ಗುರಿ ತಲುಪುವ ಮುನ್ನ ಎದುರಾಗಲಿವೆ ಜಾತ್ಯತೀತ ಮುಳ್ಳುಗಳು

ಮಾತು ಮಾತಿಗೆ ಮೊಂಬತ್ತಿ ಉರಿಸುವುದು, ಪಾಕಿಸ್ತಾನದಿಂದ ನಿರಂತರವಾಗಿ ಭಾರತಕ್ಕೆ ಅಪಮಾನವಾಗುತ್ತಿದ್ದರೂ ಟ್ರ್ಯಾಕ್-2 ಡಿಪ್ಲೋಮಸಿಯ ಮಾಯಾಜಾಲದಲ್ಲಿ ಕರಾಚಿ, ಲಾಹೋರ್ ಮತ್ತು ಇಸ್ಲಾಮಾಬಾದ್ನತ್ತ ಶಾಂತಿಯ ಪತಾಕೆ ಹಿಡಿದು ಪಾಖಂಡಿ ಯಾತ್ರೆಯನ್ನು ಕೈಗೊಳ್ಳುವುದು, ಪತ್ರಿಕೆಗಳು, ಸುದ್ದಿವಾಹಿನಿಗಳು, ಮತ್ತು ಅನ್ಯ ಮಾಧ್ಯಮಗಳಲ್ಲಿ ಯಾವುದೇ ಕಾರಣಕ್ಕೂ ನರೇಂದ್ರ ಮೋದಿ ಪರ ಸುದ್ದಿಗಳು ಪ್ರಕಟವಾಗದಂತೆ ಎಚ್ಚರಿಕೆ ವಹಿಸುವುದು ಕೆಲವರಿಗೆ ಉದ್ಯೋಗವಾಗಿಬಿಟ್ಟಿದೆ.
ಯಾವುದೇ ಯಾತ್ರೆಯಿರಲಿ. ಅದರ ಕೊನೆಯ ಹಂತ ಅತ್ಯಂತ ಕಷ್ಟಕರವಾಗಿರವಾಗಿರುತ್ತದೆ. ದೀರ್ಘ ಪ್ರಯಾಣ ಪ್ರಯಾಸವೆನಿಸುವುದಿಲ್ಲ, ಆದರೆ ಗುರಿ ಹತ್ತಿವಾಗುತ್ತಿದ್ದಂತೆಯೇ ಅನೇಕ ಅಪಾಯಗಳು ಎದುರಾಗಿ ಆ ಚಿಕ್ಕ ಪಯಣವನ್ನೂ ಕ್ಲಿಷ್ಟಗೊಳಿಸಿಬಿಡುತ್ತವೆ. ಇನ್ನೇನು ನರೇಂದ್ರ ಮೋದಿಯವರು ಪ್ರಧಾನಮಂತ್ರಿ ಹುದ್ದೆಯನ್ನು ಅಲಂಕರಿಸಲು ಕೆಲವೇ ದಿನಗಳು ಉಳಿದಿವೆ ಎಂಬ ವಾತಾವರಣ ನಿರ್ಮಾಣವಾಗಿರುವ ವೇಳೆಯಲ್ಲೇ, ವಿರೋಧಿ ಬಣಗಳಲ್ಲಿ ಅಚಾನಕ್ಕಾಗಿ ಕೊನೆಯ ಪ್ರಯತ್ನಗಳ ಚಡಪಡಿಕೆಗಳು ಶುರುವಾಗಿರುವುದು ಗೋಚರವಾಗುತ್ತಿದೆ.
