ರೈತರ ಬದುಕಿಗೆ ಭದ್ರ ಬುನಾದಿ, ಪಾಲೇಕರರ ಕೃಷಿ ಪದ್ಧತಿ

ಯಾವ ಮಾರ್ಗವನ್ನು ಅನುಸರಿಸಿಯಾದರೂ ಸರಿ, ತಾನು ಮಾತ್ರ ಉದ್ಧಾರವಾದರೆ ಸಾಕು ಎನ್ನುವ ಹೊಟ್ಟೆಬಾಕತನದ ಧೋರಣೆಯಿಂದ ನಿಸರ್ಗವನ್ನು ನಾವು ಹಾಳುಗೆಡವುತ್ತಿದ್ದೇವೆ. ನಮ್ಮ ಮುಂದಿನ ಪೀಳಿಗೆಗೆ ಸ್ವಸ್ಥ ವಾತಾವರಣವನ್ನು ಬಿಟ್ಟು ಹೋಗಬೇಕು ಎನ್ನುವ ಮನೋಭಾವ ಮರೆಯಾಗುತ್ತಿದೆ. ಪ್ರಕೃತಿಯು ನಮ್ಮಿಂದ ಏನನ್ನೂ ಅಪೇಕ್ಷಿಸದೆ ನಮಗೆ ತನ್ನ ಪ್ರೀತಿಯನ್ನು ಧಾರೆ ಎರೆಯುತ್ತದೆ. ಪ್ರಕೃತಿಯನ್ನು ಪೂಜಿಸಿ, ಗೌರವಿಸಿ, ಹೊಂದಿಕೊಂಡು ಬಾಳುವ ಸಂಸ್ಕೃತಿ ನಮ್ಮದು. ಈ ಭಾವನೆ ಮರೆಯಾಗುತ್ತಿರುವ ಸಮಯದಲ್ಲಿ ಸುಭಾಷ ಪಾಲೇಕರರಂಥಹವರು ನಮಗೆ ಅವತಾರ ಪುರುಷರಂತೆ ಗೋಚರಿಸುತ್ತಾರೆ. ಸದ್ದಿಲ್ಲದೆ, ಪ್ರಚಾರವನ್ನು ಬಯಸದೆ, ಕೆಲಸ ಮಾಡುವ ಪಾಲೇಕರರ ಬಗ್ಗೆ ನಮ್ಮ ಗೌರವ ಇನ್ನೂ ಹೆಚ್ಚುತ್ತದೆ. ಅವರ ಕೆಲಸಗಳನ್ನು ಪರಿಚಯಿಸುವುದು ಈ ಲೇಖನದ ಉದ್ದೇಶ. ರೈತ ಬಾಂಧವರಿಗೆ ಇದರಿಂದ ಅನುಕೂಲವಾಗುತ್ತದೆ ಎನ್ನುವುದು ನನ್ನ ಆಶಯ.
ಸುಭಾಷ ಪಾಲೇಕರ ಅವರು ಮಹಾರಾಷ್ಟದ ಅಮರಾವತಿ ಜಿಲ್ಲೆಯವರು. ಬಿ.ಎಸ್ಸಿ ಕೃಷಿ ಮುಗಿಸಿ ಭಾರತದ ಕೃಷಿ ಬಗ್ಗೆ ಚಿಂತಿಸತೊಡಗಿಸಿದವರು. ಬಳಿರಾಜ ಕೃಷಿ ಕುರಿತ ಮರಾಠಿ ಪತ್ರಿಕೆಯಲ್ಲಿ ಸೇವೆ ಪ್ರಾರಂಭಿಸಿದರು. ಆದರೆ ಅಲ್ಲಿ ಅವರಿಗೆ ತೃಪ್ತಿ ಸಿಗಲಿಲ್ಲ. ಹತ್ತಾರು ವರ್ಷ ಸ್ವತಃ ತಮ್ಮ ಹೊಲದಲ್ಲಿ ನೈಸರ್ಗಿಕವಾಗಿ ಹಲವಾರು ಪ್ರಯೋಗಳನ್ನು ನಡೆಸಿ ಅನುಭವ ಪಡೆದರು. ಮನುಷ್ಯನ ಪ್ರಯತ್ನವಿಲ್ಲದೇ ಹೊಲಗಳ ಬಂದಾರಿನ ಮೇಲೆ ಬೆಳೆಯುವ ಸಸ್ಯವರ್ಗಗಳ ಕುರಿತು, ಅರಣ್ಯ ಸಂಪತ್ತಿನ ಕುರಿತು ಅಧ್ಯಯನ ನಡೆಸಿ ಒಂದು ನಿರ್ಧಾರಕ್ಕೆ ಬಂದರು.
