

ಅದು ತಾಯಿಯಿ ಮೇಲಿಟ್ಟಿರುವ ಆರಾಧನೆಯೋ, ಪ್ರೀತಿಯೋ, ಅಭಿಮಾನವೋ, ಅಕ್ಕರೆಯೋ, ಏನು ಬೇಕಾದರೂ ಹೇಳಿಕೊಳ್ಳಿ. ಅದಕ್ಕಿಂತ ಮಿಗಿಲಾದದ್ದು ಈ ಲೋಕದಲ್ಲಿ ಬೇರೇನೂ ಇಲ್ಲ ಎಂದು ಅರ್ಥೈಸಿದರೂ ನಡೆದೀತು. ಆ ನಾಯಕ ತುಂಬಿದ ಸಭೆಯಲ್ಲಿ ಹೇಳಿದ ಮಾತನ್ನು ಒಮ್ಮೆ ನೆನಪಿಸಿಕೊಳ್ಳಿ- 'ತಾಯಿಯ ಸೇವೆ ಎಂದಿಗಾದರೂ ಕೃಪೆ ಎನಿಸಲು ಸಾಧ್ಯವೆ?'
ಹೌದು, ಪ್ರಧಾನಿ ನರೇಂದ್ರ ಮೋದಿಯವರು ಭಾರತ ಮಾತೆಯ ಬಗ್ಗೆ ಹೇಳಿದ ಈ ಮಾತನ್ನು ಈಗ ಬೇರೆಯದೇ ಹಿನ್ನೆಲೆಯಲ್ಲಿ ಅರ್ಥ ಮಾಡಿಕೊಳ್ಳುವ ಅಗತ್ಯವಿದೆ. ಅವರು ತಮ್ಮ ಸಚಿವ ಸಂಪುಟವನ್ನು ಈಗಾಗಲೇ ಕೆಲಸಕ್ಕೆ ಹಚ್ಚಿದ್ದಾರೆ. ತಾವು ಆಡಿದ ಮಾತಿನಂತೆ, ಗಂಗಾನದಿ ಶುದ್ಧೀಕರಣ ಮತ್ತು ನದಿ ಪುನಶ್ಚೇತನಕ್ಕಾಗಿಯೂ ಒಂದು ಖಾತೆಯನ್ನು ಸಜ್ಜುಗೊಳಿಸಿದ್ದಾರೆ. ಅದನ್ನು ನೋಡಿಕೊಳ್ಳಲೆಂದು ಉಮಾಭಾರತಿಯವರನ್ನೂ ನಿಯೋಜಿಸಿದ್ದಾರೆ. ನದಿಯೊಂದರ ಶುದ್ಧೀಕರಣಕ್ಕಾಗಿ ಒಂದು ಸಚಿವಾಲಯವನ್ನೇ ಸ್ಥಾಪಿಸುವುದು ಜಗತ್ತಿನ ಇತಿಹಾಸದಲ್ಲಿಯೇ ಪ್ರಥಮ ಎನ್ನಬಹುದು. ಈ ವಿಚಾರದಲ್ಲೂ ಮೋದಿ ಪ್ರಥಮರಾಗಿದ್ದಾರೆ.
ಗಂಗಾ ನದಿ ನಮ್ಮ ಪಾಲಿಗೆ ಬರೀ ನದಿಯಲ್ಲ. ಅದು ಮಾತೆಗೆ ಸಮಾನ. ಅದು ಭಾರತೀಯರ ಮಹಾಮಾತೆಯೇ ಎನ್ನಬೇಕು. ಪ್ರತಿಯೊಬ್ಬ ಭಾರತೀಯನೂ ಕನಸು ಮನಸಿನಲ್ಲೂ ಬಯಸುವುದು ವಾರಾಣಸಿಯ ದರ್ಶನ ಹಾಗೂ ಅಲ್ಲಿನ ಗಂಗಾನದಿಯಲ್ಲಿ ಒಂದು ತೀರ್ಥಸ್ನಾನವನ್ನು. ಅಲ್ಲಿಗೆ ಜನ್ಮ ಸಂಪೂರ್ಣವಾದಂತೆ ಲೆಕ್ಕ. ಇದನ್ನು ಮೋದಿಯವರು ಸರಿಯಾಗಿಯೇ ಅರ್ಥ ಮಾಡಿಕೊಂಡಿದ್ದಾರೆ. ಅದ್ದರಿಂದಲೇ ಅವರು ಕೊಳೆತು ನಾರುತ್ತಿರುವ ಗಂಗಾನದಿಯ ಶುದ್ಧಿಗೆ ಗಮನ ನೀಡಿದ್ದು. ಮನೆಯಲ್ಲಿ ನಮ್ಮ ತಾಯಿ ಅಸ್ವಸ್ಥರಾಗಿ ಮಲಗಿದ್ದರೆ ಅವರನ್ನು ಬೀದಿಗೆ ಬಿಸಾಡುತ್ತೇವೆಯೇ? ನಮ್ಮ ತನು ಮನ ಧನಗಳನ್ನೂ ಪಣಕ್ಕಿಟ್ಟು ಅವರ ಸೇವೆ ಮಾಡುವುದಿಲ್ಲವೆ? ಅಂಥ ಮಾತೆಯ ಅಂಥ ಧೀರ ಪುತ್ರನಾಗಿಯೇ ಮೋದಿ ವರ್ತಿಸಿದ್ದಾರೆ.
ಅದಿರಲಿ, ನಮ್ಮ ಮಾತೆಗೆ ಅಂಥ ದುಸ್ಥಿತಿಯಾದರೂ ಯಾಕೆ ಬಂತು? ಅವತ್ತು ಕಾಶಿ ಮಹಾರಾಜ, ಪಂಡಿತ್ ಮದನ ಮೋಹನ ಮಾಳವೀಯರ ಮಾತಿಗೆ ತುಸುವಾದರೂ ಬೆಲೆ ಕೊಟ್ಟಿದ್ದರೆ, ಸ್ವಂತ ವಿವೇಚನೆಯನ್ನಾದರೂ ಬಳಸಿದ್ದರೆ ಇಂದು ದೇವನದಿ ಈ ಪರಿಸ್ಥಿತಿಗೆ ಈಡಾಗುತ್ತಿರಲಿಲ್ಲ. ಮಹಾರಾಜನೆದುರು ಅವತ್ತಿದ್ದುದು ಅತ್ಯಂತ ಸುಂದರ ಪಟ್ಟಣದ ಒಡೆಯನಾಗಬೇಕೆಂಬ ಹಪಾಹಪಿ ಮಾತ್ರವೇ. ಅಂಥ ಮೋಹ ಅವನನ್ನು ಕುರುಡಾಗಿಸಿತ್ತು. ಸಾಮಾಜಿಕ ಜವಾಬ್ದಾರಿ, ಸಮುದಾಯದ ಹಿತ, ಪರಿಸರದ ಸಹಜತೆಗಳನ್ನು ಮೀರಿಯೂ ವಿಶ್ವದಲ್ಲಿ ವಾರಾಣಸಿಯನ್ನು ಮನಮೋಹಕ ನಗರವನ್ನಾಗಿ ರೂಪಿಸಬೇಕೆಂಬ ಹಮ್ಮಿನೊಂದಿಗೆ ರಾಜ ಮುನ್ನಡಿಯಿಟ್ಟಿದ್ದ. ಅದಕ್ಕೆ ಸಾಥಿಯಾಗಿ ನಿಂತವನು ಬ್ರಿಟಿಷ್ ಅಧಿಕಾರಿ ಹಾಕಿನ್ಸ್.
