ಆಪ್ನಿಂದ ಹಾನಿ ಬಿಜೆಪಿಗೋ, ಕಾಂಗ್ರೆಸ್ಸಿಗೋ?
ಕೆಲವೇ ದಿನ ತುಸು ತೆರೆಗೆ ಸರಿದಂತಿದ್ದ ಆಮ್ಆದ್ಮಿ ಪಕ್ಷವು ಕಳೆದ ವಾರ ಮತ್ತೆ ಸುದ್ದಿಯ ಮುನ್ನೆಲೆಗೆ ಬಂತು. ಅರವಿಂದ ಕೇಜ್ರಿವಾಲರು ಗುಜರಾತ್ಗೆ ಪ್ರವಾಸ ಕೈಗೊಂಡರು. ಅಲ್ಲಿ ಕೃಷಿಯ ಉತ್ಪಾದಕತೆ ಕುಸಿಯುತ್ತಿದೆ, ಅರ್ಥವ್ಯವಸ್ಥೆ ನಿಂತ ನೀರಾಗಿದೆ, ನಿರುದ್ಯೋಗ ಸಮಸ್ಯೆ ತೀವ್ರವಾಗಿದೆ ಹಾಗೂ ಬಡ ಜನರು ವಿದ್ಯುತ್, ಆಹಾರ ಮತ್ತು ಉತ್ತಮ ಆಡಳಿತಗಳಿಂದ ವಂಚಿತರಾಗಿ ಕೋಪದಲ್ಲಿ ಕುದಿಯುತ್ತಿದ್ದಾರೆ ಎಂಬ ಹಲವು ವಿಕ್ಷಿಪ್ತ ಮೌಲ್ಯಮಾಪನಗಳನ್ನು ಅವರು ತೆರೆದಿರಿಸಿದರು.
ಚುನಾವಣೆಯ ನೀತಿ ಸಂಹಿತೆ ಜಾರಿಯಾಗಿದ್ದರಿಂದ, ಚುನಾವಣಾ ಆಯೋಗದ ನಿಯಮಗಳ ಅನ್ವಯ ಕೇಜ್ರಿವಾಲರ ಪ್ರಯಾಣವನ್ನು ಜಿಲ್ಲಾ ಆಡಳಿತವು ತಡೆಯಿತು. ಇದರಿಂದ ಉನ್ಮಾದಿತರಾದ ಆಮ್ ಆದ್ಮಿ ಸದಸ್ಯರು ದೆಹಲಿ, ಲಕ್ನೋ ಹಾಗೂ ದೇಶದ ಇತರೆಡೆಗಳ ಬಿಜೆಪಿ ಕಚೇರಿಯನ್ನು ಮುತ್ತಿಗೆ ಹಾಕಿದರು. ಆಮೇಲೆ ಆಗಿದ್ದೇನು ಎಂಬುದು ಎಲ್ಲರಿಗೂ ತಿಳಿದಿರುವಂಥದ್ದೇ.
