ಅಂಕಣಗಳು

ಇಷ್ಟಕ್ಕೂ ಬಾರು ಬರೆದದ್ದು ಪ್ರಧಾನಿ ಚಿತ್ರಣವೇನಲ್ಲ

ಇಷ್ಟಕ್ಕೂ ಬಾರು ಬರೆದದ್ದು ಪ್ರಧಾನಿ ಚಿತ್ರಣವೇನಲ್ಲ
Published On :

ಯುಪಿಎ-1ರ ಅವಧಿಯಲ್ಲಿ ಪ್ರಧಾನಿ ಮನಮೋಹನ ಸಿಂಗ್ ಅವರ ಮಾಧ್ಯಮ ಸಲಹೆಗಾರರಾಗಿದ್ದ ಸಂಜಯ್ ಬಾರು ಅವರ 'ದಿ ಆ್ಯಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್‌' ಕೃತಿಗೆ ಕಾಂಗ್ರೆಸ್ ವಕ್ತಾರ ಅಭಿಷೇಕ್ ಮನು ಸಿಂಘ್ವಿ ಕೊಟ್ಟ ಪ್ರತಿಕ್ರಿಯೆ ಹೀಗಿತ್ತು- 'ದುರಾಸೆ, ವ್ಯಾವಹಾರಿಕ ಲಾಭ, ಮಹಾತ್ವಾಕಾಂಕ್ಷೆ ಹಾಗೂ ರೋಚಕತೆ ಹುಟ್ಟುಹಾಕುವ ತವಕ ಇವೆಲ್ಲವೂ ಮಿಳಿತಗೊಂಡು ತುಂಬ ಕೆಟ್ಟದಾದ ಕಾಕ್‌ಟೇಲ್ ಒಂದನ್ನು ಸೃಷ್ಟಿಸಿದೆ.'
ಇದೇ ಅಭಿಪ್ರಾಯವನ್ನು ಧ್ವನಿಸಿದ ಹೇಳಿಕೆಗಳನ್ನೆಲ್ಲ ಕೇಳಿಕೊಂಡೇ ಪುಸ್ತಕ ಓದುವ ಆಸಕ್ತಿ ಇಲ್ಲದ ಸಾವಿರಾರು ಮಂದಿಯೂ ಈ ಪುಸ್ತಕವನ್ನು ಕೊಂಡುಕೊಂಡರು. ಹಿಂದೊಮ್ಮೆ ಬಾರು ಅವರು ನನ್ನ ಸಹೋದ್ಯೋಗಿ ಆಗಿದ್ದರಾದ್ದರಿಂದ ಹಾಗೂ ನಾನು ಮನಮೋಹನ್ ಸಿಂಗ್ ಅವರ ಪ್ರಶಂಸಕಿಯೂ ಹೌದಾದ್ದರಿಂದ ನಾನು ಹೇಗೆಂದರೂ ಪುಸ್ತಕ ಕೊಳ್ಳುತ್ತಿದ್ದೆ. ಆದರೆ ಚುನಾವಣಾ ಕಾಲದಲ್ಲಿ ಈ ಪುಸ್ತಕಕ್ಕೆ ಅತಿಯಾಗಿ ಪ್ರತಿಕ್ರಿಯಿಸಿದ ಕಾಂಗ್ರೆಸ್‌ನ ತಪ್ಪು ನಡೆಯಿಂದಾಗಿ ಮೂಲಕ ಬಾರು ಪುಸ್ತಕಕ್ಕೆ ಭಾರಿ ಪ್ರಚಾರವೇ ಸಿಕ್ಕಂತಾಯಿತಷ್ಟೆ.