ಅದು 1932. ಹಾಕಿನ್ಸ್ ಆಗ ಭಾರತದಲ್ಲಿ ಬ್ರಿಟಿಷ್ ಕಮಿಷನರ್ ಆಗಿದ್ದವನು. ತಿಳಿ ನೀರಿನೊಂದಿಗೆ ಪ್ರಜ್ವಲಿಸುತ್ತಿದ್ದ ಗಂಗೆಯನ್ನು ಕಂಡು ಅವನ ಕಣ್ಣು ಕುಕ್ಕಿರಬೇಕು. ವಾರಾಣಸಿಯ ಮಗ್ಗುಲಲ್ಲೆ ದೇವನದಿ ಎನಿಸಿಕೊಂಡು, ಸರ್ವರ ಪ್ರೀತಿ, ಪೂಜ್ಯತೆಗಳನ್ನು ಒಳಗೊಳ್ಳುತ್ತ ವಿಶ್ವನಾಥನ ಆರಾಧನೆಗೊಂದು ವಿಶೇಷ ಮೆರುಗು ನೀಡುತ್ತಿದ್ದ ಗಂಗೆ ಹಾಕಿನ್ಸ್‌ನ ಪಾಲಿಗೆ ಒಂದು ನಿರ್ಜೀವ ನೀರಿನ ಹರಿವಷ್ಟೆ. ಅದರ ಬಗ್ಗೆ ಯಾವ ಭಾವನೆಗಳೂ ಬ್ರಿಟಿಷರಲ್ಲಿ ಇರಲಿಲ್ಲ. ನಾವು ಭಾರತೀಯರಿಗೆ ಅದೂ ಕೇವಲ ನದಿಯೊಂದೇ ಅಲ್ಲ. ನಮ್ಮ ಆರಾಧ್ಯ ದೈವ ಶಿವನ ಅರ್ಧಾಂಗಿ, ಗಂಗಾ ಮಾತೆಯಾಗಿ ಆ ನದಿ ಪೂಜೆಗೊಳ್ಳುತ್ತಿದ್ದು ವಿಚಿತ್ರ ಅಪಹಾಸ್ಯದ ಸಂಗತಿಯಾಗಿ ಆತನಿಗೆ ಕಂಡಿತ್ತು. ಅದರೊಂದಿಗಿನ ನಮ್ಮ ಭಾವನಾತ್ಮಕ ಸಂಬಂಧ ವಿಚಿತ್ರ ಹುಚ್ಚಿನಂತೆ ತೋರಿತ್ತು. ಅವತ್ತು ಕಾಶಿ ದೇಶದ ಪವಿತ್ರ ಯಾತ್ರಾ ಸ್ಥಳವಷ್ಟೇ ಆಗಿರಲಿಲ್ಲ. ನಮ್ಮ ಬಹುಮುಖ್ಯ ವಿದ್ಯಾಕೇಂದ್ರ, ಪ್ರಮುಖ ವಾಣಿಜ್ಯ ವಹಿವಾಟಿನ ನಗರಿಯಾಗಿಯೂ ಸೇವೆಯಲ್ಲಿತ್ತು. ಹೀಗಾಗಿ ಪಟ್ಟಣದ ಜನಸಂಖ್ಯಾ ಬಾಹುಳ್ಯ ಸಹಜವಾಗಿಯೇ ಇತರ ಪಟ್ಟಣಗಳಿಗೆ ಹೋಲಿಸಿದರೆ ತುಸು ಹೆಚ್ಚೇ ಇತ್ತು. ಹೀಗಾಗಿ ಪಟ್ಟಣದ ಸ್ವಚ್ಛತೆ ಸಮಸ್ಯೆಯಾಗಿ ಸ್ಥಳೀಯ ಆಡಳಿತಕ್ಕೆ ಕಾಡುತ್ತಿತ್ತು. ರಾಜನಿಗೆ ಅದು ಪ್ರತಿಷ್ಠೆಯ ಪ್ರಶ್ನೆಯಾಗಿಯೂ ಬಾಧಿಸುತ್ತಿತ್ತು.
