ಅಂಕಣಗಳು

ಕರಗದ ಕೆಟ್ಟ ದರ್ಪ, ಕಾಂಗ್ರೆಸ್‌ಗೆಲ್ಲಿಯ ಕಾಯಕಲ್ಪ?

ಕರಗದ ಕೆಟ್ಟ ದರ್ಪ, ಕಾಂಗ್ರೆಸ್‌ಗೆಲ್ಲಿಯ ಕಾಯಕಲ್ಪ?
Published On :

ಗೆದ್ದವರು ವಿನಮ್ರರಾಗಿ ಮುಂದಿನ ಗುರಿಯತ್ತ ದೃಷ್ಟಿ ನೆಟ್ಟಿದ್ದಾರೆ ಹಾಗೂ ಸೋತವರು ಎಗರೆಗರಿ ಬೀಳುತ್ತ ಸಣ್ಣ ಅನುಕಂಪಕ್ಕೂ ಅನರ್ಹರಾಗುತ್ತಿದ್ದಾರೆ- ಇದು ಮಹಾಯುದ್ಧ ಕೊನೆಗೊಂಡ ಇಷ್ಟು ದಿನಗಳಲ್ಲಿ ಸಿಕ್ಕಿರುವ ಮುಖ್ಯಾಂಶ. ವಿವರಗಳನ್ನು ನೋಡೋಣ.
ಗೆದ್ದವನಿಗೆ ವಿನಮ್ರತೆ ಇರಬೇಕು ಎಂಬ ಮಾತು ಖರೆ. ಅದರರ್ಥ ಸೋತವನು ವಿನಮ್ರನಾಗಿರಬಾರದು ಎಂದೇನೂ ಅಲ್ಲವಲ್ಲ? ಸೋಲನ್ನು ಒಪ್ಪಿಕೊಳ್ಳುತ್ತೇನೆ ಎನ್ನುವುದಷ್ಟೇ ದೊಡ್ಡಗುಣವಾಗುವುದಿಲ್ಲ. ಅದು ಸೋತ ಎಲ್ಲರ ತುರ್ತು ಅಗತ್ಯವಷ್ಟೆ. ಎದುರಾಳಿಯ ಜಯದ ಘನತೆಯನ್ನು ಮನಗಾಣುವುದು ಹಾಗೂ ಆತನಿಗೆ ಶ್ರೇಯಸ್ಸನ್ನು ಸಲ್ಲಿಸುವುದು ಮೌಲ್ಯದ ನಡೆ. ಆ ಗುಣವಷ್ಟೇ ನಿಜವಾದ ಆತ್ಮಾವಲೋಕನಕ್ಕೆ ದಾರಿಮಾಡಿಕೊಡಬಲ್ಲದು. ಪ್ರತಿಸ್ಪರ್ಧಿಯ ಜಯವನ್ನು ಒಪ್ಪಿಕೊಳ್ಳುವ ಸ್ಥಿತಿಯಲ್ಲಿ ನೀವಿಲ್ಲ ಎಂದಾದರೆ ವಾಸ್ತವದಿಂದ ದೂರವಿದ್ದೀರಿ ಎಂದರ್ಥ. ವಾಸ್ತವದ ನೆಲೆಯಲ್ಲಿ ನಿಲ್ಲದವರು ಮೇಲೆ ಬಂದಾರಾದರೂ ಹೇಗೆ?
