ಅಂಕಣಗಳು

ಮೋದಿ ಪರ್ವ ಬಂದರೆ ಮಾಧ್ಯಮದ್ದೇನು ಗ್ರಹಗತಿ?

Published On :

ಯಾರದ್ದೆಲ್ಲ ಸ್ವಗತ ಹೆಕ್ಕುವುದಕ್ಕೆ ಭಲೇ ಚೆನ್ನಾಗಿರುತ್ತೆ. ಆದರೆ, ಬದಲಾವಣೆ ಹೊಸ್ತಿಲಲ್ಲಿ ಮಾಧ್ಯಮ ಮಂದಿಯಲ್ಲೇ ಒಂದಿಷ್ಟು ಮಂದಿಯ ತಳಮಳ ಅದೆಂಥಾದ್ದೋ...

ಮೋದಿ ಸರ್ಕಾರ ಬಂದರೆ ಸೆಕ್ಯುಲರಿಸಮ್‌ಗೆ ಹಾನಿಯಾಗಬಹುದಾ? ಮೋದಿ ಸರ್ವಾಧಿಕಾರಿಯಂತೆ ಆಡಳಿತ ನಡೆಸಿಬಿಡಬಹುದಾ? ನರೇಂದ್ರ ಮೋದಿ ಆಡಳಿತವೇ ನಿಜವಾಗುವ ಕಾಲ ಬಂದರೆ ಅವರ ಪಕ್ಷದಲ್ಲೇ ಹಿರಿತಲೆಗಳ ಸ್ವಗತಗಳು ಹೇಗಿದ್ದಿರಬಹುದು? ಮೋದಿ ಆಡಳಿತದಲ್ಲಿ ರಾಜಕೀಯ ಎದುರಾಳಿಗಳ ಸ್ಥಿತಿ ಹೇಗಾಗಬಹುದು? ಮೋದಿ ಬೌದ್ಧಿಕ ವರ್ಗವನ್ನು ಹೇಗೆ ನಡೆಸಿಕೊಂಡಾರು?- ಹೀಗೆ ಇನ್ನೂ ಹತ್ತು ಹಲವು ಆಯಾಮಗಳ ಬಗ್ಗೆ ನಾವೊಂದಿಷ್ಟು ಮಂದಿ ಲೇಖನ- ಟಿವಿ ವಿಶ್ಲೇಷಣೆ ಎಲ್ಲ ಮಾಡಿಬಿಟ್ಟಿದ್ದೇವೆ. ಮೋದಿ ಸರ್ಕಾರವೇ ಬಂದುಬಿಟ್ಟರೆ ಕೋಮು ಸಾಮರಸ್ಯವೂ ಸೇರಿದಂತೆ ಹಲವು ವಿಷಯಗಳಿಗೆ ಗಂಭೀರ ಆಘಾತವಿದೆ ಅಂತಲೂ ತುತ್ತೂರಿ ಊದಿ ಬಿಟ್ಟಿದ್ದೇವೆ.
ಆದರೆ, ನಮಗೆ ನಿಜಕ್ಕೂ ದಿಗಿಲಿರುವ ವಿಷಯ ಎಂದರೆ ಮೋದಿ ಪರ್ವ ತೆರೆದುಕೊಂಡರೆ ದೇಶಕ್ಕೆ ಏನಾಗುತ್ತದೆ, ಏನಾಗುವುದಿಲ್ಲ ಎನ್ನುವುದಲ್ಲ. ನಾವು ನಿರ್ಮಿಸಿಕೊಂಡಿರುವ ಮಾಧ್ಯಮ ಸಾಮ್ರಾಜ್ಯಕ್ಕೆ, ತೀರ ನಿಖರವಾಗಿ ಹೇಳಬೇಕೆಂದರೆ ಆ ಸಾಮ್ರಾಜ್ಯದಲ್ಲಿರುವ 'ನಮಗೆ ಕೆಲವರಿಗೆ' ಏನಾಗಿಬಿಡಲಿದೆಯೋ ಅಂತ ಆತಂಕವಿದೆ. ಹೀಗಾಗಿ ನಾವು ಸೆಕ್ಯುಲರಿಸಂ, ಮಾಧ್ಯಮ ಸ್ವಾತಂತ್ರ್ಯ, ಸರ್ವಾಧಿಕಾರಿ ಧೋರಣೆ ಅಂತೆಲ್ಲ ಕತೆ ಹೆಣೆಯುವ ಒತ್ತಡಕ್ಕೆ ಸಿಲುಕಿದ್ದೇವೆ.
