ್ಕಳಿಗೂ ಸಿಗಲಿ ಮೌಲ್ಯಯುತ ಶಿಕ್ಷಣ

Published On :

ಇಂದು ಶಾಲೆ, ಕಾಲೇಜುಗಳಲ್ಲಿ ನೈತಿಕ ಶಿಕ್ಷಣದ ಬದಲಾಗಿ ಲೈಂಗಿಕ ಶಿಕ್ಷಣವನ್ನು ನೀಡುವ ತವಕವೇ ಹೆಚ್ಚು ಕಾಣಿಸುತ್ತಿದೆ. ಲೈಂಗಿಕ ಶಿಕ್ಷಣ ಬೇಕೋ ಬೇಡವೋ ಎನ್ನುವ ವಿಚಾರ ಬಹಳ ದಿನಗಳಿಂದಲೂ ಚರ್ಚೆಯಾಗುತ್ತಲೇ ಬಂದಿದೆ.

ಮೌಲ್ಯಯುತ ಶಿಕ್ಷಣ ಕೊಂಡುಕೊಳ್ಳುವ ವಸ್ತುವಲ್ಲ. ಅದು ಮಾನವನ ಅಂತರಂಗದಲ್ಲಿ ಹುದುಗಿರುವ ಸಂಪತ್ತು. ಮೌಲ್ಯಯುತ ಶಿಕ್ಷಣ ಪ್ರತಿಯೊಂದು ಸಮಾಜದ ಮಕ್ಕಳಿಗೆ ಜ್ಞಾನ, ತಿಳಿವಳಿಕೆ ಮತ್ತು ಕೌಶಲ್ಯಗಳನ್ನು ಕಲಿಸುವುದರ ಜೊತೆಗೆ ಅವರು ಉತ್ತಮ ನಾಗರಿಕರಾಗಲು ಕೆಲವು ಗುಣಗಳನ್ನು ಬೆಳೆಸಲು ಅಪೇಕ್ಷಿಸುತ್ತದೆ. ಶಿಕ್ಷಣದ ಮೂಲಕ ಕಲಿಸುವ ನೈತಿಕತೆಯು ಅವರ ಜೀವನಕ್ಕೆ ಭದ್ರ ಬುನಾದಿಯಾಗುತ್ತದೆ. ಸಾರ್ವಜನಿಕ ಶಿಕ್ಷಣ ರೂಪುಗೊಳ್ಳುವುದಕ್ಕಿಂತ ಮುಂಚೆ ಧಾರ್ಮಿಕ ಸಂಸ್ಥೆಗಳೇ ನೈತಿಕ ಶಿಕ್ಷಣ ನೀಡುವ ಕಾರ್ಯವನ್ನು ಮಾಡುತ್ತಿದ್ದವು. ಪ್ರಾಚೀನ ಕಾಲದಲ್ಲಂತೂ ಗುರುಕುಲಗಳ ಮೂಲಕ ಕಟ್ಟುನಿಟ್ಟಿನ ಕ್ರಮಗಳಿಂದ ಸಾತ್ವಿಕತೆಯ ಗುಣಗಳನ್ನು ಬೆಳೆಸಲಾಗುತ್ತಿತ್ತು. ಇನ್ನೊಂದೆಡೆ ಧರ್ಮ ಪ್ರಚಾರ ಕಾರ್ಯವೂ ನಡೆಯುತ್ತಿತ್ತು. ತದನಂತರ ಸಾರ್ವಜನಿಕ ಶಿಕ್ಷಣ ವ್ಯವಸ್ಥೆ ಪ್ರಚಲಿತದಲ್ಲಿ ಬಂದಿತು. ಆದರೆ ಇಂದು ಈ ಸಾರ್ವಜನಿಕ ಶಿಕ್ಷಣ ಎಷ್ಟರ ಮಟ್ಟಿಗೆ ಮಕ್ಕಳಲ್ಲಿ ಮೌಲ್ಯಯುತ ಗುಣಗಳನ್ನು ಬೆಳೆಸಿ ಸ್ವಸ್ಥ ಸಮಾಜವನ್ನು ನಿರ್ಮಾಣ ಮಾಡತ್ತಿದೆ ಎನ್ನುವುದನ್ನು ಯೋಚಿಸಬೇಕಿದೆ.
