ಅಂಕಣಗಳು

ರಾಜಕೀಯ ಅಜೆಂಡಾದಲ್ಲಿ ಹಿಂದು ವೇದನೆಗೇಕೆ ಜಾಗವಿಲ್ಲ?

ರಾಜಕೀಯ ಅಜೆಂಡಾದಲ್ಲಿ ಹಿಂದು ವೇದನೆಗೇಕೆ ಜಾಗವಿಲ್ಲ?
Published On :

ಕೆಲವು ದಿನಗಳ ಹಿಂದೆ 'ರಾಜ್ಯಸಭೆ ಟಿ.ವಿ'ಯ ಆ್ಯಂಕರ್ ಮಹಾಶಯರೊಬ್ಬರು, ಆಮ್ ಆದ್ಮಿ ಪಕ್ಷದ ಪ್ರತಿನಿಧಿಯ ಮುಂದೆ ಪ್ರಶ್ನೆಯೊಂದನ್ನಿಟ್ಟರು- "ನಿಮ್ಮ ನಾಯಕ ಅರವಿಂದ್ ಕೇಜ್ರೀವಾಲ್ ಸಾಂಪ್ರದಾಯಿಕತೆಯ ವಿರುದ್ಧ ಸೆಣಸುವ ಮಾತನಾಡುತ್ತಾರೆ. ಆದರೆ ವಾರಾಣಸಿಗೆ ತಲುಪುತ್ತಿದ್ದಂತೆಯೇ ಅವರು ಗಂಗಾನದಿಯಲ್ಲಿ ಸ್ನಾನ ಮಾಡಿ, ವಿಶ್ವನಾಥನ ದರ್ಶನ ಪಡೆದರಲ್ಲ?"
ಪಾಪ ಗೊಂದಲಕ್ಕೊಳಗಾದ ಆಪ್‌ನ ಪ್ರತಿನಿಧಿ ಏನು ಹೇಳಬೇಕೋ ತೋಚದೆ, ಕಡೆಗೆ, "ಕೇಜ್ರೀವಾಲ್ ಪರಿವಾರದ ಜೊತೆ ಕಾಶಿಗೆ ಹೋಗಿದ್ದರಲ್ಲ... ಅದಕ್ಕೇ ಗಂಗಾ ನದಿಯಲ್ಲಿ ಸ್ನಾನ ಮಾಡಿದರು" ಎಂದು ಹೇಳಿ ನುಣುಚಿಕೊಳ್ಳಲು ಪ್ರಯತ್ನಿಸಿದರು. ಆದರೆ ಆ ಆ್ಯಂಕರ್ ಬಿಡಬೇಕಲ್ಲ? 'ಇಂಟಲೆಕ್ಚುವಲ್ ಮಾಡರ್ನಿಟಿ" ಎನ್ನುವ ದೊಡ್ಡ ದೊಡ್ಡ ಇಂಗ್ಲಿಷ್ ಪದಗಳನ್ನು ಬಳಸುತ್ತಿದ್ದ ಆ ಸಹೋದರಿಯ ಒಂದೇ ವಾದವೆಂದರೆ "ಸಂಪ್ರದಾಯದ ವಿರುದ್ಧ ಹೋರಾಡುವವರು ಮಂದಿರಕ್ಕೆ ಹೋಗಿದ್ದೇಕೆ?" ಎನ್ನುವುದು!
ನಾನು ಆಕೆಯನ್ನು ಕೇಳಿದೆ- "ಅಲ್ಲ, ಈ ಇಂಟಲೆಕ್ಚುವಲ್ ಮಾಡರ್ನಿಟಿಯ ಅರ್ಥ ಕೇವಲ ಹಿಂದುಗಳಿಗಷ್ಟೇ ಅನ್ವಯವಾಗುತ್ತದಲ್ಲ? ಎಲ್ಲಿಯವರೆಗೂ ಅವರು ಮಂದಿರಕ್ಕೆ ಹೋಗುತ್ತಾರೋ, ಅಲ್ಲಿಯವರೆಗೂ ಅವರು ಜಾತ್ಯತೀತರಲ್ಲ ಎಂದು ಹೇಳುವುದು ಎಷ್ಟು ಸರಿ? ಇದೇ ಮಾತನ್ನು ನೀವು ಹಿಂದುಯೇತರರಿಗೆ ಕೇಳುವ ಧೈರ್ಯವನ್ನು ಮಾಡುತ್ತೀರಾ?"
