ಯಾರೋ ಒಬ್ಬರು ತೀರಿಕೊಂಡರು ಅಂದ್ಕೊಳ್ಳಿ: ಆ ಸುದ್ದಿಯನ್ನು ಜನ ನಂತರದ ಹದಿನೈದಿಪ್ಪತ್ತು ದಿನಗಳಲ್ಲಿ ಮರೆತು ಬಿಡುತ್ತಾರೆ. ಮುಂದೆ ಯಾವುದೋ ಸಂದರ್ಭದಲ್ಲಿ ಅವರ ನೆನಪು ಬಂದರೆ- 'ಅಯ್ಯೋ, ಏನ್ಮಾಡೋಕಾಗುತ್ತೆ? ಎಲ್ಲವೂ ಅವರವರ ಹಣೆಬರಹ. ಅವರ ಆಯಸ್ಸು ಅಷ್ಟೇ ಇತ್ತು ಅನ್ಸುತ್ತೆ. ಸೋ, ಹೋಗಿಬಿಟ್ರು ಎಂದು ವೇದಾಂತದ ಮಾತು ಹೇಳುತ್ತೇವೆ. ಒಂದೆರಡಲ್ಲ, ಈವರೆಗಿನ ಜೀವನದಲ್ಲಿ ಐವತ್ತಕ್ಕೂ ಹೆಚ್ಚು ಸಂದರ್ಭಗಳಲ್ಲಿ ಇಂಥ ಮಾತುಗಳನ್ನು ನಾನೂ ಬಳಸಿದ್ದೇನೆ. ಆದರೆ, ಈ ಬಾರಿ ಮಾತ್ರ ಅಂಥದೊಂದು ಮಾತು ಹೇಳಲು ನನ್ನ ನಾಲಿಗೆ ಸಹಕರಿಸುತ್ತಿಲ್ಲ. ಮನಸ್ಸು ಒಪ್ಪುತ್ತಿಲ್ಲ. ಆ ನತದೃಷ್ಟ ಹುಡುಗಿಯ ನೆನಪಾದಗಲೆಲ್ಲ-'ಅವಳಿಗೆ ಇನ್ನೂ ಆಯಸ್ಸಿತ್ತು. ಬದುಕಬೇಕೆಂಬ ಆಸೆಯಿತ್ತು. ಕಣ್ತುಂಬ ಕನಸು, ಮನದ ತುಂಬಾ ಉತ್ಸಾಹವಿತ್ತು. ಆದರೆ, ಮೊಗ್ಗಿನಂಥ ಆ ಹುಡುಗಿಯನ್ನು ಆಕೆಯ ಗಂಡನ ಮನೆಯ ಕ್ರೂರಿಗಳೇ ಕೊಂದು ಹಾಕಿಬಿಟ್ಟರು...' ಎಂಬ ಮಾತುಗಳು ಮತ್ತೆ ಮತ್ತೆ ನೆನಪಾಗುತ್ತಲೇ ಇರುತ್ತವೆ.
ಹೌದು. 'ಮರ್ಯಾದಾ ಹತ್ಯೆ'ಯ ಹೆಸರಲ್ಲಿ ಮಂಡ್ಯ ಜಿಲ್ಲೆಯ ಮಳವಳ್ಳಿಯಲ್ಲಿ ಯುವತಿಯೊಬ್ಬಳ ಬಲಿ ನಡೆಯಿತಲ್ಲ; ಆ ಪ್ರಸಂಗದ ಕುರಿತೇ ಮಾತನಾಡುತ್ತಿದ್ದೇನೆ. ಅಂತರ್ಜಾತಿ ಮದುವೆ ಮಾಡಿಕೊಂಡಳು ಎಂಬ ಒಂದೇ ಕಾರಣಕ್ಕಾಗಿ, ಆ ಹುಡುಗಿಯನ್ನು ಕೊಂದು ಹಾಕಲು ಸಂಚು ಮಾಡಿ, ಒಂದು ವಾರ ಮೊದಲೇ ತಮ್ಮ ಊರಿಗೆ ಕರೆಸಿಕೊಂಡು, ಕಡೆಗೊಮ್ಮೆ ಆಕೆಯನ್ನು ಗಂಡನ ಕಡೆಯ ಬಂಧುಗಳು ಅಮಾನುಷವಾಗಿ ಕೊಂದು ಹಾಕಿದರು ಎಂಬ ಸುದ್ದಿ ಓದಿದ ನಂತರ ಅನ್ನಿಸಿದ್ದಿಷ್ಟೆ: ಅವರು ನಿಜವಾಗಿಯೂ ಮನುಷ್ಯರಾ? ಈ ಕೊಲೆಯ ಸಂಚಿನಲ್ಲಿ ಇಬ್ಬರು ಹೆಂಗಸರೂ ಭಾಗಿಯಾಗಿದ್ದರಂತೆ; ಅವರಿಗೆ ತಾಯಿ ಕರುಳು ಎಂಬುದು ಇರಲೇ ಇಲ್ಲವಾ?