ಈಗೀಗಂತೂ ಶಿಕ್ಷಕರಿಗೆ ಚೂರಿ ಇರಿಯುವುದು, ಹೊಡೆಯುವುದು, ಬೈಯುವುದು ಇವೇ ಮುಂತಾದ ಸಾಕಷ್ಟು ಪ್ರಸಂಗಗಳು ನಡೆಯುತ್ತಿರುತ್ತವೆ. ಇದು ಬೇಲಿಯೆ ಎದ್ದು ಹೊಲ ಮೇಯ್ದಂತೆ. ಇದಕ್ಕೆ ಪರಿಹಾರ ಇಲ್ಲವೆ? ಉನ್ನತ ಶಿಕ್ಷಣದವರನ್ನು ಕೇಳಿದರೆ ಪ್ರೌಢಶಿಕ್ಷಣ ಚೆನ್ನಾಗಿ ಆಗಬೇಕು ಎನ್ನುತ್ತಾರೆ. ಪ್ರೌಢ ಶಿಕ್ಷಣದವರನ್ನು ವಿಚಾರಿಸಿದರೆ ಪ್ರಾಥಮಿಕ ಹಂತದ ಶಿಕ್ಷಣದ ಕಡೆಗೆ ಕೈ ಮಾಡಿ ತೋರಿಸುತ್ತಾರೆ. ಪ್ರಾಥಮಿಕ ಶಿಕ್ಷಣದವರನ್ನು ಕೇಳಿದರೆ ಮಕ್ಕಳ ಕುಟುಂಬದ ಕಡೆಗೆ ಬೆರಳು ಮಾಡುತ್ತಾರೆ. ಹಾಗಾಗಿ ಮೌಲ್ಯಯುತ ಶಿಕ್ಷಣದ ಬಗ್ಗೆ ಪರಾಮರ್ಶೆ ನಡೆಯುವುದು ತೀರಾ ಅಗತ್ಯವಿದೆ.
ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರು ಹೇಳುವಂತೆ ಬಾಲ್ಯಾವಸ್ಥೆ, ಪ್ರೌಢಾವಸ್ಧೆಯಲ್ಲಿ ಪಡೆದ ಮೌಲ್ಯಗಳು ವಿಶ್ವವಿದ್ಯಾಲಯ ಮಟ್ಟಕ್ಕಿಂತಲೂ ಹೆಚ್ಚು ಪರಿಣಾಮಕಾರಿಯಾಗಿರುತ್ತವೆ. ಅದೇ ರೀತಿ ರಾಷ್ಟ್ರಕವಿ ಕುವೆಂಪು ಅವರು, "ಯಾವ ದೊಡ್ಡ ನೀತಿವಂತನೂ ಒಂದೇ ದಿನದಲ್ಲಿ ಹಾಗಾಗಲಿಲ್ಲ, ಅವರಲ್ಲಿ ಯಾವೊಬ್ಬನೂ ಹುಟ್ಟಿನಲ್ಲಿ ನೀತಿವಂತನಾಗಿರಲಿಲ್ಲ" ಎಂದು ಹೇಳಿದ್ದಾರೆ.