ಹಸಿರು ಕ್ರಾಂತಿಯ ಹೆಸರಲ್ಲಿ ರಾಸಾಯನಿಕ ಕೃಷಿಗೆ ಹೊಂದಿಕೊಂಡ ರೈತನಿಗೆ ಆದ ದುಷ್ಪರಿಣಾಮಗಳನ್ನು ಗುರುತಿಸಿದರು. ಸಾಲದ ಹೊರೆಯಿಂದ ಹೊರಬರದೆ ಆತ್ಮಹತ್ಯೆಗೆ ಇಳಿಯುವ ಸ್ಥಿತಿ ಬಂದೊದಗಿದ್ದನ್ನು ಕಂಡು ಇಂದಿನ ಜಾಗತೀಕರಣದ ಪರಿಣಾಮಗಳನ್ನು ಅರಿತು ಇದರಿಂದ ಹೊರಬರಲು ನೈಸರ್ಗಿಕ ಕೃಷಿಯೇ ಏಕಮೇವ ಮಾರ್ಗವೆಂದು ನಿರ್ಧರಿಸಿ ಪ್ರಚಾರ ಕಾರ್ಯ ಆರಂಭಿಸಿದರು. 20 ವರ್ಷಗಳಿಂದ ಮಹಾರಾಷ್ಟ್ರದ ಮೂಲೆ-ಮೂಲೆಗೆ ಸುತ್ತಾಡಿ ನೈಸರ್ಗಿಕ ಕೃಷಿ ಪದ್ಧತಿಯ ಬಗ್ಗೆ ಪಾಠ ಹೇಳಿದರು. ಇದರ ಪರಿಣಾಮವನ್ನು ಗುರುತಿಸಿದ ಗುಜರಾತ್, ಪಂಜಾಬ, ಮಧ್ಯಪ್ರದೇಶ, ಆಂಧ್ರಪ್ರದೇಶ ಹಾಗೂ ಕರ್ನಾಟಕದ ರೈತರ ಆಹ್ವಾನವನ್ನೂ ಸ್ವೀಕರಿಸಿ ಇಲ್ಲಿಯೂ ಶಿಬಿರಗಳನ್ನು ಏರ್ಪಡಿಸಿ ರೈತರಿಗೆ ತರಬೇತಿ ನೀಡುತ್ತಾ ಬಂದಿದ್ದಾರೆ. ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಕೃಷಿಕರ ಬದುಕಿನಲ್ಲಿ ಸ್ವಾಭಿಮಾನ, ಸ್ವಾವಲಂಬನೆ ತರಲು ಸತತ ಪ್ರಯತ್ನ ನಡೆಸಿದ್ದಾರೆ. ಮರಾಠಿಯಲ್ಲಿ ಹದಿನೆಂಟು ಕೃತಿಗಳನ್ನು ಹೊರತಂದಿದ್ದಾರೆ. ಸರಳ ಜೀವಿಯೂ ಆಧ್ಯಾತ್ಮಿಕ ಮನೋಭಾವನೆಯುಳ್ಳವರೂ ಆದ ಸುಭಾಷ ಪಾಲೇಕರರು ರೈತರಿಗೆ ಆಶಾಕಿರಣವಾಗಿದ್ದಾರೆ. ಕಳೆದ ಹತ್ತು ವರ್ಷಗಳಿಂದ ಕರ್ನಾಟಕದ ಅನೇಕ ಜಿಲ್ಲೆಗಳಲ್ಲಿ ಸುಭಾಷ ಪಾಲೇಕರರ ಅಧ್ಯಯನ ಶಿಬಿರಗಳು ಜರುಗಿವೆ. ಬೆಂಗಳೂರಿನ ಶಿಬಿರದ ಮುಕ್ತಾಯ ಸಮಾರಂಭದಲ್ಲಿ ಭಾಗವಹಿಸಿದ ಚಿತ್ರದುರ್ಗದ ಬೃಹನ್ಮಠದ ಪೂಜ್ಯ ಶ್ರೀ ಶಿವಮೂರ್ತಿ ಮುರುಘಾರಾಜೇಂದ್ರ ಶರಣರು, ನೈಸರ್ಗಿಕ ಕೃಷಿಯ ಅಂತರಾಳವನ್ನು ಗಮನಿಸಿ 2005ನೇ ವರ್ಷ ಶ್ರೀಮಠದ 'ಬಸವಶ್ರೀ' ಪ್ರಶಸ್ತಿಯನ್ನು ಒಂದು ಲಕ್ಷ ರುಪಾಯಿಯೊಂದಿಗೆ ಸುಭಾಷ ಪಾಲೇಕರರಿಗೆ ನೀಡಿರುತ್ತಾರೆ.
