ಅಂಕಣಗಳು

ರಾಜಕಾರಣಿಗಳಿಗೂ ಬೇಕಿದೆ ಸಕಾರಾತ್ಮಕ ವಿಮರ್ಶೆ

ರಾಜಕಾರಣಿಗಳಿಗೂ ಬೇಕಿದೆ ಸಕಾರಾತ್ಮಕ ವಿಮರ್ಶೆ
Published On :

ಒಬ್ಬ ಪಾದಚಾರಿಗೂ ಸೈಕಲ್‌ಗೂ ಡಿಕ್ಕಿ ಸಂಭವಿಸಿದರೆ ಸೈಕಲ್‌ನವನದೇ ತಪ್ಪು. ಸೈಕಲ್‌ಗೂ ಮೋಟಾರ್ ಬೈಕ್‌ಗೂ ಡಿಕ್ಕಿ ಸಂಭವಿಸಿದರೆ ಮೋಟಾರ್ ಬೈಕ್‌ನವನದೇ ತಪ್ಪು, ಮೋಟಾರ್ ಬೈಕ್‌ಗೂ ಕಾರ್‌ಗೂ ಡಿಕ್ಕಿ ಸಂಭವಿಸಿದರೆ ಕಾರ್‌ನವನದೇ ತಪ್ಪು, ಮೇಲಿನ ಯಾವುದೇ ವಾಹನ ಬಿ.ಎಮ್.ಟಿ.ಸಿ ಬಸ್ಸಿಗೆ ಡಿಕ್ಕಿ ಹೊಡೆದರೆ ಬಿ.ಎಮ್.ಟಿ.ಸಿ ಬಸ್‌ನವನದೇ ತಪ್ಪು.ಇದು ಸಾರ್ವಜನಿಕರು ಸಾಮಾನ್ಯವಾಗಿ ಮಾಡಿಬಿಡುವ ನ್ಯಾಯತೀರ್ಮಾನ. ಇದು, ಇಲ್ಲದವರಿಗೆ ಉಳ್ಳವರ ಬಗ್ಗೆ ಇರುವ ಅಸಹನೆ ಹಾಗೂ ಬಡವರ ಬಗ್ಗೆ ಅವರಿಗಿರುವ ಅನುಕಂಪವನ್ನು ತೋರುತ್ತದೆಯೇ ಹೊರತು ಸತ್ಯಾನ್ವೇಷಣೆಯ ಮನಸ್ಥಿತಿಯನ್ನಲ್ಲ. ಬಡವನಿಗೆ ದುರಾಹಂಕಾರ, ಬೇಜವಾಬ್ದಾರಿತನ ಇರಬಾರದೆಂದೇನೂ ಇಲ್ಲ, ಅದೇ ರೀತಿ ಶ್ರೀಮಂತನಿಗೆ ಸಜ್ಜನಿಕೆ ಸಹನೆ ಇರಲಾರದೆಂದೇನೂ ಅಲ್ಲ. ಆದರೂ ಆ ರೀತಿಯ ಅಪಘಾತಗಳು ಸಂಭವಿಸಿದಾಗ ತಾವಾಗೇ ಹೋಗಿ ಹಿಂದಿನ ಚಕ್ರದಡಿಯಲ್ಲಿ ಸಿಕ್ಕಿದ್ದರೂ, ಜನ ಸಕಾರಾತ್ಮಕವಾಗಿ ವಿಮರ್ಶಿಸದೆ ಕಾರ್‌ನವನನ್ನೋ, ಬಸ್‌ನವನನ್ನೋ ಹಿಗ್ಗಾಮುಗ್ಗಾ ಥಳಿಸಿ, ಗಾಜುಗಳನ್ನು ಪುಡಿಪುಡಿ ಮಾಡಿ ತಮ್ಮ ಅಸಹನೆಯನ್ನು ತೀರಿಸಿಕೊಂಡುಬಿಡುತ್ತಾರೆ. ಒಟ್ಟಿನಲ್ಲಿ ಅವನ ಶ್ರೀಮಂತಿಕೆ ಮತ್ತು ಅವನ ಸ್ಥಾನ ಆ ಘಳಿಗೆಯಲ್ಲಿ ಅವನನ್ನು ಸಕಾರಾತ್ಮಕ ವಿಮರ್ಶೆಯಿಂದ ವಂಚಿತನನ್ನಾಗಿ ಮಾಡಿಬಿಡುತ್ತದೆ. ಸಮಾಜದಲ್ಲಿ ಈ ಥರದ ಸಕಾರಾತ್ಮಕ ವಿಮರ್ಶೆಗೆ ಒಳಪಡದೆ ಕೇವಲ ನಕಾರಾತ್ಮಕ ವಿಮರ್ಶೆಗೆ ಗುರಿಯಾಗಿ ನರಳುವ ಮತ್ತೊಂದು ಪಾಪಿ ಜೀವವೆಂದರೆ ರಾಜಕಾರಿಣಿಯದ್ದು.