ಎರಡು ನಿಮಿಷದ ಮಟ್ಟಿಗೆ, ಈ ಪ್ರಕರಣವನ್ನು ಮರೆತು ಯೋಚಿಸೋಣ: ನಮ್ಮ ಕುಟುಂಬದ ಹೆಣ್ಣು ಮಗಳನ್ನು ಮದುವೆ ಮಾಡಿಕೊಡುವ ಸಂದರ್ಭ ಬಂತು ಅಂದುಕೊಳ್ಳಿ. ಆಗ-ಹುಡುಗ ಹೇಗೆ? ಅವನ ಪ್ಲಸ್ ಪಾಯಿಂಟ್, ಮೈನಸ್ ಪಾಯಿಂಟ್ ಏನೇನು? ಹುಡುಗನ ತಾಯಿ ಹೇಗೆ? ಅವಳು ಘಟವಾಣಿಯೋ ಅಥವಾ ಸಾಫ್ಟ್ ಹೆಂಗಸೋ? ಹುಡುಗನ ಮನೆಯಲ್ಲಿ ಕಡೆಯ ಮಾತು ಯಾರದು? ಎಂದೆಲ್ಲಾ ವಿಚಾರಿಸುತ್ತೇವೆ. ಒಂದು ವೇಳೆ ಹುಡುಗನ ತಾಯಿ ಜೋರು ಮಾತಿನ ಹೆಂಗಸು ಎಂದು ಗೊತ್ತಾದರೆ- ಇಷ್ಟು ದಿನ ನಮ್ಮ ಮಗಳನ್ನು ಅರಗಿಳಿಯ ಥರಾ ಸಾಕಿದ್ವಿ. ಈಗ ಕಟುಕರ ಮನೆಗೆ ಬಿಡಬೇಕಾಗಿ ಬಂದಿದೆ ಎಂದು ಕೊರಗುತ್ತೇವೆ. ಮದುವೆಯ ವಿಷಯವಾಗಿ ಬಂಧುಗಳೊಂದಿಗೆ ಮಾತಾಡುವಾಗ- ಹುಡುಗನೇನೋ ಸಂಭಾವಿತ. ಆದರೆ ಅವನ ಹೆತ್ತವರು ಬಹಳ ಕಿರಿಕಿರಿಯ ಜನ ಎಂದು ವರದಿ ಒಪ್ಪಿಸುತ್ತೇವೆ. ಮದುವೆಯ ನಂತರ ಮಗಳನ್ನು ಕಳಿಸುವ ಸಂದರ್ಭದಲ್ಲಂತೂ -'ನಮ್ಮ ಮಗಳು ಏನಾದ್ರೂ ತಪ್ಪು ಮಾಡಿದ್ರೆ ದೊಡ್ಡ ಮನಸ್ಸು ಮಾಡಿ ಕ್ಷಮಿಸಿ ಬಿಡೀ...' ಎನ್ನುತ್ತಾ ಗೋಳಾಡಿಬಿಡುತ್ತೇವೆ.