ಇತ್ತೀಚೆಗೆ ಬಿಜಾಪುರ, ಶಿವಮೊಗ್ಗ, ಮೈಸೂರು, ಮಂಡ್ಯ, ಚಿಕ್ಕಮಗಳೂರು, ಬೀದರ್, ಗುಲ್ಬರ್ಗಾ, ಬೆಂಗಳೂರು, ಗದಗ, ತುಮಕೂರು ಚಾಮರಾಜನಗರ ಮೊದಲಾದ ಜಿಲ್ಲೆಗಳಲ್ಲಿ ಶಿಬಿರಗಳು ನಡೆದ ಪರಿಣಾಮವಾಗಿ ರಾಜ್ಯಾದ್ಯಂತ ಅಲ್ಲಲ್ಲಿ ಪ್ರಯೋಗ ನಡೆಸಿರುವ ರೈತರು ನೈಸರ್ಗಿಕ ಕೃಷಿಯಿಂದ ಉತ್ತಮ ಫಲ ಪಡೆಯುತ್ತಿದ್ದಾರೆ. ಇಂದಿನ ರಾಸಾಯನಿಕ ಗೊಬ್ಬರ ಮತ್ತು ಔಷಧಗಳನ್ನು ಬಳಸಿ, ರೈತ ಸಾಲಗಾರರಾಗಿ ತೊಂದರೆಗೊಳಪಡುವುದನ್ನು ತಪ್ಪಿಸಲು ಬಂಡವಾಳವೇ ಇಲ್ಲದ ಲಾಭದಾಯಕವಾದ ಸುಭಾಷ ಪಾಲೇಕರರ ಈ ಪದ್ಧತಿ ರೈತರಿಗೆ ಒಂದು ಪರ್ಯಾಯ ಮಾರ್ಗವಾಗಿದೆ. ಇಡೀ ಜಗತ್ತಿಗೆ ಇದರ ಅವಶ್ಯಕತೆಯಿದೆ. ಆಹಾರ ವಿಷಮುಕ್ತವಾಗಬೇಕು, ರೈತನೂ ತೊಂದರೆಗೊಳಗಾಗದೆ ಬದುಕಬೇಕಾದರೆ ಈ ಮಾರ್ಗ ಅನಿವಾರ್ಯವಾಗಿರುತ್ತದೆ.
ಪಾಲೇಕರರ ನೈಸರ್ಗಿಕ ಕೃಷಿ ಪದ್ಧತಿಯಲ್ಲಿ, ನಿಸರ್ಗದಲ್ಲಿ ಸಿಗುವ ಗಿಡ ಮರಗಳಿಂದ ದೊರೆಯುವ ತ್ಯಾಜ್ಯಗಳು, ಗೋವುಗಳ ತ್ಯಾಜ್ಯಗಳನ್ನು ಬಳಸಿಕೊಂಡು ಭೂ ಫಲವತ್ತತೆ ಹೆಚ್ಚಿಸುವುದು, ಮಳೆ ಕೊಯಿಲು, ಹೊದಿಕೆ ಪದ್ಧತಿ, ಜಲಾನಯನ ಪದ್ಧತಿ ಅಳವಡಿಕೆಯಿಂದ ಭೂ ಸವಕಳಿ ತಪ್ಪಿಸುವುದು, ನೀರು ಇಂಗಿಸುವುದು, ನೈಸರ್ಗಿಕವಾಗಿ ಸಿಗುವ ಗಿಡದ ಎಲೆ, ಕಾಂಡ, ಬೇರುಗಳ ಸಾರದಿಂದ ಕೀಟ ರೋಗಗಳ ನಿರ್ವಹಣೆ, ಬಹುಬೆಳೆ ಪದ್ಧತಿ, ಸಮಗ್ರ ಕೃಷಿ ಪದ್ಧತಿಗಳಿಂದ ಬೆಳೆಗಳನ್ನು ಬೆಳೆಯಲಾಗುತ್ತದೆ. ಇದರಿಂದ ಭೂಮಿಯ ಫಲವತ್ತತೆ ಹೆಚ್ಚುತ್ತದೆ. ವಾತಾವರಣ ಸ್ವಚ್ಚವಾಗಿರುತ್ತದೆ. ರಾಸಾಯನಿಕ ಗೊಬ್ಬರ ಬಳಕೆಯಿಂದ, ಕೀಟ ನಾಶಕಗಳಿಂದ ಮಾನವನ ದೇಹದ ಮೇಲೆ ಆಗುವ ದುಷ್ಪರಿಣಾಮಗಳನ್ನು ತಪ್ಪಿಸಬಹುದಾಗಿದೆ. ನೈಸರ್ಗಿಕ ಮಾಲಿನ್ಯವನ್ನು ತಪ್ಪಿಸಬಹುದಾಗಿದೆ. ಅಂತರ್ಜಲ ಮಟ್ಟ ಹೆಚ್ಚಿಸಬಹುದು, ಅದು ರಾಸಾಯನಿಕಗಳಿಂದ ಕಲುಷಿತವಾಗುವುದನ್ನು ತಪ್ಪಿಸಬಹುದು. ಈ ನೈಸರ್ಗಿಕ ಪದ್ಧತಿಯಿಂದ ರೈತರು ನೆಲ, ಜಲ ಸಂಪತ್ತನ್ನು ಎಷ್ಟು ಬೇಕೋ ಅಷ್ಟನ್ನು ಉಪಯೋಗಿಸಿಕೊಂಡು, ಮುಂದಿನ ಪೀಳಿಗೆಗೆ ತಮ್ಮ ನೆಲವನ್ನು ಸುಸ್ಥಿತಿಯಲ್ಲಿ ಕೊಡಬಹುದಾಗಿದೆ. ಆದ್ದರಿಂದ ಪಾಲೇಕರರವರ ನೈಸರ್ಗಿಕ ಕೃಷಿ ಪದ್ಧತಿ ಸುಸ್ಥಿರ ಕೃಷಿಗೆ ಭದ್ರಬುನಾದಿಯಾಗಿದೆ. ತೋಟಗಾರಿಕೆಯಲ್ಲಿ ಸುಭಾಷರ ಕೃಷಿ ಪದ್ಧತಿಯನ್ನು ಕೆಲವು ಸೂಕ್ಷ ಹಾಗೂ ಹೆಚ್ಚಿನ ರೋಗಕ್ಕೆ ತುತ್ತಾಗುವ ಬೆಳಗಳನ್ನು ಹೊರತುಪಡಿಸಿ ಹೆಚ್ಚಿನ ಬೆಳಗಳಲ್ಲಿ ಯಶಸ್ವಿಯಾಗಿ ಅಳವಡಿಸಿಕೊಳ್ಳಬಹುದಾಗಿದೆ. ಅವರ ನೈಸರ್ಗಿಕ ಕೃಷಿಯ ಮೂಲ ಅಂಶಗಳು:
ಜೀವಾಮೃತದ ಬಳಕೆ, ಜೀವಾಮೃತದಲ್ಲಿನ ಪಂಚತತ್ವಗಳು: ಜೀವಾಮೃತ ತಯಾರಿಸುವ ವಿಧಾನ ಈ ಕೆಳಗಿನಂತಿವೆ.
1) ದೇಶಿ ಆಕಳ, ಎತ್ತುಗಳ ಅಥವಾ ಎಮ್ಮೆಯ ಸೆಗಣಿ ಹತ್ತು ಕೆ.ಜಿ.
2) ದೇಶಿ ಆಕಳ ಮೂತ್ರ ಅಥವಾ ಮಾನವ ಮೂತ್ರ ಹತ್ತು ಲೀಟರ್ (ಐದರಿಂದ ಹತ್ತು ಲೀಟರ್)
3) ಬೆಲ್ಲ (ಕಪ್ಪು ಅಥವಾ ಕೆಂಪು) ಎರಡು ಕೆಜಿ ಅಥವಾ ಕಬ್ಬಿನ ಹಾಲು ನಾಲ್ಕು ಲೀಟರ್.
4) ಯಾವುದೇ ದ್ವಿದಳ ಧಾನ್ಯದ ಹಿಟ್ಟು ಉದಾ: ಉದ್ದು, ಹೆಸರು, ಕಡಲೆ, ತೊಗರಿ, ಅಲಸಂದಿ, ಇತ್ಯಾದಿಗಳ ಹಿಟ್ಟು ಎರಡು ಕೆ.ಜಿ (ಸೋಯಾ ಹಾಗೂ ನೆಲಗಡಲೆ ಹೊರತುಪಡಿಸಿ)
5) ಜೀವಾಣುಯುಕ್ತ ಮಣ್ಣು ಒಂದು ಹಿಡಿ.(ನಿಮ್ಮ ಹೊಲದ ಮಣ್ಣು ಒಂದು ಹಿಡಿ)
6) ನೀರು ಇನ್ನೂರು ಲೀಟರ್.
ಜೀವಾಮೃತವನ್ನು ಭೂಮಿಗೆ ಹಾಕುವ ವಿಧಾನ - ಪಂಚಕರ್ಮಗಳು:
1) ನಾಟಿಗೆ ಪೂರ್ವದಲ್ಲಿ ಹಾಗೂ ನೀರು ಹಾಯಿಸುವ ಪೂರ್ವದಲ್ಲಿ ಬಾರಿಗೆಯಿಂದ ಭೂಮಿಗೆ ಜೀವಾಮೃತ ಸಿಂಪಡಿಸುವುದು.
2) ಪ್ರತಿ ಸಲ ನೀರು ಹಾಯಿಸುವಾಗ ಹರಿಯುವ ನೀರಿನ ಕಾಲುವೆ ಮೂಲಕ ಜೀವಾಮೃತ ನೀಡುವುದು.
3) ಪಂಪಿನಿಂದ ಬೀಳುವ (ಹರಿಯುವ) ನೀರಿನಲ್ಲಿ ಬೆರೆಸುವುದು.
4) ಗಟ್ಟಿಯಾದ ಜೀವಾಮೃತ ಸೆಣಬಿನ ಚೀಲದಲ್ಲಿ ತುಂಬಿ ಚೀಲವನ್ನು ಪಂಪಿನಿಂದ ಸುರಿಯುವ ನೀರಿನಡಿಯಲ್ಲಿ ಇಡುವುದು.
5) ಹನಿ ಇಲ್ಲವೆ ತುಂತುರು ನೀರಾವರಿ ಮೂಲಕ ನೀಡುವುದು (ಬಟ್ಟೆಯಿಂದ ಸೋಸಿ)
ಜೀವಾಮೃತವನ್ನು ತೋಟಗಾರಿಕೆ ಬೆಳೆಗಳಾದ, ಹಣ್ಣು, ತರಕಾರಿ, ಹೂಬೆಳೆ, ಸಾಂಬಾರು ಬೆಳಗಳಿಗೆ ಉಪಯೋಗಿಸುವುದರಿಂದ ಭೂಮಿಯ ಫಲವತ್ತತೆ ಹೆಚ್ಚುತ್ತದೆ. ಅದು ನೆಲದಲ್ಲಿನ ಎರೆಹುಳುಗಳನ್ನು ಆಕರ್ಷಿಸುತ್ತದೆ. ಎರೆಹುಳುಗಳು ಭೂಮಿಯನ್ನು ನೈಸರ್ಗಿಕವಾಗಿ ಉಳುಮೆಮಾಡಿ ಸಡಿಲಗೊಳಿಸುವುದಲ್ಲದೇ, ತ್ಯಾಜ್ಯ ವಸ್ತುಗಳನ್ನು ತಿಂದು ಉತ್ಕೃಷ್ಟವಾದ ಗೊಬ್ಬರವನ್ನು ಬೆಳಗಳಿಗೆ ದೊರಕುವಂತೆ ಮಾಡುತ್ತವೆ. ಇದಲ್ಲದೆ ಭೂಮಿಯಲ್ಲಿನ ಪರೋಪಕಾರಿ ಸೂಕ್ಷ್ಮ ಜೀವಿಗಳ ಸಂಖ್ಯೆಯನ್ನೂ ಹೆಚ್ಚಿಸುತ್ತದೆ. ಈ ಸೂಕ್ಷ್ಮ ಜೀವಿಗಳು ಭೂಮಿಯಲ್ಲಿರುವ ರಂಜಕ, ಪೊಟ್ಯಾಶ್ ಬೆಳೆಗಳಿಗೆ ದೊರಕದ ಸ್ಥಿತಿಯಿಂದ, ದೊರಕುವ ಸ್ಥಿತಿಗೆ ತರುವಲ್ಲಿ ಸಹಾಯಕಾರಿಯಾಗಿರುತ್ತವೆ ಮತ್ತು ಕೆಲವು ಸೂಕ್ಷ್ಮ ಜೀವಿಗಳು ನಿಸರ್ಗದಲ್ಲಿ ದೊರೆಯುವ ಸಾರಜನಕವನ್ನು ಬೇರುಗಳ ಮುಖಾಂತರ ಭೂಮಿಯಲ್ಲಿ ಶೇಖರಣೆಯಾಗುವಂತೆ ಮಾಡುತ್ತವೆ.
