ಅಂಕಣಗಳು

ಮಂಗಲದ ಅಂಗಳದಲಿ ಕೆಂಪಮ್ಮನ ನೆನಪು

ಮಂಗಲದ ಅಂಗಳದಲಿ ಕೆಂಪಮ್ಮನ ನೆನಪು
Published On :

ಆಗಿನ್ನೂ ಸ್ವಾತ್ರಂತ್ರ್ಯ ಬಂದು ಸುಮಾರು ಏಳು ವರ್ಷಗಳಾಗಿತ್ತು. ಆಗ ನನಗೂ ಸಹ ಅಷ್ಟೇ ವಯಸ್ಸು. ಮಂಡ್ಯ ತಾಲೂಕಿನ ಮಂಗಲ ಒಂದು ಸಾಮಾನ್ಯ ಹಳ್ಳಿಯಾಗಿತ್ತು. ಊರಿಗೆ ವಿದ್ಯುತ್ ಸಂಪರ್ಕ ಇರಲಿಲ್ಲ. ಮಂಡ್ಯದಿಂದ ಸುಮಾರು 6 ಕಿ.ಮೀಟರ್ ಮಣ್ಣಿನ ರಸ್ತೆ ಇತ್ತು. ನೀರಾವರಿ ಪ್ರದೇಶವಾದ್ದರಿಂದ ಸೊಳ್ಳೆಗಳ ಹಾವಳಿ ಬೇರೆ, ಕುಡಿಯುವ ನೀರಿಗೆ ಅರ್ಧ ಕಿಲೋ ಮೀಟರ್ ದೂರದ ಕೊಂಪೆಗಳ ಮಧ್ಯೆ ಇದ್ದ ಕೊಳದ ನೀರೇ ಆಸರೆ. ಊರಿನಲ್ಲಿ ಬಹುಸಂಖ್ಯಾತ ಒಕ್ಕಲಿಗರ ನಾಡಿನ ಹೆಂಚಿನ ಮನೆಗಳು, ದಲಿತರು ಮತ್ತು ಹಿಂದುಳಿದವರ ಗುಡಿಸಲುಗಳು  ವಿಶೇಷವಾಗಿ ಕಾಣಿಸುತ್ತಿದ್ದವು . ಸ್ವಚ್ಛತೆ ಅಷ್ಟಾಗಿ ಇರುತ್ತಿರಲಿಲ್ಲ.
 1954ರ ಮಧ್ಯ ಭಾಗದಲ್ಲಿ ಇಂಗ್ಲೆಂಡಿನಿಂದ ಮಂಡ್ಯದ ಈ ಕುಗ್ರಾಮಕ್ಕೆ ಬಂದವರು ಓರ್ವ ಬ್ರಿಟಿಷ್ ಮಹಿಳೆ. ತನ್ನ ಬಾಬ್‌ಕಟ್ ಮತ್ತು ಸ್ಕರ್ಟ್ ವೇಷದಿಂದ ಮಂಗಲ ಮತ್ತು ಕಾಳೇನಹಳ್ಳಿ ಗ್ರಾಮದ ಬೀದಿಗಳಲ್ಲಿ ಹೆಜ್ಜೆ ಹಾಕುತ್ತಿದ್ದಾಗ ನನ್ನ ಜೊತೆಯ ಹುಡುಗರು ಅಮ್ಮನ ಹಾವ-ಭಾವ. ವೇಷ-ಭೂಷಣಗಳನ್ನು ಕುತೂಹಲದಿಂದ ವೀಕ್ಷಿಸಿ, ಅವರನ್ನು ಕಿಂದರಿ ಜೋಗಿಯನ್ನು ಹಿಂಬಾಸಿದಂತೆ ಹಿಂಬಾಲಿಸಿ ಖುಷಿ ಪಡುತ್ತಿದ್ದೆವು. ನಮ್ಮ ಹಳ್ಳಿಯ ಜನರು ನಮಗೆ ಸ್ವಾತಂತ್ರ್ಯ ಬಂದರೂ ಪರಂಗಿಯರು (ಬ್ರಿಟಿಷರು) ಮತ್ತೆ ನಮ್ಮ ದೇಶಕ್ಕೆ ಬಂದರಲ್ಲ ಎಂದು ಆಶ್ಚರ್ಯಚಕಿತರಾಗಿ ನೋಡುತ್ತಿದ್ದರು. ಎಲ್ಲರ ಕುತೂಹಲದ ನಡುವೆಯೂ ಸಹ ಡಾ. ಸ್ಕಾರ್ಲೆಟ್ ಎಪ್ಸ್‌ಟೀನ್ (ಕೆಂಪಮ್ಮ)ಅವರು ತಮ್ಮ ಸಂಶೋಧನಾ ಅಧ್ಯಯನ ಮಾಡಲು ಊರಿನಲ್ಲಿದ್ದ ಅನುಪಯುಕ್ತ ಸರ್ಕಾರಿ ಬಂಗಲೆಯನ್ನು ಸಗಣಿಯಿಂದ ಸಾರಿಸಿ ಶುದ್ಧ ಮಾಡಿಕೊಂಡು, ಅನತಿ ದೂರದಲ್ಲಿದ್ದ ಒಂದು ಶೌಚಾಲಯವನ್ನು ದುರಸ್ತಿ ಮಾಡಿ ಕಂದೀಲು ಬೆಳಕಿನಲ್ಲಿಯೇ ತಮ್ಮ ನಿತ್ಯದ ಕೆಲಸಗಳನ್ನು ಮಾಡುತ್ತಾ ಅಧ್ಯಯನ ಪ್ರಾರಂಭಿಸಿದರು. ಅವರ ಜೊತೆ ಡಾ. ಎ. ಪಿ. ಸೂರ್ಯನಾರಾಯಣ ಎಂಬ ಕನ್ನಡಿಗರು ಅನುವಾದಕರಾಗಿದ್ದರು.
ಕೆಂಪಮ್ಮ ಅವರು ಮುಂಜಾನೆ ಕೋಳಿ ಕೂಗುವ ಸಮಯಕ್ಕೆ ಎದ್ದು ನಿತ್ಯ ಕರ್ಮಗಳನ್ನು ಮುಗಿಸಿ ಮಂಗಲದ ಬೀದಿಗಳಲ್ಲಿ ಕುಟುಂಬದ ಹಿರಿಯರು, ಮಹಿಳೆಯರಿಗೆ ವೀಳ್ಯವನ್ನು ಕೊಟ್ಟು, ಪರಿಚಯಿಸಿಕೊಂಡು ಶುಭಾಶಯ ವಿನಿಮಯ ಮಾಡಿಕೊಳ್ಳುವುದು ಅವರ ವಾಡಿಕೆಯಾಗಿತ್ತು. ಬೀಡಿ ಸೇದುವ ಗಂಡಸರಿಗೆ ಬೀಡಿ ಕೊಟ್ಟು, ಮಕ್ಕಳಿಗೆ ಪೆಪ್ಪರ್ ಮಿಂಟ್, ಚಾಕ್ಲೆಟ್ ಕೊಟ್ಟು ಎಲ್ಲರನ್ನೂ ಆಕರ್ಷಿಸುತ್ತಿದ್ದರು. ಬಹುಬೇಗ ಅವರು ಊರಿನವರೆಲ್ಲರಿಗೂ ಪ್ರೀತಿ ಪಾತ್ರರಾಗಿ ಕೆಂಪಮ್ಮ ಅದರು. ತಮ್ಮ ಅಧ್ಯಯನವನ್ನು ಪ್ರಪ್ರಥಮವಾಗಿ ಮಂಗಲ ಗ್ರಾಮದಿಂದ ಪ್ರಾರಂಭಿಸಿದ್ದರಿಂದ "ಮಂಗಲ ಕೆಂಪಮ್ಮ" ಆದರು.