ಹೀಗನಿಸಿದ್ದು ಸೋನಿಯಾ-ರಾಹುಲ್ ಪ್ರತಿಕ್ರಿಯೆ ಗಮನಿಸಿದಾಗ. 2009ರಲ್ಲಿ ಯುಪಿಎ ಎರಡನೇ ಬಾರಿಗೆ ಅಧಿಕಾರ ಹಿಡಿದಾಗ ಮಾಧ್ಯಮದ ಮುಂದೆ ರಾಹುಲ್ ಗಾಂಧಿ ಈ ಧಾಟಿಯ ಮಾತೊಂದನ್ನು ಹೇಳಿದ್ದರು- 'ಭಾರತವನ್ನು ಮುನ್ನಡೆಸುವುದಕ್ಕೆ ನಾವೊಂದು ಸಿದ್ಧಾಂತ ಪ್ರತಿಪಾದಿಸಿದರೆ ಆಡ್ವಾಣಿಯವರ ಬಿಜೆಪಿ ಅದರ ವಿರುದ್ಧವಿತ್ತು. ಆದರೂ ನಮಗೊಂದು ಹೋರಾಟ ಕೊಟ್ಟಿದ್ದನ್ನು ಪ್ರಶಂಸಿಸುತ್ತೇನೆ'. ತೂಕದ ಪ್ರತಿಕ್ರಿಯೆಯೇ. ಆಡ್ವಾಣಿ ಸಹ ದೂರವಾಣಿ ಮೂಲಕ ಸೋನಿಯಾರಿಗೆ, ಹೊಸ ಸರ್ಕಾರಕ್ಕೆ ಶುಭ ಕೋರಿದ್ದು ಪತ್ರಿಕೆಗಳಲ್ಲಿ ಪ್ರಕಟವಾಗಿತ್ತು. ಅದಕ್ಕೂ ಹಿಂದಿನ ಲೋಕಸಭೆ ಚುನಾವಣೆಯಲ್ಲೂ ತಮ್ಮ ವಿರುದ್ಧದ ಜನಮತಕ್ಕೆ ತಲೆಬಾಗಿದ ವಾಜಪೇಯಿ ಅವರು, ವಿಜಯದಲ್ಲಿ ಬೀಗುತ್ತಿದ್ದ ಸೋನಿಯಾ ಗಾಂಧಿಯವರಿಗೆ ವಯಕ್ತಿಕವಾಗಿ ಶುಭಹಾರೈಕೆಗಳನ್ನು ಸಲ್ಲಿಸಿದ್ದರು.
ಈ ಬಾರಿ ಏನಾಯಿತು? ಹೊಸ ಸರ್ಕಾರಕ್ಕೆ ಶುಭಾಶಯ ಹೇಳುತ್ತೇನೆ ಅಂತ ಸೋನಿಯಾ ಗಾಂಧಿ ಬರೆದುಕೊಂಡು ಬಂದಿದ್ದ ಚೀಟಿ ಓದಿದರಾದರೂ ಭಾವಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಶುಭಾಶಯ ಹೇಳಲಾಗದಷ್ಟು ಸಂಕುಚಿತರಾಗಿದ್ದೇಕೆ? ಇಡೀ ಚುನಾವಣೆಯನ್ನು ಅಧ್ಯಕ್ಷೀಯ ಮಾದರಿಯಲ್ಲಿ ವ್ಯಕ್ತಿಕೇಂದ್ರಿತ ಮಾಡಿದ್ದಾರೆ ಅಂತ ಮೋದಿ ನಿಂದನೆ ಮಾಡಿದವರು ಇವರೇ. ಅಂಥ ವ್ಯಕ್ತಿ ಈ ಪರಿ ಯಶಸ್ವಿಯಾಗಿದ್ದಾನೆ ಎಂದಾದರೆ ಶ್ರೇಯಸ್ಸು ಸಲ್ಲಬೇಕಾಗಿದ್ದೂ ವ್ಯಕ್ತಿಗೇ ಅಲ್ಲವೇ?
ಅಯ್ಯಯ್ಯೋ ಪ್ರತಿಪಕ್ಷವೇ ಇರದ ರೀತಿಯಲ್ಲಿ ಹೀಗೆ ಜನಾಭಿಪ್ರಾಯ ಬಂದಿರುವುದು ಅಪಾಯಕಾರಿ ಅಂತೆಲ್ಲ ಬುದ್ಧಿಜೀವಿ ವರ್ಗ ಅಲವತ್ತುಕೊಳ್ಳುತ್ತಿದೆ. ಇಂಥ ಸ್ಥಿತಿ ಬಂದಿರುವುದು ತಮ್ಮನ್ನು ಬಿಟ್ಟರಿಲ್ಲ ಎಂಬ ಅಹಂಕಾರದಿಂದಲೇ ಎಂಬುದನ್ನು ಮಾತ್ರ ಅದಾಗಲೀ ಕಾಂಗ್ರೆಸ್ ಆಗಲೀ ಒಪ್ಪಿಕೊಳ್ಳುತ್ತಿಲ್ಲ. ಅಂಥ ದಯನೀಯ ಸೋಲಿನ ಸಂದರ್ಭದಲ್ಲೂ ಸೋನಿಯಾ ಗಾಂಧಿ ಅವರಿಂದ, ನಾವು ಪ್ರತಿಪಾದಿಸಿದ ಸಿದ್ಧಾಂತಗಳಲ್ಲಿ ಲೋಪವಿದೆಯೋ ಗಮನಿಸಲಾಗುವುದು ಎಂಬ ಮಾತು ಬರುವುದೇ ಇಲ್ಲ. ಮುಲ್ಲಾಗಳನ್ನೆಲ್ಲ ಭೇಟಿಯಾಗಿ ಸೆಕ್ಯುಲರ್ ಶಕ್ತಿ ಬಲಪಡಿಸಿ ಅಂತ ಗೋಗರೆದ ಮೇಲೂ ಉತ್ತರ ಪ್ರದೇಶದಂಥ ಬೃಹತ್ ರಾಜ್ಯದಲ್ಲಿ ತನಗೆ, ತನ್ನ ಮಗನಿಗೆ ಮಾತ್ರ ಸ್ಥಾನ ಉಳಿಸಿಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ ಅಂತಾದರೆ ಈಗಲಾದರೂ ಸ್ವವಿಮರ್ಶೆಯ ಮಾತುಗಳನ್ನಾಡಬೇಕು ಅಂತ ಈ ಮಹಾನಾಯಕಿಗೆ ಅನ್ನಿಸುವುದೇ ಇಲ್ಲ! 'ಕಾಂಗ್ರೆಸ್ ಸಿದ್ಧಾಂತಕ್ಕೆ ಬದ್ಧವಾದ ಪಕ್ಷ. ಆ ನೆಲೆಯಲ್ಲೇ ಚುನಾವಣೆ ಸೆಣೆಸಿದೆವು. ಮುಂದೆಯೂ ಅದಕ್ಕೆ ಬದ್ಧರಾಗಿರುತ್ತೇವೆ' ಎಂಬ ಅಮೋಘ ನುಡಿಗಳು ಅವರ ಬಾಯಿಂದ ಉದುರುತ್ತವೆ ಅಂತಾದರೆ ಇವರನ್ನು ಯಾವ ಜೀಸಸ್ ತಾನೇ ಕಾಪಾಡಲು ಸಾಧ್ಯ?
ಯುಪಿಎ-2ರ ಸಂಪುಟದಲ್ಲಿ ಅತ್ಯಂತ ಅಹಂಕಾರಿ ಸಚಿವರೆಂದರೆ ಕಪಿಲ್ ಸಿಬಲ್, ಸಲ್ಮಾನ್ ಖುರ್ಷಿದ್ ಎಂದು ಯಾರಾದರೂ ಹೇಳಬಹುದು. ದೇಶವೇ ಭ್ರಷ್ಟಾಚಾರದ ಬಗ್ಗೆ ಕನಲುತ್ತಿರುವಾಗ 'ಶೂನ್ಯ ನಷ್ಟ' ಪ್ರತಿಪಾದನೆ ಮಾಡಿದವರು ಸಿಬಲ್. ಅದನ್ನು ಯಾವುದೇ ಸರ್ಕಾರದ ಸಮರ್ಥನೆಯ ಭಾಗವಾಗಿ ನೋಡುವುದಕ್ಕಾಗದು. ಸಮರ್ಥನೆಗೆ ಬಳಸುವ ಭಾಷೆ ಬೇರೆಯದು. ಆದರೆ ಇವರ ಜೀರೊ ಲಾಸ್ ಭಾಷೆಯಲ್ಲಿ ನಾವು ಏನು ಮಾಡಿದರೂ ನೀವು ತೆಪ್ಪಗಿರಬೇಕು ಎಂಬ ಅಹಂಕಾರವಿತ್ತು. ಸಲ್ಮಾನ್ ಖುರ್ಷಿದ್‌ರ ಅಹಂಕಾರ ಮೋದಿಯವರನ್ನು 'ನಪುಂಸಕ' ಎಂದು ಕರೆಯುವುದಕ್ಕೆ ಮಾತ್ರವೇ ಸೀಮಿತವಾಗಿರಲಿಲ್ಲ. ಅದಕ್ಕೂ ಮೊದಲಿನ ವಿದ್ಯಮಾನವೊಂದರಲ್ಲಿ ತಮ್ಮ ಕ್ಷೇತ್ರಕ್ಕೆ ಬಂದವರು ಅದು ಹೇಗೆ ಸುರಕ್ಷಿತವಾಗಿ ಹಿಂತಿರುಗುತ್ತಾರೋ ನೋಡುತ್ತೇನೆ ಅಂತ ಬಹಿರಂಗವಾಗಿ ಆವಾಜು ಹಾಕಿದರು. 2,61,732 ಮತಗಳಿಂದ ಸಿಬಲ್ ಹಾಗೂ 3,10, 652 ಮತಗಳಿಂದ ಖುರ್ಷಿದ್ ಒದೆ ತಿಂದರು. ಮೋದಿ ರಾಕ್ಷಸ ಎಂದ ಇನ್ನೊಬ್ಬ ಸಚಿವ ಬೇಣಿ ಪ್ರಸಾದ ವರ್ಮಾ ಎರಡು ಲಕ್ಷಕ್ಕೂ ಹೆಚ್ಚಿನ ಮತಗಳಿಂದ ಸೋತರು. ಮಾತೆತ್ತಿದರೆ ಕೇಸರಿ ಭಯೋತ್ಪಾದನೆ ಎನ್ನುತ್ತ, ಮುಸ್ಲಿಂ ತುಷ್ಟೀಕರಣ ಮಾಡಿಕೊಂಡಿದ್ದ ಗೃಹಮಂತ್ರಿ ಸುಶೀಲ್ ಕುಮಾರ್ ಶಿಂದೆ 1,49, 674 ಮತಗಳ ಅಂತರದಿಂದ ಸೋತು ಮನೆದಾರಿ ಹಿಡಿಯಬೇಕಾಯಿತು.
ಇದಕ್ಕೂ ಮೀರಿದ ದುರಂತವೆಂದರೆ ಕಾಂಗ್ರೆಸ್ ಈ ಎಲ್ಲ ಸೋಲುಗಳನ್ನು 'ಶೂನ್ಯ ಸಿದ್ಧಾಂತ'ದಲ್ಲೇ ಅಳೆಯುತ್ತಿರುವಂತಿದೆ. ಅದಕ್ಕೊಂದು ಉತ್ತಮ ಉದಾಹರಣೆ ಕಾಂಗ್ರೆಸ್‌ನ ಮಣಿಶಂಕರ್ ಅಯ್ಯರ್. 'ಮೋದಿ ಚಹಾ ಮಾರುವುದಕ್ಕೆ ಲಾಯಕ್ಕು ಹೊರತು ದೇಶ ಆಳುವುದಕ್ಕಲ್ಲ' ಎಂಬ ಇವರ ಅಹಂಕಾರದ ಮಾತುಗಳೇ 'ಚಾಯ್ ಪೆ ಚರ್ಚಾ'ದಂಥ ಮೋದಿ ಅಭಿಯಾನಕ್ಕೆ ಇಂಬು ಕೊಟ್ಟಿತು. ಈ ಬಾರಿ ಅಯ್ಯರ್ 58,278 ಮತ ಪಡೆದು ನಾಲ್ಕನೇ ಸ್ಥಾನಕ್ಕೆ ತಳ್ಳಿಸಿಕೊಂಡರು. ಅಲ್ಲಿನ ವಿಜಯಿ ಅಭ್ಯರ್ಥಿಗೆ ದೊರಕಿದ್ದು 5,12,521 ಮತಗಳು. ಇಂಥ ಅಯ್ಯರ್‌ಗೆ ನಾಚಿಕೆ, ಆತ್ಮಾವಲೋಕನದ ದಾರಿ ಕಾಣುವುದು ಹಾಗಿರಲಿ, ಫಲಿತಾಂಶ ಬಂದ ಮರುದಿನ 'ಮೋದಿಗೆ ಬಹುಮತ ಸಿಕ್ಕಿದ್ದರಿಂದ ಭಾರತದಲ್ಲಿ ಕತ್ತಲು ಕವಿದಿದೆ' ಎಂದು ಪ್ರಲಾಪಿಸುತ್ತ ರಾಷ್ಟ್ರೀಯ ಪತ್ರಿಕೆಯೊಂದರಲ್ಲಿ ಲೇಖನ ಬರೆಯುತ್ತಾರೆ. ಇಂಥ ದಯನೀಯ ಸ್ಥಿತಿಯಲ್ಲೂ ಇವರಿಗೆ ತಮ್ಮ ಮನೆಯ ದೀಪ ಹಚ್ಚಿಕೊಳ್ಳುವ ಬುದ್ಧಿ ಬರುವುದಿಲ್ಲ ಎಂದಾದರೆ ಆ ಅಂಧಕಾರಕ್ಕೆ ಯಾರು ಹೊಣೆ?
