ಈ ವರ್ಷದ ಏಪ್ರಿಲ್- ಮೇ ಬಿಸಿಲು ಹಿಂದಿನ ಎಲ್ಲಾ ರೆಕಾರ್ಡ್ಗಳನ್ನೂ ಮುರಿದಿದೆ. ಆದರೆ, ಚುನಾವಣಾ ಕಾವಿನ ಮುಂದೆ ಅದರ ಅಬ್ಬರ ಏನೇನೂ ಅಲ್ಲ ಎನ್ನಬಹುದು. ಕಾದ ನಮ್ಮ ನೆತ್ತಿ ಪ್ರಕೃತಿ ಮಾತೆ ಸುರಿಸುವ ಮಳೆಯಲ್ಲಿ ನೆನೆದು ತಂಪಾಗಬಹುದು. ಆದರೆ ರಾಜಕೀಯ ಅಂಥ ಶಾಂತಿಯನ್ನು ಕೊಡಬಲ್ಲದೇ? ಸಾಧ್ಯವಿಲ್ಲವೆನಿಸುತ್ತದೆ. "ಮೋದಿ ಪ್ರಧಾನಿಯಾಗಬೇಕೋ, ಆಗಬಾರದೋ" ಎಂಬ ಒಂದೇ ವಿಷಯದ ಮೇಲೆ ಈ ಬಾರಿಯ ಚುನಾವಣೆಗಳು ನಡೆದವು. ಆದರೆ ಮೋದಿ ತಮ್ಮ ಬಲದಿಂದ, ಪ್ರಪಂಚದ ಅತಿದೊಡ್ಡ ಮತದಾರ ಪ್ರಭುಗಳನ್ನು ಒಡೆಯುವುದರಲ್ಲಿ(ಆರಾಧಿಸುವವರು ಮತ್ತು ವಿರೋಧಿಸುವವರು) ಯಶಸ್ವಿಯಾಗಿದ್ದಾರೆ. ಮಧ್ಯದಲ್ಲಿ ಯಾವುದೇ ಜಾಗ ಉಳಿದಿಲ್ಲ. ಮೋದಿಯವರ ಪರ್ಸನಾಲಿಟಿಯ ಶಕ್ತಿಯಿದು. ಇದಾದ ನಂತರ ಹಲವಾರು ವಿದ್ಯಮಾನಗಳು ನಡೆದವು.
ಈ ಹಿಂದೆ ಯಾವ ಚುನಾವಣೆಗಳೂ ಇಷ್ಟೊಂದು ಪ್ಯಾಶನೇಟ್ ಆಗಿ ನಡೆದಿರಲಿಲ್ಲ. ಚುನಾವಣಾ ಜ್ವರ ಅಪಾಯದ ಅಂಚನ್ನೂ ತಲುಪಿಬಿಟ್ಟಿತು. ನಮ್ಮ ರಾಜಕಾರಣಿಗಳು ನಾಚಿಕೆ ಬಿಟ್ಟು ದ್ವೇಷ ಭಾಷಣಗಳಲ್ಲಿ ತೊಡಗಿಕೊಂಡರು. ಜನತೆಯ ನಡುವಿನ ಚರ್ಚೆ ಭಾರತೀಯರ ನಡುವಿನ ಧಾರ್ಮಿಕ ಮತ್ತು ಸಾಂಸ್ಕೃತಿಕ ಭಿನ್ನತೆಗಳ ಸುತ್ತ ಗಿರಗಿರನೆ ತಿರುಗಿತು. ಇಂಥ ಕಚ್ಚಾ, ಸಂಸ್ಕರಿಸದ ಭಾವೋದ್ರೇಕಗಳು ಮುಂದೆ ಚುನಾವಣೆ ಮುಗಿದ ನಂತರ ಎಂದಿನಂತೆ ನಮ್ಮ ರಾಜಕಾರಣಿಗಳು ತಮ್ಮ ಅವಕಾಶವಾದಿ ಶೈಲಿಯಲ್ಲಿ ಅಡ್ಜಸ್ಟ್ಮೆಂಟ್ಗಳಲ್ಲಿ ತೊಡಗಿದ ನಂತರವೂ ಮುಂದುವರಿಯುತ್ತವೆ. ಯಾವ ಬಹು ಸಂಸ್ಕೃತಿಯು ಭಾರತದ ಶಕ್ತಿಯಾಗಿತ್ತೋ ಅದೇ ಈಗ ಈ ದೇಶದ ದೌರ್ಬಲ್ಯವಾಗುವ ಅಪಾಯಕ್ಕೆ ಸಿಲುಕಿದೆ.
ಹಾಗಿದ್ದರೆ ನಾವು ಮೋದಿ ಕೇಂದ್ರಿತ ಚುನಾವಣಾ ಪ್ರಚಾರಗಳಲ್ಲಿ ನಮ್ಮದೇ ಹಿಂದಿನ ನಾಗರಿಕತೆಯ ಘರ್ಷಣೆಯ ಹಾಡನ್ನು ಕೇಳುತ್ತಿದ್ದೇವೆಯೇ? ನಾಗರಿಕತೆಯ ಘರ್ಷಣೆಯನ್ನು ಯಾರು ಹೇಗೆ ಬೇಕಾದರೂ ವ್ಯಾಖ್ಯಾನಿಸಲಿ. ಸ್ಯಾಮ್ಯುಯಲ್ ಹಂಟಿಗ್ಟನ್ ಈ ಕುರಿತು ಹೇಳುವ ಮಾತನ್ನು ಇಲ್ಲಿ ಮೆಲುಕು ಹಾಕಬಹುದೆನಿಸುತ್ತಿದೆ. "ಒಂದು ನಾಗರಿಕತೆಯ ಗುಣಲಕ್ಷಣಗಳು ಬದಲಾಯಿಸಲು ಸಾಧ್ಯವಿಲ್ಲದಂತಿರುತ್ತವೆ. ಏಕೆಂದರೆ ಅದನ್ನು ವ್ಯಾಖ್ಯಾನಿಸುವುದು ಇತಿಹಾಸ, ಭಾಷೆ, ಸಂಪ್ರದಾಯ ಮತ್ತು ಎಲ್ಲದಕ್ಕಿಂತ ಮುಖ್ಯವಾಗಿ ಧರ್ಮ. ಇಂದು ಪ್ರಪಂಚವೇ ಒಂದು ಊರಾಗಿ ಬದಲಾಗಿರುವುದರಿಂದ, ಪ್ರತಿಯೊಬ್ಬ ವ್ಯಕ್ತಿಯೂ ಧರ್ಮವೇ ಅತಿ ಸುಲಭವಾಗಿ ತನ್ನ ಗುರುತನ್ನು ಎತ್ತಿಹಿಡಿಯಬಲ್ಲದು ಎಂದು ಭಾವಿಸುತ್ತಾನೆ. ಒಂದು ವೇಳೆ ಈ ಕ್ರಿಯೆಯಲ್ಲಿ ಘರ್ಷಣೆಗಳಿಂದ ತಪ್ಪಿಸಿಕೊಳ್ಳಲಾಗದು ಎನ್ನುವ ಸ್ಥಿತಿ ಎದುರಾದರೆ. "ಆದದ್ದು ಆಗಲಿ ಬಿಡಿ" ಎನ್ನುವ ಗುಣವೇ ಎಲ್ಲರಲ್ಲೂ ಕಾಣಿಸುವಂಥದ್ದು."