ಇಂಥ ಸಂದರ್ಭವನ್ನೇ ಉಪಯೋಗಿಸಿಕೊಳ್ಳಲು ಹವಣಿಸಿದ್ದ ಹಾಕಿನ್ಸ್. ನಗರದ ಎಲ್ಲ ಜನವಸತಿಯ ತ್ಯಾಜ್ಯವನ್ನು ಚರಂಡಿಗಳಿಗೇ ಹರಿಸುವುದು. ಅಲ್ಲಿಂದ ಚರಂಡಿ ಹಾಗೂ ನಗರದ ಪ್ರಮುಖ ಕಾಲುವೆಗಳನ್ನು ನೇರವಾಗಿ ಗಂಗೆಗೆ ತಂದು ಜೋಡಿಸುವ ನಗರಾಭಿವೃದ್ಧಿ(?) ಯೋಜನೆಯೊಂದನ್ನು ರೂಪಿಸಿದ. ಅಲ್ಲಿಯವರೆಗೂ ನಗರದ ಕೊಳಚೆ ನೀರು ಹಾಗೂ ಮಳೆ ನೀರು ಮೋರಿಗಳನ್ನು ಗಂಗೆಯಿಂದ ಪ್ರತ್ಯೇಕಿಸಿ ನಗರದ ಹೊರಭಾಗಕ್ಕೆ ಹರಿದುಬಿಡುವ ವ್ಯವಸ್ಥೆ ಇತ್ತು. ಇದರಿಂದ ನಗರದ ಹೊರಭಾಗ ಮಾಲಿನ್ಯಗೊಳ್ಳುತ್ತಿದೆ. ಪ್ರವಾಸಿಗರು ಮತ್ತು ಯಾತ್ರಿಗಳಿಗೆ ಇದರಿಂದ ಪಟ್ಟಣ ಪ್ರವೇಶಕ್ಕೆ ಮುನ್ನವೇ ಕಾಶಿಯ ಬಗ್ಗೆ ಕೀಳು ಭಾವನೆ ಮೊಳೆಯುತ್ತದೆ ಎಂಬುದು ಹಾಕಿನ್ಸ್‌ನ ಪ್ರತಿಪಾದನೆಯಾಗಿತ್ತು.
ಆದರೆ ನಮ್ಮ ಪಾಲಿಗೆ ಗಂಗೆ ವಿಶ್ವನಾಥನ ಅಭಿಷೇಕಕ್ಕಿರುವ ಪವಿತ್ರ ಜಲ. ನಮ್ಮ ಪವಿತ್ರ ಸ್ನಾನ, ತರ್ಪಣಗಳ ಮೂಲಕ ಆಧ್ಯಾತ್ಮಿಕ ಶುದ್ಧತೆಯ ಕೇಂದ್ರ ಗಂಗಾ ನದಿ. ಅಂಥ ನದಿಗೆ ನಗರದ ಹಾಗೂ ಮಾನವ ತ್ಯಾಜ್ಯವನ್ನು ಜೋಡಿಸುವುದು ಮಹಾಪಾಪ. ಕಾಶಿ ಮಹಾರಾಜನಿಗೆ ಇದರ ಅರಿವೂ ಇತ್ತು. ಇದಕ್ಕಾಗಿ ನಾಗರಿಕ ಅಭಿಪ್ರಾಯ ಸಂಗ್ರಹಕ್ಕೆ ಮುಂದಾಗಲಾಯಿತು. ಪಂಡಿತ್ ಮದನಮೋಹನ ಮಾಳವೀಯರ ನೇತೃತ್ವದ ನಾಗರಿಕ ಸಮೂಹದಿಂದ ಇದಕ್ಕೆ ತೀವ್ರ ವಿರೋಧ ವ್ಯಕ್ತವಾಯಿತು. ಗಂಗೆ ಕುಲಗೆಟ್ಟು ಹೋಗುತ್ತದೆ. ಇಡೀ ನದಿ ಮಾಲಿನ್ಯಕ್ಕೊಳಗಾಗುತ್ತದೆ. ದೇವಗಂಗೆಯ ಅಸ್ತಿತ್ವಕ್ಕೇ ಇದು ಮಾರಕ ಎಂದು ಪರಿಪರಿಯಲ್ಲಿ ವಿವರಿಸಲಾಯಿತು. ಆದರೆ ಹಾಕಿನ್ಸ್‌ನ ವಾದವೇ ಬೇರೆ ಇತ್ತು. ನಗರ ತ್ಯಾಜ್ಯವನ್ನು ಗಂಗೆಗೆ ಜೋಡಿಸುವುದರಿಂದ ಖಂಡಿತಾ ನದಿಯು ಜಲಮಾಲಿನ್ಯವಾಗದು. ಒಂದು ಕಿಲೊಮೀಟರ್‌ನೊಳಗೆ ಎಲ್ಲ ತ್ಯಾಜ್ಯಗಳನ್ನು ಬಸಿದು ತಳ ಸೇರಿಸಿಕೊಂಡು ಮತ್ತೆ ಶುದ್ಧವಾಗಿ ಹರಿಯುವ ಸಾಮರ್ಥ್ಯ ಗಂಗೆಗಿದೆ. ಅಲ್ಲದೇ ಗಂಗೆಯ ಒಡಲಿನ ಅಪಾರ ಜಲರಾಶಿಯೆದುರು ಕಾಶಿ ಪಟ್ಟಣದ ತ್ಯಾಜ್ಯದ ಪ್ರಮಾಣ ನಗಣ್ಯ. ಗಂಗೆ ಯಾತ್ರಿಗಳ ಪಾಪವನ್ನಷ್ಟೇ ಅಲ್ಲ, ದೇಶದ ಪ್ರಮುಖ ಧಾರ್ಮಿಕ ನಗರ ಕಾಶಿಯ ಪಾಪವನ್ನೂ ತೊಳೆದು ಶುದ್ಧವಾಗಿಯೇ ಉಳಿಯಬಲ್ಲಳು ಎಂಬ ಪ್ರತಿಪಾದನೆಯನ್ನಾತ ರಾಜನ ಮುಂದಿಟ್ಟ.
ಎಂಥಾ ಮಾಲಿನ್ಯವನ್ನೂ ತನ್ನೊಡಲಲ್ಲಿ ಕರಗಿಸಿಕೊಂಡು ಸ್ವಲ್ಪವೇ ಅಂತರದಲ್ಲಿ ಮತ್ತೆ ಶುದ್ಧ ಹರಿವನ್ನು ಕಾಪಿಟ್ಟುಕೊಳ್ಳಬಲ್ಲ ಗಂಗೆಯ ನೀರಿನ ಇಂಥ ಗುಣವೇ ದೇವನದಿಗೆ ಮುಂದೊಂದು ದಿನ ಹೀಗೆ ಶಾಪವಾಗಿ ಪರಿಣಮಿಸಬಲ್ಲುದೆಂದು ಅಂದು ಊಹಿಸಿದ್ದರೂ ಅದನ್ನು ಒಪ್ಪಿಕೊಳ್ಳುವ ಸ್ಥಿತಿಯಲ್ಲಿ ಆಡಳಿತ ಇರಲಿಲ್ಲ. ಮದನಮೋಹನ ಮಾಳವೀಯ ಮತ್ತವರ ಜತೆಗಾರರು ಬಾಯಿ ಮುಚ್ಚಿಕೊಳ್ಳುವುದು ಅನಿವಾರ್ಯವಾಯಿತು. ಮಾತೆ ಗಂಗೆ ಮೊದಲ ಬಾರಿಗೆ ಆಕೆಯ ಮಕ್ಕಳಿಂದಲೇ ಅತ್ಯಾಚಾರಕ್ಕೆ ಗುರಿಯಾದಳು! ಇದಕ್ಕಿಂತ ಪಾಪ ಎಂಬುದು ಜಗತ್ತಿನಲ್ಲಿ ನಮ್ಮ ಪಾಲಿಗೆ ಇನ್ನೊಂದು ಇದೆಯೇ?