ಜೈವಿಕ ತ್ಯಾಜ್ಯದ ಹೊದಿಕೆ: ತೋಟಗಾರಿಕೆ ಬೆಳೆಗಳಿಗೆ ಜೈವಿಕ ತ್ಯಾಜ್ಯಗಳ ಹೊದಿಕೆಯನ್ನು ಹಾಕುವುದರಿಂದ 1) ಕಳೆ ನಿಯಂತ್ರಣ ಮಾಡಲು ಸಾಧ್ಯವಾಗುತ್ತದೆ 2) ನೀರು ಆವಿಯಾಗುವುದನ್ನು ತಪ್ಪಿಸಬಹುದು. 3) ನೆಲದ ತೇವಾಂಶ ಧೀರ್ಘಕಾಲವಿದ್ದು ಬೆಳೆಗಳಿಗೆ ಉಪಯುಕ್ತವಾಗುತ್ತದೆ. 4) ಜೈವಿಕ ಹೊದಿಕೆ ಕ್ರಮೇಣ ಕೊಳೆತು ಗೊಬ್ಬರವಾಗಿ ಗಿಡಗಳಿಗೆ ಉಪಯೋಗವಾಗುತ್ತದೆ.
ಸೆಗಣಿ ಗೊಬ್ಬರ ಮತ್ತು ಗಂಜಲದ ಮಹತ್ವ: ರೈತರು ಗಂಜಲ ಮಿಶ್ರಿತ ಸಗಣಿ ಗೊಬ್ಬರ ಭೂಮಿಗೆ ಬೆರೆಸುವುದರಿಂದ ಭೂಮಿಯಲ್ಲಿ ಎರೆಹುಳುಗಳ ಚಟುವಟಿಕೆ ಹೆಚ್ಚಾಗಿ ಹೊಲದಲ್ಲಿನ ತ್ಯಾಜ್ಯಗಳನ್ನೆಲ್ಲಾ ತಿಂದು ಸಾವಯವದ ಪ್ರಮಾಣವನ್ನು ಹೆಚ್ಚಿಸಿ ಸೂಕ್ಷ್ಮಾಣುಗಳ ಚಟುವಟಿಕೆಗಳನ್ನು ಹೆಚ್ಚಿಸುತ್ತದೆ. ಇದರಿಂದಎಲ್ಲಾ ತ್ಯಾಜ್ಯವಸ್ತುಗಳು ಬೆಳೆಗಳಿಗೆ ಸಿದ್ಧ ಆಹಾರವಾಗಿ ಲಭ್ಯವಾಗುತ್ತವೆ. ಈ ಆಹಾರ ಬೆಳೆಗಳಿಗೆ ಬೇಕಾಗುವ ಪ್ರಮುಖ ಪೋಷಕಾಂಶಗಳು, ಲಘು ಪೋಷಕಾಂಶಗಳು, ಸಸ್ಯ ಪ್ರಚೋದಕಗಳು ಒಳಗೊಂಡಿರುವುದರಿಂದ ಸಮೃದ್ಧ ಬೆಳೆ ಬರಲು ಸಹಾಯಕವಾಗುತ್ತದೆ.
ಇನ್ನು ಜೀವಸಾರ ಎಂದರೇನು ಎಂಬುದರ ಬಗ್ಗೆ ಮಾಹಿತಿಯನ್ನು ಮುಂದಿನವಾರ ನೋಡೋಣ...
-ಶಾಲಿನಿ ರಜನೀಶ್, ಐಎಎಸ್
anisikeprabha@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