ಈಚೀಚೆಗಂತೂ ಸುದ್ದಿ ಚಾನಲ್‌ಗಳು ಜಾಸ್ತಿಯಾಗಿ, ಟಿ.ಆರ್.ಪಿ ಪೈಪೋಟಿ ಹೆಚ್ಚುತ್ತಿರುವುದರಿಂದ, ರಾಜಕಾರಿಣಿಯ ಪಾಡು ಕೇಳುವಂತೆಯೇ ಇಲ್ಲ. ಯಾವ ಚಾನಲ್ ಇವನನ್ನು ವರ್ಣರಂಜಿತವಾಗಿ ಕಿಚಾಯಿಸಿ ಮಜಾ ಕೊಡುತ್ತಾರೋ ಆ ಚಾನಲ್‌ನ ಟಿ.ಆರ್.ಪಿ ಜಾಸ್ತಿಯಾಗುತ್ತದೆಂದು ಎಲ್ಲಾ ಚಾನಲ್‌ನವರೂ ಇವನನ್ನು ಅಪಹಾಸ್ಯ ಮಾಡಲು ಒಂದಷ್ಟು ಸಮಯ, ಒಂದಷ್ಟು ಕಾರ್ಯಕ್ರಮಗಳನ್ನು ನಿಗದಿ ಮಾಡಿಬಿಟ್ಟಿದ್ದಾರೆ.  ಏನೇ ಘಟನೆ ಸಂಭವಿಸಲಿ, ಅದರಲ್ಲಿ ಇವನ ಪಾತ್ರ ಇರಲಿ ಬಿಡಲಿ, ನೇರಪ್ರಸಾರ ಕಾರ್ಯಕ್ರಮದಲ್ಲಿ ದೂರವಾಣಿಯ ಮೂಲಕ ಸಂಪರ್ಕ ಪಡೆದುಕೊಂಡು ಪ್ರಶ್ನೆಗಳ ಸುರಿಮಳೆಗರೆದು ತಬ್ಬಿಬ್ಬುಗೊಳಿಸುವ ಪ್ರಯತ್ನ ಮಾಡುತ್ತಾರೆ. ಆಗ ಅವರ ಉದ್ದೇಶ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದಾಗಿರುವುದಿಲ್ಲ, ಬದಲಾಗಿ ಅವನನ್ನು ಇಕ್ಕಟ್ಟಿಗೆ ಸಿಲುಕಿಸಿ ತಾವೂ ಮಜ ತೆಗೆದುಕೊಂಡು ನೋಡುಗರಿಗೂ ಮಜ ಕೊಡುವುದಾಗಿರುತ್ತದೆ. ಒಂದೊಮ್ಮೆ ಆ ರಾಜಕಾರಣಿ ವ್ಯಾಪ್ತಿ ಪ್ರದೇಶದಿಂದ ಹೊರಗಿದ್ದು ಲೈನ್ ಸಿಗಲಿಲ್ಲವೆಂದಾದರೆ ತಮ್ಮ ಪ್ರಶ್ನೆಗಳಿಗೆ ಉತ್ತರ ಕೊಡಲಾಗದೆ ಕರೆಯನ್ನೇ ಸ್ವೀಕರಿಸುತ್ತಿಲ್ಲ ಎಂದೂ, ಲೈನ್ ಅರ್ಧದಲ್ಲಿ ಕಟ್ಟಾಗಿಬಿಟ್ಟರೆ ತಮ್ಮ ಮೊನಚಾದ ಪ್ರಶ್ನೆಗಳಿಗೆ ಉತ್ತರಿಸಲಾಗದೆ ಡಿಸ್‌ಕನೆಕ್ಟ್ ಮಾಡಿಬಿಟ್ಟ ಎಂದೂ ಅಪಪ್ರಚಾರ ಮಾಡಿ ತಾವು ಹೀರೋಗಳಾಗಿ ಬಿಡುತ್ತಾರೆ.