ಬ್ರಿಟಿಷರಿಂದ ಮೊದಲ ಬಾರಿಗೆ ನಾವು ನಮ್ಮ ನೀರಿನ ಸಂಸ್ಕೃತಿಯನ್ನು ಮರೆತೆವು. ಅಲ್ಲಿಂದಲೇ ಆರಂಭವಾಯಿತು ಜಲಮೂಲಗಳಿಗೆ ನಮ್ಮ ತ್ಯಾಜ್ಯವನ್ನು ಸೇರಿಸುವ ಅಪಸವ್ಯ. ಹಾಕಿನ್ಸ್ ಹಾಕಿಕೊಟ್ಟ ಮಾರ್ಗದಲ್ಲೇ ನಾವು ಇಂದಿಗೂ ನಡೆಯುತ್ತಿದ್ದೇವೆ. ಬ್ರಿಟಿಷ್ ಆಡಳಿತದಲ್ಲಿ ಆದ ತಪ್ಪನ್ನು ನಾವು ಮುಂದೆ ಸರಿ ಪಡಿಸಿಕೊಳ್ಳುವ ಗೋಜಿಗೇ ಹೋಗಲಿಲ್ಲ. ಇವತ್ತಿನ ಅನಾಹುತಗಳಿಗೆಲ್ಲ ಅದೇ ನಾಂದಿಯಾಗಿದೆ. ಇವತ್ತು ಗಂಗೆ ದೇಶದ ಎಲ್ಲರ ಕೊಳೆಯನ್ನು ತುಂಬಿ ನಿಂತಿರುವ ಅತಿದೊಡ್ಡ ತಿಪ್ಪೆಗುಂಡಿಯಾಗಿದೆ. ದಿಲ್ಲಿಯ ಖ್ಯಾತ ಪರಿಸರ ತಜ್ಞ, ನೀರ ಹಿರಿಯ ಮಿಶ್ರಾ ಹೇಳುವ ಪ್ರಕಾರ ಗಂಗೆಯ ಸ್ವಯಂ ಶುದ್ಧೀಕರಣ ಸಾಮರ್ಥ್ಯ ಇವತ್ತಿಗೆ ಸಂಪೂರ್ಣ ಕಣ್ಮರೆಯಾಗಿದೆ. ಹರಿವಿನುದ್ದಕ್ಕೂ ಕೊಳೆಯನ್ನೇ ತಂದು ತುಂಬುತ್ತಿರುವ ಪರಿಣಾಮ ಅದು ರೋಗಗಳ ಆಗರವಾಗಿದೆ. ಗಂಗಾ ಬಯಲು ಬೃಹತ್ ಕೊಳಚೆ ಗುಂಡಿಯಾಗಿ ಮಾರ್ಪಟ್ಟಿದೆ.
ದೇಶದ ಇನ್ನೊಂದು ಪವಿತ್ರ ನದಿ ಯಮುನೆಯ ಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. ದಿಲ್ಲಿಯ ಶೇ.80ರಷ್ಟು ಮಾನವಜನ್ಯ ತ್ಯಾಜ್ಯ ಯಮುನೆಯ ಒಡಲು ಸೇರಿ ಶ್ರೀಕೃಷ್ಣ ಜನ್ಮಸ್ಥಾನವನ್ನು ಪ್ರದಕ್ಷಿಣೆ ಹಾಕುತ್ತಿದೆ. ನವ ದಿಲ್ಲಿಯ ಅಷ್ಟೂ ಮಲ ಮೂತ್ರ ಮಥುರೆಗೆ ಬಂದು ಸೇರುತ್ತಿದೆ. ಒಂದು ಕಾಲದಲ್ಲಿ ನಮ್ಮ ಆರಾಧ್ಯ ಪುರುಷ ಜಲಕ್ರೀಡೆಯಾಡಿದ್ದ ನದಿಯೀಗ ದೇಶದ ಅತಿದೊಡ್ಡ ಶೌಚಾಲಯವಾಗಿ ಮಾರ್ಪಟ್ಟಿದೆ. ಇದನ್ನು ಏನೆಂದು ವ್ಯಾಖ್ಯಾನಿಸಬೇಕು?
ಅವತ್ತು ನಮ್ಮ ಗಂಗೆಗೆ ಒಳಚರಂಡಿಯನ್ನು ಸಂಪರ್ಕಿಸಿದ ಬ್ರಿಟಿಷರ ತವರು ಲಂಡನ್‌ನ ಹೃದಯದಲ್ಲಿ ಹರಿದು ಹೋಗುವ ಥೇಮ್ಸ್ ಕನ್ನಡಿಯಂತೆ ಫಳಫಳಿಸುತ್ತಿದೆ. ಅಲ್ಲಿ ನದಿಯ ನೀರಿನಲ್ಲಿ ನಮ್ಮ ಮುಖ ಕಾಣುತ್ತದೆ. ಅಂಥದ್ದೊಂದು ಎಚ್ಚರ ಬ್ರಿಟಿಷರಲ್ಲಿ ಇದೆ. ಅದು ಕಾನೂನಾಗಿ ಮಾರ್ಪಟ್ಟಿದೆ. ಅಲ್ಲಿ ನದಿಗೆ ತ್ಯಾಜ್ಯ ಸೇರಿಸುವುದು ಅಪರಾಧ. ನಮ್ಮಲ್ಲಿ ಅದು ಹಕ್ಕು ಎಂಬಂತಾಗಿರುವುದು ದುರಂತ.