----
ಕಳೆದ ವಾರವಷ್ಟೇ ಪೇಶಾವರದ ಸಿಖ್ ಗುರುದ್ವಾರದ ಮೇಲೆ ಜಿಹಾದಿಗಳು ದಾಳಿ ಮಾಡಿದರು. ಒಬ್ಬ ಸಿಖ್ ನಾಗರಿಕ(ಪೇಶಾವರದ ಪ್ರಸಿದ್ಧ ವೈದ್ಯ ಪರಮಜಿತ್ ಸಿಂಹ) ಸಾವಿಗೀಡಾದರು. ಇಡೀ ಪಾಕಿಸ್ತಾನದಲ್ಲಿ ಆ ಘಟನೆಯ ವಿರುದ್ಧ ಪ್ರದರ್ಶನಗಳಾದವು. ಆದರೆ ನಮ್ಮ ಹಿಂದುಸ್ತಾನ ಮತ್ತು ಅದರ ರಾಜಧಾನಿ ದೆಹಲಿಗೆ ಕೇವಲ ಚುನಾವಣೆಯದ್ದೇ ಚಿಂತೆ.
ಪರಸ್ಪರ ನಿಂದನೆ, ಆರೋಪ-ಪ್ರತ್ಯಾರೋಪ, ಗಲ್ಲಿಗಳ ಗೂಂಡಾಗಳ ಶೈಲಿಯ ಭಾಷಾಪ್ರಯೋಗವೇ ಇಂದು ರಾಷ್ಟ್ರೀಯ ಚುನಾವಣೆಯ ಚರ್ಚಾ ಮಾಧ್ಯಮವಾಗಿ ಬದಲಾಗುತ್ತಿದೆ. ಆದರೆ ಪಾಕಿಸ್ತಾನದಲ್ಲಿ ಹಿಂದು ಮತ್ತು ಸಿಖ್ಖರ ಮೇಲಾಗುತ್ತಿರುವ ಅನ್ಯಾಯವನ್ನು ಖಂಡಿಸಿ ಯಾರೊಬ್ಬರಿಗೂ ಇಂಡಿಯಾ ಗೇಟ್ ಬಳಿ ಅಥವಾ ಚಾಣಕ್ಯಪುರಿಯಲ್ಲಿ ಪ್ರತಿಭಟನೆ ಮಾಡಲು ಮನಸ್ಸಾಗಲಿಲ್ಲ, ಯಾವೊಂದು ಹೇಳಿಕೆಗಳೂ ಹೊರಬರಲಿಲ್ಲ ಅಥವಾ ಪಾಕಿಸ್ತಾನದಲ್ಲಿ ದಿನಂಪ್ರತಿ ನಡೆಯುತ್ತಿರುವ ಇಂಥ ಘಟನೆಗಳು ಕೂಡಲೇ ನಿಲ್ಲಬೇಕು ಎಂದು ಯಾವ ನಾಯಕನೂ ಘರ್ಜಿಸಲಿಲ್ಲ.
