ಭಾರತಕ್ಕೆ ಬೇಕಿನ್ನು, ಅಭ್ಯರ್ಥಿಗಳ ನಿಯಂತ್ರಿಸುವ ಕಾನೂನು
ನಮ್ಮ ಚುನಾವಣಾ ಕಾನೂನು ನಿರಾತಂಕ ಮತದಾನಕ್ಕೆ ಮಾತ್ರ ಸೀಮಿತವಾದಂತಿದೆ. ಭಿತ್ತಿ ಪತ್ರ ಹಚ್ಚಬಾರದು, ಬಾವುಟ ಹಾರಿಸಬಾರದು, ಘೋಷಣೆ ಕೂಗಬಾರದು ಎಂಬ ನಿಯಮಗಳೆಲ್ಲ ಸ್ವಾಗತಾರ್ಹವೇ. ಆದರೆ ಅಭ್ಯರ್ಥಿಯ ವಿಚಾರಕ್ಕೆ ಬರುವಾಗ ಕಾನೂನು ಅತಿ ಸರಳವಾಗಿದೆ ಏಕೆ?
ಮುಕ್ತ ಹಾಗೂ ನ್ಯಾಯಯುತ ಚುನಾವಣೆ ನಡೆಸುವುದು ಭಾರತೀಯ ಚುನಾವಣಾ ಯೋಗದ ಜವಾಬ್ದಾರಿ. ಈ ಕರ್ತವ್ಯ ನಿಭಾವಣೆ ಜನತಾ ಪ್ರಾತಿನಿಧ್ಯ ಕಾಯ್ದೆಯಲ್ಲಿ ಆಯೋಗಕ್ಕೆ ಅತುಳ ದತ್ತವಾಗಿದೆ. ನಿಷ್ಪಕ್ಷಪಾತ ಚುನಾವಣಾ ಪ್ರಕ್ರಿಯೆಗೆ ಅನುಕೂಲವಾಗುವಂತೆ ಆಯೋಗದ ಸಲಹೆ ಸೂಚನೆ ಮೇರೆಗೆ ಹೆಚ್ಚಿನ ಅಧಿಕಾರವನ್ನಾಗಲಿ ಅಥವಾ ಕಾನೂನಿಗೆ ತಿದ್ದುಪಡಿಯನ್ನಾಗಲಿ ಮಾಡುವ ಅಧಿಕಾರ ಸಂಸತ್ತಿಗೆ ದತ್ತವಾಗಿದೆ. ಈ ಸಂದರ್ಭದಲ್ಲಿ ಸರ್ಕಾರ ಹಾಗೂ ಆಯೋಗ ಕಾಲಕ್ಕೆ ತಕ್ಕಂತೆ ಹೊಸ ನಿಯಮಾವಳಿಗಳನ್ನು ರೂಪಿಸುತ್ತಾ ಬಂದಿದೆ ಎನ್ನುವುದೇನೋ ಸಹಜ. ಆದರೆ ಅವುಗಳೆಲ್ಲ ಕ್ಷುಲ್ಲಕ. ಪರಿಣಾಮಕಾರಿಯಾಗಿ ಕಾರ್ಯ ರೂಪಕ್ಕೆ ಬಂದಿಲ್ಲ. ಅವುಗಳು ಕೇವಲ ಆಟೋಟ ಸ್ಪರ್ಧೆಗಳಲ್ಲಿ ರೂಪಿಸುವ ನಿಯಮಗಳಿಂತಿವೆ ಎಂದರೆ ಅವಸರದ ಹೇಳಿಕೆಯಾಗಲಾರದು. ಸ್ಪರ್ಧಾಳುಗಳ ವಯೋವುತಿ ಎಷ್ಟಿರಬೇಕು, ಅರ್ಜಿ ಯಾವ ದಿನಾಂಕದೊಳಗಿರಬೇಕು, ಸ್ಪರ್ಧಾಕಾಲದಲ್ಲಿ ಪಾಲಿಸಬೇಕಾದ ಶಿಸ್ತುಗಳು ಯಾವ್ಯಾವು ಇತ್ಯಾದಿಗಳು, ಸಾಮನ್ಯವಾಗಿ ಆಟೋಟ ಸ್ಪರ್ಧೆಗಳ ನಿಯಮಾವಳಿಗಳಲ್ಲಿ ಅಡಕವಾಗಿರುತ್ತವೆ. ಇವುಗಳ ಪಾಲನೆಯಿಂದ ಸ್ಪರ್ಧೆಗಳು ನಿಷ್ಪಕ್ಷಪಾತವಾಗಿ ಮುಕ್ತಾಯವಾಗಬಹುದು. ವೀಜೆತರಾದವರು ಬಹುಮಾನಗಳೊಂದಿಗೆ ಮನೆಗೆ ಹೋಗುತ್ತಾರೆ. ಅಲ್ಲಿಗೆ ಮುಗಿಯಿತು. ಆದರೆ ಚುನಾವಣಾ ಸ್ಪರ್ಧೆಯಲ್ಲಿ ವೀಜೆತರಾದವರ ಕರ್ತವ್ಯ ಚುನಾವಣಾ ವಿಜಯದೊಂದಿಗೆ ಮುಗಿಯುವುದಿಲ್ಲ. ಆರಂಭವಾಗುತ್ತದೆ. ಅವರು ಮನೆಗೆ ಹೋಗುವುದಿಲ್ಲ, ಸದನಕ್ಕೆ ಹೋಗುತ್ತಾರೆ. ಅಲ್ಲಿ ಕೋಟಿ ಕೋಟಿ ಜನರ ಪರವಾಗಿ ಆಡಳಿತ ನಡೆಸುತ್ತಾರೆ.
ಈ ಕಾರಣದಿಂದ ಮುಕ್ತ ಹಾಗೂ ನ್ಯಾಯಯುತ ಚುನಾವಣೆ ಮಾತ್ರ ಮುಖ್ಯವಲ್ಲ, ಅಭ್ಯರ್ಥಿಯೂ ಮುಖ್ಯ. ಆತನನ್ನು ನಿಯಂತ್ರಿಸತಕ್ಕ ಕಾನೂನೂ ಅತಿ ಮುಖ್ಯ. ಆದರೆ ಅಭ್ಯರ್ಥಿಯ ವಿಚಾರದಲ್ಲಿ ನಮ್ಮ ಕಾನೂನು ಬಹು ಧಾರಾಳ. ನಮ್ಮ ಚುನಾವಣಾ ಕಾನೂನು ನಿರಾತಂಕ ಮತದಾನಕ್ಕೆ ಮಾತ್ರ ಸೀಮಿತವಾದಂತಿದೆ. ಭಿತ್ತಿ ಪತ್ರ ಹಚ್ಚಬಾರದು, ಬಾವುಟ ಹಾರಿಸಬಾರದು, ಘೋಷಣೆ ಕೂಗಬಾರದು, ಮತೀಯ ನಿಂದನೆ ಹಾಗೂ ದ್ವೇಷ ಹುಟ್ಟಿಸುವ ಭಾಷಣ ಮಾಡಬಾರದು, ಮತಗಟ್ಟೆಯ ನೂರು ಮೀಟರ್ ಆಜುಬಾಜಿನಲ್ಲಿ ಮತದಾನಕ್ಕೆ ಆತಂಕ ಉಂಟುಮಾಡಬಹುದಾದ ಯಾವ ಚಟುವಟಿಕೆಗಳನ್ನು ನಡೆಸುವಂತಿಲ್ಲ, ಇತ್ಯಾದಿ. ಈ ನಿಯಮಗಳೆಲ್ಲ ಸ್ವಾಗತಾರ್ಹವೇ. ನ್ಯಾಯಯುತ ಮತದಾನಕ್ಕೆ ಇಂಥ ಕಟ್ಟುನಿಟ್ಟಿನ ಕ್ರಮ ಬೇಕು. ಆದರೆ ಅಭ್ಯರ್ಥಿಯ ವಿಚಾರಕ್ಕೆ ಬರುವಾಗ ಕಾನೂನು ಅತಿ ಸರಳ. ಆತ ಮತದಾರನಾಗಿದ್ದರೆ ಸಾಕು. ಆತ ಯಾವ ಕ್ಷೇತ್ರದಲ್ಲಿಯೂ ಸ್ಪರ್ಧಿಸಬಹುದು. ಒಂದಕ್ಕಿಂತ ಹೆಚ್ಚು ಕ್ಷೇತ್ರಗಳಲ್ಲಿ ಏಕಕಾಲದಲ್ಲಿಯೂ ಕೂಡ. ರಾಜ್ಯದಲ್ಲಿ ವಿಧಾನಸಭೆಗೂ ಕೇಂದ್ರದಲ್ಲಿ ಸಂಸತ್ತಿಗೂ ಏಕಕಾಲದಲ್ಲಿ ಸ್ಪರ್ಧಿಸಬಾರದೆಂಬ ಸ್ಪಷ್ಟ ಹಾಗೂ ಪ್ರತ್ಯೇಕ ಸೂಚನೆ ಎಲ್ಲೂ ಉಲ್ಲೇಖವಾಗಿಲ್ಲ. ಹೀಗೆ ಹಾಲಿ ಕಾನೂನಿನಲ್ಲಿ ರಾಜಕಾರಣಿಗಳಿಗೆ ಈ ಪರಿ ಅವಕಾಶ ಸದಾ ತೆರೆದಿರುತ್ತದೆ. ಕಾನೂನು ರಚಿಸುವಾಗ ಯಾ ತಿದ್ದುಪಡಿ ಮಾಡುವಾಗ ಈ ಸ್ಥಾಪಿತ ಹಿತಾಸಕ್ತಿಗೆ ಕಿಂಚಿತ್ತೂ ಧಕ್ಕೆಯಾಗದಂತೆ ನೋಡಿಕೊಳ್ಳುವ ಅಲಿಖಿತ ಗುಪ್ತ ಒಡಂಬಡಿಕೆ ರಾಜಕಾರಣಿಗಳೊಳಗಿದೆ.
ಪ್ರಸ್ತುತ ನಡೆಯುವ ಸಾರ್ವತ್ರಿಕ ಚುನಾವಣೆ 2014ನ್ನು ಅವಲೋಕಿಸುವ. ಅದೆಷ್ಟೊ ಮಂದಿ ವಿಧಾನಸಭಾ ಸದಸ್ಯರು ಹಾಗೂ ಪರಿಷತ್ ಸದಸ್ಯರು ಸಂಸತ್ತಿನ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ. ಅವರು ತಮ್ಮ ಹಾಲಿ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ. ಅವರು ಐದು ವರ್ಷದ ಅವಧಿಯಲ್ಲಿ ಮೂರನೇ ಬಾರಿಗೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ. ಹಾಲಿ ಸ್ಥಾನಕ್ಕೆ ಎಂದೂ ಚ್ಯುತಿ ಇಲ್ಲ. ಕರ್ನಾಟಕದಲ್ಲಿ ಯಾರ್ಯಾರೆಂದು ಓದುಗರ ಚಿತ್ತಕ್ಕೆ ಸ್ವಯಂ ವೇದ್ಯ. ಈ ಮುಂಬರುವ ಚುನಾವಣೆಯಲ್ಲಿ ಗೆದ್ದರೆ ಆಚಗೆ, ಅಂದರೆ ಕೇಂದ್ರಕ್ಕೆ. ಸೋತರೆ ರಾಜ್ಯದ ಸ್ಥಾನಕ್ಕೆ ಏನೂ ಅಪಾಯವಿಲ್ಲ. ಒಂದೊಮ್ಮೆ ಗೆದ್ದರೆ, ಆಗ ಹಾಲಿ ಸ್ಥಾನಕ್ಕೆ ಜೋತಿಷ್ಯ ಕೇಳಿ ಬಂದು ಶುಭ ದಿನ ರಾಜೀನಾಮೆ ನೀಡಿದರಾಯ್ತು. ಹಾಗೆ ಸ್ಥಾನ ತೊರೆದಾಗ ಆ ಕ್ಷೇತ್ರದಲ್ಲಿ ಮರು ಚುನಾವಣೆ ಮಾಡಬೇಕಾಗುತ್ತದೆನ್ನಿ. ಆ ಖರ್ಚನ್ನು ಇವರು ಭರಿಸಬೇಕಾಗಿಲ್ಲವಲ್ಲ ಭಾರತದ ಅಸಂಖ್ಯ ಸಂಖ್ಯೆಯ ಅಮಾಯಕರ ತೆರಿಗೆ ಹಣವಿದೆಯಲ್ಲ. ಹೋಗಲಿಬಿಡಿ. ಇಲ್ಲಿ ಪ್ರಶ್ನೆ ಏನೆಂದರೆ ಯಾವ ಪುರಷಾರ್ಥಕ್ಕಾಗಿ ರಾಜಕಾರಣಿಗಳಿಗೆ ಇಷ್ಟು ಸ್ವಾತಂತ್ರ್ಯ ಇರಬೇಕು? ಇಷ್ಟ ಬಂದ ಹಾಗೆ ಸ್ಪರ್ಧಿಸುವ ಮತ್ತು ರಾಜೀನಾಮೆ ನೀಡುವ ಅವಕಾಶದಿಂದ ಸಂಭವಿಸುವ ಮರು ಚುನಾವಣೆಯಿಂದ ಸಾರ್ವಜನಿಕ ಬೊಕ್ಕಸಕ್ಕೆ ಅನಗತ್ಯದ ಧಕ್ಕೆ ಅಲ್ಲದೇ ಇವರ ನಡವಳಿಕೆ ಸಾರ್ವಜನಿಕರಿಗೆ ಮಾಡುವ ವಂಚನೆ ಎಂದರೆ ತಪ್ಪಾದಿತೇ? ಮತದಾನಕ್ಕೆ ಮುನ್ನ ಕ್ಷೇತ್ರದ ಮತದಾರರನ್ನು ಉದ್ದೇಶಿಸಿ ಮಂದರ ಗಿರಿಯನ್ನೇ ತಂದಿರಿಸುದಾಗಿ ಆಶ್ವಾಸನೆ ನೀಡುತ್ತಾನೆ. ಪ್ರಭಾವಿತರಾದ ಮಂದಿ ಆ ಅವಧಿಗೆ ಇವನೇ ಯೋಗ್ಯ ಎಂದು ತಿರ್ಮಾನಿಸಿ ಮತನೀಡಿ ಆಯ್ಕೆ ಮಾಡುತ್ತಾರೆ. ಆ ಅವಧಿಗೆ ಮುನ್ನ ರಾಜೀನಾಮೆ ನೀಡುತ್ತಾನಾದರೆ ಅದು ಜನತೆಗೆ ಮಾಡುವ ದ್ರೋಹವಲ್ಲದೇ ಮತ್ತೇನು? ಅವನು ಸೇವಾಕಾಂಕ್ಷಿಯಲ್ಲ ಎಂದೇ ಪರಿಗಣಿಸಬೇಕು. ಹೀಗೆ ರಾಜಕೀಯ ಲಾಭಕ್ಕಾಗಿ ಅವಧಿಗೆ ಮುನ್ನ ಇನ್ನೊಂದು ಚುನಾವಣೆಗೆ ಸ್ಪರ್ಧಿಸುವ ಅವಕಾಶ ನಿರಾಕರಿಸುವ ಕಾನೂನು ರೂಪಿಸಬೇಕಾದ ಅಗತ್ಯವಿದೆ.