ಅಭದ್ರತೆಯಿಂದ ಹುಟ್ಟಿದ ಬೈಗುಳಗಳು, ಹೀನ ಪದ ಪ್ರಯೋಗಗಳು, ಕಪಟನಾಟಕಗಳು ದಿನೇ ದಿನೆ ಹೆಚ್ಚುತ್ತಲೇ ಇವೆ. ಇನ್ನೊಂದೆಡೆ ಯಾವ ನಾಯಕರು ತಮ್ಮ ಅಹಂಕಾರ ಮತ್ತು ಹುಬ್ಬುಗಂಟಿಕ್ಕಿ ಮಾತನಾಡುವುದಕ್ಕೆ ಹೆಸರುವಾಸಿಯಾಗಿದ್ದರೋ ಅವರೀಗ ವಿನಮ್ರತೆಯ ಸಾಕಾರ ಮೂರ್ತಿಗಳಂತೆ ವರ್ತಿಸುತ್ತಾ, ತಮ್ಮ ಹೃದಯದಲ್ಲಿ ಸಾಮಾನ್ಯ ಜನರ ಬಗ್ಗೆ ಎಷ್ಟು ಕಳಕಳಿ ಇದೆ ಎನ್ನುವುದನ್ನು ಘೋಷಿಸತೊಡಗಿದ್ದಾರೆ. ಅಚಾನಕ್ಕಾಗಿ ದಳ ಬದಲಿಸಿದವರತ್ತ 'ತೋಪು', 'ಬಂದೂಕುಗಳೆನಿಸಿಕೊಳ್ಳುತ್ತಿದ್ದ' ದಿಗ್ಗಜ ನೇತಾರರೇ ದೌಡಿಟ್ಟು ಮಂಡಿಯೂರುತ್ತಿರುವುದನ್ನು ನೋಡಿ ಹಳೆಯ ನಾಯಕರು ಮತ್ತು ಕಾರ್ಯಕರ್ತರು ಅಸಮಾಧಾನದ ಜೊತೆಗೆ ಗೊಂದಲಕ್ಕೂ ಒಳಗಾಗಿದ್ದಾರೆ. ಬೇರು ಮಟ್ಟದ ವಾಸ್ತವಿಕತೆ, ವಿಚಾರಧಾರೆಯ ಜೊತೆಗೆ ಸಂಬಂಧವೇ ಇಲ್ಲದೆ ಆಕಾಶದಲ್ಲೇ ಹಾರಾಡುತ್ತಿದ್ದವರು ಈಗ ಕೆಳಗಿಳಿದುಬಂದಿದ್ದೇಕೆ ಎಂಬ ಪ್ರಶ್ನೆ, ಅವರ ಜೊತೆ ಹೇಗೆ ಬೆರೆಯಬೇಕು ಎನ್ನುವ ಗೊಂದಲ ಕಾರ್ಯಕರ್ತರನ್ನು ಕಾಡುತ್ತಿದೆ.
ಆದರೆ ಇವರೆಲ್ಲರಿಗಿಂತಲೂ ರೋಚಕ ಬದಲಾವಣೆ ಆಗುತ್ತಿರುವುದು ಸೆಕ್ಯುಲರಿಸಂ ವಾದಿಗಳ ಪಕ್ಷದಲ್ಲಿ. ದೇಶದಲ್ಲಿ ಸೆಕ್ಯುಲರ್ ವಾದವನ್ನು ಉಳಿಸೇ ತೀರುತ್ತೇವೆ ಎಂದು ತೋಳೇರಿಸಿಕೊಂಡು ಘೋರ ಸಾಂಪ್ರದಾಯಿಕತೆ ಮತ್ತು ಜಾತಿವಾದವನ್ನು ಬಿತ್ತುವಲ್ಲಿ ನಿರತರಾಗಿಬಿಟ್ಟಿದ್ದಾರಿವರು! "ಮುಸಲ್ಮಾನರೆಲ್ಲರು ಜಾತ್ಯತೀತರಾಗಿದ್ದು ಸಾಕು, ಈಗ ಸ್ವಲ್ಪ ಕೋಮುವಾದಿಗಳಾಗಬೇಕು. ಅವರೆಲ್ಲರೂ ಯಾವುದೋ ಒಂದು ಪಕ್ಷದ ನೀತಿ, ಸಿದ್ಧಾಂತಗಳ ವಿರುದ್ಧವಲ್ಲದೆ, ಕೇವಲ ಒಬ್ಬ ವ್ಯಕ್ತಿಯ ವಿರುದ್ಧವಾಗಿ (ತಮ್ಮ ಶತ್ರುವಿನ) ಮತದಾನ ಮಾಡಬೇಕು" ಎಂದು ಹೇಳುವುದು ಈಗ ಸೆಕ್ಯುಲರಿಸಂನ ಹೊಸ ವ್ಯಾಖ್ಯಾನವಾಗಿದೆ. ಬಹುಶಃ ಈ ರೀತಿಯಲ್ಲಿ ಮಾತನಾಡುತ್ತಲೇ ಜಾತ್ಯತೀತತೆಯ ಪರಿಪಾಲಕರೆಂದು ಕರೆಸಿಕೊಳ್ಳುವುದಕ್ಕೆ ಬಹುಶಃ ಭಾರತದಲ್ಲಷ್ಟೇ ಸಾಧ್ಯವೇನೋ?!
ಇತ್ತೀಚಿನ ದಿನಗಳಲ್ಲಂತೂ ಸಮಾಚಾರ ಪತ್ರಿಕೆಗಳಲ್ಲಿ ಮತ್ತು ಸುದ್ದಿ ವಾಹಿನಿಗಳಲ್ಲಿ ಒಬ್ಬ ವ್ಯಕ್ತಿಯ ವಿರುದ್ಧವಾಗಿ ಮತ ಹಾಕುವಂತೆ ಮುಸ್ಲಿಂ ಮತದಾರರನ್ನು ಪ್ರಚೋದಿಸುವ ಕೆಲಸಗಳು ನಿರಂತರವಾಗಿ ನಡೆಯುತ್ತಿವೆ. ನಗೆಯುಕ್ಕಿಸುವ ಸಂಗತಿಯೆಂದರೆ ಈ ರೀತಿ ಪ್ರಚೋದನೆಗಿಳಿದಿರುವವರು ಎಂದಿಗೂ ಜಾತ್ಯತೀತತೆಯನ್ನು ನಿಜಕ್ಕೂ ಪಾಲಿಸಿದವರಲ್ಲ. ಮಾತು ಮಾತಿಗೆ ಮೊಂಬತ್ತಿ ಉರಿಸುವುದು, ಹಿಂದು ಆತಂಕವಾದ ಎಂದು ಬೊಬ್ಬಿಟ್ಟು ದ್ವೇಷದ ಸಸಿಗಳನ್ನು ನೆಡುವುದು, ಪಾಕಿಸ್ತಾನದಿಂದ ನಿರಂತರವಾಗಿ ಭಾರತಕ್ಕೆ ಅಪಮಾನವಾಗುತ್ತಿದ್ದರೂ ಟ್ರ್ಯಾಕ್-2 ಡಿಪ್ಲೋಮಸಿಯ ಮಾಯಾಜಾಲದಲ್ಲಿ ಕರಾಚಿ, ಲಾಹೋರ್ ಮತ್ತು ಇಸ್ಲಾಮಾಬಾದ್ನತ್ತ ಶಾಂತಿಯ ಪತಾಕೆ ಹಿಡಿದು ಪಾಖಂಡಿ ಯಾತ್ರೆಯನ್ನು ಕೈಗೊಳ್ಳುವುದು, ಪತ್ರಿಕೆಗಳು, ಸುದ್ದಿವಾಹಿನಿಗಳು, ಮತ್ತು ಅನ್ಯ ಮಾಧ್ಯಮಗಳಲ್ಲಿ ಗುಲಾಗ್ ಮತ್ತು ಸೈಬೀರಿಯಾಗಳನ್ನು ಹುಟ್ಟುಹಾಕಿ, ಯಾವುದೇ ಕಾರಣಕ್ಕೂ ನರೇಂದ್ರ ಮೋದಿ ಮತ್ತು ಹಿಂದುತ್ವದ ಸಮರ್ಥಕರ ಪರವಾಗಿ ಸುದ್ದಿಗಳು ಪ್ರಕಟವಾಗದಂತೆ ಎಚ್ಚರಿಕೆ ವಹಿಸುವುದು..