ತಮ್ಮ ಸಂಶೋಧನಾ ಅಧ್ಯಯನದೊಂದಿಗೆ ಅವರು ಹಳ್ಳಿಯ ಪ್ರತಿಯೊಂದು ಪ್ರಮುಖ ಸಾಮಾಜಿಕ, ಧಾರ್ಮಿಕ ಹಾಗೂ ಕೌಟುಂಬಿಕ ಸಭೆ ಸಮಾರಂಭ ಮತ್ತು ಆಚರಣೆಗಳಲ್ಲಿ ಸ್ವತಃ ಭಾಗವಹಿಸಿ ವಿಚಾರಗಳನ್ನು ತಿಳಿದು ತಮ್ಮ ಬಂಗಲೆಗೆ ಬಂದು ದಾಖಲಿಸಿಕೊಳ್ಳುತ್ತಿದ್ದರು. ಬಿಡುವಿನ ವೇಳೆ ಭಾನುವಾರ ಮಂಡ್ಯಕ್ಕೆ ಬಂದು ವಾರದ ಅಗತ್ಯ ಸಾಮಾನುಗಳನ್ನು ಕೊಂಡುಬರುತ್ತಿದ್ದರು. ಹಳ್ಳಿಯ ಜನರ ಜೀವನ ಶೈಲಿ, ಬೇಸಾಯ ಕ್ರಮ, ಕೌಟುಂಬಿಕ ನಿರ್ವಹಣೆಯ ವಿಧಿ ವಿಧಾನಗಳನ್ನು, ಜಾತಿ-ಮತಗಳ ವರ್ಗೀಕರಣ, ಸಾಮಾಜಿಕ ಸ್ಥಿತಿಗತಿಗಳು ಎಲ್ಲವನ್ನೂ ಅಧ್ಯಯನ ಮಾಡುತ್ತಿದ್ದರು.  ಅಂತಾರಾಷ್ಟ್ರೀಯ ಖ್ಯಾತಿಯ ಸಮಾಜಶಾಸ್ತ್ರಜ್ಞ ಪ್ರೊ. ಎಂ. ಎನ್. ಶ್ರೀನಿವಾಸ್‌ರವರ ಮಾರ್ಗದರ್ಶನದಲ್ಲಿ ಮಂಗಲದ ನೀರಾವರಿ ಪ್ರದೇಶದಲ್ಲಿ ಆಗಿರುವ ಪರಿಣಾಮಗಳು ಹಾಗೂ ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆಗಳ ಪೂರ್ಣ ಚಿತ್ರಣ, ಹಾಗೆಯೇ  ಖುಷ್ಕಿ ಪ್ರದೇಶವಾದ ಕಾಳೇನಹಳ್ಳಿ ಗ್ರಾಮದ ಮುಖ್ಯಸ್ಥರ ಮನೆಯಲ್ಲಿ ಸುಮಾರು ಹತ್ತು ತಿಂಗಳು ವಾಸಿಸಿ ಅಲ್ಲಿಯ ಸ್ಥಿತಿ-ಗತಿಗಳನ್ನು ಮತ್ತು ಬದಲಾವಣೆಯ ವಿಶೇಷಣಗಳನ್ನು ದಾಖಲಿಸಿ ತಮ್ಮ ಪ್ರಬಂಧತ್ಮಾಕ ಅಧ್ಯಯನವಾದ "ದಕ್ಷಿಣ ಭಾರತದ ಹಳ್ಳಿಗಳ ಆರ್ಥಿಕ ಅಭಿವೃದ್ಧಿ ಮತ್ತು ಸಾಮಾಜಿಕ ಬದಲಾವಣೆ" ಎಂಬ ಗ್ರಂಥವನ್ನು ಬರೆದು ನಮ್ಮ ಹಳ್ಳಿಗಳ ಸ್ಥಿತಿ-ಗತಿ ಮತ್ತು ಬದಲಾವಣೆಗಳನ್ನು ವಿಶ್ವಕ್ಕೆ ಪರಿಚಯಿಸಿದ ಮೊದಲ ವಿದೇಶಿ ಮಹಿಳೆ ಈ ಕೆಂಪಮ್ಮ.
