ಸಂವೇದನೆ ಮರೆಸುವ ದ್ವೇಷದ ಅಖಾಡವಾಗಬೇಕೆ ಚುನಾವಣೆ?

ಸಾಮಾಜಿಕ ಲೆಕ್ಕ ಪರಿಶೋಧನೆಯ ಕ್ಷೇತ್ರದಲ್ಲಿ ಭ್ರಷ್ಟಾಚಾರ ನಿರ್ಮೂಲನೆ ಮತ್ತು ಪಾರದರ್ಶಕತೆಯ ಸ್ಥಾಪನೆಯಲ್ಲಿ ಮಾಡಿದ ಅಭೂತಪೂರ್ವ ಸಾಧನೆಗಾಗಿ ಈ ವರ್ಷ ಸೌಮ್ಯಾ ಕಿಡಂಬಿ ಅವರ ಹೆಸರನ್ನು ಪ್ರಪಂಚದ ಶಕ್ತಿಶಾಲಿ ಮಹಿಳೆಯರ ಪಟ್ಟಿಯಲ್ಲಿ ಸೇರಿಸಿದೆ ವಿಶ್ವಸಂಸ್ಥೆ. ಆ ಪಟ್ಟಿಯಲ್ಲಿ ಯುರೋಪ್ ಮತ್ತು ಆಫ್ರಿಕಾ ರಾಷ್ಟ್ರಗಳ ಮಹಿಳೆಯರೂ ಇದ್ದಾರೆ. ಅದರಲ್ಲಿ ಪ್ರಧಾನಮಂತ್ರಿಗಳು ಮತ್ತು ಉನ್ನತ ಸ್ತರದ ಮಂತ್ರಿಗಳೂ ಸ್ಥಾನ ಪಡೆದಿದ್ದಾರೆ. ಸೌಮ್ಯಾ ಅವರು ಆಂಧ್ರಪ್ರದೇಶದಲ್ಲಿ ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ಮತ್ತು ಅನ್ಯ ಸಾಮಾಜಿಕ ಕ್ಷೇತ್ರಗಳಲ್ಲಿ ಲಾಗೂ ಆಗಿರುವ ಸರಕಾರಿ ಯೋಜನೆಗಳ ಖರ್ಚು ವೆಚ್ಚಗಳನ್ನು ಲೆಕ್ಕಹಾಕಲು, ಅದೇ ಕ್ಷೇತ್ರದ ಸುಶಿಕ್ಷಿತ ಗ್ರಾಮವಾಸಿಗಳಿಗೆ ತರಬೇತಿ ನೀಡಿದ್ದರು. ತರಬೇತಿ ಪಡೆದ ಅವರೆಲ್ಲರೂ ಮನೆ ಮನೆಗೂ ತೆರಳಿ ಯರ್ಯಾರಿಗೆ ಎಷ್ಟೆಷ್ಟು ಹಣ ದೊರಕಿದೆ/ದೊರಕಿಲ್ಲ ಎನ್ನುವುದನ್ನು ಪರಿಶೀಲಿಸುವ ಕಾಯಕಕ್ಕೆ ಸಾಮಾನ್ಯ ಮಾಸಿಕ ವೇತನದ ಮೇಲೆ ಮುಂದಾದರು. ಸುಮಾರು ಹತ್ತರಿಂದ ಹನ್ನೆರಡು ಸಾವಿರ ಜನ ಒಂದಾಗಿ ದುಡಿದರು. ಇದರಿಂದಾಗಿ ಆಂಧ್ರಪ್ರದೇಶದ ಗ್ರಾಮೀಣ ಕ್ಷೇತ್ರಗಳಲ್ಲಿ ಸರ್ಕಾರಿ ಯೋಜನೆಗಳು ಅನ್ವಯವಾಗುವ ನಿಟ್ಟಿನಲ್ಲಿ ಅಸಾಧಾರಣ ಮತ್ತು ಅಭೂತಪೂರ್ವ ಪರಿವರ್ತನೆಯನ್ನು ನೋಡಲು ಸಾಧ್ಯವಾಯಿತು.