ಮೋದಿ ವಿಷಯದಲ್ಲಿ ಎದುರಿಸಿದ ಸಂದಿಗ್ಧ ಇನ್ಯಾವುದರಲ್ಲೂ ಎದುರಿಸಿಲ್ಲ ಬಿಡಿ. ಈ ವ್ಯಕ್ತಿ ಪ್ರಧಾನಿ ಪಟ್ಟಕ್ಕೆ ಹತ್ತಿರವಾಗುವಷ್ಟು ಬೆಳೆದುಬಿಡುತ್ತಾರೆ ಅಂತಿದ್ದರೆ ಮೊದಲೇ ಎಚ್ಚರಿಕೆ ವಹಿಸಬಹುದಿತ್ತೇನೋ? ಮೊದಲು ಸಿಕ್ಕಾಪಟ್ಟೆ ಟೀಕೆ ಮಾಡಿಯಾಯ್ತು. ಅವನ್ನೆಲ್ಲ ಮೀರಿ ಬೆಳೆದಾಗ ಟೀಕೆ ಕಡಿಮೆ ಮಾಡಿ ಪ್ರಚಾರವನ್ನೂ ಕಡಿಮೆ ಮಾಡಿಬಿಟ್ಟರೆ ಹೇಗೆ ಅಂತಲೂ ಯೋಚಿಸಿದೆವು. ಆದರೆ ಈ ಮನುಷ್ಯನ ಎದುರಾಳಿಯ ಭಾಷಣವನ್ನು ಟಿವಿಯಲ್ಲಿ ತೋರಿಸಿದರೆ, ಪತ್ರಿಕೆಯಲ್ಲಿ ಹೊಗಳಿ ಬರೆದರೆ ಜೋಕಿಗಾದರೂ ಗಮನಕ್ಕೆ ತೆಗೆದುಕೊಳ್ಳದಷ್ಟು ಜನ ತಣ್ಣಗಾದರೆ ನಾವೇನು ಮಾಡೋಣ ಹೇಳಿ? ಸರಿ. ನೋಡೋಣ ಅಂತ ಈ ಮೋದಿ ಮಹಾರಾಯರ ಪಕ್ಕದಲ್ಲಿ ಕೆಮರಾ ಇರಿಸಿದರೆ ಟಿಆರ್‌ಪಿ ಜ್ವರ ಬಂದಂತೆ ಏರಬೇಕೇ? ನಾವವರ ಬೆಂಬತ್ತುವುದು ಅನಿವಾರ್ಯವಾಯ್ತು. ಚುನಾವಣೆ ರಂಗೇರಿದಂತೆ ವಿಷಯವಾಗಿದ್ದೇ ಮೋದಿ. ನಾವು ಸೆಟ್ ಮಾಡುವ ಅಜೆಂಡಾ ಕೇಳುವವರ್ಯಾರು? ಮೋದಿ ಹೇಳಿದ್ದೇನು ಎಂಬುದರ ಮೇಲೆಯೇ ಪರ-ವಿರೋಧಗಳ ಚರ್ಚೆ. ಮೋದಿ ಆಡುವ ಪ್ರತಿ ಮಾತಿಗೂ ಕ್ಯಾಮರಾ-ಮೈಕುಗಳೊಂದಿಗೆ ಹಿಂಬಾಲಿಸುವುದು ಅನಿವಾರ್ಯ.
ಮೋದಿ ಬಂದರೆ ಮಾಧ್ಯಮಕ್ಕೆ ಮೊದಲು ಮೂಗುದಾರ ಹಾಕುತ್ತಾರೆ ಅಂತ ಕೆಲ ಸಾಹಿತಿ-ಬುದ್ಧಿಜೀವಿಗಳು ಉಸುರಿದ್ದಾರೆ. ಆದರೆ ನಮಗೆ ನಿಜ ಗೊತ್ತು. ಅವರು ಹಾಗೆಲ್ಲ ಮಾಡಿ ಸರ್ವಾಧಿಕಾರಿಯೆನಿಸುವ ಪೆದ್ದುತನ ಮಾಡುವುದಿಲ್ಲ. ಅವರೇನು ಮಾಡುತ್ತಾರೆಂದರೆ, 'ಮುಖ್ಯವಾಹಿನಿ' ಅಂತ ಕರೆಸಿಕೊಳ್ಳುತ್ತಿರುವ ಮಾಧ್ಯಮ ಲೋಕವನ್ನೇ ಅಪ್ರಸ್ತುತ ಎನ್ನಿಸಿ ಪರ್ಯಾಯವೊಂದನ್ನು ಕಣ್ಣು ಕುಕ್ಕಿಸಿ ಬಿಡುತ್ತಾರೆ. ಪ್ರಾರಂಭದಿಂದ ಮೋದಿ ಬಳಸಿಕೊಂಡಿದ್ದೇ ಸಾಮಾಜಿಕ ಜಾಲತಾಣಗಳನ್ನು. ಗೂಗಲ್ ಹ್ಯಾಂಗ್‌ಔಟ್‌ನಲ್ಲಿ ಚರ್ಚೆ ನಡೆಸಿ, ನಿಮ್ಮ ಆಂಗ್ಲವಾಹಿನಿಗಳೇನು ಮಹಾ ಎಂಬ ಸಂದೇಶ ಕೊಟ್ಟರು. ಟ್ವಿಟ್ಟರ್‌ನಲ್ಲೇ ಜನರನ್ನು ಸೆಳೆದರು. ಟೀಕೆಗಳಿಗೆ ಅವರ ಬೆಂಬಲಿಗರು ಅಲ್ಲೇ ಉತ್ತರಗಳನ್ನು ನೀಡುತ್ತ ಹೋದರು. ನಾವು ತಪ್ಪಾಗಿ ಟೀಕಿಸಿದಾಗ ಅಲ್ಲೇ ತರಾಟೆಗೆ ತೆಗೆದುಕೊಂಡರು. ಯಾರಿಗೂ ನಮ್ಮ ಸಂಸ್ಥೆಗಳ ಬಾಗಿಲು ತಟ್ಟಲೇಬೇಕಾದ ಅನಿವಾರ್ಯತೆಯೇ ಬರಲಿಲ್ಲ. ಆಡ್ವಾಣಿಯವರನ್ನೂ ಕೋಮುವಾದಿ, ವಿಭಜಕ ಅಂತಲೇ ಈ ಮೊದಲು ಟೀಕಿಸಿದ್ದೆವಾದರೂ ಹಿಂದಿನ ಬಾರಿ ಪ್ರಧಾನಿ ಅಭ್ಯರ್ಥಿಯಾಗಿದ್ದಾಗ ಅವರು ನಮ್ಮನ್ನು ಓಲೈಸುವುದಕ್ಕೆ ಮರೆಯಲಿಲ್ಲ. ನಮ್ಮಲ್ಲಿ ಕೆಲವರು ಯಾವುದಕ್ಕೂ ಇರಲಿ ಅಂತ ಅಷ್ಟೆಲ್ಲ ಟೀಕಿಸಿದ್ದ ಅವರಿಗೆ 'ಲೈಫ್‌ಟೈಮ್ ಅಚೀವ್‌ಮೆಂಟ್‌' ಅಂತ ಪ್ರಶಸ್ತಿಯನ್ನೂ ಕೊಟ್ಟಿದ್ದೆವು. ಈ ಸಾರಿ ಸ್ಟಾರ್‌ಗಿರಿಯ ಪತ್ರಕರ್ತರನ್ನೆಲ್ಲ ಮೋದಿ ಕಣ್ಣೆತ್ತಿಯೂ ನೋಡಲಿಲ್ಲ. ಹೆಚ್ಚಿನ ಸಂದರ್ಶನಗಳನ್ನೆಲ್ಲ ಸ್ಥಳೀಯ ನೆಟ್‌ವರ್ಕ್‌ನ ವಾಹಿನಿಗಳಿಗೆ ಕೊಟ್ಟುಬಿಟ್ಟರು. ಮುಖ್ಯವಾಹಿನಿಯ ವಿಜೃಂಭಿತರಿಗೆ ಒಂದೆರಡು ಸಂದರ್ಶನ ನೀಡಿದಾಗಲೂ ಅಬ್ಬರಿಸುವುದಕ್ಕೆ ಬಿಡದೇ ತಾವೇ ಉಲ್ಟಾ ಪ್ರಶ್ನೆ ಕೇಳಿ ನೀರಿಳಿಸಿದರು! ನಮಗೆ ಬೇಕಾದಂತೆ ಎಡಿಟ್ ಮಾಡಿ ಹಾಕೋಣವೆಂದರೆ ತಮ್ಮದೂ ಒಂದು ಕ್ಯಾಮರಾ ಇಟ್ಟಿರುತ್ತಿದ್ದರು.
ಮೋದಿ ಆಡಳಿತದ ಮಾಧ್ಯಮ ನೀತಿ ಹೇಗಿರಬಹುದು ಅನ್ನೋದಕ್ಕೆ ಇಲ್ಲೆಲ್ಲ ಸೂಚನೆ ಸಿಗುತ್ತಿದೆ. ಹಾಗೆಂದೆ ನಮಗೆ ಕೆಲವರಿಗೆ ಅಸ್ತಿತ್ವದ ಭಯ ಕಾಡಿದೆ.  

-ಅಶ್ವಹೃದಯ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.