ಇನ್ನು ಏನಾದರೊಂದು ಅನಾಹುತ ಸಂಭವಿಸಿದರೆ ಅದಕ್ಕೆ ಸಾಮಾನ್ಯ ಜನರ ಹೊಣೆಗಾರಿಕೆ ಇಲ್ಲವೇ ಇಲ್ಲ, ಎಲ್ಲದಕ್ಕೂ ರಾಜಕಾರಣಿಯೇ ಹೊಣೆ ಎನ್ನುವಂತೆ ಬಿಂಬಿಸಲಾಗುತ್ತದೆ. ಭೀಕರ ಮಳೆ ಬಂದು ಒಂದು ಮಗು ಮೋರಿಯಲ್ಲಿ ಕೊಚ್ಚಿಕೊಂಡುಹೋಯಿತುತೆಂದರೆ ಆ ಮೋರಿಯ ಬಳಿ ಮಗುವನ್ನು ಹೋಗಲು ಬಿಟ್ಟ ಪೋಷಕರ ತಪ್ಪೇನೂ ಇಲ್ಲ, ಎಲ್ಲಾ ಹೊಣೆಗಾರಿಕೆಯೂ ನಿರ್ದಿಷ್ಟ ಮಂತ್ರಿಯದ್ದೇ ಎಂದು ಹೇಳಿ ಅವರನ್ನು ತಪ್ಪಿತಸ್ಥನ ಸ್ಥಾನದಲ್ಲಿ ನಿಲ್ಲಿಸಲಾಗುತ್ತದೆ. ವಯಸ್ಸಿಗೆ ಬಂದ ಮಗನೊಬ್ಬ ನಿತ್ಯಾನಂದನ ಫಿಲಾಸಫಿ ಭಾಷಣಕ್ಕೆ ಮರುಳಾಗಿ ತಂದೆ ತಾಯಿ ಮಾತನ್ನು ಧಿಕ್ಕರಿಸಿ ಸನ್ಯಾಸತ್ವ ಸ್ವೀಕರಿಸಿದರೆ, ನ್ಯಾಯಾಲಯವೂ ಕಾನೂನು ಪ್ರಕಾರ ಅದು ತಪ್ಪೆಂದು ಹೇಳಲಾಗದು ಎಂದು ತೀರ್ಪು ನೀಡಿದರೂ ಚಾನಲ್‌ನವರು ಮಾತ್ರ ರಾಜಕಾರಣಿಗಳನ್ನು ಹಿಡಿದಲ್ಲಾಡಿಸುತ್ತಾರೆ. ಆ ತಂದೆ ತಾಯಿಗಳನ್ನು ಸ್ಟುಡಿಯೋದಲ್ಲಿ ತಂದು ಕೂರಿಸಿಕೊಂಡು ಆ ನೊಂದ ತಂದೆ ತಾಯಿಗಳಿಗೆ ನ್ಯಾಯ ಕೊಡಿಸಲಾಗದ ಸರ್ಕಾರವೆಂದೂ, ಅಧಿಕಾರದಲ್ಲಿರುಲವವರಿಗೆ ನಿತ್ಯಾನಂದನಿಂದ ಸೂಟ್ ಕೇಸ್ ರವಾನೆಯಾಗಿದೆ ಎಂದೂ ದಿನಗಟ್ಟಲೆ ವ್ಯಾಖ್ಯಾನ ಮಾಡುತ್ತಾ ಅವರ ಚಾರಿತ್ರ್ಯಹರಣ ಮಾಡುತ್ತಾರೆ. ಕೆಲವು ಮಹಿಳಾ ಮಣಿಗಳಂತೂ, ಇವರು ಅಧಿಕಾರದಲ್ಲಿದ್ದಾಗ ಹೇಗೋ ಇವರ ಸಂಪರ್ಕ ಸಾಧಿಸಿ, ಸ್ನೇಹ, ಸಲುಗೆ ಬೆಳೆಸಿ ಎಲ್ಲ ಥರದ ಸುಖ ಸಂಪತ್ತನ್ನು ಅನುಭವಿಸಿ, ನಂತರ ಇವನ ವಿರೋಧಿಯೊಬ್ಬನ ಕೈಚಳಕದ ದಾಳವಾಗಿಯೋ ಅಥವಾ ಯೇನಕೇನ ಪ್ರಸಿದ್ಧಿಗೆ ಬರಬೇಕೆಂಬ ಬಯಕೆಯಿಂದಲೋ ಇಂಥಾ ಚಾನಲ್‌ಗಳ ಸ್ಟುಡಿಯೊದಲ್ಲಿ ಬಂದು ಕೂತುಬಿಡುತ್ತಾರೆ. ಚಾನಲ್‌ನವರು ಸಿಕ್ಕಿದ್ದೇ ಸಾಕೆಂದು ಅವರನ್ನು ಪ್ರಶ್ನೆ ಮಾಡದೆ ಅಸಹಾಯಕತೆ, ಅಮಾಯಕತೆಯೆಂಬ ರಕ್ಷಾಕವಚ ತೊಡಿಸಿ ರಾಜಕಾರಣಿಯ ಮಾನ ಮಾತ್ರ ವಾರಗಟ್ಟಲೆ ಹರಾಜು ಹಾಕುತ್ತಾರೆ. ಗಣ್ಯವ್ಯಕ್ತಿಗಳ ಜೊತೆಯಲ್ಲಿ ಕೂತು ಸಮಾಜದ ಗಂಭೀರ ಸಮಸ್ಯೆಗಳ ಬಗ್ಗೆ ಚರ್ಚಿಸುವ ಮಟ್ಟಿಗೆ ಅವಳು ವಿ.ಐ.ಪಿ ಯಾಗಿಬಿಡುತ್ತಾಳೆ.