ಈಗಂತೂ ಜೋರಾಗಿಬಿಟ್ಟಿದೆ. ಆದರೆ ಈಗ ಸೋಲಿನ ಭಯ ಅವರನ್ನು ಎಷ್ಟೊಂದು ಕಾಡತೊಡಗಿದೆಯೆಂದರೆ, ನೈತಿಕತೆಯನ್ನು ಕಾಲಲ್ಲಿ ತುಳಿದು ಯಾವ ಹೀನ ಮಟ್ಟಕ್ಕಾದರೂ ಇಳಿಯಲು ಅವರೆಲ್ಲ ಸಿದ್ಧರಾಗಿರುವಂತೆ ಕಾಣುತ್ತಿದೆ.
ಈಗ ಇವರಿಗೆಲ್ಲ ಯಾವ ಹೊಲಸೂ ಹೊಲಸಲ್ಲ. ಸಾಂಪ್ರದಾಯಿಕ ವರ್ಗವಾದವೇ ಈಗ ಇವರ ಸೆಕ್ಯುಲರ್ ರಕ್ಷಾ ಕವಚವಾಗಿದೆ! ಪರಾಜಯವನ್ನು ಧೈರ್ಯದಿಂದ ಎದುರಿಸದೇ, ಅಭದ್ರತೆಯ ಭಾವದಿಂದ ಎದುರಾಗಲಿರುವ ಸೋಲನ್ನು ಅಲ್ಲಗಳೆಯುತ್ತಿರುವುದನ್ನು ನೋಡಿದರೆ ಅವರ ಮನಸ್ಸಿನಲ್ಲಿ ಎಷ್ಟೊಂದು ಒದ್ದಾಟ ನಡೆದಿದೆ ಎನ್ನುವುದು ಅರ್ಥವಾಗುತ್ತದೆ.
ಇವರ ಇಡೀ ಚುನಾವಣೆಯ ಚರ್ಚೆ ಕೇವಲ ಒಬ್ಬೇ ಒಬ್ಬ ನಾಯಕನ ಗೆಲುವು-ಸೋಲಿನ ಸುತ್ತಲೇ ಇವರ ಗಿರಕಿ ಹೊಡೆಯತೊಡಗಿದೆ. ಆರ್ಥಿಕ ವಿಕಾಸ, ಭ್ರಷ್ಟಾಚಾರ, ಬಡತನ, ಮಹಿಳಾ ಸಶಕ್ತೀಕರಣ, ಗಡಿ ರೇಖೆಯಲ್ಲಿ ಸುರಕ್ಷೆ ಮತ್ತು ಸೈನಿಕರ ಸಮ್ಮಾನ ಮುಖ್ಯ ವಿಷಯಗಳಾಗಬೇಕು. ಇವರೆಲ್ಲ ಮೊದ ಮೊದಲು ಈ ವಿಷಯಗಳನ್ನೆಲ್ಲ ಚುನಾವಣಾ ಪ್ರಚಾರದ ಭಾಗವಾಗಿ ಎತ್ತಿಕೊಂಡದ್ದು ನಿಜ. ಆದರೆ ಬರಬರುತ್ತಾ ಭ್ರಷ್ಟಾಚಾರ ನಿರ್ಮೂಲನೆ ಮತ್ತು ಆರ್ಥಿಕ ವಿಕಾಸದ ವಿಷಯಗಳೆನ್ನೆಲ್ಲ ಮೂಲೆಗೆಸೆದು ಕೇವಲ "ಹಿಂದು-ಮುಸ್ಲಿಂ" ಮತ್ತು "ಗುಜರಾತ್ ಗಲಭೆ" ಎಂಬ ವಿಷಯಗಳನ್ನೇ ರಾಷ್ಟ್ರೀಯ ಚರ್ಚೆಯಲ್ಲಿ ಎಳೆದು ತಂದು ಜಗ್ಗಾಡತೊಡಗಿದರು. ಇದರಿಂದ ಯಾರಿಗೆ ನೆಮ್ಮದಿ ಸಿಕ್ಕಿತು? ಯಾರಿಗೆ ಲಾಭವಾಯಿತು?