ಧರ್ಮದಿಂದ ರೂಪ ಪಡೆದಿರುವ ನಾಗರಿಕತೆಗಳಲ್ಲಿ ಇಂಥ ಮುಖಾಮುಖಿಯನ್ನು ತಪ್ಪಿಸಲಾಗದು ಎಂದು ಹೇಳಿದವರಲ್ಲಿ ಹಂಟಿಗ್ಟನ್ ಮೊದಲನೆಯವನಲ್ಲ. ಸಂಶೋಧಕರ ಪ್ರಕಾರ ಇಂಥ ಒಂದು ವಿಚಾರ 1926ರಲ್ಲಿ ಬಂದ ಪುಸ್ತಕ: "ಯಂಗ್ ಇಸ್ಲಾಮ್ ಆನ್ ಟ್ರೆಕ್: ಅ ಸ್ಟಡಿ ಇನ್ ದಿ ಕ್ಲ್ಯಾಷ್ ಆಫ್ ಸಿವಿಲೈಝೇಶನ್ಸ್"ನಲ್ಲಿ ಮೊದಲು ಕಾಣಿಸಿಕೊಂಡಿತು. ಈ ವಿಚಾರ ಮತ್ತೊಮ್ಮೆ 1990ರಲ್ಲಿ ನಿಯತಕಾಲಿಕವೊಂದರಲ್ಲಿ "ದಿ ರೂಟ್ಸ್ ಆಫ್ ಮುಸ್ಲಿಂ ರೇಜ್" ಎನ್ನುವ ತಲೆಬರಹದಲ್ಲಿ ಕಾಣಿಸಿಕೊಂಡಿತು. ಈ ಕ್ಲ್ಯಾಶ್ ಎನ್ನುವ ಪದವನ್ನು ಹಂಟಿಗ್ಟನ್ 1992ರ ಉಪನ್ಯಾಸದಲ್ಲಿ ಖ್ಯಾತಗೊಳಿಸಿದ. ಮುಂದೆ ಅದನ್ನೇ ಪುಸ್ತಕ ರೂಪದ ಅಧ್ಯಯನದಲ್ಲಿ ಬೆಳೆಸಿದ. ಇಲ್ಲಿ ಗಮನಿಸಬೇಕಾದ ಮುಖ್ಯ ಸಂಗತಿಯೆಂದರೆ, 1926ರಲ್ಲಿ, 1990ರಲ್ಲಿ, 1992ರಲ್ಲಿ ಮತ್ತು ನಂತರದ ದಿನಗಳಲ್ಲಿ ಈ ಘರ್ಷಣೆ ಎನ್ನುವ ಪದವನ್ನು, "ಧರ್ಮಗಳ ನಡುವಿನ ಘರ್ಷಣೆ" ಎಂಬ ಹಿನ್ನೆಲೆಯಲ್ಲೇ ಹೇಳಲಾಯಿತಾದರೂ, ನಾಗರಿಕತೆ ಮತ್ತು ಧರ್ಮವನ್ನು ಸಮಾನಾರ್ಥಕ ಪದಗಳಂತೆಯೇ ಬಳಸಲಾಯಿತು. ಅಲ್ಲದೆ, ಈ ಸಂವಾದಗಳಲ್ಲಿ ಮುಖ್ಯ ಉದಾಹರಣೆಗಳಾಗಿ ಕಾಣಿಸಿಕೊಂಡದ್ದು ಕ್ರಿಶ್ಚಿಯಾನಿಟಿ ಮತ್ತು ಇಸ್ಲಾಂ ಧರ್ಮಗಳು ಎನ್ನುವುದನ್ನೂ ಗಮನಿಸಬೇಕು.