ಇನ್ನು ಇವರಿಗೆ ಖಖಿಐ ಕಾರ್ಯಕರ್ತರೆಂದು ಹೇಳಿಕೊಳ್ಳುವವರ ಕಾಟವಂತೂ ಬೇಡವೇಬೇಡ. ರಾಜಕಾರಣಿಗಳ ವ್ಯವಹಾರಗಳಲ್ಲಿ ಏನಾದರೂ ಹುಳುಕು ಹುಡುಕಲೇಬೇಕೆಂದು ಮಾಹಿತಿ ಕಲೆಹಾಕುವ, ಅಕಸ್ಮಾತ್ ಸ್ವಲ್ಪ ಅನುಮಾನ ಹುಟ್ಟಿಸುವಷ್ಟು ವಿಷಯ ಸಿಕ್ಕರೂ ಸಾಕು, ಒಂದಷ್ಟು ನಕಲು ಪ್ರತಿಗಳನ್ನು ಹಿಡಿದು ತಂದು ಬೇರೆಬೇರೆ ಚಾನಲ್‌ಗಳಲ್ಲಿ ಚರ್ಚೆಗಳಲ್ಲಿ ಭಾಗವಹಿಸುತ್ತಾ, ಇಂಥಾ ದುಷ್ಟ ರಾಜಕಾರಣಿಗಳ ದಮನಕ್ಕಾಗಿ ಶ್ರೀಹರಿ ಎತ್ತಿರುವ ಹನ್ನೊಂದನೇ ಅವತಾರವೇ ತಾವೆಂದು ಬಿಂಬಿಸಿಕೊಳ್ಳಲು ಶುರುವಿಟ್ಟುಕೊಂಡುಬಿಡುತ್ತಾರೆ. ಇವರು ಮಾಡುವ ಆರೋಪಗಳಿಗೆ ಒಬ್ಬನ ಚಾರಿತ್ರ್ಯವಧೆ ಮಾಡುವಷ್ಟು ಶಕ್ತಿ ಇರುತ್ತದಷ್ಟೇ ಹೊರತಾಗಿ ಅದು ಸತ್ಯವೆಂದು ಸಾಬೀತು ಮಾಡುವಷ್ಟು ತಾಕತ್ತಿರುವುದಿಲ್ಲ. ಉದಾಹರಣೆ ಬೇಕೆಂದರೆ ಆ್ಛಡ್ಝಿಢ್ಝಡಡಿ ಡ್ಡ್ಠಿಟಿಜಜ ಠ್ಟಟ್ಝಡ್ಝ್ಛ್ಝಿಛಟಿ ಕೇಜ್ರೀವಾಲರೇ ಇದ್ದಾರಲ್ಲಾ? ಯಾವ ಶೀಲಾ ದೀಕ್ಷಿತ್‌ರ ಮೇಲೆ ಭ್ರಷ್ಟಾಚಾರ ಆರೋಪಗಳನ್ನು ಹೊರಿಸಿ, ಟಿ.ವಿಗಳಲ್ಲಿ ನೂರಾರು ಪುಟಗಳ ಕ್ಸೆರಾಕ್ಸ್ ಪೇಪರ್‌ಗಳನ್ನು ತೋರಿಸಿ, ತಾವು ಅಧಿಕಾರಕ್ಕೆ ಬಂದ ಹದಿನಾಲ್ಕು ದಿನದೊಳಗೆ ಅವರನ್ನು ಜೈಲಿಗೆ ಅಟ್ಟುತ್ತೇನೆಂದು ಗುಡುಗಿದ್ದರೋ ಅವರು ಸಿ.ಎಂ ಆದಮೇಲೆ ಮಾಡಿದ್ದೇನು?  ಶೀಲಾ ದೀಕ್ಷಿತ್‌ರ ಮೇಲೆ ಕ್ರಮ ಏಕೆ ತೆಗೆದುಕೊಳ್ಳುತ್ತಿಲ್ಲ ಎಂದು ಪ್ರಶ್ನಿಸಿದ ಬಿಜೆಪಿಗೆ, "ಸರಿಯಾದ ಸಾಕ್ಷ್ಯವಿದ್ದರೆ ಕೊಡಿ, ಈಗಲೇ ಕ್ರಮ ತೆಗೆದುಕೊಳ್ಳುತ್ತೇನೆ" ಎಂದು ಹೇಳಿದರು.