ಹೌದು ತಾನೆ? ನಮ್ಮೆಲ್ಲರ ಬದುಕಿನಲ್ಲೂ ತಪ್ಪದೇ ಬಂದು ಹೋಗುವ ಸಂದರ್ಭಗಳಿವು. ಅಪ್ಪ-ಅಮ್ಮನಿಗೆ ಒಬ್ಬನೇ ಮಗ ಅನ್ನಿಸಿಕೊಂಡಿರುತ್ತಾನಲ್ಲ; ಅಂಥವನು ಕೂಡ, ಅತ್ತೆಯ ಮನೆಯಲ್ಲಿರುವ ತನ್ನ ಚಿಕ್ಕಪ್ಪ-ದೊಡ್ಡಪ್ಪನ ಮಗಳನ್ನು ಅಥವಾ ನಾದಿನಿಯನ್ನು ನೆನೆದು ಕಂಗಾಲಾಗುವುದುಂಟು. ಅತ್ತೆಯ ಕಾಟ ಎಂಬ ಯಾವುದೋ ಸುದ್ದಿ ಕಾಣಿಸಿದರೆ, ಯಾವುದೋ ಚಾನೆಲ್ನಲ್ಲಿ ಅಂಥದೊಂದು ಸುದ್ದಿ ಪ್ರಸಾರವಾದರೆ, ದೂರದ ಊರಿನಲ್ಲಿರುವ, ಹೆಣ್ಣು ಮಗಳನ್ನು ನೆನಪಿಸಿಕೊಂಡು ಕಂಬನಿ ಸುರಿಸುವುದುಂಟು. ಎಷ್ಟೋ ಸಂದರ್ಭಗಳಲ್ಲಿ 'ಸುದ್ದಿ'ಯಲ್ಲಿ ಕಂಡವಳ ಬದುಕಿಗೂ, ದೂರದ ಊರಲ್ಲಿರುವ ಸಂಬಂಧಿಯ ಜೀವನಕ್ಕೂ ಅಜಗಜಾಂತರವಿರುತ್ತದೆ. ಆದರೂ ನಮ್ಮ ಮನಸ್ಸೆಂಬುದು -ಸುದ್ದಿಯಲ್ಲಿ ಕಾಣಿಸಿದ 'ಇವಳ' ಸಂಕಟಕ್ಕೆ ದೂರದಲ್ಲಿರುವ 'ಅವಳ' ಬದುಕನ್ನು ತಾಳೆ ಹಾಕಿ ಮಮ್ಮಲ ಮರಗುತ್ತದೆ. ಗಂಡನ ಮನೆಯಲ್ಲಿ ಕಷ್ಟಪಡುವ ಹೆಣ್ಣು ಮಕ್ಕಳನ್ನು ನೆನಪಿಸಿಕೊಂಡು ನಿಂತಲ್ಲೇ ಕಣ್ಣೀರಾಗುವ ಮಂದಿ ನಮ್ಮ ಸುತ್ತಲೂ ಎಷ್ಟು ಜನರಿಲ್ಲ?
ಹೀಗೆ ಬದುಕು, ಸೆಂಟಿಮೆಂಟು, ಅತ್ತೆ-ಸೊಸೆಯ ಸಂಬಂಧ ಎಂದೆಲ್ಲಾ ಮಾತಾಡುವ ಸಂದರ್ಭದಲ್ಲಿಯೇ ಮದುವೆಯ ಬಗ್ಗೆಯೂ ಎರಡು ಮಾತು ಹೇಳಿಬಿಡಬೇಕು. ನನ್ನ ಪ್ರಕಾರ -ಮದುವೆ ಎಂಬುದು ಒಟ್ಟಿಗೇ ಬಾಳುವುದಕ್ಕೆ ಹುಡುಗ-ಹುಡುಗಿಗೆ ಬೇಕಿರುವ ಲೈಸೆನ್ಸ್. ನಮ್ಮ ಹಿಂದೂ ಸಂಪ್ರದಾಯದ ಪ್ರಕಾರ, ಒಮ್ಮೆ ಮದುವೆ ಆಯಿತೆಂದರೆ, ಆನಂತರದಲ್ಲಿ ಎದುರಾಗುವ ನೋವು-ನಲಿವು, ಆಸೆ-ವಿರಹ, ಸ್ನೇಹ- ದ್ವೇಷವನ್ನು ದಂಪತಿ ಅನ್ನಿಸಿಕೊಂಡವರು ಸಮನಾಗಿ ಹಂಚಿಕೊಳ್ಳಬೇಕು. ಹಾಗೆಯೇ, ಜಾತಿಯ ವಿಷಯಕ್ಕೆ ಬಂದರೆ- ದೈಹಿಕವಾಗಿ ಭಿನ್ನತೆ ಹೊಂದಿರುತ್ತಾರಲ್ಲ, ಅವರನ್ನು ಬೇರೊಂದು ಜಾತಿಯವರು ಎಂದು ಕರೆಯಬಹುದು. ಆ ಪ್ರಕಾರ- ಹೇಳುವುದಾದರೆ, ಈ ಜಗತ್ತಿನಲ್ಲಿ ಇರುವುದು ಎರಡೇ ಜಾತಿ. ಗಂಡು-ಹೆಣ್ಣು! ಇದೇ ಸತ್ಯ. ಇದೇ ವಾಸ್ತವ.