ಇವೆಲ್ಲವೂ ಚುನಾವಣೆಯ ಫಲಿತಾಂಶದ ಮೇಲೆ ಹೇಗೆ ಪರಿಣಾಮ ಬೀರಬಲ್ಲವು? ಇಷ್ಟಕ್ಕೂ ಕೇಜ್ರಿವಾಲ್ರಿಗೆ ಗುರಿ ಮಾಡುತ್ತಿರುವುದು ಹಾಗೂ ಆತಂಕ ಒಡ್ಡಿರುವುದು ಯಾವ ಪಕ್ಷದ ಮತಬ್ಯಾಂಕ್ಗೆ? ಆಪ್ ಕಾರ್ಯಕರ್ತರು ದೆಹಲಿಯ ಬೀದಿಗಳಲ್ಲಿ ಎಬ್ಬಿಸಿದ ರಂಪಾಟ, ಚೀರಾಟಗಳನ್ನು ನೋಡಿದವರಲ್ಲಿ ಎರಡು ಬಗೆಯ ಪ್ರತಿಕ್ರಿಯೆಗಳು ಬಂದವು. ಮುಖ್ಯವಾಹಿನಿಯ, ಮಧ್ಯಮ ವರ್ಗದ ಮಂದಿಯಂತೂ ಆಪ್ ಜನರ ಈ ನಾಚಿಕೆಗೇಡಿ ಕೃತ್ಯವನ್ನು ಭಯ ಹಾಗೂ ಅಸಹ್ಯದಿಂದ ನೋಡಿದ್ದಾರೆ. ಆಪ್ ಎಂಬುದು ಗಲಾಟೆ ಎಬ್ಬಿಸುವ ವಿಧ್ವಂಸಕ ಪಡೆಯಾಗಿದೆಯಲ್ಲದೇ ರಚನಾತ್ಮಕ ರಾಜಕೀಯ ಗುಂಪಾಗಿ ಉಳಿದಿಲ್ಲವಾದ್ದರಿಂದ ಮತದಾನದ ದಿನ ಅವರನ್ನು ಉಪೇಕ್ಷಿಸುವುದೇ ಒಳಿತೆಂಬ ನಿರ್ಧಾರಕ್ಕೆ ಬಂದಿದ್ದಾಗಿದೆ. ಅವರ ಮುಂದಿನ ಆಯ್ಕೆ ಎರಡೇ ಆಗಿತ್ತು. ನರೇಂದ್ರ ಮೋದಿ ಇಲ್ಲವೇ ಉನ್ಮಾದಿತ ಜನರ ಗುಂಪು.
ಹಾಗೆಂದು ಆಪ್ ಅನ್ನು ಅದರ ಈ ನಡತೆಗೆ ಎಲ್ಲರೂ ಖಂಡಿಸುತ್ತಾರೆ ಎಂದು ನಿರೀಕ್ಷಿಸುವುದಾಗಲೀ, ಆಪ್ಗೆ ಸಾರ್ವತ್ರಿಕ ಖಂಡನೆ ವ್ಯಕ್ತವಾಗಿದೆ ಎಂಬ ನಿರ್ಧಾರಕ್ಕೆ ಬರುವುದಾಗಲೀ ಸಾಧುವಾಗುವುದಿಲ್ಲ. ಭಾರತದ ಬೌದ್ಧಿಕ ಸಂವಾದದಲ್ಲಿ ಎಡಪಂಥದೊಂದಿಗೆ ಗುರುತಿಸಿಕೊಂಡಿರುವ ಕೆಲವು ಬುದ್ಧಿಜೀವಿಗಳು ಬೀದಿಹಿಂಸೆ ಮತ್ತು ಅರಾಜಕತೆಗಳಿಗೆ ವೈಚಾರಿಕತೆ ಮೆರಗನ್ನು ಹೊದಿಸಿ ಅದನ್ನು ನಿಯಮಬದ್ಧವೆಂದು ಸಮರ್ಥಿಸುವುದರಲ್ಲಿ ನಿಪುಣರಾಗಿದ್ದಾರೆ. ಇವರ ಈ ಜಾಯಮಾನಕ್ಕೆ ಪ್ರೋತ್ಸಾಹಕವಾಗಿ ನಿಂತಿರುವ ಅಂಶವೆಂದರೆ ನರೇಂದ್ರ ಮೋದಿ ವಿಷಯದಲ್ಲಿ ಇವರಿಗಿರುವ ಖಡಕ್ ವಿರೋಧ ಮತ್ತು ಆಡಳಿತ ಬದಲಾವಣೆಯಿಂದ ಇವರ ಅಸ್ತಿತ್ವಕ್ಕೆ ಬಂದೊದಗಬಹುದಾದ ಆತಂಕ. ಏಕೆಂದರೆ ನರೇಂದ್ರ ಮೋದಿ ಅಧಿಕಾರ ಗದ್ದುಗೆ ಹಿಡಿದಿದ್ದೇ ಆದಲ್ಲಿ ಕೇವಲ ಸರ್ಕಾರದ ಬದಲಾವಣೆ ಅಷ್ಟೇ ಆಗದೇ ಧೋರಣೆಗಳಲ್ಲೇ ಬದಲಾವಣೆಗಳು ಘಟಿಸುತ್ತವೆ ಎಂದವರಿಗೆ ತಿಳಿದಿದೆ.