ರಾಜಕಾರಣವೇ ಬರೀ ಈ್ಟಟಠ್ಠ್ಟಟ್ಝಡಜಡ ಛಟಿಜ ಛಜಞ್ಡಡಡಿಟಜಟಿಡಿ ಗಳಿಂದ ತುಂಬಿದ ಕ್ಷೇತ್ರ. ಇಲ್ಲಿ ತಾವಾಡುವ ಮಾತುಗಳಿಗೆ, ತಾವು ಪ್ರತಿಪಾದಿಸುವ ತತ್ವ ಸಿದ್ಧಾಂತಗಳಿಗೆ ಬದ್ಧರಾಗಿರಲು ಸಾಧ್ಯವೇ ಇಲ್ಲ. ತಮ್ಮ ಸ್ವಹಿತಾಸಕ್ತಿಯಿಂದಲ್ಲದಿದ್ದರೂ ರಾಜ್ಯ ಹಾಗೂ ರಾಷ್ಟ್ರದ ಹಿತದೃಷ್ಟಿಯಿಂದಲಾದರೂ ರಾಜಿ ಮಾಡಿಕೊಳ್ಳಲೇಬೇಕಾದ ಪ್ರಮೇಯಗಳು ಬರುತ್ತವೆ. ಹಾಗೆ ಮಾಡಿಕೊಂಡಾಗ ಅವರುಗಳನ್ನು ಊಸರವಳ್ಳಿಗಳೆಂದು ಚಿತ್ರಿಸಲಾಗುತ್ತದೆ. ವಿಪರ್ಯಾಸವೆಂದರೆ 1989 ರಿಂದ ಇದುವರೆಗೂ ಕೇಂದ್ರದಲ್ಲಿ ಒಂದು ಪಕ್ಷಕ್ಕೆ ಸ್ಪಷ್ಟ ಬಹುಮತ ಬಂದೇ ಇಲ್ಲ. ಈ ರೀತಿ ಅತಂತ್ರ ಸ್ಥಿತಿ ನಿರ್ಮಾಣವಾದಾಗ, ಎಲ್ಲರೂ, ಮಾತಿಗೆ ತಪ್ಪುವುದಿಲ್ಲ, ತಮ್ಮ ನಿಲುವುಗಳಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಕೂತುಬಿಟ್ಟರೆ ಸರ್ಕಾರ ಮಾಡುವವರು ಯಾರು? ಮರುಚುನಾವಣೆ ಎಷ್ಟು ಬಾರಿ ಮಾಡಲಾದೀತು? ಅಂಥಾ ಸ್ಥಿತಿ ನಿರ್ಮಾಣವಾದರೆ, ಆಗ ಇದೇ ಮಾಧ್ಯಮಗಳು ಏನೆಂದು ವ್ಯಾಖ್ಯಾನಿಸುತ್ತವೆ? ತಮ್ಮ ಸ್ವಪ್ರತಿಷ್ಟೆಗಳಿಗಾಗಿ ಜನರ ತೆರಿಗೆ ಹಣವನ್ನು ಪೋಲು ಮಾಡುತ್ತಿರುವ ಹೊಣೆಗೇಡಿ ರಾಜಕಾರಣಿಗಳೆಂದೂ, ಯಾವುದಾವುದಕ್ಕೋ ಹೊಂದಾಣಿಕೆ ಮಾಡಿಕೊಳ್ಳುವ ಇವರು ಈ ವಿಷಯದಲ್ಲಿ ಹೊಂದಾಣಿಕೆ ಮಾಡಿಕೊಂಡು ಸರ್ಕಾರ ರಚಿಸಿ ವಿನಾಕಾರಣ ದೇಶಕ್ಕಾಗುವ ನಷ್ಟವನ್ನು ಏಕೆ ತಪ್ಪಿಸಬಾರದೆಂದು ಪ್ರಶ್ನಿಸಲಾಗುತ್ತದೆ. ರಾಜಿ ಮಾಡಿಕೊಂಡರೂ ತಪ್ಪು, ಮಾಡಿಕೊಳ್ಳದಿದ್ದರೂ ತಪ್ಪು, ಎಲ್ಲದರಲ್ಲೂ ಅವರ ಸ್ವಾರ್ಥವೇ ಅಡಗಿದೆ ಎಂದೇ ವಿಶ್ಲೇಷಿಸುತ್ತಾ ಹೋದರೆ ಅವರು ಮಾಡುವುದೇನು?
ಹಾಗೆಂದು ರಾಜಕಾರಣಿಗಳನ್ನು ಟೀಕಿಸಲೇಬಾರದೆಂಬುದು ಈ ಲೇಖನದ ಉದ್ದೇಶವಲ್ಲ. ಟೀಕೆ ಸಕಾರಾತ್ಮಕವಾಗಿರಲಿ ಎಂಬುದಷ್ಟೇ ಇದರ ಆಶಯ. ಗಣಿ ಹಗರಣದ ಲೋಕಾಯುಕ್ತ ವರದಿಯಲ್ಲಿ ಯಡಿಯೂರಪ್ಪನವರ ಹೆಸರಿದೆ ಎಂದು ಆರೋಪಿಸುವ ದಿನ ಕಂಡುಬರುವ ರಣೋತ್ಸಾಹ, ಅದು ಲೋಕಾಯುಕ್ತ ಅಧಿಕಾರಿಗಳ ತಪ್ಪಿನಿಂದಾದ ಪ್ರಮಾದವಷ್ಟೇ ಎಂದು ತಿಳಿದುಬಂದಾಗಲೂ ಇರಬೇಕು. ಲೋಕಾಯುಕ್ತ ಕೋರ್ಟ್‌ನಲ್ಲಿ ಯಡಿಯೂರಪ್ಪ, ಈಶ್ವರಪ್ಪನವರ ಮೇಲೆ ನಾಲ್ಕು ಕೇಸ್‌ಗಳು ಬಿದ್ದಾಗ ನಡೆಯುವ ಬಿಸಿಬಿಸಿ ಚರ್ಚೆಗಳು ಶಿವಮೊಗ್ಗ ಕೋರ್ಟ್‌ನಲ್ಲಿ ಅದರಿಂದ ಖುಲಾಸೆಗೊಂಡಾಗಲೂ ನಡೆಯಬೇಕು, ಕ್ಲಾಸಿಕ್ ಕಂಪ್ಯೂಟರ್ ಹಗರಣದಲ್ಲಿ ಬಂಗಾರಪ್ಪನವರು ದೋಷಿ ಎಂಬ ಸುದ್ದಿ ಮುಖಪುಟದ ಪ್ರಧಾನ ಸುದ್ದಿಯಾದಂತೆ ಅವರು ನಿರ್ದೋಷಿ ಎಂದು ಕೋರ್ಟ್ ತೀಪಿತ್ತಾಗಲೂ ಮುಖಪುಟದ ಪ್ರಧಾನ ಸುದ್ದಿಯೇ ಆಗಬೇಕು. ಇದು ನಿಷ್ಪಕ್ಷಪಾತ ಮಾಧ್ಯಮದ ಲಕ್ಷಣ. ಅದು ಬಿಟ್ಟು ಸೆಗಣಿ ಎರಚುವ ಕೆಲಸ ಮಾತ್ರ ತಮ್ಮದು ಎಂದು ಭಾವಿಸಿಬಿಟ್ಟರೆ ಹೇಗೆ? ನಿಜ ಹೇಳಬೇಕೆಂದರೆ ಬೇರೆ ಎಲ್ಲಾ ಕ್ಷೇತ್ರಗಳಲ್ಲಿ ಒಂದು ಅತ್ಯುನ್ನತ ಸ್ಥಾನ ಗಳಿಸಲು ಎಲ್ಲರೂ ಪಡುವ ಪರಿಶ್ರಮಕ್ಕಿಂತಲೂ ರಾಜಕಾರಣಿ ಹೆಚ್ಚಿನ ರಿಸ್ಕನ್ನೇ ತೆಗೆದುಕೊಂಡಿರುತ್ತಾನೆ. ಹೋರಾಟಗಳಲ್ಲಿ ಭಾಗವಹಿಸಿ ಉಪವಾಸಗಳನ್ನು ಮಾಡಿರುತ್ತಾನೆ, ನೂರಾರು ಮೈಲುಗಳ ಪಾದಯಾತ್ರೆ ಮಾಡಿರುತ್ತಾನೆ, ಸುಳ್ಳು ಕೇಸ್‌ಗಳನ್ನು ಹಾಕಿಸಿಕೊಂಡು ಲಾಕಪ್ಪಲ್ಲಿ ಹಲವು ರಾತ್ರಿಗಳನ್ನು ಕಳೆದಿರುತ್ತಾನೆ. ಇಷ್ಟೆಲ್ಲಾ ಮಾಡಿಯೂ ಅವನಿಗೆ ಉನ್ನತ ಸ್ಥಾನಮಾನ ಸಿಗುವ ಹೊತ್ತಿಗೆ ಅವನ ಅರ್ಧ ಆಯುಷ್ಯವೇ ಕಳೆದು ಬಿಟ್ಟಿರುತ್ತದೆ ಅಂಥಾ ಹಿರಿಯನ ವಯಸ್ಸಿಗೆ, ಸ್ಥಾನಮಾನಕ್ಕೆ, ಸಾಧನೆಗೆ ಯಾವ ಬೆಲೆಯನ್ನೂ ಕೊಡದೆ ಅವನನ್ನು ಒಂದು ಅಪಹಾಸ್ಯದ ವಸ್ತುವನ್ನಾಗಿ ಬಿಂಬಿಸುವುದು ಎಷ್ಟು ಸರಿ?