ಮಗು ಭ್ರೂಣಾವಸ್ಥೆಯಲ್ಲಿ ಇರುವಾಗ ಅದರ ಮೇಲೆ ತಾಯಿಯ ಬೇಕು ಬೇಡಗಳು, ಮನೆಯ ವಾತಾವರಣ, ಬಂಧು- ಬಳಗದವರ ಶಾಂತಿ, ಸಮಾಧಾನ ಇವು ಪ್ರಭಾವ ಬೀರುತ್ತಿರುತ್ತವೆ ಎಂಬುವುದು ಸಂಶೋಧನೆಯಿಂದ ಧೃಡಪಟ್ಟಿದೆ. ಹೀಗಾಗಿ ಕೌಟುಂಬಿಕ ಪರಿಸರವನ್ನು ಸೌಹಾರ್ದಯುತವಾಗಿ ಇಡುವುದು ಅವಶ್ಯ. ಮುಂದಿನ ದಿನಮಾನಗಳಲ್ಲಿ ನಾನೂ ಒಬ್ಬ ಆದರ್ಶ ಮಗುವನ್ನು ಕುಟುಂಬಕ್ಕೆ, ಸಮಾಜಕ್ಕೆ ನೀಡುತ್ತೇನೆ ಎಂಬ ಭಾವ ಬೇಕು. ತಂದೆ, ತಾಯಿಗಳೊಂದಿಗೆ ಬೆಳೆದ ಮಕ್ಕಳು ಪ್ರೀತಿ, ವಾತ್ಸಲ್ಯ, ಮಮತೆ, ದಯೆ ಇಂತಹವುಗಳಿಂದ ತನ್ನ ವ್ಯಕ್ತಿತ್ವವನ್ನು ಪಡೆಯುತ್ತವೆ. ಮಕ್ಕಳು ನೋಡಿ, ಮಾಡಿ, ಆಡುತ್ತ ಗುಣಗಳನ್ನು ಕಲಿಯುತ್ತಾ ಹೋಗುತ್ತವೆ. ಹಲವು ಸಲ ತಪ್ಪು ಮಾಡಿದಾಗ ಕೈ, ಬಾಯಿ, ಕಣ್ಣು ಸನ್ನೆ ಮೂಲಕ ಮಕ್ಕಳಿಗೆ ತಪ್ಪಿನ ಅರಿವನ್ನು ಮಾಡಿಕೊಡುವುದು ಕುಟುಂಬದ ಜವಾಬ್ದಾರಿ. ಆದರೆ ಇದರಿಂದ ನುಣುಚಿಕೊಳ್ಳುವಂತಾದರೆ ಅಪೇಕ್ಷಿತ ಮಟ್ಟದಲ್ಲಿ ಮಗುವನ್ನು ಬೆಳೆಸುವುದಕ್ಕಾಗುವುದಿಲ್ಲ.
ಪೋಷಕರಿಲ್ಲದ ಮಕ್ಕಳು ಹಾಗೂ ತಂದೆ, ತಾಯಿಗಳ ಜೊತೆಗೆ ಬೆಳೆದ ಮಕ್ಕಳನ್ನು ಸಮೀಕ್ಷೆಗೆ ಒಳಪಡಿಸಿದಾಗ ಪಾಲಕರೊಂದಿಗೆ ಬೆಳೆದ ಮಕ್ಕಳಲ್ಲಿ ಶೈಕ್ಷಣಿಕ ಗುಣ ಮಟ್ಟ ಹೆಚ್ಚಾಗಿರುವುದು ಕಂಡು ಬಂದಿದೆ. ಅಷ್ಟೇ ಅಲ್ಲ ಪಾಲಕರು ಅಳವಡಿಸಿಕೊಂಡಿರುವ ಪ್ರಾಮಾಣಿಕತೆ, ಸಹನೆ, ತಾಳ್ಮೆ, ಪರೋಪಕಾರದಂಥ ಒಳ್ಳೆಯ ಗುಣಗಳನ್ನು ಮಕ್ಕಳೂ ಮೈಗೂಡಿಸಿಕೊಳ್ಳುತ್ತವೆ.
ಇಂದು ಶಾಲೆ, ಕಾಲೇಜುಗಳಲ್ಲಿ ನೈತಿಕ ಶಿಕ್ಷಣದ ಬದಲಾಗಿ ಲೈಂಗಿಕ ಶಿಕ್ಷಣವನ್ನು ನೀಡುವ ತವಕವೇ ಹೆಚ್ಚು ಕಾಣಿಸುತ್ತಿದೆ. ಲೈಂಗಿಕ ಶಿಕ್ಷಣ ಬೇಕೋ ಬೇಡವೋ ಎನ್ನುವ ವಿಚಾರ ಬಹಳ ದಿನಗಳಿಂದಲೂ ಚರ್ಚೆಯಾಗುತ್ತಲೇ ಬಂದಿದೆ. ಈ ಶಿಕ್ಷಣವನ್ನು ನೀಡಿದರೆ ಸಮಾಜ ಬಹಳಷ್ಟು ಅಧಃಪತನಕ್ಕೆ ಹೋಗುತ್ತದೆ ಗುರಿಯಾಗುತ್ತದೆ ಎನ್ನುವುದು ಒಂದು ವಾದವಾದರೆ ಇನ್ನೊಂದು ಅದೆಲ್ಲ ಸುಳ್ಳು ಎನ್ನುತ್ತದೆ. ಪ್ರೌಢಾವಸ್ಥೆಯಲ್ಲಿ ತಿಳಿವಳಿಕೆ ನೀಡಿದರೆ ಯುವಕರು ಜಾಗೃತರಾಗಲು ಸಾಧ್ಯ. ಆಗ ತನ್ನಿಂದ ತಾನೇ ಉತ್ತಮ ಸಮಾಜ ರೂಪುಗೊಳ್ಳುತ್ತದೆ.