ಸೌಮ್ಯಾ ಇದಕ್ಕೂ ಮೊದಲು ರಾಜಸ್ಥಾನದಲ್ಲಿ ಅರುಣಾ ರಾಯ್ ಅವರ 'ಮಜದೂರ್ ಕಿಸಾನ್' ಸಂಘಟನೆಯಲ್ಲಿ ಸಕ್ರಿಯರಾಗಿದ್ದರು. ಅರುಣಾಜಿಯವರು ದೇಶಕ್ಕೆ ಮಾಹಿತಿ ಒದಗಿಸುವ ನಿಟ್ಟಿನಲ್ಲಿ ಬಹುದೊಡ್ಡ ಕೆಲಸ ಮಾಡಿದ್ದರೆ, ಅದೇ ಸಮಯದಲ್ಲೇ, ಅಂದರೆ ತೊಂಬತ್ತರ ದಶಕದಿಂದಲೇ ಅವರ ಸಂಘಟನೆ ಸಾಮಾಜಿಕ ಲೆಕ್ಕಪರಿಶೋಧನೆಯ ಕ್ಷೇತ್ರದಲ್ಲಿ ಕೆಲಸ ಶುರುಮಾಡಿತು. ಅವರು ಗ್ರಾಮೀಣ ಕ್ಷೇತ್ರಗಳ ಜನರಿಗೆ ತರಬೇತಿ ನೀಡಿ ವೃದ್ಧಾಪ್ಯ ಪಿಂಚಣಿ ಮತ್ತು ಇನ್ನು ಅನೇಕ ಯೋಜನೆಗಳ ನಿರ್ವಹಣೆಯ ಲೆಕ್ಕಪರಿಶೋಧನೆಯನ್ನು ಮಾಡಿದ್ದರು. ಯಾವಾಗ ಈ ಯೋಜನೆಯ ಬಗ್ಗೆ ಆಂಧ್ರಪ್ರದೇಶದ ತತ್ಕಾಲೀನ ಮುಖ್ಯಮಂತ್ರಿ ವೈ.ಎಸ್. ರಾಜಶೇಖರ ರೆಡ್ಡಿಯವರಿಗೆ ತಿಳಿಯಿತೋ, ಆಗವರು ತಮ್ಮ ರಾಜ್ಯದಲ್ಲೂ ಇದನ್ನು ಅನುಷ್ಠಾನಕ್ಕೆ ತರಲು ಮನಸ್ಸು ಮಾಡಿದರು. ನರೇಗಾ ವ್ಯಾಪ್ತಿಯಲ್ಲಿ ಬರುತ್ತಿದ್ದ ಆರು ನೂರರಿಂದ ಏಳುನೂರು ಉಪಜಿಲ್ಲೆಗಳಲ್ಲಿ ಅದನ್ನು ಕಾರ್ಯಗತಗೊಳಿಸಿದರು. ಇದರಿಂದ ತಮಗೆ ಹಾಗೂ ತಮ್ಮ ಸರ್ಕಾರಕ್ಕೆ ಹೇಗೆ ಲಾಭವಾಗಲಿದೆ ಎನ್ನುವ ಅನುಮಾನವೂ ಅವರನ್ನು ಕಾಡಿತ್ತು. ಯಾವಾಗ ಸರ್ಕಾರಿ ಯೋಜನೆಗಳಿಂದ ಲಾಭಪಡೆಯದ ಜನರಿಗೆ, ಈ ಯೋಜನೆಯಿಂದ ಉಪಯೋಗವಾಗುತ್ತದೋ ಆಗ ಅವರುಗಳಿಂದ ತಮ್ಮ ಪಕ್ಷಕ್ಕೂ ಲಾಭವಾಗಲಿದೆ ಮತ್ತು ವಿಪಕ್ಷಗಳಿಂದ ಭ್ರಷ್ಟಾಚಾರದ ಆರೋಪವನ್ನು ಎದುರಿಸುವ ಪ್ರಮೇಯವೂ ಎದುರಾಗುವುದಿಲ್ಲ ಎನ್ನುವುದು ರಾಜಶೇಖರ್ರೆಡ್ಡಿಯವರಿಗೆ ಮನವರಿಕೆಯಾಯಿತು.
ಒಟ್ಟಾರೆಯಾಗಿ ಇದರ ಸಾರ ಮತ್ತು ಸಂಕ್ಷೇಪವೇನಪ್ಪಾ ಅಂದರೆ, ಭ್ರಷ್ಟಾಚಾರದಿಂದ ಸದ್ದು ಮಾಡುತ್ತಿದ್ದ ಕ್ಷೇತ್ರದಲ್ಲಿ ಒಂದು ಒಳ್ಳೆಯ ಯೋಜನೆ ಅಸ್ತಿತ್ವಕ್ಕೆ ಬಂದಿತು. ಈ ಸಾಧನೆಗಾಗಿ ಸೌಮ್ಯಾ ಮತ್ತು ಅರುಣಾ ಅವರಿಗೆ ಜೈಕಾರ ಹಾಕಲೇಬೇಕು. ಅದು ಬಿಟ್ಟು ಒಂದು ವೇಳೆ, "ಬೇಡ ಬೇಡ, ಅವರ ವಿಚಾರಧಾರೆಗೆ ನಮ್ಮ ಅಸಮ್ಮತಿಯಿದೆ. ಹಾಗಾಗಿ ಅವರಿಂದ ಉತ್ತಮ ಕೆಲಸಗಳು ಆಗಿದ್ದರೂ ನಾವು ಅವರನ್ನು ಸಮರ್ಥಿಸುವುದೂ ಬೇಡ, ಪ್ರಶಂಸಿಸುವುದೂ ಬೇಡ" ಎಂದು ಯೋಚಿಸಿದರೆ, ಇದಕ್ಕಿಂದ ದೊಡ್ಡ ದುರಂತ ಇನ್ನೊಂದಿರಲಿಕ್ಕಿಲ್ಲ ಎಂದು ಭಾವಿಸುತ್ತೇನೆ.
ನಮ್ಮ ರಾಜಕೀಯ ಮತ್ತು ಸಾಮಾಜಿಕ ವಾತಾವರಣ ಹೇಗೆ ಬದಲಾಗಿದೆಯೆಂದರೆ, ಅದರಲ್ಲಿ ಶತ್ರುತ್ವಕ್ಕೇ ಹೆಚ್ಚಿನ ಮಾನ್ಯತೆಯಿದ್ದು, ರಾಷ್ಟ್ರಹಿತಕ್ಕಾಗಿ ಒಂದಾಗಿ ಕೆಲಸ ಮಾಡುವ ಮನಸ್ಥಿತಿ ನಶಿಸಿಹೋಗುತ್ತಿದೆ. ಸೇತುಬಂಧಕ್ಕಿಂತ ಸೇತುವನ್ನು ಒಡೆದುರುಳಿಸುವುದೇ ಮಹತ್ವಪೂರ್ಣವಾಗಿಬಿಟ್ಟಿದೆ. ಇತ್ತೀಚೆಗೆ ರಾಹುಲ್ ಗಾಂಧಿಯವರು ನರೇಂದ್ರ ಮೋದಿಯವರನ್ನು ಹಿಟ್ಲರ್ಗೆ ಹೋಲಿಸಿದರು. ಈ ಘಟನೆ ರಾಹುಲ್ ಅವರಿಗೆ ಇತಿಹಾಸ ಜ್ಞಾನ ಎಷ್ಟು ಕಡಿಮೆಯಿದೆ ಎನ್ನುವುದನ್ನಷ್ಟೇ ಅಲ್ಲದೆ, ರಾಜಕೀಯ ಪ್ರತಿಸ್ಪರ್ಧಿಯನ್ನು, ಪ್ರತಿಪಕ್ಷದವರನ್ನು 'ಶತ್ರುವೆಂದೇ' ಭಾವಿಸುವ ರಾಜಕೀಯ ವಿಷಫಲದ ಪ್ರಭಾವವನ್ನೂ ತೋರಿಸುತ್ತದೆ. ಈ ಮನಸ್ಥಿತಿಯೇ ರಾಜಕೀಯ ಲಾಭ ತಂದುಕೊಡುತ್ತದೆ ಎಂದುಕೊಳ್ಳಲಾಗುತ್ತಿದೆ. ನಮ್ಮ ದೇಶದ ಮೇಲೆ ಅನೇಕ ಬಾರಿ ಯುದ್ಧ ಮಾಡಿದ, ನಮ್ಮ ಸಾವಿರಾರು ಸೈನಿಕರು ಮತ್ತು ನಾಗರಿಕರನ್ನು ಕೊಲ್ಲಬೇಕು ಎಂದು ಷಡ್ಯಂತ್ರ ರಚಿಸಿದ ಶತ್ರುವಿನೆಡೆಗೆ ಸ್ನೇಹಹಸ್ತ ಚಾಚಬಹುದು, ಆದರೆ ಭಾರತೀಯರ ಹಿತಕ್ಕಾಗಿ ದುಡಿಯಲು ಪ್ರಯತ್ನಿಸುತ್ತಿರುವ ಸಹಭಾರತೀಯನೊಬ್ಬ ಅಭಿಪ್ರಾಯಭೇದದ ಆಧಾರದ ಮೇಲೆ ಶತ್ರುವಾಗಿಬಿಡುತ್ತಾನೆ! ದ್ವೇಷ ಮತ್ತು ಅಸ್ಪೃಶ್ಯತೆಯೆಂಬಶತ್ರುತ್ವದ ಗಂಟುಕಟ್ಟಿ ಅದು ಎಂದಿಗೂ ಸಡಿಲವಾಗದಂತೆ ಎಚ್ಚರಿಕೆ ವಹಿಸಲಾಗುತ್ತದೆ.