ತಮಿಳುನಾಡಿನ ಮೀನುಗಾರರನ್ನು ಒಳನುಸುಳುವಿಕೆಯ ಆರೋಪದಲ್ಲಿ ಶ್ರೀಲಂಕಾ ಸರ್ಕಾರ ತಿಂಗಳಾನುಗಟ್ಟಲೇ ಜೈಲಿನಲ್ಲಿಡುತ್ತದೆ. ಅವರ ದೋಣಿಗಳನ್ನು ಮುರಿದು, ಬಲೆಯನ್ನು ಹರಿದುಹಾಕುತ್ತದೆ. ಅವರಲ್ಲಿ ಬಹುತೇಕರು ಹಿಂದು ಮೀನುಗಾರರೇ ಆಗಿರುತ್ತಾರೆ. ಆದರೆ ಅವರ ವಿಷಯದಲ್ಲಿ ಸಾಮಾನ್ಯವಾಗಿ ಯಾರೂ ಮಾತನಾಡುವುದಿಲ್ಲ. ಮಾತನಾಡುವ ಹಕ್ಕು ಕೇವಲ ತಮಿಳುನಾಡಿನ ಸಂಘಟನೆಗಳಿಗೆ ಮತ್ತು ನಾಯಕರಿಗಷ್ಟೇ ಇದೆಯೇ? ಏಕೆಂದರೆ ಇಂದು, ತಮಿಳರ ವಿಷಯವನ್ನು ಕೇವಲ ತಮಿಳು ನಾಯಕರೇ ಮಾತನಾಡಬೇಕು ಎನ್ನುವ ವಾತಾವರಣವನ್ನು ಸೃಷ್ಟಿಸಲಾಗಿದೆ.
ಅದೊಂದು ಸಮಯವಿತ್ತು. ಆಗ ಇಡೀ ದೇಶದಲ್ಲಿ ರಾಮಸೇತುವಿನ ವಿಚಾರವಾಗಿ ದೇಶದಲ್ಲಿ ಸಾವಿರಾರು ಪ್ರದರ್ಶನಗಳಾದವು ಮತ್ತು ಒಂದು ಕೋಟಿಗಿಂತಲೂ ಹೆಚ್ಚಿನ ಹಸ್ತಾಕ್ಷರಗಳು ರಾಷ್ಟ್ರಪತಿಗೆ ಸಲ್ಲಿಕೆಯಾದವು. ಆದರೀಗ ರಾಮಸೇತುವಿನ ಬಗ್ಗೆಯಾಗಲಿ ಅಥವಾ ತಮಿಳುನಾಡಿನ ಸಾವಿರಾರು ಮಂದಿರಗಳನ್ನು ಸರ್ಕಾರಿ ನಿಯಂತ್ರಣದಿಂದ ಮುಕ್ತಗೊಳಿಸಬೇಕು ಎಂದು ಡಾ. ಸುಬ್ರಮಣಿಯನ್ ಸ್ವಾಮಿಯವರ ಮೂಲಕ ಸರ್ವೋಚ್ಚ ನ್ಯಾಯಾಲಯಕ್ಕೆ ಸಲ್ಲಿಕೆಯಾದ ಸಾರ್ವಜನಿಕ ಹಿತಾಸಕ್ತಿ ಮತ್ತು ಆನಂತರದ ಐತಿಹಾಸಿಕ ತೀರ್ಪಿನ ಬಗ್ಗೆಯಾಗಲಿ ದೇಶಾದ್ಯಂತ ವಿಚಾರದ ತರಂಗಗಳೇ ಹರಿಯುತ್ತಿಲ್ಲ. ಮೀರತ್‌ನಲ್ಲಿ ಕೆಲವು ತಲೆತಿರುಗಿದ ಕಾಶ್ಮೀರಿ ವಿದ್ಯಾರ್ಥಿಗಳು ಭಾರತ-ಪಾಕಿಸ್ತಾನದ ಪಂದ್ಯದ ವೇಳೆ 'ಪಾಕಿಸ್ತಾನ್ ಜಿಂದಾಬಾದ್‌' ಎಂಬ ಘೋಷಣೆ ಕೂಗಿ ಅಮಾನತುಗೊಂಡಾಗ, ಎಲ್ಲಾ ಪಕ್ಷಗಳ ರಾಜಕಾರಣಿಗಳೂ ಮಾತನಾಡಿದರು. ಮುಖ್ಯವಾಹಿನಿ ಪತ್ರಿಕೆಗಳ ಸಂಪಾದಕರು ಸಂಪಾದಕೀಯ ಬರೆದರು, ಭಾಷಣ ಮತ್ತು ಸೆಮಿನಾರ್‌ಗಳಾದವು.
