ಸೂಕ್ತ ಅನುಷ್ಠಾನ ಕಾಣಬೇಕಿರುವ ಶಾಲಾ ಸಮಗ್ರ ಮೌಲ್ಯಾಂಕನ
ಕರ್ನಾಟಕ ಶಾಲಾ ಗುಣಮಟ್ಟ ಮೌಲ್ಯಾಂಕನ ಮತ್ತು ಅಂಗೀಕರಣ ಪರಿಷತ್ತು ನ್ಯಾಕ್ ಮಾದರಿಯಲ್ಲಿ ಸ್ವಾಯತ್ತ ಸಂಸ್ಥೆಯಾಗಿ ತಲೆಯೆತ್ತುವ ಮೊದಲು 2005-06 ನೇ ಸಾಲಿನಲ್ಲಿ ಕೆ.ಎಸ್.ಕ್ಯು.ಎ.ಒ ಸಂಸ್ಥೆಯಿಂದ ಆಯ್ದ ತರಗತಿಗಳಲ್ಲಿ ಶಾಲಾ ಮಕ್ಕಳ ಕಲಿಕಾ ಸಾಧನೆಯನ್ನು ಸಮಗ್ರವಾಗಿ ಮೌಲ್ಯಾಂಕನಗೊಳಿಸಲಾಗಿತ್ತು. ಸಾಮರ್ಥ್ಯ ಕಲಿಕೆಗೆ ಸಂಬಂಧಿಸಿದಂತೆ ಉತ್ತಮ ವಿಶ್ಲೇಷಿತ ವರದಿಗಳು ಆರಂಭದಲ್ಲಿ ದೊರೆತವು. ವರದಿಯನ್ನು ವಿಶ್ಲೇಷಣೆಗೆ ಒಳಪಡಿಸುವ ಕಾರ್ಯ ತಾಲ್ಲೂಕು ಹಂತದಲ್ಲಿ ಭರದಿಂದ ನಡೆಯಿತು. ಆದರೆ ಅನುಪಾಲನೆ ನಿರಂತರವಾಗಲಿಲ್ಲ.
ಮತ್ತೊಂದು ಮುಖ್ಯ ಸಂಗತಿಯೆಂದರೆ, ಡಿ.ಎಸ್.ಇ. ಆರ್.ಟಿ ಯಲ್ಲಿ ಕೆ.ಎಸ್.ಕ್ಯು.ಇ. (Karnataka School towards Quality Education) ಎಂಬ ಚಿಂತನೆಯು ಕೆ.ಎಸ್.ಕ್ಯು.ಎ.ಒ. ವರದಿಯ ಫಲಶೃತಿಗಾಗಿಯೇ ಸ್ಥಾಪಿಸಲು ಯೋಚಿಸಿದ ರೂಪ. ಗುಣಮಟ್ಟ ಶಿಕ್ಷಣದತ್ತ ಕರ್ನಾಟಕದ ಶಾಲೆಗಳು ಎಂಬ ಉತ್ಕೃಷ್ಟ ಧ್ಯೇಯವನ್ನಿರಿಸಿಕೊಂಡ ಇದರ ಚಿಂತನೆ ಕೆಲಕಾಲದ ನಂತರದಲ್ಲೇ ಅಸ್ತಿತ್ವ ಕಳೆದುಕೊಂಡಿತು.