ಇಂಥ ಆರೋಪಗಳಿಗೆ ಬೈಗುಳಗಳು ತುಂಬಿದ ಕಠೋರ ಭಾಷೆಯಲ್ಲೇ ಕೆಲವರು ಉತ್ತರಿಸುತ್ತಾರೆ. ಆದರೆ ಇದರ ಉದ್ದೇಶ ರಾಜಕೀಯದಲ್ಲಿ ಇನ್ನಷ್ಟು ಆ್ಯಸಿಡ್ ಬೆರೆಸುವುದೇ ಆಗಿರುತ್ತದೆ. ನಾವು ಕಣ್ಣುಗಳಲ್ಲಿ ಮತ್ಸರ, ಲೇಖನಿಯಲ್ಲಿ ಕ್ರೌರ್ಯ ತುಂಬಿಕೊಂಡು ಯಾವ ರೀತಿಯಲ್ಲಿ ಭಾರತೀಯತೆಯನ್ನು ರಚಿಸಲು ಹೊರಟಿದ್ದೇವೆ?
ಅಮೇಠಿಯಲ್ಲಿ ಆಮ್ ಆದ್ಮಿ ಪಕ್ಷದ ನಾಯಕ ಕುಮಾರ್ ಬಿಸ್ವಾಸ್ ಅವರ ಮೇಲೆ ದಾಳಿಯಾಗಿದೆಯೆಂಬ ಸುದ್ದಿ ಹೊರಬಿದ್ದಿದೆ. ಆದರೆ ಆ ಘಟನೆಯನ್ನು ಯಾರೂ, ಎಲ್ಲಿಯೂ ವಿರೋಧಿಸುತ್ತಿಲ್ಲ. ಕುಮಾರ್ ಬಿಸ್ವಾಸ್ ಅವರ ರಾಜಕೀಯ ವಿಚಾರಧಾರೆಯನ್ನು ಎಷ್ಟು ಬೇಕಾದರೂ ಖಂಡಿಸಿ, ಒಂದು ವೇಳೆ ಅವರು ನಿಮ್ಮ ಎದುರಾಳಿಯಾಗಿದ್ದರೆ ಚುನಾವಣೆಯಲ್ಲಿ ಸೋಲಿಸುವ ಪ್ರಯತ್ನವನ್ನೂ ಮಾಡಿ. ಆದರೆ ಅವರಿಗೆ ಪೆಟ್ಟು ಬಿದ್ದಿದೆ ಎಂದು ಪೇಚಾಡುವ, ಸಾಂತ್ವನ ನೀಡುವ ಸಂವೇದನೆಯನ್ನೇ ಕಳೆದುಕೊಂಡಿರುವುದೇಕೆ? ಮೊದಲಾದರೆ ಇಂಥದ್ದೆಲ್ಲ ರಾಜಕೀಯದಲ್ಲಿ ಸಂಭವವಿತ್ತು. ಆದರೀಗ ಸುಖ-ದುಃಖ ಮತ್ತು ಸಂವೇದನೆಗಳಿಂದ ಎಂದೋ ದೂರವಾಗಿರುವ ರಾಜಕೀಯ ತನ್ನ ನಾರುವ ಆತ್ಮವನ್ನೇ ಪ್ರತಿಬಿಂಬಿಸುತ್ತಿದೆ.
