ಅನಂತ ಲೆಕ್ಕಾಚಾರ!
ಸಾಮಾನ್ಯವಾಗಿ ನಾನು ರಾಜಕೀಯ ಚರ್ಚೆಗೆ ಅಡಿ ಇಡುವುದಿಲ್ಲ. ಅದು ನನ್ನ ಅಭಿರುಚಿಯ ವಿಷಯವಲ್ಲ. ಆದರೆ ಫೇಸ್ಬುಕ್ನಲ್ಲಿ ಬರುವ ಕೆಲವು ಟಿಪ್ಪಣಿಗಳನ್ನು ನೋಡಿದಾಗ ಪ್ರತಿಕ್ರಿಯೆ ಕೊಡಲೇಬೇಕೇನೋ ಎಂಬ ಭಾವನೆ ಬರುತ್ತದೆ. ಇದೀಗ ಬಹಳಷ್ಟು ಟಿಪ್ಪಣಿಗಳು ಡಾ. ಅನಂತಮೂರ್ತಿಯವರನ್ನು ಗುರಿಯಾಗಿಸಿಕೊಂಡಿವೆ.
ಡಾ. ಅನಂತಮೂರ್ತಿ ಈ ಹಿಂದೆ ನರೇಂದ್ರ ಮೋದಿ ದೇಶದ ಪ್ರಧಾನಿಯಾದರೆ ತಾವು ದೇಶ ಬಿಟ್ಟು ಹೋಗುವುದಾಗಿ ಹೇಳಿದ್ದರು. ಫಲಿತಾಂಶದ ನಂತರವೂ ಪತ್ರಿಕೆಯಲ್ಲಿ ಅವರು ನರೇಂದ್ರ ಮೋದಿ ಬಗ್ಗೆ ತಮ್ಮ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಾಗಾದರೆ ಅನಂತಮೂರ್ತಿಗೆ ರಾಷ್ಟ್ರದ ಜನಾದೇಶದ ಬಗ್ಗೆ ಗೌರವವಿಲ್ಲವೇ? ಅಥವಾ ಚುನಾವಣೆಗೂ ಮುನ್ನ ಇಡೀ ದೇಶದಲ್ಲಿ ಮೋದಿ ಅಲೆ ಇದ್ದುದು ಜನಸಾಮಾನ್ಯರ ಅನುಭವಕ್ಕೆ ಬಂದಿದ್ದುದ್ದು ಡಾ.ಅನಂತಮೂರ್ತಿಯವರಿಗೆ ಅರ್ಥವಾಗಿರಲಿಲ್ಲವೇ? ಪ್ರವಾಹದ ವಿರುದ್ಧ ಈಜುವ ಹುಂಬತನವನ್ನೇಕೆ ಅವರು ಪ್ರದರ್ಶಿಸಿದರು? ಈಗಲೂ ಮೋದಿ ವಿರುದ್ಧ ಹೇಳಿಕೆ ನೀಡುತ್ತ ಜನಸಾಮಾನ್ಯರ ದೃಷ್ಟಿಯಲ್ಲಿ ತಾವೊಬ್ಬ ಮೂರ್ಖ ಎಂಬ ಭಾವನೆಗೆ ಯಾಕೆ ಕಾರಣರಾಗುತ್ತಿದ್ದಾರೆ?