ಕರ್ನಾಟಕ ಶಾಲಾ ಗುಣಮಟ್ಟ ಮೌಲ್ಯಾಂಕನ ಮತ್ತು ಅಂಗೀಕರಣ ಪರಿಷತ್ತು (ಕೆ.ಎಸ್.ಕ್ಯು.ಎ.ಎ.ಸಿ) 2012-13 ನೇ ಸಾಲಿನಲ್ಲಿ ನಡೆಸಿದ ಶಾಲಾ ಸಮಗ್ರ ಮೌಲ್ಯಾಂಕನ ವರದಿಯನ್ನು ಬಿಡುಗಡೆಗೊಳಿಸಿದ್ದು ತಿಳಿದಿರುವ ಸಂಗತಿ. ಇದರಿಂದಾಗಿ ಆಯ್ದ 1020 ಸರ್ಕಾರಿ ಶಾಲೆಗಳಲ್ಲಿನ ವಾಸ್ತವ ಚಿತ್ರಣ ನಮಗೆ ದೊರೆತಂತಾಯಿತು. ಶಾಲೆಗಳು ಪ್ರಗತಿಯಲ್ಲಿ ಎ.ಬಿ.ಸಿ.ಡಿ. ಶ್ರೇಣಿಗಳಲ್ಲಿ ಹೇಗೆ ಹಂಚಿಕೆಯಾಗಿವೆ ಎಂಬುದರ ಒಳನೋಟವೂ ಸಿಕ್ಕಂತಾಯಿತು. ಶಿಕ್ಷಣದ ಗುಣಮಟ್ಟವು ಮೂಲಭೂತ ಸೌಕರ್ಯಗಳ ಪೂರೈಕೆ, ಬಳಕೆ ಮತ್ತು ವಿದ್ಯಾರ್ಥಿಗಳ ಕಲಿಕಾ ಸಾಧನೆಯೊಂದಿಗೆ ಥಳುಕು ಹಾಕಿಕೊಂಡಿರುವ ಭೌತಿಕ ಸಂಬಂಧವನ್ನು ಶ್ರೇಣಿಗಳ ಚದುರಿಕೆಯು ತಿಳಿಸುತ್ತದೆ. ಸೂಚಕಗಳನ್ನಾಧರಿಸಿದ (ಇಂಡಿಕೇಟರ್) ಮೌಲ್ಯಾಂಕನದಿಂದಾಗಿ ಅಂಗೀಕರಣ ಪರಿಷತ್ತು ವಸ್ತುನಿಷ್ಟ ಫಲಿತವನ್ನು ಶಾಲೆಗಳಿಗೆ ನೀಡುವಲ್ಲಿ ದಿಟ್ಟ ಹೆಜ್ಜೆಯನ್ನೇನೊ ಇಡಲಾರಂಭಿಸಿದೆ.
ವರದಿಯ ಹಂದರವನ್ನು ಅರ್ಥೈಸಿಕೊಳ್ಳುವ ಹಾಗೂ ಅನುಪಾಲನಾ ಕಾರ್ಯ ಪ್ರಾರಂಭಿಸುವ ಹಂತದಲ್ಲಿಯೇ ನಾವಿರುವಾಗಲೇ, ಪರಿಷತ್ತು 2013-14 ನೇ ಸಾಲಿನಲ್ಲಿ ಸರ್ಕಾರಿ ಶಾಲೆಗಳೊಂದಿಗೆ, ಅನುದಾನಿತ-ಅನುದಾನರಹಿತ ಶಾಲೆಗಳಿಗೂ ಮೌಲ್ಯಾಂಕನ ಕೈಗೊಳ್ಳಲು ಮುಂದಾಗಿದೆ. ರಾಜ್ಯಾದ್ಯಂತ ಬೇರೆ ಬೇರೆ ಹಂತಗಳಲ್ಲಿ ಈ ಚಟುವಟಿಕೆ ಅನುಷ್ಠಾನಗೊಳ್ಳುತ್ತಿರುವುದು ಗಮನಾರ್ಹ. ನನ್ನ ವೃತ್ತಿ ಜೀವನದ ಅನುಭವದಲ್ಲಿ ಹೇಳುವುದಾದರೆ, ರಾಜ್ಯ ಹಂತದ ಕಾರ್ಯಕ್ರಮಗಳ ಸಫಲತೆ ನಿಜವಾಗಿಯೂ ಅಡಕಗೊಂಡಿರುವುದು ಕ್ಷೇತ್ರಹಂತದ ಅನುಪಾಲನೆಯಲ್ಲಿ. ನೆಪಕ್ಕಾಗಿ ಯಾವುದೇ ಕಾರ್ಯ ಗುರ್ತಿಸಿಕೊಳ್ಳಬಾರದು ಅಥವಾ ಅನುದಾನದ ಬಳಕೆ ರಶೀದಿ ಪಡೆಯಲು ರೂಪಿತವಾಗಬಾರದು. ನೆರೆಯ ತಮಿಳುನಾಡು, ಕೇರಳಕ್ಕೆ ಹೋಲಿಸಿದರೆ ನಮ್ಮಲ್ಲಿ ಅಪೇಕ್ಷಿತ ಮಟ್ಟದಲ್ಲಿ ಪ್ರತಿಫಲ ಸಾಧ್ಯವಾಗಿಲ್ಲ.