ಪ್ರಿಯಾಂಕಾ ಗಾಂಧಿಯವರಿಗಂತೂ ದೇಶ ಮತ್ತು ಪ್ರಪಂಚವೆನ್ನುವುದು ಕೇವಲ ತಮ್ಮ ಪರಿವಾರದ ಮಟ್ಟಿಗಷ್ಟೇ ಸೀಮಿತವಾಗಿಬಿಟ್ಟಿದೆ. ಇಲ್ಲದಿದ್ದರೆ ಅವರು ರಾಹುಲ್ ಬದಲು ಬೇರೆ ನಾಯಕರಿಗೆ ಸಹಾಯ ಮಾಡಲು ಮುಂದಾಗುತ್ತಿದ್ದರಲ್ಲವೇ? ಚುನಾವಣಾ ಪ್ರಚಾರವನ್ನು ಬರೀ ರಾಹುಲ್ ಬಾಬಾಗೆ ಅವರು ಸೀಮಿತಗೊಳಿಸಿದ್ದೇಕೆ? ಬೇರೆ ನಾಯಕರನ್ನು ಗೆಲ್ಲಿಸಲು ಅವರೇಕೆ ಮುತುವರ್ಜಿ ವಹಿಸುತ್ತಿಲ್ಲ? "ನನ್ನ ತಂದೆ ಮತ್ತು ನನ್ನ ಸಹೋದರನ ಮೇಲೆ ವಾಗ್ದಾಳಿ ನಡೆಸುತ್ತಿರುವುದೇಕೆ?" ಎಂದು ಪ್ರಿಯಾಂಕಾ ಬಹಳ ಗಂಭೀರವಾಗಿ ಕೇಳುತ್ತಾರೆ. ಅವರ ಧ್ವನಿಯಲ್ಲಿ ಈ ರೀತಿ ವೈಯಕ್ತಿಕ ದಾಳಿಗಳು ಸರಿಯಲ್ಲ ಎಂಬ ಸಂದೇಶ ಅಡಗಿರುವಂತೆ ಕಾಣುತ್ತದೆ. ಆದರೆ ಅವರದ್ದೇ ಕಾಂಗ್ರೆಸ್ ನಾಯಕರು ನರೇಂದ್ರ ಮೋದಿಯವರ ಮೇಲೆ ನಿರಂತರವಾಗಿ ನಡೆಸುತ್ತಾ ಬಂದಿರುವ ಕೀಳು ಮಟ್ಟದ ಭಾಷಾ ಪ್ರಯೋಗವನ್ನು, ವ್ಯಕ್ತಿಗತ ಆಕ್ರಮಣವನ್ನು ಎಂದಾದರೂ ಪ್ರಿಯಾಂಕಾ ಖಂಡಿಸಿದ್ದಾರೆಯೇ? ನಪುಂಸಕ, ಹಿಟ್ಲರ್ನಂಥ ಪದಾಸ್ತ್ರಗಳನ್ನು ಬಳಸಿದವರ್ಯಾರು? ಶುರುವಾತು ಯಾರಿಂದ ಆಯಿತು?