ಚುನಾವಣಾ ಕಾನೂನುನೆಂಬ ನಾಟಕದ ಇನ್ನೊಂದು ಸೋಜಿಗ ದೃಶ್ಯವೆಂದರೆ ಆಸ್ತಿ ಮತ್ತು ತಗಾದೆ ಪಟ್ಟಿ ಸಲ್ಲಿಕೆ. ಇದು ಕಡ್ಡಾಯ. ಪ್ರತೀ ಬಾರಿಯೂ ಚುನಾವಣೆಗೆ ಸ್ಪರ್ಧಿಸುವಾಗ ಇದರ ಸಲ್ಲಿಕೆ ಆಗುತ್ತದೆ. ಆ ತಖ್ತೆಯಲ್ಲಿ ಕೆಲವರ ಆದಾಯ ಒಂದು ಅವಧಿಯಿಂದ ಇನ್ನೊಂದು ಅವಧಿಗೆ ಹತ್ತರಿಂದ ನೂರು ಪಟ್ಟು ಅಧಿಕವಾದ ಪ್ರಕರಣಗಳಿವೆ. ಹೇಳಿ ಕೇಳಿ ರಾಜಕೀಯ ಒಂದು ಸೇವಾಕ್ಷೇತ್ರ. ಶಾಸಕ, ಸಂಸದರು ಆಡಳಿತದಲ್ಲಿ ಸಂಪೂರ್ಣ ತೊಡಗಿಸಿಕೊಂಡಿರುತ್ತಾರೆ. ಅವರ ಕಾರ್ಯ ಬಾಹುಳ್ಯ ವಿಶಾಲ. ಅಧಿವೇಶನದಲ್ಲಿ ಪಾಲ್ಗೊಳ್ಳಬೇಕು, ಸದಾ ಕ್ಷೇತ್ರ ಪರ್ಯಟನೆ ಮಾಡಬೇಕು, ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಿ ಸ್ಪಂಧಿಸಬೇಕು. ಹೀಗೆ ಆಡಳಿತಾತ್ಮಕವಾದ ನಿರಂತರ ಕೆಲಸ ಕಾರ್ಯಗಳಿರುವುದರಿಂದ ಜನ ಪ್ರತಿನಿಧಿಗೆ ಸ್ವಂತ ಬಿಸಿನೆಸ್ ನೋಡಿಕೊಳ್ಳಲು ಸಾಧ್ಯವಾಗಲಾರದು. ವಸ್ತುಸ್ಥಿತಿ ಹೀಗಿರುವಾಗ ಅವರ ಆದಾಯ ದಿನೇ ದಿನೆ ಏರಿಕೆಯಾಗುವುದು ಹೇಗೆ? ರಾಜಕಾರಣಿಗಳ ಆದಾಯ ಸ್ವಯಂ ಚಾಲಿತವೇ? ಕಾನೂನು ಅದರ ಪರಾಮರ್ಶೆಗೆ ಹೊಗುವುದೇ ಇಲ್ಲ. ನಾಮಿನೇಷನ್ ಜೊತೆ ಆಸ್ತಿ ವಿವರದ ಪಟ್ಟಿ ಸಲ್ಲಿಕೆ ಆದರೆ ಸಾಕು. ಆ ಮೂಲಕ ಕಾನೂನನ್ನು ತೃಪ್ತಿಪಡಿಸಿದಂತಾಗುತ್ತದೆ. ಇದರಿಂದ ಚುನಾವಣಾ ಸುಧಾರಣೆಯಾಗಲಾರದು. ಇನ್ನು ಮಂದಾದರು ಮರು ಆಯ್ಕೆ ಬಯಸುವ ರಾಜಕಾರಣಿಗಳ ಆಸ್ತಿ ಪಾಸ್ತಿಗಳ ಸಮಗ್ರ ತನಿಖೆಯಾಗತಕ್ಕದ್ದು. ಆ ದಿಸೆಯಲ್ಲಿ ಹಾಲಿ ಕಾನೂನಿಗೆ ಸೂಕ್ತ ತಿದ್ದುಪಡಿ ಅಗತ್ಯ.