ಭಾರತೀಯ ರಾಜಕೀಯದ ವಿಭಿನ್ನ ಕ್ಷೇತ್ರಗಳಲ್ಲಿ ಯುವಕರ ಆಗಮನವಾಗಿದೆ. ಅವರ ರಾಜಕೀಯ ನೀತಿ ಭಿನ್ನವಾಗಿರಬಹುದು(ಅಖಿಲೇಶ್ ಯಾದವ್, ಸುಖವಿಂದರ್ ಬಾದಲ್, ಉದ್ಧವ್ ಠಾಕ್ರೆ ಅಥವಾ ರಾಜ್ ಠಾಕ್ರೆ) ಅದು ಲೋಕತಂತ್ರದ ಅಲಿಖಿತ ನಿಯಮವೂ ಹೌದು. ನಾವು ಯಾವುದೇ ಪಕ್ಷದವರಾಗಿರಬಹುದು, ಯಾವ ನಾಯಕನನ್ನೇ ಸಮರ್ಥಿಸಿಕೊಳ್ಳುತ್ತಿರಬಹುದು. ಆತ ಗೆಲ್ಲಬೇಕು, ಆತನ ವಿಚಾರಧಾರೆ ಹೆಚ್ಚು ಪ್ರಸಾರವಾಗಬೇಕು ಎಂದು ಬಯಸುತ್ತಿರಬಹುದು. ಆದರೆ ನಮಗಿಂತಲೂ ಭಿನ್ನ ವಿಚಾರಧಾರೆಯ ವ್ಯಕ್ತಿಯೊಬ್ಬನನ್ನು ಹೀನವಾಗಿ ಚಿತ್ರಿಸುವ, ಕ್ಷುದ್ರವಾಗಿ ದೂಷಿಸುವದಿದೆಯಲ್ಲ ಅದು ಎಂದೆಂದಿಗೂ ಅನುಚಿತ ವರ್ತನೆಯೆಂದೇ ಕರೆಸಿಕೊಳ್ಳುತ್ತದೆ.
ರಾಹುಲ್ ಗಾಂಧಿಯವರು ಕುಟುಂಬ ರಾಜಕಾರಣದಿಂದಾಗಿ ಬಹುಬೇಗ ಮುಂದೆ ಬಂದರು ಎನ್ನುವುದೇನೋ ಸರಿ, ಆದರೆ ಅದೇ ಪಕ್ಷದಲ್ಲೇ ಸಚಿನ್ ಪೈಲೆಟ್, ಜ್ಯೋತಿರಾದಿತ್ಯ ಸಿಂಧ್ಯ ಮತ್ತು ಮಿಲಿಂದ್ ದೇವ್ಡಾ ರಂಥ ಯುವ ನಾಯಕರು ತಮ್ಮ ಛಾಪು ಒತ್ತಿದ್ದಾರೆ ಎನ್ನುವುದನ್ನೂ ನಾವು ಮರೆಯಬಾರದಲ್ಲವೇ? ನಮ್ಮ ವಿಚಾರಧಾರೆ ಅವರಿಗಿಂತ ಭಿನ್ನವಾಗಿದೆ ಎನ್ನುವ ಕಾರಣಕ್ಕೆ ಈ ಸತ್ಯವನ್ನು ಅಲ್ಲಗಳೆದುಬಿಡಬೇಕೇ? ನಾವು ನರೇಂದ್ರ ಮೋದಿಯವರನ್ನು ಭಾರತದ ಸರ್ವಶ್ರೇಷ್ಠ ರಾಜಪುರುಷರೆಂದು ಭಾವಿಸುತ್ತೇವೆ ಮತ್ತು ಅವರು ಪ್ರಧಾನಿಮಂತ್ರಿಯಾಗಲೆಂದು ಜೋರು ಪ್ರಯತ್ನವನ್ನೂ ಮಾಡುತ್ತಿದ್ದೇವೆ. ಆದರೆ ಭಾರತೀಯತೆ ಮತ್ತು ಲೋಕತಂತ್ರ, ಏಕರೂಪತೆಯೆಂಬ ಸ್ಟಾಲಿನ್ವಾದಿ ಸ್ವರೂಪವನ್ನಲ್ಲ ಬದಲಾಗಿ ಬಹುಸಂಖ್ಯೆ ಮತ್ತು ವಿವಿಧತೆಯನ್ನು ನಂಬುತ್ತದೆ. ಕೊನೆಯಲ್ಲಿ, ಜನರು ಯಾರನ್ನು ಆಯ್ಕೆ ಮಾಡುತ್ತಾರೋ ಆತನೇ ಶಿಖರದ ತುದಿಯನ್ನು ತಲುಪುತ್ತಾನೆ ಬಿಡಿ. ಆದರೆ ಯಾರಿಗೆ ತುದಿ ಮುಟ್ಟಲು ಸಾಧ್ಯವಾಗುವುದಿಲ್ಲವೋ ಅವರನ್ನು ವಜಾ ಮಾಡುವುದಕ್ಕಾಗುವುದಿಲ್ಲ. ಏಕೆಂದರೆ ನಮ್ಮ ಪವಿತ್ರ ನೆಲ ಇಂಥದ್ದಕ್ಕೆಲ್ಲ ಅನುಮತಿ ಕೊಡುವುದಿಲ್ಲ.