ಈ ಅತಿ ಧನಿಕ ವರ್ಗದ ಮಾನಸಿಕ ಸ್ಥಿತಿಯೇ ಹೀಗಿರುತ್ತದೆ. ಬೇರೆಯವರ ಬಗ್ಗೆ ಮಾತನಾಡಿದರೆ, ಪ್ರಶ್ನಿಸಿದರೆ ತೊಂದರೆ ಇಲ್ಲ. ಆದರೆ ತಮ್ಮ ಬಗ್ಗೆ ಮಾತ್ರ ಯಾರೂ ತುಟಿ ಬಿಚ್ಚಬಾರದು! ಒಂದು ವೇಳೆ ಯಾರಾದರೂ ಪ್ರಶ್ನಿಸಿದರೆಂದರೆ ಕೂಡಲೇ ಅವರನ್ನು ದೇಶದ ಶತ್ರುವನ್ನಾಗಿ ಬಿಂಬಿಸಲು ಸಕಲ ಪ್ರಯತ್ನವನ್ನು ಮಾಡಲಾಗುತ್ತದೆ. ಇವರಿಗೆಲ್ಲ ದೇಶಕ್ಕಿಂತ ತಮ್ಮ ಅಸ್ತಿತ್ವವೇ ಅತಿ ಮುಖ್ಯವಾದದ್ದು. ಬೇರೆಯವರ ಮಾತು ಬಿಡಿ, ಕಾಂಗ್ರೆಸ್ನ ರಾಜಕುಟುಂಬದಿಂದ ಬರದ ವ್ಯಕ್ತಿಯೊಬ್ಬರು ಪ್ರಧಾನ ಮಂತ್ರಿಗಳಾದರಲ್ಲ ಅವರ ವಿಷಯವನ್ನೇ ತೆಗೆದುಕೊಳ್ಳಿ. ಆರ್ಥಿಕ ಸುಧಾರಣೆಗಳನ್ನು ಶುರು ಮಾಡಿದ ನರಸಿಂಹ ರಾವ್ ಅವರನ್ನು ಇವರೆಲ್ಲ ಒಂದೇ ಒಂದು ಬಾರಿಯಾದರೂ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ನೆನೆಪು ಮಾಡಿಕೊಂಡರೇ? ನರಸಿಂಹ ರಾವ್ ಮಾಡಿದ ಆರ್ಥಿಕ ಸುಧಾರಣೆಗಳ ಬಗ್ಗೆ ಡಾ. ಮನಮೋಹನ್ ಸಿಂಗ್ ಅವರಂತೂ ಮಾತನಾಡಿದ್ದು ಕೇಳಿಲ್ಲ. ಅಂದರೆ ರಾಜಕುಟುಂಬಕ್ಕೆ ಸೇರದ ವ್ಯಕ್ತಿಯೊಬ್ಬ ಎಷ್ಟೇ ಸಫಲನಾದರೂ ಆತನ ಕುರಿತು ಪ್ರಸ್ತಾಪ ಮಾಡುವಂತಿಲ್ಲ!
ಲೋಕತಂತ್ರ ಭದ್ರತೆಯ ಪ್ರತಿರೂಪವೇ ಹೊರತು, ಅರಾಜಕತೆಯ ಬಿಂಬವಲ್ಲ. ಯಾರಿಗೆ ತಮ್ಮ ಶಕ್ತಿಯ ಮೇಲೆ ನಂಬಿಕೆಯಿದೆಯೋ, ಅವರು ಇನ್ನೊಬ್ಬರ ಮೇಲೆ ಎಂದಿಗೂ ಹೀನ ದಾಳಿಗೆ ಮುಂದಾಗುವುದಿಲ್ಲ. ಅಟಲ್ ಜೀ ಅವರ ಪಾಠಶಾಲೆಯಲ್ಲಿ ಓದಿದವರ್ಯಾರೂ ಶತ್ರುಗಳ ಮೇಲೆ ಕೆಟ್ಟ ಪದಗಳ ಪ್ರಯೋಗ ಮಾಡುವವರಲ್ಲ.