ಆದರೆ ಶಕ್ತಿಶಾಲಿ ದೆಹಲಿ ದರ್ಬಾರ್‌ನ ಕುರಿತ ಆಸಕ್ತಿದಾಯಕ ಗಾಸಿಪ್‌ಗಳನ್ನು ಸವಿಯೋಣ ಅಂತ 'ದ ಆ್ಯಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್‌' ಕೊಂಡವರಿಗೆ ಮಾತ್ರ ನಿರಾಸೆಯೇ ಗತಿ. ಈ ಪುಸ್ತಕ ಡಾ. ಮನಮೋಹನ ಸಿಂಗ್ ಅವರಿಗಿಂತ ಹೆಚ್ಚಾಗಿ ಕೃತಿಕಾರ ಸಂಜಯ್ ಬಾರು ಅವರ ವ್ಯಕ್ತಿತ್ವವನ್ನೇ ಚಿತ್ರಿಸಿದೆ. ಪ್ರಧಾನಿ ಕಚೇರಿಯಲ್ಲಿ ಕೆಲಸ ಮಾಡಿದ ಅವಧಿಯಲ್ಲಿ ತಾವು ಕೇವಲ ಘಟನೆಗಳಿಗೆ ಸಾಕ್ಷಿಭೂತಾರಾಗಿರದೇ ಭಾರತವನ್ನು ಪ್ರಭಾವಿಸಿದ ಮಹತ್ತ್ವಪೂರ್ಣ ನಿರ್ಣಯಗಳನ್ನು ಕೈಗೊಳ್ಳುವಾಗ ಅದರ ಭಾಗವಾಗಿದ್ದೆ ಎಂದು ಹೇಳಿಕೊಂಡಿದ್ದಾರೆ. ಪ್ರಧಾನಿಯಾಗಿ ಡಾ. ಸಿಂಗ್ ಅವರೇ ಅರ್ಹ ಎಂಬ ಐಡಿಯಾವನ್ನು ಮೊದಲು ಹೊರಹಾಕಿದ್ದೇ ತಾವು ಅಂತಾರೆ ಬಾರು. ಅಷ್ಟೇ ಅಲ್ಲ, ಯೋಜನಾ ಆಯೋಗದ ಹುದ್ದೆಗೆ ಮಾಂಟೆಕ್ ಸಿಂಗ್ ಅಹ್ಲುವಾಲಿಯಾ ಹೆಸರನ್ನು ತಾವೇ ಸೂಚಿಸಿದ್ದರಿಂದ ಅವರೂ 'ಧನ್ಯವಾದ' ಹೇಳಬೇಕಾದ ಜಾಗದಲ್ಲಿದ್ದಾರೆ ಎಂಬರ್ಥದಲ್ಲೂ ಬಾರು ಬರೆದಿದ್ದಾರೆ.
ಸೋನಿಯಾ ಗಾಂಧಿಯವರ ಅಭಿಮತಕ್ಕೆ ವಿರುದ್ಧ ಯೋಚನೆಯನ್ನು ಹೊಂದಿದ್ದೂ ರಾಜಕೀಯದ ಆಟ ಹೆಣೆಯುವವರಲ್ಲ ಎಂಬ ಕಾರಣಕ್ಕೆ ಅವರಿಗೆ ಪ್ರಧಾನಿಯಾಗುವ ಅರ್ಹತೆ ಒಲಿಯಿತು ಎಂಬುದನ್ನು ವಿವರಿಸುವಂತಿದೆ ಪುಸ್ತಕ. ಅಲ್ಲದೇ ಉತ್ತಮ ವ್ಯಕ್ತಿ, ಭ್ರಷ್ಟರಲ್ಲ ಹಾಗೂ ಉನ್ನತ ಮಟ್ಟದ ಅರ್ಥಶಾಸ್ತ್ರಜ್ಞರೂ ಹೌದು. ಜಗತ್ತಿನ ಯಾವುದೇ ಪ್ರಖರ ಪ್ರಭಾವಿಯೊಂದಿಗೂ ಈ ನೆಲೆಯಲ್ಲಿ ನಿಂತು ವಿಶ್ವಾಸದಿಂದ ಮಾತನಾಡಬಲ್ಲರು ಎಂಬುದೆಲ್ಲ ಸೋನಿಯಾ ಕುಟುಂಬಕ್ಕೆ ಬೋನಸ್ ಅಂಶವಾಯಿತು. ಯುಪಿಎ ಎರಡನೇ ಅವಧಿಯಲ್ಲಿ ಅವರ ಮೇಲೆ ಏನೆಲ್ಲ ನಿಂದೆಗಳು ಬಂದರೂ ಸುಮ್ಮನಿದ್ದ ಇಂಥ ವ್ಯಕ್ತಿಗಳು ಸಿಗುವುದು ಕಷ್ಟ ಎಂಬುದೂ ನಿಜವೇ.