ಇವರು ಸುಮಾರು ಒಂದೂವರೆ ದಶಕದ ನಂತರ 1970ರಲ್ಲಿ ಮತ್ತೇ ಅದೇ ಗ್ರಾಮಗಳಿಗೆ ಭೇಟಿ ನೀಡಿ ಈ ಸಮಯದ ಅಂತರದಲ್ಲಿ ಆದ ಬದಲಾವಣೆಗಳ ಅಧ್ಯಯನ ಮಾಡಿ ಮತ್ತೊಂದು ವಿಶಿಷ್ಟ ಗ್ರಂಥವಾದ "ದಕ್ಷಿಣ ಭಾರತ ಅಂದು-ಇಂದು ಮತ್ತು ಮುಂದು" ಎಂಬ ಪುಸ್ತಕವನ್ನು ಪ್ರಕಟಿಸಿದರು. ಈ ಸಂದರ್ಭದಲ್ಲಿ ನಾನು ಆ ಗ್ರಾಮದವನಾಗಿ ಸ್ನಾತಕೋತ್ತರ ಪದವಿ ಪಡೆದು ಮಂಡ್ಯ ಪಿ. ಇ. ಎಸ್. ವಿಜ್ಞಾನ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕೆಲಸ ಮಾಡುತ್ತಿದ್ದೆ.  ಅಮ್ಮ ನನ್ನ ಕಾಲೇಜಿಗೆ ಬಂದು ಭೇಟಿ ಆದರು.
ಅಂದಿನಿಂದ ನನ್ನ ಅವರ ಸಂಪರ್ಕ-ಸಂಬಂಧ ಮತ್ತು ಒಡನಾಟದಲ್ಲಿ ಅಧ್ಯಯನ ಪ್ರಾರಂಭವಾಗಿ ಅವರು ವಿದೇಶದಿಂದ ಮಂಡ್ಯದ ಹಳ್ಳಿಗಳಿಗೆ ಬಂದಾಗಲೆಲ್ಲಾ ಅವರ ಜೊತೆಗೂಡಿ ಹಳ್ಳಿಗಳಿಗೆ ಭೇಟಿ ನೀಡಿ ಗ್ರಾಮೀಣ ಅಭಿವೃದ್ಧಿ ಮತ್ತು ಸಾಮಾಜಿಕ ಪರಿವರ್ತನೆ ಬಗ್ಗೆ ಚರ್ಚಿಸಿ 1996ರಲ್ಲಿ "ವಿಲೇಜ್ ವಾಯ್ಸ್‌" ಎಂಬ ಪುಸ್ತಕವನ್ನು ಬರೆದೆವು. ಇದು ವಿಶ್ವವಿಖ್ಯಾತ ಪುಸ್ತಕವಾಗಿ ಪ್ರಸಿದ್ಧಿಯಾಗಿದೆ. ಅನಂತರವೂ ಅನೇಕ ಬಾರಿ ಅವರು ಬೆಂಗಳೂರಿಗೆ ಬಂದಾಗ ನನ್ನ ಮನೆಯಲ್ಲಿ ಅಥವಾ ನನ್ನ ಮಗ ಡಾ. ಪ್ರಶಾಂತ್‌ನ ಮನೆಯಲ್ಲಿ ಉಳಿದುಕೊಳ್ಳುತ್ತಿದ್ದರು. ಮಂಡ್ಯಕ್ಕೆ ಹೋದಾಗ ಮಂಡ್ಯದ ನನ್ನ ಸ್ನೇಹಿತ ಡಾ. ಶ್ರೀನಿವಾಸ್ ಅವರು ಹಾಗೂ ಕೆಲವು ವೇಳೆ ಹರಿಪ್ರಿಯಾ ಹೋಟೆಲ್‌ನಲ್ಲಿ ಉಳಿದುಕೊಳ್ಳುತ್ತಿದ್ದರು. ಇವರಿಗೆ ಭಾರತದ ಪ್ರಧಾನಿ ಡಾ. ಮನಮೋಹನ್ ಸಿಂಗ್, ಯೋಜನಾ ಅಯೋಗದ ಉಪಧ್ಯಾಕ್ಷರಾದ ಡಾ. ಮಾಂಟೆಕ್ ಸಿಂಗ್ ಅಹ್ಲುವಾಲಿಯಾ, ಡಾ. ವಿ.