ನರೇಂದ್ರ ಮೋದಿ ಚುನಾವಣೆಗೂ ಮೊದಲೇ ಗೆದ್ದಿರುವಂತೆ ಕಾಣಿಸುತ್ತಿರುವುದಕ್ಕೆ, ಜನತೆಗೆ ಅವರ ಮಾತುಗಳಿಂದ ಧೈರ್ಯ ಸಿಗುತ್ತಿದೆ ಎನುವುದೇ ಕಾರಣ. ಈ ಸಂಗತಿ ವಿರೋಧಿಗಳಿಗೂ ಚೆನ್ನಾಗಿ ಗೊತ್ತಿದೆ. ಪಾಕಿಸ್ತಾನ ಕೂಡ ಮೋದಿಯವರ ಮಾತು ಕೇಳಿ ದಂಗು ಬಡಿದಂತೆ ವರ್ತಿಸುತ್ತಿದೆ. ಏಕೆಂದರೆ ಮೋದಿ ಸರ್ಕಾರದ ದೆಹಲಿ ದರ್ಬಾರ್ ಭಯೋತ್ಪಾದನೆಯ ವಿರುದ್ಧ ಸಮಜಾಯಿಷಿ ಮಾಡಿಕೊಳ್ಳದು ಎನ್ನುವುದು ಅದಕ್ಕೂ ಗೊತ್ತಿದೆ. ಮೊದಲ ಬಾರಿಗೆ ನಾಯಕನೊಬ್ಬ ಚೀನಾ ಮತ್ತು ಪಾಕಿಸ್ತಾನಕ್ಕೆ ಎಚ್ಚರಿಕೆ ಕೊಡುವ ಕೆಚ್ಚೆದೆಯನ್ನು ತೋರಿಸಿದ್ದಾನೆ. ಮೊದಲ ಬಾರಿಗೆ ನಾಯಕನೊಬ್ಬ ಕಾಶ್ಮೀರಿ ಹಿಂದುಗಳ ಮೇಲೆ ಜಿಹಾದಿಗಳು ನಡೆಸಿದ ದೌರ್ಜನ್ಯವನ್ನು ಜೋರಾಗಿಯೇ ಖಂಡಿಸಿ, ಸೆಕ್ಯುಲರ್ ಮಂದಿಯನ್ನು ಪ್ರಶ್ನಿಸಿದ್ದಾನೆ. ಮೊದಲ ಬಾರಿಗೆ ನಾಯಕನೊಬ್ಬ ತನ್ನ ವ್ಯಕ್ತಿತ್ವ ಮಾತ್ರದಿಂದಲೇ ಇಡೀ ಚುನಾವಣೆಯ ಚಹರೆಯನ್ನೇ ಬದಲಿಸಿಬಿಟ್ಟಿದ್ದಾನೆ.
ಈಗ ಈ ಕೊನೆಯ ಹಂತದ ಯಾತ್ರೆ ಆರಂಭಗೊಂಡಿದೆ. ಈ ವೇಳೆಯಲ್ಲಿ ಶಬ್ದ ಹಿಂಸೆಗಳು, ತುಚ್ಛ ಮಾತುಗಳ ಪ್ರಹಾರಗಳು ಕಡಿಮೆಯಾಗಿ ದೇಶದಲ್ಲಿ ಬದಲಾವಣೆಯ ಹೊಸ ಗಾಳಿ ಬೀಸಲಿ. ಎಲ್ಲರೂ ಆ ಬದಲಾವಣೆಯನ್ನು ಸ್ವಾಗತಿಸಲಿ. ಆಗ ಮಾತ್ರ ಭಾರತ ಗೆಲ್ಲುತ್ತದೆ.
-ತರುಣ್ ವಿಜಯ್
tarunvijay2@yahoo.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