ಯಾರ ಸಿದ್ಧಾಂತ ಹೇಗೆ ಬೇಕಾದರೂ ಇರಬಹುದು, ಭಿನ್ನವಾಗಿರುವ ಅಧಿಕಾರವೂ ಅವರಿಗಿದೆ. ಆದರೆ ಅದು ಸಂವಿಧಾನದ ವಿರುದ್ಧವಿರಬಾರದಷ್ಟೆ. ರಾಜಕೀಯ ವಿರೋಧವನ್ನು ಶತ್ರುತ್ವವನ್ನಾಗಿ ಬದಲಾಯಿಸುವ ಪರಂಪರೆಯನ್ನು ಹುಟ್ಟುಹಾಕಿದವರು ಮುಸೋಲಿನಿ, ಸ್ಟಾಲಿನ್ ಮತ್ತು ಹಿಟ್ಲರ್. ಇಂಥ ಮನಸ್ಥಿತಿ ಸಮಾಜ ಮತ್ತು ರಾಜಕೀಯದಲ್ಲಿ ದ್ವೇಷ ಮತ್ತು ವಿಷಪೂರಿತ ಅಸಹಿಷ್ಣುತೆಯೆಂಬ ತಾಲಿಬಾನಿ ಪ್ರಭಾವವನ್ನು ಬೆಳೆಸುತ್ತದೆ. ದೇಶದ ಹಿತದೃಷ್ಟಿಯಿಂದ ಇಂಥ ಮನಸ್ಥಿತಿಯನ್ನು ವಿರೋಧಿಸಲೇಬೇಕಾಗುತ್ತದೆ.
ಸ್ವಾತಂತ್ರ್ಯದ ನಂತರ ಕಾಶ್ಮೀರದ ಗಿಲಗಿತ್ ಮತ್ತು ಬಾಲ್ಟಿಸ್ಥಾನ್ ಪ್ರದೇಶದ ಬಹುದೊಡ್ಡ ಭಾಗ ಪಾಕಿಸ್ತಾನದ ಕೈವಶವಾದ ಘಟನೆ ಮತ್ತು ಜೀಪ್ ಹಗರಣದ ಗದ್ದಲ ಎದ್ದ ಸಂದರ್ಭ. ಪಂಡಿತ್ ಜವಾಹರ್ಲಾಲ್ ನೆಹರು ಇಂಗ್ಲೆಂಡ್ ಭೇಟಿಗೆ ತಯಾರಿ ನಡೆಸಿದ್ದರು. ಆಗ ಲಂಡನ್ನಲ್ಲಿದ್ದ ಭಾರತೀಯರು ನೆಹರೂ ಅವರ ವಿರುದ್ಧ ವ್ಯಾಪಕ ಪ್ರತಿಭಟನೆಯನ್ನು ನಡೆಸಲು ನಿರ್ಧರಿಸಿದರು. ಈ ವಿಷಯ ತಿಳಿಯುತ್ತಿದ್ದಂತೆಯೇ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಅಂದಿನ ಸರಸಂಘ ಚಾಲಕ ಗುರೂಜಿ ಗೊಳವಾಲ್ಕರ್ ಅವರು, ಆ ಜನರಿಗೆ ಬುದ್ಧಿವಾದ ಹೇಳಿದರು. "ನೆಹರೂ ಲಂಡನ್ಗೆ ಭಾರತದ ಪ್ರಧಾನಮಂತ್ರಿಯಾಗಿ ಬರುತ್ತಿದ್ದಾರೆ. ಅಲ್ಲಿ ಅವರಿಗೆ ಅವಮಾನವಾಯಿತೆಂದರೆ, ಇಡೀ ಭಾರತಕ್ಕೆ ಅವಮಾನವಾದಂತೆ. ಮತಭೇದಗಳೆಲ್ಲ ಭಾರತದ ಒಳಗೇ ಇರಲಿ. ಒಂದು ವೇಳೆ ನಮ್ಮ ಪ್ರಧಾನಿಗೆ ವಿದೇಶದಲ್ಲಿ ಅಪಮಾನವಾದರೆ, ನಾವು ಸಹಿಸೆವು" ಎಂದು ಎಚ್ಚರಿಸಿದ್ದರು.
