ಮೊಬೈಲ್ ಇಂಟರ್ ನೆಟ್ ಗಳ ಕಾಲದಲ್ಲಿ ಮನಸ್ಸಿನ ಚಂಚಲತೆಯನ್ನು ಹಿಡಿತದಲ್ಲಿಟ್ಟುಕೊಳ್ಳುವುದು ಕಷ್ಟವೂ ಹೌದು. ಅದರಲ್ಲೂ ಹದಿವಯಸ್ಸು ಹೆಂಡ ಕುಡಿದ ಕೋತಿಯ ಮನಸ್ಸು! ಇಂತಹ ವಿಚಲಿತಗೊಳಿಸುವ ಸಲಕರಣೆಗಳಿಂದ ದೂರವಿರಲು ಬೇರೆ ಹವ್ಯಾಸಗಳನ್ನು ಬೆಳೆಸಿಕೊಳ್ಳಬೇಕು. ವಿದ್ಯಾರ್ಥಿ ಜೀವನವೆಂದರೆ ಬರಿಯ ಓದು ಮಾತ್ರವಲ್ಲ. ಹವ್ಯಾಸ, ಆಟಗಳಿಗೂ ಸಮಯ ಮೀಸಲಿಡಬೇಕು. ಮೇಲೆ ಹೇಳಿದ ಓದಿನ ಕ್ರಮವನ್ನು ಪಾಲಿಸಲು ಹೆಚ್ಚು ಸಮಯ ಬೇಕಾಗುವುದಿಲ್ಲ. ದಿನಕ್ಕೆ ಮೂರರಿಂದ ನಾಲ್ಕು ತಾಸು ವ್ಯಯಿಸಿದರೂ ಸಾಕು! ಉಳಿದ ಸಮಯವನ್ನು ಹವ್ಯಾಸಗಳಿಗೆ, ಆಟಗಳಿಗೆ ಮೀಸಲಿಡಬಹುದು. ಹವ್ಯಾಸಗಳನ್ನು ಹೊಂದುವುದು ಮನಸ್ಸನ್ನು ಪ್ರಫುಲ್ಲಿತವಾಗಿ ಇಡುತ್ತದೆ. ಮನಸ್ಸು ಪ್ರಫುಲ್ಲಿತವಾಗಿದ್ದಷ್ಟುಏಕಾಗ್ರತೆ ಹೆಚ್ಚುತ್ತದೆ. ಯೋಗ ಪ್ರಾಣಾಯಾಮಗಳನ್ನು ಅಭ್ಯಾಸ ಮಾಡಿದರೆ ದೈಹಿಕ ಮತ್ತು ಮಾನಸಿಕ ಆರೋಗ್ಯ ಎರಡಕ್ಕೂ ಒಳ್ಳೆಯದು. ನೃತ್ಯ, ಸಂಗೀತ ಚಿತ್ರಕಲೆ ಮತ್ತಿತರೆ ಕೆಲಸಗಳಲ್ಲಿ ಮನಸ್ಸನ್ನು ತೊಡಗಿಸಿಕೊಳ್ಳುವುದು. ಇದಾವುದೂ ಬೇಡವೆಂದರೆ ಮನೆ ಕೆಲಸಗಳಲ್ಲಿ ತೊಡಗಿಕೊಳ್ಳಬಹುದು.