ಬಾರು ಅವರ ಪುಸ್ತಕಕ್ಕೆ ಕಾಂಗ್ರೆಸ್ ತೀವ್ರವಾಗಿ ಪ್ರತಿಕ್ರಿಯಿಸಿದ್ದು ಹತ್ತು ವರ್ಷಗಳಿಂದ ದೆಹಲಿ ಮಾಧ್ಯಮಕ್ಕೆ ಯಾವ ವಿಷಯಗಳೆಲ್ಲ ಗೊತ್ತಿದ್ದವೋ ಅವಕ್ಕೆ ಇನ್ನಷ್ಟು ಪ್ರಚಾರ ಸಿಗುವುದಕ್ಕೆ ಕಾರಣವಾಯಿತು ಅಷ್ಟೆ. ಪ್ರಧಾನಿಯವರ ಪ್ರಧಾನ ಕಾರ್ಯದರ್ಶಿ ಪುಲೋಕ್ ಚಟರ್ಜಿ ಅವರು ಸೋನಿಯಾ ಗಾಂಧಿಯವರ ವಿಶ್ವಾಸಾರ್ಹ ವ್ಯಕ್ತಿ. 2008ರಲ್ಲಿ ವಿತ್ತ ಸಚಿವಾಲಯದ ಜಂಟಿ ಕಾರ್ಯದರ್ಶಿ (ಈಗ ಹೆಚ್ಚುವರಿ ಕಾರ್ಯದರ್ಶಿ)ಹುದ್ದೆಯಲ್ಲಿದ್ದ ಒಬ್ಬರು ನನ್ನ ಬಳಿ ಖಾಸಗಿಯಾಗಿ ಮಾತನಾಡುತ್ತ ಹೇಳಿದ್ದರು- 'ಈ ಸರ್ಕಾರದಲ್ಲಿ ಪ್ರಧಾನಿಯ ನಿರ್ದೇಶನಗಳನ್ನು ಪಕ್ಕಕ್ಕಿಡಬಹುದು, ಆದರೆ ಪುಲೋಕ್‌ರಿಂದ ಬಂದ ನಿರ್ದೇಶನಗಳನ್ನು ಪಾಲಿಸಲೇಬೇಕಾಗುತ್ತದೆ' ಎಂದು ಹೇಳಿದ್ದರು. ಬಾರು ಅವರೊಂದಿಗೆ ಅವರ ಪುಸ್ತಕದ ಸಂಬಂಧ ಸಂದರ್ಶನ ನಡೆಸಿದ ಪ್ರತಿ ಸಂಪಾದಕ, ನಿರೂಪಕರೆಲ್ಲರಿಗೂ ಪ್ರಧಾನಿ ಕಾರ್ಯಾಲಯದಲ್ಲಿ ಇರಬಹುದಾದ ಈ ಬಗೆಯ ಅಧಿಕಾರ ಸಮೀಕರಣಗಳು ಗಮನಕ್ಕೆ ಬಂದೇ ಇರುತ್ತವೆ. ರಾಷ್ಟ್ರೀಯ ಸಲಹಾ ಸಮಿತಿಯೂ ಒಂಥರದ ಛಾಯಾ ಸಂಪುಟದಂತೆಯೇ ಕಾರ್ಯನಿರ್ವಹಿಸಿತ್ತು. ಅಲ್ಲಿನ ಸದಸ್ಯರು ಒಬ್ಬರಿಗೊಬ್ಬರು ಹಪಾಹಪಿಸಿದ್ದರಿಂದ ನಂತರದಲ್ಲಿ ಅದು ತನ್ನ ಪ್ರಸ್ತುತತೆ ಕಳೆದುಕೊಳ್ಳಬೇಕಾಯಿತಷ್ಟೆ.