ಆಪ್ನ ಬೀದಿರಂಪದ ಮಂದಿಗೆ ಬಲ ಒದಗಿಸುವ ಅಂಶವೇ ಇದಾಗಿದೆ. ಕಾಂಗ್ರೆಸ್ ನೇತೃತ್ವದ ಸರ್ಕಾರ ಇನ್ನೊಮ್ಮೆ ಕೇಂದ್ರದಲ್ಲಿ ಅಧಿಕಾರಕ್ಕೆ ಬರುವ ಸಾಧ್ಯತೆಗಳು ಗಣನೀಯವಾಗಿ ಕ್ಷೀಣಿಸಿರುವುದು ಈ ಬುದ್ಧಿಜೀವಿಗಣವನ್ನು ಆಪ್ನಂಥ ಪಕ್ಷಗಳ ಬೆಂಬಲಕ್ಕೆ ನಿಲ್ಲುವಂತೆ ಮಾಡಿದೆ. ಹೀಗಾಗಿ ಆಪ್ ತುಂಬ ನಾಟಕೀಯವಾಗಿ ಬಿಜೆಪಿಗೆ ತನ್ನ ವಿರೋಧವನ್ನು ಪ್ರಖರವಾಗಿಸಿದೆ. ನರೇಂದ್ರ ಮೋದಿಯವರನ್ನು ಎದುರಿಸುವ ವ್ಯಕ್ತಿಯ ತುರ್ತು ಅಗತ್ಯ ಇವರೆಲ್ಲರಿಗಿತ್ತು. ಈ ಗಣದ ಬೆಂಬಲವಿರುವುದರಿಂದಲೇ ಆಪ್, ತಪ್ಪು ಅಂಕಿಅಂಶಗಳನ್ನು ಉದಾಹರಿಸಿಯಾದರೂ ಸರಿ, ಮೋದಿ ಸಾಧನೆಗಳನ್ನು ಅಲ್ಲಗೆಳೆಯುವಲ್ಲಿ ಅದು ನಿರತವಾಗಿದೆ.
ಕೇಜ್ರಿವಾಲ್ ನೇತೃತ್ವದ ಆಪ್ನ ಈ ಎಲ್ಲ ಸರ್ಕಸ್ಸುಗಳು ಕಾಂಗ್ರೆಸ್ ಪಾಲಿಗೂ ಕೆಲ ಪರಿಣಾಮಗಳನ್ನು ತಂದೊಡ್ಡಿರುವುದು ಹೌದು. ತನ್ನ ಬೆಂಬಲ ನೆಲೆಗಳಿಂದ ಇನ್ನಷ್ಟು ದೂರವಾಗುವ ಒತ್ತಡ ಕಾಂಗ್ರೆಸ್ ಪಾಲಿಗೆ ನಿರ್ಮಾಣವಾಗಿದೆ. ಯಾವ ಕಡೆಗಳಲ್ಲೆಲ್ಲ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನಿಖರ ಸ್ಪರ್ಧೆ ಇದೆಯೋ ಅಂಥ ರಾಜ್ಯಗಳು ಮತ್ತು ಪ್ರದೇಶಗಳಲ್ಲೇ ಕೇಜ್ರಿವಾಲ್ ತಮ್ಮೆಲ್ಲ ಪ್ರಯತ್ನವನ್ನೂ ವಿನಿಯೋಗಿಸುತ್ತಿದ್ದಾರೆ. ಬಹಳಷ್ಟು ಕಡೆಗಳಲ್ಲಿ ಪ್ರಾದೇಶಿಕ ಪಕ್ಷಗಳು ದುರಾಡಳಿತ ಹಾಗೂ ಭ್ರಷ್ಟಾಚಾರದ ಆರೋಪಗಳನ್ನು ಎದುರಿಸುತ್ತಿವೆ. ಆದರೆ ಅಂಥವರ ವಿರುದ್ಧ ಎಲ್ಲೂ ಕೇಜ್ರಿವಾಲ್ ತಮ್ಮ ಶ್ರಮವನ್ನು ವ್ಯಯಿಸುತ್ತಿಲ್ಲ. ಕೇಜ್ರಿವಾಲರು ರಾಷ್ಟ್ರೀಯ ಮಹತ್ವದ ಮತಕ್ಷೇತ್ರಗಳ ಮೇಲಷ್ಟೇ ಕಣ್ಣಿಟ್ಟಿದ್ದಾರೆ. ಅವರ ದಾಳಿಯೂ ರಾಷ್ಟ್ರೀಯ ಪಕ್ಷಗಳು ಹಾಗೂ ಮೋದಿ ವಿರುದ್ಧ. ಅಂತೆಯೇ ತಮ್ಮ ಪ್ರಚಾರಕ್ಕಾಗಿ ಆತುಕೊಂಡಿರುವುದೂ ರಾಷ್ಟ್ರೀಯ ಮಾಧ್ಯಮವನ್ನು ಮಾತ್ರ. ತಮ್ಮ ದೆಹಲಿ ಸೂತ್ರವನ್ನೇ ಕೆಲವು ಬದಲಾವಣೆಗಳೊಂದಿಗೆ ಇಲ್ಲಿ ಪ್ರಯೋಗಿಸುತ್ತಿದ್ದಾರವರು.