ಇತ್ತೀಚಿನ ದಿನಗಳಲ್ಲಿ ಏಡ್ಸ್ ಒಂದು ಮಹಾರೋಗವಾಗಿ ಭಾರತದಾದ್ಯಂತ ತನ್ನ ಕಬಂಧ ಬಾಹು ಚಾಚಿದೆ.  ಇದಕ್ಕೆ ಕಾರಣಗಳೇನು? ತಡೆಗಟ್ಟುವುದಕ್ಕೆ ಮುಂಜಾಗ್ರತೆ ಕ್ರಮಗಳೇನು? ಎಂಬುವುದರ ಬಗ್ಗೆ ಆರೋಗ್ಯ, ಸಮಾಜ ಕಲ್ಯಾಣ, ಶಿಕ್ಷಣ ಇಲಾಖೆ ಹಾಗೂ ಹಲವಾರು ಸಂಘ- ಸಂಸ್ಥೆಗಳು ತರಬೇತಿಯನ್ನು ನೀಡುತ್ತ ಬಂದಿವೆ. ಅದರಲ್ಲಿ ಶಾಲಾ ಹಂತದಲ್ಲಿ ಶಿಕ್ಷಕ- ಶಿಕ್ಷಕಿಯರಿಗೂ ತರಬೇತಿ ನೀಡಲಾಗಿದೆ. ಸಾಮಾನ್ಯವಾಗಿ 7, 8 ಮತ್ತು 9ನೇ ವರ್ಗದ ಮಕ್ಕಳಿಗೆ ಪ್ರತ್ಯೇಕವಾಗಿ ವರ್ಗಗಳನ್ನು ನಡೆಸಿ ಏಡ್ಸ್ ಬಗ್ಗೆ ತಿಳಿವಳಿಕೆ ಕೊಟ್ಟು ಅದರಿಂದಾಗುವ ಅನಾಹುತಗಳನ್ನು ಚರ್ಚಿಸಿ ಜಾಗೃತರನ್ನಾಗಿ ಮಾಡುವಂತೆ ಮಾಡಿದ್ದಾರೆ. ಅದೇ ರೀತಿ ಲೈಂಗಿಕ ಶಿಕ್ಷಣವನ್ನು ಕೂಡಾ ಪ್ರೌಢಾವಸ್ಥೆಯಲ್ಲಿ ನೀಡುವುದು ಅವಶ್ಯವೆನಿಸುತ್ತದೆ. ಶಿಕ್ಷಕಿಯರು ಹುಡುಗಿಯರಿಗೆ, ಶಿಕ್ಷಕರು ಹುಡುಗರಿಗೆ ವಾರದಲ್ಲಿ 1-2 ಅವಧಿಗಳಲ್ಲಿ ಲೈಂಗಿಕ ಶಿಕ್ಷಣದ ಬಗ್ಗೆ ತಿಳಿಸುವುದು ಅವಶ್ಯ.