ಕಾಂಗ್ರೆಸ್‌ನಂಥ ಆಳಬೇರುಗಳಿರುವ ಪಕ್ಷಕ್ಕೆ ಈ ಸೋಲು ಧೃತಿಗೆಡುವಂಥದ್ದೇನಲ್ಲ. ಈ ಹಿಂದೆಯೂ ಇಂದಿರಾ ಗಾಂಧಿ ಮತ್ತೆ ಅಧಿಕಾರಕ್ಕೆ ಬಂದಿರಲಿಲ್ಲವೇ ಎಂದೆಲ್ಲ ಪಕ್ಷದ ವಕ್ತಾರರು ಸಮರ್ಥಿಸಿಕೊಳ್ಳುತ್ತಿದ್ದಾರೆ. ಮತ್ತೆ ಮೇಲೇಳುವುದು ಯಾರಿಗೂ ಅಸಾಧ್ಯದ ವಿಷಯವಲ್ಲ ನಿಜ. ಆದರೆ ಅದಕ್ಕೆ ವಾಸ್ತವವನ್ನು ಒಪ್ಪಿಕೊಳ್ಳುವ ಮನಸ್ಸಿರಬೇಕು. 1977ರಲ್ಲಿ ಇಂದಿರಾ ಅವರನ್ನು ಮಣಿಸಿ ಜನತಾ ಪಕ್ಷದ ಮೈತ್ರಿಯು ಸರ್ಕಾರ ರಚಿಸಿಕೊಂಡಾಗ ಪರಿಸ್ಥಿತಿ ಇಷ್ಟು ಕೆಟ್ಟದಿರಲಿಲ್ಲ. ಸೋತಿದ್ದರೂ ಕಾಂಗ್ರೆಸ್ ಬಳಿ ಆಗ 153 ಸ್ಥಾನಗಳಿದ್ದವು. ಅಲ್ಲದೇ ತುರ್ತು ಪರಿಸ್ಥಿತಿಯನ್ನು ವಿರೋಧಿಸಿದ್ದ ಭಾವೋದ್ವೇಗದಲ್ಲಿ ಒಂದಾಗಿದ್ದ ಪಕ್ಷಗಳಲ್ಲಿ ಅಂಥ ಸಮನ್ವಯತೆಯೇನೂ ಇರಲಿಲ್ಲ ಎಂದು ಇತಿಹಾಸ ಹೇಳುತ್ತದೆ. ಹೊಸದೊಂದು ಆಡಳಿತ ಮಾದರಿ ನಿರ್ಮಿಸಿ ಜನಪ್ರಿಯತೆ ಗಳಿಸುವ ಅವಕಾಶ ಕೈಚೆಲ್ಲಿದ ಜನತಾ ಸರ್ಕಾರ ಒಳಜಗಳದಲ್ಲಿ ಹಾಗೂ ಇಂದಿರಾ-ಸಂಜಯರನ್ನು ಜೈಲಿನಲ್ಲಿಡುವುದರಲ್ಲಿ ಮಾತ್ರವೇ ಶ್ರಮಿಸಿತು. ಸೋತ ಸ್ಥಿತಿಯಲ್ಲೂ ಕಾಂಗ್ರೆಸ್‌ಗೆ ನೂರಕ್ಕೂ ಮಿಕ್ಕಿ ಸ್ಥಾನಗಳಿದ್ದವು ಎಂದರೆ ಜನರ ಅನುಕಂಪ ಅವರ ಮೇಲೆ ಇದೆ ಎಂಬುದನ್ನು ಅರ್ಥ ಮಾಡಿಕೊಳ್ಳದಿದ್ದದ್ದು ಜನತಾ ಸರ್ಕಾರ ಸೇಡಿನ ರಾಜಕಾರಣಕ್ಕೆ ಇಳಿಯಿತೇನೋ ಎಂಬ ಭಾವನೆಯನ್ನು ಉಂಟುಮಾಡಿತ್ತು. ಇವೆಲ್ಲವೂ ಇಂದಿರಾ ತೀರ ಕಡಿಮೆ ಅವಧಿಯಲ್ಲೇ ಮತ್ತೆ ಗದ್ದುಗೆ ಪಡೆದುಕೊಳ್ಳುವುದಕ್ಕೆ ಕಾರಣವಾಯಿತು.