ಡಿಸೆಂಬರ್ 2013ರಲ್ಲಿ ದೆಹಲಿ ಮತ್ತು ಇತರೆಡೆಗಳಲ್ಲಿ ಕೇಜ್ರಿವಾಲರು ಪಡೆದುಕೊಂಡಿದ್ದ ಉನ್ನತ ಮಧ್ಯಮ ವರ್ಗದವರ ಬೆಂಬಲ ಆ ಕ್ಷಣದ ಚಮತ್ಕಾರ ಮಾತ್ರ. ಆ ಗುಂಪು ಅದಾಗಲೇ ಬಿಜೆಪಿಯತ್ತ ವಲಸೆ ಬಂದಾಗಿದೆ. ಕಳೆದ ವಾರ ಆಪ್ನ ಕಾರ್ಯಕರ್ತರು ಗೂಂಡಾಗಿರಿಯಲ್ಲಿ ತೊಡಗಿಕೊಂಡ ದೃಶ್ಯಗಳನ್ನು ಟಿವಿ ಪರದೆಯಲ್ಲಿ ನೋಡಿದ ನಂತರ, ಈ ಮಧ್ಯಮ ವರ್ಗವು ಆಪ್ ತೊರೆದು ಬಿಜೆಪಿಗೆ ಇನ್ನಷ್ಟು ಹತ್ತಿರವಾಗಿದ್ದಿರಬಹುದು ಎಂದೆನಿಸುತ್ತದೆ. ಆದಾಗ್ಯೂ, ನಗರದ ಬಡವರು, ಅಲ್ಪಸಂಖ್ಯಾತರು, ಎಡದ ಒಲವಿನ ಕಾರ್ಯಕರ್ತರು ಮತ್ತು ಎನ್ಜಿಒ ವರ್ಗವು ಮೋದಿ ವಿರೋಧಿಯಾಗಿದ್ದು, ಅವರೆಲ್ಲ ಯಾವತ್ತೂ ತಮ್ಮೊಂದಿಗಿದ್ದಾರೆ ಎಂಬುದು ಕೇಜ್ರಿವಾಲ್ ಲೆಕ್ಕಾಚಾರ. ಕಾಂಗ್ರೆಸ್ನ ಸೋಲಿನ ಸಾಧ್ಯತೆಯಿಂದ ಅನಾಥವಾಗಿರುವ ಗುಂಪು ಇದು. ಅಧಿಕಾರದಲ್ಲಿರುವಾಗ ಕಾಂಗ್ರೆಸ್ನ ಕಾರ್ಯಕ್ಷಮತೆ ಕುರಿತೂ ಇವರಿಗೆ ತಕರಾರುಗಳಿವೆ. ಇವರಿಗೆಲ್ಲ ನರೇಂದ್ರ ಮೋದಿಯವರನ್ನು ಹೊರತುಪಡಿಸಿದ ಪರ್ಯಾಯವೊಂದು ಬೇಕಿದೆ. ಇಲ್ಲಿಯೇ ಕೇಜ್ರಿವಾಲ್ ತಮ್ಮ ಮತಗಳ ಗಳಿಕೆ ಸಾಧ್ಯತೆ ಹೊಂದಿದ್ದಾರೆ.