ಇಂದು ಜೀವ ವಿಜ್ಞಾನ ವಿಷಯದಲ್ಲಿ ಗಂಡು ಮತ್ತು ಹೆಣ್ಣಿನ ದೇಹ ರಚನೆ, ಅದರ ಕಾರ್ಯಗಳ ಕುರಿತು ಶಿಕ್ಷಕರು ಹೇಳಿದ್ದುಂಟು. ಅದಕ್ಕೆ ಮುಜುಗರ ಆಗುವುದಿಲ್ಲವೆ? ಅದೇ ರೀತಿಯಾಗಿ ಲೈಂಗಿಕ ಶಿಕ್ಷಣವನ್ನು ಕಾರ್ಯ ರೂಪಕ್ಕೆ ತಂದು ಕೆಲವು ದಿನಗಳವರೆಗೆ ಸಾಧಕ- ಬಾಧಕಗಳನ್ನು ತಿಳಿದು ಮುಂದುವರೆಸಲು ಸಾಧ್ಯವಾಗುವುದು. ಇಂದು ಪ್ರಾಯೋಗಿಕವಾಗಿ ಕೆಲವು ಶಾಲೆಗಳಲ್ಲಿ ಲೈಂಗಿಕ ಶಿಕ್ಷಣದ ಬಗ್ಗೆ ಮಾಹಿತಿ ನೀಡಿ ನಂತರ ಅದರ ಬಗ್ಗೆ ಅಭಿಪ್ರಾಯ ಸಂಗ್ರಹಿಸಿದರೆ ಭವಿಷ್ಯತ್ತಿನ ಆಗು ಹೋಗುಗಳ ಬಗ್ಗೆ ನಿರ್ಣಯ ತೆಗೆದುಕೊಳ್ಳಲು ಸಾಧ್ಯವಾಗುತ್ತದೆ. ಇದು ಇಂದು ಅವಶ್ಯವಾಗಿ ಆಗಬೇಕಾಗಿದೆ. ಇಷ್ಟೇ ಅಲ್ಲ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳ ಮೂಲಕ ನೈತಿಕತೆ ಬೆಳೆಸುವುದು ಅವಶ್ಯ. ಕುವೆಂಪು ಅವರು ಕೆಲವು ಸಾರ್ವತ್ರಿಕ ಮುಖ್ಯ ಧ್ಯೇಯಗಳನ್ನು ನೈತಿಕ ಶಿಕ್ಷಣ ಕ್ರಮದಲ್ಲಿ ಅಳವಡಿಸಬೇಕು ಎಂದು ಪ್ರತಿಪಾದಿಸಿದ್ದಾರೆ. ಪ್ರತಿಯೊಂದು ಮಗುವನ್ನೂ ವಿಶ್ವ ಮಾನವನನ್ನಾಗಿ ಮಾಡುವುದೇ ಮೌಲ್ಯಯುತ ಶಿಕ್ಷಣದ ಹೊಣೆ.
ವಿಶ್ವ ಮಾನವರಾಗಲು ನಾವು ಸಾಧಿಸಬೇಕಾದ ಸಪ್ತ ಸೂತ್ರಗಳು ಇಲ್ಲಿವೆ. ಮನುಷ್ಯ ಜಾತಿ ತಾನೊಂದೇ ವಲಂ ಎಂಬುವುದನ್ನು ನಿರುಪಾದಿಕವಾಗಿ ಸ್ವೀಕರಿಸಬೇಕು. ವರ್ಣಾಶ್ರಮವನ್ನು ತಿದ್ದುವುದಲ್ಲ, ಅದನ್ನು ಸಂಪೂರ್ಣವಾಗಿ ತೊಲಗಿಸಬೇಕು. ಜಾತಿ ಪದ್ಧತಿಯನ್ನು ಸಂಪೂರ್ಣವಾಗಿ ನಿರಾಕರಿಸಿ ವಿನಾಶಗೊಳಿಸಬೇಕು. ಮತ ತೊಲಗಿ ಆಧ್ಯಾತ್ಮ ಮಂತ್ರ ವೈಜ್ಞಾನಿಕ ತತ್ವವಾಗಿ ಮಾನ್ಯತೆ ಪಡೆಯಬೇಕು. ಮತ ಮನುಜ ಮತವಾಗಬೇಕು. ಪಥ ವಿಶ್ವ ಪಥವಾಗಬೇಕು. ಮತ ಗುಂಪು ಕಟ್ಟುವ ವಿಷಯವಾಗಬಾರದು. ಯಾರು ಯಾವ ಒಂದು ಮತಕ್ಕೆ ಸೇರದೆ ಪ್ರತಿಯೊಬ್ಬರೂ ನಾವು ಕಂಡುಕೊಳ್ಳುವ ತನ್ನ ಮತಕ್ಕೆ ಮಾತ್ರ ಸೇರಬೇಕು. ಯಾವ ಒಂದು ಗ್ರಂಥವೂ ಏಕೈಕ ಪರಮಪೂಜ್ಯ ಧರ್ಮ ಗ್ರಂಥವಾಗಬಾರದು. ಪ್ರತಿಯೊಬ್ಬ ವ್ಯಕ್ತಿಯೂ ತನಗೆ ಸಾಧ್ಯವಾದವುಗಳನ್ನೆಲ್ಲ ಓದಿ ತಿಳಿದು ತನ್ನ ದರ್ಶನವನ್ನು ತಾನೇ ನಿರ್ಣಯಿಸಿಕೊಳ್ಳಬೇಕು. ಈ ಮೇಲಿನ ಅಂಶಗಳನ್ನು ವಿವಿಧ ಹಂತಗಳಲ್ಲಿ ಶಿಕ್ಷಣದ ಮೂಲಕ ನೀಡುವುದರಿಂದ ಮಕ್ಕಳಿಗೆ ಚಿಂತನೆಗೆ ಒಳಪಡಿಸಿ ಅವರಲ್ಲಿ ಅಂತರ್ಗತವಾಗಿರುವ ಸದ್ಗುಣಗಳನ್ನು ಅಭಿವೃದ್ಧಿಪಡಿಸುವುದು ಪ್ರಚಲಿತ ಸಂದರ್ಭದಲ್ಲಿ ಅವಶ್ಯಕ.
ಲೈಂಗಿಕ ಶಿಕ್ಷಣವು ನೈತಿಕ ಶಿಕ್ಷಣದ ಒಂದು ಭಾಗ. ಭಗಿನಿ ನಿವೇದಿತಾ ಅವರು ಹೇಳುವ ಹಾಗೆ- ನಾವು ಎಷ್ಟೇ ಪ್ರಭಾವಿತವಾಗಿ ಪಾಠ ಮಾಡಬಹುದು. ಪ್ರಪಂಚದಲ್ಲಿನ ಉದಾಹರಣೆಗಳನ್ನು ಕೊಡಬಹುದು. ಜಗತ್ತು ಇಂದು ವಿಜ್ಞಾನ ಯುಗದಲ್ಲಿ ಮುನ್ನಡೆಯುತ್ತಿದೆ ಎಂದು ಊಹಾಪೋಹಗಳನ್ನು ಬಿತ್ತರಿಸಬಹುದು. ಆದರೆ ಬೋಧಕನು ತಾನೇ ರೂಪಿಸಿದ ಮಾದರಿಯ ರೀತಿಯಲ್ಲಿ ಅನುಸರಣೆಯು ವ್ಯಕ್ತ ಆದಲ್ಲಿ ಮಕ್ಕಳ ಮೇಲೆ ಪ್ರಭಾವ ಬೀರುವುದು ಎಲ್ಲಕ್ಕೂ ಮಿಗಿಲಾಗಿದೆ. ಬದುಕಿನುದ್ದಕ್ಕೂ ನೈತಿಕ ಬೆಳಕುಗಳ ಮಿಂಚು ನಮಗೆ ದಿಕ್ಸೂಚಿಯಾಗುತ್ತದೆ. ನುಡಿಗಿಂತ ನಡೆ ಪ್ರಖರವಾದಾಗ ಭವಿಷ್ಯ ಉಜ್ವಲವಾಗುತ್ತದೆ. ಇಂಥ ನೈತಿಕತೆ ಮೌಲ್ಯಯುತ ಶಿಕ್ಷಣಕ್ಕೆ ಕಾರಣವಾಗುತ್ತದೆ.

-ಡಾ. ವಿ.ಡಿ. ಐಹೊಳ್ಳಿ,ಸಹ ಪ್ರಾಧ್ಯಾಪಕರು, ಬಿಎಲ್‌ಡಿಇ ಜೆಎಸ್‌ಎಸ್ ಶಿಕ್ಷಣ ಮಹಾವಿದ್ಯಾಲಯ, ಬಿಜಾಪುರ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.