ನಿವೃತ್ತನಾದ ಬಳಿಕ ಮಾನ್ಯ ಶಿಕ್ಷಣ ಸಚಿವರಿಗೂ, ಕಾರ್ಯದರ್ಶಿಗಳಿಗೂ ಮತ್ತು ಆಯುಕ್ತರಿಗೂ ಒಂದು ವರದಿಯನ್ನು ನೀಡಿದ್ದೆ. ಶಿಕ್ಷಣದ ಗುಣಮಟ್ಟ ಸುಧಾರಣೆಗೆ ತೆಗೆದುಕೊಳ್ಳಬಹುದಾದ ಕ್ರಮಗಳ ಬಗ್ಗೆಯೂ, ವ್ಯವಸ್ಥೆಯಲ್ಲಿ ಎಲ್ಲೆಲ್ಲಿ ದೋಷಗಳು ಇವೆ ಎಂಬ ಬಗ್ಗೆಯೂ, ಆಗಬೇಕಿರುವ ಪ್ರಮುಖ ಜವಾಬ್ದಾರಿಗಳ ಬಗ್ಗೆಯೂ ಅದರಲ್ಲಿ ಪ್ರಸ್ತಾಪಿಸಿದ್ದೆ. ಸರ್ಕಾರ ಆ ಬಗ್ಗೆ ಏನು ಕ್ರಮ ತೆಗೆದುಕೊಂಡಿತೋ ತಿಳಿಯಲಾಗಲಿಲ್ಲ.
ASER (Annual Status of Educational Report) ಇದು ಎನ್.ಜಿ.ಓ ಒಂದರ ವರದಿ. 2006 ರಿಂದ ವಾರ್ಷಿಕವಾಗಿ ನೀಡುತ್ತಾ ಬಂದಿರುವ ಶಿಕ್ಷಣ ಕುರಿತಾದ ಇದರ ವರದಿಯನ್ನು ಕಂಡಾಗ ಅದು ನಮ್ಮನ್ನು ಬೆಚ್ಚಿಬೀಳಿಸುವ ಪರಿ ಹೇಳತೀರದು. ತರಗತಿವಾರು ವಿದ್ಯಾರ್ಥಿಗಳ ಓದುವಿಕೆ ಸಹಜವಾಗಿರಬೇಕಾದ ಸ್ಥಿತಿಗಿಂತ ಕೆಳಗಿನ ಯಾವ ತರಗತಿಯ ಸ್ಥಿತಿಯನ್ನು ಹೋಲುತ್ತದೆ ಎಂಬುದನ್ನು ಈ ವರದಿ ಅನಾವರಣಗೊಳಿಸುತ್ತದೆ. ರಾಜ್ಯ ಹಂತದ ಯಾವುದೇ ಕಾರ್ಯಾಗಾರಗಳಲ್ಲೂ ಅದರದ್ದೇ ಸುದ್ದಿ.
ಸಿಟಿಇ ಅರ್ಥಾತ್ ಕಾಲೇಜ್ ಆಫ್ ಟೀಚರ್ ಎಡ್ಯುಕೇಷನ್ ಕಡೆ ಗಮನ ಹರಿಸೋಣ. ರಾಜ್ಯದಲ್ಲಿ ಸರ್ಕಾರದ ಸ್ವಾಮ್ಯಕ್ಕೆ ಒಳಪಟ್ಟ ಶಿಕ್ಷಣ ಮಹಾವಿದ್ಯಾಲಯಗಳಿವೆ. ಇವು ಸ್ವಾಯತ್ತ ಸಂಸ್ಥೆಗಳಾಗಿದ್ದು ವಿಕೇಂದ್ರೀಕರಣದ ಪ್ರತೀಕಗಳಾಗಿವೆ. ಶೈಕ್ಷಣಿಕ ವ್ಯವಸ್ಥೆಯಲ್ಲಿ ತೊಡಗಿಸಿಕೊಂಡಂತಹ ಅಧಿಕಾರಿಗಳು ಅಲ್ಲಿದ್ದಾರೆ. ಹಿಂದಿನ ದಿನಗಳಿಗೆ ಹೋಲಿಸಿದರೆ ಇಂದು ಸಿಟಿಇನ ಕಾರ್ಯವ್ಯಾಪ್ತಿಯ ಅಗಾಧತೆ ಕಡಿಮೆಯಾಗಿದೆ. ಬಿ.ಇಡಿ. ವ್ಯಾಸಂಗ ಮಾಡುವ ವಿದ್ಯಾರ್ಥಿಗಳ ದಾಖಲಾತಿಯಲ್ಲಿ ಇಳಿಮುಖವಾಗುತ್ತಿದೆ. ಎಲ್ಲಕ್ಕಿಂತ ಹೆಚ್ಚಾಗಿ ಸಿ.ಟಿ.ಇ.ಗಳು ಸಂಶೋಧನೆಗೆ ಗಮನಹರಿಸಬೇಕಾಗಿದೆ. ಅಲ್ಲಿನ ಸಿಬ್ಬಂದಿಗಳನ್ನು ಗುಣಮಟ್ಟ ಸುಧಾರಣೆಯಂತಹ ಚಿಂತನೆಗಳಲ್ಲಿ ಬಳಕೆ ಮಾಡಿಕೊಳ್ಳುತ್ತಿರುವ ಸಂದರ್ಭಗಳು ತೀರಾ ಕಡಿಮೆ. ಇಂದು ಈ ವಿದ್ಯಾಲಯಗಳು ವರ್ಗಾವಣೆಯ ಹುದ್ದೆಗಳಿಗೆ ಅನಿವಾರ್ಯವಾಗಿ ಕಾಣಿಸಿಕೊಳ್ಳುವ ಪ್ರಮುಖ ತಾಣಗಳಂತೆ ಬಿಂಬಿಸಲ್ಪಡುತ್ತಿವೆ. ಶಿಕ್ಷಕರ ಶಿಕ್ಷಣಕ್ಕೆ ಸಂಬಂಧಿಸಿದಂತೆ ಮತ್ತು ಪಠ್ಯವಸ್ತು ಸಿದ್ಧಪಡಿಸುವಲ್ಲಿ ಇವರನ್ನು ನಿರ್ಣಾಯಕರನ್ನಾಗಿ ಮಾಡುತ್ತಿರುವ ಸಂದರ್ಭಗಳು ತೀರಾ ಕಡಿಮೆ.