ಹೀಗೆ ಮಾಡುವುದರಿಂದಾಗಬಹುದಾದ ಪರಿಣಾಮಗಳು ನಮಗೆ ನೇರವಾಗಿ ಗೋಚರವಾಗದಿದ್ದರೂ ಪರಿಣಾಮ ಆಗಿರುವುದಂತೂ ಸತ್ಯ. ಅದೊಂದು ಹೊಲಸು ಕ್ಷೇತ್ರ, ಅಲ್ಲಿರುವವರೆಲ್ಲಾ ಹೊಲಸು ಜನಗಳೇ ಎಂಬ ಅಭಿಪ್ರಾಯ ರೂಪಿಸಿರುವಾಗ ಯಾವ ಸಜ್ಜನ ತಾನೇ ಅಲ್ಲಿಗೆ ಬಂದಾನು? ಯಾವುದೇ ತಾಯಿ ತನ್ನ ಮಕ್ಕಳಿಗೆ ಡಾಕ್ಟರಾಗು, ಇಂಜಿನಿಯರ್ ಆಗು ಎಂದು ಹರಸುತ್ತಾಳೆಯೇ ವಿನಃ ರಾಜಕಾರಣಿಯಾಗು ಎಂದು ಹರಸುವುದಿಲ್ಲ. ಹಿಂದಾದರೆ ನನ್ನ ಮಗ ರಾಜನಾಗ್ತಾನೆ, ರಾಜಕುಮಾರನಾಗುತ್ತಾನೆಂದು ಹೇಳುತ್ತಾ ಸಂಭ್ರಮಿಸುತ್ತಿದ್ದರು. ಏಕೆಂದರೆ ಅವರು ಅರಮನೆ ಒಳಗೆ ಎಷ್ಟೇ ಕಚಡಾಗಳಾಗಿದ್ದರೂ ಹೊರಗಡೆ ಅವರ ಮೇಲಿದ್ದ ಗೌರವವನ್ನು ಯಾರೂ ಹಾಳುಗೆಡವಿರಲಿಲ್ಲ. ರಾಜಾ ಪ್ರತ್ಯಕ್ಷ ದೇವತಾ ಎಂಬ ದೈವಿಕ ಭಾವನೆಯನ್ನೇ ಉಳಿಸಿದ್ದರು. ಇನ್ನು ಪ್ರಜೆಗಳು ತನ್ನ ಬಗ್ಗೆ ಹೊಂದಿದ್ದ ದೈವಿಕ ಭಾವನೆಯು ಕೆಟ್ಟ ರಾಜನ ಮನಃಪರಿವರ್ತನೆಗೆ ಕಾರಣವಾದ ಉದಾಹರಣೆಗಳೂ ಇವೆ. ಆದರೆ ಇಂದಿನ ವ್ಯವಸ್ಥೆಯಲ್ಲಿ ಪರಿಶುದ್ಧ ರಾಜಕಾರಣಿಗಳೂ ಕೂಡ 'ನಾವೆಷ್ಟೇ ಸಾಚಾ ಆಗಿದ್ರೂ' ಅದನ್ನ ಗುರುತಿಸಿ ನಮಗೆ ಕಿರೀಟ ತೊಡಿಸೋರು ಯಾರಿದ್ದಾರೆ? ವ್ರತಾನೂ ಹಾಳು ಸುಖಾನೂ ಹಾಳು ಮಾಡಿಕೊಳ್ಳೋದಕ್ಕಿಂತ ವ್ರತ ಹಾಳಾದರೂ ಪರವಾಗಿಲ್ಲ ಸುಖಾನಾದರೂ ಪಡೋಣ ಎಂದು ತೀರ್ಮಾನಿಸಿ ಕೆಟ್ಟ ಹಾದಿ ತುಳಿಯುವ ಸಂಭವವೇ ಹೆಚ್ಚು.