ಸಂಪುಟದಲ್ಲಿ ಯಾರೆಲ್ಲ ಇರಬೇಕು ಎಂದು ನಿರ್ಧರಿಸಿದ್ದು ಸೋನಿಯಾ ಗಾಂಧಿಯವರೇ ಹೊರತು ಪ್ರಧಾನಿಯಲ್ಲ ಎಂಬುದು ಬಹಳ ರಹಸ್ಯದ ಸಂಗತಿಯೇ? ಸಿಂಗ್ ಅವರನ್ನು ಗೋಜಲಿಗೆ ದೂಡಿ ರಾಹುಲ್ ಗಾಂಧಿಯವರನ್ನು ಪ್ರಧಾನಿ ಹುದ್ದೆಗೆ ಬೆಳೆಸಲಾಯಿತು ಎಂಬ ಸಂಗತಿ ಬಾರು ಪುಸ್ತಕವನ್ನು ಓದಿಯೇ ಗೊತ್ತಾಗಬೇಕು ಎಂಬ ಸ್ಥಿತಿಯಂತೂ ಇಲ್ಲ. ಅಜಯ್ ಮಕೇನ್ ಅವರು ಪತ್ರಿಕಾಗೋಷ್ಠಿ ನಡೆಸುತ್ತಿದ್ದಾಗ ಅಲ್ಲಿಗೆ ನುಗ್ಗಿ, ಸುಗ್ರೀವಾಜ್ಞೆ ಪ್ರತಿಯನ್ನು ಹರಿದುಹಾಕಿದ ರಾಹುಲ್ ಕ್ರಮ, ಪ್ರಧಾನಿಯ ಬೆಂಬಲಿಗರಲ್ಲದ ಹಿರಿಯ ಕಾಂಗ್ರೆಸ್ಸಿಗರಿಗೂ ಸರಿ ಬಂದಿರಲಿಲ್ಲ.
'2009ರ ವಿಜಯ ತಮ್ಮದು ಎಂಬ ಭಾವನೆಯಲ್ಲಿ ಸಿಂಗ್ ಇದ್ದರು. ಇದು ಹಲವರಿಗೆ ಸರಿ ಬರಲಿಲ್ಲ' ಎಂದು ಬಾರು ಹೇಳಿಕೊಂಡಿದ್ದಕ್ಕೆ ಬಹುಶಃ ಕಾಂಗ್ರೆಸ್ ಅತಿಯಾಗಿ ಪ್ರತಿಕ್ರಿಯಿಸಿತೇನೋ? ಇಲ್ಲಿಯೇ ಬಾರು ಅವರ ಹೆಚ್ಚಿನ ಅಂಶಗಳೂ ಊಹೆ ಎಂದು ತಿಳಿದುಬಿಡುತ್ತವೆ. 2009ರ ಫಲಿತಾಂಶವನ್ನು ವಿಜಯ ಎಂದು ಕರೆಯುವುದಕ್ಕೆ ಸಾಧ್ಯವೇ? ದುರಹಂಕಾರಿ ಎಡಪಂಥೀಯರು ಕುಸಿದ ಜಾಗವನ್ನು ಕೆಲ ಅತಿಭ್ರಷ್ಟ ಮೈತ್ರಿಗಳು ಆವರಿಸಿಕೊಂಡವು ಅಷ್ಟೆ. ವಾಸ್ತವ ಏನೆಂದರೆ ಸಿಂಗ್ ಅವರಾಗಲೀ, ಪ್ರಧಾನಿ ಕಚೇರಿಯೇ ಆಗಲಿ, ಕಾಂಗ್ರೆಸ್ ನೇತಾರರೇ ಆಗಲಿ 2009ರಲ್ಲಿ ಮರಳಿ ಅಧಿಕಾರಕ್ಕೆ ಬಂದುಬಿಡುತ್ತೇವೆ ಅಂದುಕೊಂಡಿರಲಿಲ್ಲ. ಪ್ರಧಾನಿ ಕಚೇರಿಯಲ್ಲಿದ್ದ ಹೆಚ್ಚಿನ ವ್ಯಕ್ತಿಗಳೆಲ್ಲ ಬೇರೆ ವೃತ್ತಿ ಯೋಜನೆಗಳನ್ನು ಅದಾಗಲೇ ಕೈಗೊಂಡಿದ್ದರು. ಬಹಳ ಪ್ರಭಾವಿ ಎಂದು ಪರಿಗಣಿತವಾಗಿದ್ದ ಪುಲೋಕ್ ಚಟರ್ಜಿಯವರೇ ಅವತ್ತಿಗೆ ಅಂತಾರಾಷ್ಟ್ರೀಯ ಹಣಕಾಸು ನಿಧಿಯಲ್ಲಿ ಒಳ್ಳೆ ಹುದ್ದೆಯೊಂದನ್ನು ಮುಂಚಿತವಾಗಿ ದೊರಕಿಸಿಕೊಂಡಿದ್ದರು. ಕಾಂಗ್ರೆಸ್ಸೇತರ ಸರ್ಕಾರ ಬಂದರೂ ತಮ್ಮ ನಿಷ್ಠಾವಂತರು ಎಲ್ಲ ಕಡೆ ಇರಲಿ ಎಂದು ನ್ಯಾಯಾಂಗವೂ ಸೇರಿದಂತೆ ಪ್ರಮುಖ ಹುದ್ದೆಗಳಿಗೆ ನೇಮಕ ಮಾಡುವಲ್ಲಿ ಕಾಂಗ್ರೆಸ್ ಉತ್ಸುಕತೆ ತೋರಿತ್ತು.