ಆದರೆ 5 ಲಕ್ಷ ಕಾಶ್ಮೀರಿಗಳು ಈಗಲೂ ಶರಣಾರ್ಥಿಗಳಾಗಿದ್ದಾರೆ, ಶಂಕರಾಚಾರ್ಯ ಬೆಟ್ಟವನ್ನು ತಖ್ತೇ ಸುಲೇಮಾನ್ ಎಂದು ಕರೆಯಲಾಗುತ್ತಿದೆ, ಅನಂತನಾಗ್ ಅನ್ನು ಇಸ್ಲಾಮಾಬಾದ್ ಎಂದು ಬರೆಯಲಾಗುತ್ತಿದೆ. ಸರ್ಕಾರಿ ವೆಬ್‌ಸೈಟ್‌ಗಳು ಮತ್ತು ಪುರಾತತ್ವ ವಿಭಾಗದ ಪಟ್ಟಿಯಲ್ಲಿ ಇಂಥ ಹೆಸರುಗಳ ಪ್ರಸ್ತಾಪವಾಗುತ್ತವೆ. ಆದರೆ ನಮಗೆ ಇದು ರಾಜಕೀಯ ಸಮಸ್ಯೆಯೇ ಅಲ್ಲ. ಇನ್ನು ಚುನಾವಣೆಯ ಘೋಷಣಾ ಪತ್ರಗಳಲ್ಲಿ ಅಥವಾ ಸೆಮಿನಾರ್‌ಗಳಲ್ಲಿ ಈ ವಿಷಯ ಜಾಗ ಪಡೆಯುತ್ತದೆ ಎನ್ನುವುದು ದೂರದ ಮಾತಾಯಿತು ಬಿಡಿ.
ಭಾರತಕ್ಕೂ ಒಂದು ಮನಸ್ಸಿದೆ. ಅದಕ್ಕೆ ಚೈತನ್ಯವಿದೆ. ಅದು ಕೇವಲ ಹೊಟ್ಟೆ-ಬಟ್ಟೆ ಮತ್ತು ಮನೆಯಿಂದ ಜೀವಂತವಾಗುಳಿದಿರುವ ಭೌತಿಕ ಕಾಯವಷ್ಟೇ ಅಲ್ಲ. ಅದಕ್ಕಾಗೇ ಶ್ರೀ ಅರವಿಂದರು ಭಾರತವನ್ನು "ಭವಾನಿ-ಭಾರತಿ" ಎಂದು ಕರೆದರು. ಭಾರತ ಕೇವಲ ನದಿಗಳ, ಪರ್ವತಗಳ, ಮನೆಗಳ, ಕಾಡುಗಳ ಅಥವಾ ಗುಂಪುಗಳ ಸಮುಚ್ಚಯವಲ್ಲ, ಅದು ಸಾಕ್ಷಾತ್ ಜಗಜ್ಜನನಿಯ ಪ್ರತಿರೂಪ!
ಯಾವಾಗ ರಾಜ ನೀತಿಯ ದ್ವಂದ್ವ ಮತ್ತು ಸ್ವಾರ್ಥದಲ್ಲಿ ಈ ಕಲ್ಪನೆ ಮತ್ತು ಭಾವನೆ ಮರೆಯಾಗುತ್ತಾ ಹೋಯಿತೋ, ಯಾವಾಗ ಭಾರತದ ಕಲ್ಪನೆ ಕೇವಲ ರಾಜಕೀಯದ ವೋಟ್ ಬ್ಯಾಂಕ್‌ಗಷ್ಟೇ ಸೀಮಿತವಾಯಿತೋ, ಆಗಲೇ ಭಾರತೀಯ ಪರಂಪರೆ ಮತ್ತು ಹಿಂದುತ್ವದ ಧ್ವನಿ ತುಳಿತಕ್ಕೊಳಗಾಗುತ್ತಾ, ತುಳಿಸಿಕೊಳ್ಳುತ್ತಾ ಹೋಯಿತು. ಕೇವಲ ವಿದ್ಯುತ್, ನೀರು ಅಥವಾ ರಸ್ತೆಗಳೇ ಭಾರತದ ಅಭಿವೃದ್ಧಿಯ ಪ್ರತಿರೂಪಗಳಾಗಬೇಕೇ?
ಯಾವ ಧರ್ಮದ ಅನುಯಾಯಿಗಳು ತಮ್ಮ ಜೀವನದಲ್ಲಿ ಲಕ್ಷ್ಮಿ, ದುರ್ಗೆ ಮತ್ತು ಸರಸ್ವತಿಯ ಹೊರತು ತಮ್ಮ ಭಾವಪ್ರಪಂಚದ ಕಲ್ಪನೆಯನ್ನೂ ಮಾಡಿಕೊಳ್ಳಲಾರರೋ, ಅಂಥವರಿಗೆ ಹಿಂದುತ್ವದ ಬಗ್ಗೆ ಮಾತನಾಡುವುದನ್ನು ಬಿಟ್ಟು ರಸ್ತೆ, ವಿದ್ಯುತ್ ಅಥವಾ ನೀರಿನ ಬಗ್ಗೆ ಮಾತನಾಡಿ ಎಂದು ಹೇಳಲಾಗುತ್ತಿದೆ. ಹಿಂದುತ್ವವೆಂದರೆ  ಹಿಂದುಳಿಯುವುದು, ಸಂಪ್ರದಾಯಿಕತೆ, ಅಲ್ಪಸಂಖ್ಯಾತರ ವಿರೋಧ, ಎತ್ತಿನಗಾಡಿಗಳ ಯುಗ ಎಂಬ ಅರ್ಥಕಲ್ಪಿಸಲಾಗುತ್ತಿದೆ. ಆದರೆ ಹೀಗೆ ಮಾಡುವುದು ಸತ್ಯವನ್ನು ನಾಶ ಮಾಡಿದಂತೆಯೇ ಸರಿ.
ತಾಲಿಬಾನ್‌ವಾದ ಮತ್ತು ಜಿಹಾದ್ ಎನ್ನುವುದು ಕೇವಲ ಬಂದೂಕುಗಳು ಮತ್ತು ಶಾರೀರಿಕ ಹಿಂಸೆಗಳಿಂದಷ್ಟೇ ಅನುಷ್ಠಾನಕ್ಕೆ ಬರುತ್ತಿಲ್ಲ. ತಥಾಕಥಿತ ಸೆಕ್ಯುಲರ್ ವಾದಿಗಳು ಮತ್ತು ಮಾಧ್ಯಮಗಳು ಹಿಂದುಗಳ ಮೇಲೆ 'ಶಬ್ದ ಹಿಂಸೆ'ಯನ್ನು ಬಳಸುತ್ತಿದ್ದಾರೆ. ಇದೂ ಕೂಡ ಜಿಹಾದಿ ಮಾನಸಿಕತೆಯ ಅತಿದೊಡ್ಡ ಅಸ್ತ್ರವಲ್ಲದೇ ಮತ್ತೇನು?
ಲಕ್ಷ್ಮೀ, ದುರ್ಗೆ ಮತ್ತು ಸರಸ್ವತಿಯ ಆರಾಧನೆಯೆಂದರೆ "ಉದ್ಯೋಗ, ವ್ಯಾಪಾರ, ಆರ್ಥಿಕ ವಿಕಾಸ, ಶಿಕ್ಷಣ, ಪ್ರಗತಿ, ಸೈನ್ಯ ವಿಕಾಸ, ವೈಜ್ಞಾನಿಕ ಮಾನಸಿಕತೆಯೊಂದಿಗೆ ನಿತ್ಯನೂತನ ಮಾನವ ಹಿತವರ್ಧಕ ಅನ್ವೇಷಣೆ, ಕೆಚ್ಚೆದೆ ಮತ್ತು ಆತ್ಮಾವಲಂಬನೆಯೇ" ಎನ್ನುವುದು ಇವರುಗಳಿಗೆಲ್ಲ ಅರ್ಥವಾಗುವುದಿಲ್ಲ ಬಿಡಿ!