ಕೆ. ಆರ್.ವಿ. ರಾವ್, ಡಾ. ಜಿ.ವಿ.ಕೆ.ರಾವ್, ಪ್ರೊ. ಎಂ. ಎನ್. ಶ್ರೀನಿವಾಸ್, ಡಾ. ಡಿ. ಎಂ. ನಂಜುಂಡಪ್ಪ ಮುಂತಾದವರು ಹತ್ತಿರದ ಪರಿಚಯದವರಾಗಿದ್ದರು. ಇವರ ಮೇರು ವ್ಯಕ್ತಿತ್ವ ಮತ್ತು ಸಾಧನೆಯನ್ನು ಗುರುತಿಸಿ ಇಂಗ್ಲೆಂಡಿನ ರಾಣಿ ಎಲಿಜಿಬತ್ "ಅರ್ಡರ್ ಆಫ್ ಬ್ರಿಟಿಷ್ ಎಂಪೈರ್‌"  ಎಂಬ ಅತ್ಯುನ್ನತ್ತ ಬಿರುದನ್ನು (ಗೌರವ) ನೀಡಿ ಬಕಿಂಗ್ ಹ್ಯಾಮ್ ಅರಮನೆಯಲ್ಲಿ ಸತ್ಕರಿಸಿ ಗೌರವಿಸಿರುತ್ತಾರೆ. ನನ್ನನ್ನು ಬಹಳ ವರ್ಷಗಳಿಂದ ತಮ್ಮ ಮಗನೆಂದು ಸ್ವೀಕರಿಸಿ ಅವರು ತಾಯಿಯ ಪ್ರೀತಿ ವಾತ್ಸಲ್ಯ, ಅಭಿಮಾನವನ್ನು ತೋರುತ್ತಿದ್ದರು. ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯ, ಸಾಮಾಜಿಕ ಆರ್ಥಿಕ ಬದಲಾವಣೆ ಸಂಸ್ಥೆ, ಇಂಗ್ಲೆಂಡಿನ ಮ್ಯಾಂಚೆಸ್ಟರ್ ವಿಶ್ವವಿದ್ಯಾಲಯ ಮತ್ತು ಇತರೆ ಅನೇಕ ದೇಶ-ವಿದೇಶಿ ಸಂಸ್ಥೆಗಳಲ್ಲಿ ಜಂಟಿಯಾಗಿ ನಮ್ಮ ಅಧ್ಯಯನದ ವರದಿಯನ್ನು ವಿಶ್ಲೇಷಿಸಿ ಮಂಡಿಸುತ್ತಿದ್ದೆವು. ಈ ಸಂದರ್ಭದಲ್ಲೆಲ್ಲಾ ನನ್ನನ್ನು ಎಲ್ಲರ ಮುಂದೆ ನನ್ನ ಮಗನೆಂದೂ ಅಭಿಮಾನದಿಂದ ಹೇಳಿಕೊಳ್ಳುತ್ತಿದ್ದರು. ಇದೇ ರೀತಿ ನನ್ನ ಸಹೋದರ ನಾಗತಿಹಳ್ಳಿ ಚಂದ್ರಶೇಖರ್‌ರವರನ್ನು ತಮ್ಮ ಮತ್ತೊಬ್ಬ ಮಗನೆಂದು ಭಾವಿಸಿದ್ದರು. ಇಂತಹ ವಾತ್ಸಲ್ಯದ, ಮಮತೆಯ ಮಹಾತಾಯಿಯನ್ನು ಕಳೆದುಕೊಂಡು ದುಃಖಿತನಾಗಿದ್ದೇನೆ.


- ಟಿ. ತಿಮ್ಮೇಗೌಡ,
ಅಧ್ಯಕ್ಷರು, ಕರ್ನಾಟಕ ಜಾನಪದ ಪರಿಷತ್ತು


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.