ಈ ವಿದ್ಯಾಲಯಗಳ ಸುಧಾರಣೆ ಜಾಡನ್ನು ಹೀಗೆ ತೆರೆದಿರಿಸಬಹುದು: ಸಿ.ಟಿ.ಇ. ಪ್ರಾಂಶುಪಾಲರ ಜವಾಬ್ದಾರಿಗಳನ್ನು ಮತ್ತು ಕರ್ತವ್ಯಗಳನ್ನು ಪರಿಷ್ಕರಿಸಿ ಉನ್ನತೀಕರಿಸುವುದು. ವಿಭಾಗೀಯವಾರು ಸಿ.ಟಿ.ಇ.ಗಳನ್ನು ಶೈಕ್ಷಣಿಕ ಗುಣಮಟ್ಟ ಸುಧಾರಣೆಯ ಮುಖ್ಯಸ್ಥರನ್ನಾಗಿ ಮಾಡುವುದು. ಸಿ.ಟಿ.ಇ.ಗಳಲ್ಲಿನ ಉಪನ್ಯಾಸಕರುಗಳಿಗೆ ಸಂಶೋಧನೆಗೆ ಪೂರಕವಾದ ತರಬೇತುಗಳನ್ನು ನೀಡಿ ರಾಷ್ಟ್ರ ಸ್ತರದಲ್ಲಿನ ವಿಚಾರಸಂಕಿರಣಗಳಲ್ಲಿ ಭಾಗವಹಿಸುವ ಅವಕಾಶವನ್ನು ಕಲ್ಪಿಸುವುದು. ರಾಜ್ಯದ ಪ್ರಾದೇಶಿಕ ಭಿನ್ನತೆಗಳಲ್ಲಿ ಎದುರಾಗುವ ಸಮಸ್ಯೆಗಳನ್ನು ಆಧಾರವಾಗಿಟ್ಟುಕೊಂಡು ಪ್ರಾಜೆಕ್ಟ್ಗಳನ್ನು ವೈಯಕ್ತಿಕವಾಗಿ ನಿರ್ವಹಿಸುವಂತಹ ಕೌಶಲಗಳನ್ನು ನೀಡುವುದು. ಶೈಕ್ಷಣಿಕ ನಾಯಕತ್ವ ಮತ್ತು ನಿರ್ವಹಣ ಸಾಮರ್ಥ್ಯದಲ್ಲಿ ಇವರು ಹೆಚ್ಚು ಪ್ರಬುದ್ಧರಾಗುವಂತೆ ಗಮನಹರಿಸುವುದು. ರಾಜ್ಯದ ಶೈಕ್ಷಣಿಕ ಮುನ್ನೋಟ ಯೋಜನೆಗಳಲ್ಲಿ ಇವರ ಅನುಭವಗಳನ್ನು ಸಮರ್ಥವಾಗಿ ಬಳಸಿಕೊಳ್ಳಬೇಕು. ಆಯಾಯ ವ್ಯಾಪ್ತಿಯಲ್ಲಿನ ಶಾಲೆಗಳನ್ನು ಅನುಪಾಲನೆಗೊಳಪಡಿಸುವ ಕಾರ್ಯಸೂಚಿ ರಚಿಸಿ, ಕ್ಷೇತ್ರ ಹಂತದಲ್ಲಿ ಅಭಿವೃದ್ಧಿಗೆ ಮುಂದಾಗಲು ಇವರನ್ನು ಪ್ರೇರೇಪಿಸುವುದು.
ಅಧಿಕಾರಿಗಳಿಗೆ ಉತ್ತರದಾಯಿತ್ವ ಕೊಟ್ಟು, ಜವಾಬ್ದಾರಿ ಹಂಚಿಕೆ ಮಾಡುವಲ್ಲಿ ನವೀನ ಮಾರ್ಗಗಳ ಅಳವಡಿಕೆ ಅವಶ್ಯಕ. ವಿಭಾಗೀಯ ಕಾರ್ಯದರ್ಶಿಗಳು ಮತ್ತು ಸಿ.ಟಿ.ಇ ಯಲ್ಲಿನ ಅಧಿಕಾರಿಗಳ ಸಲಹೆಯನ್ನು ಪಡೆಯಬೇಕು. ಏಕೆಂದರೆ ಬಹಳಷ್ಟು ಶ್ರದ್ಧೆವಹಿಸಿ ಕರ್ತವ್ಯ ನಿರ್ವಹಿಸುವ ಶೈಕ್ಷಣಿಕ ಅಧಿಕಾರಿಗಳ ದೊಡ್ಡ ಪಡೆಯೇ ಅಲ್ಲಿದೆ. ಕೋಟಿಗಟ್ಟಲೆ ಅನುದಾನವನ್ನು ಶಿಕ್ಷಣದ ಗುಣಮಟ್ಟ ಸುಧಾರಣೆಗಾಗಿ ವ್ಯಯಮಾಡುತ್ತಿದ್ದೇವೆ. ಇರುವಷ್ಟು ಸಿಬ್ಬಂದಿಯಿಂದ ಕೆಲಸ ತೆಗೆಯುವಲ್ಲಿ ಮೇಲ್ವಿಚಾರಣೆಯ ಕ್ರಮ ಮತ್ತು ಜಾಬ್ಚಾರ್ಟ್ಗಳು ಮಾರ್ಪಾಡುಗೊಳ್ಳಲಿ. ಉಪನಿರ್ದೇಶಕರು ಮತ್ತು ಕ್ಷೇತ್ರಶಿಕ್ಷಣಾಧಿಕಾರಿಗಳಿಗೆ ಕೊಡುತ್ತಿರುವ ವಿವಿಧ ಸ್ಕೀಂಗಳ ಜವಾಬ್ದಾರಿಯಿಂದಾಗಿ ಗುಣಮಟ್ಟ ನೋಡಲಿಕ್ಕೆ ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಪರಿಷ್ಕರಣೆ ಅಗತ್ಯ. ಸಕಾಲಕ್ಕೆ ಶಿಕ್ಷಕರ ನೇಮಕಾತಿ ಆಗುವಂತೆ ನೋಡಿಕೊಳ್ಳುವುದು ಸರ್ಕಾರದ ಆದ್ಯ ಕರ್ತವ್ಯ. ಮೌಲ್ಯಾಂಕನದ ಫಲಿತಗಳು ದಾಖಲೆಗಳಲ್ಲಿ ಸೇರ್ಪಡೆಗೊಂಡರೆ ಸಾಲದು. ಅದರ ಮೇಲಾಗುವ ಚರ್ಚೆಗಳು ಮತ್ತು ಅನುಷ್ಠಾನಕ್ಕಾಗಿ ಯತ್ನಿಸುವ ಮಾರ್ಗಗಳು ಕನಿಷ್ಟ 5-6 ವರ್ಷವಾದರೂ ಕ್ಷೇತ್ರದಲ್ಲಿ ನಿಲ್ಲಬೇಕು. ಒಬ್ಬೊಬ್ಬ ವ್ಯಕ್ತಿಯ ಕಾಲಕ್ಕೆ ಒಂದೊಂದು ಎಂಬಂತೆ ಕಾರ್ಯಕ್ರಮಗಳು ಮುಳುಗಡೆಗೆ ಸಿಲುಕಬಾರದು.
ಮೌಲ್ಯಾಂಕನದ ನಂತರದಲ್ಲಿ ಕಾರ್ಯಸೂಚಿಗಳು ಹೀಗಿರಲಿ:
ವರದಿಗಳ ಫಲಶೃತಿಗೆ ಪೂರಕವಾಗಿ ಕರ್ತವ್ಯ ನಿರ್ವಹಿಸಬಲ್ಲ ಆಂತರಿಕ ಅಭಿವೃದ್ಧಿ ಕೋಶ ಸ್ಥಾಪನೆಯಾಗಲಿ. (ಇದು ಜರೂರು ಆಗಬೇಕಾದ ಕೆಲಸ). ಪ್ರತಿ ಹಂತದಲ್ಲಿಯೂ ಕೋಶದ ಕೆಲಸಗಳು ಕ್ರಿಯಾಶೀಲವಾಗಿ ನಡೆಯುವಂತಹ ಅನುಪಾಲನಾ ಸೂಚಿ ಬಹುಮುಖ್ಯ. ಪರಿಣಾಮಕಾರಿಗೆ ಕ್ರಮ ತೆಗೆದುಕೊಳ್ಳಬೇಕು. ಅನುಷ್ಠಾನಕ್ಕೆ ಯತ್ನಿಸುವ ಮಾರ್ಗಗಳು ನಿರ್ದಿಷ್ಟತೆಯನ್ನು ಹೊಂದಿದ್ದು, ಶಾಲಾ ಹಂತದಲ್ಲಿ ಕರ್ತವ್ಯ ನಿರ್ವಹಿಸುವವರಿಗೆ ಪ್ರೇರಣೆಯಾಗಬೇಕು. ಶಾಲಾ ಪ್ರಗತಿಯ ಕೊರತೆಗಳನ್ನು ನೀಗುವಲ್ಲಿ ಅಲ್ಪಾವಧಿ ಮತ್ತು ದೀರ್ಘಾವಧಿ ಕ್ರಿಯಾಯೋಜನೆ ರೂಪಿತವಾಗಬೇಕು. ಕಾಲಮಿತಿ ಅತ್ಯಗತ್ಯ.