ಇದಕ್ಕೆ ಕಾರಣಗಳೂ ಉಂಟು. ಏಕೆಂದರೆ ಈ ಚರ್ಚೆ ಶುರುವಾಗಿದ್ದು ಪಶ್ಚಿಮ ರಾಷ್ಟ್ರಗಳಲ್ಲಿ. ಅಲ್ಲಿ ಕ್ರಿಶ್ಚಿಯಾನಿಟಿ ಮತ್ತು ಅಗೋಚರ ಜುಡಾಯಿಸಂಗೆ, ಬಗ್ಗಿಸಲಾಗದ ಇಸ್ಲಾಂ ಸವಾಲು ಒಡ್ಡಿತ್ತು. ಅಂದು ಪಶ್ಚಿಮ ರಾಷ್ಟ್ರಗಳು ಪೂರ್ವದ 'ನಿಗೂಢ ಸಂಸ್ಥೆಗಳು' ಮತ್ತು ಅದರ ನಿಗೂಢ ನಾಗರಿಕತೆಗಳಾದ ಹಿಂದು ಮತ್ತು ಹಾನ್ಗಳ ಬಗ್ಗೆ ಗಮನ ಕೊಡುತ್ತಿದ್ದುದೇ ಅತ್ಯಲ್ಪ. ಈಗ ಈ ಭಾಗದಲ್ಲೂ ನಾಗರಿಕತೆಗಳ ನಡುವೆ ಘರ್ಷಣೆ ನಡೆಯುತ್ತಿರುವುದನ್ನು ನೋಡಿ, ಅವೂ ಕೂಡ ಅಚ್ಚರಿಗೊಂಡಿರಬಹುದು. ಈ ಚುನಾವಣೆಯಲ್ಲಿ ಹಿಂದು ಮತ್ತು ಮುಸ್ಲಿಂ ಶ್ರದ್ಧಾವಂತರು ಒಬ್ಬರನ್ನೊಬ್ಬರು ಮೀರಿ ನಿಲ್ಲಲು ಪ್ರಯತ್ನಿಸುತ್ತಿದ್ದಾರೆ. ಅನುಮಾನದ ಮತ್ತು ಅಪನಂಬಿಕೆಯ ಗೋಡೆಗಳನ್ನು ಸೃಷ್ಟಿಸಿರುವ ಈ ಆಟದಲ್ಲಿ ಬರೀ ಸೋತವರೇ ಉಳಿದುಕೊಳ್ಳಲಿದ್ದಾರೆ. ಒಂದು ವೇಳೆ ಈ ಬಿರುಕುಂಟು ಮಾಡುತ್ತಿರುವ ಪ್ರಚಾರದ ಕಾವು ಮತ್ತು ಧೂಳಿನಿಂದ ನಾವು ಏನಾದರೂ ಪಾಠ ಕಲಿಯುತ್ತೇವೆ ಎಂದಾದರೆ, ಒಂದು ಮಟ್ಟಕ್ಕಾದರೂ ನಾವು ವಿಜಯಿಗಳಾಗಿ ಹೊರಹೊಮ್ಮಲಿದ್ದೇವೆ. ಅಶಾವಾದದಿಂದ ಮುನ್ನುಗ್ಗುವುದಕ್ಕೂ, ಅಹಂಕಾರದ ಲೇಪ ಬಳಿದ ಓವರ್ ಕಾನ್ಫಿಡೆನ್ಸ್ನಿಂದ ಮುನ್ನುಗ್ಗುವುದಕ್ಕೂ ವ್ಯತ್ಯಾಸವಿದೆ. ಮೋದಿ ಮತ್ತು ಬಿಜೆಪಿ ತೋರಿಸುತ್ತಿರುವುದು ಈ ಎರಡನೆಯ ಗುಣವನ್ನೇ. ತುಸು ನಮ್ರತೆಯನ್ನು ಪ್ರದರ್ಶಿಸಿದ್ದರೆ ಮೋದಿಯವರ ಇಮೇಜ್ ವೃದ್ಧಿಯಾಗುತ್ತಿತ್ತು. ಎರಡನೆಯದಾಗಿ, ಹಿರಿಯ ನಾಯಕರಿಗೆ ಅವಮಾನ ಮಾಡದೆಯೇ ಪಕ್ಷದಲ್ಲಿನ ತಮ್ಮ ಮೇಲ್ಮೆಯನ್ನು ಮೋದಿ ಅಸ್ತಿತ್ವಕ್ಕೆ ತರಬಹುದಾಗಿತ್ತು. ಮೂರನೆಯದಾಗಿ, ಮತದಾರರಿಂದ ಸಮೃದ್ಧವಾಗಿರುವ ರಾಜ್ಯದ ನಾಯಕಿ ಮಮತಾ ಬ್ಯಾನರ್ಜಿಯೊಂದಿಗೆ ದ್ವೇಷ ಕಟ್ಟಿಕೊಂಡು ಮೋದಿ ಸಾದಿಸಿದ್ದು.
-ಟಿ.ಜೆ.ಎಸ್ ಜಾರ್ಜ್