ಕಾಂಗ್ರೆಸ್ನ ರಾಜಕಾರಣಿಗಳಿಗೂ ಈ ಆಯಾಮ ಅರಿವಾದಂತಿದೆ. ಪಂಜಾಬ್ ಕಾಂಗ್ರೆಸ್ನ ಹಿರಿಯರೊಬ್ಬರು ನನ್ನಲ್ಲಿ ಖಾಸಗಿಯಾಗಿ ಮಾತನಾಡುತ್ತ, ಅಕಾಲಿ ದಳದ ವಿರೋಧಿ ಮತಗಳನ್ನು ಆಪ್ ಬಾಚಿಕೊಳ್ಳುವ ಸಾಧ್ಯತೆಗಳೇ ಅಧಿಕವೆಂದೂ, ಸರ್ಕಾರದ ವಿರುದ್ಧದ ಅಲೆಯ ಲಾಭ ಕಾಂಗ್ರೆಸ್ಗೆ ಸಿಗುತ್ತಿಲ್ಲ ಎಂದೂ ಆತಂಕ ತೋಡಿಕೊಂಡರು. ಹರ್ಯಾಣದಲ್ಲಿ ಆಪ್, ಕಾಂಗ್ರೆಸ್ನ ಮತಗಳನ್ನು ನುಂಗಿದಲ್ಲಿ ಬಿಜೆಪಿ ಮತ್ತು ಅದರ ಮೈತ್ರಿಪಕ್ಷವಾದ ಹರ್ಯಾಣ ಜನಹಿತ ಕಾಂಗ್ರೆಸ್ ನಿಚ್ಚಳವಾಗಿ ಲಾಭ ಮಾಡಿಕೊಳ್ಳಲಿವೆ.
ಬೆಂಗಳೂರು ದಕ್ಷಿಣ ಕ್ಷೇತ್ರದ ಉದಾಹರಣೆಯನ್ನೂ ಇಲ್ಲಿ ತೆಗೆದುಕೊಳ್ಳಬಹುದು. ಕಾಂಗ್ರೆಸ್ನಿಂದ ಕಣಕ್ಕಿಳಿದಿರುವ ಹೊಸಮುಖ ನಂದನ್ ನಿಲೇಕಣಿಯವರಿಗೆ ಬಿಜೆಪಿ ಹಾಲಿ ಸಂಸದ ಅನಂತಕುಮಾರ್ ಅವರನ್ನು ಮಣಿಸುವ ಸಾಧ್ಯತೆ ಹೆಚ್ಚಿರುತ್ತಿತ್ತೇನೋ. ಆದರೆ ಅಲ್ಲಿ ಆಪ್ನ ಉಪಸ್ಥಿತಿ ಲೆಕ್ಕಾಚಾರವನ್ನು ಭಿನ್ನ ಹಾದಿ ಹಿಡಿಸುತ್ತಿದೆ. ಈ ಕ್ಷೇತ್ರದಲ್ಲಿ ಆಪ್ ಪ್ರಭಾವವನ್ನು ತೀರ ಕಡೆಗಣಿಸುವಂತಿಲ್ಲ ಎಂದೇ ಹೆಚ್ಚಿನವರ ಅಭಿಪ್ರಾಯ. ಹೀಗಿರುವಾಗ ಇಲ್ಲಿನ ಬಿಜೆಪಿ ವಿರೋಧಿ ಮತಗಳನ್ನು ಆಪ್ ಸೆಳೆಯಲಿದೆ. ಆಪ್ ಇಲ್ಲದಿದ್ದರೆ ಅವೆಲ್ಲ ಕಾಂಗ್ರೆಸ್ಗೆ ಸಂದಾಯವಾಗುತ್ತಿದ್ದವು. ಇದು ಅಲ್ಲಿ ಬಿಜೆಪಿ ಜಯದ ಸಾಧ್ಯತೆಯನ್ನು ಬಲವಾಗಿಸಿದೆ.