ಆದರೀಗ ಸರ್ಕಾರ ಮೊರಾರ್ಜಿಯದಲ್ಲ, ಮೋದಿಯವರದ್ದು. ಅಮ್ಮ-ಮಗನಿಗೆ ಕೊಡಬೇಕಾದ ಶಿಕ್ಷೆ ಕೊಟ್ಟಾಗಿಬಿಟ್ಟಿದೆ. ವಿರೋಧ ಪಕ್ಷವನ್ನು ಬೇರ್ಯಾವುದೋ ರೀತಿಯಲ್ಲಿ ಹಣಿಯಬೇಕಾದ ಅವಶ್ಯವೇ ಅವರಿಗಿಲ್ಲ. ಏಕೆಂದರೆ ವಿರೋಧ ಪಕ್ಷವೇ ಇಲ್ಲ! ಒಳಜಗಳಕ್ಕೆ ಆಸ್ಪದವೇ ಇಲ್ಲ, ಅಭಿವೃದ್ಧಿಯ ನೀಲನಕ್ಷೆ ಸಿದ್ಧವಿದೆ.
'ಸರ್ಕಾರ ಚಲಾಯಿಸುವುದಕ್ಕೆ ನಂಬರ್‌ಗಳು ಬೇಕಾಗುತ್ತವೆ. ದೇಶ ಚಲಾಯಿಸುವುದಕ್ಕಲ್ಲ. ನನ್ನ ಎದುರಾಳಿ ಪಾಳೆಯದಿಂದ ಆರಿಸಿ ಬಂದವನೂ ನನ್ನ ಸರ್ಕಾರಕ್ಕೆ ಮುಖ್ಯ' ಅಂತ ಸಂದರ್ಶನವೊಂದರಲ್ಲಿ ಮೋದಿ ಹೇಳಿದ್ದರು. ಆಗಿನ್ನೂ ಫಲಿತಾಂಶ ಬಂದಿರಲಿಲ್ಲವಾದ್ದರಿಂದ ಚುನಾವಣೋತ್ತರ ಮೈತ್ರಿ ದೃಷ್ಟಿಯಿಂದ ಇಂಥ ಮಾತುಗಳು ಎಂಬ ಅರ್ಥ ಬಂದಿತ್ತು. ಅಭೂತಪೂರ್ವ ಜಯ ದೊರಕಿದ ಮೇಲೂ ಅದೇ ಮಾತು. ಒಂದಿನಿತೂ ಮುಕ್ಕಾಗಿಲ್ಲ ಭರವಸೆ. ಮಾಧ್ಯಮವೇನೋ ಮೋದಿ ಸಂಪುಟ ಹೀಗಿರಬಹುದು ಅಂತೆಲ್ಲ ಊಹೆ ಹೊಸೆಯುತ್ತಿರಬಹುದು. ಆದರೆ ಅಧಿಕಾರದ ಅಡುಗೆ ತಿಂದು ತೇಗುವ ಹುಮ್ಮಸ್ಸನ್ನು ಮೋದಿಯಂಥ ನಾಯಕನೆದುರು ತೋರುವ ಧೈರ್ಯ ಯಾರಿಗೂ ಇಲ್ಲ. ಹಾಗೆಂದು ಹಲ್ಲು ಕಿರಿಯುವ ಭಟ್ಟಂಗಿತನಕ್ಕೂ ಮಣೆಯಿಲ್ಲ ಅಂತ ಮುಖ್ಯಮಂತ್ರಿಯಾಗಿದ್ದಾಗಲೇ ಮೋದಿ ನಿರೂಪಿಸಿದ್ದಾಗಿದೆ. ಎವರಿಥಿಂಗ್ ಅಂಡರ್‌ಕಂಟ್ರೋಲ್. ಉತ್ತರ ಪ್ರದೇಶದಲ್ಲಿ ನಂಬಲಾಗದ ಜಯ ತಂದ ರೂವಾರಿ ಅಮಿತ್ ಶಾ ಅವರನ್ನು 'ನೀವು ಬಿಜೆಪಿಯ ನಂಬರ್ ಟೂ' ಅಂತ ಟಿವಿ ಪತ್ರಕರ್ತೆ ಪುಸಲಾಯಿಸಿದಾಗ, 