ಕುತೂಹಲವೆಂದರೆ ಸಂಜಯ್ ಬಾರು ಅವರು ತಮ್ಮ ಪುಸ್ತಕದಲ್ಲಿ, 2009ರ ಚುನಾವಣೆಗೂ ಮೊದಲು ತಾವು ಪ್ರಧಾನಿ ಕಾರ್ಯಾಲಯ ತೊರೆದು ಸಿಂಗಾಪುರದ ಕಲಿಕಾ ವೃತ್ತಿ ಒಪ್ಪಿಕೊಂಡಿದ್ದೇಕೆ ಎಂಬ ಬಗ್ಗೆ ಯಾವ ವಿವರಣೆಗಳನ್ನೂ ಕೊಡುವುದಿಲ್ಲ. 2008ರ ನವೆಂಬರ್‌ನಲ್ಲಿ ಮುಂಬೈ ಮೇಲಾದ ಉಗ್ರರ ಭಯಾನಕ ದಾಳಿಯ ಬಗ್ಗೆ ಬಾರು ಪುಸ್ತಕದಲ್ಲಿ ನಿಮಗೆ ಯಾವ ವಿವರಗಳೂ ಸಿಗುವುದಿಲ್ಲ. ಏಕೆಂದರೆ ಅವರಾದಗಲೇ ಸಿಂಗಾಪುರದ ತಮ್ಮ ಹೊಸ ಉದ್ಯೋಗದಲ್ಲಿದ್ದರು. ಈ ದಾಳಿ ಶ್ರೀಮಂತಿಕೆಯಲ್ಲಿ ಓಲಾಡಿಕೊಂಡಿದ್ದವರನ್ನೆಲ್ಲ ರಾಷ್ಟ್ರೀಯ ಭದ್ರತೆಗೆ ಒದಗಿರುವ ಕೆಟ್ಟ ಸ್ಥಿತಿಗೆ ಮುಖಾಮುಖಿಯನ್ನಾಗಿಸಿತು. ಈ ದಾಳಿಯನ್ನು ನಿರ್ವಹಿಸಿದ್ದರ ಬಗ್ಗೆ ಆಕ್ರೋಶವೇ ಹರಿದು ಬಂದರೂ ಬಹಳಷ್ಟು ಉದ್ಯಮ ಸಾಮ್ರಾಜ್ಯಗಳು ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಅತಿ ಕಿಚಡಿ ಸರ್ಕಾರ ಇರುವುದಕ್ಕಿಂತ ಭದ್ರತೆ ದೃಷ್ಟಿಯಲ್ಲಿ ಕಾಂಗ್ರೆಸ್ ಸರ್ಕಾರವೇ ಇರಲಿ ಎಂದು ಯೋಚಿಸಿ ಸ್ಥಿರ ಸರ್ಕಾರದತ್ತಲೇ ಮನಸ್ಸು ಮಾಡಿದವು. ಆಗಿನ ಕಾಲಘಟ್ಟದಲ್ಲಿ ಬಿಜೆಪಿ ಒಂದು ಪ್ರಬಲ ಪರ್ಯಾಯವಾಗಿ ಕಾಣಿಸಿಕೊಂಡಿರಲಿಲ್ಲ. ಬಹುಶಃ ಈ ಒಂದು ಕೊರತೆಯೇ ನಂತರದ ಪರ್ವದಲ್ಲಿ ಭ್ರಷ್ಟಾಚಾರದ ವಿರುದ್ಧ ಭಾರತವೆಂಬ ಅಭಿಯಾನಕ್ಕೆ ಹಾಗೂ ಆಮ್ ಆದ್ಮಿ ಪಾರ್ಟಿಯಂಥ ಗುಂಪು ಉದಯಿಸುವುದಕ್ಕೆ ಕಾರಣವಾಯಿತು. ಹೀಗಾಗಿ ಮುಂಬೈ ದಾಳಿ ಒಂದರ್ಥದಲ್ಲಿ ಹಲವು ಬದಲಾವಣೆಗಳ ಬೀಜಮೂಲ. ಅದು ಬಾರು ಅವರ ಪುಸ್ತಕದಲ್ಲಿ ಪ್ರಸ್ತಾಪವೇ ಆಗಿಲ್ಲ. ಅಂತೂ 2009ರಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರವೇ ಮತ್ತೆ ಅಧಿಕಾರಕ್ಕೆ ಬಂತು. ಬಾರು ಹೇಳುವ ಪ್ರಕಾರ ಪ್ರಧಾನಿಯವರು ಈ ವಿಜಯವನ್ನು ರೂಪಿಸಿದ್ದು ತಾವೇ ಎಂಬ ಪ್ರತಿಪಾದನೆ ಮಾಡಿದರು. ಬಾರು ಅವರಿಗೆ ಪ್ರಧಾನಿ ಕಾರ್ಯಾಲಯದಲ್ಲಿ ಇನ್ನೂ ಹೆಚ್ಚಿನ ಪ್ರಭಾವಿ ಹುದ್ದೆಯನ್ನು ಕೊಡುವ ಭರವಸೆ ಸಿಕ್ಕಿದಾಗ ಅವರು ಭಾರತಕ್ಕೆ ಬಂದರು. ಆದರೆ ಆ ಭರವಸೆ ಈಡೇರದಿದ್ದಾಗ ಅವರಲ್ಲಿ ಮೋಸ ಹೋದಂತಹ ಯಾತನೆಯೊಂದು ಮಡುಗಟ್ಟಿತು. ಯುಪಿಎ-2ರ ಸರ್ಕಾರದಲ್ಲಿ ಕೇವಲ ಪ್ರಧಾನಿಯ 'ಮಾಧ್ಯಮ ಸಲಹೆಗಾರ'ರಾಗಿ ಉಳಿಯುವ ಇಂಗಿತ ಬಾರು ಅವರಿಗಿರಲಿಲ್ಲ. ಸಹಾಯಕ ಸಚಿವರ ಸ್ಥಾನಮಾನಕ್ಕೆ ತಕ್ಕುದಾಗಿ ಯೋಜನಾ ಆಯೋಗದ ಸದಸ್ಯರನ್ನಾಗಿ ಮಾಡುವುದಾಗಿ ಪ್ರಧಾನಿ ಹೇಳಿದರಾದರೂ ಇದು ಅವರಿಗೆ ತೃಪ್ತಿಯೆನಿಸಲಿಲ್ಲ. ಹೀಗಾಗಿ ಬಾರು ಅವರು 'ಬಿಸಿನೆಸ್ ಸ್ಟ್ಯಾಂಡರ್ಡ್‌' ಪತ್ರಿಕೆಗೆ ಮರಳಿ, ಅಲ್ಲಿ ಟಿಎನ್ ನಿನಾನ್ ಅವರ ನಂತರದ ಸ್ಥಾನಕ್ಕೆ ನೆಮ್ಮದಿ ಪಟ್ಟುಕೊಳ್ಳಬೇಕಾಯಿತು.
ಬಾರು ನಂತರ ಈ ಸ್ಥಾನಕ್ಕೆ ಬಂದ ಹರೀಶ್ ಖಾರೆ ಅವರು ಪ್ರಧಾನಿ ಕಚೇರಿಯಲ್ಲಿ ತಮ್ಮ ಪಾತ್ರ ನಿರ್ಣಾಯಕವಾದದ್ದಾಗಿತ್ತು ಎಂಬ ಬಾರು ಅವರ ಪ್ರತಿಪಾದನೆಯನ್ನೇ ಕೆಡವುವದಕ್ಕೆ ಪ್ರಯತ್ನಿಸಿದ್ದಾರೆ. ಮಾಧ್ಯಮ ಸಲಹೆಗಾರ ಎಂಬುದು ವೈಭವದ ಹುದ್ದೆಯಾದರೂ ಅದು ತೀರ ಗಣನೆಗೆ ಬರುವಂತದ್ದಲ್ಲ ಎಂಬ ವಾದ ಖಾರೆ ಅವರದ್ದು. ಆದರೆ ಇದೂ ಪೊಳ್ಳು ವಾದವೇ ಆಗಿದೆ. ನಿಜ. ಮಾಧ್ಯಮ ಸಲಹೆಗಾರರಾಗಿರುವುದು 'ಕೊ ಪ್ರೈಮ್ ಮಿನಿಸ್ಟರ್‌' ಎಂಬಂತೆ ಬೀಗುವಂಥದ್ದೇನೂ ಅಲ್ಲ. ಆದಾಗ್ಯೂ ಇವರಿಗೆ ಪ್ರಭಾವಿ ಸಂಪರ್ಕಗಳು ಬೆಸೆದುಕೊಳ್ಳುತ್ತವೆ. ದೆಹಲಿಯ ಪ್ರತಿಷ್ಠಿತರ ವಲಯದಲ್ಲಿ ತಮ್ಮ ಹಾಗೂ ಹೆಂಡತಿಯ ಕುಟುಂಬದ ಸಂಪರ್ಕಗಳು ಹೇಗಿದ್ದವು ಎಂಬ ಬಗ್ಗೆ ಬಾರು ಕೆಲ ವಿವರಣೆಗಳನ್ನು ಕೊಡುತ್ತಾರೆ. ಬಾರು ಅವರು ಪ್ರಧಾನಿಯಾಗಿದ್ದ ನರಸಿಂಹರಾವ್ ಅವರೊಂದಿಗೆ ಉತ್ತಮ ಸಂಪರ್ಕ ಹೊಂದಿದ್ದರು. ಏಕೆಂದರೆ ಆಂಧ್ರ ಪ್ರದೇಶದಲ್ಲಿ ಆಗ ಪ್ರಧಾನ ಕಾರ್ಯದರ್ಶಿ ಹುದ್ದೆಯಲ್ಲಿದ್ದ ಬಾರು ಅವರ ತಂದೆ ರಾವ್ ಅವರ ಆಪ್ತರು. ಮನಮೋಹನ್ ಸಿಂಗ್ ಅವರು ಹಣಕಾಸು ಸಚಿವರಾಗಿ ಗುರುತಿಸಿಕೊಂಡಿದ್ದೂ ಇದೇ ರಾವ್ ಅವರ 1991ರ ಆಡಳಿತದ ಅವಧಿಯಲ್ಲೇ. ಬಾರು ಅವರು ಮುಖ್ಯವಾಹಿನಿ ಮಾಧ್ಯಮದಲ್ಲಿ ಅಷ್ಟಾಗಿ ಪರಿಣತಿ ಹೊಂದಿರದಿದ್ದರೂ, ಟಿವಿ ವಾಹಿನಿಗಳು ಮಾತಿನಕಟ್ಟೆಯಲ್ಲಿ ವಿಜೃಂಭಿಸದಿದ್ದರೂ ಪ್ರಧಾನಿಯ ಮಾಧ್ಯಮ ಸಲಹೆಗಾರರಾಗುವ ಅವಕಾಶ ಅವರಿಗೆ ಒಲಿದಿದ್ದು ಈ ಸಂಪಕಂದಿಂದಲೇ ಎಂಬುದನ್ನು ತಳ್ಳಿಹಾಕಲಾಗದು. ಹೀಗೆ ಪರಿಣತಿ ಇರದ ಕಾರಣದಿಂದಲೇ ಅವರು ಮಾಧ್ಯಮದೊಂದಿಗೆ ಉತ್ತಮ ಸಂಬಂಧ ಹೊಂದಿರಲಿಲ್ಲ ಎಂಬುದನ್ನು ವಿವರಿಸಿಕೊಳ್ಳುವ ಗೋಜಿಗೇ ಹೋಗುವುದಿಲ್ಲ ಬಾರು.