ಇದಕ್ಕೆಲ್ಲ ಕೊನೆ ಹಾಡುವ ಸಮಯ ಬರುವುದೇ ಇಲ್ಲ ಎಂದುಕೊಳ್ಳುವುದು ನಿರಾಶಾವಾದ. ಅಂಥ ನಿರಾಶಾವಾದಕ್ಕೂ ಕೊನೆ ಹಾಡುವ ಸಮಯ ಇದೀಗ ಬಂದಿದೆ. ಉಮಾಭಾರತಿ ನೇತೃತ್ವದಲ್ಲಿ ಗಂಗಾ ಶುದ್ಧೀಕರಣ ಕೆಲಸ ಸಮರ್ಪಕವಾಗಿ ನಡೆದರೆ ಅದು ಕೋಟ್ಯಂತರ ಭಾರತೀಯರ ಮನಸ್ಸಿಗೆ ಸುಖ ನೀಡುವ ಕೈಂಕರ್ಯವಾಗುವುದರಲ್ಲಿ ಸಂದೇಹವೇ ಇಲ್ಲ. ಇದನ್ನು ಉಮಾಭಾರತಿ ಮಾಡುತ್ತಾರೆ ಎಂದು ನಾವು ನಿರೀಕ್ಷಿಸಬಹುದು. ಯಾಕೆಂದರೆ ಮೋದಿಯಂಥ ದಿಟ್ಟತನದ ವ್ಯಕ್ತಿತ್ವ ಅವರ ಹಿಂದಿದೆ. ಗಂಗೆಯ ಸ್ವಚ್ಛತೆಗೆ, ಆಕೆಯ ಪಾವಿತ್ರ್ಯಕ್ಕೆ ಅವರು ಕಟಿಬದ್ಧರಾಗಿದ್ದಾರೆ. ಇಂಥ ಮಗನನ್ನು ಪಡೆದ ಯಾವ ತಾಯಿಯಾದರೂ ಹೆಮ್ಮೆ ಪಡಲೇಬೇಕು. ಗಂಗೆಯೂ ಈ ವಿಚಾರದಲ್ಲಿ ಹೆಮ್ಮೆಪಡಬಹುದು. 'ಅವಿರಳ ಗಂಗಾ, ನಿರ್ಮಲ ಗಂಗಾ' ಎಂಬ ಘೋಷಣೆಯಡಿ ಗಂಗೆಯ ಸ್ವಚ್ಛತೆ ಕಾರ್ಯಗಳು ಈಗಾಗಲೇ ಅಲ್ಲಲ್ಲಿ ನಡೆಯುತ್ತಿವೆ. ಅವು ವೇಗ ಪಡೆದುಕೊಳ್ಳಬೇಕು ಮಾತ್ರವಲ್ಲ, ಅವುಗಳು ಪಡೆದಷ್ಟೇ ವೇಗವನ್ನೇ ಇತರ ನದಿಗಳ ಶುದ್ಧೀಕರಣವೂ ಪಡೆಯಬೇಕು ಎಂಬುದು ಪ್ರತಿಯೊಬ್ಬ ಭಾರತೀಯನ ಕಾಳಜಿ. ಅದನ್ನು ಮೋದಿ ಈಡೇರಿಸಬಲ್ಲರು. ಯಾಕೆಂದರೆ ಆ ಇಚ್ಛಾಶಕ್ತಿ ಅವರಲ್ಲಿದೆ.
-ರಾಧಾಕೃಷ್ಣ ಎಸ್. ಭಡ್ತಿ
abhyagatha@yahoo.co.in