ಹಿಂದಿನ ರಾಜಕಾರಣಿಗೂ ಈಗಿನ ರಾಜಕಾರಣಿಗೂ ಬಹಳ ವ್ಯತ್ಯಾಸವಿದೆ. ಆದರೆ ದೌರ್ಬಲ್ಯದ ವಿಷಯದಲ್ಲಿ ಹಿಂದಿನವರು, ಇಂದಿನವರು ಎಂಬ ಭೇದವೇನೂ ಇಲ್ಲ. ಇಬ್ಬರೂ ಸಮಾನರೇ, ನೋಡುಗರ ದೃಷ್ಟಿಯಷ್ಟೇ ಬದಲಾಗಿರುವುದು ಎನ್ನುವುದಕ್ಕೆ ಒಂದು ಸಣ್ಣ ಉದಾಹರಣೆ. ಸ್ತ್ರೀ ದೌರ್ಬಲ್ಯದ ವಿಷಯಕ್ಕೆ ಬಂದಾಗ ಇಂದಿನ ಹಾಲಪ್ಪ, ರೇಣುಕಾಚಾರ್ಯ, ರಾಮ್‌ದಾಸ್‌ಗಿಂತ ನಮ್ಮ ದೇಶದ ಮೊದಲ ಪ್ರಧಾನಿಗಳೇನು ಕಮ್ಮಿ ಇದ್ದರು? ಅವರ ಪ್ರೇಮಪುರಾಣಗಳೇನು ಕಡಿಮೆ ಇವೆಯೇ? ಆದರೆ ಆಗಿನ ಮಾಧ್ಯಮಗಳು ಅವರು ದೇಶಕ್ಕಾಗಿ ಮಾಡಿದ ತ್ಯಾಗ ಹೋರಾಟಗಳಿಗೆ ಮಹತ್ವ ಕೊಟ್ಟರೇ ಹೊರತು ಅವರ ಖಾಸಗೀ ಬದುಕಿನ ಘಟನೆಗಳನ್ನು ಸುದ್ದಿಯನ್ನಾಗಿ ಮಾಡಲಿಲ್ಲ. ಅವರ ಸಾರ್ವಜನಿಕ ಬದುಕು ಖಾಸಗೀ ಬದುಕು ಎರಡನ್ನು ಬೇರೆಬೇರೆಯನ್ನಾಗೇ ನೋಡಿದರು. ಹಾಗಾಗಿ ರಾಜಕಾರಣಿಗಳೆಂದರೆ ಜನರಿಗೆ ಅಸಹ್ಯ ಎನಿಸಿರಲಿಲ್ಲ. ಸಚ್ಚ್ಯಾರಿತ್ರರು, ಸಜ್ಜನರೂ ರಾಜಕೀಯಕ್ಕೆ ಬರುವಂತಾಗಿತ್ತು. ಆದರೆ ಇಂದು ಅವರ ಬಗ್ಗೆ ರೂಪಿಸಿರುವ ಅಭಿಪ್ರಾಯಕ್ಕೆ ಯಾವ ಸಜ್ಜನ ತಾನೆ ರಾಜಕೀಯಕ್ಕೆ ಬಂದಾನು? ಈ ವಿಷಯದಲ್ಲಿ ಮಾಧ್ಯಮಗಳು ಸ್ವಲ್ಪ ಗಮನ ಹರಿಸುವುದು ಒಳ್ಳೆಯದು.

-ಫಣಿರಾಮಚಂದ್ರ
paniramachandra.hs@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.