ಕೇವಲ ಗಂಟೆ ಬಾರಿಸಿ ಕರ್ಮಕಾಂಡ ಮಾಡುವ ಸ್ವಭಾವ ಹಿಂದುಗಳದ್ದಲ್ಲ, ಬದಲಾಗಿ ವೈದಿಕ ಪರಂಪರೆಗಳು ಮತ್ತು ತತ್ವಗಳನ್ನು ಕಾಲಕ್ಕೆ ತಕ್ಕಂತೆ ತಿದ್ದುತ್ತಾ, ಧರ್ಮಕ್ಕೆ ಅಂಟಿದ ಧೂಳು, ಕೆಸರುಗಳನ್ನು ತೊಡೆದು ಹಾಕಿದವರು/ಹಾಕುವವರು ನಾವು.
ವಿಶ್ವದ ಎಲ್ಲಾ ಪ್ರಬಲ ಶಕ್ತಿಗಳು ಭಾರತದ ಪುನರೋದಯದ ವಿರುದ್ಧ ತಮ್ಮೆಲ್ಲ ಶಕ್ತಿಯನ್ನು ಬಳಸಿ ಷಡ್ಯಂತ್ರ ರಚಿಸುತ್ತಿರುವ ಸಮಯವಿದು. ಈ ವೇಳೆಯಲ್ಲೇ ವಿಶ್ವದ ಅತ್ಯಂತ ಕಠಿಣ, ಅರ್ಥಾತ್ ದೀರ್ಘಕಾಲಿಕ ಅಗ್ನಿಪರೀಕ್ಷೆಯನ್ನು ಎದುರಿಸುತ್ತಿರುವ ಸೋಮನಾಥದ ನೆಲದಿಂದ ಒಬ್ಬ ಸ್ವಯಂ ಸೇವಕ ಎದ್ದು ಬಂದಿದ್ದಾನೆ! ಭಾರತ-ಭಾರತಿಯ ಆರಾಧನೆಗಾಗಿ ಪ್ರಧಾನಮಂತ್ರಿ ಹುದ್ದೆಗೇರಲು ಹೊರಟಿದ್ದಾನೆ. ಈ ಸಮಯದಲ್ಲಿ ನಾವು ಆಂತರಿಕ ಜಗಳದಲ್ಲಿ, ಕೋಲಾಹಲ ಸೃಷ್ಟಿಸುವುದರಲ್ಲಿ ನಿರತರಾಗಿರುವುದು ಎಷ್ಟು ಸರಿ? ಇದು ವಾದ, ತರ್ಕ-ವಿತರ್ಕಗಳ ಸಮಯವಲ್ಲ. ಹೆಸರು, ರೂಪ ಮತ್ತು ಗುರುತಿನ ಮೇಲೆ ಸವಾಲು ಒಡ್ಡುವ ಸಮಯವಲ್ಲ. ನಮ್ಮ ಪರಂಪರೆ, ಸ್ವತ್ತು, ಮತ್ತು ಧೈರ್ಯವನ್ನು ದೂರತಳ್ಳುವ ಸಮಯವಲ್ಲ. ದೊಡ್ಡದಾಗಿ ಹೂಂಕರಿಸುತ್ತಾ ವಿಜಯವನ್ನು ಅಪ್ಪಿಕೊಳ್ಳುವ ಸಮಯವಿದು! ಇದೇ ನಮ್ಮ ಹಿಂದುತ್ವ ಮತ್ತು ನಾಗರಿಕತ್ವವನ್ನು ಸಾರ್ಥಕಗೊಳಿಸಬಲ್ಲದು.


- ತರುಣ್ ವಿಜಯ್
tarunvijay2@yahoo.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.