ಕೆಲವು ಸಮಯದ ಹಿಂದೆ ನಾನು ವಾಶಿಂಗ್ಟನ್ನಲ್ಲಿ ನಡೆದ ವಿಶ್ವಬ್ಯಾಂಕ್ ಸಂಸದೀಯ ದಳದ ಸಭೆಯಲ್ಲಿ ಪಾಲ್ಗೊಂಡಿದ್ದೆ. ಭಾರತದ ಪ್ರಧಾನಮಂತ್ರಿಯವರಡಿಯಲ್ಲಿ ಬಂದ ಯೋಜನೆಗಳು, ಅಂದರೆ ನರೇಗಾ ಮತ್ತು ಆಹಾರ ಭದ್ರತೆಯಂಥ ಅಧಿನಿಯಮಗಳ ಸಾರ್ಥಕ ಮತ್ತು ಸಕಾರಾತ್ಮಕ ಅನುಷ್ಠಾನದ ಬಗ್ಗೆ ಮಾತನಾಡಿದೆನೇ ಹೊರತು ಬರಿ ಟೀಕೆಗೆ ಸೀಮಿತವಾಗಿ ಅಲ್ಲ. ಪ್ರತಿಸ್ಪರ್ಧಿಯನ್ನು ಹಿಟ್ಲರ್ ಎಂದು ಕರೆಯುವುದು ಅಥವಾ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮೇಲೆ ಗಾಂಧಿ ಹತ್ಯೆಯ ಸುಳ್ಳು ಆರೋಪವನ್ನು ಹೊರಿಸುವುದು ಶೋಭೆ ತರುವಂಥ ವಿಚಾರವಲ್ಲ. ಇದೇ ಪಕ್ಷದ ಪಂಡಿತ್ ನೆಹರೂ ಅವರೇ 1962ರ ಯುದ್ಧದಲ್ಲಿ ಸೈನಿಕರಿಗೆ ಸಹಾಯ ಮಾಡಿದ ಕಾರಣಕ್ಕಾಗಿ ಆರ್ಎಸ್ಎಸ್ನ ಸ್ವಯಂ ಸೇವಕರಿಗೆ ಗಣತಂತ್ರ ದಿನದ ಪರೇಡ್ನ ಭಾಗವಾಗಲು ಆಹ್ವಾನಿಸಿದ್ದರು.
ಶತ್ರುತ್ವದ ಮನಸ್ಥಿತಿಯಿಂದಾಗಿ ವಿವಿಧತೆಯಲ್ಲಿ ಏಕತೆ ಎಂಬ ನಮ್ಮ ವಿಚಾರಕ್ಕೆ ಧಕ್ಕೆಯಾಗುತ್ತಿದೆ. ಈ ವೈಚಾರಿಕ ಮತ್ತು ವಿಚಾರಾತ್ಮಕ ವೈಷಮ್ಯವನ್ನು ಅಭಾರತೀಯ ಎಂದು ಪರಿಗಣಿಸಿ ತ್ಯಜಿಸಬೇಕು. ನರೇಂದ್ರ ಮೋದಿಯವರ ಏಳಿಗೆ ಒಂದು ಸಂಗತಿಯನ್ನಂತೂ ಸಾಬೀತು ಮಾಡಿದೆ- "ದ್ವೇಷ ಮತ್ತು ಸುಳ್ಳುಗಳ ಆಧಾರದ ಮೇಲೆ ಮಾಡುವ ಆಕ್ರಮಣ ಕೊನೆಗೆ ವಿಫಲವಾಗಲೇಬೇಕು!"
-ತರುಣ್ ವಿಜಯ್
tarunvijay2@yahoo.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