ಶಿಕ್ಷಣಾಸಕ್ತರಿಗೆ ಮಾಹಿತಿಗಳು ಲಭ್ಯವಾಗಬೇಕು. ಶಾಲಾ ಸಂಪನ್ಮೂಲಗಳ ಕ್ರೋಢೀಕರಣಕ್ಕೆ ಭಾಗೀದಾರರನ್ನು ಒಂದುಗೂಡಿಸುವ ಸಮುದಾಯ ಆಧಾರಿತ ಕಾರ್ಯಕ್ರಮಗಳು ವಿನ್ಯಾಸಗೊಳ್ಳಬೇಕು. ಇಲಾಖಾ ಹಂತದ ಸಹಭಾಗಿತ್ವಕ್ಕೆ ಬೇಕಾದ ಆದ್ಯತೆಗಳನ್ನು ಗುರ್ತಿಸಬೇಕಿದೆ ಹಾಗೂ ಅನುಪಾಲನೆಗೆ ಬೇಕಾದ ತಯಾರಿಗಳ ಬಗೆಗೂ ಚಿಂತಿಸಬೇಕು. ಮುಂದಿನ ದಿನಗಳಲ್ಲಿ ಸೂಚಕಗಳನ್ನು ಮತ್ತಷ್ಟು ಪರಿಷ್ಕರಿಸಬೇಕಾದ ಅಗತ್ಯತೆಯೂ ಇದ್ದು, ಇದಕ್ಕಾಗಿ ತಜ್ಞರ ಅವಶ್ಯಕತೆಯಿದೆ.
ಶೈಕ್ಷಣಿಕ ವರ್ಷದ ಪ್ರಾರಂಭದಲ್ಲಿಯೇ ತರಗತಿ ನಿರ್ವಹಣೆಯಲ್ಲಿ ಕಲಿಕಾಮಾನಕಗಳು ಸಮನ್ವಯಗೊಳ್ಳುವಂತೆ ಶಿಕ್ಷಕರಿಗೆ ಪುನಶ್ಚೇತನ ತರಬೇತಿ ನೀಡುವುದು ಅಗತ್ಯ. ಶೈಕ್ಷಣಿಕ ವರ್ಷದ ಆರಂಭದಲ್ಲಿ ಮಾಹಿತಿ ಸಂಗ್ರಹಿಸಿಕೊಳ್ಳುವ ಪರಿಪಾಠ ನಮ್ಮದಾಗಬೇಕು. ಶಾಲಾ ಕರ್ತವ್ಯ ದಿನಗಳಿಗೆ ಅಡಚಣೆ ಮಾಡುವುದು ನಿಲ್ಲಬೇಕು. ಖಾಸಗಿ ಶಾಲೆಗಳಲ್ಲಿ ನಮ್ಮಂತೆ ಅಡಚಣೆ ಮಾಡೋರು ಇಲ್ಲ. ನಮ್ಮಲ್ಲಿ ದಾಖಲಾತಿ ಕುಗ್ಗಲು ಒಂದು ಪ್ರಮುಖ ಕಾರಣವೆಂದರೆ ಮಾಹಿತಿಗಳು ಮತ್ತು ಅವುಗಳಲ್ಲಿ ಗೊಂದಲಗಳು.
- ಡಿ. ವೆಂಕಟೇಶಯ್ಯ
ನಿವೃತ್ತ ನಿರ್ದೇಶಕರು (ಪರೀಕ್ಷೆಗಳು)
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