'ಜಯಕ್ಕೆ ದುಡಿದಿರುವುದು ಕಾರ್ಯಕರ್ತರು. ನಂಬರ್‌ಗಳ ಪ್ರಶ್ನೆಯೇ ಬಾರದು. ಸರ್ಕಾರದಲ್ಲಿ ಭಾಗವಾಗುತ್ತೇನೆಯೋ, ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕೋ ಅಂತ ಪಕ್ಷ ನಿರ್ಧರಿಸುತ್ತದೆ. ಏನನ್ನೇ ಕೊಟ್ಟರೂ ಜೀವತೇದು ಮಾಡುತ್ತೇನೆ' ಎಂಬ ಖಡಕ್ ಉತ್ತರವೇ ಬಂದಿದ್ದು. ಅದು ಕೆಲಸಕ್ಕೆ ಬಾರದ ಒಣ ವಿನಯವಲ್ಲ. ಮುಸ್ಲಿಮರು ಭಯಪಡಬೇಕಿಲ್ಲ ತಾನೇ ಎಂಬ ಅಸಂಬದ್ಧ ಪ್ರಶ್ನೆಗೆ, 'ನಿಮ್ಮ ಚಾನೆಲ್ ಸೇರಿದಂತೆ ಕೆಲವರು ಮಾಡಿರುವ ಕೆಟ್ಟ ಪ್ರಚಾರವಿದು. ಅದನ್ನು ಇಲ್ಲವಾಗಿಸುತ್ತೇವೆ ಬಿಡಿ' ಎಂಬ ಸ್ಪಷ್ಟ ಉತ್ತರ.
ಇಂಥದೊಂದು ಸದೃಢತೆಯ ಸವಾಲು ಮೀರಿಸುವಂತೆ ಕಾಂಗ್ರೆಸ್ ಬೆಳೆಯಬೇಕು ಎಂದಾದರೆ ಅದಕ್ಕೆ ಬೇಕಾದ ತಯಾರಿ ಎಂಥಾದ್ದು? ಮೈಗಂಟಿರುವ ಅಹಂಕಾರದ ಕಣವೊಂದನ್ನೂ ಕೊಡವಿಕೊಳ್ಳದೇ, ನಮ್ಮದು ನೂರಿಪ್ಪತ್ತು ವರ್ಷಕ್ಕೂ ಅಧಿಕ ಪ್ರಾಯದ ಪಕ್ಷ ಅಂತ ಗುಟುರು ಹಾಕಿಕೊಂಡಿದ್ದರೆ ಮತ್ತೆ ಅಧಿಕಾರಕ್ಕೆ ಬರುವುದು ಹಾಗಿರಲಿ, ಪ್ರತಿಪಕ್ಷ ಸ್ಥಾನ ಗಳಿಸಿಕೊಳ್ಳುವ ಪ್ರಯತ್ನದಲ್ಲೂ ಯಶ ಪಡೆಯದು. 'ಅಬ್ ಕಿ ಬಾರ್ ಮೋದಿ ಸರ್ಕಾರ್‌' ಎಂಬುದಲ್ಲ ಈಗಿನ ತಾಜಾ ವಾಸ್ತವ. 'ಬಾರ್ ಬಾರ್ ಮೋದಿ ಸರ್ಕಾರ್‌' ಎಂದು ದಶಕವೇ ನಕ್ಕಿರುವುದು ಕಾಂಗ್ರೆಸ್‌ನ ಅಹಂಕಾರದ ಕೋಟೆಯೊಂದನ್ನು ಬಿಟ್ಟು ಮತ್ತೆಲ್ಲರಿಗೂ ತಲುಪಿದೆ.

-ಚೈತನ್ಯ ಹೆಗಡೆ
cchegde@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.