ಕಳೆದ ಜುಲೈನಲ್ಲಿ ಸರ್ವೋಚ್ಚ ನ್ಯಾಯಾಲಯ ಒಂದು ಮಹತ್ವದ ತೀರ್ಪು ನೀಡಿದೆ. ಅದೆಂದರೆ ಚುನಾಯಿತ ಪ್ರತಿನಿಧಿ ಎದುರಿಸುತ್ತಿರುವ ಕ್ರಿಮಿನಲ್ ಪ್ರಕರಣದಲ್ಲಿ ಎರಡು ವರ್ಷಕ್ಕಿಂತಲೂ ಅಧಿಕ ಅವಧಿಯ ಜೈಲು ಶಿಕ್ಷೆವಿಧಿಸಲಾದರೆ ತಿರ್ಪು ಪ್ರಕಟಗೊಂಡ ದಿನದಿಂದಲೇ ಆತ ಸ್ಥಾನ ಶೂನ್ಯನಾಗುತ್ತಾನೆ. ಮುಂದುವರಿದು ತೀರಾ ಇತ್ತಿಚೆಗೆ ಅದೇ ಸರ್ವೋಚ್ಚ ನ್ಯಾಯಾಲಯ ಕ್ರಿಮಿನಲ್ ಆಪಾದನೆ ಎದುರಿಸುತ್ತಿರುವ ಜನಪ್ರತಿನಿಧಿಗಳ ಪ್ರಕರಣವನ್ನು ಕಡ್ಡಾಯವಾಗಿ ಒಂದು ವರ್ಷದ ಒಳಗೆ ಇತ್ಯರ್ಥಿಸಬೇಕೆಂಬ ಸೂಚನೆಯನ್ನು ಕೆಳ ನ್ಯಾಯಾಲಯಗಳಿಗೆ ನೀಡಿದೆ. ಶಿಕ್ಷೆ ಪ್ರಕಟಣೆಗೊಂಡ ದಿನಾಂಕದಿಂದಲೇ ಸ್ಥಾನ ಕಳೆದುಕೊಳ್ಳುತ್ತಾನೆ ಎಂಬ ಮೊದಲಿನ ತೀರ್ಪನ್ನು ಹಾಗೂ ಜನಪ್ರತಿನಿಧಿಗಳ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥಿಸಬೇಕೆಂಬ ಅನಂತರದ ತೀರ್ಪನ್ನು ಜೊತೆಯಾಗಿ ಓದುವಾಗ ಕ್ರಿಮಿನಲ್ ಆರೋಪ ಎದುರಿಸುತ್ತಿರುವವರಿಗೆ ಟೀಕೆಟ್ ನೀಡದಿರುವುದೇ ಲೇಸು ಎಂಬ ವಾದ ತಪ್ಪಾಗಲಾರದು. ಆ ಹಂತದಲ್ಲಿಯೇ ಟೀಕೆಟ್ ನಿರಾಕರಿಸಲ್ಪಟ್ಟರೆ ಅನೇಕ ಮರು ಚುನಾವಣೆಗಳನ್ನು ತಡೆಯಬಹುದು. ಅಲ್ಲದೇ ಚುನಾವಣಾ ನಿರ್ವಹಣೆಗಾಗಿ ಅಧಿಕಾರಿ/ಸಿಬ್ಬಂದಿಗಳ ಅನ್ಯಥಾ ನಿಯೋಜನೆ ತಪ್ಪಿಸಬಹುದು ಮತ್ತು ಅವರುಗಳ ಸೇವೆಯನ್ನು ಇತರೇ ಸಾರ್ವಜನಿಕ ಹಿತಾಸಕ್ತಿಯ ಕೆಲಸಕ್ಕೆ ಬಳಸಬಹುದು. ಹಾಗಾಗಿ ಕ್ರಿಮಿನಲ್ ಆರೋಪಿಗಳಿಗೆ ಟಿಕೇಟ್ ನಿರಾಕರಿಸುವ ಕಾನೂನು ರೂಪಿಸುವದು ಉತ್ತಮ.