ಫೇಸ್ಬುಕ್ ಟಿಪ್ಪಣಿಗಳು ಡಾ. ಅನಂತಮೂರ್ತಿಯವರ ವಿರುದ್ಧ ಯುದ್ಧವನ್ನೇ ಸಾರಿವೆ. ಅವನ್ನೆಲ್ಲ ನಾನಿಲ್ಲಿ ವರ್ಣಿಸಹೋಗುವುದಿಲ್ಲ. ಆದರೆ ಅನಂತಮೂರ್ತಿ ನಮ್ಮ ಕಾಲದ ಅತ್ಯಂತ ಪ್ರತಿಭಾವಂತ ಸಾಹಿತಿಗಳು. ಅವರ ಪ್ರತಿಭೆ ಸಾಹಿತ್ಯದ ಗಟ್ಟಿತನಕ್ಕಿಂತ ಹೆಚ್ಚಾಗಿ ತಮ್ಮದು ಗಟ್ಟಿ ಸಾಹಿತ್ಯ ಎಂದು ತೋರ್ಪಡಿಸುವುದಕ್ಕಾಗಿ, ಜ್ಞಾನಪೀಠ-ಬೂಕರ್ ಮುಂತಾದ ಜಾಗತಿಕ ಪ್ರತಿಷ್ಠೆಯ ಪ್ರಶಸ್ತಿಗಳನ್ನು ಬಾಚಿಕೊಳ್ಳುವುದಕ್ಕಾಗಿ ಮತ್ತು ಆಳುವವರು ಯಾರೇ ಇದ್ದರೂ ಸಕಲ ಸರಕಾರೀ ಸೌಲಭ್ಯಗಳನ್ನು ಗಿಟ್ಟಿಸಿಕೊಳ್ಳುವುದಕ್ಕಾಗಿ ಉಪಯೋಗವಾಗುತ್ತಿದ್ದುದನ್ನು ನಾನು ಲಾಗಾಯ್ತಿನಿಂದ ಗಮನಿಸುತ್ತ ಬಂದಿದ್ದೇನೆ. ಅದರಲ್ಲಿ ಅವರು ಯಶಸ್ವಿಯೂ ಆಗುತ್ತ ಬಂದಿದ್ದಾರೆ. ಒಂದು ಉಜ್ವಲ ನಿದರ್ಶನವೆಂದರೆ ಹಿಂದುತ್ವ ಸಿದ್ಧಾಂತವನ್ನು ಟೀಕಿಸಿಕೊಂಡೇ ಬಂದಿದ್ದ ಅವರು ಭಾಜಪಾ ನೇತೃತ್ವದ ಅಟಲ ಬಿಹಾರಿ ವಾಜಪೇಯೀ ಸರ್ಕಾರವಿದ್ದಾಗಲೂ ಪುಣೆಯ ಫಿಲ್ಮ್ ಇನ್ಸ್ಟಿಟ್ಯೂಟ್ನ ಮುಖ್ಯಸ್ಥರಾಗಿ ನೇಮಕಗೊಂಡಿದ್ದರು.
ಈಗಲೂ ಮೋದಿಯನ್ನು ಹಿಗ್ಗಾಮುಗ್ಗಾ ದ್ವೇಷಿಸುವ ಅವರ ಹೇಳಿಕೆಗಳ ಹಿಂದೆ ಬಹುದೊಡ್ಡ ದೂರಾಲೋಚನೆ (ಅಥವಾ ದುರಾಲೋಚನೆ ಎಂದು ಬೇಕಾದರೂ ಹೇಳಿ) ಇದೆ ಎಂದು ನನ್ನ ಅನಿಸಿಕೆ. ಅವರು ನರೇಂದ್ರ ಮೋದಿಯನ್ನು ಜೋರಾಗಿ ಬಯ್ದಷ್ಟೂ ಸೋನಿಯಾ ಗಾಂಧಿಗೆ, ಸಿದ್ಧರಾಮಯ್ಯರಿಗೆ ಮತ್ತು ಕಾಂಗ್ರೆಸ್ಸಿಗೆ ಹತ್ತಿರವಾಗುತ್ತಾರೆ, ಆಪ್ತರಾಗುತ್ತಾರೆ. ಭ್ರಷ್ಟಾಚಾರ, ದುರಾಡಳಿತ, ಜಾಗತಿಕ ರಂಗದಲ್ಲಿ ಭಾರತದ ಘನತೆಯನ್ನು ಅಧಃಪತನಕ್ಕಿಳಿಸಿದ್ದು, ರೂಪಾಯಿಯನ್ನು ಡಾಲರ್ ಎದುರು ಧೂಳೀಪಟಗೊಳಿಸಿದ್ದು, ಭಯೋತ್ಪಾದನೆ ಮಟ್ಟಹಾಕುವಲ್ಲಿ ವೈಫಲ್ಯ, ರಾಷ್ಟ್ರಹಿತ ಬಲಿಗೊಟ್ಟು ನಿರ್ದಿಷ್ಟ ಕೋಮನ್ನು ತುಷ್ಟೀಕರಣಗೊಳಿಸುತ್ತ ಸಾಗಿದ್ದು ಮುಂತಾದ ಕಾರಣಗಳಿಂದ ರಾಷ್ಟ್ರದ ಜನ ಕಾಂಗ್ರೆಸ್ಸನ್ನು ಅಧಿಕಾರದ ಗದ್ದುಗೆಯಿಂದ ಕಿತ್ತೊಗೆದರು. ಈಗ ಕಾಂಗ್ರೆಸ್ಸಿಗರಿಗೆ ಜನತೆಗೆ ತೋರಿಸಲು ಮುಖವಿಲ್ಲ, ಮಾತಾಡಲು ಶಬ್ದಗಳಿಲ್ಲ.