ವಿಶ್ಲೇಷಕರಲ್ಲಿ ಹಲವರು ಮೋದಿ ಮತ್ತು ಕೇಜ್ರಿವಾಲ್ ಅವರ ನಡುವಿನ ಜನಪ್ರಿಯತೆ ಸಮರವನ್ನು ಬಣ್ಣಿಸುತ್ತಿದ್ದಾರೆ. ಲೋಕಸಭೆ ಚುನಾವಣೆ ಮಟ್ಟಿಗೆ ಇಬ್ಬರೂ ಹೊರಗಿನವರಾಗಿರುವುದರಿಂದ ಇಂಥ ಆಸಕ್ತಿಗಳು ಒಳ್ಳೆಯ ದೃಶ್ಯಾವಳಿಗಳನ್ನು ಕಟ್ಟಿಕೊಡಬಹುದು. ಆದರೆ ವಾಸ್ತವದಲ್ಲಿ ಬಿಜೆಪಿ ಮತ್ತು ಆಪ್ಗಳು ಒಂದೇ ಬಗೆಯ ಮತ ಹಾಗೂ ಮತಕ್ಷೇತ್ರಗಳಿಗಾಗಿ ಸ್ಪರ್ಧಿಸುತ್ತಿಲ್ಲ ಎಂಬುದು ಹೆಚ್ಚು ಹೆಚ್ಚು ವೇದ್ಯವಾಗುತ್ತಿದೆ. ಹೀಗಾಗಿ ಈ ಆಟದ ನಡುವೆ ನಷ್ಟ ಅನುಭವಿಸಲಿರುವ ಪಕ್ಷ ಕಾಂಗ್ರೆಸ್ಸೇ.
ಕಳೆದ ವಾರ ಬೀದಿರಂಪದ ಕೇಜ್ರಿವಾಲ್ ಹಾಗೂ ಪ್ರಗತಿ ಆಧರಿತ ಮೋದಿ ಪಾಳಯದ ನಡುವೆ ಅಭಿಪ್ರಾಯಗಳು ಧ್ವನಿಸಿದವು. ಇವೆಲ್ಲದರ ಮಧ್ಯದಲ್ಲಿ ಮಹಾರಾಷ್ಟ್ರದಲ್ಲಿ ರಾಹುಲ್ ಗಾಂಧಿ ಮಾತನಾಡಿದ್ದು ಅಷ್ಟಾಗಿ ಗಮನವನ್ನೇ ಸೆಳೆಯಲಿಲ್ಲ. ಇಂಥದೊಂದು ಅಪ್ರಸ್ತುತ ಪ್ರಸಂಗ ಕಾಂಗ್ರೆಸ್ ಪಕ್ಷವನ್ನು ಅತಿಯಾಗಿ ಹೆದರಿಸುತ್ತಿದೆ. ದೆಹಲಿಯಲ್ಲಿ ಆಪ್ ಸರ್ಕಾರ ರಚಿಸುವುದಕ್ಕೆ ಬೆಂಬಲಿಸಿ, ಬಿಜೆಪಿಗೆ ಆಧಾರವಾಗಿದ್ದ ನಗರದ ಮಧ್ಯಮ ವರ್ಗದವರ ಮತಗಳನ್ನು ಬೇರೆಡೆ ಹೋಗುವಂತೆ ಮಾಡುವುದಕ್ಕೆ ಯೋಚಿಸಿದ್ದ ಕಾಂಗ್ರೆಸ್ಗೆ ಈಗದು ತಿರುಗುಬಾಣವಾದಂತಿದೆ. ಖಂಡಿತ, ಆಪ್ ಬೆಳೆದಿದೆ. ಆದರೆ ಅದು ಬಿಜೆಪಿಯನ್ನು ಘಾಸಿಗೊಳಿಸಲಿದೆ ಎಂಬುದಕ್ಕೆ ಪುರಾವೆಗಳು ಸಿಗುತ್ತಿಲ್ಲ.
-ಅಶೋಕ್ ಮಲಿಕ್
ಅಂಕಣಕಾರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