ಮಾಧ್ಯಮ ಸಲಹೆಗಾರ ಹುದ್ದೆಯನ್ನು 'ಯಾರ ಗಣನೆಗೂ ಬರದ ವೈಭವ' ಎಂದು ತಳ್ಳಿಹಾಕುವುದಕ್ಕೆ ಆಗದು. ಕೆಲವನ್ನು ಹೌದೆನ್ನುವ, ಇನ್ನು ಕೆಲವನ್ನು ನಿರಾಕರಿಸುವ ಬಲದಿಂದಲೇ ಒಬ್ಬ ಬುದ್ಧಿವಂತ ಮಾಧ್ಯಮ ಸಲಹೆಗಾರ ಮಾಧ್ಯಮವನ್ನು ಚೆನ್ನಾಗಿ ನಿಯಂತ್ರಿಸಬಹುದು. ರಿಸರ್ವ್ ಬ್ಯಾಂಕ್‌ನ ಪಿಆರ್‌ಒಗೇ ಸಿಕ್ಕಾಪಟ್ಟೆ ಮಹತ್ತ್ವ ಇರುತ್ತದೆ. ಅಂಥಾದ್ದರಲ್ಲಿ ಪ್ರಧಾನಿ ಮಾಧ್ಯಮ ಸಲಹೆಗಾರ ಎಂದರೆ ಹಗುರದ ವಿಷಯವಲ್ಲ. ಪ್ರಧಾನಿ ಜತೆಗಿರುವ ನಿರಂತರ ಸಂಪರ್ಕವೇ ಇವರಿಗೆ ತಮ್ಮ ಅಭಿಪ್ರಾಯಗಳನ್ನು ಉದ್ಯಮದ ಪ್ರಮುಖರಿಗೆ ತಲುಪಿಸುವುದಕ್ಕೆ, ಸಾರ್ವಜನಿಕ ವಲಯದಲ್ಲಿರುವವರು, ಲಾಬಿ ಮಾಡುವವರು, ಪತ್ರಕರ್ತರು, ಥರಹೇವಾರಿ ಸಾಮಾಜಿಕ ಕಾರ್ಯಕರ್ತರು ಇವರನ್ನೆಲ್ಲ ಸೆಳೆಯುವುದಕ್ಕೆ ಅನುವು ಮಾಡಿಕೊಡುತ್ತದೆ. ಬಾರು ಅವರಿಗೆ Þ ಎಲ್ಲ ಅಧಿಕಾರಗಳ ಅರಿವಿತ್ತು ಹಾಗೂ ಅದನ್ನು ಆಸ್ವಾದಿಸಿದ್ದರು ಕೂಡ.
ಒಟ್ಟಾರೆಯಾಗಿ ಬಾರು ಅವರ ಪುಸ್ತಕ ಇರುವುದು ಯುಪಿಎ-1ರ ವೈಭವದ ದಿನಗಳನ್ನು ಬಣ್ಣಿಸುತ್ತ ಅದರ ಮಧ್ಯಭಾಗದಲ್ಲಿ ತಮ್ಮನ್ನು ಪ್ರತಿಷ್ಠಾಪಿಸಿಕೊಳ್ಳುವುದಕ್ಕೆ. ಇವರ ಪುಸ್ತಕಕ್ಕೆ ಕಾಂಗ್ರೆಸ್ ಅತಿಯಾಗಿ ಪ್ರತಿಕ್ರಯಿಸದೇ ಇದ್ದಿದ್ದರೆ ಯಾರೋ ಹತಾಶ ಅಧಿಕಾರಿ ಬರೆದ ಆತ್ಮಕಥನದಂತೆ ಅದೂ ಒಂದಾಗುತ್ತಿತ್ತು.
(ಮೂಲತಃ ಈ ಅಂಕಣ moneylife.in ನಲ್ಲಿ ಪ್ರಕಟಿತ)



- ಸುಚೇತಾ ದಲಾಲ್
ಪತ್ರಕರ್ತೆ, ಅಂಕಣಕಾರರು


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.