ಈಗ ಕಾಂಗ್ರೆಸ್ಸಿಗೆ ಅದರ ಪರವಾಗಿ ಅಥವಾ ಮೋದಿಯ ವಿರುದ್ಧ ಮಾತಾಡಲು ಸಮರ್ಥ ವ್ಯಕ್ತಿಯೊಬ್ಬ ಬೇಕಾಗಿದ್ದಾನೆ. ತಾವು ಆ ಸ್ಥಾನ ತುಂಬಬಹುದು ಎನ್ನುವುದು ಡಾ. ಅನಂತಮೂರ್ತಿಯವರ ಲೆಕ್ಕಾಚಾರ. ಇದರಿಂದ ಅವರಿಗೇನು ಲಾಭ ಎಂಬ ಪ್ರಶ್ನೆ ಏಳಬಹುದು. ಅದಿಲ್ಲದಿದ್ದರೆ ಇಡೀ ಜನಮಾನಸದ ಹೆದ್ದೆರೆಯ ವಿರುದ್ಧ ಈಜುವ ಸಾಹಸಕ್ಕೇಕೆ ಅನಂತಮೂರ್ತಿ ಹೋಗಬೇಕು? ಅವರ ಗುರಿ ನಿಶ್ಚಿತವಾಗಿಯೂ ರಾಜ್ಯಸಭೆಯ ಸದಸ್ಯತ್ವ ಪಡೆದುಕೊಳ್ಳುವುದು. ಅವರು ಮೋದಿಯನ್ನು ಎಷ್ಟು ಜಾಸ್ತಿ ನಿಂದಿಸುತ್ತಾರೋ ಅಷ್ಟು ಹತ್ತಿರವಾಗುತ್ತದೆ ಆ ಹುದ್ದೆ!
ರಾಜ್ಯಸಭೆಯಲ್ಲೂ ಮುಂದೆ ಮೋದಿ ಸರಕಾರವನ್ನು ಏನಕೇನ ತರಾಟೆಗೆ ತೆಗೆದುಕೊಳ್ಳುವ ಪ್ರತಿಭಾಶಾಲಿಯ ಅಗತ್ಯ ಕಾಂಗ್ರೆಸ್ಸಿಗೂ ಇದೆ. ಹಿಂದಿನ ಸರಕಾರದ ಕೊಚ್ಚೆಯೆಲ್ಲ ಮುಚ್ಚಿಹೋಗುವಂತೆ ತಮ್ಮ ವಾಗ್ಝರಿಯಿಂದ ಮಾತನಾಡಿ ಮೋದಿ ಸರ್ಕಾರದ ಬಾಯಿ ಮುಚ್ಚಿಸಲು ಒಬ್ಬ ಕೀರ್ತಿವಂತ ಹಾಗೂ ತೂಕದ ವ್ಯಕ್ತಿ ಬೇಕಲ್ಲವೇ? ಜ್ಞಾನಪೀಠ ಪ್ರಶಸ್ತಿ ಪಡೆದ, ಬೂಕರ ಪ್ರಶಸ್ತಿಯಂಥ ಅಂತಾರಾಷ್ಟ್ರಿಯ ಪ್ರಶಸ್ತಿಯ ಸಂಭಾವ್ಯ ಸಾಹಿತಿಗಳ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೊಂಡಂಥ ತಾವಲ್ಲದೇ ಇನ್ನಾರು ಸೂಕ್ತರು ಕಾಂಗ್ರೆಸ್ಸಿನ ಆ ತುರ್ತು ಅಗತ್ಯಕ್ಕೆ?ಇಷ್ಟರಲ್ಲಿಯೇ ಕರ್ನಾಟಕ ವಿಧಾನಸಭೆಯಿಂದ ರಾಜ್ಯಸಭೆಗೆ ಚುನಾವಣೆ ನಡೆಯಲಿಕ್ಕಿದೆ. ತಾವೊಬ್ಬ ಸಮರ್ಥ ಅಭ್ಯರ್ಥಿಯಾಗಬಲ್ಲೆ ಎಂದು ತೋರಿಸಿಕೊಳ್ಳಲು ಈಗಲ್ಲದಿದ್ದರೆ ಇನ್ಯಾವಾಗ ಸಾಧ್ಯ?
ಹೇಗಿದೆ ಡಾ. ಅನಂತಮೂರ್ತಿ ಲೆಕ್ಕಾಚಾರ?
-ಸಚ್ಚಿದಾನಂದ ಹೆಗಡೆ, ಶಿರಸಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