ಈಗ, ಮತ್ತೆ ಹಳೆಯ ವಿಷಯಕ್ಕೆ ವಾಪಸ್ ಬರೋಣ. ಹುಡುಗ ಅಂತರ್ಜಾತಿ ಮದುವೆ ಆಗಿರುವ ಕಾರಣದಿಂದ ಅವನ ತಂಗಿಯ ಮದುವೆ ನಡೆಯುವುದಿಲ್ಲ ಎಂಬ ಉದ್ದೇಶದಿಂದಲೇ ನಮ್ಮ ಮನೆಗೆ ಸೊಸೆಯಾಗಿ ಬಂದವಳನ್ನು ಕೊಂದು ಹಾಕಿದೆವು ಎಂದು ಆ ಕಟುಕ ಮನಸ್ಸಿನ ಜನರು ಹೇಳಿಕೆ ನೀಡಿದ್ದಾರಂತೆ. ತಮ್ಮ ಮಗಳಂತೆ, ತಂಗಿಯಂತೆ, ಅಜ್ಜಿಯಂತೆ, ತಾಯಿಯಂತೆಯೇ ಇದ್ದು, 'ತನ್ನವರು' ಎಂಬ ಎಲ್ಲರನ್ನೂ ಬಿಟ್ಟು ಗಂಡನ ಮನೆಗೆ ಬಂದಿದ್ದ ಒಂದು ಹೆಣ್ಣು ಜೀವವನ್ನು ಕೊಂದು ಹಾಕಲು ಆ ಪಾಪಿ ಹೆಂಗಸರಿಗೆ ಮನಸ್ಸಾದರೂ ಹೇಗೆ ಬಂತು? 'ಸೊಸೆ' ಅನ್ನಿಸಿಕೊಂಡ ಆ ಹುಡುಗಿಯ ಜೀವ ತೆಗೆಯಲು ಇವರೆಲ್ಲ ಪ್ರಯತ್ನಿದಾಗ ಆಕೆ ಪ್ರಾಣಭಯದಿಂದ, ಕಾಪಾಡುವವರಿಲ್ಲ ಎಂಬ ಸಂಕಟದಿಂದ ಚೀರಿಕೊಂಡಿದ್ದಾಳೆ. ಆಗ, ಕೊಲ್ಲಲು ನಿಂತಿದ್ದ ಜನರಿಗೆ ತಮ್ಮ 'ಮಗಳು' ನೆನಪಾಗಲಿಲ್ಲವಾ?
ಮರ್ಯಾದಾ ಹತ್ಯೆಯ ಸುದ್ದಿಯನ್ನು ಓದಿದ ದಿನದಿಂದ ಇಂಥ ಪ್ರಶ್ನೆಗಳು ಪದೇ ಪದೆ ಎದುರಾಗಿ ವಿಪರೀತ ಡಿಸ್ಟರ್ಬ್ ಮಾಡುತ್ತಿವೆ. ಸಂಕಟವನ್ನು ಅಂಗೈಲಿ ಹಿಡಿದುಕೊಂಡೇ ಹೇಳುತ್ತಿದ್ದೇನೆ. ಕಣ್ಮರೆಯಾದ ಆ ಅಮಾಯಕ ಸೋದರಿಯ ಆತ್ಮಕ್ಕೆ ಶಾಂತಿ ಸಿಗಲಿ. ಮರ್ಯಾದಾ ಹತ್ಯೆಗೆ ಕಾರಣರಾದ ಪಾಪಿಗಳಿಗೆ ಶಿಕ್ಷೆಯಾಗಲಿ.
- ನಾನು ಪ್ರಣತಿ