ಈ ರೀತಿ ರಾಜಕಾರಣಿಗಳನ್ನು ನಿಯಂತ್ರಿಸತಕ್ಕ ಕಾನೂನುಗಳು ಮಾತ್ರ ಕ್ರಾಂತಿಕಾರಿ ಚುನಾವಣಾ ಸುಧಾರಣೆಗಳಾಗಬಲ್ಲವು. ಇದು ಇಂದಿನ ನಿಜವಾದ ಬೇಡಿಕೆ. ಆದರೆ ಕಾನೂನನ್ನು ರೂಪಿಸುವವರು ರಾಜಕಾರಣಿಗಳಲ್ಲವೇ? ಅವರು ತಮ್ಮ ಹಿತಾಕ್ತಿಗೆ ಧಕ್ಕೆ ತರಬಲ್ಲ ಯಾವ ಕಾನೂನನ್ನೂ ರಚಿಸುವುದಿಲ್ಲವೆಂಬದು ನಮ್ಮ ಅನುಭವ. ಈಗ ಪ್ರಸ್ತಾಪದಲ್ಲಿರುವ ಲೋಕಪಾಲ್ ಮಸೂದೆ ಹಾಗೂ ಲೋಕಾಯುಕ್ತರ ನೇಮಕಾತಿ ನಿಯಾಮಾವಳಿಗಳ ರಚನೆಯೇ ಒಂದು ಜ್ವಲಂತ ನಿರ್ದಶನ. ನ್ಯಾಯಾಲಯದ ನಿರ್ದೇಶನವನ್ನೇ ಕಡೆಗಣಿಸಿ ತಮ್ಮ ರಾಜಕೀಯ ಹಿತಾಸಕ್ತಿಯನ್ನು ಅವ್ಯಾಹತವಾಗಿ ಬೆಳೆಸುತ್ತಿದ್ದಾರೆ. ವಿಪರ್ಯಾಸವೆಂದರೆ ಎಲ್ಲಾ ರಾಜಕೀಯ ಪಕ್ಷಗಳೂ ತಾವೂ ಭ್ರಷ್ಟಾಚಾರ ವಿರೋಧಿಯೆಂದು ಕಂಠ ಬಿರಿಯುವಂತೆ ಕೂಗುತ್ತಿದ್ದಾವೆ. ಆದರೆ ಮುಂಬರುವ 2014 ರ ಸಂಸತ್ ಚುನಾವಣೆಗೆ ಕ್ರಿಮಿನಲ್ ಆರೋಪಿಗಳನ್ನು ಹುಡುಕಿ ಕಣಕ್ಕಿಳಿಸುತ್ತಿವೆ. ಮತದಾರರು ವಸ್ತು ಸ್ಥಿತಿಯನ್ನು ಅರ್ಥಮಾಡಿಕೊಂಡು, ತಕ್ಕಂತೆ ಸ್ಪಂದಿಸಿ ಪ್ರಜಾಸತ್ತೆಯನ್ನು ಉಳಿಸಬೇಕಾಗಿದೆ.
-ಬೇಳೂರು ರಾಘವ ಶೆಟ್ಟಿ
lalithraghava@hotmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

